ಅಂಕಣಗಳು

ಡಾ.ಬಿ.ಆರ್.ಅಂಬೇಡ್ಕರ್ ಎಂಬ ಅಮರ ಜಗತ್ತು…

ಮಲ್ಕುಂಡಿ ಮಹದೇವಸ್ವಾಮಿ

ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ 

ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ ವೇಳೆಗೆ ಆ ಜನಸ್ತೋಮ ಅಂಬೇಡ್ಕರ್ ಅಮರ್ ಹೇ! ಅಮರ್ ಹೇ! ಎಂದು ಒಮ್ಮೆಲೆ ಉದ್ಗರಿಸುತ್ತಿತ್ತು.

ಅಂಬೇಡ್ಕರ್ ಅವರ ಪಾರ್ಥಿವ ಶರೀರವನ್ನು ೩೬ ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು . ಇದರಲ್ಲಿ ೯ ಗಂಟೆಗಳ ಮೆರವಣಿಗೆ ಏರ್ಪಡಿಸಲಾಗಿತ್ತು. ಅವರ ದೇಹ ರಾತ್ರಿ ೩.೩೦ ಕ್ಕೆ ಮುಂಬೈಗೆ ತಲುಪಿದಾಗ, ಲಕ್ಷಾಂತರ ಜನ ಸಮೂಹ ವಿಮಾನ ನಿಲ್ದಾಣದಲ್ಲಿ ಜಮಾಯಿಸಿ ಬೋರ್ಗರೆಯುತ್ತಿತ್ತು. ಇಡೀ ಮುಂಬೈ ಅಂದು ಸ್ತಬ್ಧವಾಗಿತ್ತು. ರಾಜಗ್ರಹದಿಂದ ಚೈತ್ಯಭೂಮಿಯವರೆಗೆ ೯ ಕಿ. ಮೀ. ಜನಸಾಗರವಿತ್ತು. ಇದನ್ನು ಪತ್ರಕರ್ತರು ಶಿರಸಾಗರ ಎಂದು ಕರೆದಿದ್ದರು. ಈ ಸಂದರ್ಭ ಸಮಸ್ತ ಭಾರತೀಯರಿಗೂ ಒಂದು ಸತ್ಯವನ್ನು ಅರ್ಥ ಮಾಡಿಸಿತ್ತು. ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಗಡಿ ಗೆರೆಗಳನ್ನು ದಾಟಿ ಸಾಗರದ ಆಚೆ ಚಲಿಸುತ್ತಿವೆ. ಅವರ ಸಮಗ್ರ ಆಲೋಚನೆಗಳು ಜಗತ್ತನ್ನು ವ್ಯಾಪಿಸುತ್ತಿವೆ. ಆದರೆ ಭಾರತದಲ್ಲಿ ಅವರನ್ನು ‘ಸಂವಿಧಾನ’ ಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಇತ್ತೀಚೆಗೆ ಬಹುತೇಕ ಜನರು ಅವರನ್ನು ‘ಥಾಟ್ಸ್ ಆನ್ ಪಾಕಿಸ್ತಾನಕ್ಕೆ’ ಕಟ್ಟಿ ಹಾಕುತ್ತಿದ್ದಾರೆ. ಮತ್ತೊಂದು ವರ್ಗದ ಜನರು ಅಂಬೇಡ್ಕರ್ ಅವರ ರೋಚಕ ಸನ್ನಿವೇಶಗಳನ್ನೇ ವಿಶ್ಲೇಷಿಸುತ್ತಾ, ಸೋಷಿಯೋ ಎಕನಾಮಿಕ್, ಪೊಲಿಟಿಕಲ್ ಥಿಯರಿಗಳನ್ನು ಮರೆಮಾಚಿ ಅವರ ಸಮಗ್ರ ಆಲೋಚನೆಗಳನ್ನು ಜನಮಾನಸದಿಂದ ದೂರ ಇಟ್ಟಿದ್ದಾರೆ. ಅವರ ವಿಶಾಲ ಆಲೋಚನೆಗಳ ಭೂಮಿಕೆಯನ್ನು ಪ್ರವೇಶಿಸಲು ಭಾರತೀಯರಾದ ನಾವು ಸೋತಿರುವುದಂತೂ ಸತ್ಯ. ಈ ಸಂಕುಚಿತ ಮೂರು ವರ್ಗಗಳಿಂದಾಚೆಗೆ ತಾಜಾ ಅಂಬೇಡ್ಕರ್ ಅವರನ್ನು ಹುಡುಕುವ ಮತ್ತು ಅರಿಯುವ ಮಾರ್ಗವು ಇಂದು ಅತ್ಯಗತ್ಯವಾಗಿದೆ.

ಅಂಬೇಡ್ಕರ್ ಅವರು ತೀರಿ ಹೋದ ೭೦ ವರ್ಷಗಳ ನಂತರವೂ, ಅವರ ಮೇಲೆ ಕೆಲವು ವಿಕಲ್ಪಗಳನ್ನು ಹೆಣೆಯಲಾಗುತ್ತಿದೆ. ನಿಂದನೆ, ಅಪಮಾನ, ತಿರಸ್ಕಾರ ನಿಗೂಢರೀತಿಯಲ್ಲಿ ಸದಾ ಚಾಲ್ತಿಯಲ್ಲಿವೆ. ಇಂಥವರಿಗೆ ಹೇಳಬೇಕಾದ್ದಿಷ್ಟೇ; ಡಾ ಅಂಬೇಡ್ಕರ್ ಎಂದರೆ ಇಲ್ಲಿ ಸಂಭವಿಸುವ ವಿಕಾರ ವಿಕಲ್ಪಗಳ ಮೇಲೆ ತೇಲಿ ಬರುವ ಬಹುದೊಡ್ಡ ಸಾಮಾಜಿಕ ಸಂಕಲ್ಪ. ಅದೊಂದು ಹೊಸ ಅಲೆ, ಭಾರತದ ಪ್ರತಿ ಸಂಕಟಕ್ಕೆ ಸಿಗುವ ಸಾಂತ್ವನ. ಅಸಹಾಯಕ ಜನರ ಜೀವ ಕಾರುಣ್ಯ. ಡಾ. ಸಿದ್ದಲಿಂಗಯ್ಯ ಅವರು ಹೇಳುವಂತೆ, ಆಕಾಶದ ಅಗಲಕ್ಕೂ ನಿಂತ ಆಲ, ಆ ಮರ, ಅಮರ.

ಇದನ್ನೂ ಓದಿ: ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ಇಂದು, ಡಾ. ಅಂಬೇಡ್ಕರ್ ಅವರು ಪ್ರತೀ ಭಾರತೀಯನ ಬದುಕಿನ ಅವಿಭಾಜ್ಯ ಅಂಗವೇ ಆಗಿದ್ದಾರೆ. ಭಾರತದಲ್ಲಿ ಸಂಭವಿಸುವ ಪ್ರತಿಯೊಂದು ಘಟನೆಗೂ ಅಂಬೇಡ್ಕರ್ ವರ್ತಮಾನದಲ್ಲಿ ಸದಾ ಪ್ರತಿಕ್ರಿಯಿಸುತ್ತಾರೆ. ಹಾಗೆಯೇ ಮುಂದಿನ ಸಹಸ್ರ ಮಾನದಲ್ಲಿಯೂ ಪ್ರತಿಕ್ರಿಸುತ್ತಲೇ ಇರುತ್ತಾರೆ. ಭಾರತದಲ್ಲಿ ಸಂಭವಿಸುವ ಪ್ರತಿಯೊಂದು ವಿಚಾರ ಕ್ರಾಂತಿಗೂ ಅಂಬೇಡ್ಕರ್ ‘ಚಾರಿತ್ರಿಕ ಸಾಕ್ಷಿ‘ ಯಾಗಿ ಮತ್ತೆ ಮತ್ತೆ ಮರಳುತ್ತಾರೆ.

ಭಾರತದಲ್ಲಿ ಜರುಗುವ ಇಂತಹ ಪ್ರಕ್ಷುಬ್ಧತೆಯ ನಡುವೆಯೂ ಅಂಬೇಡ್ಕರ್ ಅವರ ನೈಜ ಅನುಯಾಯಿಗಳು ಅವರ ಸಂಕಲ್ಪಗಳನ್ನು ಜನಮಾನಸದೆಡೆಗೆ ವೇಗವಾಗಿ ಕೊಂಡೊಯ್ಯಬೇಕಾದ ಅನಿವಾರ್ಯ ಎಂದಿಗಿಂತ ಇಂದು ತುರ್ತಾಗಿದೆ. ಅವರ ಬದುಕಿನ ಆಳದ ಸೈದ್ಧಾಂತಿಕ ಆಲೋಚನೆಗಳನ್ನು, ಪ್ರಾಯೋಗಿಕ ರೂಪಕ್ಕೆ ತರಬೇಕಾದರೆ ಅವರ ಸಂಕಲ್ಪಗಳು ಆಳಕ್ಕೆ ಇಳಿಯಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊನೆಯ ಕ್ಷಣದವರೆಗೂ ಬಹುದೊಡ್ಡ ಸಂಕಲ್ಪಗಳೊಂದಿಗೆ ಬದುಕಿದ್ದರು.

ಸಂಕಲ್ಪಗಳಿಲ್ಲದ ಯಾವ ಚಳವಳಿಗಳೂ ಮುಂದಿನ ಪೀಳಿಗೆಗೆ ಬದುಕನ್ನು ಕಟ್ಟಿಕೊಡಲಾರವು ಎಂಬುದು ಅವರ ನಿಲುವಾಗಿತ್ತು. ಆದರೆ ಅವರ ಸಂಕಲ್ಪಗಳು ಇಂದಿನ ತಲೆಮಾರಿನಲ್ಲಿ ಮರೆಯಾಗುತ್ತಾ ಅವರ ವೈಭವೀಕರಣ, ಅತಿರೇಕದ ಅಭಿಮಾನ, ಆಚರಣೆಗಳೊಳಗೆ ಕಳೆದು ಹೋಗುತ್ತಿವೆ. ಭಾಷಣ, ಚರ್ಚೆ, ವಾದ ವಿವಾದಗಳಿಗೆ ಅವರನ್ನು ಸೀಮಿತಗೊಳಿಸಲಾಗಿದೆ. ಅವರು ಸಂಕಲ್ಪಿಸಿದ ಪ್ರಬುದ್ಧ ಭಾರತದ ಆಲೋಚನೆಗಳತ್ತ ನಾವು ಚಲಿಸುತ್ತಿಲ್ಲ. ಭಾರತವನ್ನು ಕಟ್ಟುವಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಜನರು ಮಾತನಾಡುತ್ತಿಲ್ಲ.

ಭಾರತದ ನೆಲಕ್ಕೆ ಅಗತ್ಯವಾಗಿ ಬೇಕಾಗಿರುವ ಅವರ ಸಮಗ್ರ ಚಿಂತನೆಗಳ ಬಗ್ಗೆ ಜಾಗೃತಿ ಇಲ್ಲವಾಗಿದೆ. ಮುಸ್ಲಿಮರ ಮನೆಯಲ್ಲೊಂದು ಕುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್ ಇದ್ದ ಹಾಗೆಯೇ ಪ್ರತಿ ಶೋಷಿತರ ಮನೆಯಲ್ಲಿಯೂ ಬುದ್ಧ ಮತ್ತು ಆತನ ಧಮ್ಮ ಕೃತಿ ಇರಬೇಕೆಂಬ ಬಹುದೊಡ್ಡ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದ್ದರು. ಅಂತಹ ಸಂಕಲ್ಪಗಳನ್ನು ಮರೆತು ಇಂದಿನ ಪರಿನಿಬ್ಬಾಣ ದಿನಾಚರಣೆಗಳು, ಅವರ ಪುತ್ತಳಿಯ ಮುಂದೆ ದೀಪಗಳನ್ನು ಬೆಳಗಲು ಮಾತ್ರ ಸೀಮಿತವಾಗಿವೆ. ೬೯ ವರ್ಷಗಳಿಂದ ಸಾಕಷ್ಟು ದೀಪಗಳನ್ನು ನಾವು ಹೊತ್ತಿಸಿದ್ದೇವೆ. ಈಗ ನಮ್ಮೊಳಗಿನ ಸ್ವಾರ್ಥ, ಅಸೂಯೆ, ವಿಘಟನೆ, ವೈಷಮ್ಯ, ಜಾತಿ, ಮೇಲು, ಕೀಳುಗಳನ್ನೂ ಸುಡುವ ಅನಿವಾರ್ಯವಿದೆ. ಇಲ್ಲವೆಂದರೆ ನಾಳೆ ನಮಗೆ ಒಳ್ಳೆಯ ಬದುಕು ಕಾಣಿಸದು. ನನ್ನನ್ನು ಸದಾ ಕಾಡುವ ಅವರ ಬದುಕಿನ ಅಧ್ಯಾಯವೆಂದರೆ ಅವರ ಕೊನೆಯ ೧೫ ದಿನಗಳ ಪ್ರವಾಸ ಮತ್ತು ಕೊನೆಯ ಐದು ದಿನಗಳಲ್ಲಿ ಅವರು ಪರಿತಪಿಸಿದ ಪರಿತಾಪ ಮತ್ತು ವೇದನೆ.

ನ. ೨೦ ರಂದು ಅವರು ಲುಂಬಿನಿ ತಟದಲ್ಲಿರುವ ಅಶೋಕ ಸ್ತಂಭವನ್ನು ಬಾಚಿ ತಬ್ಬಿಕೊಂಡು ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದ್ದರು. ಬುದ್ಧಗಯಾದ ಆ ಅರಳೀಮರದ ತಳದಲ್ಲಿ ನಿಂತು, ಗದ್ಗದಿತರಾಗಿದ್ದರು. ಸಾರನಾಥದಲ್ಲಿ ಸಂಚರಿಸಿ ತಮ್ಮ ಮಿತ್ರರೊಂದಿಗೆ ಕೊನೆಯ ಕ್ಷಣದ ಫೋಟೋವನ್ನು ಕ್ಲಿಕ್ಕಿಸಿದ್ದರು. ಅವರ ಅಂತಿಮಯಾತ್ರೆ ಖುಷಿನಗರ. ಅವರು ತಮ್ಮ ಅಂತಿಮ ಪಯಣದಲ್ಲಿ, ಕೇವಲ ನಾಲ್ಕು ಮೆಟ್ಟಿಲುಗಳನ್ನು ಏರಿ ಬುದ್ಧನ ಮೂರ್ತಿಯನ್ನು ನೋಡಲಾರದಷ್ಟು ನಿತ್ರಾಣವಾಗಿದ್ದರು. ಆದರೂ ಕೂಡ ಒಂದು ದಿನ ವಿಶ್ರಾಂತಿ ಪಡೆದು ಆ ೪ ಅಡಿ ಮೆಟ್ಟಿಲು ಏರಿ,ಬುದ್ಧನ ಮಲಗಿದ ಸ್ಥಿತಿಯಲ್ಲಿರುವ ಮೂರ್ತಿಯನ್ನು ತದೇಕ ಚಿತ್ತದಿಂದ ನೋಡುತ್ತಾ, ಭಾವ ಪರವಶಗೊಂಡಿದ್ದರು. ಈ ಯಾತ್ರೆಯ ಆರನೇ ದಿನ ಡಾ.ಅಂಬೇಡ್ಕರ್ ಅವರು ಪರಿನಿರ್ವಾಣಗೊಂಡರು.

ಅಂಬೇಡ್ಕರ್ ಅವರ ಈ ಯಾತ್ರೆಯಲ್ಲಿ ಅವರ ಜೀವನ ಸಂದೇಶ ಅಡಗಿದೆ. ಬುದ್ಧನನ್ನು ಶೋಷಿತ ಸಮುದಾಯಗಳ ಮುಂದೆ ಇಟ್ಟು ಸಾಗಿದ್ದಾರೆ. ಈ ಜನರ ಏಳಿಗೆಗಾಗಿ ಬುದ್ಧ ಒಂದು ಚಾರಿತ್ರಿಕ ಸಮರ್ಥನೆ ಎಂಬ ಬಾಬಾ ಸಾಹೇಬರ ಆಶಯ ಅರ್ಥವಾಗಬೇಕಾಗಿದೆ. ಡಿಸೆಂಬರ್ ೧ನೇ ತಾರೀಕು ತಮ್ಮ ಆಪ್ತ ವರಾಳೆಯವರನ್ನು ಕರೆದು ‘ನನ್ನಹೋರಾಟದ ಪ್ರಯೋಜನ ನನ್ನ ಗ್ರಾಮೀಣ ಸಹೋದರರಿಗೆ ಸಿಕ್ಕಿಲ್ಲ. ಈಗ ಅವರಿಗಾಗಿ ಏನಾದರೂ ಮಾಡಬೇಕಿದೆ. ಆದರೆ ನಾನೀಗ ದೈಹಿಕವಾಗಿ ದುರ್ಬಲನಾಗಿರುವೆ. ಹೆಚ್ಚು ದಿನ ಬದುಕುವ ವಿಶ್ವಾಸವೂ ನನಗಿಲ್ಲ. ಕೇವಲನೈತಿಕ ಸ್ಥೈರ್ಯದ ಮೇಲೆ ಮಾತ್ರ ಜೀವಿಸುತ್ತಿದ್ದೇನೆ. ಅದು ಎಷ್ಟು ದಿನ ನನಗೆ ಸಹಕಾರ ನೀಡುವುದೋ ನೋಡಬೇಕು’ ಎಂಬ ಅವರ ಆತಂಕದ ಮಾತುಗಳು ನಮ್ಮ ಆಳಕ್ಕೆ ಇಳಿಯಲಾರವು.

ಗ್ರಾಮೀಣ ಜನರನ್ನು ನಾನು ನೋಡಲೇಬೇಕು, ಅವರನ್ನು ಆಲಂಗಿಸಬೇಕು, ಅವರಿಗೆ ಏನಾದರೂ ಮಾಡಲೇಬೇಕು ಎಂಬ ಅವರ ಸಂಕಲ್ಪ ಹಾಗೆಯೇ ಉಳಿಯಿತು. ಹಾಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು, ಅವರ ಹೋರಾಟವನ್ನು ಅಮಾಯಕ ಜನರಿಗೆ ತಲುಪಿಸದ ಪರಿಸ್ಥಿತಿಯೇ, ಇಂದಿನ ಭಾರತ. ನಾನು ಮತ್ತು ನೀವು.

” ಡಿಸೆಂಬರ್ ೧ನೇ ತಾರೀಕು ತಮ್ಮ ಆಪ್ತ ವರಾಳೆಯವರನ್ನು ಕರೆದು ‘ನನ್ನ ಹೋರಾಟದ ಪ್ರಯೋಜನ ನನ್ನ ಗ್ರಾಮೀಣ ಸಹೋದರರಿಗೆಸಿಕ್ಕಿಲ್ಲ. ಈಗ ಅವರಿಗಾಗಿ ಏನಾದರೂ ಮಾಡಬೇಕಿದೆ. ಆದರೆ ನಾನೀಗ ದೈಹಿಕವಾಗಿ ದುರ್ಬಲನಾಗಿರುವೆ. ಹೆಚ್ಚು ದಿನ ಬದುಕುವ ವಿಶ್ವಾಸವೂ ನನಗಿಲ್ಲ. ಕೇವಲ ನೈತಿಕ ಸ್ಥೈರ್ಯದ ಮೇಲೆ ಮಾತ್ರ ಜೀವಿಸುತ್ತಿದ್ದೇನೆ. ಅದು ಎಷ್ಟು ದಿನ ನನಗೆ ಸಹಕಾರ ನೀಡುವುದೋ ನೋಡಬೇಕು’ ಎಂಬ ಅವರ ಆತಂಕದ ಮಾತುಗಳು ನಮ್ಮ ಆಳಕ್ಕೆ ಇಳಿಯಲಾರವು”

ಆಂದೋಲನ ಡೆಸ್ಕ್

Recent Posts

ಹೆಣ್ಣು ಮಗು ಮಾರಾಟ ; ಐವರ ಬಂಧನ

ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…

7 hours ago

ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ : ಗಡಿ ಜಿಲ್ಲೆಯಲ್ಲಿ ಅಮಾನವೀಯ ಘಟನೆ

ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…

8 hours ago

ಹಾಸನದಲ್ಲಿ ಜಾ.ದಳ ಶಕ್ತಿ ಪ್ರದರ್ಶನ : ಚುನಾವಣೆಗೆ ತಯಾರಾಗುವಂತೆ ಕಾರ್ಯಕರ್ತರಿಕೆ ಎಚ್‌ಡಿಕೆ ಕರೆ

ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…

8 hours ago

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ; 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…

9 hours ago

ನಂಜನಗೂಡು | ಶ್ರೀಕಂಠೇಶ್ವರ ದೇವಾಲಯದ ಮುಂದಿನ ಅನಧಿಕೃತ ಅಂಗಡಿ ತೆರವು

ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…

9 hours ago

ಚಿನ್ನ ಕಳ್ಳ ಸಾಗಾಣಿಕೆ ಪತ್ತೆ : 2.89 ಕೋಟಿ ರೂ. ಮೌಲ್ಯದ ಚಿನ್ನ ವಶ

ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…

10 hours ago