ಅಂಕಣಗಳು

ಸಾವಿರ ಬಾರಿ ಮೂಳೆ ಮುರಿದರೂ ಜಗ್ಗದ ‘ಗಾಜಿನ ಮಹಿಳೆ’

ದೈಹಿಕ ನ್ಯೂನತೆಗಳ ನಡುವೆಯೂ ಬತ್ತದ ಲತೀಶಾ ಅನ್ಸಾರಿ ಜೀವನೋತ್ಸಾಹ 

‘ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ’ ಎಂಬುದು ಒಂದು ಅಪರೂಪದ ಮೂಳೆ ಕಾಯಿಲೆ. ಇದು ೨೦ ಸಾವಿರ ಜನರಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ಇದ್ದವರ ದೇಹದ ಮೂಳೆಗಳು ಎಷ್ಟುಸದರವಾಗಿರುತ್ತವೆಂದರೆ ಏನಾದರೊಂದು ಚಿಕ್ಕ ವಸ್ತು ತಗಲಿದರೂ ಅವರ ಮೂಳೆ ತುಂಡಾಗುತ್ತದೆ. ಯಾರಾದರು ತುಸು ಜೋರಾಗಿ ಶೇಕ್ ಹ್ಯಾಂಡ್ ಮಾಡಿದರೂ ಅವರ ಕೈ ಅಥವಾ ಬೆರಳುಗಳ ಮೂಳೆ ಮುರಿಯಬಹುದು. ಈ ಕಾಯಿಲೆ ಇರುವ ವ್ಯಕ್ತಿಗಳು ನಡೆಯುವುದು ಓಡುವುದು ಬಿಡಿ, ಮಲಗಿದಲ್ಲಿ ಅಥವಾ ಕುಳಿತಲ್ಲಿ ಪಾರ್ಶ್ವ ಬದಲಾಯಿಸುವಾಗ ತುಸುವೇ ತುಸು ಮೈಮರೆತರೂ ಅವರ ಪಕ್ಕೆಲುಬು ಮೂಳೆಗಳೂ ಲಟಕ್ಕೆಂದು ತುಂಡಾಗಬಹುದು. ಇಂತಹವರ ದಿನನಿತ್ಯದ ಬದುಕು ಹಗ್ಗದ ಮೇಲೆ ನಡೆಯುವ ಸರ್ಕಸ್‌ನಂತೆ.

ಕೇರಳದ ಕೊಟ್ಟಾಯಂನ ಎರುಮೆಳಿ ಎಂಬಲ್ಲಿನ ಲತೀಶಾ ಅನ್ಸಾರಿ ಎಂಬುವವರಿಗೆ ಈ ಕಾಯಿಲೆ ಇತ್ತು. ಅದರ ಜೊತೆಯಲ್ಲಿ, ಅವರಿಗೆ ‘ಪುಲ್ಮೊನರಿ ಹೈಪರ್ಟೆನ್ಶನ್’ ಎಂಬ ಹೃದಯ ಮತ್ತು ಶ್ವಾಸಕೋಶಗಳಿಗೆ ರಕ್ತ ಪೂರೈಕೆಗೆ ತಡೆವುಂಟು ಮಾಡಿ, ದೇಹದ ಬೆಳವಣಿಗೆಯನ್ನು ಕುಂಠಿತಗೊಳಿಸುವ ಹಾಗೂ ಪ್ರತಿನಿತ್ಯ ಆಕ್ಸಿಜನ್ ಸಿಲಿಂಡರ್ ಮೂಲಕ ಉಸಿರಾಡುವ ಅನೀವಾರ್ಯತೆ ತರುವ ‘ಪುಲ್ಮೊನರಿ ಹೈಪರ್ಟೆನ್ಶನ್’ ಎಂಬ ಇನ್ನೊಂದು ಗಂಭೀರ ರೂಪದ ಕಾಯಿಲೆಯಿತ್ತು. ಆದರೆ, ಆ ಕಾಯಿಲೆಗಳಿದ್ದೂ ಅವರು ಬದುಕಿದ ಪರಿ ಎಂತಹವರಿಗಾದರೂ ಸ್ಛೂರ್ತಿದಾಯಕವಾದುದು.

೧೯೯೩ರಲ್ಲಿ ಸಿಸೇರಿಯನ್ ಆಪರೇಶನ್ ಮೂಲಕ ಲತೀಶಾ ಹುಟ್ಟಿದಾಗ ಅವಳ ಮೊದಲ ಅಳು ಬೇರೆಲ್ಲ ನವಜಾತ ಶಿಶುಗಳಿಗಿಂತ ಹೆಚ್ಚು ಜೋರಾಗಿತ್ತು. ಅದಕ್ಕೆ ಕಾರಣ ಅವಳು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಅವಳ ಮೂಳೆ ತುಂಡಾಯಿತು. ಡಾಕ್ಟರುಗಳು ಕೆಲವು ತಿಂಗಳು ಪರೀಕ್ಷೆ ನಡೆಸಿ ಅವಳಿಗೆ ‘ಆಸ್ಟಿಯೋ ಜೆನೆಸಿಸ್ ಇಂಪರ್ಫೆಕ್ಟಾ’ ಕಾಯಿಲೆ ಇರುವುದನ್ನು ಖಾತರಿ ಮಾಡಿಕೊಂಡು, ಲತೀಶಾಳ ಹೆತ್ತವರಿಗೆ ಅವಳ ಕಾಯಿಲೆಯ ಬಗ್ಗೆ ಹೇಳಿ, ಅವಳನ್ನು ಹೇಗೆ ನೋಡಿಕೊಳ್ಳಬೇಕೆಂಬುದರ ಬಗ್ಗೆ ಅಗತ್ಯ ತಿಳಿವಳಿಕೆ ಮತ್ತು ತರಬೇತಿ ಕೊಟ್ಟು ಮನೆಗೆ ಕಳಿಸಿದರು. ಮನೆಗೆ ಬಂದ ನಂತರ, ದಿನಗಳೆದಂತೆ ಲತೀಶಾಳ ಮೂಳೆ ಮುರಿಯುವುದು ಹೆಚ್ಚುತ್ತಾ ಹೋಯಿತು. ಮಗಳ ಮೂಳೆ ಮುರಿಯುವುದು, ತಂದೆತಾಯಿಗೆ ಮುರಿದ ಮೂಳೆಯ ಜಾಗದಲ್ಲಿ ಬ್ಯಾಂಡೇಜ್ ಕಟ್ಟುವುದು ದಿನನಿತ್ಯದ ಕೆಲಸವಾಯಿತು. ಕೆಲವೊಮ್ಮೆ ಒಂದು ಮೂಳೆ ಮುರಿದು ಅದಕ್ಕೆ ಬ್ಯಾಂಡೇಜು ಕಟ್ಟಿ ಅದು ಪೂರ್ಣ ಗುಣವಾಗುವ ಮೊದಲೇ ಇನ್ನೊಂದು ಮೂಳೆ ಮುರಿಯುತ್ತಿತ್ತು! ಆದರೂ ಅಪ್ಪ ಅಮ್ಮ ಲತೀಶಾಳ ಬಾಲ್ಯ ಎಷ್ಟು ಸಾಧ್ಯವೋ ಅಷ್ಟು ಸುಲಭವಾಗಲು ಏನು ಬೇಕೋ ಅದನ್ನೆಲ್ಲ ಮಾಡುತ್ತಿದ್ದರು.

ಇದನ್ನು ಓದಿ: ಇಂದು ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನ 

ಲತೀಶಾಳಿಗೆ ಶಾಲೆಗೆ ಹೋಗುವ ಪ್ರಾಯವಾದಾಗ ಅವಳ ಹೆತ್ತವರು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಏಕೆಂದರೆ, ಲತೀಶಾಳ ದೈಹಿಕ ಪರಿಸ್ಥಿತಿಯನ್ನು ನೋಡಿದ ನಂತರ ಎಲ್ಲಾ ಶಾಲೆಗಳು ಅವಳನ್ನು ಸೇರಿಸಿಕೊಳ್ಳಲು ನಿರಾಕರಿಸಿದವು. ತನ್ನ ಅಷ್ಟೆಲ್ಲ ದೈಹಿಕ ತೊಂದರೆಗಳ ನಡುವೆಯೂ ಲತೀಶಾ ಓದು ಬರಹದಲ್ಲಿ ತೀರಾ ಆಸಕ್ತಿ ಹೊಂದಿದ್ದಳು. ತನ್ನ ಅಕ್ಕ ಲಮಿಯಾ ಹೋಗುತ್ತಿದ್ದ ಸೈಂಟ್ ಥಾಮಸ್ ಶಾಲೆಗೇ ತಾನು ಹೋಗಬೇಕೆಂದು ಆಸೆ ಪಟ್ಟಿದ್ದಳು. ಅವಳ ತಂದೆ ಅನ್ಸಾರಿ ಬಹಳಷ್ಟು ಕಡೆ ಓಡಾಡಿದ ನಂತರ, ಒಂದು ಶಾಲೆ ಒಂದು ಷರತ್ತಿನ ಮೇಲೆ ಲತೀಶಾಳನ್ನು ಸೇರಿಸಿಕೊಳ್ಳಲು ಒಪ್ಪಿತು. ಷರತ್ತು ಏನೆಂದರೆ, ಲತೀಶಾ ಪ್ರತೀ ದಿನ ಶಾಲೆಯಲ್ಲಿರುವಷ್ಟು ಹೊತ್ತು ಅವರೂ ಅವಳೊಂದಿಗಿರಬೇಕು.

ಹೀಗಾಗಿ, ಕುಟುಂಬ ನಡೆಸಲು ಚಿಕ್ಕದೊಂದು ಹೋಟೆಲು ನಡೆಸುತ್ತಿದ್ದ ಅನ್ಸಾರಿ ಹತ್ತು ವರ್ಷಗಳ ಕಾಲ ಮಗಳನ್ನು ಶಾಲೆಗೆ ಎತ್ತಿಕೊಂಡು ಹೋಗುವುದು, ಅವಳೊಂದಿಗೆ ಶಾಲೆಯಲ್ಲಿ ಕುಳಿತುಕೊಳ್ಳುವುದು, ಶಾಲೆ ಬಿಟ್ಟ ನಂತರ ಅವಳನ್ನು ಎತ್ತಿಕೊಂಡು ಮನೆಗೆ ಬರುವುದನ್ನು ಮಾಡಬೇಕಾಯಿತು. ಲತೀಶಾ ಮೂರನೇ ತರಗತಿಯಲ್ಲಿದ್ದಾಗ, ಅವಳು ಕಲಿಕೆಯಲ್ಲಿ ಬಹಳ ಚುರುಕಾಗಿರುವುದನ್ನು ಗಮನಿಸಿ ಅವಳು ಕಲಿಯಲು ಆಸೆ ಪಟ್ಟಿದ್ದ ಸೈಂಟ್ ಥಾಮಸ್ ಶಾಲೆ ಅವಳನ್ನು ಸೇರಿಸಿಕೊಂಡಿತು. ಅವಳ ಹೆತ್ತವರು ಒಂದು ಖಾಸಗೀ ರಿಕ್ಷಾವನ್ನು ಗೊತ್ತು ಮಾಡಿದ್ದರಿಂದ ಲತೀಶಾಳಿಗೆ ಶಾಲೆಗೆ ಹೋಗಿ ಬರುವ ಪ್ರಯಾಣದ ರಗಳೆ ಹೆಚ್ಚಿರಲಿಲ್ಲ. ಆದರೆ, ಶಾಲೆಯಲ್ಲಿ ಅವಳ ಗಾಲಿಕುರ್ಚಿ ಚಲಿಸಲು ಸೂಕ್ತ ವ್ಯವಸ್ಥೆಯಿಲ್ಲದಿದ್ದರಿಂದ ಅವಳಿಗೆ ಆಚೀಚೆ ಚಲಿಸುವುದು ಆಗುತ್ತಿರಲಿಲ್ಲ. ಆಗ ಶಾಲೆಯ ಶಿಕ್ಷಕಿಯರು ಮತ್ತು ಸಹಪಾಠಿ ಮಕ್ಕಳು ಅವಳನ್ನು ಜೋಪಾನವಾಗಿ ತರಗತಿಯಿಂದ ತರಗತಿಗೆ ಕರೆದುಕೊಂಡು  ಹೋಗುತ್ತಿದ್ದರು. ಜೊತೆಯಲ್ಲಿ, ಅವಳಿಗೆ ನೋಟ್ಸ್‌ಗಳನ್ನು ತಯಾರಿಸಿಕೊಡುವುದು, ಅವಳನ್ನು ಉತ್ತೇಜಿಸುವುದು ಮೊದಲಾಗಿ ತಮ್ಮಿಂದಾದ ಎಲ್ಲಾ ಸಹಾಯಗಳನ್ನು ಮಾಡುತ್ತಿದ್ದರು. ಹಲವು ಪ್ರಶಸ್ತಿಗಳು ಅವಳನ್ನು ಹುಡುಕಿಕೊಂಡು ಬಂದವು.

ಲತೀಶಾ ಮುಂದೆ ಒಳ್ಳೆಯ ಮಾರ್ಕು ಪಡೆದು ಬಿಕಾಂ ಮತ್ತು ಎಂಕಾಂ  ಮುಗಿಸಿದಳು. ಅಂತಹ ಪರಿಸ್ಥಿತಿಯಲ್ಲೂ ಲತೀಶಾ ತನ್ನ ಬಾಲ್ಯದಲ್ಲೇ ಒಬ್ಬ ಐಎಎಸ್ ಅಧಿಕಾರಿಯಾಗುವ ಕನಸು ಕಾಣುತ್ತಿದ್ದಳು! ಹಾಗಾಗಿ, ಎಂಕಾಂ ಮಾಡುವಾಗ ಯುಪಿಎಸ್‌ಸಿ ಪರೀಕ್ಷೆಗೆ ಕುಳಿತುಕೊಳ್ಳಲು ನಿರ್ಧರಿಸಿದಳು. ಅದರಂತೆ ಅವಳು ೨೦೧೮ರಲ್ಲಿ ಯುಪಿಎಸ್‌ಸಿ ಪರೀಕ್ಷೆಯ ತಯಾರಿ ಮಾಡತೊಡಗಿದಳು. ಒಂದು ಕೋಚಿಂಗ್ ಅಕಾಡೆಮಿಯಲ್ಲಿ ಫೀಸು ಕೊಟ್ಟು ಹೆಸರನ್ನೂ ನೋಂದಾಯಿಸಿದ್ದಳು. ಆದರೆ, ಅವಳ ಮನೆಯಿಂದ ಕೋಚಿಂಗ್ ಕ್ಲಾಸಿಗೆ ಹೋಗಿ ಬರಲು ಆರು ತಾಸು ತಗಲುತ್ತಿದ್ದದರಿಂದ ವಾರಕ್ಕೆರಡು ಬಾರಿ ಮಾತ್ರ ಅಲ್ಲಿಗೆ ಹೋಗಿ ಉಳಿದ ದಿನಗಳಲ್ಲಿ ಮನೆಯಲ್ಲೇ ಅಭ್ಯಾಸ ಮಾಡುತ್ತಿದ್ದಳು. ಪರೀಕ್ಷೆಯ ಹಾಲ್ ಟಿಕೆಟು ಕೂಡಾ ಪಡೆದಿದ್ದಳು.

ಇದನ್ನು ಓದಿ: ಚಾ.ನಗರ: ಮಂತ್ರಿ ಸ್ಥಾನದ ಮೇಲೆ ಇಬ್ಬರು ಕಣ್ಣು!

ಈ ಮಧ್ಯೆ ಒಂದು ದುರ್ಘಟನೆ ನಡೆಯಿತು. ವೈದ್ಯರು ಅವಳ ಹೊಟ್ಟೆಯಲ್ಲಿ ಒಂದು ಗೆಡ್ಡೆ ಬೆಳೆದಿರುವುದನ್ನು ಪತ್ತೆ ಹಚ್ಚಿದರು. ಅದರ ಆರೈಕೆಯ ಕಾರಣ ಲತೀಶಾಳಿಗೆ ಕೆಲ ಕಾಲ ಯುಪಿಎಸ್‌ಸಿ ಅಭ್ಯಾಸದಿಂದ ದೂರವುಳಿಯಬೇಕಾಗಿ ಬಂದಿತು. ಮುಂದೆ, ಅವಳಿಗೆ ‘ಪುಲ್ಮೊನರಿ ಹೈಪರ್ಟೆನ್ಶನ್’ ತಗಲಿರುವುದೂ ಪತ್ತೆಯಾಯಿತು. ಅಂದಿನಿಂದ ಲತೀಶಾಳಿಗೆ ಆಕ್ಸಿಜನ್ ಸಿಲಿಂಡರ್‌ನ್ನು ಅವಲಂಬಿಸಿ ಬದುಕುವುದು ಅನಿವಾರ್ಯವಾಯಿತು. ಆ ವರ್ಷ ಯುಪಿಎಸ್‌ಸಿ ಪರೀಕ್ಷೆ ಕಟ್ಟಲಾಗಲಿಲ್ಲ. ನಿರಾಶೆಯಾದರೂ ಧೃತಿಗೆಡದೆ ೨೦೧೯ರಲ್ಲಿ ಪರೀಕ್ಷೆಗೆ ಕುಳಿತುಕೊಳ್ಳುವ ನಿರ್ಧಾರ ಮಾಡಿದಳು. ದಿನದ ೨೪ ಗಂಟೆಯೂ ಆಕ್ಸಿಜನ್ ಸಿಲಿಂಡರಿಗೆ ಜೋತು ಬಿದ್ದು ಮನೆಯೊಳಗೇ ಇರಬೇಕಾಗಿ ಬಂದು, ಬೇಸರ ಕಳೆಯಲು ಲತೀಶಾ ಕೀಬೋರ್ಡ್ ಕಲಿತಳು. ಚಿತ್ರಕಲೆಯನ್ನು ಕಲಿತಳು. ಓದುವ ಹವ್ಯಾಸವನ್ನು ಬೆಳೆಸಿಕೊಂಡಳು. ತನ್ನದೇ ಒಂದು ಯೂಟ್ಯೂಬ್ ಚಾನಲನ್ನು ಶುರು ಮಾಡಿ, ತನ್ನ ಬದುಕು, ಆಲೋಚನೆಗಳನ್ನು ಹಂಚಿಕೊಂಡು ಆಗಾಗ್ಗೆ ‘ಇನ್ಸ್ಪಿರೇಶನಲ್ ಕ್ಲಾಸ್’ ನಡೆಸುತ್ತಿದ್ದಳು. ಮನೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಳು. ಅದರಿಂದ ತುಸು ಆದಾಯವನ್ನೂ ಪಡೆಯುತ್ತಿದ್ದಳು. ಲತೀಶಾಳ ಜೀವನೋತ್ಸವವನ್ನು ಕಂಡ ಹಲವು ಮಲಯಾಳಿ ಟಿವಿ ಚಾನಲ್‌ಗಳು ಅವಳನ್ನು ತಮ್ಮ ಶೋಗಳಿಗೆ ಆಹ್ವಾನಿಸಿದ್ದವು. ಅಂತಹ ಶೋಗಳಿಂದ ಬಂದ ಹಣದಿಂದ ಲತೀಶಾ ತನ್ನಂತಹ ಸುಮಾರು ಹತ್ತು ಜನ ಅಂಗವಿಕಲ ಮಕ್ಕಳು ಶಾಲೆ ಸೇರಲು ಸಹಾಯ ಮಾಡಿದ್ದಳು.

ಲತೀಶಾಳ ದೇಹದ ಎತ್ತರ ಕೇವಲ ೨ ಅಡಿ. ದೇಹದ ತೂಕ ಬರೀ ೧೪ ಕೆಜಿ ಅವಳು ಯಾವತ್ತೂ ಗಾಲಿ ಕುರ್ಚಿಯಲ್ಲಿ ಕುಳಿತು ಚಲಿಸಬೇಕಿತ್ತು. ಲತೀಶಾಳ ಕಾಯಿಲೆಗಳ ವೈದ್ಯಕೀಯ ಖರ್ಚು ಬಹಳ ದುಬಾರಿಯಾಗಿತ್ತು. ಪ್ರತಿ ತಿಂಗಳು ಅದಕ್ಕಾಗಿ ಕನಿಷ್ಠವೆಂದರೂ ೨೫ ಸಾವಿರ ರೂಪಾಯಿ ಖರ್ಚಾಗುತ್ತಿತ್ತು. ಒಂದು ಆಕ್ಸಿಜನ್ ಸಿಲಿಂಡರಿನ ಬೆಲೆ ೨-೩ ಲಕ್ಷ ರೂಪಾಯಿ. ಅನ್ಸಾರಿ ತಮ್ಮ ಕುಟುಂಬದ ಬದುಕಿಗೆ ಆಸರೆಯಾಗಿರುವ ಚಿಕ್ಕ ಹೋಟೆಲಿನ ಗಳಿಕೆ ಸಾಲದೆ ಇತರ ಯಾರ‍್ಯಾರಿಂದಲೋ ನಿರಂತರ ಹಣ ಪಡೆಯುತ್ತ ಮೂಗಿನ ವರೆಗಿನ ಸಾಲದ ಹೊಂಡದಲ್ಲಿ ಬಿದ್ದಿದ್ದರು. ಅಮೃತವರ್ಷಿಣಿ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ನಡೆಸುತ್ತಿರುವ ಲತಾ ನಾಯರ್ ಗಾಲಿಕುರ್ಚಿಯೊಂದನ್ನು ಕೊಟ್ಟದ್ದು ಬಿಟ್ಟರೆ ಸರ್ಕಾರವೂ ಸೇರಿ ಬೇರೆಲ್ಲಿಂದಲೂ ಅವರಿಗೆ ಹೆಚ್ಚಿನ ಸಹಾಯ ಒದಗಿ ಬರಲಿಲ್ಲ.

ಇದನ್ನು ಓದಿ: ನಾಳೆಯಿಂದ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕರರಿಗೆ ಬಿಗ್‌ ಶಾಕ್‌

೨೦೧೯ರ ಜೂನ್ ೨ ರಂದು ಲತೀಶಾ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದಳು. ಆಗ ಅವಳಿಗೆ ೨೫ ವರ್ಷ ಪ್ರಾಯ. ಅವಳ ತಂದೆ ಎರಡು ಆಕ್ಸಿಜನ್ ಸಿಲಿಂಡರ್‌ಗಳ ಜೊತೆ ಮಗಳನ್ನು ಕೊಟ್ಟಾಯಂನಿಂದ ೧೩೫ ಕಿ.ಮೀ. ದೂರದ ತಿರುವಂನಂತಪುರಕ್ಕೆ ತಂದರು. ಕೊಟ್ಟಾಯಂನ ಜಿಲ್ಲಾಽಕಾರಿ ಪಿ .ಅರ್.ಸುಽರ್ ಬಾಬು ಒಂದು ಸಿಲಿಂಡರನ್ನು ಒದಗಿಸಿದ್ದರು. ಅಂದು ಲತೀಶಾ ಆರು ಗಂಟೆಗಳ ಕಾಲ ತನ್ನ ಗಾಲಿ ಕುರ್ಚಿಯಲ್ಲಿ ಕುಳಿತು, ಆಕ್ಸಿಜನ್ ಸಿಲಿಂಡರ್ ಮೂಲಕ ಉಸಿರಾಡುತ್ತ ಪರೀಕ್ಷೆ ಬರೆದಳು. ಆದರೆ, ಪಾಸಾಗಲು ಸಾಧ್ಯವಾಗಲಿಲ್ಲ. ೧೯೨೦ರಲ್ಲಿ ಪುನಃ ಪರೀಕ್ಷೆಗೆ ಕುಳಿತುಕೊಳ್ಳಲು ತಯಾರಿ ನಡೆಸಿದ್ದಳು. ಆದರೆ, ಆ ವರ್ಷ ಕೋವಿಡ್ ದಾಳಿ ನಡೆದು ಅದು ಸಾಧ್ಯವಾಗಲಿಲ್ಲ. ಮುಂದಿನ ವರ್ಷ ಅಂದರೆ ೨೦೨೧ರಲ್ಲಿ ಮತ್ತೊಮ್ಮೆ ಪ್ರಯತ್ನಿಸುವವಳಿದ್ದಳು. ಆದರೆ…

ಅಂದು ಪರೀಕ್ಷೆ ಬರೆದ ನಂತರ ಲತೀಶಾ ತೀವ್ರ ಅಸ್ವಸ್ಥಳಾದ ಕಾರಣ ಅವಳನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿ ಬಂದಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಲತೀಶಾಳಿಗೆ ತನ್ನ ಕಾಲ ಮೇಲೆ ಒಮ್ಮೆ ನಿಂತುಕೊಳ್ಳಬೇಕೆಂಬ ಬಯಕೆ ಹುಟ್ಟಿತು. ಅಪ್ಪನನ್ನು ಕರೆದು, ‘ನನಗೆ ಯಾವತ್ತೂ ನಿಂತುಕೊಳ್ಳಲಾಗಿರಲಿಲ್ಲ. ಈವತ್ತು ಸ್ವಲ್ಪ ಹೊತ್ತು ನಿಂತುಕೊಳ್ಳುತ್ತೇನೆ, ನನ್ನನ್ನು ಎತ್ತಿ ಹಿಡಿ’ ಎಂದು ಕೇಳಿಕೊಂಡಳು. ಅದರಂತೆ ಅನ್ಸಾರಿ ಲತೀಶಾಳನ್ನು ಜೋಪಾನವಾಗಿ ಎತ್ತಿ ಹಿಡಿದು, ಎರಡು ಗಂಟೆಗಳ ಕಾಲ ಅವಳನ್ನೂ ನಿಲ್ಲಿಸಿಕೊಂಡು ತಾನೂ ನಿಂತಿದ್ದರು. ಲತೀಶಾ ತನ್ನ ಕಾಲ ಮೇಲೆ ತಾನು ನಿಂತಿದ್ದು ಅದೇ ಕೊನೆಯ ಬಾರಿ. ೨೦೨೧ರ ಜೂನ್ ೧೬ರಂದು ತನ್ನ ೨೭ನೇ ವರ್ಷ ಪ್ರಾಯದಲ್ಲಿ ತೀರಿಕೊಂಡಳು. ಲತೀಶಾ ತೀರಿಕೊಂಡ ನಂತರವೂ ಅವಳು ಬದುಕಿದ ಛಲ ಅವಳನ್ನು ಬಲ್ಲ ಯಾರೂ ಮರೆಯಲಾರರು.

” ಬೇಸರ ಕಳೆಯಲು ಲತೀಶಾ ಕೀಬೋರ್ಡ್ ಕಲಿತಳು. ಚಿತ್ರಕಲೆಯನ್ನು ಕಲಿತಳು. ಓದುವ ಹವ್ಯಾಸವನ್ನು ಬೆಳೆಸಿಕೊಂಡಳು. ತನ್ನದೇ ಒಂದು ಯೂಟ್ಯೂಬ್ ಚಾನಲನ್ನು ಶುರು ಮಾಡಿ, ತನ್ನ ಬದುಕು, ಆಲೋಚನೆಗಳನ್ನು ಹಂಚಿಕೊಂಡು ಆಗಾಗ್ಗೆ ‘ಇನ್ಸ್ಪಿರೇಶನಲ್ ಕ್ಲಾಸ್’ ನಡೆಸುತ್ತಿದ್ದಳು.”

-ಪಂಜು ಗಂಗೊಳ್ಳಿ 

ಆಂದೋಲನ ಡೆಸ್ಕ್

Recent Posts

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

58 mins ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

2 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

2 hours ago

ಮಂಡ್ಯ ಭಾಗದ ರೈತರ ಅಭಿವೃದ್ಧಿಗೆ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಸ್ಥಾಪನೆ: ಎನ್ ಚಲುವರಾಯಸ್ವಾಮಿ

ಮಂಡ್ಯ: ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮಂಡ್ಯದ ವಿ.ಸಿಫಾರಂನಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು…

3 hours ago

ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿರುತ್ತದೆ ಎಂದ ಸಚಿವ ಎಂ.ಬಿ.ಪಾಟೀಲ್‌

ಬೆಂಗಳೂರು: ಆರ್‌.ಅಶೋಕ್‌ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಇಳಿಸದೇ ಹೋದರೆ ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿ ಇರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್‌…

3 hours ago

ಭಾರತ-ರಷ್ಯಾ ನಡುವೆ ಹಲವು ಒಪ್ಪಂದಗಳಿಗೆ ಸಹಿ

ನವದೆಹಲಿ: ಭಾರತ-ರಷ್ಯಾ ಉಭಯ ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನವದೆಹಲಿಯ…

3 hours ago