ಪ್ರಜಾಪ್ರಭುತ್ವ ಎಂಬ ಕಲ್ಪನೆಗೆ ಶತಮಾನಗಳ ಚರಿತ್ರೆ ಇರುವ ಹಾಗೆಯೇ ಅದರ ತಳಹದಯಾಗಿ ಸ್ವೀಕೃತವಾಗಿರುವ ಮೌಲ್ಯಗಳಿಗೆ ಇನ್ನೂ ಆಳವಾದ, ವ್ಯಾಪಕವಾದ ಹಾಗೂ ಸ್ವತಂತ್ರವಾದ ಚರಿತ್ರೆ ಇದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಕಾಲಕಾಲಕ್ಕೆ ನಡೆಯುವ ಚುನಾವಣೆಗಳು ಮತ್ತು ಮತದಾನದ ಸಾರ್ವತ್ರಿಕ ಹಕ್ಕು ಈ ಮೌಲ್ಯಗಳಲ್ಲಿ ಪ್ರಧಾನವಾದುದಾದರೂ, ಪ್ರಜಾತಂತ್ರದ ವಾಸ್ತವಿಕ ಸ್ಥಾನಮಾನವನ್ನು ಅಳೆಯಲು ಅದೊಂದೇ ಮಾನದಂಡವಾಗಲಾರದು. ಈ ದೊಡ್ಡ ಜವಾಬ್ದಾರಿಯ ಕಾರಣದಿಂದಲೇ ಮಾಧ್ಯಮ ಕ್ಷೇತ್ರವನ್ನು ಸಂವಿಧಾನದ ನಾಲ್ಕನೆಯ ಸ್ತಂಭ ಎಂದು ಪರಿಗಣಿಸಲಾಗುತ್ತದೆ. ಶಾಸಕಾಂಗ ಮತ್ತು ಕಾರ್ಯಾಂಗಗಳು ಸದಾ ಕಾಲವೂ ಪರಸ್ಪರ ಪೂರಕವಾಗಿಯೇ ಕಾರ್ಯನಿರ್ವಹಿಸುವುದರಿಂದ, ನ್ಯಾಯಾಂಗದ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಬಹುತೇಕ ಜನಪರ ಕಾಯ್ದೆಗಳು, ಕಾನೂನುಗಳು ಉನ್ನತ ನ್ಯಾಯಾಂಗದ ಮೂಲಕವೇ ಜಾರಿಯಾಗಿರುವುದನ್ನು ಗಮನಿಸಬಹುದು. ನ್ಯಾಯಾಂಗದಲ್ಲಿರುವ ಸಾಂವಿಧಾನಿಕ ಎಚ್ಚರ ಮತ್ತು ಸಾಮಾಜಿಕ ಕಾಳಜಿಯನ್ನು ಉಳಿದ ಎರಡು ಸಂಸ್ಥೆಗಳಿಂದ ನಿರೀಕ್ಷಿಸಲಾಗುವುದಿಲ್ಲ.
ಉಳಿದ ಮೂರೂ ಸ್ತಂಭಗಳು ಶಿಥಿಲವಾದರೂ, ಪ್ರಜಾಪ್ರಭುತ್ವ ಎಂಬ ಸ್ಥಾವರವನ್ನು ಸ್ಥಿರವಾಗಿ ನಿಲ್ಲಿಸಲು ಈ ನಾಲ್ಕನೆಯ ಸ್ತಂಭ ಜಂಗಮ ರೂಪಿಯಾಗಿ ಸದಾ ಜಾಗೃತವಾಗಿರಬೇಕಾಗುತ್ತದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವದ ಆಳ್ವಿಕೆಯ ಅಳತೆ ಗೋಲಿನಂತೆ ಬಳಸುವುದೂ ಇದೇ ಕಾರಣಕ್ಕೆ. ಮಾಧ್ಯಮಗಳಿಗೆ ಹೆಚ್ಚಿನ ಸ್ವಾತಂತ್ರ್ಯವಿದ್ದಷ್ಟೂ ಪ್ರಜಾಪ್ರಭುತ್ವದ ಮೌಲ್ಯಗಳು ಸುಸ್ಥಿರವಾಗಿರುತ್ತವೆ. ಇಲ್ಲವಾದಲ್ಲಿ ಸರ್ವಾಧಿಕಾರ, ನಿರಂಕುಶಾಧಿಕಾರ ಬಲವಾಗಿ ಬೇರೂರುತ್ತದೆ. ಇಲ್ಲಿ ಮಾಧ್ಯಮ ಸ್ವಾತಂತ್ರ್ಯ ಎಂಬ ಕಲ್ಪನೆಯನ್ನು ಕಾನೂನಾತ್ಮಕ ನೆಲೆಯಲ್ಲಿ ನೋಡು ವುದರ ಬದಲು, ಸಾಮಾನ್ಯ ಜನತೆಯ ದೃಷ್ಟಿಯಿಂದ ನೋಡಿದಾಗ, ಸ್ವತಂತ್ರ ಮಾಧ್ಯಮಗಳು ಹೆಚ್ಚು ನಿಖರವಾದ, ವಸ್ತುನಿಷ್ಠವಾದ ಸುದ್ದಿಗಳನ್ನು, ಆಳ್ವಿಕೆಯ ಹಂಗಿಗೆ ಒಳಗಾಗದೆ ನೀಡುವ ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಬೇಕಿದೆ.
ಇದನ್ನು ಓದಿ: ಕಾಫಿ ಬೆಳೆಗೆ ಕಾಯಿಕೊರಕ ಕೀಟದ ಹಾವಳಿ
ಅಸ್ತಿತ್ವದಿಂದಾಚೆಗಿನ ಸ್ವಾತಂತ್ರ:
ಮಾಧ್ಯಮ ವಲಯ ತನ್ನ ಸ್ವಂತಿಕೆ ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಂಡಾಗ, ಅಲ್ಲಿ ವೃತ್ತಿ ಧರ್ಮ ಇಲ್ಲವಾಗುತ್ತದೆ. ತನ್ನ ಸಾಂವಿಧಾನಿಕ ಕರ್ತವ್ಯವನ್ನು ಅರಿತು ಕಾರ್ಯನಿರ್ವಹಿಸಿದಾಗ, ತಳಮಟ್ಟದವರೆಗೂ ಜನತೆಗೆ ಅಗತ್ಯವಾದ ನ್ಯಾಯೋಚಿತ ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ. ಈ ಎರಡೂ ಸನ್ನಿವೇಶಗಳಿಗೆ ಸ್ವತಂತ್ರ ಭಾರತ ಸಾಕ್ಷಿಯಾಗಿದೆ. ವರ್ತಮಾನದ ಸಂದರ್ಭದಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ದೃಶ್ಯ ಮಾಧ್ಯಮಗಳು ರೂಪಾಂತರಗೊಂಡು, ಕಾರ್ಪೊರೇಟ್ ಮಾರುಕಟ್ಟೆಯ ಹಿಡಿತಕ್ಕೆ ಸಿಲುಕಿ ತಮ್ಮ ಸ್ವಂತಿಕೆಯನ್ನು ಕಳೆದುಕೊಂಡಿರುವುದನ್ನು ನೋಡುತ್ತಿದ್ದೇವೆ. ಏಕೆಂದರೆ ಇಲ್ಲಿ ಅಸ್ತಿತ್ವ ಪ್ರಧಾನವಾಗುತ್ತದೆ.
ಭಾರತದಲ್ಲಿ ಪತ್ರಿಕೋದ್ಯಮ ವೃತ್ತಿಯಾಗಿ ಉಳಿದಿಲ್ಲ, ವ್ಯಾಪಾರವಾಗಿದೆ ಎಂದು ಅಂಬೇಡ್ಕರ್ ಅವರು ಹೇಳಿ ದಶಕಗಳೇ ಕಳೆದಿವೆ. ಆದರೆ ಅದನ್ನು ಸುಳ್ಳುಮಾಡುವ ಪ್ರಯತ್ನಗಳೇನೂ ಹೆಚ್ಚಾಗಿ ನಡೆದಿಲ್ಲ. ಬದಲಾಗಿ ನವ ಉದಾರವಾದಿ ಆರ್ಥಿಕತೆಯಲ್ಲಿ, ಮಾಧ್ಯಮಗಳ ಒಡೆತನ ಕಾರ್ಪೊರೇಟ್ ಮಾರುಕಟ್ಟೆ ಮತ್ತು ಬಂಡವಾಳ ಸ್ನೇಹಿ (Crony Capital) ಸರ್ಕಾರಗಳ ಮರ್ಜಿಗೆ ಒಳಪಟ್ಟಿರುವುದರಿಂದ, ಮುಖ್ಯವಾಹಿನಿಯ ಬಹುಪಾಲು ಮಾಧ್ಯಮಗಳು ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು, ಸರ್ಕಾರಗಳ ಬಾಲಂಗೋಚಿಗಳಾಗಿವೆ. ಈ ನಿಟ್ಟಿನಲ್ಲಿ ಕೆಲವು ಅಪವಾದಗಳೂ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಸಾಂವಿಧಾನಿಕ ಹಾಗೂ ಆರ್ಥಿಕ ನೆಲೆಗಳನ್ನು ದಾಟಿ ನೋಡಿದಾಗ, ತಮ್ಮ ಅಸ್ತಿತ್ವದ ಉಳಿವಿಗಾಗಿಯೇ ಕಾರ್ಯನಿರ್ವಹಿಸುತ್ತಿದ್ದರೂ, ಮಾಧ್ಯಮಗಳಿಗೆ ನೈತಿಕ ಜವಾಬ್ದಾರಿಯೂ ಇರುವುದನ್ನು ಮನಗಾಣಬೇಕಿದೆ. ಈ ನೈತಿಕತೆಯನ್ನು ಹೊಂದಿರಬೇಕಾದರೆ ಮಾಧ್ಯಮಗಳು ಜನತೆಯ ನಡುವೆ ನಿಂತು ಕಾರ್ಯನಿರ್ವಹಿಸಬೇಕೇ ಹೊರತು ಆಡಳಿತ ವ್ಯವಸ್ಥೆಯ ಅಂಗಳದಲ್ಲಿ ಅಲ್ಲ.
ನೈತಿಕತೆಯ ನೆಲೆಯಲ್ಲಿ ಸ್ವಾತಂತ್ರ್ಯ:
ದುರಂತ ಎಂದರೆ ಪತ್ರಿಕೋದ್ಯಮ ಎನ್ನುವುದೇ ಅಕ್ಷರಶಃ ಉದ್ಯಮವಾಗಿದೆ. ಹಾಗಾಗಿ ಇವರು ಪ್ರತಿನಿಽಸುವ ಸಂಸ್ಥೆಗಳೂ ಕೂಡ ತಮ್ಮ ಹಿತಾಸಕ್ತಿಗನು ಗುಣವಾಗಿ ಪತ್ರಕರ್ತರನ್ನು ಬಳಸಿಕೊಳ್ಳುತ್ತವೆ. ಜೀವನೋಪಾಯದ ಮಾರ್ಗವಾಗಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಳ್ಳುವುದರಿಂದ, ವ್ಯಕ್ತಿಗಳಲ್ಲಿಯೂ ಕೂಡ ಅಸ್ತಿತ್ವವೇ ಪ್ರಧಾನವಾಗಿ, ನೀತಿ, ತತ್ವ ಅಥವಾ ಸೈದ್ಧಾಂತಿಕ ಮೌಲ್ಯಗಳು ನಗಣ್ಯವಾಗಿ ಬಿಡುತ್ತವೆ. ಹಾಗಾಗಿಯೇ ಕಾರ್ಪೊರೇಟ್- ಹಾಗೂ ರಾಜಕೀಯ ಹಿತಾಸಕ್ತಿಯನ್ನು ಪ್ರತಿನಿಧಿಸುವ ಮಾಧ್ಯಮಗಳು ಅನೇಕ ಸಂದರ್ಭಗಳಲ್ಲಿ ಆಡಳಿತಾರೂಢ ಪಕ್ಷಗಳ ಮುಖ ವಾಣಿಗಳಾಗಿ ಕಾರ್ಯನಿರ್ವಹಿಸುತ್ತವೆ. ಅಥವಾ ಸೈದ್ಧಾಂತಿಕವಾಗಿ ರಾಜ ಕೀಯ ಪಕ್ಷಗಳ ಪರ ಒಲವು ಹೊಂದಿರುತ್ತವೆ. ಆದ್ದರಿಂದಲೇ ಪ್ರಧಾನ ವಾಹಿನಿಯ ಮಾಧ್ಯಮಗಳಲ್ಲಿ ಜನಪರ ದನಿಯಾಗಲೀ, ಕಾಳಜಿಯಾಗಲೀ, ಕಳಕಳಿಯಾಗಲೀ ಕಾಣಲಾಗುವುದಿಲ್ಲ. ಜನಸಾಮಾನ್ಯರ ನಿತ್ಯ ಬದುಕಿನ ಸಂಕಟಗಳು, ಅವಕಾಶವಂಚಿತ ಸಮುದಾಯಗಳ ಸಂಕಷ್ಟಗಳು, ಶೋಷಿತ ಜನತೆ ಎದುರಿಸುವ ದೌರ್ಜನ್ಯ, ತಾರತಮ್ಯಗಳು ಈ ವಾಹಿನಿಗಳಿಗೆ ಪ್ರಧಾನ ಸುದ್ದಿಯಾಗುವುದಿಲ್ಲ. ಅತ್ಯಾಚಾರ ಮುಂತಾದ ಮಹಿಳಾ ದೌರ್ಜನ್ಯಗಳು ಮತ್ತು ಅಸ್ಪೃಶ್ಯತೆಯಂತಹ ಜಾತಿ ದೌರ್ಜನ್ಯಗಳ ಸಂದರ್ಭದಲ್ಲಿ ಇದನ್ನು ಸ್ಪಷ್ಟವಾಗಿ ಗುರುತಿಸಬಹುದು.
ಇದನ್ನು ಓದಿ: ರಸ್ತೆ ಕಾಮಗಾರಿ ವಿಳಂಬ; ದೂಳು ಕುಡಿಯುವುದು ಅನಿವಾರ್ಯ
ಇದರ ನೇರ, ಜ್ವಲಂತ ನಿದರ್ಶನವನ್ನು ಕರ್ನಾಟಕದಲ್ಲೇ ಕಾಣಬಹುದು. ಸಾಂವಿಧಾನಿಕ ಸಂಸ್ಥೆಗಳು ನ್ಯಾಯೋಚಿತವಾಗಿ, ಸಂವಿಧಾನದ ಆಶಯಗಳಿಗೆ ತಕ್ಕಂತೆ ತಮ್ಮ ಕರ್ತವ್ಯ ನಿರ್ವಹಣೆ ಮಾಡಿದಾಗ, ಅಂತಹ ಸಂಸ್ಥೆಗಳು ಜನಮನ್ನಣೆ, ಸಾರ್ವಜನಿಕರ ವಿಶ್ವಾಸವನ್ನು ಗಳಿಸಿರುತ್ತವೆ. ವಿಶೇಷವಾಗಿ ಶೋಷಿತ ಸಮುದಾಯಗಳು, ದೌರ್ಜನ್ಯಕ್ಕೊಳಗಾದ ಮಹಿಳೆಯರು ತಮಗಾಗಿರುವ ಅನ್ಯಾಯಗಳನ್ನು ಕಾನೂನಾತ್ಮಕವಾಗಿ ಎದುರಿಸುವಾಗ, ಈ ಸಂಸ್ಥೆಗಳ ಮೇಲಿನ ವಿಶ್ವಾಸವೇ ಮುಖ್ಯವಾಗುತ್ತದೆ. ಕರ್ನಾಟಕದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಈ ನಿಟ್ಟಿನಲ್ಲಿ ಪೂರ್ವನಿದರ್ಶನ ವಾಗಬಹುದಾದ ಕ್ರಮವನ್ನು ಅನುಸರಿಸಿದ್ದಾರೆ. ಧರ್ಮಸ್ಥಳದ ಸುತ್ತಮುತ್ತ ಕಳೆದ ಹಲವು ವರ್ಷಗಳಲ್ಲಿ ನಡೆದಿರುವ ಅತ್ಯಾಚಾರ, ಹತ್ಯೆಗಳನ್ನು ತನಿಖೆ ನಡೆಸಲು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಲು ಸರ್ಕಾರಕ್ಕೆ ಸೂಚಿಸಿದ್ದೇ ಅಲ್ಲದೆ, ಈಗ ಅಲ್ಲಿ ಸಂಭವಿಸಿರುವ ಎಲ್ಲ ಅಸಹಜ ಸಾವುಗಳನ್ನೂ ತನಿಖೆಗೊಳಪಡಿಸುವಂತೆ ಎಸ್‌ಐಟಿಗೆ ಲಿಖಿತವಾಗಿ ಮನವಿ ಮಾಡಿದ್ದಾರೆ. ಇದು ಹೆಮ್ಮೆ ಪಡುವ ವಿಚಾರವಾಗಿದ್ದು ಆಯೋಗದ ಅಧ್ಯಕ್ಷರು ಸಹಜವಾಗಿ ಪ್ರಶಂಸೆಗೊಳಗಾಗಬೇಕಿತ್ತು.
ನಿತ್ಯ ಅತ್ಯಾಚಾರಕ್ಕೊಳಗಾಗುತ್ತಿರುವ ಮಹಿಳಾ ಸಂಕುಲ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ಪ್ರಾಚೀನ ಸಮಾಜದ ಕ್ರೌರ್ಯಕ್ಕೆ ಒಳಗಾಗುತ್ತಿರುವ ತಳಸಮುದಾಯಗಳು, ಕೋಮು ದ್ವೇಷ ಮತ್ತು ನಿರ್ಲಕ್ಷ್ಯಕ್ಕೊಳಗಾಗಿ, ಅಂಚಿಗೆ ತಳ್ಳಲ್ಪಡುತ್ತಿರುವ ಅಲ್ಪಸಂಖ್ಯಾತರು, ತಮ್ಮ ಮೂಲ ನೆಲೆಯಿಂದಲೇ ಉಚ್ಛಾಟಿತರಾಗುತ್ತಿರುವ ಬುಡಕಟ್ಟು ಸಮುದಾಯಗಳು ಮಾಧ್ಯಮಗಳಿಂದ ನಿರೀಕ್ಷಿಸುವುದು ಈ ನೈತಿಕತೆಯನ್ನೇ ಅಲ್ಲವೇ ? ಈ ಜಿಜ್ಞಾಸೆಯನ್ನು ಮಾಧ್ಯಮ ಮಿತ್ರರೇ ಪರಿಹರಿಸಬೇಕಿದೆ. ಸಂವಿಧಾನ ಅಥವಾ ಪ್ರಜಾಪ್ರಭುತ್ವದ ನಾಲನೇ ಸ್ತಂಭ ಎಂಬ ಗೌರವಯುತ ಸ್ಥಾನ ಪಡೆದಿರುವ ಮಾಧ್ಯಮಗಳು, ವಿಶೇಷವಾಗಿ ವಿದ್ಯುನ್ಮಾನ ದೃಶ್ಯ ಮಾಧ್ಯಮಗಳು, ಸುದ್ದಿಮನೆಗಳು ಹಾಗೂ ಸುದ್ದಿ ನಿರೂಪಕರು ತಮ್ಮ ಈ ನೈತಿಕ ಜವಾಬ್ದಾರಿಯಿಂದ ವಿಮುಖರಾದಷ್ಟೂ ಶೋಷಣೆ, ದೌರ್ಜನ್ಯ, ತಾರತಮ್ಯಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಏಕೆಂದರೆ ಕ್ಷಣ ಮಾತ್ರದಲ್ಲಿ ಲಕ್ಷಾಂತರ ಜನರನ್ನು ತಲುಪಿ, ಪ್ರಭಾವಿಸಬಹುದಾದ ಈ ಸಂವಹನ ಸೇತುವೆಗಳು, ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ತಮ್ಮ ನೈತಿಕ ಕರ್ತವ್ಯದಲ್ಲಿ ವಿಫಲವಾಗುತ್ತವೆ.
” ನವ ಉದಾರವಾದಿ ಆರ್ಥಿಕತೆಯಲ್ಲಿ, ಮಾಧ್ಯಮಗಳ ಒಡೆತನ ಕಾರ್ಪೊರೇಟ್ ಮಾರುಕಟ್ಟೆ ಮತ್ತು ಬಂಡವಾಳ ಸ್ನೇಹಿ (Crony Capital) ಸರ್ಕಾರಗಳಮರ್ಜಿಗೆ ಒಳಪಟ್ಟಿರುವುದರಿಂದ, ಮುಖ್ಯವಾಹಿನಿಯ ಬಹುಪಾಲು ಮಾಧ್ಯಮಗಳು ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು, ಸರ್ಕಾರಗಳ ಬಾಲಂಗೋಚಿಗಳಾಗಿವೆ.”
–ನಾ.ದಿವಾಕರ
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…