‘ಸಖಿ ಚಾರ್ ಚೌಘಿ ಟ್ರಸ್ಟ್’ ಮೂಲಕ ತೃತೀಯ ಲಿಂಗಿಗಳ ಏಳಿಗೆಗೆ ಪರಿಶ್ರಮ
ಪುಣೆಯ ಭವಾನಿಪೇಟ್ ಸರ್ಕಾರಿ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಗಣೇಶ್ ಸಾವಂತ್ ಹುಟ್ಟಿದಾಗ ಅವನ ಕುಟುಂಬದಲ್ಲಿ ಒಂದು ಗೊಂದಲದ ಸನ್ನಿವೇಶವಿತ್ತು. ಹತ್ತು ವರ್ಷದ ಹಿಂದೆ ಅವನ ತಾಯಿ ಚೊಚ್ಚಲು ಬಸುರಿನಲ್ಲಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ ನಂತರ ಇನ್ನೊಂದು ಮಗು ಮಾಡಿಕೊಳ್ಳಲು ಬಯಸಿರಲಿಲ್ಲ. ಆದರೆ, ಹತ್ತು ವರ್ಷದ ನಂತರ ಆಕೆ ಪುನಃ ಬಸುರಿಯಾದರು. ಗರ್ಭಪಾತ ಮಾಡಿಸಿಕೊಳ್ಳಬೇಕು ಎಂದು ವೈದ್ಯರ ಬಳಿ ಹೋದಾಗ ಅವರು ನಿರಾಕರಿಸಿದರು. ಏಕೆಂದರೆ, ಆಕೆಯ ಗರ್ಭಕ್ಕೆ ಆಗ ಏಳು ತಿಂಗಳಾಗಿದ್ದವು. ಆಗ ಬೇರೆ ದಾರಿಯಿಲ್ಲದೆ ಆಕೆ ಗಣೇಶ್ಗೆ ಜನ್ಮ ನೀಡಬೇಕಾಯಿತು.
ಹುಟ್ಟಿದ್ದು ಗಂಡು ಮಗುವಾದುದರಿಂದ ಪೊಲೀಸ್ ಅಧಿಕಾರಿಯಾಗಿದ್ದ ಅವನ ತಂದೆ ಖುಷಿಪಟ್ಟರು, ಮುಂದೆ ಅವನು ತನ್ನಂತೆ ಪೊಲೀಸ್ ಅಧಿಕಾರಿಯಾಗಬಹುದು ಎಂಬ ಕಾರಣಕ್ಕೆ. ಆದರೆ, ಅವರ ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ಬಾಲ್ಯದಲ್ಲಿ ಗಣೇಶ್ ಹುಡುಗರೊಂದಿಗೆ ಫುಟ್‌ಬಾಲ್, ಕ್ರಿಕೆಟ್ ಆಡುವ ಬದಲು ತನ್ನ ಪ್ರಾಯದ ಹೆಣ್ಣು ಮಕ್ಕಳೊಂದಿಗೆ ಅಡುಗೆ ಆಟ, ಮನೆಯಾಟ ಆಡುತ್ತಿದ್ದನು. ಯಾರಾದರೂ ನೀನು ದೊಡ್ಡವನಾದ ಮೇಲೆ ಏನಾಗುತ್ತೀಯಾ ಎಂದು ಕೇಳಿದರೆ ಅವನು ‘ನಾನು ತಾಯಿಯಾಗುತ್ತೇನೆ’ ಎಂದು ಉತ್ತರಿಸುತ್ತಿದ್ದನು. ಅವನ ಉತ್ತರ ಕೇಳಿ ಎಲ್ಲರೂ ಗೊಳ್ಳೆಂದು ನಗುತ್ತಿದ್ದರು. ‘ನೀನು ದೊಡ್ಡವನಾದ ಮೇಲೆ ತಂದೆಯಾಗಬಹುದೇ ವಿನಾ ತಾಯಿಯಲ್ಲ. ಅಥವಾ ಅಪ್ಪನಂತೆ ನೀನೂ ಪೊಲೀಸ್ ಆಗಬಹುದು’ ಎಂದು ಅವರು ಹೇಳಿದಾಗ ಗಣೇಶ್ ಸಾವಂತ್‌ಗೆ ಗೊಂದಲವಾಗುತ್ತಿತ್ತು.
ಗಣೇಶ್ ಐದು ವರ್ಷದ ಬಾಲಕನಾಗಿದ್ದಾಗ ಅವನ ತಾಯಿ ತೀರಿಕೊಂಡರು. ತಾಯಿಯ ಅಗಲಿಕೆ ಅವನ ಮೇಲೆ ತೀವ್ರವಾದ ಪರಿಣಾಮ ಬೀರಿತು. ಮಗ ಹೆಣ್ಣುಮಕ್ಕಳಂತೆ ವರ್ತಿಸುವುದು ನೋಡಿ ತಂದೆ ಸಿಟ್ಟಾಗುತ್ತಿದ್ದುದರಿಂದ ಗಣೇಶ್‌ಗೆ ತಾಯಿಯೇ ಆಸರೆಯಾಗಿದ್ದಿದ್ದರು. ಆಕೆ ಇಲ್ಲವಾದ ಮೇಲೆ ಗಣೇಶ್ ಏಕಾಂಗಿಯಾದನು. ನಂತರ ಅವನು ಅಜ್ಜಿಯ ಆಶ್ರಯದಲ್ಲಿ ಬೆಳೆದನು. ಗಣೇಶ್ ಕಾಲೇಜಿನಲ್ಲಿದ್ದಾಗ ಒಂದು ದಿನ ಪ್ರಿನ್ಸಿಪಾಲರು ಆತನ ತಂದೆಯನ್ನು ಕರೆಸಿ, ಗಣೇಶನಲ್ಲಿ ಹೆಣ್ಣು ಮಕ್ಕಳ ನಡವಳಿಕೆ ಇರುವುದನ್ನು ಹೇಳಿದರು. ಅದರಿಂದ ಅವಮಾನಿತನಾದೆನೆಂದು ಭಾವಿಸಿದ ಆತನ ತಂದೆ, ‘ನೀನು ಮುಂದೆ ರಸ್ತೆಯಲ್ಲಿ ಚಪ್ಪಾಳೆ ತಟ್ಟಿಕೊಂಡು ತಿರುಗಾಡುವಿ’ ಎಂದು ಬೈದು, ಅಂದಿನಿಂದ ಅವನೊಂದಿಗೆ ಮಾತನಾಡುವುದನ್ನೂ ನಿಲ್ಲಿಸಿದರು.
ಗಣೇಶ್‌ಗೆ ೧೭ ತುಂಬಿದಾಗ ಅವನಿಗೆ ತನ್ನ ಲಿಂಗತ್ವದ ಬಗ್ಗೆ ಸ್ಪಷ್ಟತೆ ಮೂಡಿತು. ಆದರೆ, ಅದನ್ನು ಯಾರ ಬಳಿಯೂ ಹೇಳಿಕೊಳ್ಳಲು ಅವನಿಗೆ ಧೈರ್ಯವಿರಲಿಲ್ಲ. ಆಗ ಅವನು ಮನೆಯಲ್ಲಿ ಸಿಕ್ಕಿದ ೬೦ ರೂಪಾಯಿ ಹಿಡಿದುಕೊಂಡು, ಪುಣೆಯಿಂದ ಮುಂಬೈಗೆ ಹೋಗುವ ರೈಲು ಹತ್ತಿ, ಮುಂಬೈಯ ದಾದರ್‌ನಲ್ಲಿ ಇಳಿದನು. ಹೊಟ್ಟೆ ಹಸಿಯುತ್ತಿದ್ದರೂ ಹೋಟೆಲಿಗೆ ಹೋಗಲು ಹಣವಿಲ್ಲದ ಕಾರಣ ದಾದರ್ ರೈಲ್ವೇ ಸ್ಟೇಷನ್ನಿಂದ ಪ್ರಭಾದೇವಿ ಎಂಬಲ್ಲಿಗೆ ನಡೆದು ಹೋಗಿ, ಅ ಲಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಕೊಡುವ ಲಡ್ಡು ತಿಂದು, ಹತ್ತಿರದಲ್ಲಿದ್ದ ನಳ್ಳಿಯಿಂದ ನೀರು ಕುಡಿದನು. ಮುಂಬೈಯ ರಸ್ತೆಯಲ್ಲಿ ಗಣೇಶ್‌ಗೆ ಒಬ್ಬ ಟ್ರಾನ್ಸ್‌ಜೆಂಡರ್ ಲೈಂಗಿಕ ಕಾರ್ಯಕರ್ತೆಯ ಪರಿಚಯವಾಯಿತು. ಆಕೆ ಗಣೇಶ್‌ಗೆ ಕೆಲವು ದಿನಗಳ ಆಶ್ರಯ ನೀಡಿದಳು. ಗಣೇಶ್ ಇತರ ಸಾಮಾನ್ಯ ಟ್ರಾನ್ಸ್‌ಜೆಂಡರ್‌ಗಳಂತೆತಾನು ಒಬ್ಬ ಲೈಂಗಿಕ ಕಾರ್ಯಕರ್ತೆಯಾಗುವ ಅಥವಾ ಚಪ್ಪಾಳೆ ತಟ್ಟಿ ಭಿಕ್ಷ ಬೇಡುವ ಕೆಲಸ ಮಾಡಬಾರದೆಂದು ಸ್ಪಷ್ಟ ನಿರ್ಧಾರ ಮಾಡಿದ್ದನು. ಹಾಗಾಗಿ, ಆ ಟ್ರಾನ್ಸ್‌ಜೆಂಡರ್ ವ್ಯಕ್ತಿ ಗಣೇಶನನ್ನು ಟ್ರಾನ್ಸ್‌ಜೆಂಡರ್ ಸಮುದಾಯಗಳ ಏಳಿಗೆಗಾಗಿ ಶ್ರಮಿಸುತ್ತಿರುವ ಭಾರತದ ಅತ್ಯಂತ ಹಳೆಯ ಸಂಘಟನೆ ಹಮ್ಸಫರ್ ಟ್ರಸ್ಟ್’ಗೆ ಕರೆದುಕೊಂಡು ಹೋದಳು. ಗಣೇಶನ ವಿದ್ಯಾಭ್ಯಾಸ ಮತ್ತು ಉತ್ತಮವಾದ ಸಂವಹನ ಕೌಶಲದ ಕಾರಣ ಅಲ್ಲಿ ಅವನಿಗೆ ತಿಂಗಳಿಗೆ ೧,೫೦೦ ರೂಪಾಯಿ ಸಂಬಳದ ಒಂದು ಕೆಲಸ ಸಿಕ್ಕಿತು. ‘ಹಮ್ಸಫರ್ ಟ್ರಸ್ಟ್’ನಲ್ಲಿ ಕೆಲಸ ಮಾಡುವಾಗ ಗಣೇಶ್‌ಗೆ ಅಶೋಕ್ ರಾವ್ ಕವಿ, ಲಕ್ಷಿ ನಾರಾಯಣ ತ್ರಿಪಾಠಿ ಮತ್ತು ಕಾಂಚನಾ ಮೊದಲಾದ ಹಲವಾರು ಟ್ರಾನ್ಸ್‌ಜೆಂಡರ್ ಸಾಮಾಜಿಕ ಕಾರ್ಯಕರ್ತರ ಸಹವಾಸ ಲಭಿಸಿತು. ಆಗ ಗಣೇಶ್ ತನ್ನನ್ನು ಸಂಪೂರ್ಣವಾಗಿ ತೃತೀಯ ಲಿಂಗಿಯಾಗಿ ಪರಿವರ್ತಿಸಿಕೊಳ್ಳುವ ಸಲುವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡು, ತನ್ನ ಹೆಸರನ್ನು ಶ್ರೀಗೌರಿ ಎಂದು ಬದಲಾಯಿಸಿಕೊಂಡನು.
೨೦೦೨ರಲ್ಲಿ ಶ್ರೀಗೌರಿ ‘ಸಖಿ ಚಾರ್ ಚೌಘಿ ಟ್ರಸ್ಟ್’ ಎಂಬ ತನ್ನದೇ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿ, ಅದರ ಮೂಲಕ ಟ್ರಾನ್ಸ್ ಜೆಂಡರ್ ಸಮುದಾಯದ ಏಳಿಗೆಗಾಗಿ ಕೆಲಸ ಮಾಡಲು ಶುರು ಮಾಡಿದರು. ೨೦೧೪ರಲ್ಲಿ ಸುಪ್ರೀಂ ಕೋರ್ಟು ಟ್ರಾನ್ಸ್‌ಜೆಂಡರ್ ಸಮುದಾಯದ ವ್ಯಕ್ತಿಗಳನ್ನು ಮೂರನೇ ಲಿಂಗಿಗಳು ಎಂದು ಪರಿಗಣಿಸಬೇಕು ಎಂಬ ಚರಿತ್ರಾರ್ಹ ತೀರ್ಪು ನೀಡಿತು. ಅದಕ್ಕೆ ಕಾರಣವಾದ ಪಿಟಿಷನ್ ಹಾಕಿದ ಸಂಘ ಸಂಸ್ಥೆಗಳಲ್ಲಿ ಶ್ರೀಗೌರಿಯ ‘ಸಖಿ ಚಾರ್ ಚೌಘಿ ಟ್ರಸ್ಟ್’ ಕೂಡಾ ಒಂದು. ಅದೇ ವರ್ಷ ಶ್ರೀಗೌರಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಹಕ್ಕೂ ಲಭಿಸಬೇಕು ಎಂದು ಇನ್ನೊಂದು ಪಿಟಿಷನ್ ಹಾಕಿದ್ದರು. ಆರುವರ್ಷಗಳ ನಂತರ ಸುಪ್ರೀಂ ಕೋರ್ಟ್ ಅವರ ಪರವಾಗಿ ತೀರ್ಪು ಕೊಟ್ಟು, ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಮಕ್ಕಳನ್ನು ದತ್ತು ಪಡೆಯುವುದನ್ನು ಕಾನೂನು ಬದ್ಧಗೊಳಿಸಿತು. ಶ್ರೀಗೌರಿ ಈ ಪಿಟಿಷನ್ ಹಾಕಲು ಕಾರಣವಾದುದು ಅವರ ಬದುಕಿನಲ್ಲಿ ನಡೆದ ಒಂದು ಘಟನೆ.
ಮುಂಬೈಯ ಒಬ್ಬಳು ಲೈಂಗಿಕ ಕಾರ್ಯಕರ್ತೆ ಏಡ್ಸ್‌ನಿಂದ ಸತ್ತಾಗ ಗಾಯತ್ರಿ ಹೆಸರಿನ ಅವಳ ಹೆಣ್ಣು ಮಗು ಅನಾಥವಾಯಿತು. ಗಾಯತ್ರಿಯನ್ನು ಕೋಲ್ಕತ್ತಾದ ಸೋನಾಗಚ್ಚಿಯ ಒಂದು ವೇಶ್ಯಾವಾಟಿಕೆ ಕೇಂದ್ರಕ್ಕೆ ಮಾರಲು ಸಂಚುರೂಪಿಸುತ್ತಿದ್ದಾಗ ಶ್ರೀಗೌರಿ ಮಧ್ಯಪ್ರವೇಶಿಸಿ, ಅವಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ಸುಪ್ರೀಂಕೋರ್ಟಿನ ಆ ತೀರ್ಪಿನ ನಂತರ ಅವರು ಗಾಯತ್ರಿಯನ್ನು ಕಾನೂನುಬದ್ಧವಾಗಿ ದತ್ತು ಪಡೆದರು.ಹೀಗೆಗಾಯತ್ರಿ ಎಂಬ ಆ ಹೆಣ್ಣು ಮಗುವಿಗೆ ತಾಯಿಯಾಗುವ ಮೂಲಕ ಶ್ರೀಗೌರಿ ತಾಯಿಯಾಗಬೇಕೆನ್ನುವ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡರು. ಇದರ ಜೊತೆಯಲ್ಲಿ, ಶ್ರೀಗೌರಿ ‘ಆಜೀಚಾ ಘರ್ (ಅಜ್ಜಿ ಮನೆ)’ ಎಂಬ ಒಂದು ಆಶ್ರಮವನ್ನು ನಿರ್ಮಿಸಿ, ಅಲ್ಲಿ ಯಾವ ಯಾವುದೋ ಕಾರಣಗಳಿಗೆ ಅನಾಥರಾಗುವ ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿ, ಅವರನ್ನು ಗೌರವಾರ್ಹ ನಾಗರಿಕರನ್ನಾಗಿ ರೂಪಿಸಲು ಶ್ರಮಿಸುತ್ತಿದ್ದಾರೆ
” ೨೦೧೪ರಲ್ಲಿ ಸುಪ್ರೀಂ ಕೋರ್ಟ್ ಟ್ರಾನ್ಸ್ ಜೆಂಡರ್ ಸಮುದಾಯದ ವ್ಯಕ್ತಿಗಳನ್ನು ಮೂರನೇಲಿಂಗಿಗಳು ಎಂದು ಪರಿಗಣಿಸಬೇಕು ಎಂಬ ಚರಿತ್ರಾರ್ಹ ತೀರ್ಪು ನೀಡಿತು. ಅದಕ್ಕೆ ಕಾರಣವಾದ ಪಿಟಿಷನ್ ಹಾಕಿದ ಸಂಘಸಂಸ್ಥೆಗಳಲ್ಲಿ ಶ್ರೀಗೌರಿಯ ‘ಸಖಿ ಚಾರ್ ಚೌಘಿ ಟ್ರಸ್ಟ್’ ಕೂಡಾ ಒಂದು”
ಹುಣಸೂರು ತಾಲ್ಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ಗ್ರಾಪಂನವರು ಸಕಾಲಕ್ಕೆ ಕಸ ವಿಲೇವಾರಿ ಮಾಡದೇ ಇರುವುದರಿಂದ ಕಸದ ರಾಶಿಯೇ ಬಿದ್ದಿದ್ದು, ಸೊಳ್ಳೆ, ನೊಣಗಳ…
ಐಪಿಎಲ್ ಆವೃತ್ತಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಹೊಂದಿದೆ, ಈ ಆವೃತ್ತಿಯಲ್ಲಿ ನಾನಾ ರಾಜ್ಯಗಳ ಹೆಸರಿನಲ್ಲಿ ಹಲವು ತಂಡಗಳು ಸೆಣಸಾಡಲಿವೆ. ನಮ್ಮ…
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಂಪೆಯ ಸಾಣಾಪುರದ ಬಳಿ ೨೦೨೫ ಮಾರ್ಚಿನಲ್ಲಿ ಇಸ್ರೇಲ್ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ವಿದೇಶಿಗನ…
ಮೈಸೂರು ತಾಲ್ಲೂಕು ಜಯಪುರ ಹೋಬಳಿಯ ಧನಗಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕರ್ನಾಟಕ ಗೃಹ ಮಂಡಳಿ (ಕೆಹೆಚ್‌ಬಿ) ಬಡಾವಣೆಗೆ ಕುಡಿಯುವ ನೀರು ಸರಬರಾಜು…
ಕೆ.ಬಿ.ರಮೇಶನಾಯಕ ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಡ್ರಗ್ಸ್ ಮಾರಾಟ, ಸೇವನೆಯನ್ನು ಬುಡಸಮೇತ ಕಿತ್ತು ಹಾಕುವುದರ ಜತೆಗೆ, ಸಮಾಜಘಾತುಕ ಶಕ್ತಿಗಳ ದುಷ್ಕೃತ್ಯದ ಮೇಲೆ…
ಆಂದೋಲನ ವಿಶೇಷ ಸಂದರ್ಶನದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಹೆಮ್ಮೆಯ ನುಡಿ ಆಂದೋಲನ: ರಾಜ್ಯ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದ್ದು,…