ದೆಹಲಿ ಕಣ್ಣೋಟ
ದಕ್ಷ ಮತ್ತು ಖಡಕ್ ವ್ಯಕ್ತಿತ್ವದ ಐಎ ಎಸ್ ಅಧಿಕಾರಿ ಟಿ.ಎನ್.ಶೇಷನ್ ಅವರು (೧೯೯೦ರಿಂದ ೧೯೯೬ರ ವರೆಗಿನ ಅವಧಿ) ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ನೇಮಕವಾಗುವವರೆಗೂ ಚುನಾವಣಾ ಆಯೋಗದ ನೀತಿ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗಿರಲಿಲ್ಲ. ಹಣ ಬಲ, ತೋಳ್ಬಲದಿಂದಲೇ ನಡೆಯುತ್ತಿದ್ದ ಚುನಾವಣೆ ಅಕ್ರಮಗಳಿಗೆ ಕಡಿವಾಣ ಹಾಕಿ, ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಟಿ.ಎನ್.ಶೇಷನ್ ಪ್ರಖ್ಯಾತರಾಗಿದ್ದರು. ಚುನಾವಣಾ ಅಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದ ರಾಜಕಾರಣಿಗಳಿಗೆ ಅವರು ಸಿಂಹಸ್ವಪ್ನವಾಗಿದ್ದರು.
ಶೇಷನ್ ನಿವೃತ್ತರಾದ ಬಳಿಕ ಪರಿಸ್ಥಿತಿ ಅವರಿದ್ದಂತಿಲ್ಲದಿದ್ದರೂ ಅವರ ಉತ್ತರಾಧಿಕಾರಿಗಳು ಸುಮಾರು ಹತ್ತನ್ನೆರಡು ವರ್ಷಗಳ ಅವಧಿಯಲ್ಲಿ ತಮ್ಮ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ಶೇಷನ್ ಅವರು ಹಾಕಿಕೊಟ್ಟ ಹೆಜ್ಜೆಯನ್ನು ಇಡುತ್ತಾ ಬಂದರು. ಆದರೂ ಶೇಷನ್ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದರೂ ಚುನಾವಣಾ ಆಯೋಗದ ವ್ಯವಸ್ಥೆಯೊಳಗೆ ಹಲವು ಲೋಪಗಳಿ ದ್ದವು. ಮತಪೆಟ್ಟಿಗೆ ಬದಲಿಗೆ ವಿದ್ಯುನ್ಮಾನ ಮತಯಂತ್ರ ಬಳಕೆ , ಪಕ್ಷಾಂತರ ತಡೆ ಮುಂತಾದ ಕಾಯ್ದೆಗಳನ್ನು ಬಿಗಿಗೊಳಿಸುವ ಆಯೋಗದ ನಿಯಮಾವಳಿಗಳಿಗೆ ತಿದ್ದುಪಡಿ ತಂದರೂ ನೀತಿ ನಿಯಮಗಳೆಲ್ಲವನ್ನೂ ಗಾಳಿಗೆ ತೂರಿದ ರಾಜಕೀಯ ಪಕ್ಷಗಳ ಆಡಂ ಬೊಲದಿಂದ ಚುನಾವಣಾ ಆಯೋಗ ಇನ್ನೂ ತನ್ನ ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕು ಎನ್ನುವಂತೆ ಮತದಾರರು ಹೇಳುವಸ್ಥಿತಿ ಮುಂದು ವರಿದಿರುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ.
ಇದೀಗ ಬಿಹಾರ ವಿಧಾನಸಭೆಯ ಚುನಾವಣೆಗೆ ಇನ್ನು ಮೂರೇ ತಿಂಗಳು ಬಾಕಿ ಇರುವಾಗ ಚುನಾವಣಾ ಆಯೋಗದ ಸುತ್ತ ಅಕ್ರಮಗಳ ವಾಸನೆ ಬರಲು ಶುರುವಾಗಿದೆ. ಮೊದಲೇ ಬಿಹಾರದ ಚುನಾವಣೆ ಎಂದರೆ ಕೇಳಬೇಕೆ? ಅಕ್ರಮಗಳಿಗೆ ಹೆಸರುವಾಸಿಯಾಗಿದೆ. ವಿಧಾನಸಭೆ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯ ಪರಿಷ್ಕರಣೆಯ ಸಿದ್ಧತೆ ನಡೆದಿದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ಒಂದು ತಿಂಗಳ ಹಿಂದೆಯೇ ಕೈಗೊಂಡಿದ್ದು, ಮೊದಲ ಹಂತದ ಪರಿಷ್ಕರಣೆಯ ಕರಡು ಪಟ್ಟಿಯನ್ನು ಶುಕ್ರವಾರ (ಆಗಸ್ಟ್ ೧) ಸಾರ್ವಜನಿಕ ತಿಳಿವಳಿಕೆಗಾಗಿ ಚುನಾವಣಾ ಆಯೋಗ ಪ್ರಕಟಿಸಿದೆ.
ಮತದಾರರ ಕರಡು ಪಟ್ಟಿಯ ಪರಿಷ್ಕರಣೆಗಾಗಿ ೧೨ ದಾಖಲೆಗಳನ್ನು ಮತದಾರರಿಂದ ಆಯೋಗ ನಿರೀಕ್ಷೆ ಮಾಡಿತ್ತು. ಈ ಅಭಿಯಾನಕ್ಕೂ ಮುಂಚೆ ರಾಜ್ಯದಲ್ಲಿ ೭.೮೯ ಕೋಟಿ ಮತದಾರರನ್ನು ನೋಂದಾಯಿಸಿಕೊಳ್ಳಲಾಗಿತ್ತು. ಆದರೆ ಮತದಾರರ ಪಟ್ಟಿಯ ಪರಿಷ್ಕರಣೆಯ ಅಭಿಯಾನ ಕೈಗೊಂಡ ಮೇಲೆ ಈ ಸಂಖ್ಯೆ ೭.೨೪ಕ್ಕೆ ಇಳಿದಿದೆ. ಇದರಿಂದ ಸುಮಾರು ೬೫ ಲಕ್ಷ ಮತದಾರರ ಹೆಸರು ಕಣ್ಮರೆಯಾಗಿದ್ದು, ಚುನಾವಣಾ ಆಯೋಗದ ಕಾರ್ಯವೈಖರಿ, ಪ್ರಾಮಾಣಿಕತೆ ವಿರುದ್ಧ ವಿರೋಧ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.
ಕಳೆದ ಜನವರಿಯಲ್ಲಿದ್ದ ಈ ೬೫ ಲಕ್ಷ ಮಂದಿ ಮತದಾರರು ಈಗ ಎಲ್ಲಿಗೆ ಹೋದರು? ಎನ್ನುವ ಪ್ರಶ್ನೆ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪರಿಷ್ಕರಣೆ ಬಗ್ಗೆ ಅನುಮಾನ ಮೂಡಿಸಿದೆ. ಈ ಕುರಿತು ಅಲ್ಲಿನ ಎನ್ ಡಿ ಎ ಭಾಗವಾಗಿರುವ ಸಂಯುಕ್ತ ಜನತಾದಳ ಮತ್ತು ಅದರ ಪ್ರಮುಖ ಭಾಗೀದಾರಿ ಪಕ್ಷ ಬಿಜೆಪಿ ಹೊರತು ಪಡಿಸಿ ಎಲ್ಲ ರಾಜಕೀಯ ಪಕ್ಷಗಳೂ ಅಚ್ಚರಿ ವ್ಯಕ್ತಪಡಿಸಿವೆ . ಬಿಹಾರದವರೇ ಆದ ಸಾಮಾಜಿಕ ಚಿಂತಕ ಯೋಗೇಂದ್ರ ಯಾದವ್ ಪ್ರಕಾರ ೬೫ ಲಕ್ಷವಲ್ಲ ಸುಮಾರು ೯೫ ಲಕ್ಷ ಮಂದಿ ಮತದಾರರ ಹೆಸರನ್ನು ಪರಿಷ್ಕರಣೆ ಹೆಸರಿನಲ್ಲಿ ತೆಗೆದುಹಾಕಲಾಗಿದೆ.
ವಿಶೇಷ ಮತದಾರರ ಪರಿಷ್ಕರಣೆ ಕಾರ್ಯವನ್ನು ಕೈಗೊಂಡ ಆರಂಭದಲ್ಲೇ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೂಲಕ ಎನ್ ಆರ್ ಸಿ ಯನ್ನು ಜಾರಿಗೆ ತರಲು ಹೊರಟಿದೆ ಎಂದು ವಿರೋಧ ಪಕ್ಷಗಳು ಕೂಗೆಬ್ಬಿಸಿದವು. ಕೆಲವು ದಿನಗಳ ಹಿಂದೆ ನಕಲಿ ಮತದಾರರ ಸಂಖ್ಯೆಯ ವಿಚಾರವಾಗಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿದೇಶಿಯರು ( ನೇಪಾಳ ಸೇರಿದಂತೆ ನೆರೆಹೊರೆ ದೇಶಗಳಿಂದ) ಅಕ್ರಮವಾಗಿ ನುಸುಳಿ ಬಂದವರಾಗಿದ್ದಾರೆ ಎಂದು ಹೇಳಿದ್ದರು. ಆದರೆ ಈ ಆರೋಪವನ್ನು ‘ಇಂಡಿಯಾ ಒಕ್ಕೂಟದ ಪಕ್ಷಗಳು ತಳ್ಳಿಹಾಕಿದವು.
ಆದರೆ ವಿರೋಧ ಪಕ್ಷಗಳು ಸಂಶಯ ವ್ಯಕ್ತಪಡಿಸಿರುವುದಕ್ಕೆ ಚುನಾವಣಾ ಆಯೋಗ ತನ್ನ ಸಿದ್ಧ ಉತ್ತರವನ್ನು ನೀಡಿದೆ. ಈ ಕಣ್ಮರೆಯಾಗಿರುವ ಮತದಾರರು ಬಹುಶಃ ಕಾಯಂ ಆಗಿ ಬಿಹಾರದಿಂದ ಬೇರೆ ಕಡೆಗಳಿಗೆ ವಲಸೆ ಹೋಗಿರಬಹುದು ಹಾಗಾಗಿ ಅವರನ್ನು ಪತ್ತೆ ಹಚ್ಚಲು ಆಗಿಲ್ಲ ಎನ್ನುತ್ತದೆ ಆಯೋಗ. ಚುನಾವಣಾ ಆಯೋಗದ ಪ್ರಕಾರ ಜನವರಿಯಲ್ಲಿ ಸಿದ್ಧಪಡಿಸಿದ್ದ ಪಟ್ಟಿಯನ್ನು ಗಮನಿಸಿದಾಗ ಪಟ್ನಾದಲ್ಲಿ ೩.೯೫ ಲಕ್ಷ ಮತದಾರರು ಸೇರ್ಪಡೆ ಆಗಿಲ್ಲ. ಪಶ್ಚಿಮ ಚಂಪಾರಣ್ಯ, ಮಧುಬನಿ ಮತ್ತು ಗೋಪಾಲ್ ಗಂಜ್ ಜಿಲ್ಲೆಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಸೇರಿಲ್ಲ. ಹಾಗೆಯೇ ಹತ್ತು ಜಿಲ್ಲೆಗಳಲ್ಲಿ ಅಂದರೆ ಪ್ರತಿ ಜಿಲ್ಲೆಗಳಲ್ಲಿ ತಲಾ ಎರಡು ಲಕ್ಷ ಮತ್ತು ಇತರೆ ೧೩ಜಿಲ್ಲೆಗಳಲ್ಲಿ ಸುಮಾರು ಒಂದು ಲಕ್ಷ ಮತದಾರರು ಕಾಣೆಯಾಗಿದ್ದಾರೆ ಎನ್ನುವ ವಿವರವನ್ನು ನೀಡಿದೆ.
ಮತದಾರರ ಪಟ್ಟಿಯಲ್ಲಿನ ಬಡವರ ಹೆಸರನ್ನು ವಿಶೇಷವಾಗಿ ವಿರೋಧ ಪಕ್ಷಗಳಿಗೆ ಬೆಂಬಲವಿರುವ ಕಡೆಗಳಲ್ಲಿ ಕೈಬಿಡಲಾಗಿದೆ. ಬರಲಿರುವ ವಿಧಾನಸಭೆ ಚುನಾವಣೆಯು ನಿಷ್ಪಕ್ಷಪಾತವಾಗಿ ನಡೆಯುವ ಯಾವ ಸೂಚನೆಯೂ ಇಲ್ಲ ಎನ್ನುವ ಟೀಕೆಗಳು ಮುಖ್ಯವಾಗಿ ಕಾಂಗ್ರೆಸ್ ಮತ್ತು ಆರ್.ಜೆ.ಡಿ. ಯದು. ಆದರೆ ಈ ಟೀಕೆಗಳನ್ನು ಗಮನಿಸಿರುವ ಚುನಾವಣಾ ಆಯೋಗವು ರಾಜ್ಯದ ಚುನಾವಣಾ ಆಯೋಗದ ನೇತೃತ್ವದಲ್ಲಿ ಈ ಪಟ್ಟಿಯ ಪರಿಷ್ಕರಣೆ ನಡೆದಿದೆ. ಜೊತೆಗೆ ಈ ಅಭಿಯಾನದಲ್ಲಿ ೧೨ ಪ್ರತಿಪಕ್ಷಗಳ ಏಜೆಂಟರೂ ಭಾಗಿಯಾಗಿ ದ್ದರು. ಇದು ಕರಡು ಪಟ್ಟಿ. ಸೆಪ್ಟೆಂಬರ್ ೧ರವರೆಗೆ ಲೋಪಗಳಿದ್ದರೆ ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದು ಸ್ಪಷ್ಟನೆ ನೀಡಿದೆಯಾದರೂ, ಈ ಭಾರೀ ಪ್ರಮಾಣದ ಮತದಾರರ ಕಣ್ಮರೆ ಆತಂಕಕಕ್ಕೆ ಕಾರಣವಾಗಿದೆ.
ಈ ವಿಷಯವಾಗಿ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದು, ಭಾರೀ ಪ್ರಮಾಣದ ಮತದಾರರು ಪಟ್ಟಿಯಿಂದ ಹೊರಗುಳಿದರೆ ನ್ಯಾಯಾಲಯ ಚುನಾವಣಾ ಆಯೋಗದ ಈ ಕಾರ್ಯದಲ್ಲಿ ಮಧ್ಯೆ ಪ್ರವೇಶಿಸಲಿದೆ . ಪಟ್ಟಿಯಿಂದ ತೆಗೆದು ಹಾಕಿರುವವರಲ್ಲಿ ಬಹುತೇಕ ಮಂದಿ ಮೃತಪಟ್ಟಿದ್ದಾರೆ ಎನ್ನುವ ಆಯೋಗದ ವಿವರಣೆಯನ್ನು ಒಪ್ಪದ ನ್ಯಾಯಾಲಯ ಹದಿನೈದು ಹೆಸರುಗಳಲ್ಲಿ ಒಬ್ಬ ವ್ಯಕ್ತಿ ಬಂದು ನಾನು ಸತ್ತಿಲ್ಲ. ಜೀವಂತವಾಗಿದ್ದೇನೆ. ನನ್ನ ಹೆಸರನ್ನು ಕೈಬಿಡಲಾಗಿದೆ ಎಂದು ನಮ್ಮ ಮುಂದೆ ಹೇಳಿದರೆ ಕಠಿಣ ಕ್ರಮಕ್ಕೆ ಮುಂದಾಗಿರುವುದಾಗಿ ಚುನಾವಣಾ ಆಯೋಗಕ್ಕೆ ಖಡಕ್ಕಾಗಿ ಎಚ್ಚರಿಕೆ ನೀಡಿರುವುದು ಪ್ರತಿಪಕ್ಷಗಳ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ.
ಬಿಹಾರದಲ್ಲಿ ಚುನಾವಣಾ ಆಯೋಗದ ಕಾರ್ಯ ವೈಖರಿಯ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಪಾರದರ್ಶಕವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯಲಿದೆಯೇ ಎನ್ನುವ ಸಂಶಯ ವ್ಯಕ್ತವಾಗಿದೆ. ಏತನ್ಮಧ್ಯೆ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅಣತಿ ಯಂತೆ ಕೇಂದ್ರ ಚುನಾವಣಾ ಆಯೋಗ ‘ಮತ ಕಳ್ಳತನ’ ಕಾರ್ಯದಲ್ಲಿ ತೊಡಗಿದೆ. ಈ ಮತಕಳ್ಳತನ ಕಳೆದ ಲೋಕಸಭೆ ಚುನಾವಣೆಯಲ್ಲಿ ಮತ್ತು ಕೆಲವು ತಿಂಗಳ ಹಿಂದೆ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ನಡೆದಿರುವುದಾಗಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸುತ್ತಿದ್ದು, ಇದು ಬಿಹಾರದಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಅವರ ಆರೋಪಕ್ಕೆ ಇಂಬು ಕೊಟ್ಟಂತಾಗಿದೆ.
ಮತ ಕಳ್ಳತನ ದ ಮೂಲಕ ಬಿಜೆಪಿ ಅಽಕಾರ ಹಿಡಿಯುತ್ತಿದೆ. ಈ ಮತಕಳ್ಳತನದ ಬಗೆಗೆ ತಮ್ಮ ಪಕ್ಷದ ಕಾರ್ಯಕರ್ತರು ಕಳೆದ ಆರು ತಿಂಗಳುಗಳಿಂದ ಅಧ್ಯಯನ ಮತ್ತು ಸತ್ಯಶೋಧನೆಯಲ್ಲಿ ತೊಡಗಿದ್ದಾರೆ. ಸುಮಾರು ಒಂದು ಕೋಟಿಗೂ ಹೆಚ್ಚು ಮತಗಳ ಕಳ್ಳತನ ನಡೆದಿದೆ. ತಮ್ಮ ಈ ಆರೋಪ ನೂರಕ್ಕೆ ನೂರರಷ್ಟು ಸತ್ಯ. ಸದ್ಯದಲ್ಲಿಯೇ ತಾವು ಈ ವಿಚಾರ ವಾಗಿ ಮಾತನಾಡುವುದಾಗಿ ಚುನಾವಣಾ ಆಯೋಗ ಮತ್ತು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸವಾಲು ಎಸೆದಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಕರಿಸಿರುವುದು ಮುಂದಿನ ದಿನಗಳ ಬೆಳವಣಿಗೆ ಭಾರೀ ಕುತೂಹಲ ಮೂಡಿಸಿದೆ.
ರಾಹುಲ್ ಗಾಂಧಿ ಅವರ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಚುನಾವಣಾ ಆಯೋಗ ಮುನ್ನೆಚ್ಚರಿಕೆಯಾಗಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಒಂದು ಸುತ್ತು ವಿದ್ಯುನ್ಮಾನ ಯಂತ್ರಗಳ ಮರುಪರಿಶೀಲನೆ ನಡೆಸಿದೆ. ಇಂತಹದ್ದೇ ಮತಕಳ್ಳತನ ಕರ್ನಾಟಕದ ಕೆಲವು ಕಡೆ ನಡೆದಿರುವುದಾಗಿ ರಾಹುಲ್ ಆರೋಪಿಸಿದ್ದು, ತಮ್ಮ ಈ ಹೋರಾಟವನ್ನು ಕರ್ನಾಟಕದಿಂದಲೇ ಆ. ೫ರಿಂದ ಆರಂಭಿಸುವುದಾಗಿ ಹೇಳಿರುವುದು ಮತ್ತಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
“ಬಿಹಾರದಲ್ಲಿ ಚುನಾವಣಾ ಆಯೋಗದ ಕಾರ್ಯ ವೈಖರಿಯ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಪಾರದರ್ಶಕವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯಲಿದೆಯೇ ಎನ್ನುವ ಸಂಶಯ ವ್ಯಕ್ತವಾಗಿದೆ.”
– ಶಿವಾಜಿ ಗಣೇಶನ್
ಮಂಡ್ಯ: ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್ ಕಾರ್ತಿಕೇಯ-ಸುದೀಪ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ…