ಅಂಕಣಗಳು

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರ ಸವಾರಿಗೆ ಬೇಕಿದೆ ಕಡಿವಾಣ

ರಾಜ್ಯಗಳ ಆಡಳಿತ ಸಂವಿಧಾನಬದ್ಧವಾಗಿ ನಡೆಯುವಂತೆ ಮೇಲುಸ್ತುವಾರಿಯಾಗಿ ಕೇಂದ್ರ ಸರ್ಕಾರದ ಶಿಫಾರಸಿನಂತೆ ರಾಷ್ಟ್ರಪತಿ ಅವರು ರಾಜ್ಯಪಾಲರನ್ನು ನೇಮಕ ಮಾಡುವುದು ೧೯೫೦ರಿಂದ ನಡೆದುಕೊಂಡು ಬಂದಿದೆ. ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ರಾಜ್ಯಪಾಲರು ಕಾರ್ಯನಿರ್ವಹಿಸುವುದನ್ನು ಸಂವಿಧಾನ ಅಪೇಕ್ಷಿಸುತ್ತದೆ. ಕೇಂದ್ರದಲ್ಲಿ ಅಧಕಾರ ನಡೆಸುವ ಪಕ್ಷವೇ ರಾಜ್ಯಗಳಲ್ಲಿಯೂ ಅಧಿಕಾರದಲ್ಲಿದ್ದರೆ ಅಲ್ಲಿ ಯಾವ ಸಮಸ್ಯೆಯೂ ಇಲ್ಲ. ಅಂದರೆ ಸಮಸ್ಯೆ ಮತ್ತು ಬಿಕ್ಕಟ್ಟು ಇದ್ದರೂ ಕೇಂದ್ರ ಸರ್ಕಾರದ ಆಣತಿಯಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ. ಆದರೆ ಸಮಸ್ಯೆ ಉದ್ಭವವಾಗುತ್ತಿರುವುದು ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷದ ಸರ್ಕಾರ ಇಲ್ಲದ ರಾಜ್ಯಗಳಲ್ಲಿ. ಈ ರಾಜ್ಯಗಳಲ್ಲಿ ರಾಜ್ಯಪಾಲರು ತಲೆನೋವಾಗಿರುವ ಬಿಕ್ಕಟ್ಟು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿರುವುದು ಹೊಸದೇನೂ ಅಲ್ಲ. ರಾಜ್ಯಪಾಲ ಹಾಗೂ ರಾಜ್ಯ ಸರ್ಕಾರದ ನಡುವೆ ನಡೆಯುತ್ತಿರುವ ಜಟಾಪಟಿ, ಕಾನೂನಿನ ಪಾಲನೆ ಮತ್ತು ದುರುಪಯೋಗ ನಿರಂತರವಾಗಿ ನಡೆದು ಬರುತ್ತಿದೆ.

ಕೇಂದ್ರ ಸರ್ಕಾರ ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಣ್ಣಿಗೆ ಕಟ್ಟಿದಂತೆ ಇದ್ದರೂ ರಾಜ್ಯಪಾಲರ ಅತಿರೇಕಗಳು ಸಂವಿಧಾನದ ರಕ್ಷಣೆಯ ಹೆಸರಿನಲ್ಲಿ ಮುಚ್ಚಿಹೋಗುತ್ತಿವೆ. ಹಾಗಾಗಿ ಬಹುತೇಕ ರಾಜ್ಯಪಾಲರು ತಾವು ಪ್ರಶ್ನಾತೀತರು ಎನ್ನುವ ಹಮ್ಮು ಬಿಮ್ಮನ್ನು ಪ್ರದರ್ಶಿಸುತ್ತಾ ಬಂದಿರುವುದು ಅನೇಕ ರಾಜ್ಯಗಳ ಕಹಿ ಅನುಭವ. ಸಂವಿಧಾನವು ರಾಜ್ಯಪಾಲರಿಗೆ ಅಗಾಧವಾದ ಅಧಿಕಾರ ನೀಡಿದೆ.

ಚುನಾವಣೆ ಬಳಿಕ ಹೊಸ ಸರ್ಕಾರದ ನೇಮಕ, ಬಹುಮತ ಕಳೆದುಕೊಂಡು ಸರ್ಕಾರ ಬಿದ್ದುಹೋದಾಗ ಹೊಸ ಮತ್ತು ಪರ್ಯಾಯ ಆಡಳಿತ ವ್ಯವಸ್ಥೆ ಮಾಡುವ, ಶಾಸನ ಸಭೆ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವುದು, ತಿರಸ್ಕರಿಸುವುದು ಅಥವಾ ಕಾನೂನುಬದ್ಧವಾಗಿರದಿದ್ದರೆ ಅದನ್ನು ಮತ್ತೆ ಪರಿಶೀಲನೆಗೆ ಸರ್ಕಾರಕ್ಕೆ ಹಿಂತಿರುಗಿಸುವುದು, ಹಲವು ರಾಜಕೀಯ ಸ್ಥಾನಮಾನಗಳಿಗೆ ನೇಮಕ, ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕಕ್ಕೆ ಅಸ್ತು… ಹೀಗೆ ಒಂದಲ್ಲ ಎರಡಲ್ಲ ಹತ್ತಾರು ವಿಷಯಗಳಲ್ಲಿ ರಾಜ್ಯ ಸರ್ಕಾರದ ತೀರ್ಮಾನಗಳಿಗೆ ಸಂವಿಧಾನಬದ್ಧ ಮುದ್ರೆ ಬೀಳಬೇಕೆಂದರೆ ರಾಜ್ಯಪಾಲರ ಒಪ್ಪಿಗೆ ಬೇಕೆ ಬೇಕು. ಆದರೆ ವಾಸ್ತವವಾಗಿ ಇದೆಲ್ಲ ನಡೆಯುವುದು ರಾಜ್ಯ ಸಚಿವ ಸಂಪುಟದ ಶಿಫಾರಸಿನ ಮೇಲೆಯೇ ಹೊರತು ರಾಜ್ಯಪಾಲರು ಸ್ವತಂತ್ರವಾಗಿ ಏನೂ ಮಾಡಲಾಗದು. ಆದರೆ ರಾಜ್ಯ ಸರ್ಕಾರವನ್ನು ಆಟ ಆಡಿಸುವ ಜುಟ್ಟು ಮಾತ್ರ ಈ ರಾಜ್ಯಪಾಲ ಎನ್ನುವ ಕೇಂದ್ರ ಸರ್ಕಾರದ ಈ ಪ್ರತಿನಿಧಿ ಕೈಯಲ್ಲಿದೆ.

ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರವು ಈ ಎಪ್ಪತ್ತೆ ದು ವರ್ಷಗಳ ಅವಧಿಯಲ್ಲಿ ಸುಮಾರು ೯೦ಕ್ಕೂ ಹೆಚ್ಚು ಬಾರಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿರುವುದಾಗಿ ಹಲವು ಮಾಹಿತಿಗಳು ಹೇಳುತ್ತವೆ. ರಾಜ್ಯ ಸರ್ಕಾರವು ಬಹುಮತ ಕಳೆದುಕೊಂಡಾಗ ಅದನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತವನ್ನು ಹೇರುವುದು ಎಸ್.ಆರ್. ಬೊಮ್ಮಾಯಿ ಪ್ರಕರಣದವರೆಗೆ ಲೀಲಾಜಾಲವಾಗಿ ನಡೆದು ಹೋಗಿದೆ. ರಾಜ್ಯದಲ್ಲಿ ಆಡಳಿತ ಮಾಡುವ ಸರ್ಕಾರದಲ್ಲಿನ ಪಕ್ಷಾಂತರ ಮತ್ತು ಸಚಿವರುಗಳ ಮತ್ತು ಶಾಸಕರ ರಾಜೀನಾಮೆಯಿಂದ ಬಹುಮತ ಕಳೆದುಕೊಳ್ಳುವ ಸಂದರ್ಭದಲ್ಲಿ ಸದನದಲ್ಲಿ ತಲೆ ಎಣಿಕೆಗೂ ಅವಕಾಶ ನೀಡದೆ ಚುನಾಯಿತ ಸರ್ಕಾರವನ್ನು ಮನಸ್ಸಿಗೆ ತೋಚಿದಂತೆ ವಜಾ ಮಾಡಿ ಮತ್ತೊಂದು ಪಕ್ಷದ ಸರ್ಕಾರವನ್ನು ತರುವುದು ಮತ್ತು ರಾಷ್ಟ್ರಪತಿ ಆಡಳಿತ ಹೇರುವ ಪ್ರಕರಣಗಳು ಹಿಂದೆ ಯಾವ ಎಗ್ಗಿಲ್ಲದೆ ನಡೆದು ಹೋಗಿವೆ.

೧೯೮೯ ಏಪ್ರಿಲ್ ೨೧ರಂದು ಅಂದಿನ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ನೇತೃತ್ವದ ಜನತಾ ದಳದ ಸರ್ಕಾರವನ್ನು ಬಹುಮತ ಕಳೆದುಕೊಂಡಿದೆ ಎಂದು ಸದನದಲ್ಲಿ ತಲೆ ಎಣಿಕೆಗೂ ಅವಕಾಶ ನೀಡದೆ ಅಂದಿನ ರಾಜ್ಯಪಾಲ ಪಿ.ವೆಂಕಟಸುಬ್ಬಯ್ಯ ಸಂವಿಧಾನದ ಆರ್ಟಿಕಲ್ ೩೫೬ರಂತೆ ಮಾಡಿದ ಶಿಫಾರಸಿನಂತೆ ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. ಈ ಕ್ರಮವನ್ನು ಅಧಿಕಾರ ಕಳೆದುಕೊಂಡ ಬೊಮ್ಮಾಯಿ ಅವರು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದರು. ಸುಪ್ರೀಂ ಕೋರ್ಟ್‌ನ ಒಂಬತ್ತು ಮಂದಿ ನ್ಯಾಯಮೂರ್ತಿಗಳ ಪೀಠವು ೧೯೯೪ರ ಮಾರ್ಚ್ ೧೧ರಂದು ತೀರ್ಪು ನೀಡಿ ಸದನದಲ್ಲಿ ಶಾಸಕರ ಬೆಂಬಲವನ್ನು ತಿಳಿಯಲು ತಲೆ ಎಣಿಕೆಗೆ ಅವಕಾಶ ನೀಡದೆ ಆರ್ಟಿಕಲ್ ೩೫೬ನ್ನು ವಿವೇಚನೆ ಇಲ್ಲದೆ ಬಳಸಿ ಸರ್ಕಾರವನ್ನು ವಜಾಮಾಡಿ ರಾಷ್ಟ್ರಪತಿ ಆಡಳಿತ ತಂದದ್ದು ಸಂವಿಧಾನಬಾಹಿರ ಎಂದು ಹೇಳಿತು. ಅಲ್ಲಿಂದೀಚೆಗೆ ಬಹುಮತ ಕಳೆದುಕೊಂಡ ನೆಪದಲ್ಲಿ ಯಾವುದೇ ಪಕ್ಷದ ರಾಜ್ಯ ಸರ್ಕಾರವನ್ನು ವಿವೇಚನೆ ಇಲ್ಲದೆ ವಜಾಮಾಡುವಂತಿಲ್ಲ ಎನ್ನುವ ರಕ್ಷಣೆ ರಾಜ್ಯಗಳಿಗೆ ದೊರೆಯಿತು.

ಈ ತೀರ್ಪು ಬರುವ ಮುನ್ನ ಕೇಂದ್ರ ಸರ್ಕಾರವು ತನ್ನ ರಾಜಕೀಯ ಕಾರಣಗಳಿಗಾಗಿ ನೀಡುವ ಸೂಚನೆಗಳಂತೆ ರಾಜ್ಯಪಾಲರುಗಳು ಕೈಗೊಂಬೆಯಂತೆ ವರ್ತಿಸಿ ಹಲವು ಚುನಾಯಿತ ಸರ್ಕಾರಗಳನ್ನು ಉರುಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ತಂದ ಇತಿಹಾಸ ಬಹು ದೊಡ್ಡದಿದೆ. ಸಂವಿಧಾನ ಕರಡು ಚರ್ಚೆಯ ಸಂದರ್ಭದಲ್ಲಿ ಎದ್ದ ಹಲವು ಸಂಶಯಗಳಿಗೆ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು ಉತ್ತರಿಸುತ್ತಾ, ಆರ್ಟಿಕಲ್ ೩೫೬ ಒಂದು ‘ಡೆಡ್ ಲೆಟರ್’ ಎಂದು ಕರೆದಿದ್ದರು. ಇದನ್ನು ಅಪರೂಪಕ್ಕೆ ಬಳಸಬೇಕು. ರಾಷ್ಟ್ರಪತಿಯವರು ಮೊದಲು ಸಂಬಂಽಸಿದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು. ಅನಿವಾರ್ಯವಾದರೆ ಮಾತ್ರ ಹೊಸದಾಗಿ ಚುನಾವಣೆ ನಡೆಸಲು ಸೂಚಿಸಬೇಕು. ಈ ಆರ್ಟಿಕಲ್ ೩೫೬ನ್ನು ಅಪರೂಪಕ್ಕೆ ಕೊನೆಯ ಅಸ್ತ್ರವನ್ನಾಗಿ ಬಳಸಬೇಕು ಎಂದು ಎಚ್ಚರಿಸಿದ್ದರು.

ಇಂತಹ ಅಚಾತುರ್ಯವನ್ನು ಚುನಾವಣೆ ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿಯೂ ವಿವೇಚನೆ ಇಲ್ಲದೆ ನಡೆದಿರುವ ಪ್ರಸಂಗಗಳಿವೆ. ಸರ್ಕಾರ ರಚನೆಗೆ ಬೇಕಾದ ಬಹುಮತ ಇದ್ದಲ್ಲಿ ಅಂತಹ ದೊಡ್ಡ ಪಕ್ಷವನ್ನು ಸರ್ಕಾರ ರಚಿಸಲು ಅವಕಾಶ ನೀಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗಿತ್ತು. ಅಧಿಕಾರ ವಹಿಸಿಕೊಂಡ ಮೇಲೆ ಸದನದಲ್ಲಿ ಇಂತಿಷ್ಟು ದಿನಗಳಲ್ಲಿ ಬಹುಮತ ಸಾಬೀತಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ೧೯೯೬ರ ಏಪ್ರಿಲ್‌ನಲ್ಲಿ ನಡೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಪಕ್ಷ ಬಹುಮತ ಪಡೆದಿರಲಿಲ್ಲ. ಬಿಜೆಪಿ ೧೬೧ ಸ್ಥಾನಗಳನ್ನು ಪಡೆದು ದೊಡ್ಡಪಕ್ಷವಾಗಿ ಹೊರಹೊಮ್ಮಿತ್ತು. ಸದನದ ಒಟ್ಟು ೫೪೫ ಸ್ಥಾನಗಳ ಪೈಕಿ ಸರ್ಕಾರ ರಚಿಸಲು ೨೭೩ ಸ್ಥಾನಗಳನ್ನು ಪಡೆಯಬೇಕಿತ್ತು. ಆಗ ಬಿಜೆಪಿಯ ಸಂಸದೀಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸರ್ಕಾರ ರಚಿಸಲು ಅಂದಿನ ರಾಷ್ಟ್ರಪತಿ ಡಾ. ಶಂಕರ ದಯಾಳ್ ಶರ್ಮಾ ಅವರು ಕೆಂಪುಹಾಸಿನ ಆಮಂತ್ರಣ ನೀಡಿದರು. ಸರ್ಕಾರ ರಚಿಸಿದ ವಾಜಪೇಯಿ ಅವರಿಗೆ ಇನ್ನು ೧೩ ದಿನಗಳ ಒಳಗೆ ಸದನದಲ್ಲಿ ಬಹುಮತ ಸಾಬೀತು ಮಾಡಬೇಕೆಂದು ತಿಳಿಸಲಾಯಿತು. ಆದರೆ ಅವರು ತಮಗೆ ನೀಡಿದ ಅವಧಿಯಲ್ಲಿ ಬಹುಮತ ಸಾಬೀತುಪಡಿಸಲಾಗದೆ ೧೩ ದಿನಗಳಲ್ಲೇ ಸರ್ಕಾರ ಬಿದ್ದುಹೋಗಿ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಸಂಯುಕ್ತ ರಂಗದ ಹೆಸರಿನಲ್ಲಿ ಹದಿನೇಳು ಪಕ್ಷಗಳ ಬೆಂಬಲದಿಂದ ಮತ್ತೊಂದು ಸರ್ಕಾರ ರಚನೆ ಆದದ್ದು ಇತಿಹಾಸ.

ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರ ನಂತರ ಅಧಿಕಾರಕ್ಕೆ ಬಂದ ಕೆ.ಆರ್. ನಾರಾಯಣನ್ ಅವರು, ಬಹುಮತವನ್ನು ಖಚಿತಪಡಿಸಿಕೊಂಡೇ ಸರ್ಕಾರ ರಚಿಸುವ ಅವಕಾಶ ನೀಡುವ ಪದ್ಧತಿಯನ್ನು ಜಾರಿಗೆ ತಂದರು. ಈ ಪದ್ಧತಿಯಿಂದ ಒಮ್ಮೆ ಸರ್ಕಾರ ರಚಿಸಿದ ಪಕ್ಷ ಸದನದಲ್ಲಿ ಬಹುಮತ ಸಾಬೀತುಪಡಿಸಿ ಅಧಿಕಾರದಲ್ಲಿ ಮುಂದುವರಿಯುವ ವ್ಯವಸ್ಥೆ ಆರಂಭವಾಯಿತು. ಈಗ ಸಮಸ್ಯೆ ಮತ್ತು ಬಿಕ್ಕಟ್ಟು ಉಂಟಾಗಿರುವುದು ಬಿಜೆಪಿಯೇತರ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ; ರಾಜ್ಯಪಾಲರ ಅಟಾಟೋಪದಿಂದ.

ತಮಿಳುನಾಡು ವಿಧಾನಸಭೆಯ ಅಧಿವೇಶನ ಆರಂಭವನ್ನು ಉದ್ದೇಶಿಸಿ ಮಾತನಾಡಬೇಕಿದ್ದ ಅಲ್ಲಿನ ರಾಜ್ಯಪಾಲ ಆರ್.ಎನ್.ರವಿ ಸರ್ಕಾರದ ಭಾಷಣವನ್ನು ಓದದೆ ಸದನದಿಂದ ಹೊರ ನಡೆದದ್ದು, ಕೇರಳದಲ್ಲಿ ಅಲ್ಲಿನ ರಾಜ್ಯಪಾಲರು ಕೇಂದ್ರ ಸರ್ಕಾರದ ಆಡಳಿತ ಕ್ರಮದ ಬಗೆಗೆ ವ್ಯಕ್ತಪಡಿಸಿರುವ ಆಕ್ಷೇಪಾರ್ಹ ವಾಕ್ಯಗಳನ್ನು ಬಿಟ್ಟು ಮತ್ತು ತಮ್ಮದೇ ಕೆಲವು ವಾಕ್ಯಗಳನ್ನು  ಸೇರಿಸಿಕೊಂಡು ಓದಿರುವುದು, ಕರ್ನಾಟಕದಲ್ಲಿ ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನದಲ್ಲಿ ಸಚಿವ ಸಂಪುಟ ಸಿದ್ಧಪಡಿಸಿ ನೀಡಿದ ಸರ್ಕಾರದ ದಿಕ್ಸೂಚಿ ಭಾಷಣದ ಆರಂಭಿಕ ಒಂದೆರಡು ಸಾಲುಗಳನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಓದಿ ಸದನದಿಂದ ಹೊರನಡೆದ ಪ್ರಸಂಗ ಈಗ ರಾಷ್ಟ್ರಮಟ್ಟದಲ್ಲಿ ರಾಜ್ಯಪಾಲರ ಪಾತ್ರ ಕುರಿತಂತೆ ಹಲವು ವೇದಿಕೆಗಳಲ್ಲಿ ಚರ್ಚೆ ಆರಂಭವಾಗಿದೆ. ರಾಜ್ಯಪಾಲರ ಪಾತ್ರ ಕುರಿತು ಸಂವಿಧಾನದಲ್ಲಿ ಉಲ್ಲೇಖವಾಗಿರುವಂತೆ ಆರ್ಟಿಕಲ್ ೧೭೬ ಪ್ರಕಾರ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿ ಬರೆದ ಭಾಷಣವನ್ನು ಯಥಾವತ್ತಾಗಿ ಓದುವುದು ರಾಜ್ಯಪಾಲರ ಕರ್ತವ್ಯ. ಆದರೆ ಈ ಮೂವರೂ ರಾಜ್ಯಪಾಲರು ರಾಜ್ಯ ಸರ್ಕಾರಗಳ ಭಾಷಣವನ್ನು ನಿರ್ಲಕ್ಷಿಸಿ ಉದ್ಧಟತನ ತೋರಿರುವುದು ಈಗ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ಪಾತ್ರ ಕುರಿತಂತೆ ಬಿಕ್ಕಟ್ಟು ಉದ್ಭವಿಸುವಂತೆ ಮಾಡಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ನೀತಿಯನ್ನು ತನ್ನ ಭಾಷಣದಲ್ಲಿ ವಿರೋಧಿಸುವುದು ಅಪರಾಧವೇನಲ್ಲ. ರಾಜ್ಯ ಸರ್ಕಾರದ ಭಾಷಣದಲ್ಲಿ ಕೇಂದ್ರದ ಬಗೆಗೆ ಕೆಲವು ಆಕ್ಷೇಪಾರ್ಹ ಸಾಲುಗಳಿವೆ ಎನ್ನುವ ನೆಪ ಒಡ್ಡಿ ರಾಜ್ಯಪಾಲರು ಭಾಷಣವನ್ನು ಪೂರ್ಣ ಓದದೆ ದಿಢೀರನೆ ಹೊರ ನಡೆದದ್ದು ಈಗ ಕಟುಟೀಕೆಗೆ ಒಳಗಾಗಿದೆ. ತಮಿಳುನಾಡು ಮುಖ್ಯಮಂತ್ರಿ ರಾಜ್ಯಪಾಲ ಹುದ್ದೆಯೇ ರಾಜ್ಯಗಳಿಗೆ ಬೇಡವಾಗಿದೆ. ಸಂವಿಧಾನಕ್ಕೆ ತಿದ್ದುಪಡಿ ತಂದು ಚುನಾಯಿತ ರಾಜ್ಯ ಸರ್ಕಾಗಳ ಮೇಲೆ ಸವಾರಿ ಮಾಡುವ ಈ ಹುದ್ದೆಯನ್ನೇ ರದ್ದುಮಾಡಬೇಕೆನ್ನುವ ವಾದ ಮುಂದಿಟ್ಟಿದ್ದಾರೆ. ಕರ್ನಾಟಕವು ರಾಜ್ಯಪಾಲರ ಪಕ್ಷಪಾತಿ ನಡವಳಿಕೆಯ ಬಗೆಗೆ ರಾಷ್ಟ್ರಪತಿ ಅವರಿಗೆ ದೂರು ನೀಡುತ್ತಿದೆ. ಇದು ಕೇವಲ ರಾಜ್ಯಪಾಲರಿಗೆ ಮಾತ್ರವಲ್ಲ ಕೇಂದ್ರದಲ್ಲಿ ರಾಷ್ಟ್ರಪತಿ ಅವರಿಗೂ ಅನ್ವಯವಾಗುತ್ತದೆ. ಸಚಿವ ಸಂಪುಟ ಒಪ್ಪಿಗೆ ನೀಡಿ ಕೊಡುವ ಪೂರ್ಣ ಭಾಷಣವನ್ನು ರಾಷ್ಟ್ರಪತಿ ಅವರೂ ಕೂಡ ಯಾವುದೇ ತಿದ್ದುಪಡಿ ಮಾಡದೆ ಜಂಟಿ ಸಂಸತ್ ಅಧಿವೇಶನದಲ್ಲಿ ಓದುವುದು ನಡೆದು ಬಂದಿರುವ ಸಂಪ್ರದಾಯ. ೧೯೯೮ರಲ್ಲಿ ಅಂದಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಐವತ್ತು ವರ್ಷಗಳ ಅವಧಿಯಲ್ಲಿ ಸಂವಿಧಾನ ನಡೆದು ಬಂದ ಬಗೆಗೆ ಪರಾಮರ್ಶೆ ಮಾಡಲು ಮುಂದಾಗಿತ್ತು . ಸಂವಿಧಾನಕ್ಕೆ ೫೦ ವರ್ಷ ತುಂಬಿದ ಸ್ಮರಣಾರ್ಥ ಜನವರಿ ೨೨ರಂದು ನಡೆದ ವಿಶೇಷ ಸಂಸತ್ ಅಧಿವೇಶನದಲ್ಲಿ ಅಂದಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಸಂವಿಧಾನ ಮಾರ್ಪಾಟಿನ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಅದೇ ಅಧಿವೇಶನದಲ್ಲಿ ಅಂದಿನ ಪ್ರಧಾನಿ ವಾಜಪೇಯಿ ಅವರು ಸಂವಿಧಾನ ಪರಾಮರ್ಶೆಗೆ ತಮ್ಮ ಸರ್ಕಾರ ಬದ್ಧವಾಗಿರುವುದಾಗಿ ಘೋಷಿಸಿದರು.

ಮುಂದೆ ಫೆಬ್ರವರಿ ೨೩ರಂದು ಆರಂಭವಾದ ಜಂಟಿ ಸಂಸತ್ ಬಜೆಟ್ ಅಧಿವೇಶನದಲ್ಲಿ ಎನ್‌ಡಿಎ ಸರ್ಕಾರವು ಸಂವಿಧಾನ ಪರಾಮರ್ಶೆ ಮಾಡಲು ಆಯೋಗವೊಂದನ್ನು ರಚಿಸಲು ತೀರ್ಮಾನಿಸಿದೆ ಎಂದು ವಾಜಪೇಯಿ ಸರ್ಕಾರ ಬರೆದುಕೊಟ್ಟ ಭಾಷಣವನ್ನು ಅದೇ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ತಮಗೆ ಮುಜುಗರವಾದರೂ ಸಂಸತ್ತಿನ ಸತ್ಸಂಪ್ರದಾಯದಂತೆ ಓದುವ ಮೂಲಕ ತಮ್ಮ ಸ್ಥಾನದ ಘನತೆಯನ್ನು ಎತ್ತಿ ಹಿಡಿದರು. ಇದು ಎಲ್ಲ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರುಗಳಿಗೆ ಅನುಕರಣೀಯ ಮಾರ್ಗದರ್ಶನವಾಗಬೇಕು.

” ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ನೀತಿಯನ್ನು ತನ್ನ ಭಾಷಣದಲ್ಲಿ ವಿರೋಧಿಸುವುದು ಅಪರಾಧವೇನಲ್ಲ. ರಾಜ್ಯ ಸರ್ಕಾರದ ಭಾಷಣದಲ್ಲಿ ಕೇಂದ್ರದ ಬಗೆಗೆ ಕೆಲವು ಆಕ್ಷೇಪಾರ್ಹ ಸಾಲುಗಳಿವೆ ಎನ್ನುವ ನೆಪ ಒಡ್ಡಿ ರಾಜ್ಯಪಾಲರು ಭಾಷಣವನ್ನು ಪೂರ್ಣ ಓದದೆ ದಿಢೀರನೆ ಹೊರ ನಡೆದದ್ದು ಈಗ ಕಟು ಟೀಕೆಗೆ ಒಳಗಾಗಿದೆ.”

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಪೌರ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ

ಮೈಸೂರಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೌರಕಾರ್ಮಿಕರು ಸಮವಸ್ತ್ರ, ಗುಣಮಟ್ಟದ ಬೆಳಗಿನ ಉಪಾಹಾರ ಮೊದಲಾದ ಸೌಲಭ್ಯಗಳಿಲ್ಲದೇ ಬವಣೆ ಪಡುತ್ತಿರುವುದು, ನಗರ ಪಾಲಿಕೆಯಲ್ಲಿ ೮೪…

3 hours ago

ಓದುಗರ ಪತ್ರ: ಪರೀಕ್ಷೆ ವೇಳೆ ಆರೋಗ್ಯ ಏರುಪೇರಾದರೆ ಬದಲಿ ವ್ಯವಸ್ಥೆ ಕಲ್ಪಿಸಿ

ದೇಶದ ಪ್ರಗತಿಗೆ ಶಿಕ್ಷಣ ಪ್ರಮುಖವಾಗಿದೆ. ಶಾಲಾ, ಕಾಲೇಜು ಹಂತದ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷಾ ಕೊಠಡಿಯಲ್ಲಿ…

3 hours ago

ಓದುಗರ ಪತ್ರ: ಅಂಚೆ ಕಚೇರಿ ಚಲನ್‌ಗಳು ಕನ್ನಡದಲ್ಲಿರಲಿ

ಅಂಚೆ ಕಚೇರಿಗಳಲ್ಲಿ ಗ್ರಾಹಕರು ಹಣ ಕಟ್ಟುವ ಉಳಿತಾಯ ಖಾತೆ, ಆರ್‌ಡಿ , ಪಿಪಿಎಫ್, ಎಂಐಎಸ್ ಹಾಗೂ ಅಂಚೆ ಕಚೇರಿಯ ವಿವಿಧ…

3 hours ago

ಮೂಗಿನ ನೇರಕ್ಕೆ ಇತಿಹಾಸವನ್ನು ತಿರುಚುವುದಿದೆಯಲ್ಲಾ….

‘ಕುಸೂ ಕುಸೂ ಹೇಳಪ್ಪ ಹೇಳು ನನ್ನ ಕಂದಾ. ಅವ್ವಾ... ನಾಳಕ ಬಾವುಟದ ಹಬ್ಬ. ಬಾವುಟ ಏರಿಸೋ ಹಬ್ಬ. ಇಸ್ಕೂಲಿಗೆ ಹೊತ್ತಿಗೆ…

4 hours ago

ಸಂವಿಧಾನ ನಮ್ಮ ಬಳಿ ಇದೆ, ಆದರೆ ಅದರ ಧ್ವನಿ ಎಲ್ಲಿದೆ?

ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ವಾಸ್ತವದಲ್ಲಿ ನಾವು ಎಷ್ಟು ಮುಕ್ತರಾಗಿದ್ದೇವೆ? ಭ್ರಷ್ಟಾಚಾರ, ಪರಿಸರ ನಾಶ, ಮಾಲಿನ್ಯ ಹಾಗೂ…

4 hours ago

ಗಣರಾಜ್ಯೋತ್ಸವದ ಅಯೋಮಯ ಇಂಗ್ಲಿಷ್ ಭಾಷಣ

ಗಣರಾಜ್ಯೋತ್ಸವ ಎಂದೊಡನೆ ನಾನು ಪ್ರೌಢಶಾಲೆಯಲ್ಲಿ ಸತತವಾಗಿ ೩ವರ್ಷ ಮಾಡಿದ ಇಂಗ್ಲಿಷ್ ಭಾಷಣ ನೆನಪಾಗುತ್ತದೆ. ಈ ದಿನದ ಮಹತ್ವದ ಬಗ್ಗೆ ಇತ್ತೀಚೆಗೆ…

4 hours ago