pm narendra modi
ಉಕ್ರೇನ್ ಯುದ್ಧ ನಿಲ್ಲಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಡೆಸುತ್ತಿರುವ ಪ್ರಯತ್ನಗಳು ಫಲಕೊಡುವಸೂಚನೆಗಳು ಕಾಣುತ್ತಿಲ್ಲ. ಯುದ್ಧಕ್ಕೆ ಅಂತ್ಯ ಹಾಡುವ ದಿಸೆಯಲ್ಲಿ ಅಲಾಸ್ಕಾದಲ್ಲಿ ವಾರದ ಹಿಂದೆ ರಷ್ಯಾದ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಮತ್ತು ಟ್ರಂಪ್ ನಡುವೆ ನಡೆದ ಮಾತುಕತೆ ನಂತರ ಆಶಾಭಾವನೆ ಮೂಡಿತ್ತು.
ಈ ಮಾತುಕತೆಯ ಹಿನ್ನೆಲೆಯಲ್ಲಿ ಟ್ರಂಪ್ ಅವರು ಉಕ್ರೇನ್ ಅಧ್ಯಕ್ಷ ಜಲನಸ್ಕಿ ಜೊತೆ ಮಾತುಕತೆ ನಡೆಸಲು ಅವರನ್ನು ಅಮೆರಿಕಕ್ಕೆ ಆಹ್ವಾನಿಸಿದ್ದರು. ಜಲನಸ್ಕಿಯಲ್ಲದೆ ಜರ್ಮನಿ, ಫ್ರಾನ್ಸ್, ಬ್ರಿಟನ್ ಸೇರಿದಂತೆ ಯುರೋಪಿನ ಹಲವು ನಾಯಕರು ಈ ಮಾತುಕತೆಯಲ್ಲಿ ಭಾಗವಹಿಸಿದ್ದರು. ಮಾತುಕತೆಯ ಮಧ್ಯದಲ್ಲಿ ಟ್ರಂಪ್ ಅವರು ಪುಟಿನ್ ಜೊತೆ ಪ್ರತ್ಯೇಕವಾಗಿ ಮಾತನಾಡಿ ಯುದ್ಧ ನಿಲುಗಡೆಯ ಮಾರ್ಗವನ್ನು ವಿವರಿಸಿದ್ದರು. ಮುಖ್ಯವಾಗಿ ಉಕ್ರೇನ್‌ಗೆ ರಷ್ಯಾ ಗಡಿಯಲ್ಲಿ ಮಿಲಿಟರಿ ಭದ್ರತೆ ಕೊಡುವ ವಿಚಾರದಲ್ಲಿ ಒಮ್ಮತ ಮೂಡಿದ್ದನ್ನು ಅವರಿಗೆ ಟ್ರಂಪ್ ವಿವರಿಸಿದರು. ಟ್ರಂಪ್ ಪ್ರಕಾರ ಪುಟಿನ್ ಆ ಸಲಹೆಯನ್ನು ಸ್ವಾಗತಿಸಿದರು.
ಜಲನಸ್ಕಿ ಮತ್ತು ಯುರೋಪಿನ ನಾಯಕರ ಜೊತೆ ನಡೆದ ಮಾತುಕತೆಗಳಲ್ಲಿನ ವಿವರಗಳು ಬಹಿರಂಗವಾಗಿಲ್ಲ. ಆದರೆ ಯುದ್ಧ ನಿಲುಗಡೆಗೆ ಮೊದಲು ಕದನ ವಿರಾಮ ಘೋಷಣೆಯಾಗಬೇಕೆಂಬ ಒತ್ತಾಯ ಜರ್ಮನಿಯ ನಾಯಕರಿಂದ ಕೇಳಿಬಂದಿದೆ. ಅಂತೆಯೇ ಭದ್ರತೆ ವಿಚಾರದಲ್ಲಿ ಇಟಲಿಯ ಪ್ರಧಾನಿ ಬೇರೊಂದು ಸಲಹೆಯನ್ನು ನೀಡಿದರು. ಉಕ್ರೇನ್‌ಗೆ ಅಷ್ಟೇ ಅಲ್ಲ ಇಡೀ ಯೂರೋಪಿಗೆ ಅನ್ವಯವಾಗುವಂಥ ಮಿಲಿಟರಿ ಭದ್ರತಾ ವ್ಯವಸ್ಥೆ ರೂಪಿತವಾಗಬೇಕು ಎಂದು ಹೇಳಿದರು. ಆದರೆ ಈಗಾಗಲೇ ರಷ್ಯಾ ಅತಿಕ್ರಮಿಸಿಕೊಂಡಿರುವ ಉಕ್ರೇನ್ ನ ಪ್ರದೇಶಗಳ ಭವಿಷ್ಯ ಏನು ಎನ್ನುವ ಬಗ್ಗೆ ಚರ್ಚೆಯಾಯಿತೇ ಇಲ್ಲವೇ ಎಂಬುದು ಬಹಿರಂಗವಾಗಿಲ್ಲ.
ಹಾಗೆ ನೋಡಿದರೆ ಅಮೆರಿಕದಿಂದ ಪುಟಿನ್ ರಷ್ಯಾಕ್ಕೆ ವಾಪಸ್ ಆದ ನಂತರ ಹೊರಬಂದಿರುವ ವಿಚಾರಗಳು ಈ ವಿಷಯಗಳನ್ನು ಒಳಗೊಂಡಿವೆ. ಈಗಾಗಲೇ ರಷ್ಯಾದ ವಶದಲ್ಲಿರುವ ಪ್ರದೇಶಗಳನ್ನು ಉಕ್ರೇನ್‌ಗೆ ಹಿಂತಿರುಗಿಸುವ ಪ್ರಶ್ನೆಯೇ ಇಲ್ಲ ಎಂದು ವಿದೇಶಾಂಗ ಸಚಿವ ಸರ್ಜಿ ಲಾವರವ್ ಅವರು ಸ್ಪಷ್ಟಪಡಿಸಿದ್ದಾರೆ. ರಷ್ಯಾ ಅತಿಕ್ರಮಿಸಿಕೊಂಡಿರುವ ಪ್ರದೇಶಗಳನ್ನು ಬಿಟ್ಟುಕೊಡುವುದು ಅನಿವಾರ್ಯ ಎಂಬ ಉಕ್ರೇನ್ ಅಧ್ಯಕ್ಷ ಜಲನಸ್ಕಿ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಲಾವರವ್ ಸ್ಪಷ್ಟನೆ ನೀಡಿದ್ದಾರೆ.
ಜಲನಸ್ಕಿ ಮತ್ತು ಯುರೋಪ್ ನಾಯಕರ ಜೊತೆ ಚರ್ಚೆಯ ನಂತರ ಮಾತನಾಡಿದ ಟ್ರಂಪ್ ಅವರು ಪುಟಿನ್ ಮತ್ತು ಜಲನಸ್ಕಿ ನಡುವೆ ಮಾತುಕತೆಗೆ ವ್ಯವಸ್ಥೆ ಮಾಡುವುದಾಗಿ ಪ್ರಕಟಿಸಿದ್ದರು. ಮೊದಲು ಅವರು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಲಿ ನಂತರ ತಾವೂ ಸೇರಿದ ತ್ರಿಪಕ್ಷೀಯ ಮಾತುಕತೆ ನಡೆಸಬಹುದು ಎಂದು ಟ್ರಂಪ್ ಹೇಳಿದ್ದರು. ಆದರೆ ಈಗ ಅಂಥ ಒಂದು ಸಭೆಯ ಸಾಧ್ಯತೆ ಕಾಣುತ್ತಿಲ್ಲ. ಹತಾಶರಾಗಿರುವ ಟ್ರಂಪ್ ಅವರು ಹತ್ತು ದಿನಗಳ ಕಾಲ ತಾವು ಕಾಯುವುದಾಗಿ, ನಂತರ ಮಾತ್ರ ಮುಂದಿನ ಹೆಜ್ಜೆ ಎಂದು ಇದೀಗ ಪ್ರಕಟಿಸಿದ್ದಾರೆ.
ಪುಟಿನ್ ಮತ್ತು ಜಲನಸ್ಕಿ ನಡುವೆ ಮಾತುಕತೆ ನಡೆಯಬೇಕಾದರೆ ಮೊದಲು ಮೂಲ ಸಮಸ್ಯೆಗಳು ಇತ್ಯರ್ಥವಾಗಬೇಕು. ಅಂದರೆ ಅತಿಕ್ರಮಿತ ಪ್ರದೇಶಗಳು ರಷ್ಯಾಕ್ಕೆ ಸೇರಿದವು ಎಂದು ಜಲನಸ್ಕಿ ಘೋಷಿಸಬೇಕು ಎಂಬುದು ಪುಟಿನ್ ನಿಲುವು. ನ್ಯಾಟೋ ಸದಸ್ಯತ್ವ ಪಡೆಯುವ ಪ್ರಯತ್ನ ನಿಲ್ಲಿಸಬೇಕು. ಯಾವ ಮಿಲಿಟರಿ ಗುಂಪಿಗೂ ಸೇರದೆ ಉಕ್ರೇನ್ ಸ್ವತಂತ್ರ ದೇಶವಾಗಿರಬೇಕು. ಇದು ಆದರೆ ನೇರ ಮಾತುಕತೆ ಬಗ್ಗೆ ಯೋಚಿಸಬಹುದು ಎಂದು ಪುಟಿನ್ ಹೇಳಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ರಷ್ಯಾ ಉಕ್ರೇನ್ ಗಡಿಯಲ್ಲಿ ಯುರೋಪ್ ಮಿಲಿಟರಿ ಕಾವಲು ಹಾಕುವ ಸಲಹೆಯನ್ನು ಪುಟಿನ್ ತಿರಸ್ಕರಿಸಿದ್ದಾರೆ. ಅಂಥ ವ್ಯವಸ್ಥೆಯಲ್ಲಿ ರಷ್ಯಾಕ್ಕೆ ಮತ್ತು ಚೀನಾಕ್ಕೆ ಅವಕಾಶ ಇರಬೇಕು ಎಂಬುದು ಅವರ ವಾದ.
ಪುಟಿನ್ ಅವರ ಈ ಷರತ್ತುಗಳನ್ನು ನೋಡಿದರೆ ಅವುಗಳನ್ನು ಟ್ರಂಪ್ ಅವರಾಗಲೀ, ಜಲನಸ್ಕಿಯಾಗಲೀ ಪೂರೈಸುವ ಸ್ಥಿತಿಯಲ್ಲಿ ಇಲ್ಲ. ಆ ಷರತ್ತುಗಳನ್ನು ಪೂರೈಸುವುದೆಂದರೆ ರಷ್ಯಾಕ್ಕೆ ಉಕ್ರೇನ್ ಶರಣಾದಂತೆಯೇ. ಈ ಪರಿಸ್ಥಿತಿಯಲ್ಲಿ ರಷ್ಯಾದ ಮೇಲೆ ಮತ್ತು ಆ ದೇಶದ ಜೊತೆ ವಾಣಿಜ್ಯ ವ್ಯವಹಾರ ನಡೆಸುತ್ತಿರುವ ದೇಶಗಳ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರಬೇಕೆಂದು ಜಲನಸ್ಕಿ ಒತ್ತಾಯಿಸಿದ್ದಾರೆ. ಟ್ರಂಪ್ ಮುಂದಿನ ಕ್ರಮ ಏನು ಎಂಬುದು ಊಹೆಗೂ ನಿಲುಕದ ವಿಚಾರ. ವಾಸ್ತವ ವಾಗಿ ಉಕ್ರೇನ್ ವಿಚಾರದಲ್ಲಿ ಅವರಿಗೆ ತಲೆಹಾಕಲು ಇಷ್ಟವಿರಲಿಲ್ಲ. ಅದು ಮೂಲಭೂತವಾಗಿ ಯುರೋಪ್‌ನ ಯುದ್ಧ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಆದರೆ ನೊಬೆಲ್ ಶಾಂತಿ ಪ್ರಶಸ್ತಿಯ ಆಸೆ ಅವರ ತಲೆಯಲ್ಲಿ ಹೊಕ್ಕಂತಿದೆ.
ರಷ್ಯಾ ಮತ್ತು ಭಾರತ ಬಹಳ ಕಾಲದಿಂದ ಆಪ್ತ ದೇಶಗಳು. ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರತ ಸ್ವತಂತ್ರ ನಿಲುವು ತಳೆದಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳಬೇಕೆಂಬುದು ಭಾರತದ ನಿಲುವು. ಹಾಗೆಂದೇ ಭಾರತ ಮತ್ತು ರಷ್ಯಾ ನಡುವಣ ವಾಣಿಜ್ಯ ಬಾಂಧವ್ಯವೂ ಮುಂದುವರಿದಿದೆ. ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಪಡೆದು ಅದನ್ನು ಸಂಸ್ಕರಿಸಿ ತನಗೆ ಬೇಕಿರುವಷ್ಟು ಬಳಸಿಕೊಂಡು ಉಳಿದುದನ್ನು ಬೇರೆ ದೇಶಗಳಿಗೆ ಮಾರುತ್ತಿದೆ. ಇದರಿಂದ ಜಾಗತಿಕವಾಗಿ ತೈಲ ಬೆಲೆಗಳು ಸ್ಥಿರವಾಗಿವೆ. ಇಂಥ ವ್ಯವಹಾರವನ್ನು ಅಮೆರಿಕದ ಹಿಂದಿನ ಆಡಳಿತವೂ ಒಪ್ಪಿತ್ತು. ಆದರೆ ಈ ವ್ಯವಹಾರವನ್ನು ಟ್ರಂಪ್ ಬೇರೆಯ ರೀತಿಯೇ ಅರ್ಥೈಸಿಕೊಂಡು ಭಾರತದ ಮೇಲೆ ಮುಗಿಬಿದ್ದಿದ್ದಾರೆ. ಉಕ್ರೇನ್ ಯುದ್ಧವನ್ನು ರಷ್ಯಾ ನಿಲ್ಲಿಸದೆ ಇರುವುದಕ್ಕಾಗಿ ಟ್ರಂಪ್ ಭಾರತವನ್ನು ಶಿಕ್ಷೆಗೆ ಗುರಿಪಡಿಸುತ್ತಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ ಬಂದ ಡೊನಾಲ್ಡ್ ಟ್ರಂಪ್ ದೇಶವನ್ನು ಶ್ರೀಮಂತಗೊಳಿಸುವುದಾಗಿ ಸುಂಕದ ಯುದ್ಧವನ್ನೇ ಆರಂಭಿಸಿದರು. ಎಲ್ಲ ದೇಶಗಳೂ ಅಮೆರಿಕದ ಮಾರುಕಟ್ಟೆಯನ್ನು ಬಳಸಿಕೊಂಡು ಹಣಮಾಡಿಕೊಳ್ಳುತ್ತಿವೆ ಎಂಬುದು ಅವರ ಆರೋಪ. ಹೀಗಾಗಿ ತಾವು ಅಮೆರಿಕಕ್ಕೆ ಬರುವ ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುತ್ತಿರುವುದಾಗಿ ಪ್ರಕಟಿಸಿದರು. ವಿಶ್ವದ ದೇಶಗಳ ಮೇಲೆ ಇಂತಿಷ್ಟು ಎಂದು ಸುಂಕ ವಿಧಿಸಿದರು.
ಸುಂಕ ಹೆಚ್ಚೆಂದು ಭಾವಿಸುವವರು ಮಾತುಕತೆ ಮೂಲಕ ಒಪ್ಪಂದ ಮಾಡಿಕೊಳ್ಳಲೂ ಅವಕಾಶ ಕಲ್ಪಿಸಲಾಯಿತು. ಭಾರತದ ಮೇಲೂ ಶೇ.೨೫ರಷ್ಟು ಸುಂಕ ವಿಧಿಸಿದರು. ಅಂದರೆ ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಮೂಲ ದರಗಳ ಮೇಲೆ ಶೇ.೨೫ ಹೆಚ್ಚುವರಿ ಸುಂಕ ವಿಧಿಸಲು ಆದೇಶ ಹೊರಡಿಸಿದರು. ಈ ವಿಚಾರದಲ್ಲಿ ವಾಣಿಜ್ಯ ಒಪ್ಪಂದ ಮಾಡಿಕೊಳ್ಳುವ ದಿಸೆಯಲ್ಲಿ ಮಾತುಕತೆಗಳು ನಡೆದವು. ಆದರೆ ಒಪ್ಪಂದ ಸಾಧ್ಯವಾಗಲಿಲ್ಲ. ಈ ಮಧ್ಯೆ ಉಕ್ರೇನ್ ಯುದ್ಧದ ವಿಚಾರ ಮುನ್ನೆಲೆಗೆ ಬಂತು. ಭಾರತವು ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾ ತೈಲವನ್ನು ಕೊಂಡು ಸಂಸ್ಕರಿಸಿ ಮಾರುತ್ತಿರುವ ಮತ್ತು ಸಾಕಷ್ಟು ಆದಾಯ ಪಡೆಯುತ್ತಿರುವ ವಿಚಾರ ಟ್ರಂಪ್ ಗಮನಕ್ಕೆ ಬಂತು.
ಭಾರತ ಅಪಾರ ಪ್ರಮಾಣದಲ್ಲಿ ತೈಲ ಕೊಳ್ಳುತ್ತಿರುವುದರಿಂದ ರಷ್ಯಾಕ್ಕೆ ಸಾಕಷ್ಟು ಆರ್ಥಿಕ ಶಕ್ತಿ ಬರುತ್ತಿದೆ. ಅದರಿಂದ ರಷ್ಯಾದ ನಾಯಕರು ಉಕ್ರೇನ್ ಯುದ್ಧ ಮುಂದುವರಿಸಲು ಸಾಧ್ಯವಾಗುತ್ತಿದೆ ಎಂದು ಟ್ರಂಪ್ ಭಾವಿಸಿದರು. ಭಾರತದ ಮೇಲೆ ಹೆಚ್ಚು ಸುಂಕ ವಿಧಿಸಿದರೆ ರಷ್ಯಾದಿಂದ ತೈಲ ಕೊಳ್ಳುವುದನ್ನು ನಿಲ್ಲಿಸುತ್ತದೆ, ಅದರಿಂದ ರಷ್ಯಾಕ್ಕೆ ಹಿನ್ನಡೆಯಾಗುತ್ತದೆ ಎಂದು ಯೋಚಿಸಿದ ಟ್ರಂಪ್ ಭಾರತದ ಮೇಲೆ ಇನ್ನೂ ಶೇ.೨೫ ರಷ್ಟು ಸುಂಕ ವಿಧಿಸಿದರು. ಸಹಜವಾಗಿ ಭಾರತಕ್ಕೆ ಇದು ಆಘಾತಕಾರಿಯಾದ ನಿರ್ಧಾರವಾಗಿತ್ತು.
ಈಗಿನ ಲೆಕ್ಕಾಚಾರದ ಪ್ರಕಾರ ಈ ನಿರ್ಧಾರ ಭಾರತದ ಸುಮಾರು ೪೮ ಬಿಲಿಯನ್ ಡಾಲರ್ ವಸ್ತುಗಳ ಮೇಲೆ ಕೆಟ್ಟಪರಿಣಾಮ ಬೀರಲಿದೆ. ಅಂದರೆ ಅಷ್ಟು ಮೌಲ್ಯದ ವಸ್ತುಗಳು ಮಾರಾಟವಾಗದೆ ಉಳಿಯಬಹುದು. ಇದೊಂದು ರೀತಿಯಲ್ಲಿ ಭಾರತಕ್ಕೆ ಆರ್ಥಿಕ ಹೊಡೆತ. ಈ ಹೊಡೆತದಿಂದ ಪಾರಾಗಲು ಭಾರತ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ. ಬೇರೆ ಮಾರುಕಟ್ಟೆ ಹುಡುಕುವುದು ಅಷ್ಟು ಸುಲಭವಲ್ಲ. ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ವಸ್ತುಗಳ ಮೇಲೆ ಹಾಕಲಾಗುತ್ತಿದ್ದ ಜಿಎಸ್‌ಟಿ ದರಗಳನ್ನು ಇಳಿಸುವ ಪ್ರಯತ್ನ ನಡೆಸಿದೆ. ಸುಂಕದ ಹಾವಳಿಯಿಂದ ನೊಂದ ಉದ್ಯಮ ಗಳಿಗೆ ನೆರವಾಗುವ ದಿಸೆಯಲ್ಲಿಯೂ ಕಾರ್ಯಕ್ರಮಗಳು ರೂಪಿತವಾಗುತ್ತಿವೆ.
ಈ ಬಿಕ್ಕಟ್ಟಿನಿಂದಾಗಿ ಒಂದು ಒಳ್ಳೆಯ ಬೆಳವಣಿಗೆಯಾಗುತ್ತಿದೆ. ಭಾರತ ಮತ್ತು ಚೀನಾ ವಾಣಿಜ್ಯ ಸಂಬಂಧಗಳು ಮತ್ತೆ ಸುಧಾರಿಸುತ್ತಿವೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಲೀ ಅವರು ಭಾರತಕ್ಕೆ ಭೇಟಿ ನೀಡಿದ್ದು ಉಭಯ ದೇಶಗಳ ನಡುವಣ ವಾಣಿಜ್ಯ ಸಂಬಂಧಗಳನ್ನು ಪುನರ್ ಸ್ಥಾಪಿಸುವ ಪ್ರಯತ್ನ ನಡೆಸಿದ್ದಾರೆ. ಭಾರತ ಬಯಸುವ ವಸ್ತುಗಳನ್ನು ಪೂರೈಸಲು ಚೀನಾ ಸಿದ್ಧವಿದೆ ಎಂದು ಹೇಳಿದ್ದಾರೆ. ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಚೀನಾದಲ್ಲಿ ಈ ತಿಂಗಳಾಂತ್ಯಕ್ಕೆ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆಗೆ ಆಹ್ವಾನ ನೀಡಿದ್ದಾರೆ.
ಶೃಂಗ ಸಭೆಯಲ್ಲಿ ಭಾಗವಹಿಸಲು ಮೋದಿ ಅವರು ಒಪ್ಪಿದ್ದಾರೆ. ಟ್ರಂಪ್ ಅವರ ನೀತಿಗಳನ್ನು ಪ್ರತಿರೋಧಿಸಲು ಚೀನಾ ಮತ್ತು ಭಾರತ ಒಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಮಧ್ಯೆ ಭಾರತದ ಮೇಲೆ ಟ್ರಂಪ್ ವಿಧಿಸಿರುವ ಶೇ.೫೦ರ ಸುಂಕದ ನಿರ್ಧಾರವನ್ನು ಪುಟಿನ್ ಖಂಡಿಸಿದ್ದಾರೆ. ತಮ್ಮ ದೇಶಕ್ಕೆ ಹೆಚ್ಚು ರಫ್ತು ಮಾಡಬಹುದೆಂದು ಭಾರತಕ್ಕೆ ಸಲಹೆಮಾಡಿದ್ದಾರೆ. ಕಚ್ಚಾ ತೈಲದ ಮೇಲೆ ಶೇ.೬ರಷ್ಟು ರಿಯಾಯಿತಿ ಘೋಷಿಸಿದ್ದಾರೆ. ಅಮೆರಿಕದ ಬೆದರಿಕೆಗೆ ಭಾರತ ಹೆದರದೆ ರಷ್ಯಾದಿಂದ ಕಚ್ಚಾ ತೈಲ ಆಮದನ್ನು ಮುಂದುವರಿಸಿದೆ. ಈ ಯುದ್ಧದ ಪರಿಣಾಮಗಳು ಗೋಚರವಾಗಲು ಇನ್ನೂ ಕೆಲವು ದಿನ ಬೇಕಿದೆ. ಉಕ್ರೇನ್ ಯುದ್ಧ ಅಂತ್ಯವಾದರೆ ಬಹುಶಃ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ.
” ರಷ್ಯಾ ಮತ್ತು ಭಾರತ ಬಹಳ ಕಾಲದಿಂದ ಆಪ್ತ ದೇಶಗಳು. ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರತ ಸ್ವತಂತ್ರ ನಿಲುವು ತಳೆದಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂಬುದು ಭಾರತದ ನಿಲುವು. ಹಾಗೆಂದೇ ಭಾರತ ಮತ್ತು ರಷ್ಯಾ ನಡುವಣ ವಾಣಿಜ್ಯ ಬಾಂಧವ್ಯವೂ ಮುಂದುವರಿದಿದೆ.”
-ಡಿ.ವಿ.ರಾಜಶೇಖರ
ಬೆಂಗಳೂರು : ರಾಜ್ಯದಲ್ಲಿ ಶೇ 75% ರಷ್ಟು ಸಣ್ಣ ಮತ್ತು ಅತೀ ಸಣ್ಣ ರೈತರಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು…
ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಾಯಾತ್ರೆ ತೆರಳುವುದಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ನಿರ್ಬಂಧ…
ಮೈಸೂರು : ಮುಡುಕುತೊರೆ ಭ್ರಮರಾಂಬ ಸಮೇತ ಶ್ರೀ ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಮತ್ತು ದತ್ತಿ ಇಲಾಖೆ ಹಾಗೂ…
ಹನೂರು : ಪ್ರತಿಯೊಬ್ಬ ವಿದ್ಯಾರ್ಥಿಗೂ ದ್ವಿತೀಯ ಪಿಯುಸಿ ಒಂದು ಪ್ರಮುಖ ಘಟವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಒಂದು ಗುರಿ…
ಉತ್ತರ ಪ್ರದೇಶ: ಇಲ್ಲಿನ ಪ್ರಯಾಗ್‌ರಾಜ್‌ನಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ಭಾರತೀಯ ವಾಯುಪಡೆಯ ಮೈಕ್ರೋಲೈಟ್ ವಿಮಾನವೊಂದು ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳನ್ನು…
ಬೆಂಗಳೂರು: ಕರ್ನಾಟಕದಲ್ಲಿ ಜೀವನೋಪಾಯಕ್ಕೆ ಅದರಲ್ಲೂ ಮಹಿಳೆಯರ ಜೀವನೋಪಾಯಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದರ ಜೊತೆಗೆ ನೃಸರ್ಗಿಕ ಕೃಷಿ ಪದ್ಧತಿಯ ಬಗ್ಗೆ…