ದೆಹಲಿ ಕಣ್ಣೋಟ, ಶಿವಾಜಿ ಗಣೇಶನ್ ಅವರ ವಾರದ ಅಂಕಣ
ಜನರು ಮತ್ತು ಯುವಕರು ದಿಕ್ಕೆಟ್ಟ ಆಡಳಿತದ ವಿರುದ್ಧ ಸಿಡಿದು ಬೀದಿಗಿಳಿದಿದ್ದಾರೆ
ಭ್ರಷ್ಟಾಚಾರ, ದುರಾಡಳಿತ, ನಿರುದ್ಯೋಗ, ಹಣದುಬ್ಬರ, ಬೆಲೆ ಏರಿಕೆ ಮತ್ತು ಆಡಳಿತ ನಡೆಸುವವರ ಸರ್ವಾಧಿಕಾರಿ ಧೋರಣೆ ವಿರುದ್ಧ ಕಳೆದೆರಡು ವರ್ಷಗಳಿಂದ ನಮ್ಮ ನೆರೆಹೊರೆ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಯುವಕರು ಆಡಳಿತ ವ್ಯವಸ್ಥೆಯ ವಿರುದ್ಧ ದಂಗೆ ಎದ್ದು, ಆ ದೇಶಗಳ ಆಡಳಿತವನ್ನೇ ಬದಲಿಸಿದ ಘಟನೆಗಳು ಈಗ ಭಾರತ ಸರ್ಕಾರವನ್ನೂ ಬೆಚ್ಚಿ ಬೀಳಿಸಿರುವಂತೆ ಗೋಚರವಾಗುತ್ತಿದೆ. ಈ ಭಯದಲ್ಲಿರುವ ಕೇಂದ್ರ ಸರ್ಕಾರ ಸರ್ವಾಧಿಕಾರದತ್ತ ಹೊರಳುತ್ತಿರುವ ಸ್ಪಷ್ಟ ಸೂಚನೆ ನೀಡಿದಂತಿದೆ. ಹೀಗಾಗಿ ಜನರು ಮತ್ತು ಯುವಕರು ದಿಕ್ಕೆಟ್ಟ ಆಡಳಿತದ ವಿರುದ್ಧ ಸಿಡಿದು ಬೀದಿಗಿಳಿದಿದ್ದಾರೆ.
ಪ್ರಜಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ ಆಡಳಿತ ನಡೆಸುವವರು ಜನಾಭಿಪ್ರಾಯಕ್ಕೆ ತಲೆಬಾಗಬೇಕು. ಜನರ ದನಿಗೆ ಸ್ಪಂದಿಸಬೇಕು. ವ್ಯವಸ್ಥೆಯ ವಿರುದ್ಧ ಜನರು ಹತಾಶಗೊಂಡಾಗ ಪ್ರತಿಭಟನೆ ನಡೆಸುವುದು ಅವರ ಸಾಂವಿಧಾನಿಕ ಹಕ್ಕು. ಅದನ್ನು ಕಸಿಯುವ ಮತ್ತು ಪ್ರತಿಭಟನೆಗಳನ್ನು ಹತ್ತಿಕ್ಕುವ ಮತ್ತು ದಮನಗೊಳಿಸುವ ಯಾವುದೇ ಸರ್ಕಾರದ ತಂತ್ರಗಾರಿಕೆ ಫಲಿಸುವುದಿಲ್ಲ ಎನ್ನುವುದನ್ನು ಬಿಜೆಪಿ ಸರ್ಕಾರ ಇತಿಹಾಸದಿಂದ ಕಲಿತಂತಿಲ್ಲ.
ಈ ಎಚ್ಚರ ಆಡಳಿತ ನಡೆಸುವವರಿಗೆ ಇಲ್ಲವಾದರೆ ಮುಂದೊಂದು ದಿನ ಅದರ ಪರಿಣಾಮ ಮತ್ತು ಸವಾಲನ್ನು ಎದುರಿಸುವುದು ಅನಿವಾರ್ಯವಾಗಬಹುದು . ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸಲು ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುವ ನೀಟ ಪರೀಕ್ಷೆಯಲ್ಲಿನ ಅಕ್ರಮಗಳು ಬೆಳಕಿಗೆ ಬಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎನ್ನುವ ಕೂಗು ಬೀದಿಯಲ್ಲಿ ಕೇಳಿಸಿದಾಗ ಅದರ ಪರಿಣಾಮವನ್ನು ಎದುರಿಸಬೇಕಾದ ವಿದ್ಯಾರ್ಥಿಗಳು ಮತ್ತು ಯುವಜನರು ಅಚಾನಕ್ಕಾಗಿ ಸಿಡಿದೆದ್ದರು. ಈ ಕಾರಣಕ್ಕಾಗಿ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಾರ್ಟಿ ಕೆಲ ತಿಂಗಳ ಹಿಂದೆ ದೆಹಲಿಯ ಜಂತರ್ ಮಂಥರ್ ಪ್ರತಿಭಟನಾ ಪ್ರದೇಶದಲ್ಲಿ ನಡೆಸಿದ ಹೋರಾಟದ ಸಂದರ್ಭದಲ್ಲಿ ಘಟಿಸಿದ ಹಿಂಸಾಚಾರ ಕೃತ್ಯಗಳಿಂದಾಗಿ ಕೇಂದ್ರ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಗೆ ಜನರು ಮತ್ತು ನ್ಯಾಯಾಲಯ ಛೀಮಾರಿ ಹಾಕಬೇಕಾಯಿತು.
ಪ್ರತಿಭಟನೆ ಮಾಡುವ ವಿದ್ಯಾರ್ಥಿಗಳನ್ನು ಜಿರಲೆಗಳಿಗೆ ಹೋಲಿಸಿ ಟೀಕೆ ಮತ್ತು ಮುಜುಗರಕ್ಕೆ ಒಳಗಾಗಿದ್ದ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯ ಮೂರ್ತಿ ಸೂರ್ಯಕಾಂತ್ ತಮ್ಮ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಿ ಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದು ಹಾಗೂ ನಂತರ ವಿದ್ಯಾರ್ಥಿಗಳ ಹೋರಾಟದ ಬಗೆಗೆ ಅವರ ನಿಲುವು ಬದಲಾದದ್ದನ್ನು ಗಮನಿಸಿದರೆ ಯುವಶಕ್ತಿಯನ್ನು ನಿರ್ಲಕ್ಷಿಸಲಾಗದು ಎನ್ನುವುದನ್ನು ಸಮಾಜಕ್ಕೆ ನ್ಯಾಯಾಲಯವೇ ತೊರಿಸಿದಂತಾಯಿತು. ಪ್ರಜಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಮುಖ್ಯ. ಮತದಾನದ ಹಕ್ಕು ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ನೀಡಿದ ಹಕ್ಕು. ಈ ಹಕ್ಕನ್ನು ಚುನಾವಣಾ ಆಯೋಗವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಕಿತ್ತುಕೊಳ್ಳಲು ಆಗದು. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ( ಎಸ್ ಐ ಆರ್)ಯಲ್ಲಿ ಈಗಾಗಲೇ ಎಸ್ಐಆರ್ ನಡೆದಿರುವ ರಾಜ್ಯಗಳ ಮತದಾರರ ಪರಿಷ್ಕರಣೆ ಪಟ್ಟಿಯಿಂದ ಒಟ್ಟು ಹದಿಮೂರು ಕೋಟಿ ಹೆಸರುಗಳನ್ನು ಕಿತ್ತುಬೀಸಾಕಲಾಗಿದೆ ಎನ್ನುವ ಅಂಶ ಈಗ ದೇಶದಾದ್ಯಂತ ಪ್ರತಿಭಟನೆ ಮತ್ತು ಮತದಾನದ ಹಕ್ಕನ್ನು ಕಳೆದುಕೊಂಡಿರುವ ಜನರು ಚುನಾವಣಾ ಆಯೋಗದ ವಿರುದ್ಧ ಸಿಡಿದು ನಿಲ್ಲುವಂತೆ ಮಾಡಿದೆ.
ದೇಶದ ವಿರೋಧ ಪಕ್ಷವಾದ ಕಾಂಗ್ರೆಸ್ ಈ ದಮನಕಾರಿ ನೀತಿಯ ವಿರುದ್ಧ ಎರಡು ವರ್ಷಗಳಿಂದ ಗಟ್ಟಿಯಾಗಿ ದನಿ ಎತ್ತಿದೆ. ಅಕ್ರಮ ಮತ್ತು ಅನ್ಯಾಯದ ವಿರುದ್ಧ ಹುಟ್ಟಿಕೊಂಡಿರುವ ಕಾಕ್ರೋಚ್ ಜನತಾ ಪಾರ್ಟಿ ಅರ್ಥಾತ್ ಜೆನ್ ಝೀ ಯುವಕರ ಹೋರಾಟ ಕೇಂದ್ರ ಸರ್ಕಾರದ ಜಂಘಾಬಲವನ್ನೇ ಅಲುಗಾಡಿಸತೊಡಗಿದೆ. ಮುಖ್ಯ ಚುನಾವಣಾ ಕಮೀಷನರ್ eನೇಶ್ ಕುಮಾರ್ ಕೇಂದ್ರ ಸರ್ಕಾರದ ಆಣತಿಯಂತೆ ಕಾರ್ಯನಿರ್ವಹಿಸುತ್ತಿದ್ದು, ಬಿಜೆಪಿಯ ಸೈದ್ಧಾಂತಿಕ ನಿಲುವುಗಳ ವಿರುದ್ಧ ಇರುವ ಮುಸ್ಲಿಮರು ಸೇರಿದಂತೆ ಕೆಲವು ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜತಿಯ ಜನರ ಹೆಸರುಗಳನ್ನೇ ಎಸ್‌ಐಆರ್ ನಡೆಸಿರುವ ಪಟ್ಟಿಯಿಂದಲೇ ಕಿತ್ತು ಬೀಸಾಕಲಾಗುತ್ತಿದೆ ಎನ್ನುವ ಕ್ರಮದ ವಿರುದ್ಧ ಈಗ ದೇಶದಲ್ಲಿ ದಂಗೆರೂಪದಲ್ಲಿ ಪ್ರತಿಭಟನೆ ಕಾಣಿಸಿ ಕೊಂಡಿರುವುದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ನಡುಕ ಹುಟ್ಟಿಸಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎರಡು ವರ್ಷಗಳಿಂದ ಮಾಡುತ್ತಿರುವ ಮತದಾನ ಕಳ್ಳತನ (ವೋಟ್ ಚೋರಿ) ಆರೋಪಕ್ಕೆ ಈಗ ನಿಜವಾದ ತಿರುವು ಸಿಕ್ಕಂತಾಗಿದೆ. ಈಗಾಗಲೇ ಎಸ್ ಐ ಆರ್ ನಡೆದಿರುವ ರಾಜ್ಯಗಳಲ್ಲಿ ಒಟ್ಟು ಹದಿಮೂರು ಕೋಟಿ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದಕ್ಕೆ ಚುನಾವಣಾ ಆಯೋಗ ಉತ್ತರ ನೀಡಲಾಗದೆ ಒದ್ದಾಡುತ್ತಿದೆ. ಒಂದು ಕಡೆ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಸುಪ್ರೀಂ ಕೋರ್ಟಿನಲ್ಲಿನ ವಿಚಾರಣೆಗೆ ಪಾರದರ್ಶಕ ಉತ್ತರ ನೀಡಲು ವಿಫಲವಾಗುತ್ತಿರುವುದು ಆಯೋಗದಿಂದ ನಡೆಯುತ್ತಿರುವ ಮತ ಕಳವು ಆರೋಪ ಸಾಬೀತಾಗುತ್ತಿರುವಂತೆ ಕಾಣುತ್ತಿದೆ.
ಮತದಾರರ ಪರಿಷ್ಕರಣೆ ಪಟ್ಟಿಯಿಂದ ಅರ್ಜಿಯ ನಮೂನೆ ೭ರಲ್ಲಿ ಅನರ್ಹ ಮತದಾರರೆಂದು ಕಿತ್ತುಹಾಕುವ ಮತ್ತು ನಮೂನೆ ೬ರಲ್ಲಿ ಎದ್ದಿರುವ ವಿವಾದಗಳ ಬಗೆಗೆ ಸುಪ್ರೀಂ ಕೋರ್ಟು ಮತ್ತು ಚುನಾವಣಾ ಆಯೋಗದ ನಡುವೆ ಪರಸ್ಪರ ದೋಷಾರೋಪಣೆ, ಚುನಾವಣಾ ಆಯೋಗದ ಮುಖ್ಯ ಕಮೀಷನರ್ ಕ್ರಮದ ವಿರುದ್ಧವೇ ಈಗ ಜನತೆ ಮತ್ತು ನ್ಯಾಯಾಲಯ ಬೆರಳುಮಾಡಿ ತೋರಿಸುತ್ತಿರುವುದು ಆಯೋಗಕ್ಕೆ ನುಂಗಲಾರದ ತುತ್ತಾಗಿದೆ.
ಈ ಮಧ್ಯೆ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಉಜ್ವಲ್ ಭುಯಾನ್ ಎಸ್ ಐ ಆರ್ ನೆಪದಲ್ಲಿ ಕೋಟ್ಯಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಮನುಷ್ಯನ ದೇಹದಿಂದ ಹೃದಯವನ್ನೇ ಬೇರ್ಪಡಿಸಿದಂತೆ. ದೇಶದ ಪ್ರಜೆಗಳಲ್ಲಿ ಕೆಲವರು ಮತದಾನದ ಹಕ್ಕು ಚಲಾಯಿಸುವುದು ಮತ್ತೊಬ್ಬರು ಮತದಾನದ ಹಕ್ಕಿಲ್ಲದೆ ಮತಚಲಾವಣೆಯಿಂದ ವಂಚಿತರಾಗುವುದು. ಹೀಗೆ ಎರಡು ಬಗೆಯ ಪ್ರಜೆಗಳು ಇರುವುದು ಸಂವಿಧಾನ ಬಾಹಿರ ಕ್ರಮ ಎಂದು ಚುನಾವಣಾ ಆಯೋಗದ ಎಸ್ ಐಆರ್ ಕ್ರಮವನ್ನು ತರಾಟೆಗೆ ತೆಗೆದುಕೊಂಡಿರುವುದು ವಿವಾದಕ್ಕೆ ಒಳಗಾಗಿದೆ. ಈ ವಿಷಯ ಸುಪ್ರೀಂ ಕೋರ್ಟಿನ ಮುಂದೆ ವಿಚಾರಣೆ ನಡೆಯುವಾಗ ಈ ರೀತಿಯ ಅಭಿಪ್ರಾಯ ನ್ಯಾಯಾಲಯದ ತೀರ್ಪಿನ ಮೇಲೆ ಪರಿಣಾಮ ಬೀರಬಹುದು ಎನ್ನುವ ಟೀಕೆ ವ್ಯಕ್ತವಾಗಿದೆ. ಆದರೆ ನ್ಯಾಯಮೂರ್ತಿ ಉಜ್ವಲ್ ಭುಯಾನ್ ಅವರು ಜನರ ಮತದಾನದ ಹಕ್ಕಿಗೆ ಧಕ್ಕೆ ಬಂದಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿರುವ ಅಂಶವನ್ನು ಮುಖ್ಯವಾಗಿ ಪರಿಗಣಿಸಬೇಕಿದೆ.
ಇದೆಲ್ಲದರ ನಡುವೆ ಕಾಕ್ರೋಚ್ ಜನತಾ ಪಾರ್ಟಿಯ ಯುವಜನರು ಚುನಾವಣಾ ಆಯೋಗದ ಎಸ್‌ಐಆರ್ ಅಕ್ರಮದ ಹಿನ್ನೆಲೆಯಲ್ಲಿ ಮುಖ್ಯಚುನಾವಣಾ ಕಮೀಷನರ್ eನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ದೇಶದಾದ್ಯಂತ ನಡೆಸುತ್ತಿರುವ ಹೋರಾಟವನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿರುವುದು ಸರ್ಕಾರದ ಅಂಜಿಕೆಯನ್ನು ಪ್ರದರ್ಶಿಸಿದೆ. ಜಂತರ್ ಮಂಥರ್ ಪ್ರದೇಶದಲ್ಲಿ ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಿರುವುದು, ದೆಹಲಿಗೆ ದೇಶದ ನಾನಾ ಭಾಗಗಳಿಂದ ಬರುವ ೨೪೫ ರೈಲುಗಳ ಸಂಚಾರ ರದ್ದು ಮತ್ತು ೪೫ ಮೆಟ್ರೋ ರೈಲು ನಿಲ್ದಾಣಗಳನ್ನು ಮುಚ್ಚಿದ ಕ್ರಮ ಸರ್ಕಾರದ ಅಸ್ಥಿರತೆಯ ಅನಾವರಣವಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನೆಪದಲ್ಲಿ ದೇಶದಲ್ಲಿ ಅನಧಿಕೃತವಾಗಿ ತುರ್ತುಪರಿಸ್ಥಿತಿಯ ವಾತಾವರಣವನ್ನು ಸೃಷ್ಟಿಸುವ ಮೂಲಕ ಜನರಲ್ಲಿ ವಿಶೇಷವಾಗಿ ಪ್ರತಿಭಟನೆ ನಡೆಸುವವರಲ್ಲಿ ಭಯ ಹುಟ್ಟಿಸುವ ಸಂವಿಧಾನ ವಿರೋಧಿ ನಡೆ ಇದಾಗಿದೆ. ಪ್ರಜಪ್ರಭುತ್ವದಲ್ಲಿ ನಂಬಿಕೆ ಇರುವ ಜನರಲ್ಲಿ ಸರ್ಕಾರದ ಈ ನಡೆ ಸಿಟ್ಟಿಗೆ ಕಾರಣವಾಗಿದೆ. ಸುಪ್ರೀಂ ಕೋರ್ಟಿನ ನ್ಯಾಯ ಮೂರ್ತಿಗಳು ಹೇಳಿದಂತೆ ನೊಣ ಹೊಡೆಯಲು ಸುತ್ತಿಗೆಯನ್ನೇ ಬಳಸಿದಂತಿದೆ ಸರ್ಕಾರದ ಕ್ರಮ. ಆದರೆ ಯುವ ಜನರ ಚಳವಳಿ ಮತ್ತು ಹೋರಾಟವನ್ನು ಜಿರಳೆಗೆ ಹೋಲಿಕೆ ಮಾಡಿದಂತೆ ಈಗ ನೊಣಕ್ಕೆ ಹೋಲಿಕೆ ಮಾಡಲಾಗಿದೆಯೇ ಎನ್ನುವ ಪ್ರಶ್ನೆಗೆ ನ್ಯಾಯಮೂರ್ತಿಗಳಿಂದ ಉತ್ತರ ಸಿಗಬೇಕಿದೆ.
ಚುನಾವಣಾ ಆಯೋಗದ ಅಕ್ರಮಗಳನ್ನೆಲ್ಲ ಕೇಂದ್ರ ಸರ್ಕಾರ ಮತ್ತು ಆಳುವ ಬಿಜೆಪಿಯು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಈ ಎಲ್ಲ ಅಕ್ರಮಗಳಿಗೆ ನೇರವಾಗಿ ಸರ್ಕಾರವೇ ಕಾರಣ ಎನ್ನುವುದನ್ನು ಸಾಬೀತು ಮಾಡಿದಂತಾಗಿರುವುದು ವಿಪರ್ಯಾಸ. ಸಾಂವಿಧಾನಿಕ ಸಂಸ್ಥೆಗಳ ಬುಡವನ್ನೇ ಅಲುಗಾಡಿಸುವ ಕ್ರಮ ದೇಶ ಸರ್ವಾಧಿಕಾರದತ್ತ ಹೊರಳುತ್ತಿದೆಯೇ ಎನ್ನುವ ಶಂಕೆಗಳಿಗೆ ಎಡೆಮಾಡಿಕೊಟ್ಟಂತಾಗಿದೆ.
” ಕಾಕ್ರೋಚ್ ಜನತಾ ಪಾರ್ಟಿಯ ಯುವಜನರು ಚುನಾವಣಾ ಆಯೋಗದ ಎಸ್‌ಐಆರ್ ಅಕ್ರಮದ ಹಿನ್ನೆಲೆಯಲ್ಲಿ ಮುಖ್ಯಚುನಾವಣಾ ಕಮೀಷನರ್ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ದೇಶದಾದ್ಯಂತ ನಡೆಸುತ್ತಿರುವ ಹೋರಾಟವನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿರುವುದು ಸರ್ಕಾರದ ಅಂಜಿಕೆಯನ್ನು ಪ್ರದರ್ಶಿಸಿದೆ.”
ಬಳಸಿದ ಅಡುಗೆ ಎಣ್ಣೆಯನ್ನು ಸರಕಾರವೇ ಸಂಗ್ರಹಿಸಿ ಜೈವಿಕ ಇಂಧನವಾಗಿ (ಬಯೋಡೀಸೆಲ) ಪರಿವರ್ತಿಸುವ ಯೋಜನೆ ಪ್ರಶಂಸನೀಯ. ಪುನರಾವರ್ತಿತ ಎಣ್ಣೆ ಬಳಕೆಯಿಂದ ಹೊರಹೊಮ್ಮುವ…
ಅನ್ನ ಬೆಂದಿದೆಯೋ ಇಲ್ಲವೋ ಎಂಬುದನ್ನುಪರೀಕ್ಷಿಸಲು ಪಾತ್ರೆಯ ಅನ್ನವನ್ನು ಮುಟ್ಟಿ ನೋಡಬೇಕಿಲ್ಲ. ಒಂದು ಅಗುಳನ್ನು ಪರೀಕ್ಷಿಸಿದರೆ ಸಾಕು. ಅಂತೆಯೇ ಮೈಸೂರಿನಲ್ಲಿ ಸಂಚಾರ…
ಮಾರುಕಟ್ಟೆಯಲ್ಲಿ ನಕಲಿ ಔಷಧಿಗಳ ಮಾರಾಟ ಹೆಚ್ಚಾಗುತ್ತಿರುವುದು ಅಂತಕ ಮೂಡಿಸಿದೆ. ಬ್ರಾಂಡೆಡ್ ಹೆಸರಿನಲ್ಲಿ ಸೂಕ್ತ ಪ್ರಮಾಣದಲ್ಲಿ ರಾಸಾಯನಿಕಗಳಿಲ್ಲದ ಅಥವಾ ಹಾನಿಕಾರಕ ಘಟಕಾಂಶಗಳಿರುವ…
ಗುಂಡ್ಲುಪೇಟೆ : ತಾಲ್ಲೂಕಿನ ಬಾಚಹಳ್ಳಿಗ್ರಾಮದ ನಿವಾಸಿ, ಹರಿಕಥೆ ಮೇಷ್ಟ್ರು ಮಾದೇಶ(55) ಅವರು ಶನಿವಾರ ರಾತ್ರಿ ನಿಧನರಾದರು. ಚಿಕ್ಕನಿಂದಲೇ ಕಲೆಯನ್ನು ಮೈಗೂಡಿಸಿಕೊಂಡಿದ್ದ…
ಕೆ.ನೀಲಾ ಕರುನಾಡ ಹೋರಾಟಗಾರ್ತಿ ಕಾಮ್ರೇಡ್ ನೀಲಾ ನೆನಪುಗಳು ನಾನು ಆಗ ಏಳು ಅಥವಾ ಎಂಟನೇ ತರಗತಿ ಓದುತ್ತಿದ್ದೆ ಎಂದು ನೆನಪು.…
ಪಾತು ಎಲ್ಲಾ ಭಿನ್ನಾಭಿಪ್ರಾಯಗಳಾಚೆಯೂ ಒಬ್ಬರ ಬದುಕಿನಲ್ಲಿ ಇನ್ನೊಬ್ಬರು ಆಸರೆಯಾಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಈ ಘಟನೆ ಹಲವು ಕಾಲ ಜನಮಾನಸದಲ್ಲಿ ನಿಲ್ಲುತ್ತದೆ…