ಅಂಕಣಗಳು

ಜಾತಿ ಜನಗಣತಿಯ ಹಲವು ಮುಖಗಳು

ದೆಹಲಿ ಕಣ್ಣೋಟ 

ಶಿವಾಜಿ ಗಣೇಶನ್‌ 

ಹಲವಾರು ಒತ್ತಡಗಳ ನಡುವೆ ಜನಗಣತಿಯ ಜೊತೆಯಲ್ಲಿಯೇ ಜಾತಿ ಗಣತಿಯನ್ನೂ ನಡೆಸಲು ಕೇಂದ್ರ ಸರ್ಕಾರ ಕಳೆದ ಏಪ್ರಿಲ್ ೩೦ರಂದು ತೀರ್ಮಾನಿಸಿದೆ.

ಬ್ರಿಟಿಷ್ ಆಡಳಿತ ೧೮೮೧ರಿಂದ ಆರಂಭಿಸಿದ ಜನಗಣತಿಯಲ್ಲಿ ಜಾತಿಯನ್ನೂ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನೂ ಗಣನೆಗೆ ತೆಗೆದುಕೊಂಡು ಗಣತಿ ಕಾರ್ಯ ನಡೆಸುತ್ತಾ ಬಂದಿತು. ಜಾತಿ ಗಣತಿಯನ್ನು ೧೯೩೧ರವರೆಗೆ ಮಾತ್ರ ನಡೆಸಿ ನಂತರ ಅದನ್ನು ಹಲವಾರು ಕಾರಣಗಳಿಗಾಗಿ ಕೈಬಿಡಲಾಯಿತು. ೧೯೪೧ರ ಜನಗಣತಿಯಲ್ಲಿಯೂ ಜಾತಿ ಗಣತಿಯನ್ನು ನಡೆಸಿದರೂ ಎರಡನೇ ಜಾಗತಿಕ ಯುದ್ಧದ ಕಾರಣದಿಂದ ಆ ಅಂಕಿ ಆಂಶವನ್ನು ಪ್ರಕಟಿಸಲಿಲ್ಲ ಎಂದು ಕೆಲವು ಮೂಲಗಳು ಹೇಳುತ್ತವೆ.

೧೯೩೧ರ ಗಣತಿ ಆಧಾರದ ಮೇಲೆಯೇ ಸ್ವಾತಂತ್ರ್ಯ ಬಂದ ನಂತರವೂ ನಮ್ಮ ದೇಶೀಯ ಆಡಳಿತವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡುವ ಮೀಸಲಾತಿಯನ್ನು ಮತ್ತು ಇತರೆ ಸೌಲಭ್ಯವನ್ನೂ ವಿಸ್ತರಿಸಿಕೊಂಡು ಬಂದಿದೆ. ೧೯೫೧ರಿಂದ ಸ್ವತಂತ್ರ ಭಾರತ ಸರ್ಕಾರ ಜನಗಣತಿಯನ್ನು ಕೈಗೊಂಡಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಮತ್ತು ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನೂ ಸಮೀಕ್ಷೆ ಮಾಡುತ್ತಾ ಬಂದಿತು. ಈ ಗಣತಿಯಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಈ ತಳಸಮುದಾಯಕ್ಕೆ ಮೀಸಲಾತಿಯ ಪ್ರಮಾಣವನ್ನು ನಿಗದಿಪಡಿಸಲಾಗುತ್ತಿದೆ. ಆದರೆ ಹಿಂದುಳಿದ ವರ್ಗಗಳ ಆರ್ಥಿಕ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ೧೯೫೩ರಲ್ಲಿ ಮೊದಲ ಬಾರಿಗೆ ನೇಮಿಸಿದ ಕಾಕಾ ಕಾಲೇಲ್ಕರ್ ಆಯೋಗದ ವರದಿಯನ್ನು ಅಂದಿನ ನೆಹರೂ ಸರ್ಕಾರ ಜಾರಿಗೆ ತರಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ಸಂಸತ್ ಅಧಿವೇಶನದಲ್ಲಿ ಮಾತನಾಡುತ್ತಾ ಈ ವರದಿಯು ನಾಪತ್ತೆಯಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದು, ಆಯೋಗಗಳ ವರದಿಗಳು ಏನಾಗುತ್ತಿವೆ ಎನ್ನುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಡುತ್ತಿದೆ.

೧೯೭೭ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರ್ಕಾರ ೧೯೭೯ರಲ್ಲಿ ಬಿ.ಪಿ. ಮಂಡಲ್ ಆಯೋಗವನ್ನು ರಚಿಸಿತು. ಮಂಡಲ್ ಆಯೋಗವು ೧೯೮೦ರಲ್ಲಿ ಹಿಂದುಳಿದ ವರ್ಗಗಳಿಗೆ ಶೇ.೨೭ರಷ್ಟು ಉದ್ಯೋಗಾವಕಾಶದ ಮೀಸಲಾತಿಯನ್ನು ನೀಡುವಂತೆ ವರದಿ ನೀಡಿತಾದರೂ ಅದನ್ನು ಅಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲಿಲ್ಲ. ೧೯೯೦ರಲ್ಲಿ ವಿಶ್ವನಾಥ ಪ್ರತಾಪ್ ಸಿಂಗ್ ಸರ್ಕಾರ ಮಂಡಲ್ ವರದಿಯನ್ನು ಅಂಗೀಕರಿಸಿತಾದರೂ ಅದು ಆಗ ಜಾರಿಯಾಗದಂತೆ ಸುಪ್ರೀಂ ಕೋರ್ಟಿನ ಮೆಟ್ಟಿಲೇರಲಾಯಿತು. ಆಯೋಗದ ಈ ವರದಿಯು ಸಂವಿಧಾನದ ಸಮಾನತೆಯ ಹಕ್ಕನ್ನು ಉಲ್ಲಂಘಿಸುವುದಾಗಿ ಇಂದ್ರಾ ಸಾಹ್ನಿ ಪ್ರಶ್ನಿಸಿದ್ದರು. ಆದರೂ ಆಯೋಗದ ಶಿಫಾರಸನ್ನು ನ್ಯಾಯಾಲಯ ಎತ್ತಿ ಹಿಡಿಯಿತಾದರೂ ಮೀಸಲಾತಿ ಪ್ರಮಾಣದ ಮಿತಿಯನ್ನು ಶೇ.೫೦ಕ್ಕೆ ಮಿತಿಗೊಳಿಸಿತು.

ಏತನ್ಮಧ್ಯೆ ಕರ್ನಾಟಕ ಸರ್ಕಾರ ನ್ಯಾಯಮೂರ್ತಿ ಕಾಂತರಾಜ ಆಯೋಗವನ್ನು ನೇಮಿಸಿತು. ಈ ಆಯೋಗ ರಾಜ್ಯದಲ್ಲಿನ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಿ ಸಿದ್ಧಪಡಿಸಿದ ಸಮೀಕ್ಷಾ ವರದಿಯನ್ನು ಬಲಿಷ್ಠ ಜಾತಿಗಳ ವಿರೋಧ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ಹಿನ್ನೆಲೆಯಲ್ಲಿ ಕಸದ ಬುಟ್ಟಿಗೆ ಹಾಕಲಾಯಿತು. ಈಗ ಮತ್ತೆ ಹೊಸ ಸಮೀಕ್ಷೆಗಾಗಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಸೆಪ್ಟೆಂಬರ್ ೨೨ರಿಂದ ಹೊಸದಾಗಿ ಸಮೀಕ್ಷೆ ನಡೆಸಲು ಮುಂದಾಗಿರುವುದು ಕೂಡ ಈಗ ಪರ-ವಿರುದ್ಧ ವಿವಾದಕ್ಕೆ ಕಾರಣವಾಗಿದೆ. ಆದರೂ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಬರುವ ಸೋಮವಾರದಿಂದ ಸಮೀಕ್ಷೆಯನ್ನು ಕೈಗೆತ್ತಿಕೊಳ್ಳುವುದಾಗಿ ದೃಢ ನಿರ್ಧಾರ ಮಾಡಿದೆ.

ಈ ಮಧ್ಯೆ ೨೦೨೩ರಲ್ಲಿ ಒಡಿಶಾ, ಬಿಹಾರ, ೨೦೨೪ರಲ್ಲಿ ತೆಲಂಗಾಣ ರಾಜ್ಯಗಳು ಎಲ್ಲ ಜನರ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕ ಸ್ಥಿತಿಗತಿ ಕುರಿತ ಸಮೀಕ್ಷೆ ನಡೆಸಿವೆ. ಈ ರಾಜ್ಯ ಸರ್ಕಾರಗಳು ಹಿಂದುಳಿದ ಜಾತಿಗಳ ಸಮೀಕ್ಷೆ ನಡೆಸಿ ಅವುಗಳ ಜಾರಿಗೆ ತುದಿಗಾಲಲ್ಲಿ ನಿಂತಿವೆ. ೨೦೨೩ರಲ್ಲಿ ಬಿಹಾರ ಸರ್ಕಾರ ನಡೆಸಿದ ಸಮೀಕ್ಷೆಯಂತೆ ಒಟ್ಟು ಜನಸಂಖ್ಯೆಯಲ್ಲಿ ಆರ್ಥಿಕವಾಗಿ ಅತಿಹಿಂದುಳಿದ ಜಾತಿಗಳ ಸಂಖ್ಯೆಯು ಶೇ.೬೩ರಷ್ಟಿರುವುದಾಗಿ ತಿಳಿಸಿದೆ. ಜೊತೆಗೆ ಪರಿಶಿಷ್ಟ ಜಾತಿ ಶೇ. ೧೯.೬೫, ಪರಿಶಿಷ್ಟ ಪಂಗಡ ಶೇ. ೧.೬೮ ಮತ್ತು ಸಾಮಾನ್ಯ ವರ್ಗ ಶೇ. ೧೫.೫೨ ರಷ್ಟು ಜನಸಂಖ್ಯೆ ಹೊಂದಿರುವುದಾಗಿ ವರದಿ ತಿಳಿಸಿದೆ. ಬಿಹಾರ ಸರ್ಕಾರ ಎರಡು ಹಂತಗಳಲ್ಲಿ ಈ ಸಮೀಕ್ಷೆ ಕಾರ್ಯವನ್ನು ಮುಗಿಸಿತು.

ಈ ವರದಿಯನ್ನಾಧರಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿ (ಯು) ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಕಳೆದ ವರ್ಷ ಶೇ.೬೫ರಿಂದ ಶೇ.೭೦ಕ್ಕೆ ಹೆಚ್ಚಿಸಿತು.ಈ ಮೀಸಲಾತಿ ಹೆಚ್ಚಳವನ್ನು ಪಟ್ನಾ ಹೈಕೋರ್ಟ್ ರದ್ದು ಮಾಡಿದ್ದು, ಈ ವಿವಾದವೀಗ ಸುಪ್ರೀಂ ಕೋರ್ಟಿನ ಅಂಗಳದಲ್ಲಿದೆ. ಬಿಹಾರದಲ್ಲಿ ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಿಂದ ಈ ಜಾತಿ ಸಮೀಕ್ಷೆ ರಾಜಕೀಯ ಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿದೆ. ಈ ವರದಿಯನ್ನು ರಾಜ್ಯ ಜಾರಿಗೆ ತರುವುದು ಮಾತ್ರವಲ್ಲ ರಾಜ್ಯದ ಹಿಂದುಳಿದ ಜಾತಿಗಳ ಪರಿಸ್ಥಿತಿಯನ್ನು ಗಮನಿಸಿ ಶೇ.೮೫ರಷ್ಟು ಮೀಸಲಾತಿ ಜಾರಿಗೆ ತರಬೇಕೆನ್ನುವುದು ಹಲವು ರಾಜಕಾರಣಿಗಳ ಒತ್ತಡ.

ಬಿಹಾರ ಹೊರತುಪಡಿಸಿದರೆ ಇಂತಹ ಸಮಿಕ್ಷೆ ನಡೆಸುವ ಕಾರ್ಯಕ್ಕೆ ಉತ್ತರದ ಬೇರೆ ರಾಜ್ಯಗಳು ಕೈ ಹಾಕುವ ಸಾಹಸ ಮಾಡಿಲ್ಲ. ಆದರೆ ಒಡಿಶಾ ಮತ್ತು ತೆಲಂಗಾಣ ರಾಜ್ಯಗಳು ಈ ಸಮೀಕ್ಷೆಗಳನ್ನು ನಡೆಸಿವೆ. ಒಡಿಶಾ ರಾಜ್ಯವು ಜನರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆಯಾದರೂ ಆ ವರದಿಗಳನ್ನು ಇನ್ನೂ ಜಾರಿಗೆ ತಂದಿಲ್ಲ. ಈ ಮಧ್ಯೆ ಕೇಂದ್ರ ಸರ್ಕಾರವು ಮುಂದಿನ ವರ್ಷ ಜನಗಣತಿ ನಡೆಸುವ ಜೊತೆಗೆ ಜಾತಿ ಸಮೀಕ್ಷೆ ನಡೆಸುವುದರಿಂದ ತನ್ನ ಈಗಿನ ಸಮೀಕ್ಷೆಯನ್ನು ಜಾರಿಗೆ ತರುವಲ್ಲಿ ಹಿಂದೇಟು ಹಾಕುತ್ತಿದೆ.

ತೆಲಂಗಾಣದಲ್ಲಿನ ಕಾಂಗ್ರೆಸ್ ಸರ್ಕಾರವು ಜಾತಿ ಗಣತಿ ನಡೆಸಿದ್ದು ಫೆಬ್ರವರಿಯಲ್ಲಿ ವರದಿ ಸರ್ಕಾರದ ಕೈಸೇರಿದೆ. ಈ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆಯೇ ಬೇರೆ ಜಾತಿಗಳಿಗಿಂತ ಹೆಚ್ಚಿರುವುದು ತಿಳಿದು ಬಂದಿದೆ. ಹಿಂದುಳಿದ ಜಾತಿಗಳ ಜನಸಂಖ್ಯೆಯು ಶೇ. ೫೬.೩, ಪರಿಶಿಷ್ಟ ಜಾತಿ ಶೇ. ೧೭.೪ ಮತ್ತು ಪರಿಶಿಷ್ಟ ಪಂಗಡ ಶೇ. ೧೦.೪ ಹಾಗೂ ಇತರೆ ಹಿಂದುಳಿದ ಜಾತಿಗಳ ಸಂಖ್ಯೆಯು ಶೇ. ೧೫.೭ ಇರುವುದಾಗಿ ವರದಿ ಹೇಳಿದೆ. ಮುಸ್ಲಿಮರಲ್ಲಿ ಹಿಂದುಳಿದವರ ಸಂಖ್ಯೆಯು ಶೇ.೧೨. ೫೬ ಇದ್ದು ಅವರಿಗೆ ಶೇ. ೪ ಮೀಸಲಾತಿಯನ್ನು ನೀಡಲಾಗಿದೆ. ಕಾಂಗ್ರೆಸ್ ಪಕ್ಷವು ಚುನಾವಣೆ ವೇಳೆ ನೀಡಿದ ವಾಗ್ದಾನದಂತೆ ಯೋಜನಾ ಇಲಾಖೆಯು ಈ ಸಮೀಕ್ಷೆ ಕಾರ್ಯವನ್ನು ಮುಗಿಸಿದೆ. ಆಂಧ್ರ ಪ್ರದೇಶದಲ್ಲಿ ಹಿಂದಿನ ಜಗನ್‌ಮೋಹನರೆಡ್ಡಿ ಸರ್ಕಾರವು ರಾಜ್ಯದಲ್ಲಿನ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಉದ್ದೇಶಿಸಿತ್ತಾದರೂ ಆ ಕಾರ್ಯವನ್ನು ಕೈಗೆತ್ತಿಕೊಳ್ಳಲಿಲ್ಲ. ಈಗಿನ ಚಂದ್ರಬಾಬು ನಾಯ್ಡು ಸರ್ಕಾರವು ಈ ಬಗೆಗೆ ಯಾವುದೇ ಚಿಂತನೆಯನ್ನೂ ನಡೆಸಿಲ್ಲ.

ತಮಿಳುನಾಡಿನಲ್ಲಿ ೨೦೧೮-೧೯ರಲ್ಲಿ ಮನೆಗಳ ಸಮೀಕ್ಷೆ ನಡೆಸಲಾಯಿತಾದರೂ, ಇಡೀ ರಾಜ್ಯದಾದ್ಯಂತ ಹೇಗೆ ಸಮೀಕ್ಷೆ ನಡೆಸಬೇಕೆನ್ನುವ  ಚರ್ಚೆಯಲ್ಲಿಯೇ ಇದೆ. ಈ ಮಧ್ಯೆ ವನ್ನಿಯರ್ ಜಾತಿಗೆ ಮೀಸಲಾತಿ ನೀಡಬೇಕೆನ್ನುವ ಹೋರಾಟವು ನಡೆದಿರುವುದರಿಂದ ಈ ಸಮೀಕ್ಷೆ ನಡೆಸುವ ಕಾರ್ಯಕ್ಕೆ ಸದ್ಯ ಮುಂದಾಗಿಲ್ಲ. ಈ ನಡುವೆ ರಾಜ್ಯದಲ್ಲಿ ಈಗಾಗಲೇ ಶೇ. ೬೯ರಷ್ಟು ಮೀಸಲಾತಿ ಇರುವುದರಿಂದ ಅದನ್ನು ಉಳಿಸಿಕೊಳ್ಳಬೇಕೆನ್ನುವ ಕಡೆಗೇ ರಾಜ್ಯ ಸರ್ಕಾರದ ಹೆಚ್ಚಿನ ಗಮನ ಇದೆ ಎನ್ನಲಾಗಿದೆ.

ಕೇರಳದಲ್ಲಿ ಕಳೆದ ಎಂಟು ವರ್ಷಗಳಿಂದ ಎಡಪಕ್ಷಗಳ ಸರ್ಕಾರವಿರುವುದರಿಂದ ಇಂತಹ ಯಾವುದೇ ಸಮೀಕ್ಷೆ ನಡೆಸುವ ಗೋಜಿಗೆ ಹೋಗಿಲ್ಲ. ಈ ಮಧ್ಯೆ ಕೇಂದ್ರ ಸರ್ಕಾರವು ಮುಂದಿನ ವರ್ಷ ಜನಗಣತಿ ನಡೆಸುವ ಜೊತೆಯಲ್ಲಿಯೇ ಜಾತಿ ಗಣತಿಯನ್ನೂ ನಡೆಸುವುದರಿಂದ ತಾನು ಪ್ರತ್ಯೇಕವಾಗಿ ಜಾತಿ ಜನಗಣತಿ ನಡೆಸುವ ಅವಶ್ಯಕತೆ ಇಲ್ಲ ಎಂಬ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಲಾಗುತ್ತಿದೆ. ಈಗ ಮುಖ್ಯವಾಗಿ ಜಾತಿ ಜನಗಣತಿ/ ರಾಜ್ಯದ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಯ ಸಮೀಕ್ಷೆಯನ್ನು ಕರ್ನಾಟಕ ಸರ್ಕಾರ ಕೈಗೊಂಡಿದ್ದು, ಸೋಮವಾರ ಈ ಕಾರ್ಯವನ್ನು ಪ್ರಾರಂಭಿಸಲಿದೆ. ಈ ಮಧ್ಯೆ ಒಕ್ಕಲಿಗ, ವೀರಶೈವ ಮತ್ತು ಲಿಂಗಾಯತ ಜಾತಿಗಳ ಪ್ರಬಲ ವಿರೋಧದಿಂದ ಈ ಹಿಂದೆ ನಡೆಸಿದ್ದ ಕಾಂತರಾಜ ಆಯೋಗದ ವರದಿಯನ್ನು ಬಹಿರಂಗಪಡಿಸದೇ ಪಕ್ಷದ ವರಿಷ್ಠರ ತೀರ್ಮಾನದಂತೆ ತಿರಸ್ಕರಿಸಿ ಹೊಸದಾಗಿ ಸಮೀಕ್ಷೆ ನಡೆಸಲು ಮುಂದಾಗಿರುವುದು ರಾಜ್ಯದಲ್ಲಿ ನಿರೀಕ್ಷೆಯಂತೆ ಗೊಂದಲ, ಬೆಂಬಲ ಮತ್ತು ವಿರೋಧ ಎದುರಾಗಿದೆ.

ಸಮೀಕ್ಷೆಯನ್ನು ಕೈಗೆತ್ತಿಕೊಳ್ಳುವ ಸಮಯ ಸಮೀಪಿಸುತ್ತಿರುವುದರಿಂದ ವೀರಶೈವ-ಲಿಂಗಾಯತ ಮತ್ತು ಇತರೆ ಜಾತಿಗಳಲ್ಲಿ ಧರ್ಮ ಮತ್ತು ಜಾತಿಯ ಕಾಲಂನಲ್ಲಿ ಏನು ಬರೆಸಬೇಕೆನ್ನುವ ವಿವಾದ ಮತ್ತು ಗೊಂದಲ ಆಯಾ ಜಾತಿಗಳಲ್ಲಿಯೇ ಬಿಕ್ಕಟ್ಟು ಉಂಟು ಮಾಡಿದೆ. ಈ ಗೊಂದಲ ಪರಿಶಿಷ್ಟ ಜಾತಿಯಲ್ಲಿ ಬೌದ್ಧ ಧರ್ಮಕ್ಕೆ ಮತಾಂತರವಾಗಿರುವವರು ಮತ್ತು ಬೌದ್ಧ ಧರ್ಮದ ಆಚರಣೆ ಮಾಡುತ್ತಿರುವವರಲ್ಲಿಯೂ ಚರ್ಚೆ ಹುಟ್ಟು ಹಾಕಿದೆ. ಈ ಹಿಂದೆ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಒಳಮೀಸಲಾತಿ ಆಯೋಗವು ಬೌದ್ಧ ಧರ್ಮೀಯರನ್ನು ಕಡೆಗಣಿಸಿ ತಮಗೆ ಅನ್ಯಾಯ ಮಾಡಿದೆ ಎನ್ನುವ ಬಲವಾದ ಆಪಾದನೆಯೂ ಕೇಳಿ ಬಂದಿರುವುದರಿಂದ ಈ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಬೇಕೆನ್ನುವ ಕೂಗು ಹೆಚ್ಚಿದೆ.

ಈ ಎಲ್ಲ ಗೊಂದಲದ ನಡುವೆ ಈ ಸಮೀಕ್ಷೆಯ ಅವಶ್ಯಕತೆಯನ್ನೇ ಈಗ ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಈ ವಿವಾದವನ್ನು ಸೋಮವಾರ ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳುತ್ತಿರುವುದರಿಂದ ಮುಂದಿನ ಬೆಳವಣಿಗೆ ಕುತೂಹಲಕಾರಿಯಾಗಿದೆ.

”  ಕರ್ನಾಟಕ ಸರ್ಕಾರ ನ್ಯಾಯಮೂರ್ತಿ ಕಾಂತರಾಜ ಆಯೋಗವನ್ನು ನೇಮಿಸಿತು. ಈ ಆಯೋಗ ರಾಜ್ಯದಲ್ಲಿನ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಿ ಸಿದ್ಧಪಡಿಸಿದ ಸಮೀಕ್ಷಾ ವರದಿಯನ್ನು ಬಲಿಷ್ಠ ಜಾತಿಗಳ ವಿರೋಧ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ಹಿನ್ನೆಲೆಯಲ್ಲಿ ಕಸದ ಬುಟ್ಟಿಗೆ ಹಾಕಲಾಯಿತು.”

ಆಂದೋಲನ ಡೆಸ್ಕ್

Recent Posts

ನಾಳೆ ಧುರಂಧರ್-2 ಬಿಡುಗಡೆ : ಎಲ್ಲಾ ದಾಖಲೆ ಮುರಿಯುವ ನಿರೀಕ್ಷೆ

ಮುಂಬೈ : ಆದಿತ್ಯ ಧರ್‌ ನಿರ್ದೇಶನದ, ರಣವೀರ್‌ ನಟನೆಯ ಧುರಂಧರ್-2 ಚಿತ್ರದ ಎರಡನೇ ಭಾಗವು ನಾಳೆ(ಮಾರ್ಚ್.‌19) ಬಿಡುಗಡೆಯಾಗಲಿದೆ. ಕಳೆದ ವರ್ಷ…

2 mins ago

ದಳಪತಿ ವಿಜಯ್‌ಗೆ ಮುಖ್ಯಮಂತ್ರಿ ಸ್ಥಾನದ ಆಫರ್‌

ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳಿರುವಾಗ, ನಟ-ರಾಜಕಾರಣಿ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ…

44 mins ago

ನ್ಯಾಟೋ ದೇಶಗಳಿಗೆ ಎಚ್ಚರಿಕೆ ನೀಡಿದ ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕದ ಬೆಂಬಲಕ್ಕೆ ನಿಲ್ಲಬೇಕಿದ್ದ ನ್ಯಾಟೋ ದೇಶಗಳು ಈಗ ಹಿಂದೆ ಸರಿದಿರುವುದು ಟ್ರಂಪ್ ಆಡಳಿತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಪಶ್ಚಿಮ…

56 mins ago

ಪ್ರಜ್ವಲ್‌ ಅಶ್ಲೀಲ ವಿಡಿಯೊ ಹಂಚಿಕೆ ಪ್ರಕರಣ ; 39 ಆರೋಪಿಗಳ ವಿರುದ್ಧ ಚಾರ್ಚ್‌ಶೀಟ್‌

ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳನ್ನು ಪೆನ್‌ಡ್ರೈವ್ ಮೂಲಕ ಹಂಚಿಕೆ ಮಾಡಿದ ಪ್ರಕರಣದಲ್ಲಿ…

1 hour ago

ರೀಲ್ಸ್ ಹುಚ್ಚಾಟ, ಕೊರಿಯರ್ ಆಫೀಸಿಗೆ ಅಪ್ಪನನ್ನೇ ಪಾರ್ಸೆಲ್ ತಂದ ಮಂದಿ!

ಬೆಂಗಳೂರು : ಏನೋ ಮಾಡಲು ಹೋಗಿ ಇನ್ನೆನೋ ಆಗಿ ಪೇಚಿಗೆ ಸಿಲುಕಿರುವ ಘಟನೆಗಳೂ ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಇದೀಗ…

2 hours ago

ಜೆಡಿಎಸ್‌ನಲ್ಲೇ ಇದ್ದೀನಿ, ಪಕ್ಷದಿಂದಲೇ ಸ್ಪರ್ಧೆ : ಜಿ.ಟಿ.ದೇವೇಗೌಡ ಸ್ಪಷ್ಟನೆ

ಮೈಸೂರು : ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದಲೇ ನನ್ನ ಸ್ಪರ್ಧೆ, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ…

3 hours ago