ಅಂಕಣಗಳು

ಡಿಜಿಟಲ್ ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ

ಬಹುಸಂಖ್ಯೆಯ ಜನರ ಜಟಿಲ ಸಮಸ್ಯೆಗಳು ವ್ಯಕ್ತವಾಗುವುದೇ ಮಾಧ್ಯಮ ಸಂಕಥನಗಳಲ್ಲಿ   

ಯಾವುದೇ ಸಂದರ್ಭದಲ್ಲಾದರೂ ಸಂವಹನ ಮಾಧ್ಯಮಗಳು (Communi cation Media)ಎರಡು ಪ್ರಧಾನ ಜವಾಬ್ದಾರಿಗಳನ್ನು ನಿರ್ವಹಿಸುವುದು ಸಹಜ. ಮುದ್ರಣ ಮಾಧ್ಯಮಗಳ ಯುಗದಿಂದ ಡಿಜಿಟಲ್ ಯುಗಕ್ಕೆ ಪ್ರವೇಶಿಸಿರುವ ಭಾರತೀಯ ಸಮಾಜವೂ ಇದಕ್ಕೆ ಹೊರತಲ್ಲ. ರಾಜ್ಯದ ವಿವಿಧ ಸಮಾಜಗಳಲ್ಲಿ, ಪ್ರದೇಶಗಳಲ್ಲಿ ಸಂಭವಿಸುತ್ತಲೇ ಇರುವ ದುರಂತಗಳನ್ನು, ಅನ್ಯಾಯಗಳನ್ನು, ಜನವಿರೋಧಿ ಚಟುವಟಿಕೆ ಗಳನ್ನು ಹಾಗೂ ಮಾನವ ಸಮಾಜವನ್ನೇ ತಲ್ಲಣಗೊಳಿಸುವ ಬೆಳವಣಿಗೆಗಳನ್ನು ಸಮಸ್ತ ಜನತೆಗೂ ತಲುಪಿಸುವ ನೈತಿಕ ಜವಾಬ್ದಾರಿ ಯಾರದು ಎಂದು ನಿರ್ವಚಿಸಬೇಕಾಗುತ್ತದೆ. ಮುದ್ರಣ ಯುಗದಲ್ಲಿ ಪತ್ರಿಕೆಗಳು ಇನ್ನೂ ಮಾರುಕಟ್ಟೆ ನಿಯಂತ್ರಣಕ್ಕೆ ಬರುವ ಮುನ್ನ ರಾಜ್ಯವ್ಯಾಪಿ ಸುದ್ದಿಗಳು ಎಲ್ಲೆಡೆ ಲಭಿಸುತ್ತಿದ್ದವು. ಆದರೆ ತದನಂತರ ಇಡೀ ರಾಜ್ಯವನ್ನು ಕ್ಷಣ ಮಾತ್ರದಲ್ಲಿ ತಲುಪುವ ದೃಶ್ಯ ಮಾಧ್ಯಮಗಳ ವಿದ್ಯುನ್ಮಾನ ವಾಹಿನಿಗಳ ಉಗಮ ಮತ್ತು ಬೆಳವಣಿಗೆಯೂ ಉಂಟಾಗಿದ್ದು, ಪ್ರಸರಣದ ಜವಾಬ್ದಾರಿ ಯನ್ನು ಹಾಗೂ ಸಮಸ್ತ ಜನತೆಗೂ ತಲುಪಿಸುವ ನೈತಿಕ ಹೊಣೆಯನ್ನು ದೃಶ್ಯವಾಹಿನಿಗಳು ಹೊತ್ತುಕೊಂಡವು.

ಈ ಸನ್ನಿವೇಶವನ್ನೂ ದಾಟಿ ಈಗ ಡಿಜಿಟಲ್ ಪ್ಲಾಟ್‌ಫಾರಂಗಳು ಅಥವಾ ವೇದಿಕೆಗಳು, ಸಾಮಾಜಿಕ ಮಾಧ್ಯಮಗಳು (Social media) ಬಂದಿವೆ. ಈ ಸನ್ನಿವೇಶದಲ್ಲಿ ಸುದ್ದಿ ಪ್ರಸರಣದ ಮಾಧ್ಯಮಗಳ ಜವಾಬ್ದಾರಿ ಮತ್ತು ಉತ್ತರ ದಾಯಿತ್ವ ಎರಡೂ ಮುಖ್ಯವಾಗುತ್ತದೆ. ಆದರೆ ಈ ವಿದ್ಯಮಾನವನ್ನು ವಿಶಾಲ ಹಂದರದಲ್ಲಿಟ್ಟು (Wider Canvas) ನೋಡಿದಾಗ ಡಿಜಿಟಲ್ ಯುಗದ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿವೆಯೇ ಎಂಬ ಜಿಜ್ಞಾಸೆ ನಿಸ್ಸಂದೇಹವಾಗಿ ಮೂಡುತ್ತದೆ. ಏಕೆಂದರೆ ಕಳೆದ ಎರಡು ಮೂರು ತಿಂಗಳುಗಳಲ್ಲಿ ಕರ್ನಾಟಕದ ಸಾಮಾಜಿಕ ಪರಿಸ್ಥಿತಿಯನ್ನು ಮತ್ತು ಅಲ್ಲಲ್ಲಿ ನಡೆಯುತ್ತಿರುವ ಘಟನೆಗಳನ್ನು ಸೂಕ್ಷ್ಮವಾಗಿಗಮನಿಸಿ, ಅದೇ ವೇಳೆ ಡಿಜಿಟಲ್ ಮಾಧ್ಯಮದ ಪ್ರಸರಣದ ವೈಖರಿಯನ್ನೂ ಗಮನಿಸಿದಾಗ, ಸಂವಹನ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿವೆ ಎನ್ನುವುದು ಸ್ಪಷ್ಟವಾಗುತ್ತವೆ.

ಇದನ್ನು ಓದಿ: ‘ಕೈ’ಪಾಳೆಯದಲ್ಲಿ ಮುಡಾ ಅಧ್ಯಕ್ಷ ಗಾದಿಗೆ ಹೆಚ್ಚಿದ ಪೈಪೋಟಿ

ಮುಖ್ಯವಾಹಿನಿ ಮಾರುಕಟ್ಟೆ ಮೋಹ: 

ಬಹುತೇಕ ಮುಖ್ಯವಾಹಿನಿಯ ಮಾಧ್ಯಮಗಳು, ಸುದ್ದಿವಾಹಿನಿಗಳು ಕಾರ್ಪೋರೇಟ್ ಮಾರುಕಟ್ಟೆ ನಿಯಂತ್ರಣಕ್ಕೆ ಒಳಪಟ್ಟಿರುವುದರಿಂದ ಇವುಗಳಿಂದ ತಳಸಮಾಜದ ತಲ್ಲಣಗಳಿಗೆ ಸ್ಪಂದಿಸುವಂತಹ ಕಾರ್ಯಕ್ರಮ ಗಳನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ. ಸಭ್ಯತೆ, ಸಂಯಮ, ಸೌಜನ್ಯ ಮೊದಲಾದ ಎಲ್ಲ ಔನ್ನತ್ಯಗಳನ್ನೂ ಕಳೆದುಕೊಂಡಿರುವುದರಿಂದ, ಚರ್ಚೆಗಳೆಲ್ಲವೂ ವ್ಯಕ್ತಿನಿಷ್ಠತೆ/ಪ್ರತಿಷ್ಠೆಗೆ ಸೀಮಿತವಾಗಿ, ಜನತೆಗೆ ಅಗತ್ಯವಾಗಿರುವಂತಹ ಒಳನೋಟಗಳನ್ನು ವ್ಯಕ್ತಪಡಿಸುವಲ್ಲಿ ಸೋಲುತ್ತಿವೆ. ಈ ನಿಟ್ಟಿನಲ್ಲಿ ಕೆಲವು ಅಪವಾದಗಳನ್ನು ಗುರುತಿಸಬಹುದಷ್ಟೆ. ಈ ವಿಶಾಲ ದೃಷ್ಟಿಯಿಂದ ನೋಡಿದಾಗ ಕರ್ನಾಟಕದ ರಾಜಕೀಯ ಪರಿಸ್ಥಿತಿ, ಸಾಮಾಜಿಕ ಸಂಕಟಗಳು, ತಳ ಸಮಾಜದ ತಲ್ಲಣಗಳು ಹಾಗೂ ಸಾಂಸ್ಕೃತಿಕ ವಲಯದ ಪಲ್ಲಟಗಳು ಡಿಜಿಟಲ್ ಯುಗದ ಸಂವಹನ ಸೇತುವೆಗಳಲ್ಲಿ ಹೇಗೆ ಪ್ರಸರಣವಾಗುತ್ತಿವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗೆಯೇ ಈ ಸುದ್ದಿಗಳನ್ನು ಪ್ರಸಾರ ಮಾಡುವಾಗ ವಾಹಿನಿಗಳು ಬಳಸುವ ಪರಿಭಾಷೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕಿದೆ.

ರೋಚಕ ಪರಿಭಾಷೆಯನ್ನು ಖಾಸಗಿ ಯುಟ್ಯೂಬ್‌ಗಳಲ್ಲೂ ಬಳಸುವುದನ್ನು ಹೇಗೆ ನಿಷ್ಕರ್ಷೆ ಮಾಡುವುದು ? ಯಾವುದೇ ಸುದ್ದಿಯ ಒಳಸೂಕ್ಷ್ಮಗಳು ಮತ್ತು ಅವುಗಳ ಗಂಭೀರ ಸ್ವರೂಪದ ಸುದ್ದಿ ನಿರೂಪಣೆಯಲ್ಲಿ ಬಳಸುವ ? ತಲೆಬರಹ (Head Line) ದಲ್ಲಿ ಬಿಂಬಿಸಲ್ಪಡುತ್ತದೆ. ಈ ಪರಿವೆ, ಪರಿಜ್ಞಾನವನ್ನು ರೂಢಿಸಿಕೊಳ್ಳುವುದು ಸಂವಹನ ಸೇತುವೆಗಳಿಗೆ ಬಹಳ ಮುಖ್ಯವಾಗುತ್ತದೆ. ಧಗಧಗ, ಕೊತಕೊತ, ಭಗಭಗ ಮುಂತಾದ ಪರಿಭಾಷೆಗಳು ಸುದ್ದಿಯ ಗಾಂಭೀರ್ಯತೆಯನ್ನು ಮರೆಮಾಚಿ ನೋಡುಗರಿಗೆ ಅಥವಾ ಕೇಳುಗರಿಗೆ ರೋಚಕವಾಗುವುದಕ್ಕೆ ಮಾತ್ರ ಸಾಧ್ಯ. ಮತ್ತೊಂದು ವಾಹಿನಿಯಲ್ಲಿ ಯಾವುದೋ ವಿಷಯಕ್ಕೆ ‘ ಕ್ಯಾಕರಿಸಿ ಉಗಿದ ಸುಪ್ರೀಂಕೋರ್ಟ್’ ಎಂದು ಹೇಳಲಾಗುತ್ತದೆ.

ಸಂಯಮ-ಸಭ್ಯತೆಯ ಕೊರತೆ: 

ಈ ಪದಗಳು ಏನನ್ನು ಸೂಚಿಸುತ್ತವೆ ಎನ್ನುವುದಕ್ಕಿಂತಲೂ, ಹಾದಿ ಬೀದಿಯ ಪರಿಭಾಷೆಯನ್ನೇ ಉನ್ನತ ನ್ಯಾಯಾಲಯದ ವಿಚಾರದಲ್ಲಿಬಳಸುವುದು ಅನುಚಿತ ಅಲ್ಲವೇ? ಇದನ್ನೇ ಸಂಯಮದಿಂದ, ಸಭ್ಯಭಾಷೆಯಲ್ಲಿ ಜನರಿಗೆ ತಲುಪಿಸಲು ಸಾಧ್ಯ. ಹಾಗೆಂದ ಮಾತ್ರಕ್ಕೆ ಮಾಧ್ಯಮಗಳಲ್ಲಿ ಬಳಸುವ ಪದ/ವಾಕ್ಯಗಳು ಸಾಹಿತ್ಯಕ ಅಥವಾ ಗ್ರಾಂಥಿಕ ಸ್ವರೂಪ ಹೊಂದಿರಬೇಕಿಲ್ಲ. ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳುವುದು ಮುಖ್ಯ. ರೋಚಕತೆ ಹುಟ್ಟಿಸುವ ಪದಗಳು ಉನ್ಮಾದ ಉಂಟುಮಾಡುತ್ತವೆಯೇ ಹೊರತು, ವಿಷಯವನ್ನು ಮನದಟ್ಟುಮಾಡಲು ನೆರವಾಗುವುದಿಲ್ಲ.

ಅಧಿಕಾರ ರಾಜಕಾರಣದ ಸುತ್ತಲಿನ ವಿದ್ಯಮಾನಗಳನ್ನು ದಾಟಿ ನೋಡುವ ವಿವೇಚನೆ-ವ್ಯವಧಾನ ಸಂವಹನ ಮಾಧ್ಯಮಗಳಿಗೆ ಇರಬೇಕಾಗುತ್ತದೆ. ಇದನ್ನೂ ಮೀರಿದ ಜವಾಬ್ದಾರಿ ಡಿಜಿಟಲ್-ಯು ಟ್ಯೂಬ್ ಮಾಧ್ಯಮಗಳ ಮೇಲಿರುವುದನ್ನು ಈ ವೃತ್ತಿಯಲ್ಲಿರುವವರು ಗಮನಿಸಬೇಕಿದೆ. ಮುಖ್ಯ ವಾಹಿನಿಗಳು ಮಾರುಕಟ್ಟೆ-ಟಿಆರ್‌ಪಿ ದೃಷ್ಟಿಯಿಂದ ನಿರ್ಲಕ್ಷಿಸುವ ಅಥವಾ ನೆಪಮಾತ್ರಕ್ಕೆ ಪ್ರಸಾರ ಮಾಡುವ, ಜ್ವಲಂತ ಸಾಮಾಜಿಕ ಸಮಸ್ಯೆಗಳನ್ನು,ಆರ್ಥಿಕ ಸಂಕಟಗಳನ್ನು ಮತ್ತು ಸಮಾಜದಲ್ಲಿ ನಿತ್ಯ ಸಂಭವಿಸುತ್ತಿರುವ ಅತ್ಯಾಚಾರ, ಮಹಿಳಾ ದೌರ್ಜನ್ಯಗಳು, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಮುಂತಾದ ಘಟನೆಗಳನ್ನು ಈ ಡಿಜಿಟಲ್ ವೇದಿಕೆಗಳು ಸಮಾಜದ ಮುಂದಿಡಬೇಕಾಗಿದೆ. ಕೇವಲ ‘ಸುದ್ದಿಗಾಗಿ ಸುದ್ದಿ’ ಎನ್ನುವ ಸಂಕುಚಿತ ಮನೋಭಾವನೆಯನ್ನು ಬಿಟ್ಟು, ಈ ಘಟನೆಗಳ ಹಿಂದೆ ಇರಬಹುದಾದ ಸಾಮಾಜಿಕ ಕಾರಣಗಳು, ಅಪರಾಧಿಕ ಜಗತ್ತಿನ ಒಳನೋಟಗಳು ಹಾಗೂ ಇಂತಹ ಅಪರಾಧಗಳಿಗೆ ನಿರಂತರ ಬಲಿಯಾಗುತ್ತಿರುವ ದುರ್ಬಲ ವರ್ಗಗಳ ಬದುಕಿನ ಸಮಸ್ಯೆಗಳ ಸುತ್ತ ಬೆಳಕು ಚೆಲ್ಲುವಂತಹ ಚರ್ಚೆಗಳನ್ನು ಡಿಜಿಟಲ್ ವೇದಿಕೆಗಳು ಸಾರ್ವಜನಿಕರಿಗೆ ಮನದಟ್ಟಾಗುವಂತೆ ನಡೆಸಬೇಕಿದೆ.

ಇದನ್ನು ಓದಿ: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳ ಹಾವಳಿ

ವಾಸ್ತವದ ದುರಂತ ಸನ್ನಿವೇಶ: 

ಇತ್ತೀಚೆಗೆ ಆರ್‌ಎಸ್‌ಎಸ್ ಪಥಸಂಚಲನದ ವಿವಾದಗಳು ಮುಖ್ಯ ವಾಹಿನಿಗಳನ್ನು ಆವರಿಸಿಕೊಂಡಿದ್ದು, ಅನೇಕ ಡಿಜಿಟಲ್ ವೇದಿಕೆಗಳೂ, ಯುಟ್ಯೂಬರ್‌ಗಳೂ ಇದೇ ವಿಷಯದ ಸುತ್ತ ಗಿರಕಿ ಹೊಡೆಯುತ್ತಿರುವುದನ್ನು ಗಮನಿಸಿದಾಗ, ಈ ವಾಹಿನಿಗಳು ಕೂಡ ಜನಾಕರ್ಷಣೆಗಾಗಿಯೇ ಕಾರ್ಯನಿರ್ವಹಿಸುತ್ತಿವೆ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ಮುಖ್ಯವಾಹಿನಿಗಳಿಗೆ ಪೈಪೋಟಿ ನೀಡುವುದಕ್ಕಿಂತಲೂ ಮುಖ್ಯವಾದದ್ದು ಸಮಾನಾಂತರ ಸಂವಹನ ಮಾಧ್ಯಮವಾಗಿ ಬೆಳೆಯಬೇಕಿರುವುದು. ಈ ನಿಟ್ಟಿನಲ್ಲಿ ಕನ್ನಡದ ಖಾಸಗಿ ಯು ಟ್ಯೂಬರ್‌ಗಳು, ಸಾಮಾಜಿಕ ಮಾಧ್ಯಮದ ವೇದಿಕೆಗಳು (Social media platforms)ಬಹುಮಟ್ಟಿಗೆ ವಿಫಲವಾಗಿವೆ. ಕೆಲವು ಅಪವಾದಗಳು ಇರಬಹುದು. ಆದರೆ ಒಟ್ಟಾರೆಯಾಗಿ ನೋಡಿದಾಗ, ಈ ವೈಫಲ್ಯ ಎದ್ದು ಕಾಣುತ್ತದೆ. ಧರ್ಮಸ್ಥಳದ ಅಸಹಜ ಸಾವುಗಳ, ಮಹಿಳಾ ದೌರ್ಜನ್ಯಗಳ ವಿಷಯ ಈ ವಾಹಿನಿಗಳಿಗೆ ‘ಬುರುಡೆ ಪುರಾಣ’ ಎನಿಸುತ್ತದೆ.

ಎಲ್ಲ ವಾಹಿನಿಗಳಲ್ಲೂ ಚರ್ಚೆಗಳು ‘ಧರ್ಮಸ್ಥಳ’ ಕೇಂದ್ರಿತವಾಗಿದೆಯೇ ಹೊರತು, ಅಲ್ಲಿ ಅತ್ಯಾಚಾರ, ಹತ್ಯೆಗೊಳಗಾದ ಹೆಣ್ಣು ಮಕ್ಕಳಾಗಲೀ, ಅವರ ಕುಟುಂಬದ ನೊಂದ ಸದಸ್ಯರಾಗಲೀ ಕೇಂದ್ರ ಬಿಂದು ಆಗಿಲ್ಲ. ಇದು ಮಾಧ್ಯಮ ಲೋಕದ ಆ ಸೂಕ್ಷ್ಮತೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಸಾಮಾಜಿಕ ಮಾಧ್ಯಮ ಎಂಬ ಹಣೆಪಟ್ಟಿ ಹೊಂದಿರುವ ಡಿಜಿಟಲ್ ವೇದಿಕೆಗಳು ‘ ಸಾಮಾಜಿಕ’ ಎಂಬ ಪದದ ಅರ್ಥವನ್ನೇ ಅರ್ಥಮಾಡಿಕೊಳ್ಳದಿರುವುದು ದುರಂತವಲ್ಲವೇ ? ಈ ಕರ್ತವ್ಯವನ್ನು ಎಷ್ಟು ಯು ಟ್ಯೂಬರ್‌ಗಳು, ಇತರ ವೇದಿಕೆಗಳು ನಿಭಾಯಿಸಿವೆ ? ೧ ರಿಂದ ೩ ನಿಮಿಷಗಳ ರೀಲ್ಸ್ ಗಳನ್ನು ವಾಟ್ಸಾಪ್ ಮೂಲಕ ಹಂಚುವುದರಲ್ಲೇ ಕಾಲ ಕಳೆಯುತ್ತಿರುವ ಸಮಾಜದಲ್ಲಿ ಸಾಮಾಜಿಕ ಅರಿವು ಮೂಡಿಸುವ ಒಂದು ಸಾಂವಿಧಾನಿಕ ಜವಾಬ್ದಾರಿ ಈ ವೇದಿಕೆಗಳ ಮೇಲಿದೆ ಅಲ್ಲವೇ ? ಈ ಪ್ರಶ್ನೆಗಳಿಗೆ ಕೇವಲ ಈ ವೇದಿಕೆಗಳು ಮಾತ್ರ ಉತ್ತರಿಸಿದರೆ ಸಾಲದು, ಇಡೀ ಸಮಾಜವೇ ಉತ್ತರಿಸಬೇಕಿದೆ.

ಅಧಿಕಾರ ರಾಜಕಾರಣದ ಸುತ್ತಲಿನ

ವಿದ್ಯಮಾನಗಳನ್ನು ದಾಟಿ ನೋಡುವ

ವಿವೇಚನೆ-ವ್ಯವಧಾನ ಸಂವಹನ ಮಾಧ್ಯಮಗಳಿಗೆ

ಇರಬೇಕಾಗುತ್ತದೆ. ಇದನ್ನೂ ಮೀರಿದ ಜವಾಬ್ದಾರಿ

ಡಿಜಿಟಲ್-ಯು ಟ್ಯೂಬ್ ಮಾಧ್ಯಮಗಳ

ಮೇಲಿರುವುದನ್ನು ಈ ವೃತ್ತಿಯಲ್ಲಿರುವವರು

ಗಮನಿಸಬೇಕಿದೆ

ನಾ.ದಿವಾಕರ

ಆಂದೋಲನ ಡೆಸ್ಕ್

Recent Posts

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

56 mins ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

1 hour ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

2 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

2 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

3 hours ago

ಕಿಚ್ಚ ಸುದೀಪ್‌ ಮಾರ್ಕ್‌ ಟ್ರೈಲರ್‌ ಅದ್ಧೂರಿ ಬಿಡುಗಡೆ

ಬೆಂಗಳೂರು: ನಟ ಕಿಚ್ಚ ಸುದೀಪ್‌ ಅಭಿನಯದ ಮಾರ್ಕ್‌ ಸಿನಿಮಾ ಟ್ರೈಲರ್‌ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್‌ ಕಾರ್ತಿಕೇಯ-ಸುದೀಪ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…

3 hours ago