ಅಂಕಣಗಳು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಇವರು ಲಕ್ಕಿ ಪೊಲಿಟಿಷಿಯನ್ ಡುಕಾಟಿ ರಾಮಚಂದ್ರಪ್ಪ

ಪಕ್ಷಕ್ಕೆ ಬಹುಮತ ಬಂದರೆ ಸಿಎಂ, ಬರದಿದ್ದರೆ ಪ್ರತಿಪಕ್ಷ ನಾಯಕರಾಗುವ ಪ್ರಭಾವಿ ವ್ಯಕ್ತಿ

ವೇಗವಾಗಿ ಸಾಗುತ್ತಿದ್ದ ಜೀಪು ಸಂಗನಕಲ್ಲು ಕ್ರಾಸ್ ಬಳಿ ತಿರುಗಿಕೊಂಡಾಗ ಡ್ರೈವರ್ ಪಕ್ಕದ ಸೀಟಿನಲ್ಲಿ ಕುಳಿತುಕೊಂಡಿದ್ದ ಕಾಳೇಗೌಡರಿಗೆ ಎಚ್ಚರವಾಯಿತು. ಕಣ್ಣು ಬಿಟ್ಟು ನೋಡಿದರೆ ಸುತ್ತಲ ವಾತಾವರಣದಲ್ಲಿ ಇನ್ನೂ ಇಬ್ಬನಿಯ ಪಸೆ. ಬೆಂಗಳೂರಿನಿಂದ ಅದಾಮಿ ವಿಧಾನಸಭಾ ಕ್ಷೇತ್ರಕ್ಕೆ ತಲುಪಲು ಏನಿಲ್ಲವೆಂದರೂ ಹತ್ತು ಗಂಟೆಗಳ ಸಮಯ ಬೇಕು. ಇಲಾಖೆಯ ಜೀಪು ಓಡಿಸುತ್ತಿರುವ ಶಂಕರ್ ನಾಯ್ಕ ನಿಷ್ಣಾತ ಡ್ರೈವರ್. ಆತ ಜೀಪು ಚಲಾಯಿಸುತ್ತಿದ್ದರೆ ಒಳಗೆ ಕುಳಿತಿದ್ದವರಿಗೆ ಸ್ವಲ್ಪವೂ ಹೆದರಿಕೆಯಾಗುವುದಿಲ್ಲ.

ಶಂಕರ ನಾಯ್ಕ ಎಂತೆಂತಹ ಸಂದರ್ಭಗಳಲ್ಲಿ ಜೀಪು ಓಡಿಸಿದ್ದಾನೆ? ಕುಖ್ಯಾತ ಕ್ರಿಮಿನಲ್ಲುಗಳನ್ನು ಹಿಡಿಯುವುದರಿಂದ ಹಿಡಿದು, ಮುಂಬೈ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ ಗಡಿ ಭಾಗದ ಹಳ್ಳಿಯೊಂದರಲ್ಲಿ ಅಡಗಿಕೊಂಡಿದ್ದ ಕುಖ್ಯಾತ ಘರ್ ವಾಲಿ ಚಮ್ಕಾದೇವಿಯನ್ನು ಹಿಡಿ ಯುವ ಆಪರೇಷನ್ನಿನ ತನಕ. ಶಂಕರ ನಾಯ್ಕನ ಡ್ರೆ ವಿಂಗ್ ಚಾಕಚಕ್ಯತೆ ಎಷ್ಟೆಂದರೆ, ಆತ ಕ್ರಿಮಿನಲ್ಲುಗಳನ್ನು ಬೆನ್ನಟ್ಟಿಹೋಗುವುದಷ್ಟೇ ಅಲ್ಲ, ಅದಕ್ಕಿಂತ ಮುಖ್ಯವಾಗಿ ಕ್ರಿಮಿನಲ್ಲುಗಳು ತಪ್ಪಿಸಿಕೊಳ್ಳುವ ದಾರಿಯನ್ನು ಮುಂಚಿತವಾಗಿ ಗ್ರಹಿಸಿ ಬೇರೆ ದಾರಿಯಿಂದ ಅವರ ಮುಂದೆ ಹೋಗಿ ಗಾಬರಿ ಹುಟ್ಟಿಸುವ ತನಕ.

ಈ ಕಾರಣಕ್ಕಾಗಿಯೇ ಕಾಳೇಗೌಡರಿಗೆ ಅವನೆಂದರೆ ಇಷ್ಟ. ಕಠಿಣ ಸಂದರ್ಭಗಳಲ್ಲಿ ಎಂತಹದೇ ರಿಸ್ಕು ತೆಗೆದುಕೊಳ್ಳಬಲ್ಲ ಶಂಕರ ನಾಯ್ಕ ಅಂತ ಯೋಚಿಸುತ್ತಿದ್ದಾಗ ಕಾಳೇಗೌಡರಿಗೆ ಪಕ್ಕಂತ ನಗು ಬಂತು. ಇವನು ಜೀಪು ಓಡಿಸುವ ವಿಷಯದಲ್ಲಿ ಮಾತ್ರವೇ ಅಲ್ಲ. ಬದುಕಿನ ವಿಷಯದಲ್ಲೂ ವಿಪರೀತ ರಿಸ್ಕು ತೆಗೆದುಕೊಳ್ಳುತ್ತಾನೆ. ಇಲ್ಲ ಅಂದರೆ ಈ ಕಾಲದಲ್ಲಿ ಮೂರು ಮೂರು ಮದುವೆಯಾಗುವುದು, ನಾಲ್ಕು ಮಕ್ಕಳ ತಂದೆಯಾಗುವುದು ಎಂದರೆ ಸಣ್ಣ ರಿಸ್ಕೇ? ಹೀಗೆ ನೆನಪಿಗೆ ಬಂದ ವಿಷಯದ ಜತೆ ಪಕ್ಕಂತ ನಗು ಬಂದಾಗ ಕಾಳೇಗೌಡರು ಓರೆಗಣ್ಣಿನಿಂದ ಶಂಕರ ನಾಯ್ಕನ ಕಡೆ ನೋಡಿದರು.

ಇವರು ಗಮನಿಸುತ್ತಿರುವುದು ಅರಿವಿಗೆ ಬಂದಿದ್ದರಿಂದ ಶಂಕರ ನಾಯ್ಕನೂ ಸಣ್ಣಗೆ ನಕ್ಕ. ಅರೇ ಯಾಕೋ ನಗ್ತಿದೀಯ ಶಂಕ್ರ? ಅಂತ ಕೇಳಿದರೆ, ‘ಅಲ್ಲ,ಬಾಸ್ ನಗುವಾಗ ನಾನು ಸುಮ್ಮನಿದ್ದರೆ ಹೇಗೆ? ನಿಮಗೆ ನಗುವ ಮನಸ್ಸಾಗುತ್ತಿದೆ ಎಂದರೆ ಮನಸ್ಸಿಗೆ ಏನೋ ಖುಷಿಯಾಗಿರಬೇಕು. ನಿಮಗೆ ಖುಷಿಯಾಗಿದೆ ಎಂದರೆ ನನಗೂ ಖುಷಿ’ ಎಂದ ಶಂಕರ ನಾಯ್ಕ.

ಬಡ್ಡೀ ಮಗ, ಜತೆಯಲ್ಲಿರುವವರ ಜತೆ ಹಿತವಾಗಿ ನಡೆದುಕೊಳ್ಳುವುದು ಹೇಗೆ ಎಂಬುದು ಇವನಿಗೆ ಚೆನ್ನಾಗಿ ಗೊತ್ತು ಅಂತನ್ನಿಸಿ, ಅದೇ ಓಘದಲ್ಲಿ ಶಂಕರ ನಾಯ್ಕನಿಗೆ ಪ್ರಶ್ನೆ ಹಾಕಿದರು. ‘ಅಲ್ಲೋ ನಾಯ್ಕ, ಇವತ್ತು ಬದುಕಿನಲ್ಲಿ ಒಂದು ಮದುವೆ ಎಂಬುದೇ ದುಬಾರಿ. ಅದರಲ್ಲೂ ಮಕ್ಕಳು, ಮರಿ ಅಂತ ಅವುಗಳನ್ನು ಬೆಳೆಸುವುದು, ಓದಿಸುವುದು ಅಂದರೆ ಶಿವ ಶಿವ, ಬೆವರು ಬಿಟ್ಟು ಹೋಗುತ್ತದೆ. ಕಟ್ಟಿಕೊಂಡವರ ಆಸೆ ಪೂರೈಸುವ ಜತೆ,ಮಕ್ಕಳ ಬೇಡಿಕೆಗಳನ್ನು ಪೂರೈಸುವಷ್ಟರಲ್ಲಿ ದುಡಿಯುವ ಗಂಡಸು ಹೈರಾಣಾಗಿ ಬಿಡುತ್ತಾನೆ. ಆದರೆ ಇಂತಹ ಕಾಲದಲ್ಲಿ ಅದು ಹೇಗೋ ನೀನು ಮೂರು ಮೂರು ಮದುವೆ ಮಾಡಿಕೊಂಡು ಸಂಭಾಳಿಸುತ್ತಿದ್ದೀ’ ಎಂದು ಕಾಳೇಗೌಡರು ಪ್ರಶ್ನಿಸಿದರು.

ಅವರ ಪ್ರಶ್ನೆಯನ್ನು ನಿರಾಯಾಸವಾಗಿ ಸ್ವೀಕರಿಸಿದ ಶಂಕರ ನಾಯ್ಕ, ‘ಅಯ್ಯೋ, ಏನು ಮಾಡೋದು ಸಾರ್, ಅಣ್ಣನ ಮಗಳು ಎಂದರೆ ನಮ್ಮ ತಾಯಿಗೆ ಬಹಳ ಇಷ್ಟ. ನೋಡುವುದಕ್ಕೂ ಕಟ್ಟುಮಸ್ತಾಗಿದ್ದ ಹುಡುಗಿ, ಹೇಗೆ ಬೇಡವೆನ್ನಲಿ? ಹೀಗಾಗಿ ಮನೆಯವರ ಜತೆ ನನಗೂ ಇಷ್ಟವಾಗಿ ಮದುವೆಯಾದೆ. ಆನಂತರ ಕೆಲಸ ಸಿಕ್ಕು, ಜೀಪು ಓಡಿಸಲು ಶುರು ಮಾಡಿದ ಮೇಲೆ ಇನ್ನೂ ಎರಡು ತಗಲಿಕೊಂಡವು. ಏನೋ ಒಟ್ಟಿನಲ್ಲಿ ನಡೀತಾ ಇದೆ ಸಾರ್, ಅದೃಷ್ಟ ಎಂದರೆ ಮೂವರೂ ಹೊಂದಿಕೊಂಡು ಹೋಗುತ್ತಿದ್ದಾರೆ. ಆಗಾಗ ಸ್ವಲ್ಪ ರಗಳೆಗಳಾಗುತ್ತವೆ. ಆದರೆ ದುಡಿಯುವ ಗಂಡಸಿಗೆ ಕಷ್ಟವಾದರೆ ತಮಗೇ ಕಷ್ಟ ಅಂತ ಮೂವರೂ ಹೊಂದಿಕೊಂಡಿದ್ದಾರೆ. ಸದ್ಯಕ್ಕೇನೋ ಓಕೆ. ಮುಂದೇನು ಕತೆಯೋ ಗೊತ್ತಿಲ್ಲ’ ಎಂದು ನಕ್ಕ.

ಹೀಗೆ ಮಾತನಾಡುತ್ತಾ ಮುಂದೋಡುತ್ತಿದ್ದ ಜೀಪು ಶಾಂತನಕೇರಿ ಗ್ರಾಮದ ಬಳಿ ಬಂದಾಗ ‘ಸಾರ್, ಈ ಬಸ್ ಸ್ಟಾ ಂಡ್ ಹತ್ತಿರದ ಟೀ ಷಾಪು ಇದೆಯಲ್ಲ? ತುಂಬ ಮಸ್ತ್ ಸಾರ್, ಒಂದು ಸಲ ನೀವು ಕುಡಿದು ನೋಡಬೇಕು. ಒಂದು ಸಲ ಕುಡಿದರೆ ಇನ್ಯಾವತ್ತೂ ನೀವದನ್ನು ಮರೆಯುವುದಿಲ್ಲ ಎನ್ನುತ್ತಾ ಜೀಪು ನಿಲ್ಲಿಸಿದ. ಅವನು ಜೀಪು ನಿಲ್ಲಿಸಿದ ತಕ್ಷಣ ಕೆಳಗಿಳಿಯಲು ಕಾಳೇಗೌಡರಿಗೆ ಮನಸ್ಸಾದರೂ ತಕ್ಷಣ ವಿಷಯ ನೆನಪಿಗೆ ಬಂತು. ಜೀಪಿನ ಅಡಿಯಲ್ಲಿ ಅಡಗಿಸಿಟ್ಟ ನೋಟುಗಳ ಕಂತೆ, ಕಂತೆ. ಅದನ್ನು ಬಿಟ್ಟು ಕೆಳಗಿಳಿಯುವುದು ಸೇಫ್ ಅಲ್ಲ ಅನ್ನಿಸಿದಾಗ ‘ನಾಯ್ಕ ನೀನು ಹೋಗಿ ಟೀ ತೆಗೆದುಕೊಂಡು ಬಾ’ ಎಂದರು.

ಶಂಕರ ನಾಯ್ಕ ದುಸುರಾ ಮಾತನಾಡದೆ ಕೆಳಗಿಳಿದು ಹೋದ ಮೇಲೆ ಕಾಳೇಗೌಡರು ಜೀಪಿನ ಹಿಂಭಾಗದ ಸೀಟಿನಲ್ಲಿ ನಿದ್ರಿಸಿದ್ದ ಗೋಪಾಲಯ್ಯನನ್ನು ನೋಡಿದರು. ಅಷ್ಟೊತ್ತಿಗೆ ಗೋಪಾಲಯ್ಯನಿಗೂ ಎಚ್ಚರವಾಗಿ ಕಾಳೇಗೌಡರ ಮುಖ ನೋಡಿದ. ‘ಏನ್ರೀ ಗೋಪಾಲಯ್ಯ, ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ರೆನೋಡಿ. ರಾಜಕಾರಣದಲ್ಲಿದ್ದರೂ ನಿಮಗೆ ನಿದ್ರೆ ಬರುತ್ತಿದೆ ಎಂದರೆ ನಿಮ್ಮಷ್ಟು ಸುಖ ಜೀವಿ ಯಾರೂ ಇರಲು ಸಾಧ್ಯವಿಲ್ಲ ಬಿಡಿ’ ಎಂದರು ಕಾಳೇಗೌಡ.

ಅವರ ಮಾತು ಕೇಳಿದ ಗೋಪಾಲಯ್ಯ ಕಣ್ಣು ಉಜ್ಜಿಕೊಳ್ಳುತ್ತಾ: ‘ಎಲ್ಲಿಯ ನಿದ್ರೆ ಸಾರ್? ಅದಾಮಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ವತಿಯಿಂದ ಸ್ಪರ್ಧಿಸಿರುವ ಡುಕಾಟಿ ರಾಮಚಂದ್ರಪ್ಪನೋರು ಸೋಲುವಂತೆ ನೋಡಿಕೊಳ್ಳಬೇಕು ಅಂತ ನಮ್ಮ ನಾಯಕರು ನಮಗೆ ಕೆಲಸ ಕೊಟ್ಟ ಮೇಲೆ ನಿದ್ರೆ ಹೇಗೆ ಬರುತ್ತದೆ ಹೇಳಿ. ಸುಮ್ಮನೆ ಜೊಂಪು ಅಷ್ಟೇ’ ಎಂದ. ಅದೇನೋ ಸರಿ, ಡುಕಾಟಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ರಾಮಚಂದ್ರಪ್ಪ ಅವರು, ಅತ್ತ ಭಗಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದಾರೆ.

ಎಷ್ಟೇ ಆದರೂ ಮುಖ್ಯಮಂತ್ರಿಯಾಗಿದ್ದವರು. ಈ ಬಾರಿಯ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ವಿರೋಧಿಗಳು ಯತ್ನಿಸಬಹುದು ಅಂತ ಒಂದು ಕ್ಷೇತ್ರದ ಬದಲು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ನನಗೆ ಗೊತ್ತಿರುವ ಪ್ರಕಾರ ಭಗಂಡೇಶ್ವರಿ ರಾಮಚಂದ್ರಪ್ಪನವರ ವಿರುದ್ಧ ಸ್ಪಽಸಿರುವ ಬಿ.ಟಿ.ಜವರೇಗೌಡರು ನಿಶ್ಚಿತವಾಗಿ ಗೆಲ್ಲುತ್ತಾರೆ. ಏಕೆಂದರೆ ಅವರದು ಮಾಜಿ ಪ್ರಧಾನಿಗಳ ಪಕ್ಷ. ಜತೆಗೆ ಅವರದೇ ಸಮುದಾಯದ ಮತಗಳು ಸಾಲಿಡ್ಡಾಗಿರುವುದರಿಂದ ಅಲ್ಲಿ ರಾಮಚಂದ್ರಪ್ಪನವರು ಗೆಲ್ಲುವುದು ಕಷ್ಟ. ಹೀಗಾಗಿ ಅವರು ಅದಾಮಿ ಕ್ಷೇತ್ರದಲ್ಲೂ ಸೋಲುವಂತಾಗಬೇಕು ಎಂಬುದು ನಮ್ಮ ನಾಯಕರ ಇಚ್ಛೆ.

ಏಕೆಂದರೆ ಒಂದು ಕ್ಷೇತ್ರದಲ್ಲಿ ಗೆದ್ದರೂ ರಾಮಚಂದ್ರಪ್ಪನೋರು ಪುನಃ ಮುಖ್ಯಮಂತ್ರಿ ಪಟ್ಟ ನನಗೇ ಸಿಗಬೇಕು ಅಂತ ಪಟ್ಟು ಹಿಡಿಯುತ್ತಾರೆ. ಎಷ್ಟೇ ಆದರೂ ಜನನಾಯಕ. ಅವರನ್ನು ಉಚಾಯಿಸಿ, ನಮ್ಮ ನಾಯಕರಿಗೆ ಮುಖ್ಯಮಂತ್ರಿ ಪಟ್ಟ ಕೊಡಲು ಹೈಕಮಾಂಡ್ ವರಿಷ್ಠರು ಒಪ್ಪುವುದಿಲ್ಲ. ಒಂದು ವೇಳೆ ನಮ್ಮ ಪಕ್ಷವೇ ಅಽಕಾರಕ್ಕೆ ಬರಲಿಲ್ಲ ಅಂತಿಟ್ಟುಕೊಳ್ಳಿ. ಆಗಲೂ ರಾಮಚಂದ್ರಪ್ಪನೋರು ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನ ಬೇಕು ಅಂತ ಬಿಗಿಯಾಗಿ ಕೂರುತ್ತಾರೆ. ಹೀಗಾಗಿ ನಮ್ಮ ನಾಯಕರು ಮುಖ್ಯಮಂತ್ರಿಯಾಗುವ ಅಥವಾ ವಿಧಾನಸಭೆಯ ಪ್ರತಿಪಕ್ಷ ನಾಯಕನಾಗುವ ಕನಸು ಕಾಣಬೇಕೆಂದರೆ ಭಗಂಡೇಶ್ವರಿ ಕ್ಷೇತ್ರದ ಜತೆಗೆ ಅದಾಮಿ ಕ್ಷೇತ್ರದಲ್ಲೂ ರಾಮಚಂದ್ರಪ್ಪನವರು ಸೋಲಬೇಕು.

ಹೀಗಾಗಿಯೇ ನಮ್ಮ ನಾಯಕ ಕೆಂಗಣ್ಣೇಗೌಡ್ರು ಅದಾಮಿ ಕ್ಷೇತ್ರದಲ್ಲಿರುವ ನಮ್ಮ ಪಕ್ಷದ ನಾಯಕರ ಜತೆ ಒಳ ಒಪ್ಪಂದ ಮಾಡಿಕೊಂಡಿರುವುದು. ಮತಕ್ಕೆ ಎರಡು ಸಾವಿರ ಅಂತ ಕೊಡಿಸಿ ಬಿಡಿ. ನಮ್ಮ ಪಕ್ಷದ ಮಿನಿಮಮ್ ಆರು ಸಾವಿರ ಮತಗಳು ರಾಮಚಂದ್ರಪ್ಪ ನವರ ಎದುರಾಳಿ ಶ್ರೀ ಭೀಮುಲು ಅವರಿಗೆ ವರ್ಗಾವಣೆಯಾಗುವಂತೆ ಮಾಡುತ್ತೇವೆ ಅಂತ ಅಲ್ಲಿಂದ ಮೆಸೇಜು ಇರುವುದರಿಂದ ‘ಯಾವುದಕ್ಕೂ ಇರಲಿ, ಮತದಾರರ ಮಟ್ಟದಲ್ಲಿ ಮಾತ್ರವಲ್ಲ, ಬೂತ್ ಮಟ್ಟದ ನಾಯಕರನ್ನೂ ಖರೀದಿಸಿ ರಾಮಚಂದ್ರಪ್ಪನವರು ಸೋಲುವಂತೆ ನೋಡಿಕೊಳ್ಳಿ’ ಅಂತ ಐದು ಕೋಟಿ ಕಳಿಸಿದ್ದಾರೆ ಎಂದ. ಗೋಪಾಲಯ್ಯ ಈ ಮಾತು ಹೇಳುತ್ತಿದ್ದಂತೆಯೆ ಕಾಳೇಗೌಡರಿಗೆ ವಿಷಯ ಸ್ಪಷ್ಟವಾಯಿತು. ಎಷ್ಟೇ ಆದರೂ ತಾವು ದಕ್ಷ ಪೋಲೀಸ್ ಅಧಿಕಾರಿ. ಸೇವಾವಧಿಯಲ್ಲಿ ಕಪ್ಪು ಚುಕ್ಕೆಯೇ ಇಲ್ಲದ ವ್ಯಕ್ತಿ. ಇಂತಹ ವ್ಯಕ್ತಿ ಚುನಾವಣೆಯ ಕರ್ತವ್ಯದಲ್ಲಿರುವಾಗ ಅವರ ನೆರವಿನಿಂದಲೇ ಈ ಪ್ರಮಾಣದ ಹಣವನ್ನು ಅದಾಮಿ ಕ್ಷೇತ್ರಕ್ಕೆ ಸಾಗಿಸುವುದು ಸೇಫು ಅಂತ ಕೆಂಡಗಣ್ಣೇಗೌಡರು ನನಗೆ ಈ ಕೆಲಸ ವಹಿಸಿದ್ದಾರೆ. ಇಲ್ಲ,ಇಲ್ಲ, ನಾನು ಈ ಕೆಲಸ ಮಾಡುವುದಿಲ್ಲ ಎಂದು ಹೇಳುವುದೂ ಕಷ್ಟ. ಏಕೆಂದರೆ ಅವರು ನಿರೀಕ್ಷಿಸಿದಂತೆ ಅದಾಮಿ ಕ್ಷೇತ್ರದಲ್ಲಿ ರಾಮಚಂದ್ರಪ್ಪನವರು ಸೋತು, ಮುಂದಿನ ವಿಧಾನಸಭೆಯಲ್ಲಿ ಕೆಂಡಗಣ್ಣೇಗೌಡರು ಮುಖ್ಯಮಂತ್ರಿಯೋ, ಪ್ರತಿಪಕ್ಷ ನಾಯಕರೋ ಆಗಿ ಕುಳಿತರೆ ನಾಳೆ ತಮಗೇ ಕಿರಿಕಿರಿ. ಪ್ರಮೋಷನ್ನು, ಪೋಸ್ಟಿಂಗು ಹೀಗೆ ಎಲ್ಲ ವಿಷಯಗಳಲ್ಲೂ ಕೆಂಡಗಣ್ಣೇ ಗೌಡರ ಅಡ್ಡಗಾಲು ಗ್ಯಾರಂಟಿ. ಹಾಗಂತಲೇ ಅವರು ನೀಡಿದ ಸೂಚನೆಯಂತೆ, ಈ ಗೋಪಾಲಯ್ಯನ ಜತೆ ಸೇರಿ ಅದಾಮಿಗೆ ಹೊರಟಿದ್ದು.ಇನ್ನೇನು ಒಂದೆರಡು ಗಂಟೆ ಕಳೆಯುವಷ್ಟರಲ್ಲಿ ಅದಾಮಿಯ ಹೊರಭಾಗಕ್ಕೆ ತಲುಪುತ್ತೇವೆ. ಅಲ್ಲಿ ಕೆಂಡಗಣ್ಣೇಗೌಡರು ಸೂಚಿಸಿದ ವ್ಯಕ್ತಿಯ ಕೈಗೆ ಹಣದ ಮೂಟೆಗಳನ್ನು ತಲುಪಿಸಿದರೆ ಸಾಕು, ತಮ್ಮ ಕೆಲಸ ಮುಗಿದಂತೆ ಅನ್ನಿಸಿ ಕಾಳೇಗೌಡರು ತಣ್ಣಗೆ ಗೋಪಾಲಯ್ಯನ ಮುಖ ನೋಡಿದರು. ಗೋಪಾಲಯ್ಯ ಕೂಡಾ ನಸು ನಗುತಾ ‘ಇವತ್ತು ಕೆಲಸ ಮುಗಿದ ಮೇಲೆ ಸಾಹೇಬರು ಅದಾಮಿಯಲ್ಲಿ ಉಳಿಯುತ್ತೀರಾ? ನೀವು ಬಯಸಿದಂತಹ ಊಟ ಮಾಡಿಕೊಂಡು ನೆಮ್ಮದಿಯಾಗಿ ಎರಡು ದಿನ ಇರಬಹುದು’ ಅಂತ ಮಾರ್ಮಿಕವಾಗಿ ನಕ್ಕ. ಆದರೆ ಕಾಳೇಗೌಡರು ಅದನ್ನು ಗಮನಿಸದವರಂತೆ ‘ಅಯ್ಯೋ ಊಟದ ಕತೆ ಹಾಳಾಯಿತು. ಎಲೆಕ್ಷನ್ ಡ್ಯೂಟಿ ಇದೆಯಲ್ಲ ಗೋಪಾಲಯ್ಯ?ಮೊದಲೇ ಈ ಎಲೆಕ್ಷನ್ ಕಮೀಷನ್ನಿನವರ ಕಾಟ. ಬೇಡಪ್ಪ ಬೇಡ’ ಎಂದರು.

ಹಾಗೆ ಹೇಳುತ್ತಲೇ ಗೋಪಾಲಯ್ಯನ ಬಳಿ ಮಾತಿಗಿಳಿದ ಕಾಳೇಗೌಡರು ‘ಅಲ್ಲ ಗೋಪಾಲಯ್ಯ ಈ ಸಲ ಅದಾಮಿ ಕ್ಷೇತ್ರದಲ್ಲಿ ರಾಮಚಂದ್ರಪ್ಪನವರು ಸೋತರೆ ಕೆಂಡಗಣ್ಣಸ್ವಾಮಿಯವರು ಮುಖ್ಯಮಂತ್ರಿಯಾಗುವುದು ಗ್ಯಾರಂಟಿ ಅನ್ನಿಸುತ್ತದಾ? ಎಂದರು. ‘ನನಗೇನೋ ಹಾಗನ್ನಿಸುವುದಿಲ್ಲ ಸಾರ್, ಏಕೆಂದರೆ ರಾಜ್ಯದಲ್ಲಿ ಒಮ್ಮೆ ಅಧಿಕಾರಕ್ಕೆ ಬಂದ ಪಕ್ಷ ಎರಡನೇ ಬಾರಿ ಅಧಿಕಾರ ಹಿಡಿಯುವುದು ಕಷ್ಟ. ೧೯೮೩ರಲ್ಲಿ ಅಧಿಕಾರಕ್ಕೆ ಬಂದ ಜನತಾ ಪರಿವಾರ, ೧೯೮೫ರಲ್ಲಿ ಮರಳಿ ಅಧಿಕಾರ ಹಿಡಿಯಿತು ಎಂಬುದನ್ನು ಬಿಟ್ಟರೆ, ಆನಂತರ ಒಮ್ಮೆ ಅಧಿಕಾರಕ್ಕೆ ಬಂದ ಪಕ್ಷ, ಮರಳಿ ಅಧಿಕಾರಕ್ಕೆ ಬಂದ ನಿದರ್ಶನಗಳಿಲ್ಲ. ಹೀಗಾಗಿ ಈ ಸಲ ನಮ್ಮ ಪಕ್ಷ ವಿಪಕ್ಷದ ಸ್ಥಾನದಲ್ಲಿ ಕೂರುವುದು ಬಹುತೇಕ ಗ್ಯಾರಂಟಿ. ಇದು ಕೆಂಡಗಣ್ಣೇಗೌಡರಿಗೂ ಗೊತ್ತು. ಹೀಗಾಗಿ ಈ ಸಲವೇ ರಾಮಚಂದ್ರಪ್ಪನವರು ಬೋರ್ಡಿಗಿಲ್ಲದಂತಾಗಿ ಬಿಟ್ಟರೆ ಮುಂದೆ ತಾವು ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿ, ಮುಂದೆ ಮುಖ್ಯಮಂತ್ರಿ ಹುದ್ದೆಗೆ ಹತ್ತಿರವಾಗಬಹುದು ಎಂದು ಲೆಕ್ಕ ಹಾಕಿದ್ದಾರೆ’ ಎಂದ ಗೋಪಾಲಯ್ಯ.

ಅವನ ಮಾತು ಕೇಳಿ ಕಾಳೇಗೌಡರು ತಲೆದೂಗಿದರು:‘ಏನೇ ಹೇಳ್ರೀ. ಈ ನಾಯಕರ ಲೆಕ್ಕಾಚಾರಗಳೇ ವಿಸ್ಮಯಕಾರಿ. ಮುಂದ್ಯಾವತ್ತೋ ಅಧಿಕಾರ ಹಿಡಿಯಲು, ಇವತ್ತೇ ಎದುರಾಳಿಯನ್ನು ಮುಗಿಸುವುದು ಅಂದರೆ ಅದೇನು ತಲೆ, ಅದೇನು ಕ್ಯಾಲ್ಕುಲೇಷನ್ನು ಅಂತ ಅವರು ಉದ್ಗರಿಸಿದಾಗ ಗೋಪಾಲಯ್ಯ ಅವರನ್ನೇ ನೋಡುತ್ತಾ ಹೇಳಿದ. ‘ನನಗೂ ಕೆಂಡಗಣ್ಣೇಗೌಡರ ಟೆಕ್ನಿಕ್ಕು ವಿಸ್ಮಯ ಮೂಡಿಸುತ್ತದೆ. ಆದರೆ ರಾಜಕಾರಣದಲ್ಲಿ ಇವೆಲ್ಲ ಅನಿವಾರ್ಯ. ಏಕೆಂದರೆ ತಮ್ಮ ಹಾದಿಗೆ ಅಡ್ಡ ಬರುವವರು ಯಾರು? ಅವರನ್ನು ಯಾವಾಗ ಎಲ್ಲಿ ಮುಗಿಸಬೇಕು? ಅಂತ ಯೋಚಿಸುತ್ತಲೇ ಇರಬೇಕು. ಹೀಗಾಗಿ ಇವತ್ತಿನ ರಾಜಕಾರಣದಲ್ಲಿ ನಾಯಕರಿಗೆ ಒಂದು ತಲೆಯಲ್ಲ. ದಶಕಂಠ ರಾವಣನಂತೆ ಹತ್ತು ತಲೆ ಇರಬೇಕು. ಆದರೆ ಇಷ್ಟೆಲ್ಲ ಆದ ಮೇಲೂ ನನಗೊಂದು ಡೌಟಿದೆ’ ಎಂದ. ‘ಏನ್ರೀ ಗೋಪಾಲಯ್ಯ ನಿಮ್ಮ ಡೌಟು? ಎಂದರು. ಅವರ ಪ್ರಶ್ನೆಯನ್ನು ಕೇಳಿದ ಗೋಪಾಲಯ್ಯ ಈ ರಾಮಚಂದ್ರಪ್ಪನೋರು ಇದ್ದಾರಲ್ಲ? ಇವರು ಬಲೇ ಲಕ್ಕಿ ಪೊಲಿಟೀಷಿಯನ್ನು. ಇನ್ನೇನು ಎದುರಾಳಿಗಳ ಹೊಡೆತಕ್ಕೆ ಫಿನಿಷ್ ಆದರು ಎಂದುಕೊಳ್ಳುವಷ್ಟರಲ್ಲಿ ಮತ್ತೆ ಫಿನಿಕ್ಸ್‌ನಂತೆ ಮೇಲೇಳುತ್ತಾರೆ. ನಮ್ಮ ಪಕ್ಷಕ್ಕೆ ಬಂದಾಗ ಭಗಂಡೇಶ್ವರಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತಲ್ಲ? ಆ ಚುನಾವಣೆಯಲ್ಲಿ ಎದುರಾಳಿಗಳ ಜತೆ ನಮ್ಮವರೂ ಸೇರಿಕೊಂಡು ರಾಮಚಂದ್ರಪ್ಪನೋರು ಸೋತೇ ಹೋದರು ಎನ್ನುವ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಚುನಾವಣಾಧಿಕಾರಿಯಾಗಿ ಗಿಲ್ಮೋರ್ ಸಿಂಗ್ ಅವರು ಬಂದರಲ್ಲ ಅವರ ಬಿಗಿ ಮತ್ತು ಅದೇ ಸಮಯದಲ್ಲಿ ಗುಮ್ಮಲೂರು ಸೇರಿದಂತೆ ಕೆಲ ಗ್ರಾಮಗಳಲ್ಲಿ ಮತದಾನವೇ ನಡೆಯದ ವಾತಾವರಣ ಸೃಷ್ಟಿಯಾಗಿ ರಾಮಚಂದ್ರಪ್ಪನೋರು ಸಣ್ಣ ಅಂತರದಲ್ಲಿ ಗೆದ್ದರು. ಒಂದು ವೇಳೆ ಗುಮ್ಮಲೂರಿನಂತಹ ಹಳ್ಳಿಗಳಲ್ಲಿ ಮತದಾನ ನಡೆದಿದ್ದರೆ ರಾಮಚಂದ್ರಪ್ಪ ಸೋಲುವುದು ಖಚಿತವಾಗಿತ್ತು. ಏಕೆಂದರೆ ಅಲ್ಲಿ ರಾಮಚಂದ್ರಪ್ಪ ಅವರನ್ನು ವಿರೋಧಿಸುವವರ ಸಂಖ್ಯೆ ಹೆಚ್ಚಿತ್ತು. ಆದರೆ ಲಕ್ಕು ಎಂಬುದು ಹಣೆಯಲ್ಲಿ ಬರೆದಿದ್ದರೆ ಏನು ಮಾಡಲು ಸಾಧ್ಯ? ಸೋಲಬೇಕಿದ್ದ ರಾಮಚಂದ್ರಪ್ಪ ಗೆದ್ದು ಬಿಟ್ಟರು.

ಈ ಸಲ ಅದಾಮಿ ಕ್ಷೇತ್ರದಲ್ಲೂ ಅಷ್ಟೇ. ಕೆಂಡಗಣ್ಣಸ್ವಾಮಿಯವರ ಪ್ಲಾನಿನ ಪ್ರಕಾರ ನಡೆದರೆ, ನಾವು ತಂದಿರುವ ಹಣ ತಲುಪಬೇಕಾದಲ್ಲಿಗೆ ತಲುಪಿದರೆ ನೋ ಡೌಟ್, ರಾಮಚಂದ್ರಪ್ಪ ಸೋಲುತ್ತಾರೆ. ಇಲ್ಲದಿದ್ದರೆ ಕಷ್ಟ ಎಂದ. ಅವನ ಮಾತು ಕೇಳಿದ ಕಾಳೇಗೌಡರು:’ಚುನಾವಣೆಯಲ್ಲಿ ದುಡ್ಡಿ ಗಿಂತ ಜಾತಿ ಹೆಚ್ಚು ಕೆಲಸ ಮಾಡುತ್ತದಲ್ಲವೇ?ಈಗ ರಾಮಚಂದ್ರಪ್ಪ ನೋರನ್ನೇ ನೋಡಿ. ಅದಾಮಿ ಕ್ಷೇತ್ರದಲ್ಲಿ ಅವರ ಜಾತಿಯವರೇ ಹೆಚ್ಚು. ಉಳಿದಂತೆ ಮುಸ್ಲಿಮರು,ಪರಿಶಿಷ್ಟ ಸಮುದಾಯ ದವರ ಮತಗಳು ಸೇರಿಕೊಂಡರೆ ರಾಮಚಂದ್ರಪ್ಪನವರು ಗೆಲ್ಲುವುದು ಕಷ್ಟವಾಗುವುದಿಲ್ಲ ಅಲ್ಲವಾ?’ ಎಂದರು.

ಆದರೆ ನಸು ನಕ್ಕ ಗೋಪಾಲಯ್ಯ: ‘ಚುನಾವಣೆಯಲ್ಲಿ ಜಾತಿ ಕೆಲಸ ಮಾಡುತ್ತದೆ ನೋ ಡೌಟ್. ಆದರೆ ನಿರ್ಣಾಯಕ ಹೊತ್ತಿನಲ್ಲಿ ದುಡ್ಡು ಕೆಲಸ ಮಾಡುತ್ತದೆ. ದುಡ್ಡಿನ ಮುಂದೆ ಏನೂ ಇಲ್ಲ ಎಂಬ ಮನ:ಸ್ಥಿತಿ ಬಹುತೇಕ ಮತದಾರರಲ್ಲಿರುವುದರಿಂದ ದುಡ್ಡು ಕೆಲಸ ಮಾಡತೊಡಗುತ್ತದೆ. ಈಗ ರಾಮಚಂದ್ರಪ್ಪನವರು ಗೆಲ್ಲುವ ಕ್ಯಾಂಡಿಡೇಟ್ ಅನ್ನಿಸುತ್ತಿದೆಯಾದರೂ, ಈಗ ನಾವು ತೆಗೆದುಕೊಂಡು ಹೋಗುತ್ತಿರುವ ದುಡ್ಡು ನಾಳೆಯೊಳಗಾಗಿ ನಿರ್ದಿಷ್ಟ ಮತದಾರರಿಗೆ ತಲುಪಿದರೆ ರಾಮಚಂದ್ರಪ್ಪನವರು ಸೋಲುತ್ತಾರೆ’ಎಂದ. ಅವನು ಇಷ್ಟು ಹೇಳುವ ವೇಳೆಗೆ ಕೈಯ್ಲಲ್ಲಿ ಟೀ ಕಪ್ಪುಗಳಿದ್ದ ಒಂದು ತಟ್ಟೆಯನ್ನು ತಂದ ಶಂಕರ ನಾಯ್ಕ: ‘ಸಾರಿ ಸಾರ್,ಲೇಟಾಗಿ ಬಿಡ್ತು’ ಎಂದ. ದುಸುರಾ ಮಾತನಾಡದೆ ಗೋಪಾಲಯ್ಯ ಮತ್ತು ಕಾಳೇಗೌಡರು ಟೀ ಕಪ್ಪುಗಳನ್ನೆತ್ತಿಕೊಂಡು ಬಾಯಿಗೆ ಆನಿಸಿದರು. ‘ಆಹಾ ದಿವ್ಯವಾದ ಟೀ. ಬಲೇ ಇದೀಯ ಶಂಕರಪ್ಪ ನೀನು. ಇಂತಹ ಟೇಸ್ಟು ಗೊತ್ತಿರುವುದರಿಂದ ತಾನೇ ನಿನಗೆ ಮೂರು,ಮೂರು’ ಎಂದು ಕಾಳೇಗೌಡರು ನಕ್ಕರು. ಗೋಪಾಲಯ್ಯ ಕೂಡಾ ನಕ್ಕ. ಇದಾದ ನಂತರ ಜೀಪು ಅದಾಮಿಯತ್ತ ಹೊರಟಾಗ ಕಾಳೇಗೌಡ ಮತ್ತು ಗೋಪಾಲಯ್ಯ ಮೌನವಾಗಿ ಕುಳಿತರು. ಸ್ವಲ್ಪ ಹೊತ್ತಿನ ನಂತರ ಕಾಳೇ ಗೌಡರು ಪಕ್ಕಕ್ಕೆ ತಿರುಗಿ:‘ನಾಯ್ಕ ಅದಾಮಿ ಬರಲು ಇನ್ನೆಷ್ಟು ಹೊತ್ತು?’ಎಂದರು.‘ಇನ್ನೇನು ಹದಿನೈದು ನಿಮಿಷ’ ಎಂದ ಶಂಕರ ನಾಯ್ಕ ತಕ್ಷಣವೇ ಎದುರಾದ ತಿರುವಿನ ಬಳಿ ರಪ್ಪಂತ ಸ್ಟೇರಿಂಗು ತಿರುಗಿಸಿದ. ಅವನು ಸ್ಟೇರಿಂಗು ತಿರುಗಿಸಿದ ಕೂಡಲೇ ಎಡಕ್ಕೆ ವಾಲಿಕೊಂಡ ಜೀಪು ಎದುರುಗಡೆಯಿಂದ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸಿಗೆ ಬಲವಾಗಿ ಡಿಕ್ಕಿ ಹೊಡೆಯಿತು. ಏನೆಂದು ನೋಡುವಷ್ಟರಲ್ಲಿ ಜೀಪಿನಲ್ಲಿದ್ದ ಮೂವರು ಹೊರಗೆ ಎಗರಿ ಬಿದ್ದರು. ಬಲವಾಗಿ ಬಿದ್ದ ಪೆಟ್ಟಿನಿಂದ ಕಂಗಾಲಾದ ಕಾಳೇಗೌಡರು ‘ಅಯ್ಯಯ್ಯೋ’ ಎಂದು ಕೂಗುತ್ತಿದ್ದಂತೆಯೇ ಬಸ್ಸಿನಿಂದ ಇಳಿದ ಜನ ಹಾಹಾಕಾರ ಮಾಡುತ್ತಾ ಜೀಪಿನ ಬಳಿ ಸುತ್ತುವರಿದರು.

ಹೀಗೆ ಸುತ್ತುವರಿದವರಿಗೆ ಜೀಪಿನಿಂದ ಹೊರಬಿದ್ದು ಸಾವಿನ ಭಯದಿಂದ ನರಳುತ್ತಿದ್ದವರ ಜತೆ ನೋಟುಗಳ ಕಂತೆ, ಕಂತೆ ಕಣ್ಣಿಗೆ ಕಾಣಿಸಿತು. ಅದು ಕಂಡಿದ್ದೇ ತಡ, ಮುನ್ನುಗ್ಗಿದ ಜನ ಕೈಗೆ ಸಿಕ್ಕಷ್ಟನ್ನು ಬಾಚಿಕೊಂಡು ಓಡತೊಡಗಿದರು. ಹೀಗೆ ಅವರು ದುಡ್ಡು ಬಾಚಿಕೊಂಡು ಓಡುತ್ತಿದ್ದ ಪರಿಯನ್ನು ನೋಡಿದ ಗೋಪಾಲಯ್ಯ ‘ಅಯ್ಯೋ ಎಲ್ಲ ಮುಗೀತು’ ಎಂದು ಅರಚಾಡುತ್ತಿದ್ದರೆ, ಶಂಕರ ನಾಯ್ಕ ಅದಾಗಲೇ ಜೀವ ಕಳೆದುಕೊಂಡಿದ್ದ.ಇದನ್ನೆಲ್ಲ ನೋಡುತ್ತಿದ್ದಂತೆಯೇ ಕಾಳೇಗೌಡರ ಕಣ್ಣು ಮಂಜಾಗತೊಡಗಿತು. ದೇಹದಲ್ಲೆಲ್ಲ ಮರಣ ಸಂಕಟ. ಇಂತಹಸ್ಥಿತಿಯಲ್ಲೇ ಅವರಿಗೆ ಕೆಂಡಗಣ್ಣಸ್ವಾಮಿ ಮತ್ತು ರಾಮಚಂದ್ರಪ್ಪನವರ ನೆನಪು ಬಂತು. ಆ ನೆನಪು ಅರೆಬರೆಯಾಗುತ್ತಾ, ಕಣ್ಣ ಸುತ್ತ ಆವರಿಸಿದ್ದ ಮಂಜು ದಟ್ಟವಾಗುತ್ತಾ ಹೋದಂತೆ ದೂರದಲ್ಲೆಲ್ಲೋ ರಾಮಚಂದ್ರಪ್ಪ ಜಿಂದಾಬಾದ್ ಎಂಬ ಘೋಷಣೆಗಳು ಮೊಳಗುತ್ತಿರುವಂತೆ ಭಾಸವಾಯಿತು.ಅಷ್ಟೇ ಅಲ್ಲ, ರಾಮಚಂದ್ರಪ್ಪ ಲಕ್ಕಿ ಪೊಲಿಟೀಷಿಯನ್ನು ಎಂಬ ಗೋಪಾಲಯ್ಯನ ಮಾತು ಕೇಳಿಸಿದಂತಾಗಿ ಕಣ್ಣುಗಳು ಬಿಗಿಯಾಗಿ ಮುಚ್ಚಿಕೊಂಡವು.

” ರಾಜ್ಯದಲ್ಲಿ ಒಮ್ಮೆ ಅಧಿಕಾರಕ್ಕೆ ಬಂದ ಪಕ್ಷ ಎರಡನೇ ಬಾರಿ ಅಧಿಕಾರ ಹಿಡಿಯುವುದು ಕಷ್ಟ.೧೯೮೩ರಲ್ಲಿ ಅಧಿಕಾರಕ್ಕೆ ಬಂದ ಜನತಾಪರಿವಾರ, ೧೯೮೫ರಲ್ಲಿ ಮರಳಿ ಅಧಿಕಾರ ಹಿಡಿಯಿತು ಎಂಬುದನ್ನು ಬಿಟ್ಟರೆ, ಆನಂತರ  ಒಮ್ಮೆ ಅಧಿಕಾರಕ್ಕೆ ಬಂದ ಪಕ್ಷ, ಮರಳಿ ಅಧಿಕಾರಕ್ಕೆ ಬಂದ ನಿದರ್ಶನಗಳಿಲ್ಲ”.

 

 

ಆಂದೋಲನ ಡೆಸ್ಕ್

Recent Posts

ಸಂಧಾನ ಯಶಸ್ವಿ : ಮುಷ್ಕರ ಹಿಂಪಡೆದ ವೈದ್ಯರು

 ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಾಳೆಯಿಂದ  (ಮಾರ್ಚ್ 11) ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು…

18 mins ago

ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಜೆಡಿಎಸ್‌ಗೆ 1 ಸೀಟು

ಬೆಂಗಳೂರು : ಕರ್ನಾಟಕ ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಮೈತ್ರಿ ಪಕ್ಷ ಜೆಡಿಎಸ್‌ಗೆ ಒಂದು…

2 hours ago

ಎಲ್‌ಪಿಜಿ ಸಿಲಿಂಡರ್‌ ವ್ಯತ್ಯಯ, ಬೆಲೆ ಏರಿಕೆ : ಬಾಯಿ ಬಿಡದ ಬಿಜೆಪಿ ; ಡಿ.ಕೆ.ಶಿವಕುಮಾರ್‌ ಆರೋಪ

ಬೆಂಗಳೂರು : ಅಂತರರಾಷ್ಟ್ರೀಯ ಮಹಿಳಾ ದಿನದಂದೆ ಗ್ಯಾಸ್ ಸಿಲಿಂಡರ್ ಬೆಲೆಯನ್ನ ಕೇಂದ್ರ ಸರ್ಕಾರ 60 ರೂಪಾಯಿ ಏರಿಕೆ ಮಾಡಿದೆ. ಜೊತೆಗೆ…

2 hours ago

ಹುಲಿ ದಾಳಿಗೆ ಹಸು ಬಲಿ ; ರೈತ ಪಾರು

ಗುಂಡ್ಲುಪೇಟೆ : ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿಯೊಂದು ದಾಳಿ ನಡೆಸಿದೆ. ಈ ವೇಳೆ ರೈತ ತನ್ನ ಹಸು ರಕ್ಷಿಸಲು…

3 hours ago

ಎಲ್‌ಪಿಜಿ ಕೊರತೆ | ಕೇಂದ್ರದಿಂದ 1955ರ ಕಾಯ್ದೆ ಜಾರಿ ; ಏನಿದು ಅಗತ್ಯ ಸರಕು ಕಾಯ್ದೆ?

ಹೊಸದಿಲ್ಲಿ : ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯ ಮೇಲೆ ಹೆಚ್ಚುತ್ತಿರುವ ಒತ್ತಡದ ನಡುವೆ, ದೇಶೀಯ ಇಂಧನ ಮಾರುಕಟ್ಟೆಯನ್ನು…

3 hours ago

ನ್ಯಾಯಾಂಗ ಭ್ರಷ್ಟಾಚಾರ ಕುರಿತ ಅಧ್ಯಾಯ ವಿವಾದ ; ಸಾರ್ವಜನಿಕ ಕ್ಷಮೆ ಯಾಚಿಸಿದ ಎನ್‌ಸಿಇಆರ್‌ಟಿ

ಹೊಸದಿಲ್ಲಿ : ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಇತ್ತೀಚೆಗೆ ಪ್ರಕಟಿಸಿದ್ದ 8ನೇ ತರಗತಿಯ ಸಮಾಜ ವಿಜ್ಞಾನ…

3 hours ago