ಅಂಕಣಗಳು

ಚಿತ್ರಗಳಿಗೆ ಸಹಾಯಧನ: ಅರವತ್ತನೇ ವರ್ಷದ ಹೊಸ್ತಿಲಲ್ಲಿ ಬೇಕು ಬೇಡಗಳ ಚರ್ಚೆ

ಬಾ.ನಾ.ಸುಬ್ರಹ್ಮಣ್ಯ 

೧೯೬೬-೬೭ನೇ ಆರ್ಥಿಕ ವರ್ಷದಿಂದ ಮೈಸೂರು ರಾಜ್ಯದಲ್ಲಿ ತಯಾರಾಗುವ ಎಲ್ಲ ಚಿತ್ರಗಳಿಗೂ ಸಹಾಯಧನ ನೀಡುವ ಯೋಜನೆ ಜಾರಿಗೆ ಬಂತು. ಅದು ಕನ್ನಡ ಮಾತ್ರವಲ್ಲ, ಕನ್ನಡೇತರ ಚಿತ್ರಗಳಿಗೂಲಾಗೂ ಆಗಿತ್ತು. ಆರಂಭದ ದಿನಗಳಲ್ಲಿ ಕೆಲವು ಪರಭಾಷಾ ಚಿತ್ರಗಳು ಈ ಅವಕಾಶದ ಲಾಭ ಪಡೆದ ಉದಾಹರಣೆಗಳಿವೆ. ಈ ಯೋಜನೆ ಜಾರಿಗೆ ಬಂದಾಗ, ಮನರಂಜನಾ ತೆರಿಗೆಯ ಮೇಲೆ ಸರ್‌ಚಾರ್ಜ್ ವಿಧಿಸಲಾಗಿತ್ತು. ಆ ಹಣವನ್ನು ಚಿತ್ರೋದ್ಯಮದ ಏಳಿಗೆಗಾಗಿ ಬಳಸುವುದಾಗಿ ಅಂದಿನ ಅರ್ಥ ಸಚಿವರು, ತಮ್ಮ ಮುಂಗಡ ಪತ್ರದಲ್ಲಿ ಹೇಳಿದ್ದರು.

ಸರ್‌ಚಾರ್ಜ್ ವಿಷಯಕ್ಕೆ ಬರುವುದಾದರೆ, ೧೯೯೩ರ ವೇಳೆಗೆ ಸರ್ಕಾರ ಸುಮಾರು ೩೦೦ ಕೋಟಿ ರೂ.ಗಳನ್ನು ಈ ಲೆಕ್ಕದಲ್ಲಿ ಸಂಗ್ರಹಿಸಿತ್ತು. ಆದರೆ ಸಹಾಯಧನ, ಮತ್ತಿತರ ಉತ್ತೇಜನಕ್ಕಾಗಿ ಅದರ ಶೇ.೧೦ ಕೂಡ ಚಿತ್ರೋದ್ಯಮಕ್ಕೆ ವಾಪಸ್ ಬಂದಿರಲಿಲ್ಲ. ಈ ಮಾಹಿತಿ, ೧೯೯೪ರ ಮಾರ್ಚ್ ತಿಂಗಳಲ್ಲಿ, ಹಿರಿಯ ಪತ್ರಕರ್ತ ವಿ.ಎನ್.ಸುಬ್ಬರಾವ್ ಅಧ್ಯಕ್ಷತೆಯ ತಜ್ಞರ ಸಮಿತಿ, ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿದೆ.

ಕರ್ನಾಟಕ ಚಲನಚಿತ್ರ ಪತ್ರಕರ್ತರ ವೇದಿಕೆಯು ‘ಕನ್ನಡ ಸಿನಿಮಾ ಅಭಿವೃದ್ಧಿ’ ಕುರಿತು ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಚಲನಚಿತ್ರ ಸಮಗ್ರ ನೀತಿಯನ್ನು ರೂಪಿಸಲು ಪರಿಣತರ ಸಮಿತಿಯನ್ನು ರಚಿಸುವುದಾಗಿ ಅಲ್ಲಿ ಆಶ್ವಾಸನೆ ನೀಡಿದ್ದೇ ಅಲ್ಲದೆ, ವಿ.ಎನ್.ಸುಬ್ಬರಾವ್ ಅಧ್ಯಕ್ಷತೆಯಲ್ಲಿ, ಪಾರ್ವತಮ್ಮ ರಾಜ್‌ಕುಮಾರ್, ಕೆ.ವಿ.ಗುಪ್ತ, ಕುಪ್ಪುಸ್ವಾಮಿನಾಯ್ಡು, ಸುರೇಶ್ ಹೆಬ್ಳೀಕರ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಆರ್.ಲಕ್ಷ್ಮಣ್, ಕ .ಎಸ್. ಎಲ್.ಸ್ವಾಮಿ (ರವಿ), ಟಿ.ಎಸ್.ನರಸಿಂಹನ್, ಟಿ.ಎಸ್.ನಾಗಾಭರಣ, ಭಾರತಿ ವಿಷ್ಣುವರ್ಧನ್ ಹೀಗೆ ಹತ್ತು ಸದಸ್ಯರನ್ನು ನೇಮಿಸಿತು. ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾದರು.

ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಲನಚಿತ್ರೋದ್ಯಮಕ್ಕೆ ಸರ್ಕಾರವು ನೀಡುತ್ತಿರುವ ಸವಲತ್ತುಗಳ ಸಮೀಕ್ಷೆ, ಮನರಂಜನಾ ತೆರಿಗೆ, ಪರವಾನಗಿ ನೀಡಲು ನಿರ್ಧರಿಸುವ ಕ್ರಮ ಮತ್ತು ಏಕಗವಾಕ್ಷಿಯನ್ನು ಪ್ರಾರಂಭಿಸುವ ಬಗ್ಗೆ ರೂಪುರೇಷೆಗಳ ಪರಿಶೀಲನೆ, ಹೆಸರಘಟ್ಟ ಬಳಿ ಚಿತ್ರನಗರಿಯ ನಿರ್ಮಾಣದ ಬಗ್ಗೆ ಇದುವರೆಗೆ ಆಗಿರುವ ಕಾರ್ಯ ಸಮೀಕ್ಷೆ ಮತ್ತು ಖಚಿತ ಮಾರ್ಗ ಸೂಚಿಗಳನ್ನು ಸಿದ್ಧಪಡಿಸಿ, ಈ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಲು ಈ ದಿಸೆಯಲ್ಲಿ ಖಾಸಗೀ ಉದ್ದಿಮೆದಾರರನ್ನು ಆಹ್ವಾನಿಸುವ ಬಗ್ಗೆ, ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಕಂಠೀರವ ಸ್ಟುಡಿಯೋಗಳ ಆಡಳಿತ ವ್ಯವಸ್ಥೆಯ ಪುನರ್ ರಚನೆಯ ಸಾಧ್ಯತೆ, ಕನ್ನಡ ಚಿತ್ರಗಳ ನಿರ್ಮಾಣ ಚಟುವಟಿಕೆಗಳನ್ನು ಉತ್ತಮಪಡಿಸಲು ಅನುವಾಗುವಂತೆ ಸವಲತ್ತುಗಳ ಪರಿಶೀಲನೆ ಸೇರಿದಂತೆ ಹತ್ತು ಹಲವು ವಿಷಯಗಳ ಕುರಿತು ಅಧ್ಯಯನ ಮಾಡಿ, ರಾಜ್ಯದಲ್ಲಿ ಕನ್ನಡ ಚಲನಚಿತ್ರೋದ್ಯಮ ಮುಂದಿನ ಐದು ವರ್ಷಗಳ ಯೋಜನಾವಧಿಯಲ್ಲಿ ಆರೋಗ್ಯದಾಯಕ ಬೆಳವಣಿಗೆ ಬಗ್ಗೆ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸಲಹೆ ನೀಡಲು ಹೇಳಿತು.

ಆಗಿನ್ನೂ ಜಿಎಸ್‌ಟಿ ಬಂದಿರಲಿಲ್ಲ, ಡಿಜಿಟಲ್‌ಗೆ ಸಿನಿಮಾ ಹೊರಳಿರಲಿಲ್ಲ. ತಜ್ಞರ ಸಮಿತಿ ಮಾಡಿದ ಶಿಫಾರಸುಗಳಲ್ಲಿ ಹಲವು ಜಾರಿಗೆ ಬಂದವು. ಚಲನಚಿತ್ರ ಅಕಾಡೆಮಿಯ ಸ್ಥಾಪನೆ ಅವುಗಳಲ್ಲಿ ಒಂದು. ೧೯೯೫-೯೬ರ ಸಾಲಿನಲ್ಲಿ ಅದರ ಸ್ಥಾಪನೆಯ ಪ್ರಸ್ತಾಪವಾದರೂ,ಅದು ನನೆಗುದಿಗೆ ಬಿದ್ದು ಕೊನೆಗೆ ೨೦೦೯ರಲ್ಲಿ ಜೀವ ಪಡೆಯಿತು. ಚಿತ್ರನಗರಿಯ ಯೋಜನೆಗೆ ಈಗ ಜೀವ ಬರುತ್ತಿದೆ. ಅದು ಕೂಡ ಹೆಸರಘಟ್ಟದಲ್ಲಿ ಅಲ್ಲ. ಮೈಸೂರಿನಲ್ಲಿ.

ಸಹಾಯಧನದ ವಿಷಯಕ್ಕೆ ಬರುವುದಾದರೆ, ಮೊದಲು ೩೦,೦೦೦ ರೂ.ಗಳ ಪ್ರಸ್ತಾಪವಿದ್ದು, ನಂತರ ಎಲ್ಲ ಚಿತ್ರಗಳಿಗೂ ೫೦,೦೦೦ ರೂ.ಗಳಂತೆ ನೀಡುವ ಆದೇಶ ಬಂತು. ಮೊದಲು ಎಲ್ಲ ಚಿತ್ರಗಳಿಗೂ ಎಂದಿದ್ದ ಸಹಾಯಧನ ಗುಣಮಟ್ಟದ ಚಿತ್ರಗಳಿಗೆ ಮಾತ್ರ ಎಂದು ನಿರ್ಧರಿಸಲಾಯಿತು. ೧-೧-೧೯೮೬ರಿಂದ ಈ ಮೊತ್ತವನ್ನು ೨.೫ ಲಕ್ಷ ರೂ.ಗಳಿಗೆ ಏರಿಸಲಾಯಿತು. ಆಗ ಕಲಾತ್ಮಕ ಚಿತ್ರಗಳಿಗೆ ಇತರ ಚಿತ್ರಗಳಿಗಿಂತ ಹೆಚ್ಚು ಸಹಾಯಧನ ನೀಡಲಾಗುತ್ತಿದ್ದು, ಅದನ್ನು ೩ ಲಕ್ಷ ರೂ.ಗಳಿಗೆ ಏರಿಸಲಾಯಿತು. ನಂತರ ೧೯೯೦-೯೧ರಲ್ಲಿ ಬಂದ ಆದೇಶ ಈ ಮೊತ್ತವನ್ನು ೨.೫ ಲಕ್ಷ ರೂ.ಗಳಿಂದ ೩.೫ ಲಕ್ಷ ರೂ. ಹಾಗೂ ಕಲಾತ್ಮಕ ಚಿತ್ರಗಳಿಗೆ ೪ ಲಕ್ಷ ರೂ. ಎಂದಾಯಿತು. ೧-೪-೯೩ ರಲ್ಲಿ ಸಹಾಯಧನ ಮೊತ್ತ ರೂ ೩.೫ ಲಕ್ಷದಿಂದ ೪ ಲಕ್ಷಕ್ಕೇರಿತು. ಕಲಾತ್ಮಕ ಚಿತ್ರಗಳು ೫ ಲಕ್ಷ ರೂ. ಪಡೆಯುವಂತಾಯಿತು.

ಸಹಾಯಧನದ ಮೊತ್ತ ೧೦ ಲಕ್ಷ ರೂ.ಗಳಿಗೆ ಏರಿದ್ದು ೧-೪-೧೯೯೬ರಿಂದ. ಅದು ಅರ್ಥಸಚಿವರಾಗಿದ್ದ ಸಿದ್ದರಾಮಯ್ಯನವರ ಮೊದಲ ಮುಂಗಡ ಪತ್ರ ಇರಬೇಕು. ೨೦ ಚಿತ್ರಗಳಿಗೆ ಈ ಸಹಾಯಧನ ಇತ್ತು. ಪ್ರಾದೇಶಿಕ ಭಾಷೆಯ ಚಿತ್ರಗಳು ಇದ್ದರೆ ಅವುಗಳಲ್ಲಿ ಎರಡು ಚಿತ್ರಗಳನ್ನು ಆಯ್ಕೆ ಮಾಡಿ, ಉಳಿದ ೧೮ ಕನ್ನಡ ಚಿತ್ರಗಳಿಗೆ ಎಂದಿತ್ತು. ಮುಂದೆ ಈ ಸಂಖ್ಯೆ ಏರುತ್ತಾ, ಕೊನೆಗೆ ೧೨೫ ಇದ್ದ ಚಿತ್ರಗಳ ಸಂಖ್ಯೆ ೨೦೦ ತಲುಪಿದೆ. ೨೦೨೨ರಿಂದ ಕನ್ನಡ ಮತ್ತು ಇಲ್ಲಿನ ಪ್ರಾದೇಶಿಕ ಭಾಷಾ ಚಿತ್ರಗಳಲ್ಲಿ ಗರಿಷ್ಟ ೨೦೦ ಚಿತ್ರಗಳು ಸಹಾಯಧನ ಪಡೆಯಲಿವೆ.

ಆದರೆ ಈಗ ಉದ್ಯಮದಲ್ಲಿ ಹೊಸದೊಂದು ಚರ್ಚೆ ಆರಂಭವಾಗಿದೆ. ಸರ್ಕಾರ ಈಗ ಸಹಾಯಧನ ನೀಡಬೇಕೇ ಎನ್ನುವ ಚರ್ಚೆ. ಅದರ ಪರ ವಿರೋಧ ಅಭಿಪ್ರಾಯಗಳಿವೆ. ಸಹಾಯಧನ ಬೇಡ ಎನ್ನುವವರದು, ಇದರ ದುರುಪಯೋಗ ಆಗುತ್ತಿದೆ ಎನ್ನುವ ವಾದ. ಸೆಲ್ಯುಲಾಯಿಡ್‌ನಿಂದ ಡಿಜಿಟಲ್‌ಗೆ ಹೊರಳಿದ ನಂತರ, ಸಿನಿಮಾ ನಿರ್ಮಾಣ ಸುಲಭಸಾಧ್ಯವಾಗಿದೆ; ಸಹಾಯ ಧನದ ಮೊತ್ತದ ಅರ್ಧಕ್ಕಿಂತ ಕಡಿಮೆ ವೆಚ್ಚದಲ್ಲಿ ಸುತ್ತಿ, ವಾಮ ಮಾರ್ಗದಲ್ಲಿ ಸಹಾಯಧನ ಪಡೆಯುವವರು ಇದ್ದಾರೆ ಎನ್ನುವುದು ಈ ಮಂದಿಯ ವಾದ. ಕನ್ನಡ ಚಿತ್ರರಂಗದಲ್ಲಿ ಇಂತಹದೊಂದು ಬೆಳವಣಿಗೆ ಚಿತ್ರೋದ್ಯಮದ ಗಮನಕ್ಕೆ ಬಂದಿಲ್ಲ ಎಂದೇನಿಲ್ಲ.

ಹಿಂದಿನ ದಿನಗಳಲ್ಲಿ, ಚಲನಚಿತ್ರ ವಾಣಿಜ್ಯ ಮಂಡಳಿ, ಸಹಾಯಧನ ಕುರಿತಂತೆ, ಕಾಲಕಾಲಕ್ಕೆ ಸಲಹೆ ನೀಡುತ್ತಿತ್ತು. ಈಗ ನೀಡುವುದಿಲ್ಲ ಎಂದೇನಿಲ್ಲ. ಸಹಾಯಧನ ನೀಡುವ ಚಿತ್ರಗಳ ಸಂಖ್ಯೆ ಏರಿಸಿ ಎನ್ನುವ ಸಲಹೆ ಮಾತ್ರ ಈಗ. ಚಿತ್ರಗಳ ಗುಣಮಟ್ಟ ಇಳಿಯುತ್ತಿರುವುದರ ಬಗ್ಗೆ ಅದಕ್ಕೆ ಕಾಳಜಿ ಇದ್ದಂತಿಲ್ಲ. ಈಗ ವಾಣಿಜ್ಯ ಮಂಡಳಿಗೆ ಪರ್ಯಾಯವಾಗಿ ಎನ್ನುವಂತೆ ಬೇರೆ ಸಂಘಟನೆಗಳು ಹುಟ್ಟಿಕೊಂಡಿವೆ. ಕಳೆದ ಏಳೆಂಟು ವರ್ಷಗಳಲ್ಲಿ ಮೂರು ಸಾವಿರ ನಿರ್ಮಾಪಕರು ಸದಸ್ಯರಾಗಿದ್ದಾಗಿ ಒಂದು ಸಂಸ್ಥೆ ಬೆನ್ನು ತಟ್ಟಿಕೊಂಡಿದೆ.

ಸರಾಸರಿ ಮುನ್ನೂರಕ್ಕೂ ಹೆಚ್ಚು ಚಿತ್ರಗಳು ಅಲ್ಲೇ ನಿರ್ಮಾಣ ಆಗುತ್ತವೆ ಎಂದಾಯಿತು. ಅದೊಂದೇ ಅಲ್ಲ ಇನ್ನೂ ಕೆಲವು ಸಂಸ್ಥೆಗಳಿವೆ. ವರ್ಷದಲ್ಲಿ ನಾನೂರರವರೆಗೆ ಚಿತ್ರಗಳು ಪ್ರಮಾಣಪತ್ರ ಪಡೆಯುತ್ತವೆ. ಅವುಗಳೆಲ್ಲ ಬಿಡುಗಡೆಯಾಗುವ ಮಾತು ದೂರವೇ ಉಳಿಯಿತು.

ಸಹಾಯಧನ ಯೋಜನೆ, ಕರ್ನಾಟಕದಲ್ಲಿ ಮಾತ್ರವಲ್ಲ, ಇತರ ರಾಜ್ಯಗಳಲ್ಲೂ ಇದೆ. ಅಲ್ಲಿ ಅದನ್ನು ನೀಡುವ ರೀತಿ ಬೇರೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ೫೦ ಲಕ್ಷ ರೂ.ಗಳಿಂದ ೫ ಕೋಟಿಯ ವರೆಗೆ ಸಹಾಯಧನ ನೀಡಲಾಗುತ್ತಿದೆ. ಆದರೆ ಅದು ನೂರು, ಇನ್ನೂರು ಚಿತ್ರಗಳಿಗೆ ಅಲ್ಲ, ಹೆಚ್ಚೆಂದರೆ ಐವತ್ತು ಚಿತ್ರಗಳು. ಆಯಾ ರಾಜ್ಯಗಳ ಭಾಷೆಯ ಚಿತ್ರಗಳಷ್ಟೇ ಅಲ್ಲದೆ, ದೇಶದ ಇತರ ಭಾಷೆಗಳ ಚಿತ್ರಗಳಿಗೂ ಈ ಸೌಲಭ್ಯ ಇದೆ. ಆ ರಾಜ್ಯದಲ್ಲಿ ಚಿತ್ರೀಕರಿಸುವ ದಿನಗಳು, ಬ ಳಸಿಕೊಂಡ ಅಲ್ಲಿನ ಕಲಾವಿದ ತಂತ್ರಜ್ಞರ ಸಂಖ್ಯೆ, ಚಿತ್ರದಲ್ಲಿ ಬರುವ ಅಲ್ಲಿನ ಭಾಷೆ, ಸಂಸ್ಕ ತಿ ಇತ್ಯಾದಿಗಳ ಮೇಲೆ ಸಹಾಯಧನ ನಿರ್ಧಾರ ಆಗುತ್ತದೆ. ಆ ಮೂಲಕ ಅಲ್ಲಿನ ಪ್ರವಾಸೋದ್ಯಮದ ಪ್ರಚಾರವೋ, ಸಂಸ್ಕೃತಿಯ ಪರಿಚಯವೋ ಆಗುತ್ತದೆ.

ಸಹಾಯಧನ ಬದಲು ನಮ್ಮ ಚಿತ್ರಗಳ ಮೂಲಕ ಸಂದಾಯವಾದ ಜಿಎಸ್‌ಟಿ ಮೊತ್ತವನ್ನು ನಮಗೆ ಕೊಡಿ ಎನ್ನುವ ವರ್ಗವೂ ಇದೆ. ನೆರೆಯ ಆಂಧ್ರಪ್ರದೇಶದಲ್ಲಿ ಇಂತಹದೊಂದು ವ್ಯವಸ್ಥೆ ಇದೆ. ಆದರೆ ಅದು ಎಲ್ಲ ಚಿತ್ರಗಳಿಗೂ ಅಲ್ಲ. ಕಡಿಮೆ ನಿರ್ಮಾಣ ವೆಚ್ಚದ ಚಿತ್ರಗಳಿಗೆ ಮಾತ್ರ. ಅದನ್ನು ಪಡೆಯಲು ಬಯಸುವ ಸಂಸ್ಥೆಗಳು, ಅಲ್ಲಿ ತಮ್ಮ ಸಂಸ್ಥೆಯ ಹೆಸರನ್ನು ನಿಗದಿತ ಶುಲ್ಕ ಕಟ್ಟಿ ನೋಂದಾಯಿಸಬೇಕು. ತೆಲುಗಲ್ಲಿ ಕಡಿಮೆ ವೆಚ್ಚದ ಚಿತ್ರಗಳೆಂದರೆ, ನಾಲ್ಕು ಕೋಟಿ ರೂ.ಗೂ ಕಡಿಮೆ ನಿರ್ಮಾಣ ವೆಚ್ಚದ ಚಿತ್ರಗಳು.

ಕನ್ನಡದಲ್ಲಿ ತಯಾರಾಗುವ ಚಿತ್ರಗಳಲ್ಲಿ ಜನಪ್ರಿಯ ನಟರ, ಹೆಚ್ಚು ಸಂಭಾವನೆ ತೆಗೆದುಕೊಳ್ಳುವ ನಟರ ಚಿತ್ರಗಳನ್ನು ಹೊರತು ಪಡಿಸಿದರೆ, ಉಳಿದ ಚಿತ್ರಗಳ ನಿರ್ಮಾಣ ವೆಚ್ಚ ಎಂಟಂಕಿ ಮುಟ್ಟುವುದಿಲ್ಲ ಎನ್ನುವುದು ಉದ್ಯಮದ ಅನುಭವಸ್ಥರ ಮಾತು.

ಸಹಾಯಧನವೂ ಸೇರಿದಂತೆ ಕನ್ನಡ ಚಿತ್ರರಂಗದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಏನೆಲ್ಲ ಮಾಡಬಹುದು ಎನ್ನುವ ನಿಟ್ಟಿನಲ್ಲಿ ಸಮಗ್ರ ಅಧ್ಯಯನ ನಡೆಸಿ, ವರದಿ ಪಡೆದು, ಹೊಸ ಚಲನಚಿತ್ರ ನೀತಿಯನ್ನು ಪ್ರಕಟಸಬೇಕಾದ ಅಗತ್ಯ ಇದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಚಲನಚಿತ್ರ ನೀತಿಗಳಿವೆ. ಇಲ್ಲಿ ಇನ್ನೂ ಹೊಸ ನೀತಿ ಆಗಿಲ್ಲ. ಮುಂದಿನ ಐದು ವರ್ಷಗಳ ಅವಧಿಗೆ ಎಂದು ರಾಜ್ಯದಲ್ಲಿ ಜಾರಿಯಾದ ಚಲನಚಿತ್ರ ನೀತಿಯ ಆದೇಶ ೨೦೧೧ರ ಮಾರ್ಚ್ ೧೯ರಂದು ಬಂದಿತ್ತು. ೧೪ ವರ್ಷಗಳ ಹಿಂದೆ.

” ೧-೪-೯೩ರಲ್ಲಿ ಸಹಾಯಧನ ಮೊತ್ತ ರೂ. ೩.೫ ಲಕ್ಷದಿಂದ ೪ ಲಕ್ಷಕ್ಕೇರಿತು. ಕಲಾತ್ಮಕ ಚಿತ್ರಗಳು ೫ ಲಕ್ಷ ರೂ. ಪಡೆಯುವಂತಾಯಿತು. ಸಹಾಯಧನದ ಮೊತ್ತ ೧೦ ಲಕ್ಷ ರೂ.ಗಳಿಗೆ ಏರಿದ್ದು ೧-೪-೧೯೯೬ರಿಂದ. ಅದು ಅರ್ಥಸಚಿವರಾಗಿದ್ದ ಸಿದ್ದರಾಮಯ್ಯನವರ ಮೊದಲ ಮುಂಗಡ ಪತ್ರ ಇರಬೇಕು. ೨೦ ಚಿತ್ರಗಳಿಗೆ ಈ ಸಹಾಯಧನ ಇತ್ತು. ಪ್ರಾದೇಶಿಕ ಭಾಷೆಯ ಚಿತ್ರಗಳು ಇದ್ದರೆ ಅವುಗಳಲ್ಲಿ ಎರಡು ಚಿತ್ರಗಳನ್ನು ಆಯ್ಕೆ ಮಾಡಿ, ಉಳಿದ ೧೮ ಕನ್ನಡ ಚಿತ್ರಗಳಿಗೆ ಎಂದಿತ್ತು. ಮುಂದೆ ಈ ಸಂಖ್ಯೆ ಏರುತ್ತಾ, ಕೊನೆಗೆ ೧೨೫ ಇದ್ದ ಚಿತ್ರಗಳ ಸಂಖ್ಯೆ ೨೦೦ ತಲುಪಿದೆ. ೨೦೨೨ರಿಂದ ಕನ್ನಡ ಮತ್ತು ಇಲ್ಲಿನ ಪ್ರಾದೇಶಿಕ ಭಾಷಾ ಚಿತ್ರಗಳಲ್ಲಿ ಗರಿಷ್ಟ ೨೦೦ ಚಿತ್ರಗಳು ಸಹಾಯಧನ ಪಡೆಯಲಿವೆ.”

ಆಂದೋಲನ ಡೆಸ್ಕ್

Recent Posts

ವಾಣಿಜ್ಯ ಸಿಲಿಂಡರ್‌ ಸ್ಟಾಕ್‌ ಇಲ್ಲ: ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು: ರಾಜ್ಯದಲ್ಲಿ ವಾಣಿಜ್ಯ ಸಿಲಿಂಡರ್‌ ಸ್ಟಾಕ್‌ ಇಲ್ಲ. ಹೋಟೆಲ್‌ನವರು ಒಂದು ವಾರ ಸಹಿಸಿಕೊಳ್ಳಲೇಬೇಕು ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ.…

31 mins ago

ನಾಲ್ಕೈದು ದಿನಗಳ ನಂತರ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಪೂರೈಕೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದಾಗಿ ದೇಶದಲ್ಲಿ ಗ್ಯಾಸ್‌ ಸಿಲಿಂಡರ್‌ಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಹಾಗೂ ಮಾಜಿ ಸಿಎಂ…

48 mins ago

ಇರಾನ್‌ ನೂತನ ಸುಪ್ರೀಂ ಲೀಡರ್‌ಗೆ ಕಾಲು ಕಟ್‌, ಕೋಮಾಗೆ ಜಾರಿಗೆ ಮೊಜ್ತಾಬಾ

ಟೆಹರಾನ್:‌ ಇಸ್ರೇಲ್ ಮತ್ತು ಇರಾನ್‌ ನಡುವಿನ ಯುದ್ಧ ಭೀಕರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಇರಾನ್‌ ದೇಶಕ್ಕೆ ಚೇತರಿಸಿಕೊಳ್ಳಲಾಗದ ಆಘಾತ ಎದುರಾಗಿದೆ.…

2 hours ago

ಡಿಕೆಶಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಔತಣಕೂಟ: ಯಾವ ದಿನ ಗೊತ್ತಾ.?

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಕೆಲ ದಿನಗಳ ಹಿಂದೆ ಡಿನ್ನರ್‌ ಸಭೆ ಆಯೋಜಿಸಿದ್ದ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ಕೂಡ ಸಚಿವರಿಗೆ…

2 hours ago

ಇರಾನ್‌-ಇಸ್ರೇಲ್‌ ಸಂಘರ್ಷ ಎಫೆಕ್ಟ್:‌ ರಾಜ್ಯದಲ್ಲಿ ಅಡುಗೆ ಎಣ್ಣೆ ದರ ಏರಿಕೆ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಈಗ ಜನಸಾಮಾನ್ಯರ ಅಡುಗೆ ಮನೆಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ವಾಣಿಜ್ಯ ಬಳಕೆಯ…

3 hours ago

ಹಳೆ ಕೆಸರೆಯ ಕಸ ವಿಲೇವಾರಿ ಘಟಕದಲ್ಲಿ ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಕಸದ ರಾಶಿ

ಮೈಸೂರು: ನಗರದ ಹೊರವಲಯದ ಹಳೆ ಕೆಸರೆ ಸಮೀಪದಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಕಸದ…

4 hours ago