ಅಂಕಣಗಳು

ಲೀಲಾ ಪ್ರಧಾನ್ ಸಿಎಂ ಆದ ರೋಚಕ ಕಥೆ

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ 

ಅಂದು ಒಬ್ಬ ಪ್ರತಿಭಾವಂತ ಕಲಾವಿದೆ, ಇಂದು…

ಸಣ್ಣ ಸದ್ದಿನೊಂದಿಗೆ ಬಾಗಿಲು ತೆರೆದುಕೊಂಡಾಗ ಕುರ್ಚಿಯಲ್ಲಿ ಕುಳಿತು ಕಂಪ್ಯೂಟರ್ ನೋಡುತ್ತಿದ್ದ ಕುಮಾರ್ ತಲೆ ಎತ್ತಿ ನೋಡಿದರು.

ಹೀಗೆ ಅವರು ನೋಡುತ್ತಿದ್ದಂತೆಯೇ ಒಳಗೆ ಬಂದ ರಿಪೋಟರ್ ಶರ್ಮಿಳಾ:‘ಸಾರ್,ದಕ್ಷಿಣಾಂಚಲದ ಅಸೆಂಬ್ಲಿ ಎಲೆಕ್ಷನ್ ರಿಸಲ್ಟು ಬರತೊಡಗಿದೆ.ರಾಜ್ಯದ ಇನ್ನೂರು ಕ್ಷೇತ್ರಗಳ ಪೈಕಿ ನೂರಾ ನಲವತ್ತು ಕ್ಷೇತ್ರಗಳಲ್ಲಿ ದಕ್ಷಿಣಾಂಚಲ ಮಕ್ಕಳ ಪಕ್ಷದ ಅಭ್ಯರ್ಥಿಗಳು ಮುಂದಿದ್ದಾರೆ’ ಎಂದಳು.

ಈಗ ಕುಮಾರ್ ಕುರ್ಚಿಯಲ್ಲಿ ಒರಗಿಕೊಂಡು :‘ಹಾಗಿದ್ದರೆ ದಕ್ಷಿಣಾಂಚಲ್ ಗೌರವಂ ಪಕ್ಷ ಈ ಸಲ ಅಧಿಕಾರ ಕಳೆದುಕೊಳ್ಳುತ್ತದೆ ಎಂಬುದು ನಿಶ್ಚಿತವಾದಂತೆ ಅಲ್ಲವೇ? ಎಂದರು. ಅದಕ್ಕುತ್ತರಿಸಿದ ಶರ್ಮಿಳಾ:ಹೌದು ಸಾರ್,ಹತ್ತು ಸುತ್ತಿನ ಮತ ಎಣಿಕೆ ಮುಗಿದ ನಂತರದ ಚಿತ್ರ ನೋಡುತ್ತಿದ್ದರೆ ಬಹುಮತಕ್ಕೆ ಬೇಕಾದ ನೂರಾ ಒಂದು ಕ್ಷೇತ್ರಗಳಲ್ಲಿ ದಕ್ಷಿಣಾಂಚಲ ಮಕ್ಕಳ ಪಕ್ಷ ನಿರಾಯಾಸವಾಗಿ ಗೆಲ್ಲುತ್ತದೆ’ ಎಂದಳು. ಈಗ ಕುಮಾರ್ ಎಚ್ಚೆತ್ತವರಂತೆ: ಓಕೆ,ಓಕೆ ಶರ್ಮಿಳಾ,ಆ ಕೈಲಾಸಪುರ್ ವಿಧಾನಸಭಾ ಕ್ಷೇತ್ರದ ರಿಸಲ್ಟು ಏನಾಗುತ್ತಿದೆ ಅಂತ ನೋಡಿ ನನಗೆ ಹೇಳಿ ಎಂದರು.ಅದಕ್ಕೆ ಪ್ರತಿಕ್ರಿಯಿಸಿದ ಶರ್ಮಿಳಾ: ‘ಸಾರ್,ಅಲ್ಲೂ ದಕ್ಷಿಣಾಂಚಲ ಮಕ್ಕಳ ಪಕ್ಷದ ಸುಪ್ರೀಂ ಲೀಡರು ಲೀಲಾ ಪ್ರಧಾನ್ ಒಂದು ಲಕ್ಷ ಮತಗಳ ಅಂತರದಿಂದ ಮುಂದಿದ್ದಾರೆ. ಅವರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ದಕ್ಷಿಣಾಂಚಲ ಗೌರವಂ ಪಕ್ಷದ ಚೆಲುವರಾಜು ಠೇವಣಿ ಕಳೆದುಕೊಳ್ಳುವ ಸಾಧ್ಯತೆಯೇ ಜಾಸ್ತಿ’ ಎಂದಳು.

ಆಕೆಯ ಮಾತು ಕೇಳಿದ ಕುಮಾರ್ ಇದ್ದಕ್ಕಿದ್ದಂತೆ ಭಾವೋದ್ವಿಗ್ನರಾದರು. ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತು.ಅವರ ಈ ಸ್ಥಿತಿಯನ್ನು ನೋಡಿ ಶರ್ಮಿಳಾಗೆ ಅಚ್ಚರಿಯಾಯಿತು. ಯಾರೋ ಗೆದ್ದರೆ, ಯಾರೋ ಸೋತರೆ ಇವರ ಕಣ್ಣಕೆ ನೀರು ಬರಬೇಕು? ಅನ್ನಿಸಿತು. ಆದರೆ ಹಾಗಂತ ಕೇಳುವುದು ಸರಿಯಲ್ಲ. ಎಷ್ಟೇ ಆದರೂ ಸಂಪಾದಕರು ಎನ್ನಿಸಿ ಮೌನವಾದಳು. ಹೀಗೆ ಮೌನವಾಗಿ ನಿಂತ ಆಕೆಯನ್ನು ನೋಡಿದ ಕುಮಾರ್:ಸರಿ, ಶರ್ಮಿಳಾ ಎಲೆಕ್ಷನ್ ರಿಸಲ್ಟನ್ನು ನನಗೆ ಅಪ್‌ಡೇಟ್ ಮಾಡುತ್ತಿರಿ. ನಾನು ಬೇರೆ ಲೇಖನದ ತಯಾರಿಯಲ್ಲಿದ್ದೇನೆ ಎಂದರು. ಅವರು ಹಾಗೆ ಹೇಳುತ್ತಿದ್ದಂತೆಯೇ ಶರ್ಮಿಳಾ ಸ್ಪ್ರಿಂಗ್ ಡೋರನ್ನು ತಳ್ಳಿ ಹೊರಗೆ ಹೋದಳು.

ಆಕೆ ಹೊರಗೆ ಹೋಗುತ್ತಿದ್ದಂತೆಯೇ ಕುಮಾರ್ ಕಣ್ಣು ಮುಚ್ಚಿಕೊಂಡರು. ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಘಟನೆ ಅವರ ಭಾವಕೋಶಗಳಲ್ಲಿ ಹರಿದಾಡತೊಡಗಿತು. ಇವತ್ತು ದಕ್ಷಿಣಾಂಚಲ ರಾಜ್ಯದ ರಾಜಕಾರಣದಲ್ಲಿ ಧ್ರುವತಾರೆಯಂತೆ ಮೇಲೆದ್ದು ನಿಂತಿರುವ ಲೀಲಾ ಪ್ರಧಾನ್ ಅವತ್ತು ಒಬ್ಬ ಪ್ರತಿಭಾವಂತ ಕಲಾವಿದೆ ಮಾತ್ರ.

ಆಕೆಯ ಆರಂಗೇಟ್ರಂ ಸಂದರ್ಭದಲ್ಲಿ ಗಾಂಧಿ ಕಲಾಕ್ಷೇತ್ರಕ್ಕೆ ನಾನೇ ಹೋಗಿದ್ದಾನಲ್ಲ? ನಿಜಕ್ಕೂ ಅದ್ಭುತ ಪ್ರತಿಭೆ. ಅವತ್ತು ಆಕೆಯ ಪ್ರತಿಭೆಗೆ ಮಾರು ಹೋಗಿ ನಾನೇ ನಮ್ಮ ಚೆಲುವಿನ ನಕ್ಷತ್ರ ಸಿನಿ ಪತ್ರಿಕೆಯಲ್ಲಿ ಕವರ್ ಸ್ಟೋರಿ ಬರೆದಿದ್ದೆ.‘ಉದಯಿಸಿದ ನಾಟ್ಯ ತಾರೆ’ ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾದ ಆ ಲೇಖನ ಬಂದ ನಂತರ ಲೀಲಾ ಪ್ರಧಾನ್ ಹೆಸರು ನೃತ್ಯ ಕ್ಷೇತ್ರದಲ್ಲಿ ಪ್ರಜ್ವಲಿಸತೊಡಗಿತು.

ಲೇಖನ ಪ್ರಕಟವಾದ ನಂತರ ತಮಗೆ ಫೋನು ಮಾಡಿದ್ದ ಲೀಲಾ ಪ್ರಧಾನ್ ಕೂಡಾ:‘ಸಾರ್,ನಿಮ್ಮನ್ನು ಅಣ್ಣ ಅಂತ ಮನಸಾರೆ ಕರೆಯುತ್ತೇನೆ. ನಿಮ್ಮ ಲೇಖನದ ಮೂಲಕ ನೀವು ನನಗೆ ಕೊಟ್ಟ ಪ್ರೋತ್ಸಾಹ ದೊಡ್ಡದು’ ಎಂದಿದ್ದಳು. ಅಂದ ಹಾಗೆ ಅವತ್ತು ಚೆಲುವಿನ ನಕ್ಷತ್ರ ಸಿನಿ ಮ್ಯಾಗಜೀನ್ ಎಷ್ಟು ಜನಪ್ರಿಯವಾಗಿತ್ತೆಂದರೆ ಅದರ ಪ್ರಸಾರ ಸಂಖ್ಯೆ ಐದು ಲಕ್ಷದಷ್ಟಿತ್ತು. ಸರಿ, ಈ ಬೆಳವಣಿಗೆಯಾದ ನಂತರದ ದಿನಗಳಲ್ಲಿ ಲೀಲಾ ಪ್ರಧಾನ್ ಆಗಾಗ ತಮಗೆ ಕರೆ ಮಾಡುತ್ತಿದ್ದಳು. ಕುಶಲ ವಿಚಾರಿಸುತ್ತಿದ್ದಳು. ನೃತ್ಯ ಕಾರ್ಯಕ್ರಮಗಳಿಗೆ ಅಂತ ತಮಗೆ ಬರುತ್ತಿರುವ ಆಫರ್‌ಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಳು.ಇಂತಹ ಕಾರ್ಯಕ್ರಮಕ್ಕೆ ಬನ್ನಿ ಅಂತ ಆಹ್ವಾನ ಕೊಡುತ್ತಿದ್ದಳು.

ನೋಡುತ್ತಾ ಹೋದರೆ ಆಕೆಯ ಕೆರಿಯರ್ ಅದ್ಭುತವಾಗಿ ರೂಪುಗೊಂಡಿತ್ತು.ಇಂತಹ ಸಂದರ್ಭದ ಒಂದು ದಿನ ತಮಗೆ ಫೋನ್ ಮಾಡಿದ ಲೀಲಾ ಪ್ರಧಾನ್: ‘ಅಣ್ಣ ನಿಮ್ಮ ಬಳಿ ಅರ್ಜೆಂಟಾಗಿ ಮಾತನಾಡಬೇಕು’ ಎಂದಳು.’ ‘ಏನು ಸಮಾಚಾರ ಸಿಸ್ಟರ್?’ ಎಂದು ಕೇಳಿದರೆ: ‘ವಿಷಯವನ್ನು ಫೋನಿನಲ್ಲಿ ಹೇಳಲಾರೆ.ಯಾಕೆಂದರೆ ನಾನು ಸಿಲುಕಿಕೊಂಡಿರುವ ಸಂಕಟದಿಂದ ನನ್ನನ್ನು ಪಾರು ಮಾಡಬಲ್ಲವರು ನೀವು ಮಾತ್ರ. ಯಾಕೆಂದರೆ ನನ್ನ ಸಂಕಟದ ವಿವರವನ್ನು ನಾನು ಜಗತ್ತಿನ ಮುಂದೆ ಹೇಳಲಾರೆ. ಹಾಗಂತ ಆ ಸಂಕಟಕ್ಕೆ ತಲೆ ಬಾಗಿಸಿದರೆ ನನ್ನ ವ್ಯಕ್ತಿತ್ವವೇ ಕುಸಿದು ಹೋಗುತ್ತದೆ. ಹೀಗಾಗಿ ನೀವು ಈಸ್ಟ್ ಕಾರಿಡಾರ್ ಹೋಟೆಲ್ಲಿಗೆ ಬರುತ್ತೀರಾ? ರೂಮ್ ನಂಬರ್ ಮೂರರಲ್ಲಿ ನಾನಿರುತ್ತೇನೆ’ ಎಂದಳು.

ಸರಿ,ಅವತ್ತು ಜವಾಹರ್ ರಸ್ತೆಯ ಪುಸ್ತಕ ಮಳಿಗೆಯಲ್ಲಿದ್ದ ನಾನು ಹತ್ತಿರದ ಇದ್ದ ಈಸ್ಟ್ ಕಾರಿಡಾರ್ ಹೋಟೆಲ್ಲಿಗೆ ಹೋದೆ. ರೂಮ್ ನಂಬರ್ ಮೂರಕ್ಕೆ ಹೋಗಿ ಬೆಲ್ ಒತ್ತಿದರೆ ಲೀಲಾ ಪ್ರಧಾನ್ ತಾನೇ ಖುದ್ದಾಗಿ ಬಾಗಿಲು ತೆಗೆದಳು.

ಒಳಗೆ ಹೋಗಿ ಕುರ್ಚಿಯಲ್ಲಿ ಅಸೀನನಾಗುತ್ತಿದ್ದಂತೆಯೇ:‘ಸಿಸ್ಟರ್, ಏನು ವಿಷಯ ತುಂಬ ಗಾಬರಿಯಲ್ಲಿದ್ದಂತಿದೆ’ ಅಂತ ಕೇಳಿದರೆ, ಕೊಠಡಿಯ ಬಾಗಿಲು ಮುಚ್ಚಿ ಬಂದ ಲೀಲಾ ಪ್ರಧಾನ್: ‘ಅಣ್ಣ,ನಾನೊಂದು ಚಕ್ರವ್ಯೂಹಕ್ಕೆ ಸಿಲುಕಿಕೊಂಡಿದ್ದೇನೆ’ ಎಂದಳು. ‘ಚಕ್ರವ್ಯೂಹವೇ? ಏನದು ಸಿಸ್ಟರ್, ಕೊಂಚ ವಿವರವಾಗಿ ಹೇಳಬಹುದಾ?’ಎಂದರೆ: ‘ಅಣ್ಣ ನಾಳೆ ಚಿತ್ತಾರ ಕನ್ವೆನ್ಷನ್ ಹಾಲ್‌ನಲ್ಲಿ ನನ್ನ ಡಾನ್ಸ್ ಪ್ರೋಗ್ರಾಮು ಇದೆ. ಈ ಕಾರ್ಯಕ್ರಮಕ್ಕೆ ನನ್ನನ್ನು ಬುಕ್ ಮಾಡಿದವರು ಕನ್ವೆನ್ಷನ್ ಹಾಲ್‌ನ ಮುಖ್ಯಸ್ಥರಾದ ಟಿ.ಟಿ. ಬಾಲಯ್ಯ’ಎಂದಳು.

ಓ, ತಲೆಮಾರು ತಾತಯ್ಯನವರ ಮಗ ಬಾಲಯ್ಯ?’ ಅಂತ ಆಯಾಚಿತವಾಗಿ ಕುಮಾರ್ ಉದ್ಗರಿಸಿದರೆ, ಅದನ್ನು ಕೇಳಿಯೂ ಕೇಳದವಳಂತೆ ಲೀಲಾ ಪ್ರಧಾನ್ ತನ್ನ ಮಾತನ್ನು ಮುಂದುವರಿಸಿದಳು. ‘ಅಣ್ಣ, ಟಿ.ಟಿ.ಬಾಲಯ್ಯ ಅವರು ನನ್ನ ಕಾರ್ಯಕ್ರಮವನ್ನು ಬುಕ್ ಮಾಡುವಾಗ ದೊಡ್ಡ ಮಟ್ಟದ ಸಂಭಾವನೆ ಕೊಡಲು ಒಪ್ಪಿಕೊಂಡರು. ಒಪ್ಪಿಕೊಂಡಿದ್ದು ಮಾತ್ರವಲ್ಲ, ಮುಂಗಡವಾಗಿ ನನ್ನ ಕಾರ್ಯದರ್ಶಿಯ ಕೈಗೆ ಸಂಪೂರ್ಣ ಹಣವನ್ನು ತಲುಪಿಸಿದರು. ನಾನು ಕೂಡಾ ಖುಷಿಯಾಗಿಯೇ ಒಪ್ಪಿಕೊಂಡೆ.‘ನಿಮ್ಮಂತಹ ಕಲಾ ಪ್ರೋತ್ಸಾಹಿಗಳು ಇದ್ದರೆ ಕಲಾವಿದರು ನೆಮ್ಮದಿಯಿಂದ ಇರಬಹುದು’ಎಂದೆ. ಈ ಮಾತು ಹೇಳಿದಾಗ ನಕ್ಕು ತಲೆಯಾಡಿಸಿ ಹೋದ ಬಾಲಯ್ಯ, ಇವತ್ತು ತಮ್ಮ ಆಪ್ತನೊಬ್ಬನ ಮೂಲಕ ಒಂದು ಸಂದೇಶ ಕಳಿಸಿದ್ದಾರೆ’ ಎಂದಳು.

‘ಏನು ಸಂದೇಶ?’ ಅಂತ ಕುಮಾರ್ ಕೇಳಿದರೆ:‘ಚಿತ್ತಾರ ಕನ್ವೆನ್ಷನ್ ಹಾಲ್‌ನಲ್ಲಿ ನಿಮ್ಮ ಕಾರ್ಯಕ್ರಮ ನೋಡಲು ಈ ರಾಜ್ಯದ ಮುಖ್ಯಮಂತ್ರಿಗಳೇ ಬರುತ್ತಿದ್ದಾರೆ. ಇನ್ ಫ್ಯಾಕ್ಟ್ ಅವರು ನಿಮ್ಮ ಅಭಿಮಾನಿ. ಹೀಗಾಗಿ ಇದೊಂದು ವಿಶೇಷ ಸಂದರ್ಭ. ಹೀಗಾಗಿ ನಿಮ್ಮ ಕಾರ್ಯಕ್ರಮ ಮುಗಿದ ನಂತರ ನೀವು ಒಂದು ದಿನ ನಮ್ಮೊಟ್ಟಿಗೆ ಇರಬೇಕು.ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿಗಳಿಗೆ ಕಂಪೆನಿ ಕೊಡಬೇಕು’ ಎಂಬುದು ಈ ಸಂದೇಶ ಎಂದಳು. ಕುಮಾರ್ ಆಕೆಯನ್ನೇ ದಿಟ್ಟಿಸಿ ನೋಡಿದರೆ ಹಣೆಯಲ್ಲಿ ಬೆವರು ಒಸರುತ್ತಿರುವುದು ಸ್ಪಷ್ಟವಾಗಿತ್ತು.

ಹೀಗಾಗಿ ಕುಮಾರ್ ಗಂಭೀರವಾಗಿ; ‘ಸಿಸ್ಟರ್, ನಿಮಗೆ ಒಪ್ಪಿಗೆಯಿಲ್ಲದ ಕೆಲಸ ಅದು. ಸಾಧ್ಯವಿಲ್ಲ ಎಂದು ನೇರವಾಗಿ ಹೇಳಬೇಕಿತ್ತು’ ಎಂದರು. ಆಗ ಲೀಲಾ ಪ್ರಧಾನ್ ಮುಖದಲ್ಲಿ ದುಗುಡದ ಛಾಯೆ ಕಾಣಿಸಿತು. ಹೀಗಾಗಿ ಮಾತು ಮುಂದುವರಿಸಿ:‘ಹೇಳಿ ಬಿಡುತ್ತಿದ್ದೆ ಅಣ್ಣ.ಆದರೆ ಅವರು ಮುಖ್ಯಮಂತ್ರಿಗಳ ಜತೆ ಮಂಚ ಹತ್ತು ಅಂತ ನೇರವಾಗಿ ಹೇಳಿಲ್ಲವಲ್ಲ?’ ಎಂದಳು.

‘ಮುಖ್ಯಮಂತ್ರಿಗಳಿಗೆ ಒಂದು ರಾತ್ರಿ ಕಂಪೆನಿ ಕೊಡಿ ಎಂಬುದರ ಅರ್ಥ ಅದೇ ಅಲ್ಲವೇ?’ಎಂದರು ಕುಮಾರ್.‘ನಿಜ, ಆ ಮಾತಿಗೆ ಬೇರೆ ಅರ್ಥ ಇರಲು ಸಾಧ್ಯವಿಲ್ಲ. ಆದರೆ ನಾನು ಇಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದರೆ ಬಾಲಯ್ಯ ನನ್ನ ಸುತ್ತ ಯಾವ ಬಲೆ ಹೆಣೆಯುತ್ತಾರೋ ಗೊತ್ತಿಲ್ಲ. ಮತ್ತು ಒಂದು ಸಲ ಅಂತಹ ಮಾತುಗಳನ್ನು ಆಡಿದವರು ತಮ್ಮ ಮಾತಿಗೆ ವಿರುದ್ಧವಾಗಿ ನಿಂತವರ ವ್ಯಕ್ತಿತ್ವಕ್ಕೆ ಮಸಿ ಬಳಿದುಬಿಡುತ್ತಾರೆ.ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿಗಳಿಗೆ ಅಪಾರ ಜನ ಪ್ರೀತಿ ಇದೆ.ಬಡವರ ಪಾಲಿನ ಆರಾಧ್ಯ ದೈವ ಎಂಬ ಮೆಚ್ಚುಗೆಯಿದೆ. ಹೀಗಾಗಿ ಇದನ್ನು ವಿವಾದವಾಗಿಸಿದರೆ ನನ್ನ ಬದುಕೇ ನಾಶವಾಗಬಹುದು. ಬಡವರ ಬದುಕಿಗೆ ಕೊಳ್ಳಿ ಇಡಲು ಬಂದ ವಿಷಕನ್ಯೆ ಎಂಬ ಕತೆ ಕಟ್ಟುವ ಕೆಲಸವಾಗಬಹುದು’ ಎಂದಳು.

‘ಹಾಗಿದ್ದರೆ ಈಗ ನಾನೇನು ಮಾಡಬೇಕು’ ಎಂದರು ಕುಮಾರ್. ಆಗ ಲೀಲಾ ಪ್ರಧಾನ್ ದೃಢವಾದ ಸ್ವರದಲ್ಲಿ:’ನಾಳೆ ಚಿತ್ತಾರ ಕನ್ವೆನ್ಷನ್ ಹಾಲ್ನಲ್ಲಿ ನಡೆಯುವ ಕಾರ್ಯಕ್ರಮದ ನಂತರ ನನ್ನನ್ನು ಆ ಜಗದಿಂದ ಬಚಾವು ಮಾಡಿ ಹೊರಗೆ ಕರೆದೊಯ್ಯಬೇಕು’ ಎಂದಳು.ಅರ್ಥಾತ್, ಲೀಲಾ ಪ್ರಧಾನ್‌ಗೆ ಬಾಲಯ್ಯನ ಮಾತು ಇಷ್ಟವಾಗಿಲ್ಲ. ಆದರೆ ಕಾರ್ಯಕ್ರಮ ಕೊಡದೆ ತಪ್ಪಿಸಿಕೊಳ್ಳುವಂತೆಯೂ ಇಲ್ಲ. ಯಾಕೆಂದರೆ ಕಾಂಟ್ರಾಕ್ಟ್‌ಗೆ ಮುಂಚಿತವಾಗಿ ಬಾಲಯ್ಯ ಸಹಿ ಮಾಡಿಸಿಕೊಂಡಿzನೆ. ಆದರೆ ಒಂದು ಸಲ ಕಾರ್ಯಕ್ರಮಕ್ಕೆ ಹೋದರೆ ಆ ಚಕ್ರವ್ಯೂಹದಿಂದ ಕಣ್ತಪ್ಪಿಸಿ ಬರುವುದು ಕಷ್ಟ ಅಂತ ಅನ್ನಿಸಿತು.ಅದರ ಬೆನ್ನ ಮತ್ತೊಂದು ದಾರಿಯೂ ಹೊಳೆಯಿತು.

ಇಂತಹ ಯೋಚನೆ ಬಂದ ತಕ್ಷಣ ಕುಮಾರ್ ತಲೆ ಎತ್ತಿ:‘ಸಿಸ್ಟರ್,ನಾಳೆ ನಿಮ್ಮನ್ನು ಆ ಜಗದಿಂದ ಬಚಾವು ಮಾಡುತ್ತೇನೆ.ಆದರೆ ನಂತರ ನೀವು ಬಾಲಯ್ಯನ ಚಕ್ರವ್ಯೂಹಕ್ಕೆ ಮತ್ತೆ ಸಿಲುಕಿಕೊಳ್ಳುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಅಂದ ಹಾಗೆ ನೀವು ಬಾಲಯ್ಯನ ಹೆಸರು ಹೇಳಿದ ಕೂಡಲೇ ಹೇಳಬೇಕು ಎಂದುಕೊಂಡಿದ್ದೆ. ಆತ ಹೈ ಪ್ರೊಫೈಲ್ ಕುಂಟಣಿಗ. ಆದರೆ ದೊಡ್ಡ ಪವರ್ ಬ್ರೋಕರ್ .ಹೀಗಾಗಿ ಮುಖ್ಯಮಂತ್ರಿಗಳು ಸೇರಿದಂತೆ ದೊಡ್ಡ ದೊಡ್ಡವರ ಪ್ರಭಾವ ಬಳಸಿಕೊಳ್ಳಲು ಇದನ್ನು ಮಾಡುತ್ತಾನೆ’ ಎಂದರು ಕುಮಾರ್.

‘ಅಣ್ಣ, ನೀವು ಒಂದು ಸಲ ನನ್ನನ್ನು ಬಚಾವು ಮಾಡಿ, ಮುಂದಿನದನ್ನು ನನಗೆ ಬಿಡಿ. ನಿಜ ಹೇಳಬೇಕು ಎಂದರೆ ಇನ್ನು ಸ್ವಲ್ಪ ದಿನಗಳಲ್ಲಿ ನಾನು ದಕ್ಷಿಣಾಂಚಲ ರಾಜ್ಯಕ್ಕೆ ಹೋಗಲು, ಅ ಸೆಟ್ಲಾಗಲು ನಿರ್ಧರಿಸಿದ್ದೇನೆ. ಹೀಗಾಗಿ ನಾಳೆಯ ಕಾರ್ಯಕ್ರಮ ಮುಗಿದರೆ ತಕ್ಷಣದ ಮಟ್ಟಿಗೆ ದಕ್ಷಿಣಾಂಚಲಕ್ಕೆ ಹೋಗುತ್ತೇನೆ.ನಿಮ್ಮ ಬಳಿ ಏಕೆ ಮುಚ್ಚಿಡಲಿ? ಅಲ್ಲಿ ನಾನು ಪ್ರೀತಿಸಿದ ವ್ಯಕ್ತಿ ಇದ್ದಾರೆ. ಅಲ್ಲಿಗೆ ಹೋದ ಮೇಲೆ ನಾನು ಸೇಫಾಗಿ ಇರುತ್ತೇನೆ’ ಎಂದಳು. ಈಗ ಕುಮಾರ್ ಸ್ವಲ್ಪ ಹಗುರಾಗಿ:‘ಕಂಗ್ರಾಚುಲೇಶನ್ನ್, ಹುಡುಗ ಏನು ಮಾಡುತ್ತಿದ್ದೇನೆ?’ ಎಂದು ಕೇಳಿದರು. ಲೀಲಾ ಪ್ರಧಾನ್ ನಾಚಿಕೊಂಡು:‘ಅವರು ಬಿಸಿನೆಸ್ ಮೆನ್ ಅಣ್ಣ, ಧನ್ವೀರ್ ಅಂತ ಹೆಸರು’ ಎಂದಳು.

ಆಕೆಯ ಮಾತು ಕೇಳಿ ಖುಷಿಯಾದ ಕುಮಾರ್,‘ಸಿಸ್ಟರ್ ಇನ್ನು ಚಿಂತೆ ಬಿಡಿ, ಉಳಿದಿದ್ದನ್ನು ನನಗೆ ಬಿಡಿ, ನಿಮ್ಮ ಪಾಡಿಗೆ ನೀವು ಚಿತ್ತಾರ ಕಲ್ಚರಲ್ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಿ’ ಎಂದರು. ನಂತರ ಅಲ್ಲಿಂದ ಹೊರಟವರು, ತಮಗಿದ್ದ ಸಂಪರ್ಕಗಳನ್ನು ಬಳಸಿಕೊಂಡು ಒಂದು ಬ್ಲೂ ಪ್ರಿಂಟು ರೆಡಿ ಮಾಡಿದರು. ಅದು ಲೀಲಾ ಪ್ರಧಾನ್ ಎಸ್ಕೇಪ್ ಆಗುವುದು ಹೇಗೆ? ಎಂಬುದರ ಬ್ಲೂ ಪ್ರಿಂಟು. ಸರಿ,ದಿನ ಕಳೆಯಿತು. ಅವತ್ತು ಸಂಜೆಯಾಗುತ್ತಿದ್ದಂತೆಯೇ ಲೀಲಾ ಪ್ರಧಾನ್ ಕಾರ್ಯಕ್ರಮ ನಡೆಯುವ ಜಗಕ್ಕೆ ತನ್ನ ಆಪ್ತ ಸಿಬ್ಬಂದಿಗಳ ಜತೆ ಬಂದಳು. ಕಾರ್ಯಕ್ರಮ ಶುರುವಾಗುವ ಮುನ್ನ ಪ್ರೇಕ್ಷಕರ ಸಾಲಿನ ಸೀಟಿನಲ್ಲಿ ಕುಳಿತ ಕುಮಾರ್, ಸುತ್ತಲೂ ಕಣ್ಣಾಡಿಸತೊಡಗಿದರು. ಇನ್ನೇನು ಕಾರ್ಯಕ್ರಮ ಶುರುವಾಗಬೇಕು.ಅಷ್ಟರ ಹಾಲ್‌ನ ಬಲಭಾಗದಲ್ಲಿದ್ದ ಪ್ರವೇಶ ದ್ವಾರದ ಬಳಿ ಗುಜು ಗುಜು ಶುರುವಾಯಿತು. ಗಮನವಿಟ್ಟು ನೋಡಿದರೆ ಮುಖ್ಯಮಂತ್ರಿ ಚನ್ನಕೇಶವ್ ಅವರು ಎರಡೂ ಕೈಗಳನ್ನು ಜೋಡಿಸಿ ಎಲ್ಲರಿಗೂ ನಮಸ್ಕರಿಸುತ್ತಾ ಬರುತ್ತಿದ್ದರು.ಅವರ ಹಿಂದೆಯೇ ನಗುತ್ತಾ ಬರುತ್ತಿದ್ದ ಟಿ.ಟಿ.ಬಾಲಯ್ಯ ಕಾಣಿಸಿದ.

ರಾಜ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಅಂತ ಹದಿನೈದು ವರ್ಷಗಳ ಹಿಂದೆ ಬಾಲಯ್ಯ ಚಿತ್ತಾರ ಕಲ್ಚರಲ್ ಹಾಲ್ ಸ್ಥಾಪಿಸಿದಾಗ, ಮತ್ತು ಕಡಿಮೆ ದರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆ ಹಾಲ್ ಅನ್ನು ಒದಗಿಸತೊಡಗಿದಾಗ, ಕುಮಾರ್ ಅವರಿಗೂ ಬಾಲಯ್ಯ ಗ್ರೇಟ್ ಅನ್ನಿಸಿದ್ದರು.

ಆದರೆ ಕೆಲವೇ ಕಾಲದಲ್ಲಿ ಬಾಲಯ್ಯನ ಬಗ್ಗೆ ಬರುತ್ತಿದ್ದ ರಿಪೋರ್ಟುಗಳು,ಅದರಲ್ಲೂ ಸಮಾಜದ ಮೇಲು ಸ್ತರದ ಜನರೊಂದಿಗೆ ಬೆರೆತಾಗ ಕೇಳಿ ಬರುತ್ತಿದ್ದ ಮಾತುಗಳು ಬಾಲಯ್ಯನ ಬಾಹ್ಯ ವ್ಯಕ್ತಿತ್ವಕ್ಕೂ,ಆಂತರಿಕ ವ್ಯಕ್ತಿತ್ವಕ್ಕೂ ಅಜಗಜಂತರ ವ್ಯತ್ಯಾಸವಿದೆ ಎಂಬುದನ್ನು ಸಾಬೀತುಪಡಿಸಿತ್ತು. ಸರಿ, ಮುಖ್ಯಮಂತ್ರಿಗಳು ವೇದಿಕೆಯ ಎದುರಿನ ಸೀಟಿನಲ್ಲಿ ಅಸೀನರಾದ ಕೆಲವೇ ನಿಮಿಷಗಳಲ್ಲಿ ಕಾರ್ಯಕ್ರಮ ಶುರುವಾಯಿತು. ಮೊದಲೇ ಹೇಳಿದಂತೆ ಲೀಲಾ ಪ್ರಧಾನ್ ಅನುರೂಪ ಸುಂದರಿ, ದೈತ್ಯ ಪ್ರತಿಭೆ. ಹೀಗಾಗಿ ಅಂದಿನ ಕಾರ್ಯಕ್ರಮ ಅದೆಷ್ಟು ಯಶಸ್ವಿಯಾಯಿತೆಂದರೆ ನೋಡುಗರಾಗಿ ಕುಳಿತಿದ್ದ ಮುಖ್ಯಮಂತ್ರಿಗಳು ಕಾರ್ಯಕ್ರಮ ಮುಗಿದ ನಂತರವೂ ಚಪ್ಪಾಳೆ ತಟ್ಟುತ್ತಲೇ ಇದ್ದರು. ಹೀಗೆ ಕಾರ್ಯಕ್ರಮ ಮುಗಿದ ಕೂಡಲೇ ಲೀಲಾ ಪ್ರಧಾನ್ ಮೇಕಪ್ ತೆಗೆಯಲು ಹಾಲ್‌ಗೆ ಅಂಟಿಕೊಂಡಿದ್ದ ಗ್ರೀನ್ ರೂಮ್‌ಗೆ ತೆರಳಿದರೆ,ಆಕೆಯ ಹಿಂದೆ ಐದಾರು ಮಂದಿ ಧಾಂಡಿಗರು ಹೋದರು. ಕೆಳಗೆ ಕುಳಿತಿದ್ದ ಕುಮಾರ್‌ಗೆ ಸ್ಪಷ್ಟವಾಯಿತು. ಇವರೆಲ್ಲ ಬಾಲಯ್ಯನ ಕಡೆಯವರು. ಗ್ರೀನ್ ರೂಮಿನಿಂದ ಹೊರಬಂದ ಕೂಡಲೇ ಲೀಲಾ ಪ್ರಧಾನ್ ಗೆ ರಕ್ಷಣೆ ಕೊಡುವವರಂತೆ ನಟಿಸಿ, ಹೊರಭಾಗದಲ್ಲಿ ಅದಾಗಲೇ ಬಂದು ನಿಂತಿರುವ ಬೆಂಜ್ ಕಾರಿಗೆ ಹತ್ತಿಸಲು ಅಣಿಯಾಗಿzರೆ.

ಆದರೆ ಇದನ್ನೆಲ್ಲ ನೋಡಿಯೂ ಕುಮಾರ್ ವಿಚಲಿತರಾಗಲಿಲ್ಲ. ಬದಲಿಗೆ ಮೌನವಾಗಿ ಕುಳಿತು ಮುಂದಿನ ಆಟ ನೋಡತೊಡಗಿದರು. ಅಂದ ಹಾಗೆ ಗ್ರೀನ್ ರೂಮ್ ಒಳಗೆ ಹೋದ ಲೀಲಾ ಪ್ರಧಾನ್ ಹೊರಬರಲಿಲ್ಲ. ಹತ್ತು ನಿಮಿಷವಾಯಿತು. ಇಪ್ಪತ್ತು ನಿಮಿಷ ಕಳೆದು ಮೂವತ್ತು ನಿಮಿಷ ದಾಟಿತು.ಆದರೆ ಗ್ರೀನ್ ರೂಮಿನಿಂದ ಸಣ್ಣ ಸಪ್ಪಳವೂ ಇಲ್ಲ.

ಈ ಕಡೆ ನೋಡಿದರೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತೇ ಇದ್ದ ಮುಖ್ಯಮಂತ್ರಿಗಳು ತಮ್ಮ ಬಾಯಿಗೆ ಸಿಗಾರ್ ಮೆತ್ತಿಕೊಂಡು ಕುಳಿತ ಚಡಪಡಿಸತೊಡಗಿದರು. ಮುಖ್ಯಮಂತ್ರಿಗಳ ಚಡಪಡಿಕೆಯನ್ನು ನೋಡಿದ ಬಾಲಯ್ಯ: ಈಗ ಬಂದೆ ಎನ್ನುವಂತೆ ಮುಖ್ಯಮಂತ್ರಿಗಳಿಗೆ ಸನ್ನೆ ಮಾಡಿ ಗ್ರೀನ್ ರೂಮ್ ಕಡೆ ನಡೆದರು. ಆದರೆ ಹೋಗಿ ನೋಡಿದರೆ ಅಲ್ಲಿದ್ದಾಳೆ ಲೀಲಾ ಪ್ರಧಾನ್? ಗಾಬರಿಗೊಂಡ ಬಾಲಯ್ಯ ಓಡಿ ಬಂದರು. ಬಂದವರೇ ಮುಖ್ಯ ಮಂತ್ರಿಗಳ ಬಳಿ ಏನನ್ನೋ ಹೇಳಿದರು. ಅಂದರೆ? ಲೀಲಾ ಪ್ರಧಾನ್ ತಪ್ಪಿಸಿಕೊಂಡಿದ್ದಾಳೆ. ಅಲ್ಲಲ್ಲ, ಆಕೆ ತಪ್ಪಿಸಿಕೊಳ್ಳಲು ತಾನು ಮಾಡಿದ ತಂತ್ರ ಸಫಲವಾಗಿದೆ ಅಂತ ಕುಮಾರ್ ಅವರಿಗೆ ಖುಷಿಯಾಯಿತು.

ಅಂದ ಹಾಗೆ ಲೀಲಾ ಪ್ರಧಾನ್ ತನ್ನ ಕಷ್ಟ ತೋಡಿಕೊಂಡ ನಂತರ ಚಿತ್ತಾರ ಕಲ್ಚರಲ್ ಹಾಲ್ ಕಡೆ ಬಂದಿದ್ದ ಕುಮಾರ್ ಅಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಸಹೋದ್ಯೋಗಿಯ ತಮ್ಮನನ್ನು ಸಂಪರ್ಕಿಸಿ ಎಲ್ಲ ವಿಷಯ ತಿಳಿಸಿದ್ದರು. ಮತ್ತು ಕುಮಾರ್ ಮತ್ತು ಆತ ಸೇರಿ ಗ್ರೀನ್ ರೂಮ್ ಹಿಂಭಾಗದಲ್ಲಿರುವ ಬಾಗಿಲ ಮೂಲಕ ಹಾಲ್ ಹಿಂಭಾಗಕ್ಕೆ ಹೋದರೆ ಕಂಪೋಂಡ್ ಇದೆ. ಆ ಕಂಪೋಂಡ್ ಗೆ ಏಣಿಯನ್ನಿಡಬೇಕು ಮತ್ತು ಲೀಲಾ ಪ್ರಧಾನ್ ಮೇಕಪ್ ತೆಗೆಯದೆ ಗ್ರೀನ್ ರೂಮಿನಿಂದ ಹೊರಹೋಗಿ, ಕಂಪೋಂಡಿಗೆ ಅಂಟಿಕೊಂಡಿದ್ದ ಏಣಿಯ ಮೂಲಕ ಆಚೆ ಭಾಗದಲ್ಲಿಳಿಯಬೇಕು. ಆಚೆ ಭಾಗದಲ್ಲಿ ಏನೆಂದರೆ ಏನೂ ಇಲ್ಲ. ಆದರೆ ಕುಮಾರ್ ರೂಪಿಸಿದ ತಂತ್ರದ ಭಾಗವಾಗಿ ಗೆಳೆಯ ಚೈತನ್ಯ ಆಳ್ವನ ಕಾರು ಮುಂಚಿತವಾಗಿಯೇ ಅಲ್ಲಿ ನಿಂತಿರುತ್ತದೆ. ಮತ್ತು ಏಣಿಯ ಮೂಲಕ ಕಂಪೋಂಡು ದಾಟುವ ಲೀಲಾ ಪ್ರಧಾನ್‌ಳನ್ನು ಹತ್ತಿಸಿಕೊಂಡು ದಕ್ಷಿಣಾಂಚಲದ ರಾಜಧಾನಿ ಇಂದ್ರಪ್ರಸ್ಥಕ್ಕೆ ಹೋಗುತ್ತದೆ ಎಂಬ ನಿರ್ಧಾರವಾಗಿತ್ತು.

ಅರ್ಥಾತ್,ಇಷ್ಟು ಹೊತ್ತಿಗಾಗಲೇ ಗೆಳೆಯ ಚೈತನ್ಯ ಆಳ್ವನ ಕಾರು ಐದಾರು ಕಿಲೋಮೀಟರು ಮುಂದೆ ಹೋಗಿರುತ್ತದೆ. ಹೀಗಾಗಿ ಲೀಲಾ ಪ್ರಧಾನ್ ಇನ್ನು ಸೇಫ್ ಅನ್ನಿಸಿ ಕುಮಾರ್ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಅತ್ತ ಲೀಲಾ ಪ್ರದಾನ್ ಜತೆ ಹಾಸಿಗೆ ಹಂಚಿಕೊಳ್ಳುವ ಕನಸಿನಲ್ಲಿ ಬಂದಿದ್ದ ಮುಖ್ಯಮಂತ್ರಿಗಳು ಕೋಪದಿಂದ ಹೊರನಡೆಯತೊಡಗಿದರು. ಇದಾದ ಮರುದಿನ ಕಚೇರಿಯಲ್ಲಿ ಕುಳಿತಿದ್ದಾಗ ಲೀಲಾ ಪ್ರಧಾನ್ ಫೋನು ಬಂತು.‘ಅಣ್ಣ, ನಿಮ್ಮಿಂದ ಮಹದುಪಕಾರವಾಯಿತು. ಒಬ್ಬ ಕಲಾವಿದೆಗೆ ವೇಶ್ಯೆಯ ಪಟ್ಟ ದಕ್ಕುವುದನ್ನು ತಪ್ಪಿಸಿದಿರಿ’ಎಂದಳು. ಧ್ವನಿ ಗದ್ಗದಿತವಾಗಿತ್ತು.‘ಒಳ್ಳೆಯದು ಸಿಸ್ಟರ್, ಬೇಗ ಮದುವೆಯಾಗಿ ನೆಮ್ಮದಿಯಾಗಿರಿ. ಮದುವೆಗೆ ಈ ಅಣ್ಣನನ್ನು ಕರೆಯಲು ಮರೆಯಬೇಡಿ’ ಎಂದರು ಕುಮಾರ್. ಇದಾದ ಮೂರೇ ತಿಂಗಳಲ್ಲಿ ಲೀಲಾ ಪ್ರಧಾನ್‌ಳ ವಿವಾಹ ಆಮಂತ್ರಣ ಪತ್ರಿಕೆ ಬಂತು.ದಕ್ಷಿಣಾಂಚಲದ ರಾಜಧಾನಿ ಇಂದ್ರಪ್ರಸ್ಥದಲ್ಲಿ ಮದುವೆ. ಕುಮಾರ್ ಸಂಭ್ರಮದಿಂದಲೇ ಹೋಗಿ ಬಂದರು. ಅಲ್ಲಿಗೆ ಹೋದಾಗ ತಿಳಿದ ವಿಷಯವೆಂದರೆ ಆಕೆ ಮದುವೆಯಾಗುತ್ತಿದ್ದ ವರನ ತಂದೆ ಈ ಬಾರಿ ಅಲ್ಲಿನ ಮುಖ್ಯಮಂತ್ರಿ ಅಭ್ಯರ್ಥಿ.

ಈ ವಿಷಯ ಕೇಳಿದ ಕುಮಾರ್ ಖುಷಿಯಾದರು. ಬದುಕು ಯಾವ್ಯಾವ ತಿರುವು ಪಡೆಯುತ್ತದೋ?ಲೀಲಾ ಪ್ರಧಾನ್ ಗೆ ಒಳ್ಳೆಯದಾಗಲಿ ಎಂದು ಮನಸಾರೆ ಹರಸಿ ವಾಪಸ್ಸು ಬಂದರು.ಇದಾದ ಕೆಲ ಕಾಲದ ನಂತರ ದಕ್ಷಿಣಾಂಚಲದಿಂದ ಲೀಲಾ ಪ್ರಧಾನ್ ಕುರಿತು ಹಲವು ಕತೆಗಳು ಕೇಳಿ ಬರತೊಡಗಿದವು.

ಕಚೇರಿಯ ಕುರ್ಚಿಯಲ್ಲಿ ಕುಳಿತು ಇದನ್ನೆಲ್ಲ ನೆನಪಿಸಿಕೊಂಡ ಕುಮಾರ್ ಅವರಿಗೆ ಸಂಜೆಯ ಹೊತ್ತಿಗೆ ಒಂದು ಮೆಸೇಜು ಬಂತು. ಅದೆಂದರೆ, ದಕ್ಷಿಣಾಂಚಲ ಮಕ್ಕಳ ಪಕ್ಷದಿಂದ ಗೆದ್ದ ನೂರಾಮೂವತ್ತೆರಡು ಮಂದಿಶಾಸಕರು ಲೀಲಾ ಪ್ರಧಾನ್ ಅವರನ್ನು ತಮ್ಮ ಪಕ್ಷದ ಶಾಸಕಾಂಗ ನಾಯಕಿಯನ್ನಾಗಿ ಆರಿಸಿದ್ದರು. ಎಷ್ಟೇ ಆದರೂ ರಾಜ್ಯದ ಪ್ರಭಾವಿ ನಾಯಕ ಜಗಜಿತ್ ಅವರ ಸೊಸೆ. ಮತ್ತವರ ಉತ್ತರಾಧಿಕಾರಿ. ಹೀಗಾಗಿ ಆಕೆಯ ನಾಯಕತ್ವಕ್ಕೆ ಎದುರಾಡುವವರೇ ಇರಲಿಲ್ಲ. ದಕ್ಷಿಣಾಂಚಲದಿಂದ ಬಂದ ವರದಿಯ ಪ್ರಕಾರ ಎರಡು ದಿನಗಳ ನಂತರ ಅಲ್ಲಿನ ರಾಜಭವನದ ಮುಂದಿರುವ ಗಾಜಿನ ಮನೆಯಲ್ಲಿ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಮತ್ತವರ ಜತೆ ಹದಿನೈದು ಮಂದಿ ಸಚಿವ ಸಂಪುಟಕ್ಕೆ ಸೇರಲಿದ್ದಾರೆ ಎಂಬುದು ಕುಮಾರ್ ಅವರ ಗಮನಕ್ಕೆ ಬಂತು.

ಸರಿ, ಪ್ರಮಾಣ ವಚನದ ದಿನ ನಿಗದಿತ ಹೊತ್ತಿಗೂ ಮುಂಚೆ ಕಚೇರಿಗೆ ಬಂದು ಟಿವಿ ಆನ್ ಮಾಡಿದ ಕುಮಾರ್ ಅವರು ಲೀಲಾ ಪ್ರಧಾನ್ ಮುಖ್ಯಮಂತ್ರಿಯಾಗುವ ಘಳಿಗೆಗಾಗಿ ಕಾತರದಿಂದ ಕಾಯತೊಡಗಿದರು. ಇನ್ನೇನು ಕೆಲ ನಿಮಿಷಗಳ ರಾಜಭವನದಲ್ಲಿ ಕಾರ್ಯಕ್ರಮ ಶುರುವಾಗಬೇಕು. ಅಷ್ಟರ ಕುಮಾರ್ ಅವರ ಟೇಬಲ್ಲಿನ ಮೇಲಿದ್ದ ಫೋನು ರಿಂಗುಣಿಸತೊಡಗಿತು. ಅವಸರದಿಂದಲೇ ಎತ್ತಿ ಕಿವಿಗಾನಿಸಿ ಕೊಂಡರೆ ಅತ್ತಲಿಂದ ಹೆಣ್ಣಿನ ಧ್ವನಿ.

‘ಹಲೋ, ಕಸುವಿನ ಕೆರೆ eನೇಂದ್ರ ಕುಮಾರ್ ಅವರಾ?’ ಅಂತ ಆ ಧ್ವನಿ ಉಸುರಿದಾಗ ಕುಮಾರ್ ಅವರಿಗೆ ಅಚ್ಚರಿಯಾಯಿತು.ತಮ್ಮ ಪೂರ್ಣ ಹೆಸರನ್ನು ಉಚ್ಚರಿಸುತ್ತಿzರೆ ಎಂದರೆ ಅವರು ನನಗೆ ಅತಿ ಹತ್ತಿರದವರಿರಬೇಕು ಅನ್ನಿಸಿತು. ಹಾಗಂತಲೇ: ‘ಹೌದು, ನಾನೇ ಕಸುವಿನಕೆರೆ eನೇಂದ್ರ ಕುಮಾರ್. ಏನಾಗಬೇಕಿತ್ತು ಹೇಳಿ?’ಎಂದರು.ಈಗ ಅತ್ತಲ ಧ್ವನಿ ಇದ್ದಕ್ಕಿದ್ದಂತೆ ಬದಲಾಯಿತು.‘ಅಣ್ಣ,ನಾನು ಲೀಲಾ ಪ್ರಧಾನ್’ ಅಂತ ಆ ಧ್ವನಿ ಉಸುರಿದಾಗ ಕುಮಾರ್ ಅರೆಕ್ಷಣ ಬೆರಗಾದರು. ಇಂತಹ ಹೊತ್ತಿನಲ್ಲೂ ಆಕೆ ತನ್ನನ್ನು ನೆನಪಿಸಿಕೊಂಡಿzಳೆ ಎಂದರೆ? ಕುಮಾರ್ ಒಂದು ಕ್ಷಣ ಕಂಪಿಸಿದರು.

ಅಷ್ಟರ ಅತ್ತಲಿಂದ ಮಾತನಾಡುತ್ತಿದ್ದ ಲೀಲಾ ಪ್ರಧಾನ್ :‘ಅಣ್ಣ, ನಿಮ್ಮ ತಂಗಿ ಇವತ್ತಿನಿಂದ ದಕ್ಷಿಣಾಂಚಲದ ಮುಖ್ಯಮಂತ್ರಿ. ನಿಮ್ಮ ಆಶೀರ್ವಾದ ಇರಲಿ. ಬಿಡುವಾದಾಗ ಇಲ್ಲಿಗೆ ಬನ್ನಿ’ ಎಂದಳು. ಹಳೆಯ ನೆನಪುಗಳೆಲ್ಲ ಇದ್ದಕ್ಕಿದ್ದಂತೆ ಒತ್ತರಿಸಿ ಬಂದಂತಾಗಿ:‘ಖಂಡಿತ ಸಿಸ್ಟರ್,ಈ ಅಣ್ಣನ ಹಾರೈಕೆ ಸದಾ ನಿನ್ನ ಮೇಲಿದೆ. ನಿನ್ನ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದರು. ಅವರ ಕಣ್ಣುಗಳಲ್ಲಿ ನೀರಿದ್ದವು.

” ಲೀಲಾ ಪ್ರಧಾನ್ ಮಾವ ಜಗಜಿತ್ ಮುಖ್ಯಮಂತ್ರಿ ಯಾದರಲ್ಲ ಅವರಿಗೆ ಸೊಸೆ ಲೀಲಾ ಪ್ರಧಾನ್ ಎಂದರೆ ಅಪಾರ ಪ್ರೀತಿ. ಆಕೆ ಸೊಸೆಯಲ್ಲ, ತಮ್ಮ ಮನೆಯ ಮಗಳು ಎಂಬಷ್ಟುಅಕ್ಕರೆ. ಮಗನಿಗೆ ರಾಜಕೀಯದಲ್ಲಿಆಸಕ್ತಿ ಇಲ್ಲವಾದ್ದರಿಂದ ಸೊಸೆ ಲೀಲಾ ಪ್ರಧಾನ್‌ಳನ್ನೇ ಅವರು ತಮ್ಮ ಉತ್ತರಾಧಿಕಾರಿಯಂತೆ ಬೆಳೆಸತೊಡಗಿದ್ದರು”

 

 

ಆಂದೋಲನ ಡೆಸ್ಕ್

Recent Posts

ಮಲ್ಲಳ್ಳಿ ಜಲಪಾತ ಪ್ರವಾಸಿಗರಿಗೆ ಸ್ವರ್ಗ ಸದೃಶ; ಗ್ರಾಮಸ್ಥರಿಗೆ ನರಕಯಾತನೆ

ಲಕ್ಷ್ಮಿಕಾಂತ್ ಕೋಮಾರಪ್ಪ ೩.೫೦ ಕೋಟಿ ರೂ. ವೆಚ್ಚದಲ್ಲಿ ಜಲಪಾತ ಅಭಿವೃದ್ಧಿಪಡಿಸಿದ್ದರೂ ಗ್ರಾಮಕ್ಕಿಲ್ಲ ರಸ್ತೆ ಸೋಮವಾರಪೇಟೆ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ…

19 mins ago

‘ಡಾ.ರಾಧಾಕೃಷ್ಣನ್ ಬಂಗಲೆ’ಗೆ ಬೇಕಿದೆ ಮರುಜೀವ!

ಚಾವಣಿ ಕುಸಿದು ಶಿಥಿಲಾವಸ್ಥೆ ತಲುಪಿದ ಕಟ್ಟಡ: ಆರು ತಿಂಗಳಿಂದ ಕಟ್ಟಡಕ್ಕೆ ಬೀಗ; ದುರಸ್ತಿ ಕಾರ್ಯ ಯಾವಾಗ? ಮೈಸೂರು: ತತ್ವಜ್ಞಾನಿ, ಮಾಜಿ…

29 mins ago

ಮೈಮುಲ್‌ಗೆ ಹಾಲಿನ ಹೊಳೆ

ಕೆ.ಬಿ.ರಮೇಶನಾಯಕ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ  ೯.೫೦ ಲಕ್ಷ  ಲೀಟರ್; ಈ ವರ್ಷ ೧೧ ಲಕ್ಷ ಲೀ.ಹಾಲು ಸಂಗ್ರಹ ಮೈಸೂರು:…

35 mins ago

ಕೊಡಗಿನಲ್ಲಿ ಹುಲಿ ದಾಳಿಗೆ ಹಸು ಬಲಿ; ಗ್ರಾಮಸ್ಥರಲ್ಲಿ ಆತಂಕ!

 ಕೊಡಗು: ಇಲ್ಲಿನ ನರಿಯಂದಡ ಗ್ರಾಮದಲ್ಲಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಚೆಯ್ಯಂಡಾಣೆ ಸಮೀಪದ ಈ ಗ್ರಾಮದಲ್ಲಿ ಶನಿವಾರ…

20 hours ago

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ: ತಮಿಳುನಾಡು ಕರಾವಳಿಗೆ ಮಳೆ ಮುನ್ಸೂಚನೆ!

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ. ವಾಯುಭಾರ ಕುಸಿತ ತೀವ್ರಗೊಂಡಿದ್ದು, ಹವಾಮಾನ ವ್ಯವಸ್ಥೆ ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ.…

20 hours ago