ಅಂಕಣಗಳು

ಈ ವರ್ಷ ನಮ್ಮ ಜಿಡಿಪಿ ಬೆಳವಣಿಗೆ ಶೇ.6.3-6.8

ಅಂತರರಾಷ್ಟ್ರೀಯ ಅರ್ಥವ್ಯವಸ್ಥೆಯಲ್ಲಿ ಅನಿಶ್ಚಿತತೆ ಇಲ್ಲದೇ ಇದ್ದಿದ್ದರೆ ಮತ್ತು ಟ್ರಂಪಾಘಾತವಾಗದೇ ಇದ್ದಿದ್ದರೆ (ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಬಹುತೇಕ ಎಲ್ಲ ದೇಶಗಳ ಆಮದುಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹಾಕದೇ ಇದ್ದಿದ್ದರೆ) ಭಾರತದ ಜಿ.ಡಿ.ಪಿ. ಬೆಳವಣಿಗೆ ೨೦೨೫-೨೬ರಲ್ಲಿ ಶೇ೭.೨ಕ್ಕಿಂತ ಹೆಚ್ಚಿಗೆ ಇರುತ್ತಿತ್ತು.

ಇದು ಉತ್ಪ್ರೇಕ್ಷೆಯಲ್ಲ. ವಾಸ್ತವದ ನೆಲೆಗಟ್ಟಿನ ಮೇಲೆ ಮಾಡಿದ ಅಂದಾಜು. ಅಧಿಕೃತ ಅಂಕಿ ಸಂಖ್ಯೆಗಳ ಪ್ರಕಾರ ಈ ವರ್ಷದ ಏಪ್ರಿಲ್ – ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿ.ಡಿ.ಪಿ. ಶೇ.೭.೮ರಷ್ಟು ಹೆಚ್ಚಳ ಕಂಡಿದೆ. ಇದು ಹಿಂದಿನ ವರ್ಷ (೨೦೨೪-೨೫) ಇದೇ ತ್ರೈಮಾಸಿಕದಲ್ಲಿ ಶೇ.೬.೫ ಇತ್ತು. ಆದ್ದರಿಂದ ಈ ತ್ರೈಮಾಸಿಕದ ಬೆಳವಣಿಗೆ ಹಿಂದಿನ ಐದು ತ್ರೈಮಾಸಿಕಗಳಲ್ಲೇ ಅತಿ ಹೆಚ್ಚು ಎನ್ನಬಹುದು. ಇನ್ನಷ್ಟು ವಿವರಗಳಿಗೆ ಹೋಗುವುದಾದರೆ ಈ ತ್ರೈಮಾಸಿಕದಲ್ಲಿ ಗಣಿಗಾರಿಕೆಯೊಂದನ್ನು ಹೊರತುಪಡಿಸಿದರೆ ಉಳಿದೆಲ್ಲಾ ವಲಯಗಳಲ್ಲಿಯೂ ಸಕಾರಾತ್ಮಕ ಬೆಳವಣಿಗೆ ಕಂಡು ಬಂದಿದೆ. ಕೇಂದ್ರ ಅಂಕಿ ಸಂಖ್ಯಾ ಇಲಾಖೆಯ ಪ್ರಕಟಣೆಯಂತೆ ವಿವರಗಳನ್ನು ಗಮನಿಸಬಹುದು

ಅಮೆರಿಕದಲ್ಲೇ ಟ್ರಂಪ್‌ಗೆ ಹಿನ್ನಡೆ: 

ಅಮೆರಿಕದ ಮೇಲ್ಮನವಿ ನ್ಯಾಯಾಲಯವೊಂದು ಟ್ರಂಪ್ ಜುಲೈ ಕೊನೆಯಲ್ಲಿ ಮತ್ತು ಆಗಸ್ಟ್‌ನಲ್ಲಿ ಪ್ರಕಟಿಸಿದ ಆಯಾತ ಸುಂಕಗಳನ್ನು ಕಾಯ್ದೆ ಬಾಹಿರ ಎಂದು ತೀರ್ಪು ನೀಡಿದೆ. ಇದೊಂದು ಟ್ರಂಪ್ ಆಡಳಿತಕ್ಕೆ ಹಿನ್ನಡೆ ಎಂದೇ ಹೇಳಬೇಕಾಗುತ್ತದೆ. ಆದರೂ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಟ್ರಂಪ್‌ಗೆ ಅವಕಾಶ ನೀಡಿರುವುದರಿಂದ ಈ ಹೆಚ್ಚುವರಿ ತೆರಿಗೆಗಳು ಮುಂದುವರಿಯುತ್ತಿವೆ. ಇದರಿಂದ ಜಾಗತಿಕ ವ್ಯಾಪಾರ ವ್ಯವಸ್ಥೆಗೆ ದೊಡ್ಡ ಪೆಟ್ಟುಬಿದ್ದಿದೆ. ಎಲ್ಲ ದೇಶಗಳ ಸಹಕಾರದೊಂದಿಗೆ ನಾಲ್ಕು ದಶಕಗಳಿಗೂ ಹೆಚ್ಚು ಸಮಯದಿಂದ ಕಾಪಾಡಿಕೊಂಡು ಬಂದಂತಹ ಮುಕ್ತ ವ್ಯಾಪಾರ ವ್ಯವಸ್ಥೆ ತೊಂದರೆ ಎದುರಿಸುವಂತಾಗಿದೆ. ವಿಶ್ವ ವ್ಯಾಪಾರ ಸಂಸ್ಥೆಗೆ (World Trade Organisation -ಡಬ್ಲ್ಯು.ಟಿ.ಒ.) ಬೆಲೆಯೇ ಇಲ್ಲದಂತಾಗಿದೆ. ಭಾರತ ಮತ್ತು ಅಮೆರಿಕ ನಡುವೆ ನಡೆಯುತ್ತಿದ್ದ ಮತ್ತು ಸಾಕಷ್ಟು ಪ್ರಗತಿಯನ್ನು ಸಾಧಿಸಿದ ಮುಕ್ತ ವ್ಯಾಪಾರ ಒಪ್ಪಂದ ಚರ್ಚೆಗಳು ಈ ಹೊಸ ತೆರಿಗೆಗಳ ಪ್ರಕಟಣೆಯಿಂದಾಗಿ ನಿಂತು ಹೋಗಿವೆ. ಮಾತುಕತೆಗಳ ಬಾಗಿಲು ಮುಚ್ಚಿದಂತಾಗಿದೆ.

ಯೂರೋಪಿಯನ್ ಯೂನಿಯನ್ ಸೇರಿದಂತೆ ಎಲ್ಲ ವ್ಯಾಪಾರ ಪಾಲುದಾರ ದೇಶಗಳ ಆಮದುಗಳ ಮೇಲೆ ಶೇ.೧೫ರಿಂದ ೬೦ರವರೆಗೆ ಬೇರೆಬೇರೆ ದೇಶಗಳಿಗಾಗಿ ಹೆಚ್ಚುವರಿ ಆಮದು ಸುಂಕ ವಿಧಿಸಲಾಗಿದೆ. ಅಲ್ಲದೆ ಮೂಲ ಆಮದು ಸುಂಕವನ್ನು ಶೇ.೨.೫ ಮಾತ್ರ ಇದ್ದುದ್ದನ್ನು ಸಾರಾಸಗಟಾಗಿ ಎಲ್ಲ ದೇಶಗಳಿಗೂ ಅನ್ವಯಿಸುವಂತೆ ಶೇ.೧೦ಕ್ಕೆ ಹೆಚ್ಚಿಸಲಾಗಿದ್ದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಇದು ಅಮೆರಿಕಕ್ಕೆ ಸರಕುಗಳನ್ನು ರಫ್ತು ಮಾಡುವ ಎಲ್ಲ ನಿರ್ಯಾತದಾರ ದೇಶಗಳಿಗೂ ಸಾಮಾನ್ಯ ಹೊರೆಯಾಗಿದೆ. ಇದೆಲ್ಲದರ ಪರಿಣಾಮವಾಗಿ ನಿರ್ಯಾತುದಾರ ದೇಶಗಳು ಅಮೆರಿಕ ಪೇಟೆಯಿಂದ ವಿಮುಖವಾಗಿ ಬೇರೆ ದೇಶಗಳತ್ತ ಮುಖ ಮಾಡಬಹುದು. ಅಮೆರಿಕದ ಅರ್ಥವ್ಯವಸ್ಥೆಗೆ ಧಕ್ಕೆಯಾಗುವ ಆತಂಕವಿದೆ ಎಂದು ಆಸಕ್ತ ವಲಯಗಳಲ್ಲಿ ಅಮೆರಿಕದಲ್ಲಿ ಚರ್ಚಿಸಲ್ಪಡುತ್ತಿದೆ ಎಂದೂ ವರದಿಗಳು ಹೇಳುತ್ತಿವೆ.

ಭಾರತದ ಮುಂದಿನ ಹೆಜ್ಜೆ: 

ವಿದೇಶಿ ವ್ಯಾಪಾರದಲ್ಲಿ ಅಮೆರಿಕ ನಮ್ಮ ಪ್ರಮುಖ ಪಾಲುದಾರ ದೇಶ. ನಾವು ಅಲ್ಲಿಂದ ಹಲವು ಸರಕುಗಳನ್ನು ತರಿಸಿಕೊಳ್ಳುತ್ತೇವೆ. ನಮ್ಮ ಆಭರಣ ಗಳು, ಔಷಧಿ ಉದ್ಯಮದಲ್ಲಿ ಉಪಯೋಗಿಸುವ ಉತ್ಪನ್ನಗಳು, ಬಟ್ಟೆಗಳು ಮತ್ತು ಸಿದ್ಧ ಉಡುಪುಗಳಿಗೆ ಅಮೆರಿಕ ದೊಡ್ಡ ಮಾರುಕಟ್ಟೆ. ಅಲ್ಲದೆ ಅಂತಾರಾಷ್ಟ್ರೀಯ ರಾಜತಾಂತ್ರಿಕ ವಿಷಯದಲ್ಲೂ ಮಿತ್ರ ರಾಷ್ಟ್ರ. ಆದರೆ ಅಧ್ಯಕ್ಷ ಟ್ರಂಪ್‌ರ ದಿನಕ್ಕೊಂದು ಬದಲಾಗುತ್ತಿರುವ ನೀತಿಗಳು ಕಳವಳಕ್ಕೆ ಎಡೆ ಮಾಡಿಕೊಟ್ಟಿವೆ. ಈ ಭಾರತದಿಂದ ಬರುವ ಆಮದುಗಳಿಗೆ ಮೊದಲು ಶೇ.೨೫ ಹೆಚ್ಚುವರಿ ಸುಂಕ ವಿಧಿಸಲಾಯಿತು. ನಂತರ ಆ.೨೭ಕ್ಕೆ ಜಾರಿಗೆ ಬರುವಂತೆ ಮತ್ತೆ ಶೇ.೨೫ ಹೆಚ್ಚುವರಿ ಸುಂಕ ವಿಧಿಸಲಾಯಿತು. ಹೀಗೆ ಒಟ್ಟು ಶೇ. ೫೦ ಹೆಚ್ಚುವರಿ ಭಾರ ಬಿದ್ದಿದೆ. ಇದರಿಂದಾಗಿ ಭಾರತದ ಉತ್ಪನ್ನಗಳು ಅಮೆರಿಕದಲ್ಲಿ ತುಟ್ಟಿಯಾಗುತ್ತವೆ. ಅಲ್ಲಿ ಬೇಡಿಕೆ ಕಡಿಮೆಯಾಗುವುದು ಸಹಜ.

ಈ ಕೊರತೆ ತುಂಬಲು ಬೇರೆ ಪೇಟೆಗಳನ್ನು ಹುಡುಕಲೇ ಬೇಕಾಗುತ್ತದೆ. ಒಂದೇ ಪೇಟೆಯ ಮೇಲೆ ಅವಲಂಬಿಸುವುದು ಸರಿಯಲ್ಲ. ಟ್ರಂಪ್ ತೆರಿಗೆಗಳನ್ನು ಭಾರತ ಸವಾಲೆಂದು ಪರಿಗಣಿಸದೇ ಅವಕಾಶವೆಂದು ತಿಳಿದು ರಫ್ತಿಗಾಗಿ ಬೇರೆ ಪೇಟೆಗಳನ್ನು ಕಂಡುಕೊಳ್ಳುವುದು ಒಳಿತು. ದೇಶದಲ್ಲಿನ ಸಂಶೋಧನೆ ಮತ್ತು ನಾವೀನ್ಯತೆ ವಿಸ್ತರಣೆಗೆ ಉತ್ತೇಜನ ಕೊಟ್ಟು ಆಮದು ಅವಲಂಬನೆ ಕಡಿಮೆ ಮಾಡಿಕೊಳ್ಳಬೇಕು. ಇದು ಸುಧಾರಣೆಗಳ ಭಾಗವೂ ಹೌದು. ಜಪಾನಿನೊಡನೆ ೧೨ ವ್ಯಾಪಾರ ಒಡಂಬಡಿಕೆಗಳಾಗಿವೆ. ಇದೇ ರೀತಿ ಇತರೆ ದೇಶಗಳೊಡನೆ ಒಪ್ಪಂದಗಳಾಗುವುದು ಒಳ್ಳೆಯದು. ಟ್ರಂಪ್ ನಡವಳಿಕೆಯಿಂದಾಗಿ ಚೀನಾ ಭಾರತಕ್ಕೆ ಸಮೀಪವಾಗುತ್ತಿದೆ. ೧೯೬೨ರಿಂದ ದೂರವಾಗಿದ್ದ ಎರಡೂ ದೊಡ್ಡ ಏಷಿಯನ್ ದೇಶಗಳು ಪರಿಸ್ಥಿತಿಯ ಒತ್ತಡದಿಂದ ಹತ್ತಿರವಾಗುತ್ತಿವೆ. ಈ ಮೈತ್ರಿ ಇಬ್ಬರಿಗೂ ಲಾಭದಾಯಕವಾದರೂ ಚೀನಾದ ನಡವಳಿಕೆಯ ಬಗ್ಗೆ ಸದಾ ಎಚ್ಚರ ವಹಿಸುವುದು ಅತ್ಯವಶ್ಯ. ಆಂತರಿಕವಾಗಿ ಜಿ.ಎಸ್.ಟಿ. ದರಗಳು ಕೆಳಮಟ್ಟಕ್ಕೆ ಬಂದಿರುವುದರಿಂದ ನಮ್ಮ ಸ್ಥಳೀಯ ಬೇಡಿಕೆಯೂ ಹೆಚ್ಚಾಗಿ ಜಿ.ಡಿ.ಪಿ. ಬೆಳವಣಿಗೆಗೆ ಪೂರಕವಾಗಲಿದೆ.

” ಟ್ರಂಪ್ ತೆರಿಗೆಗಳನ್ನು ಭಾರತ ಸವಾಲೆಂದು ಪರಿಗಣಿಸದೆ ಅವಕಾಶವೆಂದು ತಿಳಿದು ರಫ್ತಿಗಾಗಿ ಬೇರೆ ಪೇಟೆಗಳನ್ನು ಕಂಡುಕೊಳ್ಳುವುದು ಒಳಿತು. ದೇಶದಲ್ಲಿನ ಸಂಶೋಧನೆ ಮತ್ತು ನಾವೀನ್ಯತೆ ವಿಸ್ತರಣೆಗೆ ಉತ್ತೇಜನ ಕೊಟ್ಟು ಆಮದು ಅವಲಂಬನೆ ಕಡಿಮೆ ಮಾಡಿಕೊಳ್ಳಬೇಕು.”

-ಪ್ರೊ.ಆರ್.ಎಂ.ಚಿಂತಾಮಣಿ

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

5 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

5 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

6 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

7 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

9 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

9 hours ago