Andolana originals

ಮಲ್ಲಳ್ಳಿ ಜಲಪಾತ ಪ್ರವಾಸಿಗರಿಗೆ ಸ್ವರ್ಗ ಸದೃಶ; ಗ್ರಾಮಸ್ಥರಿಗೆ ನರಕಯಾತನೆ

ಲಕ್ಷ್ಮಿಕಾಂತ್ ಕೋಮಾರಪ್ಪ

೩.೫೦ ಕೋಟಿ ರೂ. ವೆಚ್ಚದಲ್ಲಿ ಜಲಪಾತ ಅಭಿವೃದ್ಧಿಪಡಿಸಿದ್ದರೂ ಗ್ರಾಮಕ್ಕಿಲ್ಲ ರಸ್ತೆ

ಸೋಮವಾರಪೇಟೆ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿರುವ ಮಲ್ಲಳ್ಳಿ ಜಲಪಾತ ಪ್ರವಾಸಿಗರ ಪಾಲಿಗೆ ಸ್ವರ್ಗಸದೃಶ ತಾಣವಾಗಿದೆ. ಆದರೆ ಈ ಜಲಪಾತದ ಹೆಸರಿನಿಂದಲೇ ಗುರುತಿಸಿಕೊಂಡಿರುವ ಬೆಟ್ಟದಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲಳ್ಳಿ ಗ್ರಾಮಸ್ಥರು ಮೂಲಸೌಕರ್ಯಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ಪ್ರವಾಸಿಗರ ಅನುಕೂಲಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಜಲಪಾತದ ಅಭಿವೃದ್ಧಿ ಮಾಡಲಾಗಿದ್ದರೂ, ಜಲಪಾತಕ್ಕೆ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿ ರುವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ ಎಂಬುದು ವಿಪರ್ಯಾಸ.

ಸೋಮವಾರಪೇಟೆ ಪಟ್ಟಣದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿರುವ ಮಲ್ಲಳ್ಳಿ ಜಲಪಾತಕ್ಕೆ ವರ್ಷವಿಡೀ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದ ಸ್ಥಳೀಯಗ್ರಾಮ ಪಂಚಾಯಿತಿಗೂ ಆದಾಯ ದೊರೆಯುತ್ತಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ರಾಜ್ಯ ಸರ್ಕಾರದಿಂದ ಸುಮಾರು ೩.೫೦ ಕೋಟಿ ರೂ. ಅನುದಾನದಲ್ಲಿ ಜಲಪಾತವನ್ನು ಅಭಿವೃದ್ಧಿಪಡಿಸಲಾಗಿದ್ದು, ಸುಮಾರು ಒಂದು ಕಿ.ಮೀ. ದೂರದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಆದರೆ ಜಲಪಾತಕ್ಕೆ ಹೆಸರು ತಂದುಕೊಟ್ಟಿರುವ ಮಲ್ಲಳ್ಳಿ ಗ್ರಾಮಕ್ಕೆ ತೆರಳಲು ಕನಿಷ್ಠ ಕಚ್ಚಾ ರಸ್ತೆಯೂ ಇಲ್ಲದಿರುವ ಬಗ್ಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಮಳೆಗಾಲದಲ್ಲಿ ವಾಹನ ಸಂಚಾರ ಸ್ಥಗಿತ: ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದ ಕಾರಣ ಮಳೆಗಾಲದಲ್ಲಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಅಕ್ಕಿ,ತರಕಾರಿ ಸೇರಿದಂತೆ ಅಗತ್ಯ ದಿನಸಿ ಸಾಮಗ್ರಿಗಳನ್ನು ಸುಮಾರು ಒಂದೂವರೆ ಕಿ.ಮೀ. ದೂರ ತಲೆಯ ಮೇಲೆ ಹೊತ್ತುಕೊಂಡು ಕೆಸರುಮಯ ಹಾಗೂ ಹಾಳಾಗಿರುವ ರಸ್ತೆಯಲ್ಲಿ ನಡೆದು ಮನೆ ತಲುಪಬೇಕಾದ ಅನಿವಾರ್ಯತೆ ಇಲ್ಲಿನ ನಿವಾಸಿಗಳದ್ದು.

ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಯೂ ಕಾಡುತ್ತಿದ್ದು, ಬೈಕ್ ಹಾಗೂ ಕಾರುಗಳೂ ಗ್ರಾಮ ಪ್ರವೇಶಿಸಲು ಸಾಧ್ಯವಾಗದ ಸ್ಥಿತಿ ಇದೆ. ಮೂಲಸೌಕರ್ಯಗಳ ಕೊರತೆ ಕಾಫಿ, ಏಲಕ್ಕಿ ಸೇರಿದಂತೆ ವಿವಿಧ ಬೆಳೆಗಳ ಕೃಷಿಗೆ ಸೂಕ್ತವಾಗಿರುವ ಈ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗಿದೆ.

ಒಂದು ಕಾಲದಲ್ಲಿ ೨೦ ಕುಟುಂಬಗಳು ವಾಸವಿದ್ದ ಗ್ರಾಮದಲ್ಲಿ ಇದೀಗ ಕೇವಲ ಎಂಟು ಕುಟುಂಬಗಳು ಮಾತ್ರ ಉಳಿದುಕೊಂಡಿವೆ. ಉಳಿದ ೧೨ ಕುಟುಂಬಗಳು ಮಕ್ಕಳ ಶಿಕ್ಷಣ ಹಾಗೂ ಜೀವನೋಪಾಯದ ದೃಷ್ಟಿಯಿಂದ ಗ್ರಾಮ ತೊರೆದು ಪಟ್ಟಣಗಳಲ್ಲಿ ಬಾಡಿಗೆ ಮನೆಗಳಲ್ಲಿ ನೆಲೆಸಿವೆ.

ಜಿಲ್ಲಾಡಳಿತ, ಜನ ಪ್ರತಿನಿಧಿಗಳ ನಿರ್ಲಕ್ಷ್ಯ: ಎರಡು ದಶಕಗಳ ಹಿಂದೆ ಒಂದೂವರೆ ಕಿ.ಮೀ. ರಸ್ತೆಗೆ ಡಾಂಬರೀಕರಣ ಮಾಡಿದ್ದರೆ ಗ್ರಾಮ ಕೃಷಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾಣುತ್ತಿತ್ತು. ಆದರೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಗ್ರಾಮ ಇಂದಿಗೂ ಸಂಪರ್ಕ ರಸ್ತೆಯಿಲ್ಲದೆ ಉಳಿದಿದೆ. ಹಲವು ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಮಲ್ಲಳ್ಳಿ ಜಲಪಾತಕ್ಕೆ ಭೇಟಿ ನೀಡಿದ್ದರೂ, ಗ್ರಾಮದ ದುಸ್ಥಿತಿಯನ್ನು ಗಮನಿಸಲು ಯಾರೂ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಕೆಲ ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಆನ್ನಿಸ್ ಕಣ್ಮನಿ ಜಾಯ್ ಅವರು ಜಲಪಾತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ರಸ್ತೆ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಅಂದಿನ ಜಿಲ್ಲಾಧಿಕಾರಿಗಳು ಮರುದಿನವೇ ಇಂಜಿನಿಯರ್‌ಗಳನ್ನು ಗ್ರಾಮಕ್ಕೆ ಕಳುಹಿಸಿ ಅಂದಾಜು ಪಟ್ಟಿ ಸಿದ್ಧಪಡಿಸಿ ಅನುದಾನ ಒದಗಿಸುವ ಭರವಸೆ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳ ವರ್ಗಾವಣೆಯಾದ ಬಳಿಕ ಈ ಭರವಸೆ ಈಡೇರಲಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

” ನಾನು ಗ್ರಾಪಂ ಪಿಡಿಒ ಆಗಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳಾಗಿದೆ. ಮಲ್ಲಳ್ಳಿ ಗ್ರಾಮದ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಅಭಿವೃದ್ಧಿ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು.”

-ದೇವರಾಜು, ಪಿಡಿಒ, ಬೆಟ್ಟದಳ್ಳಿ ಗ್ರಾಪಂ

” ಮಳೆಗಾಲದಲ್ಲಿ ಸರಿಯಾಗಿ ವಿದ್ಯುತ್ ಇರುವುದಿಲ್ಲ. ನಮ್ಮ ಸಮಸ್ಯೆಗಳನ್ನು ಕೇಳುವವರೇ ಇಲ್ಲ. ಬೈಕ್, ಕಾರುಗಳು ಗ್ರಾಮಕ್ಕೆ ಬರುವುದಿಲ್ಲ. ಅಕ್ಕಿ ಸೇರಿದಂತೆ ಅಗತ್ಯ ದಿನಸಿ ವಸ್ತುಗಳನ್ನು ಒಂದೂವರೆ ಕಿ.ಮೀ. ದೂರ ತಲೆಯ ಮೇಲೆ ಹೊತ್ತುಕೊಂಡು ಮನೆ ಸೇರಬೇಕು. ಅಭಿವೃದ್ಧಿ ಕಾಣದ ನಮ್ಮ ಗ್ರಾಮಕ್ಕೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿರುವುದರಿಂದ ಯುವಕರು ಅವಿವಾಹಿತರಾಗಿ ಉಳಿಯುವಂತಾಗಿದೆ.”

 -ರಮೇಶ್, ಕೃಷಿಕರು, ಮಲ್ಲಳ್ಳಿ ಗ್ರಾಮ

” ಗ್ರಾಮಸ್ಥರಿಗೆ ಆಸ್ತಿ ಹಕ್ಕುಪತ್ರಗಳಿಲ್ಲದ ಕಾರಣ ಕಾಫಿ ಮಂಡಳಿ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳ ಸೌಲಭ್ಯಗಳು ದೊರೆಯುತ್ತಿಲ್ಲ. ಪರಿಸರ ಸೂಕ್ಷ್ಮ ವಲಯದ ಸಿ ಮತ್ತು ಡಿ ಭೂಮಿಯ ನೆಪದಲ್ಲಿ ಕೃಷಿಕರಿಗೆ ಅನ್ಯಾಯವಾಗಬಾರದು. ಆಸ್ತಿ ಹಕ್ಕುಪತ್ರ ನೀಡದಿದ್ದರೆ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗು ತ್ತೇವೆ. ಆದ್ದರಿಂದ ಅರ್ಹರಿಗೆ ಆಸ್ತಿ ಹಕ್ಕುಪತ್ರ ನೀಡಬೇಕು.”

 -ಗಣೇಶ್, ಗ್ರಾಮಸ್ಥರು, ಮಲ್ಲಳ್ಳಿ  

” ಕಾಡುಪ್ರಾಣಿಗಳ ಹಾವಳಿ ಪುಷ್ಪಗಿರಿ ಬೆಟ್ಟಶ್ರೇಣಿಯ ವ್ಯಾಪ್ತಿಯಲ್ಲಿರುವ ಈ ಪ್ರದೇಶದಲ್ಲಿ ವಾರ್ಷಿಕ ಸರಾಸರಿ ೨೦೦ರಿಂದ ೪೦೦ ಇಂಚು ಮಳೆಯಾಗುತ್ತದೆ. ಕಾಡಾನೆ, ಕಾಟಿ ಹಾಗೂ ಕಾಡುಹಂದಿಗಳ ಹಾವಳಿಯ ನಡುವೆಯೂ ಕೃಷಿಕರು ಬದುಕು ಸಾಗಿಸುತ್ತಿದ್ದಾರೆ”

 

 

ಆಂದೋಲನ ಡೆಸ್ಕ್

Recent Posts

ಲೀಲಾ ಪ್ರಧಾನ್ ಸಿಎಂ ಆದ ರೋಚಕ ಕಥೆ

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಅಂದು ಒಬ್ಬ ಪ್ರತಿಭಾವಂತ ಕಲಾವಿದೆ, ಇಂದು... ಸಣ್ಣ ಸದ್ದಿನೊಂದಿಗೆ ಬಾಗಿಲು ತೆರೆದುಕೊಂಡಾಗ ಕುರ್ಚಿಯಲ್ಲಿ ಕುಳಿತು…

2 mins ago

‘ಡಾ.ರಾಧಾಕೃಷ್ಣನ್ ಬಂಗಲೆ’ಗೆ ಬೇಕಿದೆ ಮರುಜೀವ!

ಚಾವಣಿ ಕುಸಿದು ಶಿಥಿಲಾವಸ್ಥೆ ತಲುಪಿದ ಕಟ್ಟಡ: ಆರು ತಿಂಗಳಿಂದ ಕಟ್ಟಡಕ್ಕೆ ಬೀಗ; ದುರಸ್ತಿ ಕಾರ್ಯ ಯಾವಾಗ? ಮೈಸೂರು: ತತ್ವಜ್ಞಾನಿ, ಮಾಜಿ…

25 mins ago

ಮೈಮುಲ್‌ಗೆ ಹಾಲಿನ ಹೊಳೆ

ಕೆ.ಬಿ.ರಮೇಶನಾಯಕ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ  ೯.೫೦ ಲಕ್ಷ  ಲೀಟರ್; ಈ ವರ್ಷ ೧೧ ಲಕ್ಷ ಲೀ.ಹಾಲು ಸಂಗ್ರಹ ಮೈಸೂರು:…

30 mins ago

ಕೊಡಗಿನಲ್ಲಿ ಹುಲಿ ದಾಳಿಗೆ ಹಸು ಬಲಿ; ಗ್ರಾಮಸ್ಥರಲ್ಲಿ ಆತಂಕ!

 ಕೊಡಗು: ಇಲ್ಲಿನ ನರಿಯಂದಡ ಗ್ರಾಮದಲ್ಲಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಚೆಯ್ಯಂಡಾಣೆ ಸಮೀಪದ ಈ ಗ್ರಾಮದಲ್ಲಿ ಶನಿವಾರ…

20 hours ago

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ: ತಮಿಳುನಾಡು ಕರಾವಳಿಗೆ ಮಳೆ ಮುನ್ಸೂಚನೆ!

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ. ವಾಯುಭಾರ ಕುಸಿತ ತೀವ್ರಗೊಂಡಿದ್ದು, ಹವಾಮಾನ ವ್ಯವಸ್ಥೆ ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ.…

20 hours ago