Leadership Change: Setback for D.K. Shivakumar
ರಾಹುಲ್ ಗಾಂಧಿಯವರ ನಿರ್ಣಯವೇ ಅಂತಿಮ: ಸಿದ್ದರಾಮಯ್ಯ
ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ನಂತರ ಕರ್ನಾಟಕದಲ್ಲಿ ಭುಗಿಲೇಳಬೇಕಿದ್ದ ಅಽಕಾರ ಹಂಚಿಕೆಯ ಮಾತು ದಿಲ್ಲಿಗೆ ತಲುಪಿದೆ.
ಹಾಗೆ ನೋಡಿದರೆ ಕಳೆದ ಎರಡು ವರ್ಷಗಳಿಂದ ಸದಾ ಕಾಲ ಅಧಿಕಾರ ಹಂಚಿಕೆಯ ಮಾತು ಅನುರಣಿಸುತ್ತಾ, ರಾಜ್ಯದ ಆಡಳಿತ ಯಂತ್ರವನ್ನು ಗೊಂದಲಗೊಳಿಸುತ್ತಾ, ರಾಜಕೀಯ ವಲಯಗಳನ್ನು ತಬ್ಬಿಬ್ಬುಗೊಳಿಸುತ್ತಾ ಮುಂಚೂಣಿಯಲ್ಲಿರುತ್ತಿತ್ತು.
ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ಕರ್ನಾಟಕದ ಅಧಿಕಾರ ಸೂತ್ರ ಹಿಡಿದಾಗ ಸಿಎಂ ಹುದ್ದೆಯ ವಿಷಯದಲ್ಲಿ ಪೈಪೋಟಿ ಶುರುವಾಯಿತಲ್ಲ ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಸಮ್ಮುಖದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಮಧ್ಯೆ ಸಂಧಾನ ನಡೆಸಿದ್ದರು.ಮತ್ತು ಈ ಸಂಧಾನದ ಪ್ರಕಾರ ಮೊದಲ ಎರಡೂವರೆ ವರ್ಷಗಳ ಕಾಲ ಸಿದ್ದರಾಮಯ್ಯ ಮತ್ತು ನಂತರದ ಎರಡೂವರೆ ವರ್ಷಗಳ ಕಾಲ ಡಿ.ಕೆ.ಶಿವಕುಮಾರ್ ಸಿಎಂ ಹುದ್ದೆಯಲ್ಲಿರಬೇಕು ಎಂಬ ತೀರ್ಮಾನವಾಗಿತ್ತು ಎಂಬುದು ಸದ್ಯ ಚಾಲನೆಯಲ್ಲಿರುವ ಮಾತು.
ಇಂತಹ ಮಾತು ಚಾಲನೆಯಲ್ಲಿರುವುದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಪ್ತರಿಂದ. ಆದರೆ ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ ಒಂದಕ್ಷರ ಮಾತನಾಡುತ್ತಿಲ್ಲ. ಇಂತಹ ಒಪ್ಪಂದವಾಗಿದ್ದು ನಿಜವೇ ಎಂಬುದರ ಬಗ್ಗೆಯಾಗಲೀ, ಅಥವಾ ಇಂತಹ ಒಪ್ಪಂದದ ಸಂದರ್ಭದಲ್ಲಿ ಆಗಿದ್ದ ಮಾತುಕತೆಯ ವಿವರವನ್ನಾಗಲೀ ಸಿದ್ದರಾಮಯ್ಯ ಅವರು ಬಾಯಿ ಬಿಡುತ್ತಿಲ್ಲ.
ಆದರೆ ರಾಜಕಾರಣದ ಬಗ್ಗೆಯೂ ಸರಳ ರೇಖೆಯ ನಡುವೆ ಹುದುಗಿರುವ ಕೆಲವು ಅಂಶಗಳು ಪಿಸು ಮಾತಿನ ಮೂಲಕ ಕೇಳುತ್ತಲೇ ಇವೆ. ಅದರ ಪ್ರಕಾರ, ಅಧಿಕಾರ ಹಂಚಿಕೆಯ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ಇಂತಹ ಒಪ್ಪಂದವಾಗಿರುವುದು ನಿಜ.
ಅಂದ ಮೇಲೆ ಸಿದ್ದರಾಮಯ್ಯನವರು ಸಹಜವಾಗಿಯೇ ಡಿ.ಕೆ. ಶಿವಕುಮಾರ್ ಅವರಿಗೆ ಜಾಗ ಬಿಟ್ಟುಕೊಡಬೇಕಲ್ಲವೇ ಎಂಬ ಪ್ರಶ್ನೆ ಕೇಳಿ ಬರುತ್ತದೆ. ಆದರೆ ಈ ಪ್ರಶ್ನೆಯನ್ನು ಚಕ್ಕಂತ ಕೇಳುವವರು ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಆಗಿರುವ ಒಟ್ಟಾರೆ ಮಾತುಕತೆಯ ವಿವರವೇನು? ಎಂಬುದನ್ನೂ ಪತ್ತೆ ಹಚ್ಚಬೇಕು. ಸಿದ್ದರಾಮಯ್ಯ ಅವರ ಆಪ್ತರ ಪ್ರಕಾರ,ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಮಧ್ಯೆ ಅಧಿಕಾರ ಹಂಚಿಕೆಯ ಒಪ್ಪಂದವಾಗಿದ್ದು ನಿಜ. ಆದರೆ ಆ ಸಂದರ್ಭದಲ್ಲಿ ಒಪ್ಪಂದದ ಜಾರಿಗೆ ಕೆಲವು ಷರತ್ತುಗಳು ಮಂಡನೆಯಾಗಿದ್ದವು. ಮತ್ತು ಇಂತಹ ಷರತ್ತುಗಳನ್ನು ಸಿದ್ದರಾಮಯ್ಯನವರು ಮುಂದಿಟ್ಟಿದ್ದರು.
ಅವತ್ತು ತಾವು ಹಾಕಿದ ಷರತ್ತು ಪೂರೈಕೆಯಾಗಿದ್ದರೆ ಸಿದ್ದರಾಮಯ್ಯನವರು ಯಾವ ಅನುಮಾನಕ್ಕೂ ಆಸ್ಪದ ನೀಡದಂತೆ ಮುಖ್ಯಮಂತ್ರಿ ಪಟ್ಟವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕಿತ್ತು. ಆದರೆ ಅವತ್ತು ತಮ್ಮ ಮತ್ತು ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಒಪ್ಪಂದವಾಗಿದ್ದರೂ ಸಿದ್ದರಾಮಯ್ಯ ಇವತ್ತು ಆ ಒಪ್ಪಂದವನ್ನೇ ಉಲ್ಲಂಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ದಿಲ್ಲಿಗೆ ಹೋದಾಗ ಅವರು ನೇರವಾಗಿಯೇ ಅಧಿಕಾರ ಹಂಚಿಕೆಗೆ ಸಂಬಂಽಸಿದಂತೆ ತಮ್ಮ ಮತ್ತು ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಯಾವ ಒಪ್ಪಂದವೂ ಆಗಿಲ್ಲ ಎಂದು ನೇರವಾಗಿಯೇ ಹೇಳಿದ್ದರು.
ಅವರೇಕೆ ಹಾಗೆ ಹೇಳಿದರು ಎಂದು ಕೆದಕುತ್ತಾ ಹೋದರೆ ಬೇರೆ ವಿಷಯ ಮೇಲೆದ್ದು ಬರುತ್ತದೆ. ಅದರ ಪ್ರಕಾರ, ಅವತ್ತು ಅಧಿಕಾರ ಹಂಚಿಕೆಯ ಒಪ್ಪಂದ ಮಂಡನೆಯಾದಾಗ ಸಿದ್ದರಾಮಯ್ಯ ನವರು ಅದನ್ನು ಒಪ್ಪಿದ್ದರು. ಹಾಗೆಯೇ ಇದರ ಜಾರಿಯ ವಿಷಯದಲ್ಲಿ ಪ್ರಮುಖ ಷರತ್ತುಗಳನ್ನೂ ಮಂಡಿಸಿದ್ದರು.
ಮೂಲಗಳ ಪ್ರಕಾರ, ಎರಡೂವರೆ ವರ್ಷಗಳ ತಮ್ಮ ಮೊದಲ ಅವಧಿ ಏನಿದೆಯೋ ಆ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಚಿವ ಸಂಪುಟದಲ್ಲಿರಬಾರದು ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದರು. ಏಕೆಂದರೆ ಅಧಿಕಾರ ಹಂಚಿಕೆ ಸ್ಪಷ್ಟವಾಗಿ ಎರಡು ಭಾಗವಾದಾಗ ಒಂದೊಂದು ಭಾಗವನ್ನು ಒಬ್ಬೊಬ್ಬ ನಾಯಕರು ಪರಿಪೂರ್ಣವಾಗಿ ಅನುಭವಿಸಿಬೇಕಲ್ಲ! ಹೀಗಾಗಿ ತಮ್ಮ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಚಿವ ಸಂಪುಟದಲ್ಲಿರಬಾರದು ಮತ್ತು ತಾವು ಬಯಸುವ ರೂಪದಲ್ಲಿ ತಮ್ಮ ಸಚಿವ ಸಂಪುಟ ಇರಬೇಕು ಎಂದು ಹೇಳಿದ್ದರು. ಆದರೆ ಅವರ ಈ ಷರತ್ತು ಈಡೇರಲೇ ಇಲ್ಲ. ಬದಲಿಗೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾದರು. ಅದೇ ರೀತಿ ಬಯಸಿ ಬಯಸಿ ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ ಖಾತೆಗಳನ್ನು ಪಡೆದರು. ಈ ಎರಡೂ ಖಾತೆಗಳು ಎಷ್ಟು ಪ್ರಮುಖವೆಂದರೆ ಬಜೆಟ್ ಬಗ್ಗೆ ಅರಿವಿರುವವರಿಗೆ ಇದರ ಮಹತ್ವ ಗೊತ್ತಿರುತ್ತದೆ.
ಅರ್ಥಾತ್ ಸಿದ್ದರಾಮಯ್ಯನವರ ಷರತ್ತು ಏನಿತ್ತೋ ಆ ಷರತ್ತು ಈಡೇರಲಿಲ್ಲ. ಬದಲಿಗೆ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ಆಯಕಟ್ಟಿನ ಜಾಗದಲ್ಲಿ ಕುಳಿತರು ಮತ್ತು ಸಚಿವ ಸಂಪುಟ ಕೂಡ ಸಿದ್ದರಾಮಯ್ಯನವರು ಬಯಸಿದ ರೀತಿ ಇರಲಿಲ್ಲ. ಬದಲಿಗೆ ಬೇರೆ ಬೇರೆ ಪ್ರಭಾವಗಳ ಮೂಲಕ ಹಲವರು ಸಚಿವ ಸಂಪುಟದ ಒಳಗೆ ತೂರಿಕೊಂಡರು.
ಇಷ್ಟಾದ ಮೇಲೆ ಇದು ಸಿದ್ದರಾಮಯ್ಯನವರ ಬಯಕೆಯ ಸಚಿವ ಸಂಪುಟ ಹೇಗಾಗುತ್ತದೆ? ಮತ್ತು ಅಧಿಕಾರ ಹಂಚಿಕೆಯ ಒಪ್ಪಂದಕ್ಕೆ ದುಸುರಾ ಮಾತನಾಡದೆ ಅವರು ಹೇಗೆ ತಲೆ ಬಾಗಿಸಬಹುದು? ಆದರೆ ಈ ವಿಷಯದಲ್ಲೂ ಸಿದ್ದರಾಮಯ್ಯನವರು ಬಹಿರಂಗವಾಗಿ ಚಕಾರವೆತ್ತುತ್ತಿಲ್ಲ. ಬದಲಿಗೆ ಅಧಿಕಾರ ಹಂಚಿಕೆಯ ಮಾತು ಬಂದಾಗ ನಾನು ಅಧಿಕಾರ ಬಿಟ್ಟುಕೊಡಲು ರೆಡಿ. ಆದರೆ ಅದನ್ನು ರಾಹುಲ್ ಗಾಂಧಿಯವರು ಹೇಳಬೇಕು ಎಂದು ಹೇಳಿ ಸುಮ್ಮನಾಗುತ್ತಿದ್ದಾರೆ. ರಾಜಕೀಯ ತಜ್ಞರ ಪ್ರಕಾರ, ಸಿದ್ದರಾಮಯ್ಯನವರಂತಹ ನುರಿತ ರಾಜಕಾರಣಿಯಲ್ಲದೆ ಬೇರೊಬ್ಬರು ಇಂತಹ ದಾಳವನ್ನು ಉರುಳಿಸುವುದು ಕಷ್ಟ. ನೋಡುವವರಿಗೆ ಇದು ತುಂಬ ಸರಳವಾಗಿ ಕಾಣುತ್ತದೆ. ಆದರೆ ಇದು ಎಷ್ಟು ಪವರ್‌ಫುಲ್ ದಾಳವೆಂದರೆ, ಇವತ್ತು ಸಿದ್ದರಾಮಯ್ಯ ಅವರು ಹೇಳಿದರು ಎಂದ ಮಾತ್ರಕ್ಕೆ ರಾಹುಲ್ ಗಾಂಧಿ ಅವರು ಓಕೆ, ನೀವು ಅಧಿಕಾರ ಬಿಟ್ಟುಕೊಡಿ ಎಂದು ಹೇಳುವುದು ಕಷ್ಟ.
ಏಕೆಂದರೆ ಇದೇ ರಾಹುಲ್ ಗಾಂಧಿಯವರು ಕಳೆದ ಹಲ ವರ್ಷಗಳಿಂದ ಕಾಂಗ್ರೆಸ್ ಪಕ್ಷ ಹೇಗೆ ಶೋಷಿತರ ಪರವಾಗಿದೆ ಎಂದು ಹೇಳುತ್ತಾ ಬಂದಿದ್ದಾರೆ. ಇದೇ ರೀತಿ ಸ್ವತಃ ಸಿದ್ದರಾಮಯ್ಯ ಅವರನ್ನು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಒತ್ತಿ ಒತ್ತಿ ಹೇಳಿದ್ದಾರೆ. ಹೀಗೆ ಸಿದ್ದರಾಮಯ್ಯ ಅವರ ಹೆಸರನ್ನು ಕಟ್ ಔಟ್ ರೀತಿ ಎತ್ತಿ ಹಿಡಿದುಕೊಂಡವರು ಈಗ ಇದ್ದಕ್ಕಿದ್ದಂತೆ ನೀವು ಅಧಿಕಾರ ಬಿಟ್ಟುಕೊಡಿ ಎಂದು ಹೇಳಲು ಸಾಧ್ಯವೇ? ಹಾಗೊಂದು ವೇಳೆ ಅವರು ಹೇಳಿದರು ಎಂದಿಟ್ಟುಕೊಳ್ಳಿ.
ಆಗ ರಾಷ್ಟ್ರ ರಾಜಕಾರಣದಲ್ಲಿ ಅವರನ್ನು ಪಪ್ಪು ಎಂದು ಪ್ರತಿಬಿಂಬಿಸುತ್ತಿರುವವರು, ಚೈಲ್ಡೀಶ್ ಎಂದು ಹೀಗಳೆಯುತ್ತಿರುವವರುರಪ್ಪಂತ ಮುಗಿಬೀಳುತ್ತಾರೆ. ಸಿದ್ದರಾಮಯ್ಯನವರಂತಹ ಹಿಂದುಳಿದ ವರ್ಗಗಳ ಚಾಂಪಿಯನ್ ಅನ್ನು ತಮ್ಮ ಕುಟುಂಬದವರ ಹೊಡೆತ ತಾಳಲಾಗದೆ ಅಧಿಕಾರದಿಂದ ಕಿತ್ತು ಹಾಕಿದರು. ಇವರು ಪಪ್ಪು ಎಂಬುದಕ್ಕೆ, ಚೈಲ್ಡೀಶ್ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ ಎಂದು ಅಬ್ಬರಿಸುತ್ತಾರೆ.ಹೀಗೆ ಹೀಗಳೆಯುವವರನ್ನು ಎದುರಿಸಲು ರಾಹುಲ್ ಗಾಂಧಿ ಅವರ ಬಳಿ ಯಾವ ಪ್ರತ್ಯಾಸ್ತ್ರಗಳೂ ಇಲ್ಲ. ಪರಿಣಾಮ? ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ ಎಂಬ ಮಾತಿನ ಬಗ್ಗೆ ಸಿದ್ದರಾಮಯ್ಯ ಎಷ್ಟು ತಾಳ್ಮೆಯಿಂದ ವರ್ತಿಸುತ್ತಿದ್ದಾರೋ? ರಾಹುಲ್ ಗಾಂಧಿಯವರು ಕೂಡ ಅಷ್ಟೇ ತಾಳ್ಮೆಯಿಂದ ವರ್ತಿಸುತ್ತಿದ್ದಾರೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಅಧಿಕಾರ ಹಂಚಿಕೆಯ ಮಾತು ದುರ್ಬಲವಾಗಿದ್ದರೆ ಅದಕ್ಕೆ ಇದೇ ಬಹು ಮುಖ್ಯ ಕಾರಣ.
ಕೊನೆಯ ಮಾತು: ಅಂದ ಹಾಗೆ ಅಧಿಕಾರ ಹಂಚಿಕೆಯ ಮಾತು ದುರ್ಬಲವಾಗಿದ್ದರೂ ಅದನ್ನು ನಿರ್ಣಾಯಕವಾಗಿ ಹತ್ತಿಕ್ಕಲು ಸಿದ್ದರಾಮಯ್ಯ ತಯಾರಾಗಿದ್ದಾರೆ. ಇದಕ್ಕಾಗಿ ಟೈಮು ಕೊಡಿ ಅಂತ ರಾಹುಲ್ ಗಾಂಧಿ ಅವರನ್ನು ಕೋರಿದ್ದಾರೆ. ಆದರೆ ರಾಹುಲ್ ಗಾಂಧಿ ಟೈಮು ಕೊಡುತ್ತಿಲ್ಲ.
” ಮೂಲಗಳ ಪ್ರಕಾರ, ಎರಡೂವರೆ ವರ್ಷಗಳ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಚಿವ ಸಂಪುಟದಲ್ಲಿರಬಾರದು ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದರು. ಆದರೆ ಅವರ ಈ ಷರತ್ತು ಈಡೇರಲೇ ಇಲ್ಲ. ಬದಲಿಗೆ ಡಿ.ಕೆ.ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾದರು. ಅದೇ ರೀತಿ ಬಯಸಿ ಬಯಸಿ ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ ಖಾತೆಗಳನ್ನೂ ಪಡೆದರು.”
ಭಾರತದಲ್ಲಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಪರಿಣಾಮ ಮೇ ೩ರಂದು ನಡೆದಿದ್ದ…
ಭವಿಷ್ಯದಲ್ಲಿ ವೈದ್ಯರಾಗಿ ಸುಂದರ ಬದುಕು ಕಟ್ಟಿಕೊಳ್ಳುವ ಜತೆಗೆ ರೋಗಿಗಳ ಸೇವೆ ಮಾಡುತ್ತಾ ಸಮಾಜದಲ್ಲಿ ಗೌರವ ಸಂಪಾದನೆಯ ಕನಸುಹೊತ್ತು ಎರಡು ವರ್ಷಗಳಿಂದ…
ಪಾರಂಪರಿಕ ಕಟ್ಟಡಗಳ ಸ್ಥಿತಿ-ಗತಿ ಕುರಿತ ‘ಆಂದೋಲನ’ ಲೇಖನ ಸರಣಿಗೆ ಸಾರ್ವಜನಿಕರ ಮೆಚ್ಚುಗೆ ಮೈಸೂರು: ಅರಮನೆ ನಗರಿಯ ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು…
ಪುನೀತ್ ಮಡಿಕೇರಿ ೨೦೨೭ರ ಏಪ್ರಿಲ್-ಮೇನಲ್ಲಿ ನಡೆಯಲಿರುವ ಹಾಕಿ ಉತ್ಸವಕ್ಕೆ ಸಿದ್ಧತೆ; ಟರ್ಫ್, ಹೊನಲು ಬೆಳಕಿನ ಪಂದ್ಯಾವಳಿಗೆ ಚಿಂತನೆ ಮಡಿಕೇರಿ: ೨೬ನೇ…
ಮಂಜು ಕೋಟೆ ಮೇವು, ಕುಡಿಯುವ ನೀರಿಗಾಗಿ ಬರುವ ವನ್ಯಪ್ರಾಣಿಗಳನ್ನು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು ಎಚ್.ಡಿ.ಕೋಟೆ: ಬಿಸಿಲಿನ ತಾಪಮಾನದಿಂದ ಮೇವು ಮತ್ತು ಕುಡಿಯುವ…
೧೦೦ ಕಿ.ಮೀ.ಹೆಚ್‌ಡಿಪಿಇ ಪೈಪ್ ಅಳವಡಿಕೆ ಪ್ರಗತಿಯಲ್ಲಿ; ಕಾವೇರಿ ನೀರು ಪೂರೈಸಲು ನಗರಸಭೆ ಕ್ರಮ ಪ್ರಸಾದ್ ಲಕ್ಕೂರು ಚಾಮರಾಜನಗರ: ನಗರದಲ್ಲಿ…