೨೦೨೪ನೇ ಸಾಲಿನಲ್ಲಿ ಸಂಗೀತ, ರಾಜಕೀಯ, ಸಿನಿಮಾ ಮತ್ತಿತರ ಕ್ಷೇತ್ರಗಳ ಹಲವು ಗಣ್ಯರು, ಸಾಧಕರು ವಯೋಸಹಜ, ಅನಾರೋಗ್ಯ ಮತ್ತಿತರ ಕಾರಣಗಳಿಂದ ಮೃತರಾಗಿದ್ದಾರೆ. ಅವರಿಗಾಗಿ ಆಯಾ ಕ್ಷೇತ್ರಗಳು, ಜನರೂ ಸೇರಿದಂತೆ ಇಡೀ ರಾಜ್ಯ, ದೇಶ ಕಂಬನಿಗರೆದಿದೆ. ಹೊಸ ವರ್ಷದ ಆಗಮನದ ಅಂಚಿನಲ್ಲಿ ಈ ಅಗಲಿದ ಗಣ್ಯರ ಕುರಿತು ಪಕ್ಷಿನೋಟ ಇಲ್ಲಿದೆ.
ಹಿರಿಯ ನಟ, ನಿರ್ದೇಶಕ ದ್ವಾರಕೀಶ್:
ಸ್ಯಾಂಡಲ್‌ವುಡ್ ಹಿರಿಯ ನಟ, ನಿರ್ದೇಶಕ ದ್ವಾರಕೀಶ್ ೨೦೨೪ರ ಏಪ್ರಿಲ್ ೧೬ರಂದು ವಯೋಸಹಜ ಕಾಯಿಲೆಯಿಂದ ನಿಧನರಾದರು. ೧೯೬೪ರಲ್ಲಿ ವೀರಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ದ್ವಾರಕೀಶ್ ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟರಾಗಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ಹಲವು ಸದಭಿರುಚಿಯ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಮಾಜಿ ಸಂಸದ ವಿ.ಶ್ರೀನಿವಾಸ ಪ್ರಸಾದ್:
ರಾಜ್ಯದ ಪ್ರಮುಖ ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದ ವಿ.ಶ್ರೀನಿವಾಸ್ ಪ್ರಸಾದ್ ೨೦೨೪ ರ ಏಪ್ರಿಲ್ ೨೯ರಂದು ನಿಧನರಾದರು. ೧೯೭೪ರಲ್ಲಿ ರಾಜಕೀಯ ಪ್ರವೇಶಿಸಿದ ಅವರು ಶಾಸಕ, ಸಚಿವ, ಸಂಸದ, ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸಾದ್ ಅವರು ದಲಿತ-ದಮನಿತರ ಪರವಾದ ದಿಟ್ಟ ದನಿಯಾಗಿದ್ದರು.
ಪಂ.ರಾಜೀವ ತಾರಾನಾಥ್:
ಸರೋದ್ ವಾದಕ ಪಂಡಿತ ರಾಜೀವ ತಾರಾನಾಥ್ ಅವರು ಅನಾರ‍್ಯೋಗದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ೨೦೨೪ರ ಜೂನ್ ೧೧ರಂದು ನಿಧನರಾದರು. ಸಾಹಿತ್ಯದಲ್ಲಿ ಪಿಎಚ್.ಡಿ. ಪಡೆ ದಿದ್ದ ತಾರಾನಾಥರು ತಮಗಿದ್ದ ಇಂಗ್ಲಿಷ್ ಪ್ರಾಧ್ಯಾಪಕ ಹುದ್ದೆ ತ್ಯಜಿಸಿ ಸಂಗೀತ ಅಭ್ಯಸಿಸಲು ಕಲ್ಕತ್ತಾಗೆ ತೆರಳಿ ಅಲ್ಲಿ ಉಸ್ತಾದ್ ಅಲಿ ಅಕ್ಬರ್ ಖಾನರ ಶಿಷ್ಯರಾಗಿದ್ದರು. ವಿಶ್ವದೆಲ್ಲೆಡೆ ಸಂಗೀತದ ರಸದೌತಣವನ್ನು ಉಣಬಡಿಸಿದ್ದರು. ಅವರಿಗೆ ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದ್ದವು.
ರಂಗಕರ್ಮಿ ಡಾ.ನ.ರತ್ನ:
ರಂಗಕರ್ಮಿ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ(ಆಯಿಷ್) ಮೊದಲ ನಿರ್ದೇಶಕರಾಗಿದ್ದ ಡಾ. ನ.ರತ್ನ ಹೃದಯಾಘಾತ ದಿಂದ ಜೂನ್ ೧೯ರಂದು ಬೆಂಗಳೂರಿನಲ್ಲಿ ನಿಧರಾದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ, ಎಂ.ಎನ್.ರಾಯ್, ಬಿ.ವಿ.ಕಾರಂತ, ಹೆಲನ್ ಕೆಲ್ಲರ್ ಸೇರಿದಂತೆ ಹಲವು ಪ್ರಶಸ್ತಿಗೆ ಅವರು ಭಾಜನರಾಗಿದ್ದರು.
ನಟಿ, ನಿರೂಪಕಿ ಅಪರ್ಣಾ:
ಅಪ್ಪಟ ಕನ್ನಡದಲ್ಲಿಯೇ ನಿರೂಪಣೆ ಮಾಡುತ್ತಿದ್ದ ಅಪರ್ಣಾ ಧ್ವನಿಯನ್ನು ಕೇಳದವರೇ ಇಲ್ಲ. ಇವರ ನಿರೂಪಣೆಯ ಅಪ್ಪಟ ಕನ್ನಡಕ್ಕೆ ಮಾರುಹೋಗಿದ್ದ ಅಭಿಮಾನಿಗಳು ಅದೆಷ್ಟೋ. ನನ್ನ ಗುರುತು ಕನ್ನಡ, ನನ್ನ ಅಸ್ತಿತ್ವ ಕನ್ನಡ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಅಪರ್ಣಾ, ೨೦೨೪ರ ಜುಲೈ ೧೧ರಂದು ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾದರು.
ಚಿಂತಕ ಪ್ರೊ. ಮಹೇಶ್ ಚಂದ್ರಗುರು:
ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತಪ್ರಾಧ್ಯಾಪಕ ಹಾಗೂ ಪ್ರಗತಿಪರ ಚಿಂತಕ ಪ್ರೊ.ಬಿ.ಪಿ. ಮಹೇಶ್ ಚಂದ್ರಗುರು ೨೦೨೪ರ ಆಗಸ್ಟ್ ೧೮ರಂದು ಅನಾರೋಗ್ಯದಿಂದ ನಿಧನರಾದರು. ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯವರಾಗಿದ್ದ ಮಹೇಶ್ ಚಂದ್ರಗುರು, ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿದ್ದರು. ನಿವೃತ್ತಿ ಬಳಿಕ ಪ್ರಗತಿಪರ ಚಳವಳಿಗಳಲ್ಲಿ ಗುರುತಿಸಿಕೊಂಡು ವೈಚಾರಿಕ ಚಿಂತನೆಗಳನ್ನು ಬಿತ್ತುತ್ತಿದ್ದರು.
ಯೋಗ ಗುರು ಶರತ್ ಜೋಯಿಸ್:
ಮೈಸೂರಿನ ಯೋಗ ಗುರು ಶರತ್ ಜೋಯಿಸ್ ಅಮೆರಿಕದ ವರ್ಜೀನಿಯಾದಲ್ಲಿ ೨೦೨೪ರ ನವೆಂಬರ್ ೧೨ ರಂದು ಹೃದಯಾಘಾತದಿಂದ ಸಾವನ್ನಪ್ಪಿದರು. ಮೈಸೂರಿನ ಯೋಗಗುರು ಪಟ್ಟಾಭಿ ಜೋಯಿಸ್ ಅವರ ಮೊಮ್ಮಗನಾದ ಶರತ್ ತಮ್ಮದೇ ಹೆಸರಿನ ಯೋಗ ಕೇಂದ್ರ ನಡೆಸುತ್ತಿದ್ದರು, ದೇಶ-ವಿದೇಶಗಳಲ್ಲಿ ಯೋಗ ತರಬೇತಿ ನೀಡುತ್ತಿದ್ದರು.
ಮಾಜಿ ಶಾಸಕ ವಾಸು:
ಮೈಸೂರಿನ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ಅವರು ೨೦೨೪ರ ಮಾ.೯ರಂದು ನಿಧನರಾದರು. ೨೦೧೪ರಲ್ಲಿ ಶಾಸಕರಾಗಿದ್ದರು. ಇದಕ್ಕೂ ಮೊದಲು ೧೯೮೩ರಲ್ಲಿ ಮೈಸೂರು ಮಹಾನಗರಪಾಲಿಕೆ ಸದಸ್ಯರಾಗಿ ೧೯೮೯ರಲ್ಲಿ ಮಹಾಪೌರರಾಗಿ ಸೇವೆ ಸಲ್ಲಿಸಿದ್ದರು. ಪ್ರತಿಷ್ಠಿತ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಮಾಲೀಕರಾಗಿ, ಪತ್ರಿಕೋದ್ಯಮಿಯಾಗಿ ಹೆಸರು ಗಳಿಸಿದ್ದ ವಾಸು ಅವರು ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಅವರ ಆಪ್ತರಾಗಿದ್ದರಲ್ಲದೆ, ಅವರು ಸಿಎಂ ಆಗಿದ್ದಾಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ಅರ್ಥಶಾಸ್ತ್ರಜ್ಞ ಪ್ರೊ.ವಿ.ಕೆ.ನಟರಾಜ್:
ಅರ್ಥಶಾಸ್ತ್ರಜ್ಞ ಪ್ರೊ.ವಿ.ಕೆ. ನಟರಾಜ್ ೨೦೨೪ರ ಡಿಸೆಂಬರ್ ೯ರಂದು ನಿಧರಾದರು. ಮೈಸೂರು ವಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರೂ ಆಗಿದ್ದ ಅವರು, ವಿಶ್ವ ಬ್ಯಾಂಕಿನ ಸಲಹೆಗಾರ ರಾಗಿದ್ದರು. ಅಲ್ಲದೆ, ನಟರಾಜ್ ಅವರು ಹಲವಾರು ಸಮಾಜ ಸೇವಾ ಕಾರ್ಯಗಳಲ್ಲೂ ಭಾಗಿಯಾಗಿದ್ದರು.
ರತನ್ ಟಾಟಾ:
ಭಾರತೀಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ೨೦೨೪ರ ಅ.೯ರಂದು ಅನಾರೋಗ್ಯದಿಂದ ನಿಧನರಾದರು. ಟಾಟಾ ಗ್ರೂಪ್ ಮತ್ತು ಟಾಟಾ ಸನ್ಸ್‌ನ ಅಧ್ಯಕ್ಷರಾಗಿದ್ದ ಅವರು ಹಲವಾರು ಸಾಮಾಜಿಕ ಸೇವೆಗಳನ್ನು ಮಾಡಿದ್ದಾರೆ. ಇವರ ಸೇವೆ ಪರಿಗಣಿಸಿ ಭಾರತ ಸರ್ಕಾರವು ೨೦೦೦ನೇ ಇಸವಿಯಲ್ಲಿ ಪದ್ಮಭೂಷಣ ಮತ್ತು ೨೦೦೮ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ:
ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲರೂ ಆದ ಎಸ್.ಎಂ.ಕೃಷ್ಣ ಅವರು ೨೦೨೪ರ ಡಿಸೆಂಬರ್ ೧೦ ರಂದು ನಿಧನರಾದರು. ಅವರಿಗೆ ೯೩ ವರ್ಷ ವಯಸ್ಸಾಗಿತ್ತು. ಅವರು ಕಳೆದ ೬ ತಿಂಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಮೂಲತಃ ಮಂಡ್ಯ ಜಿಲ್ಲೆಯವರಾದ ಕೃಷ್ಣ ಅವರು ೧೯೩೨ರ ಮೇ ೧ ರಂದು ಜನಿಸಿದ್ದರು. ೧೯೯೪ರ ವಿಧಾನಸಭೆ ಚುನಾವಣೆಯಲ್ಲಿ ಪಾಂಚಜನ್ಯ ಮೊಳಗಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಧಾನಸಭೆ ಸ್ಪೀಕರ್, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ, ಕೇಂದ್ರ ಸಚಿವ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
ಮಾಜಿ ಶಾಸಕ ಎಸ್.ಜಯಣ್ಣ:
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ಎಸ್.ಜಯಣ್ಣ ೨೦೨೪ರ ಡಿ.೧೦ ರಂದು ಹೃದಯಾಘಾತದಿಂದ ನಿಧನರಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಜಯಣ್ಣ ಎರಡು ಬಾರಿ ಶಾಸಕರಾಗಿದ್ದರು.
ತಬಲಾ ವಾದಕ ಜಾಕೀರ್ ಹುಸೇನ್:
ಆರು ದಶಕಗಳ ವೃತ್ತಿಜೀವನದಲ್ಲಿ ಸಂಗೀತ ಪ್ರಿಯರನ್ನು ಮಂತ್ರಮುಗ್ಧರನ್ನಾಗಿಸಿದ ವಿಶ್ವವಿಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ ೨೦೨೪ರ ಡಿಸೆಂಬರ್ ೧೫ರಂದು ಅಮೆರಿಕದಲ್ಲಿ ನಿಧನರಾದರು. ಇವರ ಕಲಾಸೇವೆಗೆ ಭಾರತದ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾದ ಹುಸೇನ್ ಬಾಲ್ಯದಲ್ಲಿಯೇ ಸಂಗೀತ ವೃತ್ತಿ ಜೀವನ ಶುರು ಮಾಡಿದ್ದರು. ಇವರ ಕಲಾಸೇವೆಗೆ ೧೯೯೮ರಲ್ಲಿ ಪದ್ಮಶ್ರೀ, ೨೦೦೨ರಲ್ಲಿ ಪದ್ಮಭೂಷಣ, ೨೦೨೩ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಸಂದಿದ್ದವು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್:
ಭಾರತದ ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಡಿಸೆಂಬರ್ ೨೬ ರಂದು ತೀವ್ರ ಉಸಿರಾಟ ತೊಂದರೆಯಿಂದ ನಿಧನರಾದರು. ವಿನಮ್ರತೆ, ಪಾಂಡಿತ್ಯದಿಂದ ಎಲ್ಲರ ಗೌರವಕ್ಕೆ ಪಾತ್ರರಾದ ಹಾಗೂ ಮಿತಭಾಷಿಯೂ ಆದ ಮನಮೋಹನ್ ಸಿಂಗ್ ಅವರು, ೧೯೯೧ರಲ್ಲಿ ಪಿ.ವಿ.ನಂರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಆರ್ಥಿಕ ಸುಧಾರಣೆಗಳು, ಉದಾರೀಕರಣ ನೀತಿಗಳನ್ನು ಜಾರಿಗೆ ತರುವ ಮೂಲಕ ಭಾರತದ ಅರ್ಥ ವ್ಯವಸ್ಥೆಗೆ ಹೊಸ ದಿಕ್ಕು ತೋರಿಸಿದ್ದು, ಸಿಂಗ್ ಅವರನ್ನು ಭಾರತದ ಆರ್ಥಿಕ ವ್ಯವಸ್ಥೆಯ ಸುಧಾರಕ ಎಂದೇ ಕರೆಯುತ್ತಾರೆ. ಮನಮೋಹನ್ ಸಿಂಗ್ ಅವರು ನಂತರ ೨೦೦೪ ರಿಂದ ೨೦೧೪ರವರೆಗೆ ಹತ್ತು ವರ್ಷಗಳು ಪ್ರಧಾನಿಯಾಗಿದ್ದರು. ಪ್ರಧಾನಿ ಹುದ್ದೆಯಿಂದ ನಿರ್ಗಮಿಸುವಾಗ ಎದುರಾದ ಟೀಕೆಗಳಿಗೆ, ದೇಶ ಮುಂದಿನ ದಿನಗಳಲ್ಲಿ ನನ್ನ ಬಗ್ಗೆ ಮಾತನಾಡುತ್ತದೆ ಎಂದು ಹೇಳಿದ್ದರು. ಆ ಮಾತು ಈಗ ನಿಜವಾಗಿದೆ.
ಬೆಂಗಳೂರು : ಹೊಸ ವರ್ಷಾಚರಣೆ ವೇಳೆ ಬೆಂಗಳೂರು ನಗರದಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ…
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಸ್ಥಾನದಿಂದಲೇ ಅನರ್ಹಗೊಂಡು ನ್ಯಾಯಾಲಯದ ತಡೆಯಾಜ್ಞೆಯಿಂದ ಬಚಾವ್ ಆಗಿದ್ದ ಮಾಜಿ ಸಚಿವ ಹಾಗೂ ಶಾಸಕ…
ನವದೆಹಲಿ: ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ…
ಬೆಂಗಳೂರು: ಮಹಾರಾಷ್ಟ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್ ಸೀಜ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ…
ಬೆಂಗಳೂರು: ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯು ಕರ್ನಾಟಕ ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಮುಖವಾಗಿ ಪ್ರಸಿದ್ಧ…
ಟಿ.ನರಸೀಪುರ: ಹೊಸ ವರ್ಷದ ಸಂಭ್ರಮಾಚರಣೆ ಆಚರಿಸಲು ಐತಿಹಾಸಿಕ ಪಂಚಲಿಂಗಗಳ ಪುಣ್ಯಕ್ಷೇತ್ರ ತಲಕಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕಳೆದ ಮೂರು…