ಅಂಕಣಗಳು

ಅನಾಥ ಶವಗಳಿಗೆ ಗೌರವದ ವಿದಾಯ ಹೇಳುವ ಶರೀಫ್‌ ಚಾಚಾ

1992ರಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ಉರುಳಿಸಲ್ಪಟ್ಟ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆದ ಕೋಮು ಗಲಭೆಗಳಲ್ಲಿ 2,000ಕ್ಕೂ ಜನ ಸಾವಿಗೀಡಾದರು. ಅಯೋಧ್ಯೆಯಿಂದ 65ಕಿ. ಮೀ. ದೂರದ ಒಂದು ಹಳ್ಳಿಯಲ್ಲಿ ಸೈಕಲ್ ಅಂಗಡಿ ಇಟ್ಟುಕೊಂಡು ಬದುಕು ನಡೆಸುತ್ತಿರುವ ಶರೀಫ್ ಮೊಹಮ್ಮದ್ ಎನ್ನುವವರ ಹಿರಿಯ ಮಗ ಮೊಹಮ್ಮದ್ ರೈಸ್ ಎಂಬ 25 ವರ್ಷ ಪ್ರಾಯದ ಯುವಕ ಆ ಗಲಭೆಗಳಲ್ಲಿ ಸತ್ತವರಲ್ಲೊಬ್ಬ.

ಅಂದು ಮೊಹಮ್ಮದ್ ರೈಸ್ ತಾನು ಕೆಮಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸುಲ್ತಾನ್ಪುರಕ್ಕೆ ಹೋಗಿದ್ದರು. ವಾರಗಳು ಕಳೆದರೂ ಮಗನಿಂದ ಒಂದು ಪತ್ರವಾಗಲೀ, ಫೋನ್ ಕರೆಯಾಗಲೀ ಬಾರದಿದ್ದಾಗ ಚಿಂತೆಗೀಡಾದ ಶರೀಫ್ ಮೊಹಮ್ಮದ್ ಮಗನನ್ನು ಹುಡುಕಲು ಮುಂದಾದರು. ವಾರಗಳ ಕಾಲ ತನಗೆ ಗೊತ್ತಿದ್ದೆಡೆಗಳಲ್ಲೆಲ್ಲ ಹುಡುಕಿದರೂ ಏನೂ ಪ್ರಯೋಜನವಾಗಲಿಲ್ಲ. ಒಂದು ತಿಂಗಳ ನಂತರ ಒಂದು ದಿನ ಪೊಲೀಸರು ಶರೀಫ್ ಮೊಹಮ್ಮದ್ರಿಗೆ ಮೊಹಮ್ಮದ್ ರೈಸ್ ಅಂದು ಹಾಕಿಕೊಂಡು ಹೋಗಿದ್ದ ಬಟ್ಟೆ ಬರೆಗಳ ಕಂತೆಯನ್ನು ತಂದು ಕೊಟ್ಟು, ನಿಮ್ಮ ಮಗ ಸತ್ತಿದ್ದಾನೆ ಎಂದು ಹೇಳಿದರು. ಆದರೆ, ಅವನು ಹೇಗೆ ಸತ್ತ, ಎಲ್ಲಿ ಸತ್ತ ಎಂಬುದನ್ನು ಹೇಳಲಿಲ್ಲ. ಅಷ್ಟೇ ಅಲ್ಲ, ಶರೀಫರಿಗೆ ಅವನ ಹೆಣವೂ ನೋಡಲು ಸಿಗಲಿಲ್ಲ. ಮೊಹಮ್ಮದ್ ಶರೀಫ್ ಮತ್ತು ಅವರ ಹೆಂಡತಿ ಬೀಬೀಗೆ ಆ ಆಘಾತದಿಂದ ಚೇತರಿಸಿಕೊಳ್ಳಲಾಗಲಿಲ್ಲ. ಬೀಬೀ ಮಗನ ಅಕಾಲಿಕ ಸಾವಿನ ಜೊತೆ ಅವನಿಗೆ ಸೂಕ್ತವಾದ ಅಂತ್ಯ ಸಂಸ್ಕಾರ ಮಾಡಲಾಗದ ಕೊರಗಿನಿಂದಾಗಿ ಈಗಲೂ ಆಗಾಗ್ಗೆ ಖಿನ್ನತೆಗೆ ಒಳಗಾಗುತ್ತಾರೆ.

ಅದಾಗಿ ಒಂದು ತಿಂಗಳ ನಂತರ ಒಂದು ದಿನ ಶರೀಫ್ ಮೊಹಮ್ಮದ್ ಪೊಲೀಸರು ವಾರಸುದಾರರಿಲ್ಲದ ಒಂದು ಅನಾಥ ಶವವನ್ನು ನದಿಗೆ ಎಸೆದುದನ್ನು ನೋಡಿದರು. ಆ ದೃಶ್ಯವನ್ನು ನೋಡಿದಾಗ ಅವರಿಗೆ ಪೊಲೀಸರು ಅದೆಷ್ಟೋ ಶವಗಳೊಂದಿಗೆ ತನ್ನ ಮಗನ ಹೆಣವನ್ನೂ ಹೀಗೆಯೇ ನದಿಗೆ ಎಸೆದಿರಬಹುದು ಎಂದು ಊಹಿಸಿದರು. ಸುಲ್ತಾನ್ಪುರದ ಪಕ್ಕದಲ್ಲೇ ಗೋಮತಿ ನದಿ ಹರಿಯುತ್ತದೆ. ಹಾಗೆ ಊಹಿಸಿದವರಿಗೆ ಏನನ್ನಿಸಿತೋ ಏನೋ. ಇನ್ನು ಮುಂದೆ ಕೊನೇ ಪಕ್ಷ ತನ್ನ ಜಿಲ್ಲೆಯಲ್ಲಿ ಯಾವುದೇ ಅನಾಥ ಶವ ಹೀಗೆ ನದಿಗೆ ಎಸೆಯದ ಹಾಗೆ ನೋಡಿಕೊಳ್ಳುತ್ತೇನೆ ಎಂದು ನಿರ್ಧರಿಸಿದರು. ಮತ್ತು, ತನ್ನ ಆ ನಿರ್ಧಾರವನ್ನು ಪೊಲೀಸರಿಗೆ ತಿಳಿಸಿದರು.

ಕೆಲವು ದಿನಗಳ ನಂತರ ಪೊಲೀಸರು ಒಂದು ಅನಾಥ ಶವದ ಬಗ್ಗೆ ಶರೀಫ್ ಮೊಹಮ್ಮದ್ರಿಗೆ ತಿಳಿಸಿದರು. ಶರೀಫ್ ಮೊಹಮ್ಮದ್ ಅನಾಥ ಶವಗಳಿಗೆ ಸೂಕ್ತ ಅಂತ್ಯ ಸಂಸ್ಕಾರ ನೀಡುವ ನಿರ್ಧಾರವನ್ನೇನೊ ಮಾಡಿದ್ದರು. ಆದರೆ, ಹಿಂದೆಂದೂ ಆ ಕೆಲಸ ಮಾಡಿರದಿದ್ದ ಅವರಿಗೆ ಪೊಲೀಸರ ಕರೆ ಬಂದಾಗ ಹೃದಯ ಬಡಿತ ಒಮ್ಮೆಗೆ ಏರಿತು! ಆದರೂ ಸಾವರಿಸಿಕೊಂಡು ಹೋದರು. ಪೊಲೀಸರು ಮಹಜರು ಮಾಡಿಟ್ಟಿದ್ದ ಆ ಅನಾಥ ಶವವನ್ನು ಶರೀಫ್ ಮೊಹಮ್ಮದ್ರಿಗೆ ಕೊಟ್ಟರು. ಶರೀಫ್ ಆ ಶವವನ್ನು ಸ್ಮಶಾನಕ್ಕೆ ಕೊಂಡು ಹೋಗಿ, ಅದರ ಅಂತ್ಯ ಸಂಸ್ಕಾರವನ್ನು ನಡೆಸಿದರು. ಅದರ ನಂತರ ಮೊಹಮ್ಮದ್ ಶರೀಫ್ ಇನ್ನೂ ಕೆಲವು ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸಿದರು. ಮುಂದೆ ಶವ ಸಾಗಿಸುವ ಸಲುವಾಗಿ ಒಂದು ಸೈಕಲ್ ರಿಕ್ಷಾವನ್ನು ಖರೀದಿಸಿದರು.

ಶರೀಫ್ ಮೊಹಮ್ಮದ್ ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸಲು ಶುರು ಮಾಡಿದ ನಂತರ ಅವರ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ನೆರೆಹೊರೆಯವರು ಅವರನ್ನು ದೂರ ಮಾಡತೊಡಗಿದರು. ಕೆಲವರಂತೂ ಅವರನ್ನು ಮುಟ್ಟಿದರೆ ತಮಗೆ ಸೋಂಕು ತಗಲುತ್ತದೆ ಎಂದು ಹೆದರಿ ಅವರಿಂದ ಮಾರುದ್ದ ದೂರ ನಿಲ್ಲುತ್ತಿದ್ದರು. ಆದರೆ, ಅದಾವುದರಿಂದಲೂ ಮೊಹಮ್ಮದ್ ಶರೀಫ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅನಾಥ ಶವಗಳ ಅಂತ್ಯ ಸಂಸ್ಕಾರಕ್ಕಾಗಿ ಸ್ವತಃ ಅವರೇ ತಮ್ಮ ಸಂಬಂಧಿಕರ ಮದುವೆ ಮೊದಲಾದ ಕಾರ್ಯಕ್ರಮಗಳಿಗೆ ಹೋಗುವುದನ್ನು ನಿಲ್ಲಿಸಿದರು. ಕೆಲವೊಮ್ಮೆ ದೈನಂದಿನ ಪ್ರಾರ್ಥನೆಗಳನ್ನೂ ತಪ್ಪಿಸಿಕೊಂಡರು. ಪ್ರತಿಯೊಂದು ಅನಾಥ ಶವಕ್ಕೂ ಗೌರವಯುತವಾದ ಸಂಸ್ಕಾರ ಮಾಡಿದಾಗ ಅವರಿಗೆ ತಮ್ಮ ಮಗನ ಸಾವಿನ ನೋವನ್ನು ತಡೆದುಕೊಳ್ಳಲು ಶಕ್ತಿ ಸಿಕ್ಕಂತೆ ಭಾಸವಾಗುತ್ತಿತ್ತು. ‌

ಶವಗಳ ಅಂತ್ಯ ಸಂಸ್ಕಾರ ನಡೆಸುವುದು ಸುಲಭದ ಕೆಲಸವಲ್ಲ. ಅದರಲ್ಲೂ, ಅನಾಥ ಶವಗಳ ಸಂಸ್ಕಾರ ಮಾಡುವುದಂತೂ ಇನ್ನೂ ಕಷ್ಟದ ಕೆಲಸ. ಅನಾಥ ಶವಗಳು ಸಾಮಾನ್ಯವಾಗಿ ಬೇಗನೆ ಯಾರ ಗಮನಕ್ಕೆ ಬಾರದಿರುವ ಕಾರಣಕ್ಕೆ ವಾಸನೆ ಹೊಡೆಯಲು ಶುರುವಾಗಿರುತ್ತದೆ. ಎಷ್ಟೋ ಬಾರಿ ಕೊಳೆತು ನಾರುತ್ತಿರುತ್ತವೆ. ಅವುಗಳಿಂದ ಬರುವ ಹೊಲಸು ವಾಸನೆ ಎಂತಹವರನ್ನೂ ಧೃತಿಗೆಡಿಸಬಲ್ಲದು. ಇಂತಹ ಶವಗಳನ್ನು ಸ್ಮಶಾನಕ್ಕೆ ಸಾಗಿಸಿ, ಅಂತ್ಯ ಸಂಸ್ಕಾರ ಮಾಡಿ ಮನೆಗೆ ಬಂದಾಗ ಶರೀಫ್ ಮೊಹಮ್ಮದ್ಗೆ ಎಷ್ಟೋ ಬಾರಿ ನಿದ್ದೆ ಮಾಡಲಾಗದೆ, ನಿದ್ದೆ ಮಾತ್ರೆಗಳ ಮೊರೆ ಹೋಗುತ್ತಾರೆ.

ಶರೀಫ್ ಮೊಹಮ್ಮದ್ ಕಳೆದ 25 ವರ್ಷಗಳಲ್ಲಿ ಎಷ್ಟು ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸಿದ್ದಾರೆ ಎಂಬುದರ ನಿಖರ ಲೆಕ್ಕವಿಲ್ಲ. ಆದರೆ, ಕಡಿಮೆಯೆಂದರೆ 5000ಕ್ಕೂ ಹೆಚ್ಚು ಎಂದು ಅವರ ಕುಟುಂಬದವರು ಹೇಳುತ್ತಾರೆ. ಇದರಲ್ಲಿ ಹಿಂದೂ, ಮುಸ್ಲಿಂ ಮೊದಲಾಗಿ ಎಲ್ಲಾ ಧರ್ಮಗಳಿಗೆ ಸೇರಿದ ಅನಾಥ ಶವ ಗಳಿವೆ. ಶರೀಫ್ ಮೊಹಮ್ಮದ್ ಆದಷ್ಟು ಮಟ್ಟಿಗೆ ಶವಗಳ ಧರ್ಮ ಯಾವು ದೆಂದು ತಿಳಿದು, ಆ ಧರ್ಮಕ್ಕೆ ಅನುಸಾರವಾದ ಅಂತ್ಯ ಕ್ರಿಯೆ ನಡೆಸುತ್ತಾರೆ.

87 ವರ್ಷ ಪ್ರಾಯದ ಶರೀಫ್ ಮೊಹಮ್ಮದ್ ಈಗಲೂ ಸೈಕಲ್ ಅಂಗಡಿಯನ್ನು ನಡೆಸುತ್ತ ಅದರ ಆದಾಯದಿಂದಲೇ ತಮ್ಮ ಕುಟುಂಬವನ್ನು ನಡೆಸುತ್ತಿದ್ದಾರೆ. ಪ್ರಾರಂಭದ ವರ್ಷಗಳಲ್ಲಿ ಶರೀಫ್ ಮೊಹಮ್ಮದ್ ಸ್ವತಃ ಹಾಗೂ ಎಲ್ಲ ಖರ್ಚನ್ನೂ ತಾನೇ ಭರಿಸಿ, ಅನಾಥ ಶವಗಳ ಅಂತ್ಯ ಕ್ರಿಯೆ ಮಾಡುತ್ತಿದ್ದರು. ಈಗೀಗ ಜನ ಇವರ ಕೆಲಸವನ್ನು ನೋಡಿ ಅವರ ಸಹಾಯಕ್ಕೆ ಬರುತ್ತಿದ್ದಾರೆ. ಸ್ಥಳೀಯ ಹಿಂದೂ ಹಾಗೂ ಮುಸ್ಲಿಂ ಧರ್ಮೀಯ ಅಂಗಡಿ ಮಾಲೀಕರು ಶವಸಂಸ್ಕಾರದ ಖರ್ಚಿಗೆ ಧನ ಸಹಾಯ ಮಾಡುತ್ತಾರೆ. ಇದರ ಸಹಾಯದಿಂದಾಗಿ ಈಗ ಶರೀಫ್ ಮೊಹಮ್ಮದ್ರಿಗೆ ದುಡ್ಡು ಕೊಟ್ಟು ತನ್ನ ಸಹಾಯಕ್ಕೆ ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡು ಹೋಗಲು ಸಾಧ್ಯವಾಗಿದೆ. ಅವರು ತಮ್ಮ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಾಗ ಅಪರಿಚಿತರೊಬ್ಬರು ಅವರಿಗೆ 20 ಸಾವಿರ ರೂಪಾಯಿ ಕಳಿಸಿಕೊಟ್ಟಿದ್ದರು. 2020ರಲ್ಲಿ ಕೇಂದ್ರ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಅಂದು ಶರೀಫ್ ಮೊಹಮ್ಮದ್ರನ್ನು ದೂರವಿಟ್ಟಿದ್ದವರೆಲ್ಲ ಇಂದು ಶರೀಫ್ ಚಾಚಾ ಎಂದು ಪ್ರೀತಿಯಿಂದ ಕರೆಯುತ್ತಾರೆ.

ಶರೀಫ್ ಮೊಹಮ್ಮದ್‌ರ ಇಬ್ಬರು ಗಂಡು ಮಕ್ಕಳಗಾಲೀ, ಅವರ ಕುಟುಂಬದ ಬೇರಾವ ಸದಸ್ಯರಾಗಲೀ ಅವರ ಈ ಕಾರ್ಯವನ್ನು ಮುಂದುವರಿಸುವುದಿಲ್ಲ ಅನ್ನುವುದು ಅವರಿಗೆ ತಿಳಿದಿದೆ. ಆದರೆ, ತಾನು ಮಾತ್ರ ತನ್ನ ಕೊನೆ ಉಸಿರಿನವರೆಗೂ ಈ ಕೆಲಸವನ್ನು ಮಾಡುತ್ತೇನೆ ಎಂದು ಶರೀಫ್ ಮೊಹಮ್ಮದ್ ಹೇಳುತ್ತಾರೆ.

 

ಆಂದೋಲನ ಡೆಸ್ಕ್

Recent Posts

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

3 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

3 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

3 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

3 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

3 hours ago

ʼಮಣ್ಣಿನ ಗಣಪನಿಗೆ ಮನ್ನಣೆಗೆ ಸಿಗಲಿʼ

ಭಾರತಿ ಸಜ್ಜನ್‌ ಮೈಸೂರು : ಜಾಗತಿಕ ತಾಪಮಾನ ಏರುಗತಿಯ ನಡುವೆಯೇ ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಎಡೆ ಸಿದ್ಧತೆ ನಡೆದಿದೆ.…

4 hours ago