ನಾಳೆ ಸೇವೆಯಿಂದ ನಿವೃತ್ತಿ ಹೊಂದಲಿರುವ ಮೇಷ್ಟ್ರು
ಸಿ.ಹರಕುಮಾರ್, ಬರಹಗಾರ
ಮೂರ್ನಾಲ್ಕು ದಶಕಗಳ ಹಿಂದೆ ಮ್ಯಾನೇಜ್ಮೆಂಟ್ ಕೋರ್ಸ್ ಅಥವಾ ಎಂಬಿಎ ಪದವಿ ಒಂದು ಕಬ್ಬಿಣದ ಕಡಲೆ ಆಗಿತ್ತು. ಇಂತಹ ಕೋರ್ಸುಗಳಿಗೆ ಸೇರಲು ಶೋಷಿತ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಸಹಜವಾದ ಹಿಂಜರಿಕೆ, ತಳಮಳ, ಆತಂಕ, ಆರ್ಥಿಕ ಬಲ ಇರಲಿಲ್ಲ. ಜೊತೆಗೆ ಇಂಗ್ಲಿಷ್ ಭಾಷೆಯ ಸಂವಹನವೂ ದೊಡ್ಡ ಅಡ್ಡಿಯಾಗಿತ್ತು. ಆಗ ಇಡೀ ಕರ್ನಾಟಕ ರಾಜ್ಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಧಾರವಾಡದ ಕರ್ನಾಟಕ ವಿವಿಯಲ್ಲಿ ಮಾತ್ರ ಎಂಬಿಎ ಪದವಿ ಇತ್ತು.
ಅಂತಹ ಸಂದರ್ಭದಲ್ಲಿ ಎಂಬಿಎಗೆ ಸೇರಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದೂ ಅಲ್ಲದೆ, ಅಲ್ಲೇ ಸಂಶೋಧನಾ ವಿದ್ಯಾರ್ಥಿಯಾಗಿ, ಅರೆಕಾಲಿಕ ಉಪನ್ಯಾಸಕರಾಗಿ, ಖಾಯಂ ಅಧ್ಯಾಪಕರಾಗಿ ನೇಮಕಗೊಳ್ಳುವುದರ ಮೂಲಕ ಸುದೀರ್ಘ ೩೮ ವರ್ಷಗಳ ಕಾಲ ಸೇವೆ ಸಲ್ಲಿಸಿ ಮಾರ್ಚ್ ೩೧, ೨೦೨೬ರಂದು ನಿವೃತ್ತರಾಗುತ್ತಿದ್ದಾರೆ. ನಿವೃತ್ತಿ ಅಂಚಿಗೆ ಒಟ್ಟು ೪೦ ಬ್ಯಾಚ್ ವಿದ್ಯಾರ್ಥಿಗಳಿಗೆ ಬೋಧಿಸುವುದರ ಮೂಲಕ ೨೮ (ಮಹಿಳೆಯರೂ ಸೇರಿ) ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಮಾರ್ಗದರ್ಶನ ಮಾಡಿರುವುದು ಗಮನಾರ್ಹ.
ಪ್ರಸ್ತುತ ರಾಜ್ಯದಲ್ಲಿರುವ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ, ಹೆಸರಾಂತ ಖಾಸಗಿ ಕಾಲೇಜುಗಳಲ್ಲಿ ಎಂಬಿಎ ಅಧ್ಯಯನ ವಿಭಾಗಗಳಿವೆ. ಈ ಎಲ್ಲಾ ವಿಶ್ವವಿದ್ಯಾನಿಲಯಗಳು ಮತ್ತು ಖಾಸಗಿ ಕಾಲೇಜುಗಳಲ್ಲಿ ಆನಂದ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಆಡಳಿತ ತರಬೇತಿ ಸಂಸ್ಥೆ ಮತ್ತು ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲೂ ಕೂಡ ಸಂಪನ್ಮೂಲ ವ್ಯಕ್ತಿಯಾಗಿ ಅಲ್ಲಿನ ಶಿಬಿರಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಪಂಚ ಭಾಷಾ ಅಧ್ಯಾಪಕ: ನಿರರ್ಗಳವಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡುವ ಆನಂದ್ ಅವರಿಗೆ ನೈಸರ್ಗಿಕವಾಗಿ ಒಲಿದು ಬಂದಿರುವ ಕಂಚಿನ ಕಂಠ, ವೈಚಾರಿಕ ಪ್ರಜ್ಞೆ, ಪಾಠ ಪ್ರವಚನಗಳ ಜೊತೆಗೆ ಸಾಮಾಜಿಕ ಸಮಸ್ಯೆಗಳ ಕುರಿತು ಉಪನ್ಯಾಸ, ಆರ್ಥಿಕ ಚಿಂತನೆಗಳ ಬಗ್ಗೆ ಮಂಥನ, ವೈಚಾರಿಕ ಜಗತ್ತಿನ ನಾಯಕರಾದ ಬುದ್ಧ, ಬಸವಣ್ಣ, ಅಂಬೇಡ್ಕರ್, ಫುಲೆ, ಪೆರಿಯಾರ್ ಇಂಥವರ ವೈಚಾರಿಕ ಚಿಂತನೆ ಕಾರ್ಯಕ್ರಮಗಳಿಗೆ ಹೆಚ್ಚು ಆಹ್ವಾನಿಸಲ್ಪಟ್ಟಿರುವ ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಾಪಕರುಗಳ ಪೈಕಿ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ.
ಹಿಂದಿ, ತಮಿಳು, ಮಲಯಾಳಂ ಕೂಡ ಮಾತನಾಡಬಲ್ಲರು. ‘”The teacher l like most’’ ಅಂತ ಏನಾದರೂ ಪ್ರಬಂಧ ಸ್ಪರ್ಧೆ ಏರ್ಪಡಿಸಿದರೆ, ಇದುವರೆಗೂ ಇವರ ಬೋಧನೆ ಕೇಳಿರುವ ವಿದ್ಯಾರ್ಥಿಗಳು ಆನಂದ್‌ರವರ ಬಗ್ಗೆ ಹೆಚ್ಚು ಬರೆಯುತ್ತಾರೆ. ಇದೇ ಇವರ ವೃತ್ತಿ ಜೀವನದ ಹೆಗ್ಗುರುತು.
ಆನಂದ್‌ರ ಸಹಪಾಠಿಯಾಗಿದ್ದುದು ಅವಿಸ್ಮರಣೀಯ: ಆನಂದ್ ಅವರ ಸಹಪಾಠಿಯಾಗಿ ಎಂಬಿಎ ಸೇರಿದ ನಾನು, ಇವರ ಜೊತೆಯಲ್ಲಿ ಪಿಎಚ್.ಡಿ.ಗೆ ನೋಂದಣಿ ಮಾಡಿಸಿಕೊಂಡು ಐದು ವರ್ಷಗಳ ಕಾಲ ಅರೆಕಾಲಿಕ ಉಪನ್ಯಾಸಕನಾಗಿ ಇವರೊಂದಿಗೆ ಕೆಲಸ ಮಾಡಿದ್ದೇನೆ. ಅಕಾಡೆಮಿಕ್ ಕ್ಷೇತ್ರಗಳ ಜೊತೆಗೆ ಕಷ್ಟ-ಸುಖ, ಹರಟೆ, ಚರ್ಚೆ, ಭೋಜನ ಕೂಟಗಳಲ್ಲಿ ಕಳೆದ ೩೮ ವರ್ಷಗಳಿಂದಲೂ ಭಾಗಿಯಾಗಿದ್ದೇನೆ. ಅದೇ ಸಂಬಂಧ ಸ್ನೇಹ ಈಗಲೂ ಮುಂದುವರಿದಿದೆ. ಇವರೊಂದಿಗೆ ಮಾತನಾಡುತ್ತ ಕೂತರೆ ಒಂದು ಜ್ಞಾನ ಭಂಡಾರದೊಂದಿಗೆ ಮಾತನಾಡಿದಂತೆನಿಸುತ್ತದೆ. ಯಾರ ಬಗ್ಗೆಯೂ ಅಸಹನೆ, ದ್ವೇಷ, ವದಂತಿ ಹಬ್ಬಿಸುವ ಅಭ್ಯಾಸವಿಲ್ಲದ, ಅನಗತ್ಯ ರಾಜಕೀಯವಿಲ್ಲದ ವ್ಯಕ್ತಿತ್ವ ಇವರದಾದ್ದರಿಂದ, ಬಹುತೇಕ ಎಲ್ಲರಿಗೂ ಇವರು ಇಷ್ಟ ಮತ್ತು ಅಜಾತಶತ್ರು ಕೂಡ.
ನಾವಿಬ್ಬರೂ ಎಂಬಿಎ ಅಂತಿಮ ವರ್ಷದಲ್ಲಿದ್ದಾಗ ಎಲ್ಲರೂ ಉತ್ತರ ಭಾರತಕ್ಕೆ ಶೈಕ್ಷಣಿಕ ಪ್ರವಾಸ ಹೋಗಲು ನಿರ್ಧರಿಸಲಾಯಿತು. ಪ್ರವಾಸಕ್ಕೆ ನಿಗದಿಪಡಿಸಿದ್ದ ಹಣವನ್ನು ನಾವಿಬ್ಬರೂ ಪಾವತಿಸಲಾಗದೇ(ನಿಜವನ್ನೂ ಹೇಳಲಾಗದೇ) ಗ್ರೂಪ್ ಸ್ಟಡಿ ಮಾಡಬೇಕೆಂದು ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದು ಮತ್ತು ದೆಹಲಿಯ ಇಂದಿರಾ ಗಾಂಽ ಮುಕ್ತ ವಿಶ್ವವಿದ್ಯಾನಿಲಯದ ಅಧ್ಯಾಪಕ ಹುದ್ದೆಗೆ ಸಂದರ್ಶನ ಕರೆಯೋಲೆ ಬಂದಾಗ ಇಬ್ಬರೂ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಗಾಡಿಯಲ್ಲಿ ಮುಂಗಡ ಟಿಕೆಟ್ ಸಿಗದೇ ಸಾಮಾನ್ಯ ಪ್ರಯಾಣಿಕರ ಬೋಗಿಯಲ್ಲಿ ವೃತ್ತ ಪತ್ರಿಕೆಗಳನ್ನು ಹಾಸಿಕೊಂಡು ಮಲಗಿ ಪ್ರಯಾಣಿಸಿದ್ದ ದಿನಗಳ ಯಾತನೆಯ ನೆನಪು ಈಗಲೂ ಹಸಿರಾಗಿದೆ.
ಆದರೆ ಅದೇ ವ್ಯಕ್ತಿ ನಂತರದ ದಿನಗಳಲ್ಲಿ ವಿಮಾನದಲ್ಲಿ ಪ್ರಯಾಣಿಸಿ ದೇಶದ ವಿವಿಧ ವಿಶ್ವವಿದ್ಯಾನಿಲಯಗಳು ಮತ್ತು ಬಲೂಚಿಸ್ತಾನ್, ದುಬೈ ಮತ್ತು ಇರಾನ್ ದೇಶಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಎಲ್‌ಐಸಿಯ “Zonal Advisory Committee’ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
ಕೆ.ಆರ್.ಮಿಲ್ ಕಾರ್ಮಿಕರ ಮಗ: ಮೂಲತಃ ನಂಜನಗೂಡು ತಾಲ್ಲೂಕು ತುಮ್ಮನೇರಳೆ ಗ್ರಾಮದ ದೊಡ್ಡಮಾದಯ್ಯ ಮತ್ತು ಜವನಮ್ಮ ಇವರ ಪುತ್ರರಾದ ಆನಂದ್, ಕೆ.ಆರ್.ಮಿಲ್ ಕಾರ್ಮಿಕರೊಬ್ಬರ ಮಗನಾಗಿ ಬಡತನದ ಬೇಗೆಯಲ್ಲಿ ಮಿಂದೆದ್ದವರು. ಆನಂದ್, ಇಬ್ಬರು ಹಿರಿಯ ಸಹೋದರರು, ಮೂವರು ಸಹೋದರಿಯರೊಂದಿಗೆ ತುಂಬು ಕುಟುಂಬದಲ್ಲಿ ಬಸವಳಿದವರಾದರೂ ಕೂಡ, ತನ್ನೊಳಗಿನ ಅಪರಿಮಿತ ಪ್ರತಿಭೆಯಿಂದ ಯಾರೂ ನಿರೀಕ್ಷಿಸದ ರೀತಿಯಲ್ಲಿ ಇಂದು ಮ್ಯಾನೇಜ್ ಮೆಂಟ್ ಗುರುವಾಗಿದ್ದಾರೆ. ಜನಪದ ಹಾಡುಗಾರಿಕೆ, ಏಕಪಾತ್ರಾಭಿನಯ, ಮಿಮಿಕ್ರಿ ಮುಂತಾದ ಕಲಾ ಚಟುವಟಿಕೆಗಳಲ್ಲೂ ವಿದ್ಯಾರ್ಥಿ ದಿಸೆಯಿಂದಲೂ ಮಿಂಚಿರುವ ಅಪ್ರತಿಮ ಕಲಾವಿದ. ಇವರ ಇಡೀ ವ್ಯಕ್ತಿತ್ವವನ್ನು ‘multi disciplinary’ ಎನ್ನಲು ಯಾವುದೇ ಅಡ್ಡಿಯಿಲ್ಲ.
ವಿವಿಯಲ್ಲಿ ಹೆಚ್ಚುವರಿ ಹೊಣೆಗಾರಿಕೆಗಳು: ಬೋಧನಾ ಅನುಭವದ ಜೊತೆಗೆ ಸಿಂಡಿಕೇಟ್ ಮತ್ತು ಅಕಾಡೆಮಿ ಕೌನ್ಸಿಲ್ ಸದಸ್ಯರಾಗಿ, ಕಾಮರ್ಸ್ ಫ್ಯಾಕಲ್ಟಿಯ ಡೀನ್ ಆಗಿ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾಗಿ, ಮೈಸೂರು ವಿವಿ ವಿದೇಶಿ ವಿದ್ಯಾರ್ಥಿಗಳ ಸಂಯೋಜಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ವಿಶೇಷವೆಂದರೆ ಇಂತಹ ಅವಕಾಶಗಳನ್ನು ಯಾವುದೇ ಮತ್ತು ಯಾರದ್ದೇ ಶಿಫಾರಸ್ಸು ಇಲ್ಲದೇ ಸ್ವಯಂ ಪ್ರತಿಭೆಯಿಂದಲೇ ಪಡೆದ ಇವರನ್ನು ‘ಮ್ಯಾನೇಜ್‌ಮೆಂಟ್ ಶಿಕ್ಷಣ ಕ್ಷೇತ್ರದ ಒಬ್ಬ ಜಂಗಮ’ ಎಂದೇ ಬಣ್ಣಿಸಬಹುದು.
ಇವರ ವಿದ್ಯಾರ್ಥಿಗಳ ಪೈಕಿ ಅಂದಿನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರುಗಳಾಗಿದ್ದ ಎ.ಎಚ್.ವಿಶ್ವನಾಥ್, ಜಿ.ಟಿ.ದೇವೇಗೌಡ ಮತ್ತು ವಿ. ಶ್ರೀನಿವಾಸ ಪ್ರಸಾದ್ ಅವರುಗಳ ಪುತ್ರ, ಪುತ್ರಿಯರು ಇವರ ಶಿಷ್ಯರಾಗಿದ್ದರೂ ಕೂಡ ಯಾವುದೇ ಸಂದರ್ಭದಲ್ಲಿ ಸಹಾಯಕ್ಕಾಗಲೀ, ಶಿಫಾರಸ್ಸಿಗಾಗಲೀ ಅವರುಗಳ ಮನೆ ಮುಂದೆ ನಿಲ್ಲಲಿಲ್ಲ ಅಥವಾ ಅವರ ಶಿಷ್ಯರನ್ನು ಉಪಯೋಗಿಸಿಕೊಳ್ಳಲಿಲ್ಲ. ಆದರೆ ಕರ್ನಾಟಕ ಸರ್ಕಾರ ಇಂತಹ ಪ್ರತಿಭಾವಂತ ಪ್ರಾಧ್ಯಾಪಕರನ್ನು ಕುಲಪತಿಯನ್ನಾಗಿ ನೇಮಿಸದೆ ತನಗೆ ತಾನೇ ಆತ್ಮವಂಚನೆ ಮಾಡಿಕೊಂಡಿದೆ ಎಂದರೆ ಅತಿಶಯೋಕ್ತಿ ಅಲ್ಲ.
ವೈಚಾರಿಕ ಭಾಷಣಕಾರ:
ದಶಕಗಳ ಹಿಂದೆ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ, ಪರಿನಿಬ್ಬಾಣ ದಿನಾಚರಣೆಗಳಲ್ಲಿ ಉಪನ್ಯಾಸ ನೀಡಲು ಅಥವಾ ಭಾಷಣ ಮಾಡಲು ವಿಶ್ವವಿದ್ಯಾನಿಲಯದ ವತಿಯಿಂದ ಹೆಚ್ಚು ಆಹ್ವಾನಿಸಲ್ಪಡುತ್ತಿದ್ದವರೆಂದರೆ ಪ್ರೊ.ಕೆ.ರಾಮದಾಸ್ ಮತ್ತು ಪ್ರೊ.ಕೆ.ಎಸ್.ಭಗವಾನ್ ಮಾತ್ರ. ಇದಾದ ನಂತರ ಮೈಸೂರು ವಿವಿಯಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡ ಮತ್ತು ಈಗಲೂ ಅದೇ ಟ್ರೆಂಡ್ ಉಳಿಸಿಕೊಂಡಿರುವ ಪ್ರೊಫೆಸರ್ ಎಂದರೆ ಅದು ಆನಂದ್ ಎಂಬುದು ಎಲ್ಲರಿಗೂ ವೇದ್ಯವಾಗಿರುವ ಸಂಗತಿ.
ಗುವಹಾಟಿ : ಆರಂಭದಲ್ಲಿ ಬೌಲರ್‌ಗಳ ಅಬ್ಬರ ನಂತರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಅರ್ಧಶತಕದ ಆಟದಿಂದ ಚೆನ್ನೈ ಸೂಪರ್ ಕಿಂಗ್ಸ್…
ಮೈಸೂರು: ನಗರದ ಪ್ರತಿಷ್ಠಿತ ಮೈಸೂರು ರೇಸ್ ಕ್ಲಬ್ ಸದಸ್ಯರಾಗಿ ಗೀತಿಕಾ ಬಸಪ್ಪ (152 ಮತ), ಡಾ.ಕೆ.ರವಿ (147), ಕಲೆಂಗಡ ಮಂದಣ್ಣ…
ಬೆಂಗಳೂರು : ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಯಾಣವು ಡಿಜಿಟಲ್ ರೂಪಾಂತರದ ಹೊಸ್ತಿಲಲ್ಲಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು…
ಟೆಹ್ರಾನ್ : ಅಮೆರಿಕದೊಂದಿಗೆ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಯಾವುದೇ ನೇರ ಮಾತುಕತೆ ನಡೆದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಇರಾನ್ ವಿದೇಶಾಂಗ…
ವಾಷಿಂಗ್ಟನ್ : ಹಾರ್ಮುಜ್ ಜಲಸಂಧಿಯನ್ನು ತಕ್ಷಣ ತೆರೆಯದಿದ್ದರೆ ಇರಾನ್‌ನ ಎಲ್ಲ ತೈಲ ಬಾವಿಗಳು ಮತ್ತು ಖಾರ್ಗ್ ದ್ವೀಪಗಳನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ…
ಬೆಂಗಳೂರು : ದೇಶದಲ್ಲಿ ಮೊದಲ ಬಾರಿಗೆ ಮಕ್ಕಳಿಗೆ ಮೀಸಲಾಗಿ 450 ಹಾಸಿಗೆಗಳ ಬೃಹತ್, ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಇಂದಿರಾ…