ತಮಿಳುನಾಡಿನಲ್ಲಿ ಬೇಸಿಗೆಯ ಸುಡು ಬಿಸಿಲಿಸಿನ ನಡುವೆ ವಿಧಾನಸಭೆಯ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಚುನಾವಣೆಯು ಏಪ್ರಿಲ್ ಕೊನೆಯ ವಾರದೊಳಗೆ ಮುಗಿಯಬೇಕಿದೆ. ಮೇ ೧೦ಕ್ಕೆ ಈಗಿನ ವಿಧಾನಸಭೆಯ ಅವಧಿ ಕೊನೆಗೊಳ್ಳಲಿದ್ದು, ಆ ದಿನದೊಳಗೆ ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳಬೇಕಿದೆ. ಬೇಸಿಗೆಯ ಬಿಸಿಲು ಎಷ್ಟೇ ಇರಲಿ ತಮಿಳು ಜನರಲ್ಲಿರುವ ರಾಜಕೀಯ ಜಾಗೃತಿ ಚುನಾವಣೆಗೆ ಅಡ್ಡಿಬರಲಾರದು.
ಚುನಾವಣಾ ಆಯೋಗ ನವೆಂಬರ್‌ನಲ್ಲಿ ಆರಂಭಿಸಿದ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ಮುಂದುವರಿಸಿದ್ದು, ಇದುವರೆಗೆ ೭೪ ಲಕ್ಷ ಮತದಾರರನ್ನು ಹಲವಾರು ಕಾರಣಗಳಿಗಾಗಿ ಪಟ್ಟಿಯಿಂದ ಕೈಬಿಡಲಾಗಿದೆ. ಈಗ ತಮಿಳುನಾಡಿನಲ್ಲಿ ಒಟ್ಟು ಮತದಾರರ ಸಂಖ್ಯೆ ೫.೬೭ ಕೋಟಿ ಇದು, ಇದರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ. ಮಹಿಳಾ ಮತದಾರರ ಸಂಖ್ಯೆ ೨.೮೯ ಕೋಟಿ ಇದ್ದರೆ, ಪುರುಷ ಮತದಾರರ ಸಂಖ್ಯೆ ೨.೭೭ ಕೋಟಿ ಇದೆ. ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಕೈಗೊಂಡಾಗ ಪಶ್ಚಿಮ ಬಂಗಾಳದಂತೆ ಆಳುವ ಪಕ್ಷದಿಂದ ತೀವ್ರ ವಿರೋಧವೇನೂ ವ್ಯಕ್ತವಾಗಲಿಲ್ಲ. ಡಿಎಂಕೆ ಕಾರ್ಯಕರ್ತರ ಜಾಲ ಸುಸಂಘಟಿತವಾಗಿದ್ದು, ಮತದಾರರ ಪಟ್ಟಿಯ ಪರಿಷ್ಕರಣೆಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಆ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೀಡಿದ ಕರೆ ಉಲ್ಲಂಘನೆ ಆದಂತೆ ಕಂಡು ಬಂದಿಲ್ಲ.
ಶ್ರೀಲಂಕಾದಲ್ಲಿ ಅಲ್ಲಿನ ಸೇನೆ ಮತ್ತು ಎಲ್‌ಟಿಟಿಇ ನಡುವೆ ಹಲವಾರು ವರ್ಷಗಳ ಕಾಲ ಯುದ್ಧದ ಮಾದರಿಯಲ್ಲಿಯೇ ಹೋರಾಟ ನಡೆದು ಭಾರತಕ್ಕೆ ತಮಿಳರ ವಲಸೆ ನಿರಂತರವಾಗಿ ಸಾಗಿ ಬಂತು. ಶ್ರೀಲಂಕಾ ಸೇನೆ ಎಲ್‌ಟಿ ಟಿಇಯನ್ನು ನಿರ್ದಯವಾಗಿ ಬಗ್ಗು ಬಡಿದು ಅದರ ಉಗ್ರ ಚಟುವಟಿಕೆಯನ್ನು ಹೇಳಹೆಸರಿಲ್ಲದಂತೆ ಮಾಡಿದ್ದು ಇತಿಹಾಸ. ಆದರೆ ಈ ೩೦ ವರ್ಷಗಳಲ್ಲಿ ಜೀವಭಯದಿಂದ ತಮಿಳುನಾಡಿಗೆ ಬಂದು ಆಶ್ರಯ ಪಡೆದ ೮೯ ಸಾವಿರ ಮಂದಿ ನಿರಾಶ್ರಿತರಿದ್ದಾರೆ. ಈ ತಮಿಳು ನಿರಾಶ್ರಿತರಿಗೆ ಭಾರತ ಸರ್ಕಾರ ಕುಟುಂಬದ ಮುಖ್ಯಸ್ಥನಿಗೆ ತಿಂಗಳಿಗೆ ೧,೫೦೦ರೂ., ಉಳಿದವರಿಗೆ ೭೦೦ ರೂ. ಮತ್ತು ಹನ್ನೆರಡು ವರ್ಷದ ಒಳಗಿನವರಿಗೆ ೪೦೦ ರೂ. ಆರ್ಥಿಕ ನೆರವು ನೀಡುತ್ತಾ ಬಂದಿದೆ. ಬಹುತೇಕ ಮಂದಿ ಶ್ರೀಲಂಕಾಗೆ ಮರಳಿದ್ದಾರೆ ಮತ್ತೆ ಕೆಲವರು ವಾಪಸಾಗಲು ಬಯಸಿದ್ದಾರೆ. ಆದರೆ ಇಲ್ಲಿಯೇ ಬೆಳೆದು ವಿದ್ಯೆ ಕಲಿತು ಮೂಲ ತಾಯ್ನಾಡಿನ ಬಗೆಗೆ ಗೌರವ ಉಳ್ಳ ಲಂಕಾ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಬೇಕೆಂದು ಮುಖ್ಯಮಂತ್ರಿ ಸ್ಟಾಲಿನ್ ಈ ತಿಂಗಳ ೧೫ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಮನವಿಗೆ ಪ್ರಧಾನಿ ಅವರ ಕಾರ್ಯಾಲಯವಾಗಲಿ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದಾಗಲಿ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಏತನ್ಮಧ್ಯೆ ಚುನಾವಣೆಯ ದಿನಗಳು ಹತ್ತಿರ ಬರುತ್ತಿದ್ದಂತೆ ಶನಿವಾರ ( ೨೮.೨.೨೦೨೬) ಕೇಂದ್ರ ಚುನಾವಣಾ ಆಯೋಗ ತಮಿಳುನಾಡಿನ ಚುನಾವಣಾ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಿದೆ. ೨೩೪ ಕ್ಷೇತ್ರಗಳಿರುವ ತಮಿಳುನಾಡಿನ ಚುನಾವಣೆಯನ್ನು ಒಂದೇ ದಿನದಲ್ಲಿ ಮುಗಿಸಬೇಕೆಂದು ರಾಜ್ಯದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ಮಾಡಿರುವ ಮನವಿಯನ್ನು ಚುನಾವಣಾ ಆಯೋಗ ಪರಿಶೀಲಿಸುತ್ತಿದೆ. ರಾಜ್ಯದಲ್ಲಿ ಮತದಾನಕ್ಕಾಗಿ ಒಟ್ಟು ೭೫ ಸಾವಿರ ಮತಗಟ್ಟೆಗಳನ್ನು ಸ್ಥಾಪಿಸುವ ಅಂದಾಜು ಇರುವುದಾಗಿ ಚುನಾವಣಾ ಮುಖ್ಯ ಕಮಿಷನರ್ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ.
ಇದೆಲ್ಲವೂ ಚುನಾವಣೆಯ ಪ್ರಕ್ರಿಯೆಯ ಭಾಗ. ಆದರೆ ವಾಸ್ತವವಾಗಿ ರಾಜ್ಯದ ಈ ಚುನಾವಣಾ ಕಣದಲ್ಲಿ ಸುಮಾರು ಹತ್ತು ರಾಜಕೀಯ ಪಕ್ಷಗಳು ಗಂಭೀರವಾಗಿ ಸಕ್ರಿಯವಾಗುವ ಲಕ್ಷಗಳು ಕಂಡು ಬಂದಿದೆ. ನಟ ವಿಜಯ್ ಟಿವಿಕೆ ಪಕ್ಷವನ್ನು ಆರಂಭಿಸಿ ರಾಜ್ಯದ ಹಲವು ಕಡೆಗಳಲ್ಲಿ ಬೃಹತ್ ಸಭೆಗಳನ್ನು ನಡೆಸುವ ಮೂಲಕ ಬಿರುಗಾಳಿ ಎಬ್ಬಿಸಿದ್ದಾರೆ. ಆಳುವ ಡಿಎಂಕೆಗೆ ಟಿವಿಕೆ ನೇರ ಸ್ಪರ್ಧಿ ಎನ್ನುವ ವಾತಾವರಣವನ್ನು ಉಂಟು ಮಾಡಿರುವುದನ್ನು ಅಲ್ಲಗಳೆಯಲಾಗದು. ಈ ಮಧ್ಯೆ ಅವರ ಪತ್ನಿ ಸಂಗೀತಾ ತಮ್ಮ ೨೨ ವರ್ಷಗಳ ವಿವಾಹ ಬಂಧನವನ್ನು ಮುರಿದುಕೊಳ್ಳಲು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲು ಹತ್ತಿರುವುದರಿಂದ ವಿಜಯ್ ಅವರನ್ನು ಸಹಜವಾಗಿಯೇ ಅಧಿರರನ್ನಾಗಿ ಮಾಡಿರುವುದಾಗಿ ಹೇಳಲಾಗುತ್ತಿದೆ. ವಿಜಯ್ ಅವರಿಗೆ ದೊರೆಯುತ್ತಿರುವ ಜನಬೆಂಬಲಕ್ಕೆ ಬೆಕ್ಕಸಬೆರಗಾಗಿರುವ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಕೂಟವು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿರುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗೆಗೆ ವಿಜಯ್ ಎಲ್ಲಿಯೂ ಈಗಿನ ಸ್ಥಾಪಿತ ಪಕ್ಷಗಳ ಜೊತೆ ಯಾವುದೇ ಸಂಪರ್ಕವನ್ನು ಇಟ್ಟುಕೊಳ್ಳುವ ಪ್ರಯತ್ನ ನಡೆಸಿರುವುದು ಕಂಡು ಬಂದಿಲ್ಲ. ಅವರ ಜೊತೆಗಿರುವವರೆಲ್ಲ ಅವರ ಅಭಿಮಾನಿಗಳು ಮಾತ್ರ. ಈ ಅಭಿಮಾನಿಗಳ ತಂದೆ ತಾಯಿ ಡಿಎಂಕೆ ಬೆಂಬಲಿಗರು. ಅವರ ಜೊತೆ ಯಾವ ದೊಡ್ಡ ದೊಡ್ಡ ರಾಜಕೀಯ ನಾಯಕರೂ ಕಾಣಿಸಿಕೊಂಡಿಲ್ಲ. ಅವರ ಅಭಿಮಾನಿಗಳ ತಂಡ ಮತ್ತು ಸಾರ್ವಜನಿಕರಷ್ಟೇ ಅವರನ್ನು ಸುತ್ತುವರಿದಿದ್ದಾರೆ. ಆದರೆ ನಿನ್ನೆ ಮೊನ್ನೆಯ ಬೆಳವಣಿಗೆ ಅವರನ್ನು ರಾಜಕೀಯವಾಗಿ ಹಿಂದಕ್ಕೆ ಎಳೆದಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಈ ವಾರದ ಪ್ರಮುಖ ಸುದ್ದಿ ಎಂದರೆ ಮೂರು ವರ್ಷಗಳ ಹಿಂದೆ ಎಐಎಡಿಎಂಕೆಯಿಂದ ಉಚ್ಚಾಟನೆಗೊಂಡಿದ್ದ ಮೂರು ಬಾರಿ ಮುಖ್ಯಮಂತ್ರಿಯಾಗಿ ದಿ. ಜಯಲಲಿತಾ ಅವರ ನೆರಳಿನಂತಿದ್ದ ಓ. ಪನ್ನೀರ್ ಸೆಲ್ವಂ ಶುಕ್ರವಾರ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಮ್ಮುಖದಲ್ಲಿ ಡಿಎಂಕೆಯನ್ನು ಸೇರಿರುವುದು. ಪನ್ನೀರ್ ಸೆಲ್ವಂ ತಮಿಳುನಾಡಿನ ಪ್ರಮುಖ ತೇವರ್ ಜಾತಿಗೆ ಸೇರಿದವರಾಗಿದ್ದು, ದಕ್ಷಿಣ ತಮಿಳುನಾಡಿನಲ್ಲಿ ಇವರ ಪ್ರಭಾವ ಹೆಚ್ಚಿದೆ. ಪನ್ನೀರ್ ಸೆಲ್ವಂ ಜೊತೆಗೆ ಅವರ ಸಾವಿರಾರು ಮಂದಿ ಎಐಎಡಿಎಂಕೆ ಕಾರ್ಯಕರ್ತರು ಡಿಎಂಕೆ ಸೇರಿರುವುದು ಮತ್ತು ಎಂಡಿಎಂಕೆಯು ಡಿಎಂಕೆಯ ಜೊತೆ ವಿಲೀನವಾಗುವ ತೀರ್ಮಾನದಿಂದ ಸ್ಟಾಲಿನ್ ಅವರ ರಾಜಕೀಯ ಶಕ್ತಿ ಮತ್ತಷ್ಟು ಹೆಚ್ಚಿದಂತಾಗಿದೆ. ತಾವು ಇನ್ನೂ ಹತ್ತು ವರ್ಷವಾದರೂ ಸಕ್ರಿಯವಾಗಿ ರಾಜಕಾರಣ ಮಾಡುವ ದೈಹಿಕ ಶಕ್ತಿ ಮತ್ತು ಜನಪ್ರಿಯತೆ ಹೊಂದಿದ್ದರೂ ಮಗನನ್ನು ಮುಖ್ಯಮಂತ್ರಿ ಮಾಡಬೇಕೆನ್ನುವ ಆಸೆ ಅವರ ವಿರೋಧಿಗಳಿಗೆ ಟೀಕಾಸ್ತ್ರವಾಗಿದೆ.
ಈ ಪುತ್ರ ವ್ಯಾಮೋಹದಿಂದ ಸದ್ಯಕ್ಕೆ ಅವರು ಹೊರಬರಬೇಕಿದೆ ಎನ್ನುವುದು ಅವರನ್ನು ಬೆಂಬಲಿಸುವ ಹಲವು ಮತದಾರರ ಅಂಬೋಣ. ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ವಿಧಾನಸಭೆ ಚುನಾವಣೆ ಘೋಷಣೆಗೆ ಮುನ್ನ ಮಹಿಳೆಯರಿಗೆ ತಲಾ ಹತ್ತು ಸಾವಿರ ರೂಪಾಯಿ ಕೊಡುಗೆ ನೀಡಿದ ಕಾರ್ಯದಿಂದ ಪ್ರೇರಿತರಾಗಿರುವ ಮುಖ್ಯಮಂತ್ರಿ ಸ್ಟಾಲಿನ್, ಈಗಾಗಲೇ ಜಾರಿಯಲ್ಲಿರುವ ಮಹಿಳಾ ಹಕ್ಕು ಯೋಜನೆ ಹೆಸರಿನಲ್ಲಿ ಸುಮಾರು ೧.೩೧ ಕೋಟಿ ಮಹಿಳೆಯರಿಗೆ ತಲಾ ೫ ಸಾವಿರರೂ. ಮುಂಗಡವನ್ನು ಪಾವತಿ ಮಾಡಿ ಮಹಿಳೆಯರ ಬೆಂಬಲವನ್ನು ಆಕರ್ಷಿಸಿರುವುದು ಟೀಕೆಗೆ ಒಳಗಾದರೂ, ಪ್ರಧಾನಿ ಮೋದಿ ಅವರನ್ನು ಉದಾಹರಣೆ ನೀಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಲಾಗಿದೆ.
ಎಐಎಡಿಎಂಕೆಯಿಂದ ಉಚ್ಚಾಟಿಸಲಾಗಿದ್ದ ಮತ್ತು ಜಯಲಲಿತಾ ಅವರ ಉತ್ತರಾಧಿಕಾರಿಯಂತೆ ಅವರ ನೆರಳಾಗಿ ಬೆಳೆದು, ಭ್ರಷ್ಟಾಚಾರ ಪ್ರಕರಣದಿಂದ ಕೆಲವು ವರ್ಷ ಜೈಲುವಾಸ ಅನುಭವಿಸಿದ ವಿ.ಕೆ.ಶಶಿಕಲಾ ಈಗ ಚುನಾವಣಾ ರಾಜಕೀಯಕ್ಕೆ ದುಮುಕಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈಗಾಗಲೆ ತಾವು ಆರಂಭಿಸಲಿರುವ ರಾಜಕೀಯ ಪಕ್ಷದ ಬಾವುಟವನ್ನು ಬಿಡುಗಡೆ ಮಾಡಿರುವ ಅವರು, ಪಕ್ಷದ ಹೆಸರನ್ನು ಸದ್ಯದಲ್ಲಿಯೇ ಪ್ರಕಟಿಸುವುದಾಗಿ ಹೇಳಿರುವುದು ತಮಿಳುನಾಡು ರಾಜಕೀಯ ರಂಗವನ್ನು ಮತ್ತಷ್ಟು ಚುರುಕುಗೊಳಿಸುವ ಜೊತೆಗೆ ಮತದಾರರಲ್ಲಿ ನಾಯಕತ್ವ ಮತ್ತು ಪಕ್ಷಗಳ ಪ್ರಾಮುಖ್ಯತೆಯ ಬಗ್ಗೆ ಗೊಂದಲ ಉಂಟು ಮಾಡಿರುವ ಬೆಳವಣಿಗೆ ನಡೆದಿದೆ.
ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ನೇತೃತ್ವದ ಎನ್‌ಡಿಎಆಡಳಿತವನ್ನು ಸ್ಥಾಪಿಸಬೇಕೆನ್ನುವ ಛಲದಿಂದ ತಮಿಳರ ಮನಗೆಲ್ಲುವ ಹಲವು ತಂತ್ರಗಾರಿಕೆಗಳನ್ನು ಕಳೆದ ಎರಡು ವರ್ಷಗಳಿಂದ ನಡೆಸುತ್ತಲೇ ಬಂದಿದ್ದಾರೆ. ನೂತನ ಸಂಸತ್ ಭವನದ ಲೋಕಸಭೆಯ ಸ್ಪೀಕರ್ ಆಸೀನರಾಗುವ ಬಳಿ ಪ್ರಭುತ್ವದ ಸಂಕೇತವಾಗಿ ತಮಿಳುನಾಡಿನ ಚಾರಿತ್ರಿಕವಾದ ಚಿನ್ನದ ರಾಜದಂಡ ‘ಸೆಂಗೋಲ್’ ಸ್ಥಾಪಿಸುವ ಮೂಲಕ ತಮಿಳರ ಬೆಂಬಲವನ್ನು ನಿರೀಕ್ಷಿಸಿದ್ದರು. ಅದೇ ರೀತಿ ಈಗ ರಾಷ್ಟ್ರಪತಿ ಭವನದಲ್ಲಿದ್ದ ನವದೆಹಲಿಯ ನಕ್ಷೆಯ ನಿರ್ಮಾತೃ ಲುಟೆನ್ಸ್ ಅವರ ಪುತ್ತಳಿಯನ್ನು ತೆಗೆದು ಹಾಕಿ ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಪುತ್ತಳಿಯನ್ನು ಸ್ಥಾಪಿಸಿರುವುದು ಹಲವರ ಮಿಶ್ರಪ್ರತಿಕ್ರಿಯೆಗೆ ಎಡೆಮಾಡಿಕೊಟ್ಟಿದೆ. ಕೆಲವು ತಿಂಗಳ ಹಿಂದೆ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಸ್ವಯಂ ರಾಜೀನಾಮೆ ನೀಡುವಂತೆ ಮಾಡಿ ಆ ಸ್ಥಾನಕ್ಕೆ ಮಹಾರಾಷ್ಟ್ರದ] ರಾಜ್ಯಪಾಲರಾಗಿದ್ದ ತಮಿಳು ಮೂಲದ ಸಿ.ಪಿ.ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡುವ ಕಾರ್ಯತಂತ್ರದಲ್ಲಿ ಪ್ರಧಾನಿ ಮೋದಿ ಯಶಸ್ವಿಯಾದರು. ಕೊಯಮತ್ತೂರು ಲೋಕಸಭೆ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದ ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿಯನ್ನಾಗಿ ಚುನಾಯಿಸಿದ ಮೋದಿ ಅವರ ಕಾರ್ಯತಂತ್ರವೇನೂ ತಮಿಳರನ್ನು ಅಷ್ಟಾಗಿ ಆಕರ್ಷಿಸಿದಂತೆ ಕಾಣುತ್ತಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಎಷ್ಟೇ ತಿಪ್ಪರಲಾಗ ಹಾಕಿದರೂ ತಮಿಳುನಾಡಿನ ನೆಲ ಬಿಜೆಪಿಗೆ ಒಗ್ಗುವುದಿಲ್ಲ. ಬಿಜೆಪಿಯ ಸಂಸ್ಕೃತಿಯನ್ನು ತಮಿಳರು ಒಪ್ಪುವುದಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಸ್ಟಾಲಿನ್ ಬಹಿರಂಗವಾಗಿ ಹೇಳುತ್ತಾ ಬಂದಿದ್ದಾರೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಮತ್ತು ತ್ರಿಭಾಷಾ ಸೂತ್ರದ ವಿರುದ್ಧ ಹಾಗೂ ನೂತನ ಶಿಕ್ಷಣ ನೀತಿಯ ವಿರುದ್ಧ ಗಟ್ಟಿಯಾಗಿ ನಿಂತಿರುವ ಡಿಎಂಕೆ ಸರ್ಕಾರ ಮತ್ತೆ ಆಡಳಿತಕ್ಕೆ ಬರದಂತೆ ಮಾಡುವ ಬಿಜೆಪಿಯ ತಂತ್ರಗಳು ಫಲಿಸಲಾರವು ಎಂದು ಸ್ಟಾಲಿನ್ಅ ಗಿಂದಾಗ್ಗೆ ತಮ್ಮ ಚುನಾವಣಾ ಭಾಷಣಗಳಲ್ಲಿ ಹೇಳುತ್ತಲೇ ಬರುವ ಮೂಲಕ ದ್ರಾವಿಡ ಸಂಸ್ಕೃತಿಯ ಮಹತ್ವವನ್ನು ಮತದಾರರಿಗೆ ನೆನಪಿಸುತ್ತಲೇ ಬಂದಿದ್ದಾರೆ. ಹೀಗಾಗಿ ಬಿಜೆಪಿಯನ್ನು ಬೆಂಬಲಿಸುವ ಜನಶಕ್ತಿ ಕಾಣುತ್ತಿಲ್ಲ. ಬಿಜೆಪಿ ಮೂಲತಃ ಉತ್ತರ ಭಾರತದ ಹಿಂದಿ ಭಾಷಿಕರು ಮತ್ತು ಕೌಬೆಲ್ಟ್ ಪಕ್ಷ ಎನ್ನುವ ಹಳೆಯ ವಿಚಾರವೇ ಇಂದಿಗೂ ತಮಿಳರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಸನಾತನ ಸಿದ್ಧಾಂತದ ರಕ್ಷಣೆಗೆ ನಿಂತಿರುವ ಬಿಜೆಪಿಯನ್ನು ಬೆಂಬಲಿಸುವವರು ಹೆಚ್ಚಾಗಿ ಬ್ರಾಹ್ಮಣರು ಎನ್ನುವುದು ಬಹಿರಂಗ ಸತ್ಯ. ಈ ವರ್ಗ ಚುನಾವಣೆಯಲ್ಲಿ ಯಾವುದೇ ಪ್ರಭಾವ ಬೀರುವ ಶಕ್ತಿಯನ್ನು ಇದುವರೆಗೂ ಗಳಿಸಿಲ್ಲ ಎನ್ನುವುದು ಮುಚ್ಚಿಡುವ ಸಂಗತಿಯೇನಲ್ಲ.
ಕಳೆದ ಲೋಕಸಭೆ ಚುನಾವಣೆ ೨೦೨೪ರಲ್ಲಿ ನಡೆದಾಗ ಡಿಎಂಕೆ ನೇತೃತ್ವದ ಮೈತ್ರಿಕೂಟವೇ ಎಲ್ಲ ೩೯ ಸ್ಥಾನಗಳನ್ನೂ ತನ್ನದನ್ನಾಗಿಸಿಕೊಂಡಿತು. ಡಿಎಂಕೆ ೨೨, ಕಾಂಗ್ರೆಸ್ ೯, ಸಿಪಿಐ ೨, ಸಿಪಿಐ ಎಂ ೨, ವಿಸಿಕೆ ೨ ಮತ್ತು ಎಂಡಿಎಂಕೆ ೧ ಸ್ಥಾನವನ್ನು ಗೆದ್ದುಕೊಂಡವು. ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಕೂಟ ಒಂದು ಸ್ಥಾನವನ್ನೂ ಪಡೆಯಲು ಆಗಲಿಲ್ಲ. ಹಿಂದಿನ ಚುನಾವಣೆಯಲ್ಲಿ ಎಐಎಡಿಎಂಕೆ ಥೇಣಿ ಕ್ಷೇತ್ರವನ್ನು ಗೆದ್ದಿತ್ತಾದರೂ ಬಿಜೆಪಿ ಸಹವಾಸದಿಂದ ಕಳೆದ ಬಾರಿ ಆ ಕ್ಷೇತ್ರವನ್ನೂ ಕಳೆದುಕೊಂಡದ್ದು ಈ ಮೈತ್ರಿಕೂಟದ ರಾಜಕೀಯ ಸೋಲು ಎನ್ನುವುದರಲ್ಲಿ ಎರಡು ಮಾತಿಲ್ಲ. ಶೇಕಡಾವಾರು ಮತಗಳಿಕೆಯನ್ನು ಗಮನಿಸಿದಾಗ ಡಿಎಂಕೆ ಶೇ.೨೬.೯೩ ಮತಗಳಿಕೆಯನ್ನು ಪಡೆದಿತ್ತು. ಡಿಎಂಕೆ ಮೈತ್ರಿಕೂಟವು ಒಟ್ಟು ಶೇ. ೪೬.೯೭ಮತಗಳನ್ನು ಪಡೆದಿದ್ದರೆ ಎಐಎಡಿಎಂಕೆ -ಬಿಜೆಪಿ ಮೈತ್ರಿಕೂಟ ಕೇವಲ ಶೇ.೨೩.೦೫ಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಹೀಗಾಗಿ ಒಂದು ಸ್ಥಾನವನ್ನೂ ಈ ಮೈತ್ರಿಕೂಟ ಗಳಿಸಲು ಸಾಧ್ಯವಾಗದೆ ಇರುವುದನ್ನು ಗಮನಿಸಿದರೆ ಬರುವ ವಿಧಾನಸಭೆಯ ಚುನಾವಣೆಯಲ್ಲಿ ಈ ಮೈತ್ರಿಕೂಟ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗುವ ಸಾಧ್ಯತೆಗಳೇ ಹೆಚ್ಚು.
” ಪ್ರಧಾನಿ ನರೇಂದ್ರ ಮೋದಿ ಅವರು ಎಷ್ಟೇ ತಿಪ್ಪರಲಾಗ ಹಾಕಿದರೂ ತಮಿಳುನಾಡಿನ ನೆಲ ಬಿಜೆಪಿಗೆ ಒಗ್ಗುವುದಿಲ್ಲ. ಬಿಜೆಪಿಯ ಸಂಸ್ಕೃತಿಯನ್ನು ತಮಿಳರು ಒಪ್ಪುವುದಿಲ್ಲ ಎಂದುಈಗಾಗಲೇ ಮುಖ್ಯಮಂತ್ರಿ ಸ್ಟಾಲಿನ್ ಬಹಿರಂಗವಾಗಿ ಹೇಳುತ್ತಾ ಬಂದಿದ್ದಾರೆ.”
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುವನ್ನು ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹಲವು ದಿನಗಳ ನಂತರ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಗೋಪಿನಾಥಂ ಸಫಾರಿಯಲ್ಲಿ…
ಟೆಹರಾನ್: ಇಸ್ರೇಲ್ ನಡೆಸುತ್ತಿರುವ ಕ್ಷಿಪಣಿ ದಾಳಿಗೆ ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿ ಛಿದ್ರಗೊಂಡ ಆಕಾಶದೆತ್ತರದ ಕಟ್ಟಡಗಳು..! ಟೆಹರಾನ್‌ನಲ್ಲಿನ ಬೃಹತ್ ಕಟ್ಟಡಗಳು…
ಶಿವಮೊಗ್ಗ: ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ತೊಂದರೆಯಾಗದಂತೆ ಕರೆತರಲು ಪ್ರಯತ್ನ ಮಾಡಲಾಗುತ್ತಿದೆ…
ಜಮ್ಮು-ಕಾಶ್ಮೀರ: ಇಸ್ರೇಲ್ ಮತ್ತು ಅಮೇರಿಕಾ ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ರಾಷ್ಟ್ರದ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ.…
ನವದೆಹಲಿ: ಇರಾನ್-ಇಸ್ರೇಲ್-ಅಮೆರಿಕ ಯುದ್ಧ ನಡುವೆಯೇ ಭಾರತದಲ್ಲಿ ಅಚ್ಚರಿ ಬೆಳವಣಿಗೆಯಲ್ಲಿ ಗ್ಯಾಸ್ ಸಿಲಿಂಡರ್ ದರ ಇಳಿಕೆ ಕಂಡುಬಂದಿದೆ. ತೈಲ ಕಂಪನಿಗಳು ವಾಣಿಜ್ಯ…