ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್ ಅವರ ವಾರದ ಅಂಕಣ
ಸಂಸತ್ ಎಂದರೆ ಪ್ರಜಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಿಕೊಂಡು ದೇಶದ ಸಮಸ್ಯೆಗಳು ಮತ್ತು ಅದರ ಅಭಿವೃದ್ಧಿಯ ಮುನ್ನೋಟದ ಭಾಷ್ಯವನ್ನು ಬರೆಯುವ ೧೪೦ ಕೋಟಿ ಜನರ ಪ್ರಾತಿನಿಧಿಕ ಸಂಸ್ಥೆ. ಇಲ್ಲಿ ನಡೆಯುವ ಚರ್ಚೆ, ತೆಗೆದುಕೊಳ್ಳುವ ತೀರ್ಮಾನವೇ ದೇಶಕ್ಕೆ ದಿಕ್ಕು ತೋರಿಸುವ ನಿಜವಾದ ಸಾಂವಿಧಾನಿಕ ಸಂಸ್ಥೆ. ಇದು ಸರಿಯಾಗಿ ನಡೆದರೆ ದೇಶವೂ ಸರಿದಿಕ್ಕಿನಲ್ಲಿ ಸಾಗಿದೆ ಎಂದೇ ಅರ್ಥ. ಇದು ಹಳಿತಪ್ಪಿದರೆ ದೇಶದ ಆಡಳಿತವೂ ಅತಂತ್ರ ಆಗುತ್ತಿರುವ ಸೂಚನೆ. ಈ ಸಂಸತ್ ವ್ಯವಸ್ಥೆಯಲ್ಲಿ ಆಡಳಿತ ನಡೆಸುವ ಸರ್ಕಾರ ಮತ್ತು ಅದರ ದಿಕ್ಕು ದೆಸೆಯನ್ನು ಪ್ರಶ್ನಿಸುವ ವಿರೋಧ ಪಕ್ಷವು ಕೈಜೋಡಿಸಿದರೆ ಮಾತ್ರ ದೇಶದ ಭವಿಷ್ಯ ಸರಿ ದಿಕ್ಕಿನಲ್ಲಿ ಹೊರಟಿದೆ ಎಂದೇ ಅರ್ಥ. ಆದರೆ ಈಗ ಆಗುತ್ತಿರುವುದೇನು? ಸಂಸತ್ ಕಲಾಪಗಳು ಇತ್ತೀಚಿನ ವರ್ಷಗಳಲ್ಲಿ ಯಾಕೆ ಸರಿಯಾಗಿ ನಡೆಯುತ್ತಿಲ್ಲ? ಸರ್ಕಾರದ ನಡೆ ಸರಿ ಇದ್ದರೆ ಸಂಸತ್ ಕಲಾಪವೂ ಸರಿ ಇರುತ್ತದೆ. ಕಳೆದೆರಡು ವರ್ಷಗಳಿಂದ ಸುಗಮವಾಗಿ ಕಲಾಪ ನಡೆಯುವ ಬದಲಿಗೆ ಬೀದಿ ಜಗಳದಂತೆ ಪರಸ್ಪರ ಬೈಯ್ದಾಡುವುದು, ವೈಯಕ್ತಿಕ ದ್ವೇಷ, ವ್ಯಕ್ತಿಗತ ಆರೋಪ, ಎದುರು ಬದುರು ಕೂರುವ ಸದಸ್ಯರ ಮುಖದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದ ಕೊರತೆ ಢಾಳಾಗಿ ಕಾಣುತ್ತಿರುವುದು ದುರದೃಷ್ಟಕರ ಸಂಗತಿ.
ಜುಲೈ ೨೦ರಂದು ಆರಂಭವಾಗಿ ಆಗಸ್ಟ್ ೧೩ರವರೆಗೆ ನಡೆದ ಮುಂಗಾರು ಅಧಿವೇಶನ ಪೂರ್ಣವಾಗಿ ಗದ್ದಲ, ಕೂಗಾಟ, ಕಲಾಪ ಬಹಿಷ್ಕಾರ ಮತ್ತು ವೈಷಮ್ಯದಿಂದ ಕೊನೆಗೊಂಡದ್ದು ವಿಪರ್ಯಾಸ. ಈ ಮೂರು ವಾರಗಳ ಅವಧಿಯಲ್ಲಿ ೧೨ ಮಸೂದೆಗಳು ಚರ್ಚೆ ಇಲ್ಲದೆ, ಪ್ರತಿಪಕ್ಷಗಳ ದನಿ ಇಲ್ಲದೆ ಕ್ಷಣ ಮಾತ್ರದಲ್ಲಿ ಅಂಗೀಕಾರವಾಗಿವೆ. ಆದರೆ ವಿದೇಶಿ ದೇಣಿಗೆ ಪಡೆಯುವ ಸಂಸ್ಥೆಗಳನ್ನು ನಿಯಂತ್ರಿಸುವ ಎ-ಸಿಆರ್‌ಸಿ ಮಸೂದೆ ಮತ್ತು ಇಪ್ಪತ್ತೈದು ವರ್ಷಗಳ ನಂತರ ಆಗಬೇಕಾಗಿರುವ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯ ಮಸೂದೆಗಳು ನನೆಗುದಿಗೆ ಬಿದ್ದಿವೆ. ಲೋಕಸಭೆಯಲ್ಲಿ ಈ ಮಸೂದೆಗಳಿಗೆ ಒಪ್ಪಿಗೆ ದೊರೆಯದ ಕಾರಣ ಅವುಗಳ ಲೋಪ ದೋಷಗಳನ್ನು ಕುರಿತು ಚರ್ಚಿಸಿ ಮತ್ತೆ ಅದನ್ನು ಸರ್ಕಾರದ ವಿವೇಚನೆಗೆ ಕಳುಹಿಸಲು ಜಂಟಿ ಸಲಹಾ ಸಮಿತಿಯ ಪರಿಶೀಲನೆಗೆ ಒಪ್ಪಿಸಿರುವುದು ಸಮಾಧಾನಕರ ಸಂಗತಿ.
ಈ ಮೂರು ವಾರಗಳ ಪೂರ್ಣ ಅವಧಿಯಲ್ಲಿ ನಡೆದ ವಿದ್ಯಮಾನ ಆಡಳಿತ ನಡೆಸುವ ಬಿಜೆಪಿಯ ಜಂಘಾಬಲವನ್ನೇ ಅಲುಗಾಡಿಸಿಬಿಟ್ಟಿದೆ. ನೀಟ್ ಪ್ರಶ್ನೆಪತ್ರಿಕೆಗಳ ಸೋರಿಕೆ ವಿರುದ್ಧ ಜೆನ್ -ಝೀ (ಕಾಕ್ರೋಚ್ ಜನತಾ ಪಾರ್ಟಿ) ದೆಹಲಿಯ ಜಂತರ್ ಮಂತರ್ ಹೋರಾಟ, ವಿದ್ಯಾರ್ಥಿಗಳ ಮೇಲೆ ಸರ್ಕಾರದ ಆಣತಿಯಂತೆ ಪೆಲೆಟ್ ಬಂದೂಕು ಬಳಸಿ ನಡೆದ ಪೊಲೀಸ್ ದೌರ್ಜನ್ಯ, ಈ ಅಮಾನುಷ ಕೃತ್ಯದಿಂದ ಹಲವಾರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡ ಪ್ರಕರಣ ಸರ್ಕಾರದ ನೈತಿಕ ಶಕ್ತಿಯನ್ನೇ ಅಲುಗಾಡಿಸಿಬಿಟ್ಟಿತು. ಇದರಿಂದಾಗಿ ಸರ್ಕಾರವು ಸಂಸತ್‌ನಲ್ಲಿ ಉತ್ತರ ಕೊಡಲಾಗದೆ ಮಖೇಡಿಯಂತೆ ನುಣುಚಿಕೊಂಡ ಘಟನೆ ಹಿಂದೆಂದೂ ನಡೆದಿಲ್ಲ.
ನೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯಲು ತೋರಿದ ಹಠಮಾರಿತನ, ಕೊನೆಗೂ ವಿದ್ಯಾರ್ಥಿಗಳ ಒಗ್ಗಟ್ಟಿನ ಶಕ್ತಿಗೆ ಮಂಡಿಯೂರಿ ಮಣಿದದ್ದು ವಿಶೇಷ. ಪ್ರತಿಪಕ್ಷಗಳ ಭ್ರಷ್ಟ ರಾಜಕಾರಣಿಗಳನ್ನು ಇಡಿ ಮತ್ತು ಸಿಬಿಐ ಮೂಲಕ ಪಳಗಿಸಿದಂತೆ, ಹತ್ತಾರು ತಂತ್ರಗಳನ್ನು ಬಳಸಿ ಚುನಾವಣೆ ಗೆಲ್ಲುವಂತೆ ಸುಲಭ ಕಾರ್ಯ ಎಂದು ತಿಳಿದುಕೊಂಡಿದ್ದ ಬಿಜೆಪಿಗೆ ಈ ಬಾರಿ ವಿದ್ಯಾರ್ಥಿ ಶಕ್ತಿಯೇ ಅಡ್ಡಗಾಲು ಹಾಕಿತು. ಕಾಕ್ರೋಚ್ ಜನತಾ ಪಾರ್ಟಿಯನ್ನು ಮಣಿಸಲು ಕೇಂದ್ರ ಸರ್ಕಾರ ಈ ಚಳವಳಿಯಲ್ಲಿ ವಿದೇಶಿ ಕೈವಾಡ, ಹಣದ ನೆರವು ಇರಬಹುದೇ ಎನ್ನುವ ರಹಸ್ಯವನ್ನು ಭೇದಿಸುವ ಪ್ರಯತ್ನಗಳೆಲ್ಲವನ್ನೂ ಮಾಡಿತು. ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಹುಟ್ಟಿಗೆ ಬೀಜ ಹಾಕಿದ ಅಭಿಜೀತ್ ದಿಪ್ಕೆಗೆ ಯಾವ ವಿದೇಶಿಗಳ ನೆರವು ಇರಬಹುದು ಎನ್ನುವು ದನ್ನೆಲ್ಲ ಶೋಧಿಸಿತು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಮ್ಮ ರಹಸ್ಯ ಭೇದಿಸುವ ತಂತ್ರಗಾರಿಕೆಯ ಮೂಲಗಳ ಮೂಲಕ ಹತ್ತಾರು ಕಡೆ ಶೋಧಿಸಿದರೂ ಅವರಿಗೆ ಯಾವುದೇ ಬಲವಾದ ಸಾಕ್ಷ್ಯ ಮತ್ತು ಪುರಾವೆಗಳು ಸಿಕ್ಕಿದಂತೆ ಕಾಣುತ್ತಿಲ್ಲ. ಸಿಜೆಪಿಗೆ ಬಾಹ್ಯ ಬೆಂಬಲವೇನಾದರೂ ಇದ್ದು ಅಂತಹ ಮಾಹಿತಿ ಸಿಕ್ಕಿದ್ದರೆ ಮೋದಿ ಸರ್ಕಾರ ಇಷ್ಟೊತ್ತಿಗಾಗಲೇ ಹಿಟ್ ಹೊಡೆದು (ಜಿರಳೆಗಳನ್ನು ಸಾಯಿಸುವ ಔಷಧ) ನಿರ್ನಾಮ ಮಾಡಿ ಬಿಡುತ್ತಿತ್ತು.
ಜೊತೆಗೆ ಈ ಚಳವಳಿನಿರತ ವಿದ್ಯಾರ್ಥಿಗಳ ಮೇಲೆ ನಡೆಸಿದ ಪೆಲೆಟ್ ಬಳಕೆಯನ್ನು ಸಮರ್ಥಿಸಿಕೊಳ್ಳುವುದಕ್ಕೆ ಬೇಕಾದ ಸಾಕ್ಷ್ಯವಿಲ್ಲದೆ ದೆಹಲಿಯ ಭದ್ರತೆಯ ಹೊಣೆಗಾರಿಕೆ ಹೊತ್ತಿರುವ ಗೃಹ ಸಚಿವ ಅಮಿತ್ ಶಾ ಅವರ ತಂತ್ರಗಾರಿಕೆಯೆಲ್ಲ ಠುಸ್ಸಾಯಿತು. ಅವರು ಸಂಸತ್ ಭವನಕ್ಕೆ ಬಂದರೂ ಸದನದ ಒಳಗೆ ಕಾಲಿಡಲಿಲ್ಲ. ಇದೇ ಅಸಹಾಯಕ ಪರಿಸ್ಥಿತಿ ಪ್ರಧಾನಿ ಮೋದಿ ಅವರದ್ದೂ ಆಗಿತ್ತು. ಇದರ ಜೊತೆಗೆ ಬಿಜೆಪಿ ಮತ್ತು ಸಂಘ ಪರಿವಾರದ ಹತ್ತಾರು ವರ್ಷಗಳ ಕನಸನ್ನು ನನಸು ಮಾಡಿದ ಶ್ರೀರಾಮ ಮಂದಿರ ನಿರ್ಮಾಣದ ನಂತರ ಹುಂಡಿ ಹಣ ಕಳ್ಳತನದ ಬಗೆಗೆ ಸರ್ಕಾರ ಉತ್ತರ ಕೊಡಲಾಗದೆ ಹೋದದ್ದು ಸರ್ಕಾರದ ನೈತಿಕತೆಯನ್ನೇ ಪ್ರಶ್ನಿಸುವಂತಾಯಿತು. ಶ್ರೀರಾಮ ಮಂದಿರಕ್ಕಾಗಿ ಭಕ್ತಿಯಿಂದ ಸಾವಿರಾರು, ಲಕ್ಷ ಮತ್ತು ಕೋಟಿಗಟ್ಟಲೆ ಹಣ ದೇಣಿಗೆ ನೀಡಿದ ಹಾಗೂ ಚಿನ್ನಾಭರಣ ಅರ್ಪಿಸಿದ ಭಕ್ತರಿಗೆ ಸರ್ಕಾರ ಅಸಹಾಯಕತೆ ತೋರಿದ್ದು ದುರಂತ. ‘ನಾನು ತಿನ್ನುವುದಿಲ್ಲ, ಬೇರೆಯವರು ತಿನ್ನಲೂ ಬಿಡುವುದಿಲ್ಲ’ ಎಂದು ಆಗಾಗ್ಗೆ ಜಪಿಸುವ ಪ್ರಧಾನಿ ನರೇಂದ್ರ ಮೋದಿ ಈ ಹುಂಡಿ ಕಳ್ಳತನಕ್ಕೆ ಉತ್ತರ ಏಕೆ ಕೊಟ್ಟಿಲ್ಲ ಎನ್ನುವುದು ಪ್ರಶ್ನೆಯಾಗಿಯೇ ಉಳಿದು ಹೋಯಿತು.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಗೆದ್ದು ನಂತರ ತೃಣಮೂಲ ಕಾಂಗ್ರೆಸ್ಸಿನ ರಾಜ್ಯಸಭೆ ಸದಸ್ಯರನೇಕರು ತಮ್ಮ ಪಕ್ಷವನ್ನು ತೊರೆದುಬಿಜೆಪಿಯತ್ತ ಬಂದುದನ್ನು ಸಂಭ್ರಮಿಸಿ ಬೀಗುತ್ತಿದ್ದ ಆಡಳಿತ ಪಕ್ಷವು ಈ ಕಲಾಪದಲ್ಲಿ ಹಲವು ಕಾರಣಗಳಿಗಾಗಿ ಮಂಕಾಗಿ ಹೋದುದು ವಿಶೇಷ. ಎರಡು ದಶಕಗಳ ಹಿಂದೆ ಲೋಕಸಭೆಗೆ ಕಾಲಿಟ್ಟ ದಿನಗಳಲ್ಲಿ ಅನನುಭವಿಯಾಗಿ ವಿರೋಧಿಗಳ ಬಾಯಲ್ಲಿ ಪಪ್ಪುವಾಗಿ ಕಾಣಿಸಿಕೊಂಡಿದ್ದ ವಿರೋಧಿ ನಾಯಕ ರಾಹುಲ್ ಗಾಂಧಿ ಈಗ ಹೆಜ್ಜೆ ಹೆಜ್ಜೆಗೂ ಸರ್ಕಾರಕ್ಕೆ ತಡೆಗೋಡೆಯಾಗಿ ನಿಂತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಳುವ ಬಿಜೆಪಿ ಸರ್ಕಾರವನ್ನು ಕಟ್ಟಿಹಾಕುವ ರಾಹುಲ್ ಗಾಂಧಿ ಅವರ ಕಾರ್ಯವೈಖರಿ ಮತ್ತು ವಿದ್ಯಾರ್ಥಿಗಳ ವಿರುದ್ಧ ಬಳಸಿದ ಪೆಲೆಟ್ ಗನ್ ಬಗೆಗೆ ಸರ್ಕಾರ ನಿರುತ್ತರವನ್ನಾಗಿಸಿದ್ದೂ ಕಲಾಪ ನಡೆಯದಿರಲು ಮುಖ್ಯ ಕಾರಣ.
ಕಳೆದೆರಡು ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಸದಸ್ಯರು ಸಂಸತ್ತಿನ ಹೊರಗೆ ನಿತ್ಯವೂ ಒಂದಲ್ಲ ಒಂದು ಕಾರಣಕ್ಕೆ ಪ್ಲೆಕಾರ್ಡ್ ಹಿಡಿದುಕೊಂಡು ಪ್ರತಿಭಟನೆಯಲ್ಲಿ ತೊಡಗುವಂತೆ ಮಾಡುವಲ್ಲಿ ರಾಹುಲ್ ಯಶಸ್ವಿಯಾದಂತೆ ಕಾಣುತ್ತಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ನಂತರ ಸರ್ಕಾರ ರಚಿಸಲು ಹೆಣಗಾಡುತ್ತಿದ್ದ ಟಿವಿಕೆಗೆ ಬೆಂಬಲ ನೀಡಿದ ಮೇಲೆ ಡಿಎಂಕೆಯು ಕಾಂಗ್ರೆಸ್ ಸಖ್ಯದಿಂದ ದೂರ ಉಳಿಯಿತು. ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ಪರವಾಗಿ ಬಲವಾಗಿ ನಿಲ್ಲುತ್ತಿದ್ದ ಡಿಎಂಕೆ ಈಗ ದೂರ ಉಳಿಯಿತು. ಆದರೆ ಡಿಎಂಕೆ ನೀಡುತ್ತಿದ್ದ ಈ ಶಕ್ತಿಯ ಕೊರತೆಯನ್ನು ಈ ಬಾರಿಯ ಅಧಿವೇಶನದಲ್ಲಿ ಕಾಂಗ್ರೆಸ್ ಜೊತೆಗೆ ನಿಂತದ್ದು ಸದಾ ಕೆಂಪು ಟೋಪಿ ಧರಿಸುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸದಸ್ಯರು. ಇದರ ಜೊತೆಗೆ ಬೆರಳೆಣಿಕೆ ಸದಸ್ಯರಿರುವ ಎಡ ಪಕ್ಷಗಳು.
ಕಾಂಗ್ರೆಸ್ ಮತ್ತು ಇತರೆ ಪ್ರತಿಪಕ್ಷಗಳಿಗೆ ವಾಸ್ತವವಾಗಿ ಶಕ್ತಿ ನೀಡಿದ್ದು ವಿದ್ಯಾರ್ಥಿಗಳ ಹೋರಾಟ. ಕಾಕ್ರೋಚ್ ಜನತಾ ಪಾರ್ಟಿಯನ್ನು ಬಗ್ಗು ಬಡಿಯಲು ಬಿಜೆಪಿ ಸರ್ಕಾರಕ್ಕೆ ಕಷ್ಟದ ಕೆಲಸವೇನೂ ಆಗಿರಲಿಲ್ಲ. ಆದರೆ ಶ್ರೀಲಂಕಾ, ನೇಪಾಳ ಮತ್ತು ಬರ್ಮಾದಲ್ಲಿ ನಡೆದಂತಹ ಜೆನ್-ಝೀ ಯುವ ಶಕ್ತಿಯನ್ನು ಎದುರು ಹಾಕಿಕೊಂಡರೆ ತನ್ನ ಭವಿಷ್ಯ ಮುಗಿಯಿತು ಎನ್ನುವ ಭಯವೇ ಬಿಜೆಪಿ ಸರ್ಕಾರವನ್ನು ಕಟ್ಟಿಹಾಕಿತು. ಈ ಮಧ್ಯೆ ವಿದ್ಯಾರ್ಥಿ ಶಕ್ತಿಗೆ ಆರ್‌ಎಸ್‌ಎಸ್ ನಾಯಕ ಮೋಹನ್ ಭಾಗವತ್ ಅನಿವಾರ್ಯ ಮತ್ತು ಸಾಂಕೇತಿಕವಾಗಿ ವ್ಯಕ್ತಪಡಿಸಿದ ಸಹಮತ. ಮತ್ತು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ಪರೋಕ್ಷವಾಗಿ ಒಲ್ಲದ ಮನಸ್ಸಿನಿಂದ ಬೆಂಬಲವಾಗಿ ನಿಂತದ್ದು ಕೂಡ ಬಿಜೆಪಿ ಸರ್ಕಾರ ಅಧಿರವಾಗಲು ಕಾರಣ.
ಕಾಕ್ರೋಚ್ ಜನತಾ ಪಾರ್ಟಿಯು ಒಂದು ರಾಜಕೀಯ ಪಕ್ಷವಾಗಿ ಬೆಳೆಯುವ ಬದಲಿಗೆ ದೇಶದಲ್ಲಿ ಅನ್ಯಾಯಗಳ ವಿರುದ್ಧ ಹೋರಾಡುವುದು, ವಿಶೇಷವಾಗಿ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ಒತ್ತಡ ಗುಂಪಾಗಿ ಕೆಲಸ ಮಾಡುವ ನಿರ್ಧಾರದಿಂದಾಗಿ ದೇಶದಾದ್ಯಂತ ವಿದ್ಯಾರ್ಥಿಗಳ ಬೆಂಬಲ ತಾನಾಗಿಯೇ ದೊರೆಯುತ್ತಿದೆ. ಬಿಸಿ ರಕ್ತದ ಈ ವಿದ್ಯಾರ್ಥಿ ಸಂಘಟನೆ ಮುಂದಿನ ದಿನಗಳಲ್ಲಿ ಬಲಗೊಳ್ಳುವುದರಿಂದ ಸಹಜವಾಗಿಯೇ ಆಡಳಿತ ನಡೆಸುವ ಪಕ್ಷಗಳಿಗೆ ಸಿಂಹಸ್ವಪ್ನವಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಮಧ್ಯೆ ದೇಶದ ಭವಿಷ್ಯವನ್ನು ರೂಪಿಸುವ ಸಂಸತ್‌ನಲ್ಲಿ ಜನಹಿತಕ್ಕಾಗಿ ಕಾಯ್ದೆ ಕಾನೂನು ರೂಪಿಸುವ ಸಲುವಾಗಿ ಒಬ್ಬರ ಮುಖ ಮತ್ತೊಬ್ಬರು ನೋಡದಂತೆ ಮುಖಗಂಟು ಹಾಕಿಕೊಂಡವರಂತೆ ಕಾಣುವ ಪ್ರಧಾನಿ ಮೋದಿ ಮತ್ತು ವಿರೋಧಿ ನಾಯಕ ರಾಹುಲ್ ಗಾಂಧಿ ನಡುವೆ ವಿಶ್ವಾಸ ಮೂಡಬೇಕಾಗಿರುವುದು ಜನತಂತ್ರದ ದೃಷ್ಟಿಯಿಂದ ಒಳಿತು.
” ಕಾಕ್ರೋಚ್ ಜನತಾ ಪಾರ್ಟಿಯು ಒಂದು ರಾಜಕೀಯ ಪಕ್ಷವಾಗಿ ಬೆಳೆಯುವ ಬದಲಿಗೆ ದೇಶದಲ್ಲಿ ಅನ್ಯಾಯಗಳ ವಿರುದ್ಧ ಹೋರಾಡುವುದು, ವಿಶೇಷವಾಗಿ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ಒತ್ತಡ ಗುಂಪಾಗಿ ಕೆಲಸ ಮಾಡುವ ನಿರ್ಧಾರದಿಂದಾಗಿ ದೇಶದಾದ್ಯಂತ ವಿದ್ಯಾರ್ಥಿಗಳ ಬೆಂಬಲ ತಾನಾಗಿಯೇ ದೊರೆಯುತ್ತಿದೆ.”
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉನ್ನತ ಹುದ್ದೆಗಳಿಗೆ ತಜ್ಞರನ್ನು ಬಿಟ್ಟು ರಾಜಕೀಯ ವ್ಯಕ್ತಿಗಳನ್ನು ನೇಮಿಸುತ್ತಿರುವುದು ರಾಜ್ಯದ ಪರಿಸರ ಆಡಳಿತಕ್ಕೆ…
ದೇಶದ ೮೦ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಕ್ಷಣಗಳಲ್ಲಿ, ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ‘ಬುರ್ಜ್ ಖಲೀಫಾ’ದಲ್ಲಿ ಭಾರತದ ತ್ರಿವರ್ಣ…
5,54,32,314 ಎನ್ಯುಮರೇಷನ್ ಫಾರಂ ಹಂಚಿಕೆ ; ಶೇ.100 ರಷ್ಟು ಡಿಜಿಟಲೀಕರಣ ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)…
ಮೈಸೂರು : ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ 6 ಕೋಟಿ ರೂ. ಬಿಡುಗಡೆ ಮಾಡಿದ್ದು,…
ತಾರಾಪಿತ್ (ಪಶ್ಚಿಮ ಬಂಗಾಳ) : ಬೆಂಕಿ ಅವಘಡದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿರುವ ಘಟನೆ ಪಶ್ಚಿಮ…