ಜಿ.ಕೃಷ್ಣ ಪ್ರಸಾದ್
‘ವ್ಯವಸಾಯದಿಂದ ಲಾಭ ಇಲ್ಲ. ಬೆಂಗಳೂರಿಗೆ ಕೆಲಸಕ್ಕೆ ಹೋಗಬೇಕು ಎಂದು ನಿರ್ಧಾರ ಮಾಡಿದ್ದೆ. ಈಗ ಊರಲ್ಲೇ ಇದ್ದು ದೇಸಿ ಬೀಜೋ ತ್ಪಾದನೆ ಮಾಡಿ, ಬೆಂಗಳೂರಿಗೆ ಹೋದವರಿಗಿಂತ ಹೆಚ್ಚು ಸಂಪಾದಿಸುತ್ತಿದ್ದೇನೆ. ನನ್ನ ನೋಡಿ ನಗಾಡಿದ್ದವರೇ, ನಾವೂ ಬೀಜ ಮಾಡಿಕೊಡ್ತೀವಿ, ಆರ್ಡರ್ ಕೊಡಿಸು ಎಂದು ಅಂಗಲಾಚು ತ್ತಿದ್ದಾರೆ’ ಎಂದು ಲೋಕೇಶ್ ತುಂಟ ನಗೆ ಬೀರುತ್ತಾರೆ. ಕೊಳ್ಳೇಗಾಲ ತಾಲ್ಲೂಕಿನ ಅರೇಪಾಳ್ಯ ಗ್ರಾಮದ 32 ವರ್ಷದ ಲೋಕೇಶ್ ಯುವ ಕೃಷಿಕ. ಎಲ್ಲರಂತೆ ರಾಸಾಯನಿಕ ಕೃಷಿ ಮಾಡಲು ಹೋಗಿ ಸೋತು ಸುಣ್ಣವಾಗಿ, ಸಾವಯವ ಬೀಜೋತ್ಪಾದನೆಗೆ ತೊಡಗಿ ಯಶಸ್ಸು ಕಂಡವರು.
ಬದಲಾವಣೆ ಗಾಳಿ ಬೀಸಿದ್ದು ಹೀಗೆ…
2015ರಲ್ಲಿ ಕೃಷಿ ಇಲಾಖೆಯ ಸಾವಯವ ಗ್ರಾಮ ಯೋಜನೆ ತಮ್ಮ ಗ್ರಾಮಕ್ಕೆ ಬಂದಾಗ, ಅರೆಮನಸ್ಸಿನಿಂದಲೇ ಲೋಕೇಶ್ ಸಾವಯವ ಕೃಷಿ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆರಂಭಿಸಿದರು. ಸಾವಯವ ಕೃಷಿಕರಾದರು.
2018ರಲ್ಲಿ ಸಹಜ ಸಮೃದ್ಧ, ದೇಸಿ ಬೀಜ ಉತ್ಪಾದಕರ ಕಂಪೆನಿಯನ್ನು ಆರಂಭಿಸಿ, ಸಹಜ ಸೀಡ್ಸ್ ಹೆಸರಲ್ಲಿ ದೇಸಿ ಬೀಜಗಳನ್ನು ಮಾರುಕಟ್ಟೆಗೆ ತಂದಿತು. ಆ ಕಾಲಕ್ಕೆ ಮೈಸೂರು ಸುತ್ತಮುತ್ತ ತರಕಾರಿ ಬೀಜ ಉತ್ಪಾದನೆ ಮಾಡುವ ರೈತರೇ ಇರಲಿಲ್ಲ. ಸಹಜ ಸೀಡ್ಸ್, ಲೋಕೇಶರನ್ನು ಬೀಜೋತ್ಪಾದನೆ ಮಾಡಲು ಕೇಳಿಕೊಂಡಿತು. ಬೀಜೋತ್ಪಾದನೆಯಿಂದ ಹಣ ಬರುತ್ತದೆ ಎಂಬ ನಂಬಿಕೆ ಲೋಕೇಶರಿಗಿರಲಿಲ್ಲ. ‘ನನ್ನನ್ನು ಹುಡುಕಿಕೊಂಡು ಮೈಸೂನಿರಿಂದ ಬಂದಿದ್ದಾರೆ. ನೋಡೇ ಬಿಡುವ’ ಎಂದು ಹತ್ತು ಗುಂಟೆಯಲ್ಲಿ ‘ಕುಂಕುಮ ಕೇಸರಿ’ ಎಂಬ ಟೊಮೊಟೋ ಬೆಳೆದರು. ತಿಳಿವಳಿಕೆಯಿಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಬೇವಿನ ಎಣ್ಣೆ ಬಳಸಿದ ಪರಿಣಾಮ ಗಿಡಗಳೆಲ್ಲಾ ಸುಟ್ಟುಹೋಗಿ, ನೆಲಕಚ್ಚಿದವು.
ಸೋಲಿನಿಂದ ನಿರಾಶರಾಗದೆ ಮತ್ತೆ ಮುಂದಿನ ಹಂಗಾಮಿಗೆ 10 ಗುಂಟೆ ಪ್ರದೇಶದಲ್ಲಿ ಕುಂಕುಮ ಕೇಸರಿ ಟೊಮೊಟೋ ಬೆಳೆದರು. ಉತ್ತಮ ಬೆಳೆ ಬಂದು 20 ಕೆಜಿ ಟೊಮೊಟೋ ಬೀಜ ಉತ್ಪಾದನೆಯಾಯಿತು. ‘ಆ ವರ್ಷ ಟೊಮೊಟೋ ಬೆಲೆ ನೆಲಕಚ್ಚಿ, ಸುಮಾರು ರೈತರು ಮೈಮೇಲೆ ಸಾಲ ಎಳೆದು ಕೊಂಡರು. ನಾನು ಸಹಜ ಸೀಡ್ಸ್ ಜೊತೆ ಒಪ್ಪಂದ ಮಾಡಿಕೊಂಡಿ ದ್ದರಿಂದ 70 ಸಾವಿರ ಹಣ ಗಳಿಸಿದೆ’ ಎಂದು ಲೋಕೇಶ್, ಬೀಜೋತ್ಪಾದನೆಯ ಆರಂಭದ ದಿನಗಳನ್ನು ನೆನೆಯುತ್ತಾರೆ.
ಈ ಯಶಸ್ಸಿನಿಂದ ಉತ್ತೇಜಿತರಾದ ಲೋಕೇಶ್ ತಮ್ಮ ಇಡೀ ನಾಲ್ಕು ಎಕರೆ ಜಮೀನನ್ನು ದೇಸಿ ಬೀಜೋತ್ಪಾದನೆಗೆ ಮುಡಿಪಾಗಿಟ್ಟರು. ಗುಣಮಟ್ಟದ ದೇಸಿ ತರಕಾರಿ ಬೀಜಗ ಳನ್ನು ಉತ್ಪಾದಿಸುವ ಕಲೆಯನ್ನು ಕರಗತಮಾಡಿ ಕೊಂಡರು. ಬಣ್ಣದ ಮುಸುಕಿನ ಜೋಳ, ಕೊಂಬು ಸೋರೆ, ಹಸಿರು ಬೆಂಡೆ, ಮದನಪಲ್ಲಿ ಟೊಮೊಟೋ, ಕಪ್ಪು ಬದನೆ, ಹಾಗಲ, ಹೀರೆ…ಹೀಗೆ ಹಲವಾರು ಅಪರೂಪದ ತಳಿಗಳನ್ನು ಅಪ್ಪಟ ಸಾವಯವದ ಪದ್ಧತಿಯಲ್ಲಿ ಬೆಳೆದು, ಬೀಜೋತ್ಪಾದನೆ ಮಾಡುತ್ತಿದ್ದಾರೆ.
ಬೀಜೋತ್ಪಾದನೆ ವಿಶೇಷ ಕೌಶಲ ಮತ್ತು ಪರಿಣತಿಯನ್ನು ಬೇಡುತ್ತದೆ. ಬೀಜ ಬಿತ್ತಿ, ಸಸಿ ಮಾಡಿ, ಹೊಲದಲ್ಲಿ ಬೆಳೆಸಿ, ಬೀಜ ಸಂಗ್ರಹಿಸಿ, ಒಣಗಿಸಿ ಪ್ಯಾಕ್ ಮಾಡಲು ಸಾಕಷ್ಟು ತಾಳ್ಮೆ ಬೇಕು. ವಿವಿಧ ತಳಿಗಳು ಮಿಶ್ರವಾಗದಂತೆ ಎಚ್ಚರ ವಹಿಸಬೇಕು. ರೋಗ ಬಂದ ಗಿಡಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಬಿಸಾಕಬೇಕು. ಆರೋಗ್ಯಪೂರ್ಣ ಹಣ್ಣನ್ನು ಮಾತ್ರ ಬೀಜಕ್ಕೆ ಬಳಸುವ ಪ್ರಾಮಾಣಿಕತೆ ಬೇಕು. ಇದಕ್ಕಾಗಿ ದೂರದ ಅಸ್ಸಾಂಗೆ ಹೋಗಿ ತರಬೇತಿ ಪಡೆದು ಬಂದಿದ್ದಾರೆ. ಅತಿ ಹೆಚ್ಚು ಮೌಲ್ಯದ ಲೆಟ್ಯೂಸ್, ಕಪ್ಪು ಕ್ಯಾರೆಟ್, ಬೇಬಿ ಕಾರ್ನ ತಳಿಗಳನ್ನು ತಮ್ಮ ಹೊಲಕ್ಕೆ ಒಗ್ಗಿಸಿ, ಬೀಜ ಮಾಡಿ ಗೆದ್ದಿದ್ದಾರೆ.
ಕಳೆದ ಐದು ವರ್ಷಗಳಿಂದ ಸಕ್ರಿಯವಾಗಿ ಬೀಜೋತ್ಪಾ ದನೆ ಮಾಡುತ್ತಿರುವ ಲೋಕೇಶ್ ಪ್ರತಿ ವರ್ಷ 2 ರಿಂದ 3 ಲಕ್ಷ ರೂಪಾಯಿ ಮೌಲ್ಯದ ದೇಸಿ ಬೀಜಗಳನ್ನು ಉತ್ಪಾದಿಸುತ್ತಾರೆ. ಶಾಸ್ತ್ರೀಯವಾಗಿ ಬೀಜೋತ್ಪಾದನೆ ಮಾಡುವ ಪರಿಣಿತಿ ಹೊಂದಿರುವ ಇವರು ‘ಸೀಡ್ ಡ್ರರ್ಯ’ ಇಟ್ಟಿದ್ದಾರೆ. ಲೋಕೇಶರ ಯಶಸ್ಸು ಗ್ರಾಮದ ಯುವಕರು ಇವರತ್ತ ನೋಡುವಂತೆ ಮಾಡಿದೆ. ಅರೇಪಾಳ್ಯದ ಪ್ರಕಾಶ್, ಕುಮಾರ, ನಾಗರಾಜು, ಕೃಷ್ಣಪ್ಪ, ಚಂದ್ರಮೋಹನ್ ಮೊದಲಾದವರು ಬೀಜೋತ್ಪಾದನೆಯಲ್ಲಿ ತೊಡಗಿದ್ದಾರೆ.
ಕತ್ತಿಕಾಯಿ, ಸೌತೆಕಾಯಿ, ಬಿಳಿಬದನೆಕಾಯಿ, ಡಬಲ್ ಕಲರ್ ಬೆಂಡೆ, ಬಿಂದಿಗೆ ಸೋರೆ, ಮೀಟರ್ ಅಲಸಂದೆ ಹಾಗೂ ತೊಗರಿ ಬೀಜ, ಪಲಾವ್ ಬೀನ್ಸ್, ಶ್ರೀ ಬೆಂಡೆ, ವಿಂಗಡ್ ಬೀನ್ಸ್, ಗ್ರೇಪ್ ಟೊಮೊಟೋ ಮೊದಲಾದ ತಳಿಯ ಬೀಜಗಳನ್ನು 10 ಎಕರೆಯ ಪ್ರದೇಶದಲ್ಲಿ ಉತ್ಪಾದಿಸಲಾಗುತ್ತಿದೆ. ಬೀಜೋತ್ಪಾದನೆಯನ್ನು ಉಪಕಸು ಬಾಗಿ ಆಯ್ಕೆ ಮಾಡಿಕೊಂಡಿರುವ ಯುವ ಕೃಷಿಕರು 6 ಲಕ್ಷ ರೂಪಾಯಿ ಮೌಲ್ಯದ ದೇಸಿ ಬೀಜಗಳನ್ನು ಪ್ರತಿ ವರ್ಷ ಉತ್ಪಾದನೆ ಮಾಡುತ್ತಿದ್ದಾರೆ.
ಇವರು ಉತ್ಪಾದಿಸಿದ ದೇಸಿ ಬೀಜಗಳಿಗೆ ಸಹಜ ಸೀಡ್ಸ್ ಮಾರುಕಟ್ಟೆ ಒದಗಿಸಿರುವುದರಿಂದ ಬೆಲೆ ಸಿಗದೆ ಬೀದಿಗೆ ಬೀಳುವ ಆತಂಕವಿಲ್ಲ. ದೇಸಿ ಬೀಜ ಉತ್ಪಾದಕರ ಕಂಪೆನಿಯ ಷೇರುದಾರರಾಗಿರುವುದರಿಂದ, ತಾವು ಪೂರೈಸಿದ ಬೀಜದ ಮೊತ್ತದ ಮೇಲೆ ಶೇ.10ರಷ್ಟು ಹಣವನ್ನು ಬೋನಸ್ ರೂಪದಲ್ಲಿ ಪಡೆಯುತ್ತಿದ್ದಾರೆ.
ತಮ್ಮ ತಂದೆ ವಿಷಕಂಠೇಗೌಡರ ಪ್ರೋತ್ಸಾಹ ಮತ್ತು ಸಹಜ ಸೀಡ್ಸ್‌ನ ಕೆ.ಎಸ್.ಮಂಜುರವರ ಮಾರ್ಗದರ್ಶನದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಲೋಕೇಶ್ ನೆನೆಯುತ್ತಾರೆ.
(prasadgk12@gmail.com)
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…