• ಮಧುಕರ ಮಳವಳ್ಳಿ
ಇಡೀ ಬೀದಿಯೇ ಮೌನವಾಗಿ ನೋಡುತ್ತಾ ನಿಂತಿದೆ. ಆ ವಹೀದಾ ತನ್ನ ಕುಂಟುಗಾಲಿನಲ್ಲಿ ಆ ಲಾರಿಗೆ ತನ್ನ ಪಾತ್ರೆಪಗಡೆಗಳನ್ನು ತನ್ನದು ಎನ್ನುವ ಎಲ್ಲವನ್ನೂ ತುಂಬುತ್ತಾ ಇದ್ದಾಳೆ. ಆ ತಮಿಳು ಪಳನಿಸ್ವಾಮಿ ಕೂಡ ಅವಳ ಸಹಾಯಕ್ಕೆ ಇದ್ದಾನೆ. ಈ ಮಧ್ಯೆ ಲಾರಿ ಡ್ರವೈ ಸಣ್ಣಪುಟ್ಟ ಸಾಮಾನುಗಳನ್ನು ತಂದು ಹಾಕುತ್ತಿದ್ದಾನೆ. ನೋಡುವರು… ನೋಡುತ್ತಾ ನಿಲ್ಲದವರು… ನೋಡುತ್ತಾ ಹೋಗುವರು… ಯಾರೂ ಸಹಾಯಕ್ಕೆ ಬರುತ್ತಿಲ್ಲ.
ಪಳನಿಸ್ವಾಮಿ; ಇವಾ ಪ್ರಾಯದಲ್ಲಿ ಮನೆಯ ಪರಿಸ್ಥಿತಿಯಿಂದಾಗಿ, ಕಾವೇರಿ ನದಿಯ ಜಾಡು ಹಿಡಿದು ಈ ‘ಮದಲಿಂಗ’ಯೆಂಬ ಊರಿಗೆ ಬಂದು ನೆಲೆಸಿ, ಕೃಷಿಯ ಬಗ್ಗೆ ಒಲವು ಬೆಳೆಸಿಕೊಂಡು. ಅವನು ಇರುವ ಭೂಮಿಯಲ್ಲಿ ವರ್ಷಕ್ಕೆ ಎರಡು ಬೆಳೆ ತೆಗೆಯಬಹುದಾದ ಭೂಮಿಯಲ್ಲಿ, ತಾನು ವಾಸವಿರಲು ಒಂದು ಗುಡಿಸಲು ಹಾಕಿಕೊಂಡು. ತನ್ನ ಜೊತೆಗೆ ಇರಲು ಬೀದಿನಾಯಿ ಗಳಿಗೆ ಬಿಸ್ಕತ್ ಮತ್ತು ಮೂಳೆಗಳ ರುಚಿ ಹತ್ತಿಸಿ ಸಂಜೆಯಾದರೆ ನಾಯಿಗಳ ಹಿಂಡನ್ನೇ ತನ್ನ ಗುಡಿಸಲ ಬಳಿ ಇರುವಂತೆ ನೋಡಿಕೊಂಡ. ತನ್ನ ಒಂಟಿತನವನ್ನು ನೀಗಿಕೊಂಡ. ಹೀಗೆ ಇರಲು ಕ್ರಮೇಣ ತಾನು ಒಪ್ಪಂದ ಮಾಡಿಕೊಂಡ ಜಮೀನಿನ ಪಕ್ಕದಲ್ಲಿ ಸರ್ಕಾರದಿಂದ ಬಡವರಿಗೆ ಆಶ್ರಯ ಮನೆಗಳು ಆಗಲು, ಆಗಾ ಪಳನಿ ಸ್ವಾಮಿಗೆ ಜನರ ವಾಸನೆ ಬಡಿಯಿತು. ಕನ್ನಡವನ್ನು ಸೊಗಸಾಗಿ ಮಾತಾನಾಡುತ್ತಿದ್ದ. ಅವನ ಉಡುಗೆ ತೊಡುಗೆಗಳಿಂದ ಅವಾ ಕೊಂಗನಾಡಿನ ವಾಯೆಂದು ತಿಳಿಯಬಹುದಾಗಿತ್ತು. ಬಿಳಿಯಾದ ತಲೆಗೂದಲನ್ನು ಹಿಂದಕ್ಕೆ ಎಣ್ಣೆ ಹಾಕಿ ಬಾಚಿ. ಬಿಳಿ ಅಂಗಿ, ಒಂದು ಚಡ್ಡಿ, ಒಂದು ಸೈಕಲ್ ಇಟ್ಟುಕೊಂಡಿದ್ದ. ಅದು ಊರು ಸುತ್ತಲು.
ನಾಜಿರ್; ವಹೀದಾ. ನಾಜಿರ್ ಆಶ್ರಯ ಬಡಾವಣೆಯಲ್ಲಿ ಒಂದು ಸೈಟು ಪಡೆದು ತಕ್ಷಣವೇ ಒಂದು ಸಣ್ಣ ಮನೆ ಮಾಡಿದ. ಅವನ ಮನೆಯ ಪಕ್ಕದಲ್ಲಿ ಬಡಾವಣೆ ನಕ್ಷೆಯಲ್ಲಿ ದೇವಸ್ಥಾನದ ಜಾಗಯಿತ್ತು. ಅದನ್ನು ತಿಂಗಳಿಗೆ 350 ರೂಪಾಯಿ ಬಾಡಿಗೆಗೆಯೆಂದು ಪಂಚಾಯಿತಿಯಿಂದ ಪಡೆದು ಒಂದು ಟೀ ಅಂಗಡಿಯನ್ನು ಆರಂಭಿಸಿದ, ಊರಿನಾಚೆ ಇರುವ ಜಾಗ, ಹೊಲ-ಗದ್ದೆ ಕೆಲಸಕ್ಕೆ ಕೂಲಿಗೆ ಬರುವ ಜನಕ್ಕೆ ಬೇಕಾದ ಟೀ-ಬಿಸ್ಕತ್ -ಬೀಡಿ… ಇತ್ಯಾದಿಗಳು ಅಲ್ಲಿ ಸಿಗುತ್ತಿರಲು, ವಹೀದಾ ತನ್ನ ಕುಂಟುಗಾಲಿನಲ್ಲಿ ಮನೆಯಿಂದಲೇ ಟೀ ಮಾಡಿ ಕೊಡುತ್ತಾಯಿದ್ದಳು. ನಾಜಿರ್‌ಗೆ ಈಚೆಗೆ ಕಿವುಡು ಬಂದಿದೆ. ಯಾರೇ ಮಾತಾನಾಡಿದರೂ ಅಂಗೈಯನ್ನು ಕಿವಿಗೆ ತಾಕಿಸಿ ಮಾತು ಕೇಳಿಸಿಕೊಳ್ಳವುದು ರೂಢಿಯಾಗಿತ್ತು. ಸೂರ ಹುಟ್ಟುವ ಮೊದಲೇ ಅಂಗಡಿ ತೆರೆಯುವುದನ್ನು ಅಭ್ಯಾಸ ಮಾಡಿಕೊಂಡು, ಮಧ್ಯಾಹ್ನದವರೆಗೆ ನಾಜಿರ್ ಅಂಗಡಿಯಲ್ಲಿ ಇದ್ದರೆ ನಂತರ ವಹೀದಾ ಸಂಜೆಯವರೆಗೆ ಇರುತ್ತಿದ್ದಳು.
ಇವರು ಮೂಲತಃ ಮಂಗಳೂರಿನ ಕಡೆಯವರು. ಆ ಕಾಲಕ್ಕೆ ಪ್ರೀತಿ ಮಾಡಿ ಮನೆಯವರಿಗೆ ತಿಳಿಯದಂತೆ ಓಡಿಬಂದವರು. ಈ ಹಳ್ಳಿಯಂತಹ ಪಟ್ಟಣದಲ್ಲಿ ವಾಸ ಮಾಡಲು ಶುರುಮಾಡಿದರು. ನಾಜಿರ್ ಮೊದಲು ತಾಮ್ರದ ಹಂಡೆಗಳಿಗೆ ಕಲಾಯಿ ಮಾಡುತ್ತಾ ಸಾಂಸಾರಿಕ ಜೀವನ ಆರಂಭಿಸಿದ. ನಂತರ ಲಾಟರಿ ಮಾರಾಟ… ಇದರಿಂದ ಮನೆ ಬಾಡಿಗೆಗೆ, ಹೊಟ್ಟೆ-ಬಟ್ಟೆಗೆ ತೊಂದರೆಯಾಗದಂತೆ ಜೀವನ ರೂಪಿಸಿಕೊಂಡ. ಯಾಕೋ ಮಕ್ಕಳ ಫಲವಿಲ್ಲದೆ ಕೊರಗಲು ಆರಂಭಿಸಿದ. ಕೊನೆಗೆ ಅಲ್ಲಾಹುವಿನ, ಕೃಪೆ’ ಎಂದು ತಿಳಿದು ಸುಮ್ಮನಾದ. ವಹೀದಾ… ಕೂಡ ಕಾಮಕೇಳಿಯಲ್ಲಿ ಉತ್ತುಂಗ ಏರಿದವಳು. ಫಲವಿಲ್ಲವೆಂದು ತಿಳಿದು ಇಬ್ಬರೂ ಜೀವನದ ಅವಶ್ಯಕತೆಗಳನ್ನು ಅರಿತು ಬಾಳುವುದನ್ನು ಕಲಿತರು.
ಪಳನಿಸ್ವಾಮಿ ತನ್ನ ಬೀದಿಯ ನಾಯಿಗಳನ್ನು ಸಂಗಡ ಮಾಡಿಕೊಂಡು ಬಂದು, ನಾಜಿರ್-ವಹೀದಾ ದಂಪತಿಗಳಿಗೆ ಪರಿಚಿತನಾದ, ಆತ್ಮೀಯನಾದ. ಸುತ್ತು-ಮುತ್ತಲಿನ ಜನರನ್ನು ಅಂಗಡಿಗೆ ಪರಿಚಯ ಮಾಡಿಸುತ್ತಾ, ಒಂದೊಂದು ಸಲ ಇವನು ಮಾಡಿದ ಅಡುಗೆಯ ಪ್ರಾತೆಗಳು ನಾಜಿರ್ ಮನೆಗೆ ಬರುತ್ತಾ ಇದ್ದವು. ಪ್ರತಿ ಶುಕ್ರವಾರ ಬಿರಿಯಾನಿ ಪಳನಿಸ್ವಾಮಿಗೆ ಮೀಸಲು ಇತ್ತು.
ಬಡತನದ ಕಾರಣವಾಗಿ ತಮ್ಮ ಅಣ್ಣ- ತಮ್ಮ, ಅಕ್ಕ- ತಂಗಿ ಈ ಎಲ್ಲರ ಬದುಕನ್ನೂ ಬೆಳಗಿಸಲು ತಾನು ದುಡಿಯಲು ವಲಸೆ ಬಂದು ಕೃಷಿಯಲ್ಲಿ ತೊಡಗಿ ಬ್ರಹ್ಮಚಾರಿಯಾಗಿಯೇ ಉಳಿದ. ತಮಿಳುನಾಡಿನಲ್ಲಿ ಬೇಡಿಕೆ ಇರುವ ಅರಿಶಿನ, ಶುಂಠಿ ಬೆಳೆದು ಅಲ್ಲಿನ ಮಾರುಕಟ್ಟೆಗೆ ಇಲ್ಲಿಂದಲೇ ಕಳುಹಿಸುವ ವ್ಯವಸ್ಥೆ ಮಾಡಿದ್ದ. ಒಂದೊಂದು ಸಾರಿ ನಾಜಿರ್‌ನನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದ. ಹಬ್ಬಗಳಿಗೆ ಹೊಸಬಟ್ಟೆಗಳು ವಿನಿಮಯವಾಗುತ್ತಿದ್ದವು. ವಹೀದಾಳಿಗೆ ಮಕ್ಕಳ ಆಸೆ ಇತ್ತು. ಆದರೆ ದೇಹದ ಪ್ರಕೃತಿ ಕೊನೆಯಾಗಿತ್ತು.
ನಾಜಿರ್‌ಗೆ ಯಾಕೋ ಈಚೆಗೇ ಸಣ್ಣ ಅಕ್ಷರಗಳನ್ನು ಓದಲು ಆಗದ ಕಾರಣ ಪಳನಿಸ್ವಾಮಿಯ ಸಹಾಯ ಪಡೆಯುತ್ತಿದ್ದ. ವಹೀದಾ ಅಂದು ಈ ಮಾತು ಯಾಕೆ? ಹೇಳಿದಳು ಗೊತ್ತಿಲ್ಲ. ‘ನಿಂಗೇ ಯಾವ ಕೆಲಸ ತಾನೇ ಸರಿಯಾಗಿ ಮಾಡಕೆ ಬರುತ್ತೆ ? ನಾಜಿರ್‌ಗೆ ಈ ಮಾತುಗಳು ಬಾಣದಂತೆ ನಾಟಿ ಮೌನವಾದ. ಪಕ್ಕದಲ್ಲೇ ಇದ್ದ ಪಳನಿಸ್ವಾಮಿ, ‘ಇಷ್ಟು ವರ್ಷ ಸಂಸಾರ ಮಾಡಿಲ್ಲವಾ’ ಎಂದ. ತಕ್ಷಣವೇ ನಾಜಿರ್ ‘ಇವಳಿಗೆ ಈಗ ಪ್ರಾಯ, ಹೋಗಿ ಕೆಲಸ ನೋಡು’ ಎಂದ. ವಹೀದಾ ಏನೋ ನುಡಿಯುತ್ತಾ ಮನೆಗೆ ನಡೆದಳು. ‘ಹೇ ಪಳನಿಸ್ವಾಮಿ ಆ ಕಡೆ ಹೋದಾಗ ಆಸ್ಪತೆಗೆ ಹೋಗಿ ಕಣ್ಣಿನ ಪರೀಕ್ಷೆ ಯಾವಾಗ ಮಾಡುತ್ತಾರೆ ತಿಳಿದು ಬಾ’ ಎಂದ.
ವಹೀದಾ… ಪ್ರಾಯದಲ್ಲಿ ಸೂರನಂತೆ ಹೊಳೆಯುತ್ತಾ ಇದ್ದಳು. ಕುಂಟುಗಾಲಿನಲ್ಲಿಯೇ ಕುದುರೆಯಂತೆ ನಡೆಯುತ್ತಿದ್ದಳು. ವಹೀದಾಳ ಚೆಲುವು ಅವಳ ಅಂಗವಿಕಲತೆಯನ್ನು ಮರೆಮಾಡಿತ್ತು. ನಾಜಿರ್ ಕೂಡ ತುಂಬು ಪ್ರಾಯದಲ್ಲಿ ಅವನ ತೋಳುಗಳಲ್ಲಿ ಒಮ್ಮೆ ಮಲಗುವಂತೆ ಹುಡುಗಿಯರಿಗೆ ಆಸೆ ತರುತ್ತಾಯಿತ್ತು ಮತ್ತು ಆಗಲೇ ಆತ ಹಣ ಸಂಪಾದನೆಯ ದಾರಿ ತಿಳಿದವ. ಒಂದೇ ಕೂರತೆ ನಾಜಿರ್‌ಗೆ ತಂದೆ-ತಾಯಿ ಇಲ್ಲವಾಗಿದರು. ಮಸೀದಿ ಯಲ್ಲಿ ತನ್ನ ಬಾಲ್ಯವನ್ನು ಕಳೆದ. ಅಲ್ಲಿ ಎರಡು ಕಣ್ಣುಗಳು ಸೇರಿ ಮಂಗಳೂರಿನಿಂದ ಮೈಸೂರಿಗೆ, ಅಲ್ಲಿಂದ ಈ ಹಳ್ಳಿಯಂತಹ ಪಟ್ಟಣಕ್ಕೆ ಬಂದು ನೆಲೆ ನಿಂತರು. ಕಲಾಯಿ ಮಾಡುವಾಗ ನೂರಾರು ಕಣ್ಣುಗಳು ಆಸೆಯಿಂದ ನೋಡುತ್ತಿದ್ದರೆ, ಬಯಕೆ ಕುಣಿಯುವುದು. ಸಂಜೆಗೆ ನಾಜಿ ಅದನ್ನು ಹೀರಲು ಒಪ್ಪಿಸುತ್ತಿದ್ದಳು ವಹೀದಾ.
ಈಚೆಗೆ ನಾಜಿ ಮಂಚದ ಮೇಲೆ ಮಲಗುವುದನ್ನು ಬಿಟ್ಟಿದ್ದ. ಅಪ್ಪುಗೆಯ ಸ್ಪರ್ಶ ಕೂಡ ತಪ್ಪಿತ್ತು. ನೆನಪಿನಲ್ಲಿ ಸುಖ ಕಾಣುತ್ತಿದ್ದಳು. ನಾಜಿರ್‌ಗೆ ಕಿವುಡು, ಕಣ್ಣಿನ ತೊಂದರೆ, ಬದುಕಿನ ಬವಣೆ ಕಾಡುತ್ತಿದ್ದವು. ಬಡಾವಣೆ ಬೆಳೆದಂತೆ ವ್ಯಾಪಾರವು ಕಡಿಮೆಯಾಗುತ್ತ, ಸುತ್ತಲೂ ಅಂಗಡಿಗಳು ಆದವು. ಬೆಳಿಗ್ಗೆ ಮಾಡಿದ ಟೀ ಖಾಲಿಯಾಗಲು ಮಧ್ಯಾಹ್ನವಾಗುತ್ತಿತ್ತು. ಹೊಲ-ಗದ್ದೆಗಳು ಬಡಾವಣೆಯಾಗಿ ಪರಿವರ್ತನೆಯಾಗಿ, ವ್ಯಾಪಾರ ಎರಡು ಹೊತ್ತಿನ ಊಟಕ್ಕೂ ತೊಂದರೆ ಆಗುವ ಹಂತಕ್ಕೆ ತಲುಪಿದ್ದ ಕಾರಣ ಈ ಕಣ್ಣು ಸರಿಹೋದರೆ ಬೇರೆ ವ್ಯಾಪಾರ ಮಾಡುವ ಯೋಚನೆ ಇತ್ತು. ಪಳನಿಸ್ವಾಮಿ ಬಂದು ‘ನಾಜಿ ನಾಳೆ ಬೆಂಗಳೂರಿನಿಂದ ಕಣ್ಣಿನ ಪರೀಕ್ಷೆಗೆ ಬರುತ್ತಾರಂತೆ. ಕಣ್ಣು ನೋಡಿ ಆಪರೇಷನ್ ಮಾಡೋಕು ಅಂದರೆ ಬೆಂಗಳೂರಿಗೆ ಹೋಗಬೇಕಂತೆ. ಅವರೇ ನೋಡಿಕೊಳ್ಳುತ್ತಾರೆ ಹೋಗಿ ಬಾ ಎಂದ. ಅಕ್ಕಿ ಆರಿಸುತ್ತಿದ್ದಾ ವಹೀದಾ ಗಮನಿಸಿ ‘ಹೋಗಿ ಬಾ’ ಎಂದಳು.
ವಹೀದಾ ಕೂಡ ಆಸ್ಪತ್ರೆಗೆ ಬಂದಳು. ಕಣ್ಣಿನ ಪರೀಕ್ಷೆ ಆಯಿತು. ‘ಆಪರೇಷನ್ ಮಾಡಿಸಬೇಕಾದರೆ ಬೆಂಗಳೂರಿಗೆ ಬರಲು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ’ ಎಂದರು ನರ್ಸ್. ಹೋಗಲು ವಹೀದಾ ಒಪ್ಪಿ ಸಹಿ ಹಾಕಿದಳು. ಪಳನಿಸ್ವಾಮಿ ಕೂಡ ಬಂದು ಹೋಗಿ ಬನ್ನಿ’ ಎಲ್ಲ ಸರಿಹೋಗುತ್ತೆ ಎನ್ನುವಾಗ ಬಸ್ ಬಂತು. ಎಲ್ಲರನ್ನೂ ಕರೆದುಕೊಂಡು ಬಸ್ ಹೊರಟಿತು. ವಹೀದಾ ಮನೆಗೆ ಬಂದಳು… ಒಂಟಿತನ ಕಾಡಲು ಆರಂಭಿಸಿತು. ತೀರಾ ಅಪರೂಪಕ್ಕೆ ಪಳನಿ ಜೊತೆಗೆ ತಮಿಳುನಾಡಿಗೆ ಬೆಳಿಗ್ಗೆ ಹೋಗಿ ಸಂಜೆಗೆ ಬರುತ್ತಿದ್ದ. ಅದು ಬಿಟ್ಟರೆ ಇವತ್ತೇ ನಾಜಿರ್‌ನ ವಾಸನೆಯಿಲ್ಲ. ನಿದ್ದೆ ಯಾವಾಗ ಬರುತ್ತೋ ಏನೋ ಎಂಬ ಯೋಚನೆಯಲ್ಲಿಯೇ ನಿದ್ದೆಗೆ ಜಾರಿದಳು.
ಲೇಟಾಗಿ ಎದ್ದು ಅಂಗಡಿ ತೆರೆದಳು. ಅಷ್ಟರಲ್ಲಿ ಪಳನಿಸ್ವಾಮಿ ತಿಂಡಿ ತಂದು ‘ತಿನ್ನಿ’ ಎಲ್ಲ ಸರಿಹೋಗುತ್ತೆ ಎಂದ. ಅದರೂ ಮೌನವಾಗಿಯೇ ಇದ್ದಳು ವಹೀದಾ ಮತ್ತೆ ಅವರಿಗೆ ಏನಾದರೂ ಆದರೆ ನಂಗೆ ಯಾರು ದಿಕ್ಕು? ಎನ್ನುತ್ತಾ ಕಣ್ಣೀರು ಹಾಕಿದಳು. ಪಳನಿಸ್ವಾಮಿ ‘ದೇವರು ದಿಕ್ಕು ತೋರಿಸುತ್ತಾನೆ’ ಎಂದು ಹೊರಟ.
ಮೂರು ದಿನಗಳು ಕಳೆದವು. ವಹೀದಾ ಆಸ್ಪತ್ರೆಯ ಬಳಿ ಹೋಗಿ ಕುಳಿತಳು. ಮಧ್ಯಾಹ್ನದ ಹೊತ್ತಿಗೆ ಬಸ್ ಬಂತು. ನಾಜಿ ಕನ್ನಡಕ ಧರಿಸಿಕೊಂಡು ಇಳಿದ. ಆದರೆ ಸ್ವಲ್ಪ ಸುಸ್ತಾದ ರೀತಿಯಲ್ಲಿ ಕಂಡ. ವಹೀದಾ ‘ಯಾಕೆ? ಇಷ್ಟು ಸುಸ್ತು’ ಎಂದು ಕೇಳಿದಳು. ‘ಹೇ ಅಲ್ಲಿನ ಊಟ, ತಿಂಡಿ ನಂಗೆ ಯಾಕೋ ಸರಿಯಾಗಿ ಹೊಂದಿಕೆಯಾಗಲಿಲ್ಲ’ ಎನ್ನುವಷ್ಟರಲ್ಲಿ ಪಳನಿಸ್ವಾಮಿ ಕೂಡ ಬಂದ. ‘ಯಾಕೆ?’ ಎಂದು ಮತ್ತೆ ಕೇಳಿದ. ನಾಜಿರ್, ‘ಅಲ್ಲಿ ಎಲ್ಲಾ ಫ್ರೀ ಅಂತ ಕರೆದುಕೊಂಡು ಹೋಗುತ್ತಾರೆ. ಆದರೆ ನಮಗೆ ಸರಿಯಾಗಿ ಆರೈಕೆ ಮಾಡುವವರು ಯಾರು ಇರಲ್ಲ ಎಂದ. ಪಳನಿಸ್ವಾಮಿ ಸೈಕಲ್‌ನಲ್ಲಿ ಕರೆದುಕೊಂಡು ಬಂದ.
ಮನೆಗೆ ಬಂದಾಗ ನಾಜಿ ‘ಹೇ ಪಳನಿಸ್ವಾಮಿ ನಾಳೆ ನಂಗೆ ಏನಾದರೂ ತೊಂದರೆಯಾದರೆ ಇವಳಿಗೆ ಸಹಾಯ ಮಾಡು’ ಎಂದ. ಆ ಮಾತು ಈಗ ಯಾಕೆ? ಎನ್ನುತಾ ಸಿಗರೇಟು ಎಳೆದು, ‘ನೀವು ಅಡುಗೆ ಮಾಡಬೇಡಿ, ನಾನೇ ತರುವೆ ಎನ್ನುತ್ತಾ ಸೈಕಲ್ ಏರಿ ಹೊರಟ, ಹಿಂದೆ ನಾಯಿಗಳ ಹಿಂಡು ಹೋದವು. ವಹೀದಾ ಗೊಣಗುತ್ತಾ ಆತನ ಹಾಸಿಗೆ ಸರಿ ಮಾಡುತ್ತಿದ್ದಳು.
ಆದರೆ ಪಳನಿ ಬರುವಷ್ಟರಲ್ಲಿ ನಾಜಿರ್‌ನ ಹೃದಯದ ಬಡಿತ ಹಠಾತ್ ನಿಂತು ಹೋಗಿತ್ತು. ಪಳನಿ ತಕ್ಷಣವೇ ಪೇಟೆಯ ಒಳಗೆ ತನಗೆ ತಿಳಿದ ಮುಸ್ಲಿಂ ಕುಟುಂಬಗಳಿಗೆ ವಿಷಯ ತಿಳಿಸಿ ಬಂದ. ಅವರು ಮುಂದಿನ ಕಾರಗಳನ್ನು ಕೈಗೊಂಡರು.
ವಹೀದಾಳಿಗೆ ತನ್ನ ಬಂಧುಗಳ ನೆನಪು ಬಂದು ತಲೆ ಮೇಲೆ ಎತ್ತಿ ನೋಡಿದಳು. ಆಗಸದಲ್ಲಿ ನಕ್ಷತ್ರಗಳು ಮಿನುಗುತ್ತಿದ್ದವು.
ಪಳನಿಸ್ವಾಮಿ ಅವತ್ತು ರಾತ್ರಿ ವಹೀದಾಳ ಮನೆಯ ಮುಂದೆಯೇ ನಾಯಿಗಳ ಜೊತೆಗೆ ಮಲಗಿದ. ಒಳಗೆ ಅವಳಿಗೂ, ಹೊರಗೆ ಇವನಿಗೂ ನಿದ್ದೆ ಮಾತ್ರ ಬಂದಿಲ್ಲ.
ತಿಥಿ ಕಾರ್ಯವನ್ನು ಮಾಡಿದ ಸ್ಥಳೀಯ ಮುಸ್ಲಿಂ ಜನರು ಎಲ್ಲ ಮುಗಿದ ಮೇಲೆ ವಹೀದಾಳಿಗೆ ‘ಏನಾದರೂ ಸಹಾಯ ಬೇಕಾದರೆ ಸಂಕೋಚ ಪಡದೆ ಕೇಳು’ ಎಂದು ಹೊರಟರು.
ಅಂದು ಮುಂಜಾನೆಯೇ ಅಂಗಡಿ ತೆರೆದಳು. ಪಳನಿಸ್ವಾಮಿ ಕೂಡ ಬೇಗ ಬಂದ. ಹಿಂಡು ನಾಯಿಗಳೂ ಬಂದವು. ಅವುಗಳಿಗೆ ತಿನ್ನಲು ಬಿಸ್ಕತ್ ನೀಡಿದಳು. ಸ್ವಲ್ಪ ಹೊತ್ತು ಮೌನ ಇಬ್ಬರ ನಡುವೆ. ‘ಪಳನಿ’ಯೆಂದಳು ವಹೀದಾ, ಎಂದೂ ಹೆಸರು ಹಿಡಿದು ಕರೆಯದವಳು ಇಂದು ಕೂಗಿದ ದನಿಗೆ ತಕ್ಷಣವೇ ತಿರುಗಿದ ವಹೀದಾಳ ಕಣ್ಣಿನ ನೋಟದ ಬೆಳಕು ಸೋತು ನೋಡುತ್ತಿದ್ದವು. ಅಥವಾ ಮತ್ತೇನನ್ನೋ ಬಯಸಿದ ನೋಟವೂ ತಿಳಿಯದೆ ‘ಏನು’ ಎಂದ, ಅಂಗಡಿಗೆ ಕೆಲವು ಸಾಮಾನು ಬೇಕು ತಂದುಕೊಡಿಯೆಂದು ಆ ಗಲ್ಲದಲ್ಲಿ ಇರುವ ನೋಟುಗಳ ಬಾಚಿಕೊಟ್ಟು ಚೀಟಿಯನ್ನು ನೀಡಿದಳು. ಪಳನಿ ಮೂಕಬಸವನಂತೆ ಹೋದ.
ವಹೀದಾಳ ಬದುಕು ನಾಜಿರ್‌ನ ನೆನಪುಗಳ ಚಿತ್ರದೊಂದಿಗೆ ಸಾಗುತ್ತಾ ಮತ್ತೆ ಆ ಚಿತ್ರಗಳು ಮಾಸಲು ಆರಂಭಿಸಿದವು. ಪಳನಿಸ್ವಾಮಿಯೊಂದಿಗೆನ ನಗೆ -ಹರಟೆ ಇಷ್ಟವಾಗತೊಡಗಿ, ಪಳನಿ ‘ತಾನು ಊರು ಬಿಡುವ ಮೊದಲು ತನಗೆ ಇಷ್ಟವಾದ ‘ನಗೆ’ಯ ನೆನಪು ಕಾಡತೊಡಗಿತು. ಒಮ್ಮೆ ಮನಸ್ಸಿನಲ್ಲಿ ಅವಳು ಈಗ ಇದೇ ವಯಸ್ಸು ಆಗಿರಬಹುದೆಂದು ಯೋಚನೆ ಮಾಡತೊಡಗಿದ. ಆ ನಗುವನ್ನು ಮತ್ತೆ ಮತ್ತೆ ವಹೀದಾಳ ನಗುವಿನಲ್ಲಿ ಕಾಣತೊಡಗಿದ, ದಿನ ದಿನ ಮನಸ್ಸು ವಹೀದಾಳ ಕಡೆಗೆ…
ಬೆಳಿಗ್ಗೆ ಅಂಗಡಿ ಓಪನ್ ಆದರೆ, ರಾತ್ರಿ ಜನರು ತಿರುಗಾಡುವುದು ಕಡಿಮೆ ಆದಾಗಲೇ ಬಂದ್. ಪಳನಿ ತನಗೆ ಬಿಡುವು ಸಿಕ್ಕಾಗ ಬಂದು ಹೋಗಲು ಶುರು ಮಾಡಿದ. ಇಬ್ಬರ ಮನಸ್ಸಿನ ಅಂಗಡಿ ಯಾವಾಗಲೂ ತೆರೆದೇ ಇತ್ತು. ಪೂರ್ಣಚಂದ್ರ, ನಕ್ಷತ್ರಗಳ ರಾಶಿಯಿತ್ತು. ಪಳನಿ ನಾಯಿಗಳ ಸಂಗಡ ಬಂದ. ಕೈಯಲ್ಲಿ ಒಂದು ಕ್ಯಾರಿಯರ್ ಇತ್ತು. ನಾಯಿಗಳ ಗುಂಪನ್ನು ನೋಡುತ್ತಾ ಇದ್ದಳು ವಹೀದಾ. ಪಳನಿ ‘ಬನ್ನಿ, ಊಟ ಮಾಡುವಾ, ಮೊಸರನ್ನ’ ಎಂದು ಬೀದಿಯನ್ನು ಒಂದು ಬಾರಿ ನೋಡಿ, ಕೈ ತುತ್ತು ನೀಡಲು ಮುಂದಾದ. ವಹೀದಾ ಅವನ ಬಲಗೈಯನ್ನು ಬಲವಾಗಿ ಹಿಡಿದು. ‘ನಾವು ದೂರ ಹೋಗುವಾ’ ಎಂದಳು.
‘ಈ ವಯಸ್ಸಿನಲ್ಲಿ’ ಎಂದ ಪಳನಿ.
‘ಕಷ್ಟ-ಸುಖ ಹಂಚಿಕೊಳ್ಳಲು ಯಾವ ವಯಸ್ಸು ಆದರೇನು?’ ಎಂದಳು ವಹೀದಾ.
ಮರು ಮಾತಾಡದೆ ‘ಹೂಂ’ ಎಂದ ಪಳನಿ.
ಎರಡೇ ದಿನಕ್ಕೆ ಪರಿಚಯದವರಿಗೆ ವಹೀದಾಳ ಮನೆ ಮಾರಾಟ ಮಾಡಿದ. ತಾನು ಒಪ್ಪಂದ ಮಾಡಿಕೊಂಡ ವ್ಯವಹಾರವನ್ನು ಮುರಿದುಕೊಂಡ. ಇದು ಹೇಗೋ ಜನರ ಬಾಯಿಗೆ ಬಿದ್ದು. ಎಲ್ಲರ ಮನೆಯ
ಮಾತಾಯಿತು.
ನಾಳೆ… ನಾಳಿದ್ದು ಹೋಗ್ತಾರೆ… ಅಂತೆ ಕಂತೆಗಳ ಕತೆಯು ಶುರುವಾಯಿತು.
ಅಕ್ಕ-ಪಕ್ಕದ ಮನೆಯವರು ವಹೀದಾ ಖುಷಿಯಲ್ಲಿದ್ದಾಗ… ಯಾವಾಗ ಹೋಗುತ್ತಿರಾ..? ನೀವು ಅವರ ಜಾತಿಗೆ ಸೇರುತ್ತಿರಾ ಇಲ್ಲ ಅವರೇ ನಿಮ್ಮ ಜಾತಿಗೆ?’ ಎನ್ನಲು ಶುರು ಮಾಡಿದರು. ವಹೀದಾ… ಮೌನವಾಗಿ ನಗುತ್ತಿದ್ದಳು.
ಎರಡು ದಿನಗಳು ಕಳೆದವು. ಪಳನಿ ಬಂದು, ‘ನಾಳೆ ಲಾರಿ ಬರುತ್ತೆ ಸಾಮಾನುಗಳನ್ನು ರಾತ್ರಿಯೇ ಜೋಡಿಸಿ ಇಡುವ’ ಎಂದಷ್ಟೇ ಹೇಳಿ ಸೈಕಲ್ ತುಳಿಯುತ್ತಾ ಹೊರಟುಹೋದ.
ಪಳನಿ ಲಾರಿ ಹತ್ತಿದ. ವಹೀದಾ ಕೈ ನೀಡಿದಳು ಒಳ ಕರೆದುಕೊಂಡ. ಲಾರಿ ಹೊರಟಿತು. ನಾಯಿಗಳ ಹಿಂಡು ಓಡುತ್ತಾ ಇದ್ದವು. ಬಿಸ್ಕತ್ತು ಎಸೆಯುತ್ತಲೇ ಇದ್ದ ಪಳನಿ.
ಇಳಿಸಂಜೆಯ ಪ್ರೇಮ ಪ್ರಕರಣವನ್ನು ಅರಗಿಸಿಕೊಳ್ಳವುದಕ್ಕೆ ಆಗದೇ ವಿಚಿತ್ರವಾಗಿ ನೋಡುತ್ತಾ ನಿಂತ ಜನರ ಗುಂಪು ನಿಧಾನವಾಗಿ ಕರಗಿತ್ತು.
madhukaramalavalli@gmail.com
ಬೆಂಗಳೂರು : ಈ ವರ್ಷ ರಾಜ್ಯದಲ್ಲಿ ಬೇಸಿಗೆಯ ಬಿಸಿಲು ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)…
ಬೆಂಗಳೂರು : ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಅವರು ಹೂಡಿರುವ ಮಾನಹಾನಿ ಪ್ರಕರಣವನ್ನು ರದ್ದುಗೊಳಿಸುವಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ…
ಬೆಂಗಳೂರು : ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) 608 ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದು…
ಬೆಂಗಳೂರು : ಸಿಎಂ ಸ್ಥಾನ ಬದಲಾವಣೆ, ಡಿಸಿಎಂ ದಿಲ್ಲಿ ಪ್ರವಾಸ, ಹೈಕಮಾಂಡ್ ಭೇಟಿ ಹೀಗೆ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ಶಾಸಕರು…
ಹೊಸದಿಲ್ಲಿ : ದೆಹಲಿಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಐಎಸ್‌ಐ ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಗುಂಪುಗಳ ಬೆಂಬಲದೊಂದಿಗೆ ಭಯೋತ್ಪಾದಕ ಪಿತೂರಿ ನಡೆಸುತ್ತಿದ್ದ…
ಮೈಸೂರು : ಮುಡಾ ಆಯುಕ್ತ ನಟೇಶ್ ಅವರಿಗೆ ಬಡ್ತಿ ನೀಡುವ ವಿಚಾರದಲ್ಲಿ ಸುಳ್ಳು ಆರೋಪ ಮಾಡಿದ್ದೇನೆಂದು ನಾನು ಕ್ಷಮೆ ಕೋರಿಲ್ಲ.…