Andolana originals

ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರ ವಿಶ್ವಾಸ ಉಳಿಸಿಕೊಳ್ಳಬೇಕಿದೆ ಎನ್‌ಟಿಎ

ಭವಿಷ್ಯದಲ್ಲಿ ವೈದ್ಯರಾಗಿ ಸುಂದರ ಬದುಕು ಕಟ್ಟಿಕೊಳ್ಳುವ ಜತೆಗೆ ರೋಗಿಗಳ ಸೇವೆ ಮಾಡುತ್ತಾ ಸಮಾಜದಲ್ಲಿ ಗೌರವ ಸಂಪಾದನೆಯ ಕನಸುಹೊತ್ತು ಎರಡು ವರ್ಷಗಳಿಂದ ನೀಟ್ ಪರೀಕ್ಷೆಗೆ ತಯಾರಿ ನಡೆಸಿ ಪ್ರವೇಶ ಪರೀಕ್ಷೆ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಕನಸನ್ನೇ ‘ಪ್ರಶ್ನೆ ಪತ್ರಿಕೆ ಸೋರಿಕೆ’ ಎಂಬ ಕರಾಳ ದಂಧೆಯ ಹೀನಕೃತ್ಯ ನುಚ್ಚು ನೂರು ಮಾಡಿದೆ.

ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್, ಬಿಡಿಎಸ್ ಸೇರಿದಂತೆ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್-ಯುಜಿ (ಸ್ನಾತಕ)ಪರೀಕ್ಷೆಯನ್ನು ನಡೆಸಲಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಮೇ ೩ರಂದು ನಡೆದ ನೀಟ್ ಪರೀಕ್ಷೆಯನ್ನೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರದ್ದುಪಡಿಸಿ, ಜೂನ್ ೨೧ರಂದು ಹೊಸದಾಗಿ ಪರೀಕ್ಷೆಗೆ ದಿನಾಂಕ ಮರು ನಿಗದಿ ಮಾಡಿದೆ. ಮೇ ೩ರಂದು ನಡೆದ ನೀಟ್ ಪರೀಕ್ಷೆ ದೇಶಾದ್ಯಂತ ೫೫೧ನಗರಗಳ ಕೇಂದ್ರಗಳಲ್ಲಿ ನಡೆದಿದ್ದು, ಸುಮಾರು ೨.೨೮ ದಶಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರಾಜ್ಯದ ೩೧ ಜಿಲ್ಲಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ೧.೪೫ ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆ ಎಂಬ ಕರಾಳ ದಂಧೆಯ ಕೃತ್ಯ ನೀಟ್ ಫಲಿತಾಂಶವನ್ನು ಎದುರು ನೋಡುತ್ತಿದ್ದವರಿಗೆ ಬರ ಸಿಡಿಲು ಬಡಿದಂತಾಗಿದ್ದು, ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಈಗಾಗಲೇ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವುದು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಿ ಅವರ ಬದುಕು ಸುಂದರಗೊಳಿಸಲು ಬಯಸಿದ್ದ ಪೋಷಕರನ್ನು ಆತಂಕಕ್ಕೆ ದೂಡಿದೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯು ನಮ್ಮ ಶಿಕ್ಷಣ ವ್ಯವಸ್ಥೆಯ ಲೋಪಗಳು, ಹುಳುಕುಗಳನ್ನು ಅನಾವರಣಗೊಳಿಸಿದೆ. ನೀಟ್ ವ್ಯವಸ್ಥೆಯನ್ನು ರದ್ದುಪಡಿಸುವಂತೆ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯ ಸರ್ಕಾರಗಳು ಈ ಹಿಂದೆಯೇ ಆಗ್ರಹಿಸಿವೆ. ನೀಟ್ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ವಿರುದ್ಧ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಎನ್‌ಟಿಎ ಪ್ರಶ್ನೆ ಪತ್ರಿಕೆಯ ಸೋರಿಕೆಯ ಜವಾಬ್ದಾರಿ ಹೊರಬೇಕು. ಪರೀಕ್ಷಾ ವ್ಯವಸ್ಥೆ ಕಾಪಾಡಲು ಎನ್‌ಟಿಎ ಸಂಪೂರ್ಣ ವಿಫಲವಾಗಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ತನಿಖೆಯ ನಡುವೆಯೇ ಪ್ರಶ್ನೆ ಸೋರಿಕೆ ಮಾಡಿದ್ದ ನಾಲ್ವರು ಕಿಂಗ್‌ಪಿನ್‌ಗಳನ್ನು ಈವರೆಗೆ ಸಿಬಿಐ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಈ ಮಧ್ಯೆ ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಮುಂದಾಗಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಗೆ ಇಬ್ಬರು ಜಂಟಿ ಕಾರ್ಯದರ್ಶಿಗಳು ಮತ್ತು ಇಬ್ಬರು ಜಂಟಿ ನಿರ್ದೇಶಕರ ನೇಮಕಕ್ಕೆ ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿರುವುದಾಗಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ. ೧೯೯೮ರ ಬ್ಯಾಚ್‌ನ ಭಾರತೀಯ ಅಂಕಿಅಂಶ ಸೇವೆ ಅಧಿಕಾರಿಯಾಗಿರುವ ಅನುಜಾ ಬಾಪಟ್ ಹಾಗೂ ೨೦೦೪ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ರುಚಿತಾ ವಿಜ್ ಅವರನ್ನು ಎನ್‌ಟಿಎ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ಈ ನೇಮಕಾತಿಗಾಗಿ ಎನ್‌ಟಿಎಯಲ್ಲಿ ಖಾಲಿಯಿದ್ದ ಉಪ ಕಾರ್ಯದರ್ಶಿ, ನಿರ್ದೇಶಕ ಹುದ್ದೆಗಳನ್ನು ತಾತ್ಕಾಲಿಕವಾಗಿ ಜಂಟಿ ಕಾರ್ಯದರ್ಶಿ ಹುದ್ದೆಗಳ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗಿದೆ. ಜತೆಗೆ ೨೦೧೩ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ಆಕಾಶ್ ಜೈನ್ ಹಾಗೂ ಭಾರತೀಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನಾ ಸೇವೆ ಅಧಿಕಾರಿ ಆದಿತ್ಯ ರಾಜೇಂದ್ರ ಭೋಜಗಢಿಯಾ ಅವರನ್ನು ಎನ್‌ಟಿಎ ಜಂಟಿ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.

ಕೇಂದ್ರ ಸರ್ಕಾರದ ಇಷ್ಟೆಲ್ಲಾ ಕ್ರಮಗಳ ನಡುವೆಯೂ ಜೂನ್ ೨೧ರಂದು ಮರು ನಿಗದಿಯಾಗಿರುವ ನೀಟ್ ಪರೀಕ್ಷೆಯ ಬಗ್ಗೆ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಇದ್ದೇ ಇದೆ. ಹಿಂದಿನ ವರ್ಷಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ಆರೋಪಗಳ ಬಳಿಕ ಈ ಬಾರಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಎದುರಿಸುತ್ತಿರುವ ಬಹು ದೊಡ್ಡ ಸವಾಲೆಂದರೆ ವಿಶ್ವಾಸಾರ್ಹತೆಯದ್ದು, ಮರು ನಿಗದಿಯಾಗಿರುವ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಕಾಯ್ದುಕೊಂಡು, ಪಾರದರ್ಶಕ ರೀತಿಯಲ್ಲಿ ನಡೆಸುವುದು ಸವಾಲಿನ ಕೆಲಸವಾಗಿದೆ. ವೈದ್ಯ ಪದವಿಯ ಆಸೆ ಹೊತ್ತಿರುವ ವಿದ್ಯಾರ್ಥಿಗಳ ಪಾಲಿಗಂತೂ ಮತ್ತೆ ಪರೀಕ್ಷೆಯ ಆತಂಕ ಕಾಡುತ್ತಿದ್ದು, ಪರೀಕ್ಷೆಗೆ ಮರು ತಯಾರಿ ನಡೆಸಬೇಕಾದ ಮಾನಸಿಕ ಒತ್ತಡ ಹೆಚ್ಚಾಗಿದೆ. ಹೀಗಾಗಿ ಈ ಬಾರಿ ಪರೀಕ್ಷಾ ಪ್ರಕ್ರಿಯೆ ಸಂಪೂರ್ಣ ಸುರಕ್ಷಿತ ಮತ್ತು ನ್ಯಾಯಸಮ್ಮತವಾಗಿರಲಿ ಎಂಬುದು ವಿದ್ಯಾರ್ಥಿಗಳು ಮತ್ತು ಪೋಷಕರ ಕೋರಿಕೆಯಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಕೇವಲ ಕಟ್ಟುನಿಟ್ಟಿನ ಕ್ರಮಗಳನ್ನು ಹೆಚ್ಚಿಸುವುದರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಪ್ರಶ್ನೆಪತ್ರಿಕೆ ತಯಾರಿ, ಮುದ್ರಣ, ಪರೀಕ್ಷಾ ಕೇಂದ್ರಗಳಿಗೆ ಸುರಕ್ಷಿತ ರವಾನೆ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಡಿಜಿಟಲ್ ಭದ್ರತೆಯನ್ನು ಹೆಚ್ಚಿಸಬೇಕಾಗುತ್ತದೆ ಜತೆಗೆ ಎಲ್ಲ ಹಂತಗಳಲ್ಲೂ ಮೇಲ್ವಿಚಾರಣೆಯನ್ನು ಇನ್ನಷ್ಟು ವಿಶ್ವಾಸಾರ್ಹಗೊಳಿಸಬೇಕಾಗುತ್ತದೆ. ನೀಟ್‌ನಂತಹ ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಪರೀಕ್ಷಾ ಪ್ರಕ್ರಿಯೆಯ ಮೇಲಿನ ನಂಬಿಕೆ ಹುಸಿಯಾದರೆ ವಿದ್ಯಾರ್ಥಿಗಳ ನೈತಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಈ ಬಾರಿ ಎನ್‌ಟಿಎ ಹೊಸ ಭದ್ರತಾ ಕ್ರಮಗಳನ್ನು ಜಾರಿಗೆ ತರಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಪರಿಶೀಲನೆ, ನೇರ ಮೇಲ್ವಿಚಾರಣೆ ಜತೆಗೆ ಎಐ ಆಧಾರಿತ ಮೇಲ್ವಿ ಚಾರಣೆ ಮತ್ತು ಪ್ರಶ್ನೆ ಪತ್ರಿಕೆ ವಿತರಣೆಯಲ್ಲಿ ಡಿಜಿಟಲ್ ಟ್ರ್ಯಾಕಿಂಗ್ ನಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಠಿಣ ನಿಯಮಗಳು ಕಾಗದದಲ್ಲೇ ಉಳಿಯದೆ ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ಎನ್‌ಟಿಎ ವಿದ್ಯಾರ್ಥಿಗಳು ಮತ್ತು ಪೋಷಕರ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳಬೇಕಿದೆ.

” ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ದೇಶಾದ್ಯಂತ ಸದ್ದು ಮಾಡಿರುವಾಗಲೇ ರಾಜ್ಯದ ವೈದ್ಯಕೀಯ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಈ ವರ್ಷ ರಾಜ್ಯಕ್ಕೆ ಹೆಚ್ಚುವರಿಯಾಗಿ ೧,೧೨೨ಸರ್ಕಾರಿ ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡಿದೆ.”

 

 

ಆಂದೋಲನ ಡೆಸ್ಕ್

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

19 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

19 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

1 day ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

1 day ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

1 day ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

1 day ago