ಅಂಕಣಗಳು

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಸ್ಲಮ್ ವಾಸಿಗಳಿಗೆ ಬದುಕು ಕಟ್ಟಿ ಕೊಟ್ಟ ಆರ್ಕಿಟೆಕ್ಟ್‌

ಕೊಳೆಗೇರಿಗಳ ೨೭,೦೦೦ ಮನೆಗಳಿಗೆ ಶೌಚಾಲಯ ಸೌಲಭ್ಯ

ಪೂನಾದ ಇಂದಿರಾ ವಸಾಹತ್ ಎಂಬ ಪ್ರದೇಶದ ಒಂದು ಸ್ಲಮ್ಮಿನಲ್ಲಿ ವಾಸಿಸುವ ಲತಾ ರತನ್ ಮಿಸಾಲ್‌ಗೆ ತನ್ನ ಮನೆಯಿಂದ ತುಸು ದೂರದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಹೋಗಿ ಬರುವುದೆಂದರೆ ಬಹುದೂರದ ಪ್ರಯಾಣದಂತಿರುತ್ತಿತ್ತು. ರಾತ್ರಿ ಹೊತ್ತಿನಲ್ಲಂತೂ ಆ ದೂರ ಇನ್ನೂ ದೂರದ ಪ್ರಯಾಣವಾಗುತ್ತಿತ್ತಲ್ಲದೆ ಅಪಾಯಕಾರಿಯೂ ಎನಿಸುತ್ತಿತ್ತು.

ಆ ಭಯದ ಕಾರಣ ಅವಳು ತನ್ನ ಮೊಮ್ಮಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದಳು. ಆದರೆ, ಮೊಮ್ಮಗಳನ್ನು ಶೌಚಾಲಯದ ಹೊರ ನಿಲ್ಲಿಸಿ ತಾನು ಒಳ ಹೋಗಿ ಬರುವುದರೊಳಗೆ ಅವಳಿಗೆ ಏನು ಅಪಾಯ ಎದುರಾಗುತ್ತದೋ ಎಂದು ಭಯಪಡುತ್ತಿದ್ದಳು. ೨೦೨೧ರಲ್ಲಿ ಲತಾ ರತನ್ ಮಿಸಾಲ್‌ಗೆ ಆ ಭಯದಿಂದ ಮುಕ್ತಿ ಸಿಕ್ಕಿತು. ಆ ವರ್ಷ ‘ಶೆಲ್ಟರ್ ಅಸೋಸಿಯೇಟ್ಸ್’ ಎಂಬ ಒಂದು ಸರ್ಕಾರೇತರ ಸಂಸ್ಥೆ ಅವಳ ಮನೆಯೊಳಗೇ ಒಂದು ಶೌಚಾಲಯವನ್ನು ಕಟ್ಟಿಸಿಕೊಟ್ಟಿದ್ದರಿಂದ ಅವಳು ನಿರಾಳವಾಗಿ ಉಸಿರಾಡುವಂತಾಯಿತು.

ಪ್ರತಿಮಾ ಜೋಶಿ ಮಹಾರಾಷ್ಟ್ರದ ಪೂನಾ ಮೂಲದ ಒಬ್ಬರು ಆರ್ಕಿಟೆಕ್ಟ್. ಅವರದ್ದು ಒಂದು ಮಧ್ಯಮ ವರ್ಗದ ಕುಟುಂಬವಾದರೂ ಅವರ ತಂದೆ ತಾಯಿ ಅಗಾಧವಾದ ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. ಅದನ್ನು ನೋಡುತ್ತ ಬೆಳೆದ ಪ್ರತಿಮಾ ಜೋಶಿ ತನ್ನ ಮನೆಯ ಅನುಕೂಲಕರ ಸ್ಥಿತಿಗತಿಯನ್ನು ಅಕ್ಕಪಕ್ಕದ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದ ಬಡ ಸಮುದಾಯದ ಜನರ ಪರಿಸ್ಥಿತಿಗೆ ಹೋಲಿಸಿಕೊಂಡು ನೋಡುತ್ತಿದ್ದರು. ಆ ಜನರು ಶೌಚದಂತಹ ದಿನನಿತ್ಯದ ಒಂದು ಸಾಮಾನ್ಯ ಮೂಲಭೂತ ಅಗತ್ಯವನ್ನು ಪೂರೈಸಿಕೊಳ್ಳಲೂ ಪಡುತ್ತಿದ್ದ ಯಾತನೆಯನ್ನು ನೋಡಿ ಬಹಳ ಮರುಕಪಡುತ್ತಿದ್ದರು. ಒಬ್ಬ ಆರ್ಕಿಟೆಕ್ಟ್ ತನ್ನ ಶಿಕ್ಷಣ ಮುಗಿದ ನಂತರ ಕಮರ್ಷಿಯಲ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಸಹಜ. ಆದರೆ, ಪ್ರತಿಮಾ ಜೋಶಿ ಇಂಗ್ಲೆಂಡಿನ ‘ಬ್ಯಾಚಲರ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆಂಡ್ ಪ್ಲಾನಿಂಗ್’ ಕಾಲೇಜಿನಲ್ಲಿ ಮಾಸ್ಟರ‍್ಸ್ ಕೋರ್ಸ್ ಮುಗಿಸಿದ ನಂತರ ಆ ದಾರಿಯಲ್ಲಿ ಹೋಗಲಿಲ್ಲ. ಸಾಮಾನ್ಯವಾಗಿ ಆರ್ಕಿಟೆಕ್ಚರ್ ಕೋರ್ಸುಗಳಲ್ಲಿ ನಗರಗಳ ಬಡತನ ಮುಂತಾದುವುಗಳ ಬಗ್ಗೆ ಕಲಿಸಲಾಗುವುದಿಲ್ಲ. ಆದರೆ, ‘ಬ್ಯಾಚಲರ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆಂಡ್ ಪ್ಲಾನಿಂಗ್’ ಕಾಲೇಜು ಸಾಮಾನ್ಯ ಆರ್ಕಿಟೆಕ್ಚರಲ್ ಕಾಲೇಜುಗಳಿಗಿಂತ ಭಿನ್ನವಾದುದು. ಅಲ್ಲಿ ತನ್ನ ಕೋರ್ಸಿನ ಸಮಯದಲ್ಲಿ ಹಲವಾರು ವಿಭಿನ್ನ ಹಿನ್ನೆಲೆಯ ಪ್ಲಾನರ್‌ಗಳು ಮತ್ತು ಆರ್ಕಿಟೆಕ್ಚರುಗಳಿಂದ ಪಾಠ ಹೇಳಿಸಿಕೊಂಡ ಪ್ರತಿಮಾ ಜೋಶಿ ತನ್ನ ಕೋರ್ಸು ಮುಗಿಸಿ, ಹೊರ ಬರುವಾಗಲೇ ತನ್ನ ಆರ್ಕಿಟೆಕ್ಚರಲ್ ಕೌಶಲವನ್ನು ನಗರಗಳ ಬಡವರಿಗಾಗಿ ವ್ಯಯಿಸಲು ನಿಶ್ಚಯಿಸಿದ್ದರು. ಆ ಕಾರಣಕ್ಕಾಗಿಯೇ ಅವರು ಪೂನಾದಲ್ಲಿ ೧೯೯೩ರಲ್ಲಿ ‘ಶೆಲ್ಟರ್ ಅಸೋಸಿಯೇಷನ್’ ಎಂಬ ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದರು.

ಕಳೆದ ೩೦ ವರ್ಷಗಳಲ್ಲಿ ಪ್ರತಿಮಾ ಜೋಶಿ ‘ಶೆಲ್ಟರ್ ಅಸೋಸಿಯೇಷನ್’ ಮೂಲಕ ‘ಒಂದು ಮನೆ ಒಂದು ಶೌಚಾಲಯ’ ಕಾರ್ಯಕ್ರಮದಡಿ ನೂರಾರು ಕೊಳೆಗೇರಿಗಳ ೨೭,೦೦೦ ಮನೆಗಳಿಗೆ ಶೌಚಾಲಯಗಳನ್ನು ಕಟ್ಟಿಸಿ ಕೊಟ್ಟು, ಅವರಿಗೆ ಗೌರವಯುತವಾದ ಶೌಚಾಲಯದ ವ್ಯವಸ್ಥೆ ಲಭಿಸುವಂತೆ ಮಾಡಿದ್ದಾರೆ.

ಕೊಳೆಗೇರಿಗಳಲ್ಲಿ ವಾಸಿಸುವವರು ಕೊಳಕರು, ಅಶಿಸ್ತಿನ ಜನರು ಅಥವಾ ಯಾವುದೇ ಸೌಲಭ್ಯವನ್ನು ಉಚಿತವಾಗಿ ಅಥವಾ ಕಳ್ಳಮಾರ್ಗದಲ್ಲಿ ಪಡೆಯಲಿಚ್ಛಿಸುವವರು ಎಂಬುದು ಅವರ ಬಗ್ಗೆ ಇತರರಲ್ಲಿ ಸಾಮಾನ್ಯವಾಗಿರುವ ಅಭಿಪ್ರಾಯ. ಆದರೆ, ಪ್ರತಿಮಾ ಜೋಶಿಯವರ ಪ್ರಕಾರ ಈ ಅಭಿಪ್ರಾಯ ತಪ್ಪು. ಅವರ ಪ್ರಕಾರ ಕೊಳೆಗೇರಿಗಳಲ್ಲಿರುವವರೂ ಇತರರಂತೆ ತಾವು ಸ್ವಚ್ಛ ಪರಿಸರದಲ್ಲಿ ಬದುಕಬೇಕು ಎಂದು ಬಯಸುವವರು ಯಾವುದೇ ಸೌಲಭ್ಯ ಪಡೆಯಲು ತಮ್ಮಿಂದ ಸಾಧ್ಯವಾದಷ್ಟು ಹಣ ನೀಡಲು ಅವರೂ ತಯಾರಿರುತ್ತಾರೆ. ಉದಾಹರಣೆಗೆ, ಶೆಲ್ಟರ್ ಅಸೋಸಿಯೇಷನ್ ನಡೆಸಿದ ಒಂದು ಸಮೀಕ್ಷೆಯಲ್ಲಿ ಕೊಳೆಗೇರಿಗಳ ಒಟ್ಟು ಕುಟುಂಬಗಳಲ್ಲಿ ಶೇ.೭೦ ಕುಟುಂಬಗಳು ಸಾರ್ವಜನಿಕ ಶೌಚಾಲಯಗಳ ಬದಲು ತಮ್ಮ ಮನೆಯೊಳಗೇ ಒಂದು ಶೌಚಾಲಯವನ್ನು ಆಪೇಕ್ಷಿಸುತ್ತಿದ್ದು, ಅದರ ನಿರ್ಮಾಣದ ವೆಚ್ಚದಲ್ಲಿ ತಾವೂ ಭಾಗಿಯಾಗಲು ಮುಂದೆ ಬಂದವು. ಶೆಲ್ಟರ್ ಅಸೋಸಿಯೇಷನ್ ಕೊಳೆಗೇರಿ ನಿವಾಸಿಗಳ ಸಹಭಾಗಿತ್ವದಲ್ಲಿ ಸಾವಿರಾರು ಶೌಚಾಲಯಗಳನ್ನು ಕಟ್ಟಿಸಿ ಕೊಟ್ಟು, ಪುಣೆಯ ಐದು ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಕೊಳೆಗೇರಿ ನಿವಾಸಿಗಳ ಶೌಚದ ಸಮಸ್ಯೆಯನ್ನು ಗಣನೀಯವಾಗಿ ಇಲ್ಲವಾಗಿಸಿದ್ದಾರೆ. ಶೆಲ್ಟರ್ ಅಸೋಸಿಯೇಷನ್ ಬಡ ಕೊಳೆಗೇರಿ ನಿವಾಸಿಗಳಿಗೆ ನೆರವಾಗುತ್ತಿರುವ ಇನ್ನೊಂದು ರಂಗವೆಂದರೆ ಮುಟ್ಟಿನ ಸ್ವಚ್ಛತೆ. ಮುಟ್ಟಿನ ಸಮಯದಲ್ಲಿ ಚಿಂದಿ ಬಟ್ಟೆ ಅಥವಾ ಬೇರಾವುದೇ ರೀತಿಯ ಅಸುರಕ್ಷಿತ ಕ್ರಮಗಳ ಬದಲು ಮುಟ್ಟಿನ ಕಪ್ಪುಗಳನ್ನು ಬಳಸುವುದನ್ನು ರೂಢಿ ಮಾಡಿಕೊಳ್ಳಲು ಹೆಣ್ಣು ಮಕ್ಕಳಿಗೆ ತರಬೇತಿ ಹಾಗೂ ನೆರವು ನೀಡುತ್ತದೆ. ಈ ಕಾರ್ಯಕ್ರಮದಿಂದ ಪ್ರಯೋಜನ ಹೊಂದಿದ ಕೊಳೆಗೇರಿಗಳ ಸುಮಾರು ೩,೦೦೦ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಮುಟ್ಟಿನ ಕಪ್ಪುಗಳನ್ನು ಬಳಸಲು ಪ್ರಾರಂಭಿಸಿದ್ದಾರೆ.

ಘನ ಕಸಗಳ ವಿಂಗಡಣೆ ಮತ್ತು ಮತ್ತು ಅವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರಲ್ಲೂ ಶೆಲ್ಟರ್ ಅಸೋಸಿಯೇಷನ್ ಕೊಳೆಗೇರಿಗಳಿಗೆ ನೆರವಾಗುತ್ತಿದೆ. ನಗರಗಳ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೇ ನಿಂತಲ್ಲೇ ನಿಂತು ಆರೋಗ್ಯ ಸಮಸ್ಯೆ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗಲು ಕೊಳೆಗೇರಿ ನಿವಾಸಿಗಳು ಪ್ಲಾಸ್ಟಿಕ್, ಸಿರಾಮಿಕ್, ಥರ್ಮಾಕೋಲ್, ಗಾಜು ಮತ್ತು ಲೋಹ ಮೊದಲಾದ ಘನ ಕಸಗಳನ್ನು ಚರಂಡಿಗಳಿಗೆ ಎಸೆಯುವುದು ಮುಖ್ಯ ಕಾರಣಗಳಲ್ಲೊಂದು. ಶೆಲ್ಟರ್ ಅಸೋಸಿಯೇಷನ್ ಈ ವಿಚಾರದಲ್ಲಿ ಕೊಳೆಗೇರಿಗಳಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸಿ ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಲು ಶ್ರಮಿಸುತ್ತಿದೆ. ಹಾಗೆಯೇ, ಕೊಳೆಗೇರಿ ನಿವಾಸಿಗಳ ಮಲಮೂತ್ರದ ವಿಲೇವಾರಿಗೆ ಮುನಿಸಿಪಾಲಿಟಿಯ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವಲ್ಲಿ ‘ಬಯೋ ಡೈಜೆಸ್ಟರ್ ಘಟಕ’ಗಳನ್ನು ನಿರ್ಮಿಸಿ ಆ ಸಮಸ್ಯೆಯನ್ನು ನಿವಾರಿಸುತ್ತಿದ್ದಾರೆ. ಪ್ರತಿಮಾ ಜೋಶಿ ತಮ್ಮೆಲ್ಲ ಈ ಸಾಮಾಜಿಕ ಕಾರ್ಯಗಳಿಗೆ ತಾನು ಮಾಸ್ಟರ‍್ಸ್ ಕೋರ್ಸ್ ಮಾಡಿದ ಇಂಗ್ಲೆಂಡಿನ ‘ಬ್ಯಾಚಲರ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆಂಡ್ ಪ್ಲಾನಿಂಗ್’ ಕಾಲೇಜು ತನ್ನೊಳಗೆ ಹುಟ್ಟು ಹಾಕಿದ ಸಾಮಾಜಿಕ ಜವಾಬ್ದಾರಿಯ ಧೋರಣೆಯೇ ಮುಖ್ಯ ಕಾರಣ ಎಂದು ನಮ್ರತೆಯಿಂದ ಸ್ಮರಿಸಿಕೊಳ್ಳುತ್ತಾರೆ.

” ಪ್ರತಿಮಾ ಜೋಶಿ ತನ್ನ ಕೋರ್ಸು ಮುಗಿಸಿ, ಹೊರ ಬರುವಾಗಲೇ ತನ್ನ ಆರ್ಕಿಟೆಕ್ಚರಲ್ ಕೌಶಲವನ್ನು ನಗರಗಳ ಬಡವರಿಗಾಗಿ ವ್ಯಯಿಸಲು ನಿಶ್ಚಯಿಸಿದ್ದರು. ಆ ಕಾರಣಕ್ಕಾಗಿಯೇ ಅವರು ಪೂನಾದಲ್ಲಿ ೧೯೯೩ರಲ್ಲಿ ‘ಶೆಲ್ಟರ್ ಅಸೋಸಿಯೇಷನ್’ ಎಂಬ ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದರು.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸಾಂಘಿಕ ಪ್ರದರ್ಶನದಿಂದ ಭಾರತದ ಮುಡಿಗೆ ಟಿ-೨೦ ವಿಶ್ವಕಪ್

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ-೨೦ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡದ ಸಾಂಘಿಕ ಪ್ರದರ್ಶನದಿಂದ ನ್ಯೂಜಿಲೆಂಡ್…

1 hour ago

ಓದುಗರ ಪತ್ರ: ಅನುಭವಿ ಮೌಲ್ಯಮಾಪಕರಿಗೆ ಆದ್ಯತೆ ನೀಡಿ

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿಗಳು ವರ್ಷವಿಡೀ ಶ್ರದ್ಧೆಯಿಂದ ಓದಿ ಪರೀಕ್ಷೆ ಬರೆದರೂ ಪ್ರತಿ ವರ್ಷವೂ…

1 hour ago

ಓದುಗರ ಪತ್ರ: ಆಟೋ ಚಾಲಕರಿಂದ ಅರವಟ್ಟಿಗೆ ಸೌಲಭ್ಯ

ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಬಿಸಿಲಿನ ತಾಪ ಹೆಚ್ಚಾಗಿ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಮೈಸೂರಿನ ರಾಮಸ್ವಾಮಿ…

1 hour ago

ಓದುಗರ ಪತ್ರ: ಯುದ್ಧ: ಎಂಎಲ್‌ಸಿಗೆ ಸ್ಪಂದಿಸದ ಕೇಂದ್ರ ಸರ್ಕಾರ?

ಇಸ್ರೇಲ್- ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಭಾರತದಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಕಾರ್ಯನಿಮಿತ್ತ…

1 hour ago

ಮರಿಗಳೊಂದಿಗೆ ಹುಲಿ ಕಂಡು ಪುಳಕಿತರಾದ ಪ್ರವಾಸಿಗರು

ಮಹೇಂದ್ರ ಹಸಗೂಲಿ ತಾಯಿ ಹುಲಿ ನಾಪತ್ತೆಯಾಗಿದ್ದರಿಂದ ಮರಿಗಳನ್ನು ಪಾಲನೆ ಮಾಡಿದ್ದ ಅರಣ್ಯ ಇಲಾಖೆ  ಗುಂಡ್ಲುಪೇಟೆ: ಬಂಡೀಪುರದ ಸಫಾರಿಗೆ ಹೋಗಿದ್ದ ಪ್ರವಾಸಿಗರು…

2 hours ago

ಕೆರೆಗಳಿಗೆ ಪುನಶ್ಚೇತನ; ವನ್ಯಜೀವಿಗಳಿಗಿಲ್ಲ ನೀರಿನ ಕೊರತೆ

ನಾಗರಹೊಳೆ ಅರಣ್ಯದಲ್ಲಿ ಬೇಸಿಗೆಗೂ ಮುನ್ನವೇ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಂಡ ಅರಣ್ಯ ಇಲಾಖೆ ವೀರನಹೊಸಹಳ್ಳಿ: ಈ ಬಾರಿ ಬೇಸಿಗೆಗೂ ಮುನ್ನವೇ…

2 hours ago