ಅಂಕಣಗಳು

ರಾಜಕೀಯ ಬದಿಗಿಟ್ಟರೆ ಇದೊಂದು ಉತ್ತಮ ಬಜೆಟ್

• ಪ್ರೊ.ಆರ್.ಎಂ.ಚಿಂತಾಮಣಿ

ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡನೆ ಮತ್ತು ಕಳೆದ ವಾರ ಪೂರ್ಣಾವಧಿ ಬಜೆಟ್ ಮಂಡನೆ ನಡುವೆ ಗಂಗೆಯಲ್ಲಿ ಸಾಕಷ್ಟು ನೀರು ಹರಿದಿದೆ. ಹಲವು ರಾಜಕೀಯ ಬದಲಾವಣೆಗಳಾಗಿವೆ. ನಿರ್ಮಲಾ ಸೀತಾರಾಮನ್‌ರವರು ಅಂದು ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಗಂಟೆಗಟ್ಟಲೆ ಪೀಠಿಕೆ ಹಾಕುತ್ತಿದ್ದವರು ಇಂದು ಬಜೆಟ್ ಭಾಷಣ ಆರಂಭಿಸುತ್ತಿದ್ದಂತೆ ನೇರವಾಗಿ ಒಂಬತ್ತು ಬಜೆಟ್‌ಗಳ ಆದ್ಯತೆಗಳ ಬಗ್ಗೆಯೇ ಹೇಳತೊಡಗಿದರು. 84 ನಿಮಿಷಗಳ ಭಾಷಣದಲ್ಲಿ ಅರ್ಥಶಾಸ್ತ್ರದ ಅಧ್ಯಾಪಕರಂತೆ ಅರ್ಥ ವ್ಯವಸ್ಥೆಯ ವಿವಿಧ ವಲಯಗಳ ಮಹತ್ವವನ್ನು ವಿವರಿಸಿ, ಆಯಾ ವಲಯಗಳಲ್ಲಿ ಕಾರ್ಯಗತಗೊಳಿಸಲಿರುವ ಯೋಜನೆಗಳನ್ನು ಮೊದಲ 70 ನಿಮಿಷಗಳು ವಿವರಿಸಿ ಕೊನೆಯ 14 ನಿಮಿಷಗಳಲ್ಲಿ ಬಜೆಟ್ ಅಂಕಿ ಸಂಖ್ಯೆಗಳೊಡನೆ ತೆರಿಗೆ ಪ್ರಸ್ತಾವನೆಗಳನ್ನು ಹೇಳಿದರು. ಅವರ ದಾಖಲೆಯ ಸತತ ಏಳು ಬಜೆಟ್ ಭಾಷಣಗಳಲ್ಲಿ ಇದು ಉತ್ತಮ ಬಜೆಟ್ ಮಂಡನೆ ಎಂದು ಹೇಳಬಹುದು.

ಈ ಮುಂಗಡ ಪತ್ರದ ಆದ್ಯತೆಗಳಲ್ಲಿ ಕೃಷಿ ಮತ್ತು ಕೃಷಿ ಸಂಶೋಧನೆ, ಶಿಕ್ಷಣ ಮತ್ತು ಕೌಶಲಾಭಿವೃದ್ಧಿ, ಮಹಿಳಾ ಸಬಲೀಕರಣ, ಉದ್ಯೋಗಾವಕಾಶಗಳ ಸೃಷ್ಟಿ, ಆರೋಗ್ಯ ಸೇವೆಗಳಲ್ಲಿ ಸಂಶೋಧನೆ ಮತ್ತು ವಿಸ್ತರಣೆ, ನಗರಾಭಿವೃದ್ಧಿ ಮತ್ತು ಅತಿಸಣ್ಣ, ಸಣ್ಣ, ಮಧ್ಯಮ ಮತ್ತು ಬೃಹತ್ ಉದ್ಯಮಗಳ ಬೆಳವಣಿಗೆ ಮುಂತಾದವುಗಳು ಪ್ರಮುಖವಾಗಿವೆ. ನವೀಕರಿಸಬಹುದಾದ ಇಂಧನಗಳ ಹುಡುಕಾಟ ಮತ್ತು ಅಭಿವೃದ್ಧಿಗೆ ಆದ್ಯತೆ ಕೊಡಲಾಗುವುದು. ರಕ್ಷಣಾ ಸಂಶೋಧನೆಯೂ ಒಂದು ಮಹತ್ವದ ವಿಷಯವಾಗಿದೆ. ಗ್ರಾಮೀಣಾಭಿವೃದ್ಧಿಗೆ ಇನ್ನಷ್ಟು ಉತ್ತೇಜನ.

ಕೇಂದ್ರ ಸರ್ಕಾರ ಈ ಹಣಕಾಸು ವರ್ಷದಲ್ಲಿ ಒಟ್ಟು 48,20,512 ಕೋಟಿ ರೂ. ಖರ್ಚು ಮಾಡಲಿದೆ ಎಂದು ಅರ್ಥ ಸಚಿವರು ಅಂದಾಜು ಮಾಡಿದ್ದಾರೆ. ಇದರಲ್ಲಿ ರಾಜ್ಯಸ್ಥ ಖಾತೆ (Revenue Account) ವೆಚ್ಚ 37,09,401 ಕೋಟಿ ರೂ. (ಬಡ್ಡಿ ಪಾವತಿ 11,62,490 ಕೋಟಿ ರೂ. ಮತ್ತು ರಾಜ್ಯಗಳಿಗೆ ಉಪಯುಕ್ತ ಆಸ್ತಿ ನಿರ್ಮಾಣಕ್ಕೆ ಕೊಟ್ಟಿರುವ ಅನುದಾನ 03,90,778 ಕೋಟಿ ರೂ. ಸೇರಿ) ಮತ್ತು ಬಂಡವಾಳ ಖಾತೆ ವೆಚ್ಚ 11,11,111 ಕೋಟಿ ರೂ. ಎಂದು ವಿಂಗಡಿಸಲಾಗಿದೆ. ಇದರೊಡನೆ ಕೇಂದ್ರದಿಂದ ರಾಜ್ಯಗಳಿಗೆ ಆಸ್ತಿ ನಿರ್ಮಾಣಕ್ಕೆ ಒದಗಿಸಿರುವ ಅನುದಾನವನ್ನೂ ಸೇರಿಸಿದರೆ (ಬಂಡವಾಳ ಖಾತೆ ವೆಚ್ಚಕ್ಕೆ ಕೇಂದ್ರದ ಒಟ್ಟು ಬಂಡವಾಳ ವೆಚ್ಚವು ರೂ.15,01,889 ಕೋಟಿ ರೂ. ಆಗುತ್ತದೆ. ಇದು ಮೂಲ ಸೌಲಭ್ಯಗಳಿಗೆ ಉಪಯೋಗವಾಗಲಿದೆ.

ಈಗ ಪ್ರಮುಖ ಇಲಾಖೆಗಳಿಗೆ ಒದಗಿಸಿರುವ ಅನುದಾನದ ಮೊತ್ತಗಳನ್ನು ನೋಡೋಣ. ಯಥಾ ಪ್ರಕಾರ ರಕ್ಷಣಾ ಇಲಾಖೆಗೆ ದೊಡ್ಡಪಾಲು 4,54,773 ಕೋಟಿ ರೂ.ಗಳನ್ನು ಕೊಡಲಾಗಿದೆ. ನಂತರದ ಸ್ಥಾನ ಗ್ರಾಮೀಣಾಭಿವೃದ್ಧಿಗೆ 2,65,808 ಕೋಟಿ ರೂ., ಕೃಷಿ ಸಂಬಂಧಿತ ಚಟುವಟಿಕೆಗಳಿಗೆ 1,51,851 ಕೋಟಿ ರೂ. (ಬೀಜ ಸಂಶೋಧನೆಯೂ ಸೇರಿ), ಗೃಹ ವ್ಯವಹಾರ 1,50,983 ಕೋಟಿ ರೂ., ಶಿಕ್ಷಣ ರೂ.1,25,638 ಕೋಟಿ ರೂ., ಐ.ಟಿ. ಮತ್ತು ಟೆಲಿಕಾಂ 1,16,342 ಕೋಟಿ ರೂ., ಆರೋಗ್ಯ 89,287 ಕೋಟಿ ರೂ., ಉದ್ಯೋಗ 89,287 ಕೋಟಿ ರೂ., ಇಂಧನ 68,769 ಕೋಟಿ ರೂ., ಸಮಾಜ ಕಲ್ಯಾಣ 56,501 ಕೋಟಿ ರೂ. ಮತ್ತು ವಾಣಿಜ್ಯ ಮತ್ತು ಕೈಗಾರಿಕೆ 48,558 ಕೋಟಿ ರೂ. ಹೀಗೆ ಆದ್ಯತೆಯ ಮೇಲೆ ವಿಂಗಡಿಸಲಾಗಿದೆ.

ಅರ್ಥ ಮಂತ್ರಿಗಳ ಅಂದಾಜಿನಂತೆ ಈ ವರ್ಷ ತೆರಿಗೆ ಆದಾಯ25,83,499 ಕೋಟಿ ರೂ. ಬರಲಿದ್ದು, ಇದರೊಂದಿಗೆ ತೆರಿಗೇತರ ಆದಾಯವೂ 5,45,701 ಕೋಟಿ ರೂ.ಗೆ ಹೆಚ್ಚಲಿದೆ. ಇಲ್ಲಿ ಒಂದು ಮಾತು. ರಿಸರ್ವ್ ಬ್ಯಾಂಕು ಹಿಂದಿನ ವರ್ಷಗಳಲ್ಲಿ ಕೊಟ್ಟಿದ್ದಕ್ಕಿಂತ ಶೇ.133ರಷ್ಟು ಹೆಚ್ಚಿಗೆ 2.11 ಲಕ್ಷ ಕೋಟಿ ರೂ. ಡಿವಿಡೆಂಡ್ ಕೊಟ್ಟಿದೆ. ಅದಿಲ್ಲದಿದ್ದರೆ ಬಜೆಟ್ ಗಾತ್ರವೇ ಒಂದು ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾಗುತ್ತಿತ್ತೇನೋ ಅಥವಾ ಅಷ್ಟರಮಟ್ಟಿಗೆ ಸಾಲ ಹೆಚ್ಚುತ್ತಿತ್ತು.

ಬಂಡವಾಳ ಖಾತೆಯ ಸ್ವೀಕೃತಿಯಲ್ಲಿ ಸರ್ಕಾರಿ ಕಂಪೆನಿಗಳಲ್ಲಿ ಬಂಡವಾಳ ಹಿಂತೆಗೆತವೂ ಸೇರಿದಂತೆ ಕಳೆದ ವರ್ಷದ ಬಜೆಟ್‌ನಲ್ಲಿ 61,000 ಕೋಟಿ ರೂ. ಗಳೆಂದು ಅಂದಾಜಿಸಲಾಗಿತ್ತು. ಆದರೆ ಈಗ ತಾತ್ಕಾಲಿಕ ಲೆಕ್ಕಾಚಾರದಂತೆ (Provisional Actuals) ಕೇವಲ 33,122 ಕೋಟಿ ರೂ.ಗಳಷ್ಟು ಮಾತ್ರ ಬಂದಿದೆ (ಬಜೆಟ್ ಅಂದಾಜಿನ ಅರ್ಧಕ್ಕಿಂತ ಸ್ವಲ್ಪ ಹೆಚ್ಚು). ಈ ಬಜೆಟ್ ನಲ್ಲಿ 51,000 ಕೋಟಿ ರೂ. ಸ್ವೀಕೃತಿಯನ್ನು ಅಂದಾಜಿಸಲಾಗಿದೆ. ಇವೆಲ್ಲ ಕಾರಣಗಳಿಂದ ಬಜೆಟ್ ಕೊರತೆ (ಕೋಶೀಯ ಕೊರತೆ ಅಥವಾ ಸಾಲ ಎತ್ತುವುದು) ಕಳೆದ ವರ್ಷಕ್ಕಿಂತ ಕಡಿಮೆ 16,13,312 ಕೋಟಿ ರೂ.ಗಳಿಗೆ ಇಳಿದಿದೆ. ಕಳೆದ ಬಜೆಟ್‌ನಲ್ಲಿ 17,86,816 ಕೋಟಿ ರೂ. ಇತ್ತು. ಇದನ್ನು ಈ ವರ್ಷದ ನಾಮಮಾತ್ರ ಜಿಡಿಪಿ ಅಂದಾಜಿನ ಶೇ.4.9 ಎಂದುತೋರಿಸಲಾಗಿದೆ. ಇದನ್ನು ಬರುವ ನಾಲೈದು ವರ್ಷಗಳಲ್ಲಿ ನಿಧಾನವಾಗಿ ಕೋಶೀಯ ಜವಾಬ್ದಾರಿ ಮತ್ತು ಮುಂಗಡಪತ್ರ ನಿರ್ವಹಣೆ ಕಾಯ್ದೆ 2003ರ ಮಿತಿ ಶೇ.3.0ಕ್ಕೆ ತರಲಾಗುವುದು ಎಂದು ಅರ್ಥ ಸಚಿವರು ಪ್ರಕಟಿಸಿದ್ದಾರೆ.

ತೆರಿಗೆ ಪ್ರಸ್ತಾವನೆಗಳು: ನಿರ್ಮಲಾ ಸೀತಾರಾಮನ್ ಕಸ್ಟಮ್ ಡ್ಯೂಟಿಗಳು, ವೈಯಕ್ತಿಕ ಆದಾಯ ತೆರಿಗೆ ಮತ್ತು ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ಗಳಲ್ಲಿ ಕೈಯಾಡಿಸಿದ್ದಾರೆ.

ಮೇಕ್ ಇನ್ ಇಂಡಿಯಾ ಉತ್ತೇಜಿಸಲು ಮತ್ತು ನಮ್ಮ ರಫ್ತುಗಳನ್ನು ಹೆಚ್ಚಿಸಲು ಹಲವು ಲೋಹಗಳು ಮತ್ತು ಇತರೆ ಮೌಲ್ಯವರ್ಧಿತ ಉತ್ಪನ್ನಗಳ ಮೇಲಿನ ಮೂಲ ಮತ್ತು ಹೆಚ್ಚುವರಿ ಕಸ್ಟಮ್ಸ್ ಡ್ಯೂಟಿಗಳನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ಇದು ತೆರಿಗೆ ಸರಳೀಕರಣದ ಒಂದು ಭಾಗವೆಂದೂ ಹೇಳಲಾಗಿದೆ.

ಇದೇ ರೀತಿ ಕ್ಯಾಪಿಟಲ್ ಗೇನ್ಸ್ ತೆರಿಗೆ ಲೆಕ್ಕ ಹಾಕಲು ಇದ್ದ 12 ತಿಂಗಳು, 24 ತಿಂಗಳು ಮತ್ತು 36 ತಿಂಗಳುಗಳ ಅವಧಿಗಳಲ್ಲಿ ಮೊದಲಿನ ಎರಡನ್ನು ಮಾತ್ರ ಉಳಿಸಿಕೊಳ್ಳಲಾಗುವುದು. ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಯಲ್ಲಿದ್ದ ಶೇ.10 ಮತ್ತು ಶೇ.20ನ್ನು ರದ್ದುಗೊಳಿಸಿ ಶೇ.12.5ನ್ನು ತರಲಾಗಿದೆ. ಷೇರುಪೇಟೆ ವ್ಯವಹಾರ ಮತ್ತು ಭೂಮಿ, ಕಟ್ಟಡ ಖರೀದಿ ಮಾರಾಟಗಳಲ್ಲಿ ಹೊಸ ದರ ಅನುಕೂಲವಾಗುವುದು ಎಂದು ಅರ್ಥಸಚಿವರು ಹೇಳಿದ್ದಾರೆ. ಆದರೆ ಸಣ್ಣ ಹೂಡಿಕೆದಾರರಿಗೆ ಇದರಿಂದ ಅನನುಕೂಲವೇ ಹೆಚ್ಚು ಎಂದು ತಜ್ಞರು ಹೇಳುತ್ತಾರೆ.

ವೈಯಕ್ತಿಕವಾಗಿ ಆದಾಯ ತೆರಿಗೆ ಲೆಕ್ಕ ಹಾಕುವ ಹೊಸ ವಿಧಾನದಲ್ಲಿ ದರಗಳು ಮತ್ತು ಮಿತಿಗಳಲ್ಲಿ ತೆರಿಗೆದಾರ ಸ್ನೇಹಿ ಬದಲಾವಣೆ ಮಾಡಿದ್ದು, ಹಳೆಯ ವಿಧಾನ ರದ್ದುಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲದಿದ್ದರೂ ಅದಕ್ಕಿಂತ ಹೊಸದು ಉತ್ತಮ ಎನ್ನುವಂತಿದೆ. ನೌಕರ ತೆರಿಗೆದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ 25,000 ರೂ. ಹೆಚ್ಚಿಸಲಾಗಿದೆ

ಒಟ್ಟಾರೆ ಎಲ್ಲ ಬದಲಾವಣೆಗಳೂ ಸೇರಿ 39,000 ಕೋಟಿ ರೂ.ಗಳಷ್ಟು ರಿಯಾಯಿತಿಗಳನ್ನು ಕೊಟ್ಟಿದ್ದು, 9,000 ಕೋಟಿ ರೂ.ಗಳಷ್ಟು ತೆರಿಗೆ ಹೆಚ್ಚಿಸಲಾಗಿದೆ. ಇದರಿಂದ ಸರ್ಕಾರದ ತೆರಿಗೆ ಆದಾಯ ನಿವ್ವಳ 30,000 ಕೋಟಿ ರೂ.ಗಳಷ್ಟು ಕಡಿಮೆಯಾಗಲಿದೆ.

ಹೊಸ ಅಭಿವೃದ್ಧಿ ಯೋಜನೆಗಳ ವಿಷಯಕ್ಕೆ ಬಂದರೆ ಉದ್ಯೋಗ ಸೃಷ್ಟಿ, ಮಹಿಳಾ ನಾಯಕತ್ವದಲ್ಲಿ ಅಭಿವೃದ್ಧಿ, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಾಲ ಗ್ಯಾರಂಟಿ ನಿಧಿ ಹೆಚ್ಚಳ ಮತ್ತು ಹೊಸ ಸೌಲಭ್ಯಗಳು, ಕೌಶಲಾಭಿವೃದ್ಧಿ ತರಬೇತಿ, ರೂಫ್‌ ಟಾಪ್ ಸೋಲಾರ್ ವಿದ್ಯುತ್‌ ಉತ್ಪಾದನೆ ಮುಂತಾದ ಹಲವು ಹೊಸ ಯೋಜನೆಗಳನ್ನು ಪ್ರಕಟಿಸಲಾಗಿದೆ. ಅವು ಸರಿಯಾಗಿ ಅನುಷ್ಠಾನಗೊಂಡರೆ ಉತ್ತಮ.

ಒಂದು ಮಾತು: ವಿವಿಧ ಸೀಮುಗಳ ಅಡಿಯಲ್ಲಿ ಬಜೆಟ್ ಒಟ್ಟು ಗಾತ್ರದ ಶೇ.10ರಷ್ಟು ಅನುದಾನ ಬಿಹಾರ ಮತ್ತು ಆಂಧ್ರಪ್ರದೇಶಗಳ ಕಡೆಗೆ ಮುಖ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ವಿರೋಧ ಪಕ್ಷಗಳ ಕೂಗನ್ನು ರಾಜಕೀಯ ತಂತ್ರವೆಂದು ತಳ್ಳಿ ಹಾಕಿದರೂ, ಈ ರಾಜಕೀಯ ಹೆಜ್ಜೆಯನ್ನು ನಿರ್ಲಕ್ಷಿಸುವಂತಿಲ್ಲ. ಇದೊಂದು ರಾಜಕೀಯ ಬಿಟ್ಟರೆ ಈ ಬಜೆಟ್ ಉತ್ತಮವೆನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಆಂದೋಲನ ಡೆಸ್ಕ್

Recent Posts

ಬೆಂಗಳೂರಿನಲ್ಲಿ ಜೈ ಬಾಂಗ್ಲಾ ಎಂದು ಘೋಷಣೆ ಕೂಗಿದ್ದ ಮಹಿಳೆ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಜೈ ಬಾಂಗ್ಲಾ ಎಂದು ದೇಶ ವಿರೋಧ ಘೋಷಣೆ ಕೂಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹೆಬ್ಬಗೋಡಿ ಠಾಣೆ ಪೊಲೀಸರು…

27 mins ago

ನಟ ಕಿಚ್ಚ ಸುದೀಪ್‌ ವಿರುದ್ಧ ಮತ್ತೊಂದು ದೂರು ದಾಖಲು

ರಾಮನಗರ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಮತ್ತು ಅದರ ನಿರೂಪಕ ನಟ ಕಿಚ್ಚ ಸುದೀಪ್‌ ವಿರುದ್ಧ…

1 hour ago

ಹಾಸನ: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಸಾವು

ಹಾಸನ: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಮೋಗಲಿ ಗ್ರಾಮದಲ್ಲಿ…

1 hour ago

ಓದುಗರ ಪತ್ರ: ಚಾ.ಬೆಟ್ಟ: ಮೂಲ ಸ್ವರೂಪಕ್ಕೆ ಧಕ್ಕೆಯಾಗದಿರಲಿ

ಚಾಮುಂಡಿ ಬೆಟ್ಟದಲ್ಲಿ ಪ್ರಸಾದ ಯೋಜನೆಯಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಪ್ರಜ್ಞಾವಂತ…

5 hours ago

ಓದುಗರ ಪತ್ರ: ಕೆಎಚ್‌ಬಿ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಿ

ಮೈಸೂರು ತಾಲ್ಲೂಕಿನ ಧನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆಂಚಲಗೂಡು ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ)ಯಿಂದ ನಿರ್ಮಿಸಿರುವ ಬಡಾವಣೆಯಲ್ಲಿ ನೀರು,…

5 hours ago

ಓದುಗರ ಪತ್ರ: ಬೈಕ್ ಟ್ಯಾಕ್ಸಿ ಚಾಲಕರು ನಿಯಮ ಪಾಲಿಸಲಿ

ಮೈಸೂರಿನಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣ ಮೊದಲಾದ ಕಡೆಗೆ ತೆರಳುವವರು, ಅದರಲ್ಲೂ ಮುಖ್ಯವಾಗಿ ಒಬ್ಬರೇ ಪ್ರಯಾಣಿಸುವವರು ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ…

5 hours ago