ಅಂಕಣಗಳು

ಶಿವಾಜಿ ಗಣೇಶನ್‌ ವಾರದ ಅಂಕಣ: ಹೆಸರಿನಲ್ಲೇನಿದೆ; ಆಡಳಿತದಲ್ಲಿ ಬದಲಾಗಬೇಕು

ದೆಹಲಿ ಕಣ್ಣೋಟ 

ಶಿವಾಜಿ ಗಣೇಶನ್‌

ಬ್ರಿಟಿಷ್ ವಸಾಹತುಶಾಹಿ ಆಡಳಿತದ ಕಾಲದಲ್ಲಿ ಹೆಸರಿಸಲಾಗಿದ್ದ ಸರ್ಕಾರಿ ಕಾರ್ಯಾಲಯಗಳು ಮತ್ತು ರಸ್ತೆಗಳ ಹೆಸರುಗಳನ್ನು ಕೇಂದ್ರದಲ್ಲಿ ಕಳೆದ ಒಂದು ದಶಕದಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಒಂದೊಂದಾಗಿ ಬದಲಾಯಿಸಿಕೊಂಡು ಬರುತ್ತಿದೆ. ತನಗಿರುವ ಸಂವಿಧಾನದತ್ತ ಅಧಿಕಾರದಂತೆ ಹಿಂದಿನ ಹೆಸರುಗಳನ್ನು ಬದಲಾಯಿಸಿ ಸ್ಥಳೀಯ ಆಡಳಿತ ಮತ್ತು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಹೆಸರುಗಳನ್ನು ಪುನರ್ ನಾಮಕರಣ ಮಾಡಲಾಗುತ್ತಿದೆ. ಈಗ ರಾಜ್ಯಪಾಲರ ವಸತಿ ಮತ್ತು ಕಾರ್ಯಾಲಯ ಹೊಂದಿರುವ ‘ರಾಜ ಭವನ’ಇನ್ನು ಮುಂದೆ ‘ಲೋಕ ಭವನ’ಅಂದರೆ ಹಿಂದಿಯಲ್ಲಿ ಕರೆಯುವ ಜನತಾ ಹೆಸರಿನ ಭವನಗಳನ್ನಾಗಿ ಮಾರ್ಪಡಿಸಲಾಗುತ್ತಿದೆ. ಇಂತಹ ಕೆಲವು ಕ್ರಮಗಳು ಸ್ವಾಗತಾರ್ಹ ಎನ್ನಲು ಅಡ್ಡಿಯಿಲ್ಲ.

ರಾಷ್ಟ್ರಪತಿ ಭವನದ ಕರ್ತವ್ಯಪಥ್ (ಹಿಂದೆ ರಾಜ್ ಪಥ್) ನಲ್ಲಿರುವ ಪ್ರಧಾನ ಮಂತ್ರಿಗಳ ಕಾರ್ಯಾಲಯವಿರುವ ಸೌತ್ ಬ್ಲಾಕ್ ಇನ್ನು ಮುಂದೆ ಹೊಸ ಕಾಂಪ್ಲೆಕ್ಸ್ ಗೆ ಬದಲಾಗಲಿದೆ. ಈ ಹೊಸದಾದ ಕಾರ್ಯಾಲಯವನ್ನು ‘ಸೇವಾತೀರ್ಥ’ ಎಂದು ಮತ್ತು ಕೇಂದ್ರ ಸರ್ಕಾರದ ಕಾರ್ಯಾಲಯವನ್ನು ‘ಕರ್ತವ್ಯ ಭವನ’ ಎಂದು ಪುನರ್ ನಾಮಕರಣ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಽಕಾರಕ್ಕೆ ಬಂದ ಬಿಜೆಪಿ ಹಳೆಯ ಹೆಸರುಗಳನ್ನು ಬದಲಾಯಿಸುತ್ತಿದೆ. ಪಂಡಿತ್ ಜವಾಹರ್ ಲಾಲ್ ನೆಹರೂ ಆಡಳಿತದ ಅವಧಿಯಲ್ಲಿ ಅಂದರೆ ೧೯೫೦ರಲ್ಲಿ ಸ್ಥಾಪಿತಗೊಂಡಿದ್ದ ‘ಯೋಜನಾ ಭವನದ’ ಹೆಸರನ್ನು ಮೋದಿ ಅವರು ೨೦೧೬ರಲ್ಲಿ ‘ನೀತಿ ಆಯೋಗ’ವನ್ನಾಗಿ ಪರಿವರ್ತಿಸಿದರು. ೧೯೨೭ರಲ್ಲಿ ನಿರ್ಮಾಣಗೊಂಡ ಸಂಸತ್ ಭವನವನ್ನು ಈಗ ‘ಸಂವಿಧಾನ ಭವನ’ ಎಂದು ಹೆಸರಿಸಲಾಗಿದೆ. ಹೊಸ ಸಂಸತ್ ಭವನಕ್ಕೆ ಇನ್ನೂ ಹೊಸ ಹೆಸರನ್ನು ಇಡಲಾಗಿಲ್ಲ.

ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗಿನ ರಾಜ್ ಪಥ್ ಹೆಸರನ್ನು ೨೦೨೨ರಲ್ಲಿ ‘ಕರ್ತವ್ಯ ಪಥ್’ ಆಗಿ ಬದಲಾಯಿಸಲಾಯಿತು. ಪ್ರಧಾನ ಮಂತ್ರಿಗಳ ನಿವಾಸವಿರುವ ರೇಸ್ ಕೋರ್ಸ್ ಮಾರ್ಗವನ್ನು ೨೦೧೬ರಲ್ಲಿಯೇ ‘ಕಲ್ಯಾಣ್ ಮಾರ್ಗ’ವನ್ನಾಗಿ ಪುನರ್ ನಾಮಕರಣ ಮಾಡಲಾಯಿತು. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಪ್ರತ್ಯೇಕವಾಗಿಯೆ ಬೇರೆ ಬೇರೆ ಕಟ್ಟಡಗಳಲ್ಲಿವೆ. ಆಯಾ ಸಚಿವಾಲಯಗಳ ಹೆಸರಿನಲ್ಲಿ ಈ ಕಟ್ಟಡಗಳಿವೆ. ದೇಶದ ರಾಜಧಾನಿಯ ಸರ್ಕಾರಿ ಕಚೇರಿಗಳು ಮತ್ತು ರಸ್ತೆಗಳ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸುತ್ತಿದ್ದರೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಮೊಘಲ್ ದೊರೆಗಳ ಹೆಸರುಗಳನ್ನು ಬದಲಾವಣೆ ಮಾಡುತ್ತಾ ಹಿಂದೂ ರಾಷ್ಟ್ರದ ಪರಿಕಲ್ಪನೆಯ ಸೃಷ್ಟಿಯಲ್ಲಿ ನಿರತವಾಗಿರುವುದು ಈಗಿನ ಬೆಳವಣಿಗೆ.

ಈ ಹೆಸರುಗಳ ಬದಲಾವಣೆಯಿಂದ ಕೆಲವರಿಗೆ ಮತ್ತು ಕೆಲವು ದಿನಗಳವರೆಗೆ ಗೊಂದಲ ಮತ್ತು ಕಿರಿಕಿರಿ ಆಗುವುದು ಸಹಜ. ಆದರೆ ಅದು ಮುಂದೆ ಹೊಸತನಕ್ಕೆ ನಮ್ಮ ನಾಲಗೆ ಮತ್ತು ಮನಸ್ಸು ಒಗ್ಗಿಕೊಳ್ಳಲಿದೆ.  ಈ ಬದಲಾವಣೆಯು ಈಗ ದೇಶದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ಗೂ ವಿಸ್ತರಿಸಿದೆ. ನ್ಯಾಯಾಧೀಶರನ್ನು ಉದ್ದೇಶಿಸಿ ವಕೀಲರು ತಮ್ಮ ವಾದ ಮಂಡನೆ ಮಾಡುವ ಮುನ್ನ ಮೈ ಲಾರ್ಡ್ ಎನ್ನುವ ಪದದ ಬದಲಾವಣೆ ಇನ್ನೂ ಚರ್ಚೆಯ ಹಂತದಲ್ಲಿಯೇ ಇದೆ. ಆದರೆ ಕಳೆದ ತಿಂಗಳು ನಿವೃತ್ತರಾದ ಮುಖ್ಯನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಫ್ಯೂಡಲ್ ಸಂಸ್ಕೃತಿಯನ್ನು ಮತ್ತು ಜಾತಿಗಳ ಕಸುಬುಗಳನ್ನು ಸೂಚಿಸುವ ಕೆಳಮಟ್ಟದ ಸಿಬ್ಬಂದಿಯ ಹುದ್ದೆಗಳ ಹೆಸರುಗಳನ್ನು ಬದಲಾಯಿಸಲು ಶಿಫಾರಸು ಮಾಡಿದ್ದಾರೆ. ಉದಾಹರಣೆಗೆ ಹಲಾಲ್ಕೋರ್ (ಸ್ಕಾವೆಂಜರ್ )ಹೆಸರನ್ನು ಸ್ಯಾನಿಟಟೇಷನ್ ಅಸಿಸ್ಟೆಂಟ್, ದೋಬಿ ಎಂದು ಕರೆಯುವುದನ್ನು ಇನ್ನು ಮುಂದೆ ಲಾಂಡರಿ ಆಪರೇಟರ್ , ಕೂಲಿ ಹೆಸರನ್ನು ಸರಕು ಸಾಗಣೆ ಸಹಾಯಕ, ಬಸ್ತಾ ಬರ್ದಾರ್ ಹೆಸರನ್ನು ಡಾಕ್ಯುಮೆಂಟ್ ಹ್ಯಾಂಡ್ಲರ್, ಮಸ್ಲಾಚಿ ಹೆಸರನ್ನು ಅಡುಗೆ ಸಹಾಯಕ ಮತ್ತು ಮಲನ್ ಹೆಸರನ್ನು ತೋಟಗಾರಿಕೆ ಸಹಾಯಕ ಎಂದು ಕರೆಯಬೇಕೆಂದು ಸೂಚಿಸಲಾಗಿದೆ.

ನಮ್ಮಲ್ಲಿ ಇನ್ನೂ ಹಲವಾರು ಜಾತಿ ಹೆಸರುಗಳು ಸಾಮಾಜಿಕವಾಗಿ ಅವಮಾನಕ್ಕೀಡಾಗುವಂಥವು ಚಾಲ್ತಿಯಲ್ಲಿವೆ. ಬಹುತೇಕ ಮಂದಿ ತಮ್ಮ ಫ್ಯೂಡಲ್ ಮನಃಸ್ಥಿತಿಯನ್ನು ಅನೇಕ ಬಾರಿ ಸಾರ್ವಜನಿಕವಾಗಿ ಪ್ರದರ್ಶಿಸುತ್ತಿರುವುದನ್ನು ಕಾಣುತ್ತೇವೆ. ಪಾಳೇಗಾರಿಕೆ ಮನಸ್ಸಿನ ಮತ್ತು ಹೊಸತನಕ್ಕೆ ಹಾಗೂ ಸಮಾನತೆಗೆ ಒಗ್ಗಿಕೊಳ್ಳದ ಹಲವರು ಅವಮಾನಿತ ಜಾತಿಗಳ ಹೆಸರನ್ನು ಬಳಸುವ ಮೂಲಕ ಸಂಬಂಽಸಿದ ಜಾತಿಯ ಸ್ವಾಭಿಮಾನಿ ಮನಸ್ಸಿನ ಜನರಿಂದ ಪ್ರತಿಭಟನೆಯನ್ನು ಎದುರಿಸುತ್ತಿರುವುದನ್ನು ಕಾಣುತ್ತಿದ್ದೇವೆ.

ಸರ್ಕಾರಿ ಕಚೇರಿಗಳ ಕಟ್ಟಡ ಮತ್ತು ರಸ್ತೆಗಳ ಹೆಸರುಗಳ ಬದಲಾವಣೆ ಮಾಡುವಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ಉತ್ಸಾಹ ಮತ್ತು ಉದ್ದೇಶ ಕೇವಲ ಹೆಸರಿಗಷ್ಟೇ ಉಳಿಯ ಬಾರದು. ಬದಲಾವಣೆ ಎನ್ನುವುದು ಕಾಯ್ದೆ ಕಾನೂನುಗಳನ್ನು ಹೊಂದಿರುವ ನಮ್ಮ ಸಂವಿಧಾನದ ಆಶಯಗಳನ್ನು ಬಿಂಬಿಸಿದಾಗ ಮಾತ್ರ ಬದಲಾವಣೆಗೆ ನಿಜವಾದ ಅರ್ಥ ಬರುತ್ತದೆ. ಆಗ ಬದಲಾವಣೆ ಎನ್ನುವುದು ಸಹಜವಾಗಿ ಜಗದ ನಿಯಮ ಎನ್ನುವ ನಂಬಿಕೆ ಮನನವಾಗುತ್ತದೆ.

ಮೇಲೆ ಪ್ರಸ್ತಾಪಿಸಿದ ಈ ಹೊರ ನೋಟದ ಹೆಸರುಗಳು ಬದಲಾದಂತೆ ಆಡಳಿತದ ವೈಖರಿಯೂ ಬದಲಾಗಬೇಕು. ಸಂವಿಧಾನವನ್ನು ರಚಿಸಿ ಅದನ್ನು ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ಸಲ್ಲಿಸಿದ ನಂತರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಾವು ರಚಿಸಿದ ಸಂವಿಧಾನವನ್ನುಕುರಿತು ‘ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಆಡಳಿತ ನಡೆಸುವ ಮಂದಿ ಒಳ್ಳೆಯವರಾಗಿ ಸಂವಿಧಾನಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸಿದರೆ ಅದು ಒಳ್ಳೆಯ ಸಂವಿಧಾನವಾಗುತ್ತದೆ. ಇದನ್ನು ಜಾರಿಗೆ ತರುವ ಜಾಗದಲ್ಲಿ ಕೆಟ್ಟ ವ್ಯಕ್ತಿ ಇದ್ದರೆ ಅದು ಕೆಟ್ಟ ಸಂವಿಧಾನವಾಗುತ್ತದೆ’ ಎಂದು ಹೇಳಿರುವುದು ಇಲ್ಲಿ ಉಲ್ಲೇಖನೀಯ.

ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ತಮ್ಮ ಅಧಿಕಾರಾವಧಿ ಮುಗಿಯುವ ಕೊನೆಯ ದಿನಗಳಲ್ಲಿ ನೀಡಿದ ಒಂದೆರಡು ತೀರ್ಪುಗಳು ವಿವಾದಕ್ಕೆ ಎಡೆಮಾಡಿಕೊಟ್ಟಿರುವುದನ್ನು ಇಲ್ಲಿ ಪ್ರಸ್ತಾಪಿಸಬೇಕಿದೆ. ನ್ಯಾಯಾಲಯವು ಕೂಡ ಇತ್ತೀಚಿನ ದಿನಗಳಲ್ಲಿ ತನ್ನ ತೀರ್ಪುಗಳನ್ನು ಉಲ್ಲೇಖಿಸುವ ಮತ್ತು ಅದನ್ನು ವ್ಯಾಖ್ಯಾನಿಸುವ ಮತ್ತು ಚರ್ಚಿಸುವುದಕ್ಕೆ ಆಕ್ಷೇಪವೇನಿಲ್ಲ ಎಂದು ಹಲವು ಬಾರಿ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ.

ಇತ್ತೀಚಿನ ದಿನಗಳಲ್ಲಿ ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳು ಮತ್ತು ರಾಜ್ಯಪಾಲರುಗಳ ನಡುವೆ ಆಂತರಿಕ ಮುಸುಕಿನ ಗುದ್ದಾಟ ನಡೆದಿರುವುದು ಈಗ ಬಟಾಬಯಲಾಗಿದೆ. ತಮಿಳುನಾಡು ವಿಧಾನಸಭೆಯು ಅಂಗೀಕರಿಸಿದ ಸುಮಾರು ಹನ್ನೆರಡು ಮಸೂದೆಗಳಿಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ರಾಜ್ಯಪಾಲರು ಸಹಿ ಹಾಕದೆ ಅವುಗಳನ್ನು ರಾಷ್ಟ್ರಪತಿಗಳ ವಿವೇಚನೆಗೂ ಕಳುಹಿಸದೆ ವಿಳಂಬ ಮಾಡುತ್ತಿದ್ದ ಪ್ರಕರಣದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಹೋಗಿತ್ತು. ಏಪ್ರಿಲ್ ೮ರಂದು ಇಬ್ಬರು ನ್ಯಾಯಮೂರ್ತಿಗಳಿದ್ದ ಪೀಠವು ರಾಜ್ಯ ಸರ್ಕಾರವು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಿದ ಮಸೂದೆಗಳಿಗೆ ಮೂರು ತಿಂಗಳ ಒಳಗೆ ತಮ್ಮ ಒಪ್ಪಿಗೆ ನೀಡಬೇಕು. ಅನವಶ್ಯಕವಾಗಿ ಮಸೂದೆಗಳಿಗೆ ಸಹಿ ಹಾಕದೆ ವಿಳಂಬ ಮಾಡಬಾರದು ಎಂದು ಸಂವಿಧಾನದ ಆರ್ಟಿಕಲ್ ೧೪೨ನ್ನು ಉಲ್ಲೇಖಿಸಿ ಹೇಳಿತ್ತು.

ಈ ತೀರ್ಪಿನ ಸಂಬಂಧ ರಾಷ್ಟ್ರಪತಿಗಳು ಹದಿನಾಲ್ಕು ಪ್ರಶ್ನೆಗಳನ್ನು ಸುಪ್ರೀಂ  ಕೋರ್ಟಿಗೆ ಕಳುಹಿಸಿದ್ದರು. ಈ ಸಂಬಂಧ ಮುಖ್ಯನ್ಯಾಯಮೂರ್ತಿಗಳಿದ್ದ ಪೀಠವು ನವೆಂಬರ್ ೨೦ ತಮ್ಮ ತೀರ್ಪು ನೀಡಿ ಆರ್ಟಿಕಲ್ ೨೦೦ ಮತ್ತು ೨೦೧ರ ಪ್ರಕಾರ ರಾಜ್ಯಪಾಲರಿಗೆ ಮತ್ತು ರಾಷ್ಟ್ರಪತಿ ಅವರಿಗೆ ಇಂತಿಷ್ಟೇ ದಿನಗಳ ಒಳಗೆ ರಾಜ್ಯ ಸರ್ಕಾಗಳ ಮಸೂದೆಗೆ ಒಪ್ಪಿಗೆ ನೀಡಬೇಕೆಂದು ಹೇಳಲು ಬರುವುದಿಲ್ಲ ಎಂದು ತೀರ್ಪು ನೀಡಿತು. ಈ ತೀರ್ಪು ಅದೇ ಉನ್ನತ ನ್ಯಾಯಾಲಯದ ದ್ವಿಸದಸ್ಯ ಪೀಠ ನೀಡಿದ ತೀರ್ಪನ್ನು ಅಮಾನತ್ತುಮಾಡಿದಂತಾಗಿರುವುದರಿಂದ ಈ ತೀರ್ಪು ಈಗ ಮತ್ತೆ ರಾಜ್ಯ ಸರ್ಕಾರಗಳು ಮತ್ತು ರಾಜ್ಯಪಾಲರ ನಡುವಣೆ ಸಂಘರ್ಷಕ್ಕೆ ಎಡೆಮಾಡಿ ಕೊಟ್ಟಂತಾಗಿರುವುದು ವಿಪರ್ಯಾಸ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ೧೯೮೩ರಲ್ಲಿ ನೇಮಕವಾಗಿ ೧೯೮೯ರಲ್ಲಿ ವರದಿ ಸಲ್ಲಿಸಿದ ಸರ್ಕಾರಿಯಾ ಆಯೋಗದ ಶಿಫಾರಸಿನಂತೆ ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಆರು ತಿಂಗಳ ಒಳಗೆ ತಮ್ಮ ಒಪ್ಪಿಗೆಯನ್ನು ನೀಡಬೇಕು. ಒಂದು ವೇಳೆ ಒಪ್ಪಿಗೆ ಕೊಡಲು ಸಾಧ್ಯವಾಗದಿದ್ದರೆ ಅದನ್ನು ಅನಗತ್ಯವಾಗಿ ತಮ್ಮ ಬಳಿ ಇಟ್ಟುಕೊಂಡು ವಿಳಂಬ ಮಾಡುವ ಬದಲಿಗೆ ರಾಜ್ಯ ಸರ್ಕಾರಕ್ಕೆ ಕಾರಣಗಳನ್ನು ತಿಳಿಸಿ ಅವುಗಳನ್ನು ವಾಪಸ್ಸು ಕಳುಹಿಸಬೇಕು ಎಂದು ಹೇಳಿರುವುದು ರಾಜ್ಯಗಳಿಗೆ ಬಲಬಂದಿತ್ತಾದರೂ ಸುಪ್ರೀಂ ಕೋರ್ಟಿನ ಈಗಿನ ತೀರ್ಪು ರಾಜ್ಯಗಳನ್ನು ವಿಶೇಷವಾಗಿ ಬಿಜೆಪಿಯೇತರ ಪಕ್ಷಗಳ ರಾಜ್ಯ ಸರ್ಕಾರಗಳಿಗೆ ಬಲವಾದ ಪೆಟ್ಟು ನೀಡಿದಂತಾಗಿದೆ. ಸಾಮಾನ್ಯವಾಗಿ ರಾಜ್ಯಗಳ ವಿಧಾನಸಭೆಯು ಒಪ್ಪಿಗೆ ನೀಡಿದ ನಂತರ ಮಂತ್ರಿಮಂಡಲವು ರಾಜ್ಯಪಾಲರ ಒಪ್ಪಿಗೆಗಾಗಿ ಮಾಡುವ ಶಿಫಾರಸ್ಸನ್ನು ರಾಜ್ಯಪಾಲರು ಗೌರವಿಸಬೇಕು ಎನ್ನುವುದು ಒಕ್ಕೂಟ ವ್ಯವಸ್ಥೆಯ ಆಶಯ. ಇದನ್ನು ನಿರ್ಲಕ್ಷಿಸಿದರೆ ನಮ್ಮ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಡವಳಿಕೆ ಆಗುವುದಾಗಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಬಣ್ಣಿಸುವ ಕೆಲವು ಪತ್ರಿಕೆಗಳು ತಮ್ಮ ಸಂಪಾದಕೀಯಗಳಲ್ಲಿ ಉಲ್ಲೇಖಿಸಿರುವುದನ್ನು ನ್ಯಾಯಾಲಯ ಗಮನಿಸುವುದು ಅವಶ್ಯ.

ಆದರೆ ತೀರ್ಪು ನೀಡಿದ ಆಗಿನ ಮುಖ್ಯನ್ಯಾಯಮೂರ್ತಿ ಗವಾಯಿ ಅವರು ರಾಜ್ಯಪಾಲರು ಮತ್ತು ರಾಷ್ಟ್ರಪತಿ ಅವರಿಗೆ ಕಾಲಮಿತಿ ವಿಧಿಸಲು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲವಾದರೂ ಮಸೂದೆಗಳನ್ನು ಅನಿರ್ದಿಷ್ಟ ಕಾಲದವರೆಗೆ ತಮ್ಮ ಬಳಿ ಇಟ್ಟುಕೊಳ್ಳಬಾರದು ಎನ್ನುವ ಸಲಹೆ ರಾಜ್ಯಗಳಿಗೆ ತುಸು ಸಮಾಧಾನ ತಂದಿದೆ. ಆದರೆ ರಾಜ್ಯ ಸರ್ಕಾರಗಳ ಮತ್ತು ರಾಜ್ಯಪಾಲರುಗಳ ಸಂಬಂಧ ಹಾಗೂ ಈ ಎರಡರ ನಡುವೆ ಇರುವತಕರಾರುಗಳ ಬಗೆಗೆ ಸಂವಿಧಾನದ ಮಾರ್ಗದರ್ಶನದಲ್ಲಿ ಮತ್ತೆ ವ್ಯಾಪಕಚರ್ಚೆ ಆಗಬೇಕಿದೆ. ನಮ್ಮ ಆಡಳಿತ ನಡೆಸುವ ಕಾರ್ಯಾಲಯಗಳ ಹೆಸರುಗಳ ಬದಲಾವಣೆಗಿಂತ ಮುಖ್ಯವಾಗಿ ಜನಪರವಾದ ಚಿಂತನೆಯ ಆಯಾಮವನ್ನು ಹಾಗೂ ಸಂವಿಧಾನಾತ್ಮಕವಾದ ಕ್ರಮಗಳು ಸರಿಯಾಗಿವೆಯೇ ಎನ್ನುವ ಬಗೆಗೆ ನಮ್ಮ ಆಡಳಿತಾಂಗ ಗಂಭೀರವಾಗಿ ಪರಿಶೀಲಿಸಬೇಕು. ರಾಜ್ಯಪಾಲರುಗಳು ನಿಷ್ಪಕ್ಷಪಾತವಾಗಿ ಮತ್ತು ಸಂವಿಧಾನದತ್ತ ಅಧಿಕಾರವನ್ನು ಚಲಾಯಿಸುವುದು ಇಂದಿನ ತುರ್ತಾಗಿರುವುದನ್ನು ಮನಗಾಣಬೇಕಿದೆ.

” ಸರ್ಕಾರಿ ಕಚೇರಿಗಳ ಕಟ್ಟಡ ಮತ್ತು ರಸ್ತೆಗಳ ಹೆಸರು ಬದಲಾವಣೆ ಮಾಡುವಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ಉತ್ಸಾಹ ಮತ್ತು ಉದ್ದೇಶ ಕೇವಲ ಹೆಸರಿಗಷ್ಟೇ ಉಳಿಯಬಾರದು. ಬದಲಾವಣೆ ಎನ್ನುವುದು ಕಾಯ್ದೆ ಕಾನೂನುಗಳನ್ನು ಹೊಂದಿರುವ ನಮ್ಮ ಸಂವಿಧಾನದ ಆಶಯಗಳನ್ನು ಬಿಂಬಿಸಿದಾಗ ಮಾತ್ರ ಬದಲಾವಣೆಗೆ ನಿಜವಾದ ಅರ್ಥ ಬರುತ್ತದೆ.”

ಆಂದೋಲನ ಡೆಸ್ಕ್

Recent Posts

ಮೈಸೂರು | ಧ್ವಜಾರೋಹಣ ನೆರವೇರಿಸಿದ ಸಚಿವ ಮಹದೇವಪ್ಪ : ಸಂವಿಧಾನ ರಕ್ಷಿಸಲು ಕರೆ

ಮೈಸೂರು : ಭಾರತದ ಸಂವಿಧಾನವು ನಮ್ಮ ದೇಶದ ಆತ್ಮವಾಗಿದ್ದು, ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬಾಂಧವ್ಯದ ಮೂಲಭೂತ ತತ್ವಗಳನ್ನು ನೀಡಿದೆ.…

6 mins ago

ಗಣರಾಜ್ಯೋತ್ಸವ ಸಂಭ್ರಮ : ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಧ್ವಜಾರೋಹಣ, ಪರೇಡ್‌ ಆರಂಭ

ಬೆಂಗಳೂರು : ರಾಜ್ಯದಲ್ಲಿ 76ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ…

1 hour ago

ಫ್ಲೀಸ್. . ಬಸ್ ನಿಲ್ಲಿಸಿ ಸಾರ್. . !

ಶಿವಪುರ, ನಾಚನಹಳ್ಳಿಪಾಳ್ಯ, ರೈಲ್ವೆ ವರ್ಕ್‌ಶಾಪ್‌ ನಿಲುಗಡೆ ತಾಣದಲ್ಲಿ ನಿಲ್ಲದ ಬಸ್‌ಗಳು ಕೈ ಸಂಜ್ಞೆಗೂ ಕ್ಯಾರೇ ಎನ್ನದ ಡ್ರೈವರ್‌ಗಳು; ಮಹಿಳೆಯರು, ವಯೋವೃದ್ಧರು,…

1 hour ago

ಆರ್.ಟಿ.ವಿಠ್ಠಲಮೂರ್ತಿ ಅವರ ಬೆಂಗಳೂರು ಡೈರಿ : ಗಾಂಧಿ, ಬುದ್ಧ, ಬಸವ ಅರ್ಜೆಂಟಾಗಿ ಬೇಕು

ಕಷ್ಟ-ಸುಖಗಳಿಗೆ ಸ್ಪಂದಿಸುವ ಮನಃಸ್ಥಿತಿ ಕಳೆದುಕೊಂಡ ಜನತೆ ಕೈಯಲ್ಲಿ ಹಿಡಿದಿದ್ದ ದಿನ ಪತ್ರಿಕೆಯ ಮೇಲೆ ಕಣ್ಣು ನೆಟ್ಟಿದ್ದ ಚಿದಾನಂದ ಇದ್ದಕ್ಕಿದ್ದಂತೆ 'ಥೋ'…

2 hours ago

ಸರ್ಕಾರ, ರಾಜ್ಯಪಾಲರ ಸಂಘರ್ಷ ; ನ್ಯಾಯಾಂಗ ಮಧ್ಯಪ್ರವೇಶ ಅಗತ್ಯ

ಕಳೆದ ಗುರುವಾರ ಆರಂಭವಾದ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಯಥಾವತ್ತು ಓದುವುದಕ್ಕೆ ರಾಜ್ಯಪಾಲರು ನಿರಾಕರಿಸಿದ್ದಲ್ಲದೆ, ತಾವೇ…

2 hours ago

ದೇಶದ ಐಕ್ಯತೆ, ಪ್ರಗತಿಯ ಸಂಕೇತ-ಸಂವಿಧಾನ

ಜಾಗೃತಿ ಕಾರ್ಯಕ್ರಮಗಳು ಮತ್ತಷ್ಟು ಪರಿಣಾಮಕಾರಿ ಆಗಲಿ ಡಾ.ಡಿ.ಜೆ.ಶಶಿಕುಮಾರ್ ದೇಶದ ಐಕ್ಯತೆ, ಭದ್ರತೆ ಮತ್ತು ಪ್ರಗತಿಗೆ ಕಾರಣವಾಗಿರುವ ಭಾರತದ ಸಂವಿಧಾನ ರಚನೆಯಾಗಿ…

2 hours ago