ಅಂಕಣಗಳು

ಸ್ಮಾರ್ಟ್ ಸಿಟಿ ಎಂಬ ಕನಸು ಮತ್ತು ವಾಸ್ತವ

ಆರ್ಥಿಕ ಅಭಿವೃದ್ಧಿಯ ಹಾದಿಯ ಮಾರುಕಟ್ಟೆ ಪರಿಭಾಷೆಯಲ್ಲಿ ಆಧುನಿಕ/ಅತ್ಯಾಧುನಿಕ ನಗರಗಳನ್ನು ಸೌಂದರ್ಯೀಕರಣದ ಹಂತವನ್ನು ದಾಟಿ ಕೆಲವು ಆಯ್ದ ನಗರಗಳನ್ನು ಸ್ಮಾರ್ಟ್ ಸಿಟಿ ಆಗಿ ಪರಿವರ್ತಿಸುವ ಈ ಆಲೋಚನೆಯ ಹಿಂದೆ, ಕಾರ್ಪೊರೇಟ್ ಹಿತಾಸಕ್ತಿ, ಬಂಡವಾಳದ ಲಾಭ ಹಾಗೂ ಹೂಡಿಕೆದಾರರ ರಿಯಲ್ ಎಸ್ಟೇಟ್ ಮತ್ತು ಔದ್ಯಮಿಕ ಹಿತಾಸಕ್ತಿಯೂ ಇರುತ್ತದೆ. ಭಾರತ ವಿಕಸಿತ ಆಗುವತ್ತ ಸಾಗುತ್ತಿರುವ ಹಾದಿಯಲ್ಲಿ ಇಂತಹ ಸ್ಮಾರ್ಟ್ ಸಿಟಿಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆ ಸರ್ಕಾರಗಳಿಗೆ ಇರುವುದು ಸಹಜ. ಅಂದರೆ ಇಂತಹ ನಗರಗಳಲ್ಲಿ ವಾಸಿಸುವ ಜನರಿಗೆ ಸಕಲ ಸೌಕರ್ಯಗಳನ್ನು, ಸಂಪನ್ಮೂಲಗಳನ್ನು, ಸಾರಿಗೆ-ಕುಡಿಯುವ ನೀರು- ವಸತಿ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸುವ ಹಾಗೂ ವಸತಿ ಬಡಾವಣೆಗಳನ್ನು ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸುವ , ಕಾರ್ಪೊರೇಟ್ ಬಂಡವಾಳಕ್ಕೆ ಪೂರಕವಾದ ಮಾರುಕಟ್ಟೆ ವ್ಯವಸ್ಥೆಗೆ ಅನುಕೂಲ ಮಾಡಿ ಕೊಡುವ, ರಿಯಲ್ ಎಸ್ಟೇಟ್ ಮತ್ತು ಕೈಗಾರಿಕೋದ್ಯಮಿಗಳಿಗೆ ಬಂಡವಾಳ ಹೂಡಲು ಮುಕ್ತ ಅವಕಾಶಗಳನ್ನು ಕಲ್ಪಿಸುವ ಚಿಂತನೆ ಸ್ಮಾರ್ಟ್ ಸಿಟಿ ಯೋಜನೆಯ ಹಿಂದಿರುತ್ತದೆ.

೨೦೧೪ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನರೇಂದ್ರ ಮೋದಿ ಸರ್ಕಾರ ಘೋಷಿಸಿದ ಆರಂಭಿಕ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಇದೂ ಒಂದು. ಭಾರತದಲ್ಲಿ ನೂರು ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ ಈ ಯೋಜನೆಗೆ ಈಗ ದಶಕ ಕಳೆದಿದೆ. ಅತ್ಯಾಧುನಿಕ ಸಂವಹನ ಸೌಕರ್ಯಗಳನ್ನೊಳಗೊಂಡ ಈ ನಗರಗಳು ಸಾಮಾನ್ಯವಾಗಿ ಪ್ರಮುಖ ಹೆದ್ದಾರಿಗಳಿಗೆ ಹೊಂದಿ ಕೊಂಡಂತೆಯೇ ಇರುವುದು, ಆಪ್ಟಿಕಲ್ ಫೈಬರ್ ನೆಟ್ ವರ್ಕ್ ಹೊಂದಿರುವುದು ಮತ್ತು ಮುಂದಿನ ತಲೆಮಾರಿನ ಮೂಲಸೌಕರ್ಯಗಳನ್ನು (Next Generation Infrastructure) ಸ್ಥಾಪಿಸುವುದು ಈ ನಗರಗಳ ಮೂಲ ಉದ್ದೇಶವಾಗಿರುತ್ತದೆ. ಮೂಲತಃ ೧.೨ ಬಿಲಿಯನ್ ಡಾಲರ್ ಹೂಡಿಕೆಯ ಉದ್ದೇಶದೊಂದಿಗೆ ಘೋಷಿಸಲಾದ ಈ ಮಹತ್ವಾಕಾಂಕ್ಷಿ ಯೋಜನೆಗೆ ಖಾಸಗಿ ಬಂಡವಾಳಿಗರೂ ಬಂಡವಾಳ ಹೂಡಿಕೆ ಮಾಡುವುದರ ಮೂಲಕ ವಿಶ್ವದ ಅತಿದೊಡ್ಡ ಮೂಲ ಸೌಕರ್ಯ ಯೋಜನೆಯಾಗಿ ಇದನ್ನು ಸಾಕಾರಗೊಳಿಸಲಾಗುವುದು ಎಂದು ಸರ್ಕಾರ ೨೦೧೪ರಲ್ಲಿ ಘೋಷಿಸಿತ್ತು. ಇಂತಹ ನೂರು ಸ್ಮಾರ್ಟ್ ಸಿಟಿಗಳನ್ನು ಪ್ರಮುಖ ಬೃಹತ್ ನಗರಗಳ ಸುತ್ತ ಉಪನಗರಗಳಾಗಿ (Satellite Towns) ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲೂ ಘೋಷಿಸಲಾಗಿತ್ತು.

ಇದೇ ವೇಳೆ ಸರ್ಕಾರ ಘೋಷಿಸಿದ ಮೇಕ್ ಇನ್ ಇಂಡಿಯಾ ಯೋಜನೆಯಡಿ ರಿಯಲ್ ಎಸ್ಟೇಟ್ ಹೂಡಿಕೆದಾರರು, ವಿದೇಶಿ ಸರಬರಾಜು ಉದ್ದಿಮೆಗಳು, ಜಾಗತಿಕ ತಂತ್ರಜ್ಞಾನ ಹಾಗೂ ಐಟಿ ಉದ್ದಿಮೆಗಳಿಗೆ ಈ ಸ್ಮಾರ್ಟ್ ಸಿಟಿ ಪ್ರಧಾನ ಆಕರ್ಷಣೆಯಾಗಿ ಕಂಡಿತ್ತು. ೨೦೧೫ರ ವೇಳೆಗೆ ಫ್ರಾನ್ಸ್, ಅಮೆರಿಕ, ಚೀನಾ, ಸ್ವೀಡನ್, ಜರ್ಮನಿ, ಇಸ್ರೇಲ್, ಬ್ರೆಜಿಲ್ ಮತ್ತು ಸಿಂಗಪೂರ್ ಮೊದಲಾದ ೧೪ ದೇಶಗಳು ಇಲ್ಲಿ ಹೂಡಿಕೆಯ ಆಸಕ್ತಿಯನ್ನು ವ್ಯಕ್ತಪಡಿಸಿದ್ದವು. ಬಂಡವಾಳ ಹಾಗೂ ಹಣಕಾಸು ಸೌಲಭ್ಯವನ್ನು ಒದಗಿಸುವ ವಿಶ್ವಬ್ಯಾಂಕ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB) ಮತ್ತು ಯುಎಸ್‌ಎಐಡಿ (USAID) ಮೊದಲಾದ ಸಂಸ್ಥೆಗಳು ಈ ಯೋಜನೆಗೆ ಮುಕ್ತ ಬೆಂಬಲ ಸೂಚಿಸಿದ್ದವು. ಇಲ್ಲಿ ಬಂಡವಾಳ ಹೂಡುವ ಖಾಸಗಿ ಉದ್ದಿಮೆಗಳಿಗೆ, ಐಟಿ ಉದ್ದಿಮೆಗಳಿಗೆ ಬಳಕೆದಾರ ಶುಲ್ಕವನ್ನು (User Charges) ವಿಧಿಸುವ ಮುಕ್ತ ಅಧಿಕಾರವನ್ನು ನೀಡಲಾಗಿತ್ತು. ೭ ಲಕ್ಷ ಕಿಲೋಮೀಟರ್ ವ್ಯಾಪ್ತಿಯ ಬ್ರಾಡ್ ಬ್ಯಾಂಡ್ ಕೇಬಲ್ ಸಂಪರ್ಕವನ್ನು ೨.೫ ಲಕ್ಷ ಗ್ರಾಮಗಳಿಗೆ ವಿಸ್ತರಿಸುವ ಮಹದಾವಕಾಶಕ್ಕಾಗಿ ಗುತ್ತಿಗೆದಾರ ಉದ್ದಿಮೆಗಳು ಹಾತೊರೆಯುತ್ತಿದ್ದವು. ಫ್ರಾನ್ಸ್‌ನ ಥೇಲ್ಸ್ ಉದ್ದಿಮೆಯು ೩,೩೦೦ ಕೋಟಿ ರೂ.ಗಳ ಮಾರುಕಟ್ಟೆಯನ್ನು ಆಕ್ರಮಿಸಲು ಸಜ್ಜಾಗಿತ್ತು. ಆದರೆ ಈ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ಹೊರೆಯಾಗುತ್ತದೆ ಎಂಬ ಆತಂಕವೂ ಸರ್ಕಾರವನ್ನು, ವಿತ್ತಸಚಿವಾಲಯವನ್ನು ಕಾಡತೊಡಗಿತ್ತು.

ತಂತ್ರಜ್ಞಾನದ ನೆಲೆಯಲ್ಲಿ ತಾಂತ್ರಿಕವಾಗಿ ಈ ಕನಸಿನ ಯೋಜನೆಯನ್ನು ಸಾಕಾರಗೊಳಿಸುವುದು ಭಾರತದ ಆರ್ಥಿಕತೆಗೆ ಧಕ್ಕೆ ಉಂಟುಮಾಡಬಹುದು ಎಂಬ ಆತಂಕ ಅರ್ಥಶಾಸ್ತ್ರಜ್ಞರನ್ನೂ, ಆರ್ಥಿಕ ಸಲಹೆಗಾರರನ್ನೂ ಕಾಡತೊಡಗಿತ್ತು. ತತ್ಪರಿಣಾಮವಾಗಿ, ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಯನ್ನು ಈಗಿರುವ ನಗರಗಳನ್ನೇ ನಾವೀನ್ಯಗೊಳಿಸುವ ಮೂಲಕ, ಪುನರ್ ನಿರ್ಮಿಸುವ ಮೂಲಕ, ಅತ್ಯಾಧುನಿಕ ಸಂವಹನ-ಸಂಪರ್ಕ ಸಾಧನೆಗಳನ್ನು ಅಳವಡಿಸಲು ನಿರ್ಧರಿಸಿತ್ತು. ಈ ನವೀಕೃತ ನಗರಗಳಲ್ಲಿ ವಸತಿ, ಶುದ್ಧ ನೀರು, ನಿರಂತರ ವಿದ್ಯುತ್ ಮತ್ತು ಸರಾಗವಾದ ಸಾರಿಗೆ ವ್ಯವಸ್ಥೆಯನ್ನು ರೂಪಿಸಲು ಉದ್ದೇಶಿಸಿತ್ತು. ಖಾಸಗಿ ಕಂಪೆನಿಗಳು ಅಥವಾ ಖಾಸಗಿ-ಸಾರ್ವಜನಿಕ ಭಾಗವಹಿಸುವಿಕೆಯ ವಿಶೇಷ ಉದ್ದೇಶ ವಾಹಕಗಳ (Special Purpose Vehicle)ಮೂಲಕ ಈ ಯೋಜನೆಯನ್ನು ಪೂರೈಸಲು ನಿರ್ಧರಿಸಲಾಗಿತ್ತು.

ಇದರ ನಾಲ್ಕು ಉಪಯೋಜನೆಗಳನ್ನೂ ಒಳಗೊಂಡಂತೆ ಬಿಜೆಪಿ ಸರ್ಕಾರವು Atal Mission for Rejunevation & Urban
Transformation (AMRUT) , ಪ್ರಧಾನ ಮಂತ್ರಿ ವಸತಿ ಯೋಜನೆ ( PMAY-U), , ರಾಷ್ಟ್ರೀಯ ನಗರ ಕಲಿಕಾ ವೇದಿಕೆ ((NLUP) ಮತ್ತು ೨೦೨೨ರ ಹೊತ್ತಿಗೆ ಎಲ್ಲರಿಗೂ ವಸತಿ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷಿ ಉಪಯೋಜನೆಗಳನ್ನು ಹಮ್ಮಿಕೊಂಡಿತ್ತು. ಮೂಲತಃ ೨೦೨೦ರಲ್ಲಿ ತನ್ನ ಮೊದಲ ಹಂತವನ್ನು ಪೂರ್ಣಗೊಳಿಸಬೇಕಿದ್ದ ಈ ಯೋಜನೆಯನ್ನು ಈಗ ೨೦೨೫ರ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ. ಇತ್ತೀಚೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾಗಿರುವ ಮಾಹಿತಿಯ ಅನುಸಾರ ಈ ಗಡುವು ಪೂರ್ಣವಾಗುವವರೆಗೆ ಕೇಂದ್ರ-ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವತಿಯಿಂದ ೪೭,೩೨೦.೨೬ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಪರಿಷ್ಕೃತ ಯೋಜನೆಯ ಸಾಫಲ್ಯ-ವೈಫಲ್ಯ: ಯೋಜನೆಯನ್ನು ಘೋಷಿಸಿ ಪರಿಷ್ಕರಿಸಿದ ನಂತರ, ಸರ್ಕಾರವೇ ನಿಗದಿಪಡಿಸಿದ ಅಂತಿಮ ಗಡುವು ಕೂಡ ಈಗ ಪೂರ್ಣಗೊಂಡಿದ್ದು, ಈ ಅವಧಿಯಲ್ಲಿ ಮೂಲ ಸೌಕರ್ಯಗಳನ್ನು, ಪರಿಶುದ್ಧ ವಾತಾವರಣವನ್ನು ಹಾಗೂ ಉತ್ತಮ ಗುಣಮಟ್ಟದ ಪರಿಹಾರಗಳನ್ನು (Smart Solutions)  ಒದಗಿಸಲಾಗಿದೆಯೇ ಎಂದು ಪರಾಮರ್ಶಿಸಬೇಕಿದೆ. ಈ ಮಿಷನ್ನಿನ ಹಠಾತ್ ನಿಲುಗಡೆಯ ಪರಿಣಾಮವಾಗಿ ಸಾವಿರಾರು ಉದ್ಯೋಗಗಳ ನಷ್ಟವಾಗಿದ್ದು, ಇದು ಹಲವು ಆಯಾಮಗಳ ಅನಿಶ್ಚಿತತೆಗಳಿಗೆ ಕಾರಣವಾಗಿದೆ. SPV ಮತ್ತು ಸಮಗ್ರ ನಿರ್ವಹಣೆ ಮತ್ತು ನಿಯಂತ್ರಣ ಕೇಂದ್ರವು (Integrated Command & Control Centre) ಈಗಾಗಲೇ ಸಿಬ್ಬಂದಿಯನ್ನು ವಜಾ ಮಾಡಲು ಮುಂದಾಗಿದೆ. ಉತ್ತರ ಪ್ರದೇಶ ಸರ್ಕಾರವು ಈ ಕಾರ್ಯಾಚರಣೆಯನ್ನು ಸೀಮಿತಗೊಳಿಸಿದ್ದು, ಕಂಪೆನಿ ಕಾಯ್ದೆಯ ಅನುಸಾರ ಕನಿಷ್ಠ ಸಂಖ್ಯೆಯ ಉದ್ಯೋಗಿಗಳನ್ನು ಮಾತ್ರ ಉಳಿಸಿಕೊಳ್ಳುವುದಾಗಿ ಘೋಷಿಸಿದೆ.

ಈ ಯೋಜನೆಯಡಿಯಲ್ಲೇ ಈಗಾಗಲೇ ಜಾರಿಯಲ್ಲಿದ್ದ ಶುದ್ಧೀಕರಿಸಿದ ಸಮರ್ಪಕ ನೀರು ಪೂರೈಕೆ, ವಿದ್ಯುತ್ ಸಂಪರ್ಕ, ವಸತಿ ಸೌಲಭ್ಯ, ಆರೋಗ್ಯ ಸೇವೆ, ಸಾರಿಗೆ ವ್ಯವಸ್ಥೆ ಮತ್ತು ಘನ ತ್ಯಾಜ್ಯ ನಿರ್ವಹಣೆ, ಭದ್ರತೆ ಮತ್ತು ಬಹುಮುಖ್ಯವಾಗಿ ತಂತ್ರಜ್ಞಾನ ಆಳ್ವಿಕೆ (E-Governance) ಮತ್ತು ಡಿಜಿಟಲೀಕರಣ ಕಾರ್ಯಕ್ರಮಗಳನ್ನು ಪುನರ್ ನವೀಕರಣಗೊಳಿಸಲಾಗುತ್ತಿದೆ. ತಳಮಟ್ಟದಲ್ಲಿ ಸೂಕ್ತವಾದ ವಿಶ್ಲೇಷಣೆ ನಡೆಸಲು ಅನುಕೂಲವಾಗುವಂತಹ ಮಾಹಿತಿ ಎಲ್ಲಿಯೂ ಲಭ್ಯವಾಗುವುದಿಲ್ಲ. ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಹೂಡಿಕೆ ಮಾಡಿರುವ ಕೋಟ್ಯಂತರ ರೂ. ಗಳ ಬಂಡವಾಳ ಫಲಪ್ರದವಾಗಿ ಬಳಕೆಯಾಗಿದೆಯೇ ಅಥವಾ ವ್ಯರ್ಥವಾಗಿದೆಯೇ, ನಗರಗಳು ಉದ್ದೇಶಿತ ಯೋಜನೆಗೆ ಪೂರಕವಾಗಿ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿವೆಯೇ, ಅತ್ಯಾಧುನಿಕ ನಗರ ನಿರ್ಮಾಣದ ಕನಸು ಈಡೇರುವ ಸಾಧ್ಯತೆಗಳಿವೆಯೇ ಇವೇ ಮುಂತಾದ ಪ್ರಶ್ನೆಗಳು, ಪ್ರಶ್ನೆಗಳಾಗಿಯೇ ಉಳಿಯಲಿವೆ. ಉದಾತ್ತ ಚಿಂತನೆ ಮತ್ತು ಕ್ಷಿಪ್ರ ಅಭಿವೃದ್ಧಿಯ ಕಲ್ಪನೆಯೊಂದಿಗೆ ಘೋಷಣೆಯಾದ ಮಹತ್ವಾಕಾಂಕ್ಷಿ ಯೋಜನೆಯ ಈ ವೈಫಲ್ಯದ ಕಾರಣ ಮತ್ತು ಪರಿಣಾಮಗಳನ್ನು ನಗರಾಭಿವೃದ್ಧಿ ತಜ್ಞರು, ಅರ್ಥಶಾಸ್ತ್ರಜ್ಞರು ಅಧ್ಯಯನದ ಮೂಲಕ ಸಾರ್ವಜನಿಕರ ಮುಂದಿಡಬೇಕಿದೆ.

” ಯೋಜನೆಯನ್ನು ಘೋಷಿಸಿ ಪರಿಷ್ಕರಿಸಿದ ನಂತರ, ಸರ್ಕಾರವೇ ನಿಗದಿಪಡಿಸಿದ ಅಂತಿಮ ಗಡುವು ಕೂಡ ಈಗ ಪೂರ್ಣಗೊಂಡಿದ್ದು, ಈ ಅವಧಿಯಲ್ಲಿ ಮೂಲ ಸೌಕರ್ಯಗಳನ್ನು, ಪರಿಶುದ್ಧ ವಾತಾವರಣವನ್ನು ಹಾಗೂ ಉತ್ತಮ ಗುಣಮಟ್ಟದ ಪರಿಹಾರಗಳನ್ನು (smart solutions) ಒದಗಿಸಲಾಗಿದೆಯೇ ಎಂದು ಪರಾಮರ್ಶಿಸಬೇಕಿದೆ”

– ನಾ ದಿವಾಕರ

ಆಂದೋಲನ ಡೆಸ್ಕ್

Recent Posts

ಮ.ಬೆಟ್ಟದ ಆದಾಯವನ್ನು ಹಳ್ಳಿಗಳ ಅಭಿವೃದ್ಧಿಗೆ ಬಳಸಿ ; ಎಂಎಲ್‌ಸಿ ಶಿವಕುಮಾರ್‌ ಒತ್ತಾಯ

ಚಾಮರಾಜನಗರ : ಜಿಲ್ಲೆಯ ಶ್ರೀಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಮೂಲಭೂತ ಸೌಕರ್ಯವನ್ನು ದೇವಾಲಯಕ್ಕೆ ಬರುವ ಆದಾಯದಲ್ಲಿ ಅಭಿವೃದ್ಧಿಪಡಿಸಬೇಕು ಎಂದು…

3 mins ago

6 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಗೃಹಭಾಗ್ಯ : ಸಚಿವ ಬೈರತಿ ಸುರೇಶ್

ಸುವರ್ಣಸೌಧ : ರಾಜ್ಯದ ಪೌರಕಾರ್ಮಿಕರು, ಲೋಡರ್ಸ್, ಯುಜಿಡಿ ಸಹಾಯಕರು, ಕ್ಲೀನರ್ ಗಳು ಸೇರಿದಂತೆ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ…

10 mins ago

ಕಾವೇರಿ,ಕಬಿನಿ ನದಿಗೆ ತ್ಯಾಜ್ಯ : 11 ಸ್ಥಳೀಯ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ಬೆಳಗಾವಿ : ಕಾವೇರಿ, ಕಬಿನಿ, ಅರ್ಕಾವತಿ, ತುಂಗಭದ್ರಾ, ಭದ್ರಾ ಸೇರಿದಂತೆ ವಿವಿಧ ನದಿಗಳಿಗೆ ಸಂಸ್ಕರಿಸದ ಗೃಹ ತ್ಯಾಜ್ಯ ಜಲ ಹರಿಯುತ್ತಿದ್ದು,…

32 mins ago

ಕಾರ್ಮಿಕನ ಮೇಲೆ ಕಾಡಾನೆ ದಾಳಿ : ಸ್ಥಳದಲ್ಲೇ ಸಾವು

ಹನೂರು : ಬಾಳೆಗೊನೆ ಕಟಾವು ಮಾಡಿ ಸ್ವಗ್ರಾಮಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿಮಾಡಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ…

51 mins ago

ಮೈಸೂರು ಮೃಗಾಲಯದಲ್ಲಿ 9 ಮಂದಿ ಮಾತ್ರ ಖಾಯಂ ನೌಕರರಿದ್ದಾರೆ: ಸಚಿವ ಈಶ್ವರ್‌ ಖಂಡ್ರೆ

ಬೆಳಗಾವಿ: ಮೈಸೂರು ನಗರದಲ್ಲಿರುವ ಚಾಮರಾಜೇಂದ್ರ ಮೃಗಾಲಯದಲ್ಲಿ 356 ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಕೇವಲ 9 ಮಂದಿ ಮಾತ್ರ ಖಾಯಂ ನೌಕರರಾಗಿದ್ದಾರೆ…

2 hours ago

ವಿಪಕ್ಷಗಳ ವಿರೋಧದ ಮಧ್ಯೆ ವಿಧಾನಸಭೆಯಲ್ಲಿ ದ್ವೇಷ ಭಾಷಣ ಮಸೂದೆ ಅಂಗೀಕಾರ

ಬೆಂಗಳೂರು: ವಿಧಾನಸಭೆಯಲ್ಲಿ ವಿಪಕ್ಷಗಳ ತೀವ್ರ ವಿರೋಧ ಹಾಗೂ ಗದ್ದಲದ ಮಧ್ಯೆ ಕರ್ನಾಟಕ ದ್ವೇಷಭಾಷಣ ಹಾಗೂ ದ್ವೇಷಾಪರಾಧಗಳ ಪ್ರತಿಬಂಧನ ಮಸೂದೆ 2025ನ್ನು…

2 hours ago