ವಿದೇಶ ವಿಹಾರ
ಡಿ.ವಿ.ರಾಜಶೇಖರ
ಚೀನಾದ ಟಿಯಾನ್‌ಜಿನ್ ನಗರದಲ್ಲಿ ಇತ್ತೀಚೆಗೆ (ಆ ೩೧- ಸೆ.೧) ನಡೆದ ಶಾಂಗೈ ಸಹಕಾರ ಸಂಘಟನೆಯ(ಎಸ್‌ಸಿಒ) ಶೃಂಗಸಭೆ ನಿರೀಕ್ಷೆಗೂ ಮೀರಿದ ಆಶಾಭಾವನೆಯನ್ನು ಅಭಿವೃದ್ಧಿಶೀಲ ಮತ್ತು ಬಡ ದೇಶಗಳಲ್ಲಿ (ಗ್ಲೋಬಲ್ ಸೌತ್) ಉಂಟುಮಾಡಿದೆ. ಅಭಿವೃದ್ಧಿ ಹೊಂದಿರುವ ಪಾಶ್ಚಿಮಾತ್ಯ ದೇಶಗಳ (ಗ್ಲೋಬಲ್ ನಾರ್ಥ್) ದಬ್ಬಾಳಿಕೆ, ಸ್ವಾರ್ಥ ಮತ್ತು ಅಸಹಕಾರ ಧೋರಣೆಯ ವಿರುದ್ಧದ ವೇದಿಕೆಯಾಗಿ ಎಸ್‌ಸಿಒ ರೂಪುಗೊಳ್ಳುತ್ತಿರುವ ಸೂಚನೆಗಳು ಕಂಡುಬಂದಿವೆ. ಎಸ್‌ಸಿಒ ಅನ್ನು ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನಡುವೆ ಪರಸ್ಪರ ಆರ್ಥಿಕ ಸಹಕಾರ ಮತ್ತು ಭದ್ರತೆ ಒದಗಿಸುವ ಸಂಘಟನೆಯಾಗಿಸುವ ದಿಕ್ಕಿನಲ್ಲಿ ಚೀನಾ,ರಷ್ಯಾ ಮತ್ತು ಭಾರತ ಈ ಶೃಂಗಸಭೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿವೆ.
ಭಾರತದ ದೃಷ್ಟಿಯಿಂದ ಇದೊಂದು ಮಹತ್ವದ ಶೃಂಗ ಸಭೆ. ಪರಸ್ಪರ ವೈರಿ ದೇಶಗಳಾದ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಸೌಹಾರ್ದಯುತ ವಾತಾವರಣದಲ್ಲಿ ಮಾತುಕತೆ ನಡೆಸಿದ್ದು ಮಹತ್ವದ ಬೆಳವಣಿಗೆ. ಏಳು ವರ್ಷಗಳ ನಂತರ ಮೋದಿ ಅವರು ಚೀನಾಗೆ ಭೇಟಿ ನೀಡಿದ್ದರು. ಉಭಯ ದೇಶಗಳ ನಡುವಣಗಡಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಪ್ರಯತ್ನಗಳ ವೇಗ ಹೆಚ್ಚಿಸಲು ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವಿನ ವಹಿವಾಟನ್ನು ಹೆಚ್ಚಿಸುವ ದಿಕ್ಕಿನಲ್ಲಿ ಮಾತುಕತೆ ನಡೆದಿರುವುದು ಗಮನಾರ್ಹ ಹೆಜ್ಜೆ. ಪ್ರತಿನಿತ್ಯ ವಿಮಾನ ಸಂಚಾರ , ಸರಳ ವೀಸಾ ನಿಯಮಗಳನ್ನು ರೂಪಿಸುವುದು ಮೊದಲಾದ ನಿರ್ಧಾರಗಳು ಎರಡೂ ದೇಶಗಳ ನಡುವಣ ಹಳೆಯ ದ್ವೇಷದ ವಾತಾವರಣವನ್ನು ಬದಲಾಯಿಸುವಷ್ಟು ಮಹತ್ವವನ್ನು ಹೊಂದಿವೆ. ಚೀನಾದತ್ತ ಮೋದಿ ನಡೆ ಅಂದರೆ ಬದಲಾದ ವಿದೇಶಾಂಗ ನೀತಿ ಭಾರತವನ್ನು ಎಷ್ಟರ ಮಟ್ಟಿಗೆ ಬಲಗೊಳಿಸುತ್ತದೆ ಎನ್ನುವುದು ಭವಿಷ್ಯದ ಬೆಳವಣಿಗೆಗಳನ್ನು ಅವಲಂಬಿಸಿದೆ. ಸಹಜವಾಗಿಯೇ ಈ ಬೆಳವಣಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೆರಳಿಸಿದ್ದು, ಭಾರತದ ವಿರುದ್ಧ ಮತ್ತಷ್ಟು ಕ್ರಮಕ್ಕೆ ಮುಂದಾಗುತ್ತಾರೋ ಅಥವಾ ಮೃದುವಾಗುತ್ತಾರೋ ಎನ್ನುವ ಕುತೂಹಲ ಎಲ್ಲರಲ್ಲಿ ಮೂಡಿದೆ.
ಚೀನಾದ ಬಗೆಗಿನ ಭಾರತದ ಸಂಶಯಗಳು ನಿವಾರಣೆಯಾಗಬೇಕಾದರೆಟಿಯಾನ್‌ಜಿನ್ ನಿರ್ಧಾರಗಳ ವಿಚಾರದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಆಗಬೇಕಿದೆ. ಹೇಳಿ ಕೇಳಿ ಚೀನಾ ಮೊದಲಿನಿಂದಲೂ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ದೇಶ. ಹೀಗಾಗಿಯೇ ಪಾಕಿಸ್ತಾನದಲ್ಲಿ ಚೀನಾ ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡಿದೆ. ಪಾಕಿಸ್ತಾನಕ್ಕೆ ಆರ್ಥಿಕವಾಗಿ, ರಕ್ಷಣಾ ಕ್ಷೇತ್ರದಲ್ಲಿ ನೆರವಾಗುತ್ತಿದೆ. ಇತ್ತೀಚೆಗೆ ಪಾಕ್ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಪಾಕ್‌ಗೆ ಚೀನಾ ಮಿಲಿಟರಿ ನೆರವು ನೀಡಿದೆ. ಸ್ವಲ್ಪ ಹಿಂದಕ್ಕೆ ಹೋಗಿ ನೋಡುವುದಾದರೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸದಸ್ಯತ್ವ ನೀಡುವ ವಿಚಾರ ಚರ್ಚೆಗೆ ಬಂದಾಗ ಚೀನಾ ಅದನ್ನು ವಿರೋಽಸಿತು. ಭಾರತದ ಸುತ್ತ ಮುತ್ತಲ ದೇಶಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಅವುಗಳನ್ನು ತನ್ನ ತೆಕ್ಕೆಗೆ ತಂದುಕೊಂಡು ಭಾರತವನ್ನು ಏಕಾಂಗಿ ಮಾಡಲು ಯತ್ನಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಚೀನಾ ಇಷ್ಟೆಲ್ಲಾ ಭಾರತ ವಿರೋಽ ಚಟುವಟಿಕೆಗಳಲ್ಲಿ ತೊಡಗಿರುವಾಗ ಅದನ್ನು ನಂಬುವುದು ಹೇಗೆ ಎಂಬ ಪ್ರಶ್ನೆ ಬರುವುದು ಸಹಜ.
ಇದೇನೇ ಇದ್ದರೂ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅಮೆರಿಕಕ್ಕೆ ತಲೆಬಾಗುವ ಸನ್ನಿವೇಶ ಈಗ ಇಲ್ಲ. ಎಲ್ಲ ಅಪನಂಬಿಕೆಗಳನ್ನು ಮೂಲೆಗಿಟ್ಟು ಆಶಾಭಾವನೆಯಿಂದ ಹೊರಾಡಬೇಕಾದ ಪರಿಸ್ಥಿತಿಯನ್ನು ಭಾರತ ಈಗ ಎದುರಿಸುತ್ತಿದೆ. ಹೀಗಾಗಿಯೇ ಭಾರತಕ್ಕೆ ತನ್ನ ವಿದೇಶಾಂಗ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯ ಕಂಡುಬಂದಿದೆ. ರಷ್ಯಾ ಜೊತೆಗಿನ ಬಾಂಧವ್ಯವನ್ನು ಎಂದಿನಂತೆ ಮುಂದುವರಿಸಿ ಚೀನಾ ಜೊತೆಗಿನ ಬಾಂಧವ್ಯವನ್ನು ಮರುಸ್ಥಾಪಿಸುವ ಕಡೆಗೆ ಹೆಜ್ಜೆ ಇಟ್ಟಿದೆ. ಇದಕ್ಕೆ ಮುಖ್ಯ ಕಾರಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ ಸುಂಕ ಮತ್ತು ಅವರ ನಡವಳಿಕೆ, ಭಾರತದ ಆರ್ಥಿಕ ಸ್ಥಿತಿಯ ಬಗೆಗಿನ ಅವರ ಕೀಳು ಮಾತು. ಹಾಗೆ ನೋಡಿದರೆ ಟ್ರಂಪ್ ಮತ್ತು ಮೋದಿ ಸ್ನೇಹಿತರು.ಹಾಗೆಂದು ಹೇಳಿದವರು ಟ್ರಂಪ್ ಅವರೇ. ಆದರೆ ಅಮೆರಿಕ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕದ ವಿಚಾರದಲ್ಲಿ ಅವರುವ್ಯಾಪಾರಗಾರರಂತೆ ವರ್ತಿಸಿದ್ದಾರೆ. ಅಷ್ಟೇ ಅಲ್ಲ ಪಕ್ಕಾ ಅಮೆರಿಕವಾದಿಯಾಗಿ ಇತರ ದೇಶಗಳ ಮೇಲೆ ಮುಗಿಬಿದ್ದಿದ್ದಾರೆ.
ಭಾರತ ಅಷ್ಟೇ ಅಲ್ಲ ಅಮೆರಿಕದ ಮಿತ್ರ ದೇಶಗಳ ಮೇಲೂ ಹೆಚ್ಚುವರಿ ಸುಂಕ ವಿಧಿಸಿ ದೊಡ್ಡ ಯುದ್ಧವನ್ನೇ ಸಾರಿದ್ದಾರೆ. ಯುಕ್ರೇನ್ ಯುದ್ಧ ನಿಲ್ಲಿಸಬೇಕೆಂಬುದು ಅವರ ಕನಸು. ಆ ಕನಸಿನ ಹಿಂದಿರುವುದು ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವ ಗುರಿ. ಈ ಗೀಳಿಗೆ ಒಳಗಾಗಿ ಅವರು ಭಾರತದ ಮೇಲೆ ಬಾಣ ಹೂಡಿದ್ದಾರೆ. ರಷ್ಯಾದಿಂದ ಭಾರತ ಅಪಾರ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಕೊಳ್ಳುತ್ತಿದೆ. ಇದರಿಂದ ರಷ್ಯಾ ಆರ್ಥಿಕವಾಗಿ ಬಲಗೊಳ್ಳಲು ನೆರವಾಗಿದೆ. ಯುಕ್ರೇನ್ ವಿರುದ್ಧ ಮಿಲಿಟರಿ ಆಕ್ರಮಣ ಮುಂದುವರಿಸಲು ಇದು ನೆರವಾಗುತ್ತಿದೆ. ಈ ಕಾರಣಕ್ಕೇ ಹೆಚ್ಚು ಸುಂಕ ವಿಧಿಸಲಾಗಿದೆ ( ಈಗ ಒಟ್ಟು ಸುಂಕ ಶೇ ೫೦) ಎನ್ನುವುದು ಟ್ರಂಪ್ ವಾದ. (ವಾಸ್ತವವಾಗಿ ರಷ್ಯಾದಿಂದ ಹೆಚ್ಚು ತೈಲ ಕೊಳ್ಳುತ್ತಿರುವ ದೇಶ ಚೀನಾ. ಭಾರತ ಕೊಳ್ಳುವ ತೈಲದ ಒಟ್ಟು ಮೊತ್ತಕ್ಕಿಂತ ಹೆಚ್ಚು ಮೊತ್ತದ ಅನಿಲವನ್ನು ಯೂರೋಪ್ ಕೊಳ್ಳುತ್ತಿದೆ. ಆದರೆ ಈ ದೇಶಗಳ ಮೇಲೆ ಟ್ರಂಪ್ ಹೆಚ್ಚುವರಿ ಸುಂಕ ವಿಧಿಸಿಲ್ಲ. ಭಾರತದ ಮೇಲಷ್ಟೇ ಹೆಚ್ಚು ಸುಂಕ ಏಕೆ ಎಂದು ವಿದೇಶಾಂಗ ಸಚಿವ ಜಯಶಂಕರ್ ಪ್ರಶ್ನಿಸಿದ್ದಾರೆ.) ಈ ಸುಂಕ ಸಹಜವಾಗಿಯೇ ಭಾರತದ ರಫ್ತಿನ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅಮೆರಿಕಕ್ಕೆ ರಫ್ತಾಗಬೇಕಿದ್ದ ಸುಮಾರು ೭೩ ಬಿಲಿಯನ್ ಡಾಲರ್ ಮೌಲ್ಯದ ಸರಕು ಈಗ ಮಾರಾಟದಲ್ಲಿ ಹಿಂಜರಿತಕ್ಕೆ ಒಳಗಾಗಿದೆ. ಭಾರತದ ಆರ್ಥಿಕ ಸ್ಥಿತಿಯ ಮೇಲೆ ಈ ಬೆಳವಣಿಗೆ ಕೆಟ್ಟ ಪರಿಣಾಮ ಬೀರಲಿದೆಯಷ್ಟೇ ಅಲ್ಲದೆ ಅಪಾರ ಪ್ರಮಾಣದಲ್ಲಿ ನಿರುದ್ಯೋಗಕ್ಕೆ, ಸಣ್ಣಪುಟ್ಟ ಕೈಗಾರಿಕಾ ಘಟಕಗಳ ಸ್ಥಗಿತಕ್ಕೆ ಕಾರಣವಾಗಲಿದೆ.
ಇಂಥ ಕಠಿಣ ಪರಿಸ್ಥಿಯಲ್ಲಿ ಟ್ರಂಪ್‌ಗೆ ಪಾಠ ಕಲಿಸಲು ಮೋದಿ ಆಯ್ಕೆಮಾಡಿಕೊಂಡಿರುವುದು ಚೀನಾವನ್ನು. ಚೀನಾ ನಾಯಕರು ಕೂಡ ಟ್ರಂಪ್ ಒತ್ತಡಕ್ಕೆ ಒಳಗಾಗಿ ಪರ್ಯಾಯ ಮಾರ್ಗ ಹುಡುಕುತ್ತಿದ್ದರು. ಟ್ರಂಪ್ ಅವರ ದಬ್ಬಾಳಿಕೆ ಮತ್ತು ವಸಾಹತುಶಾಹಿ ಮನೋಭಾವದ ವಿರುದ್ಧ ದನಿ ಎತ್ತಲು ಚೀನಾ ಬಳಸಿಕೊಂಡದ್ದು ಶಾಂಗೈ ಸಹಕಾರ ಸಂಘಟನೆಯ ಶೃಂಗ ಸಭೆಯನ್ನು. ಶಾಂಗೈ ಸಹಕಾರ ಸಂಘಟನೆ ಅಧಿಕೃತವಾಗಿ ಆರಂಭವಾಗಿದ್ದು ೨೦೦೧ರಲ್ಲಿ. ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ,ತಜಕಿಸ್ತಾನ್ ಮತ್ತು ಉಜ್ಬೆಕಿಸ್ತಾನ್ ಸಂಸ್ಥಾಪಕ ಸದಸ್ಯ ದೇಶಗಳು. ೨೦೧೭ರಲ್ಲಿ ಭಾರತ ಮತ್ತು ಪಾಕಿಸ್ತಾನ ಸದಸ್ಯತ್ವ ಪಡೆದವು. ೨೦೨೩ರಲ್ಲಿ ಇರಾನ್, ೨೦೨೪ ರಲ್ಲಿ ಬೆಲಾರಸ್ ಸದಸ್ಯತ್ವ ಪಡೆದವು. ಹತ್ತು ಸದಸ್ಯ ರಾಷ್ಟ್ರಗಳುಳ್ಳ ಈ ಸಂಘಟನೆಗೆ ಈಗ ೧೭ ಸಹ ಭಾಗಿಗಳು, ೪ ದೇಶಗಳು ಅತಿಥಿ ದೇಶಗಳಾಗಿವೆ. ಯೂರೇಷಿಯಾದ ಇತರ ಹಲವು ದೇಶಗಳು ಈ ಸಂಘಟನೆಯ ಸದಸ್ಯತ್ವ ಪಡೆಯಲು ಮುಂದೆ ಬಂದಿವೆ.
ಪಾಶ್ಚಿಮಾತ್ಯ ದೇಶಗಳ ನಾಯಕತ್ವದ ಏಕಪಕ್ಷೀಯ ಮತ್ತು ದಬ್ಬಾಳಿಕೆ ನೀತಿಗಳಿಗೆ ಬದಲಾಗಿ ಅಭಿವೃದ್ಧಿ, ಭದ್ರತೆ ಮತ್ತು ಆರ್ಟಿಫಿಷಿಯಲ್ ಇಂಟಲಿಜನ್ಸ್‌ನಂಥ ಸಮಕಾಲೀನ ಸಮಸ್ಯೆಗಳಿಗೆ ಪರಸ್ಪರ ಸಹಕಾರದ ಮೂಲಕ ಪರಿಹಾರ ಕಂಡುಕೊಳ್ಳುವ ನೀತಿಯನ್ನು ಎಸ್‌ಸಿಒ ಅನುಸರಿಸುತ್ತದೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಘೋಷಿಸಿದ್ದಾರೆ. ಇಂಥ ಉದಾರವಾದಿ ನೀತಿಗಳುಳ್ಳ ಜಂಟಿ ಹೇಳಿಕೆಯನ್ನೂ ಎಸ್‌ಸಿಒ ಶೃಂಗ ಸಭೆ ಅಂಗೀಕರಿಸಿದೆ. ಚೀನಾ, ರಷ್ಯಾ ಮತ್ತು ಭಾರತ ಈ ಸಂಘಟನೆಯ ಭಾಗವಾಗಿರುವುದರಿಂದ ಬಡ ಹಾಗೂ ಅಭಿವೃದ್ಧಿಶೀಲ ದೇಶಗಳು ಆಕರ್ಷಣೆಗೊಂಡಿವೆ. ಹತ್ತು ಸದಸ್ಯರಿದ್ದ ಎಸ್‌ಸಿಒ ಈಗ ೨೦ ದೇಶಗಳನ್ನು ಒಳಗೊಂಡಿದೆ. ಬಡ ಹಾಗೂ ಅಭಿವೃದ್ಧಿಶೀಲ ದೇಶಗಳ ಮತ್ತೊಂದು ವೇದಿಕೆ ‘ಬ್ರಿಕ್ಸ್‘ ಮತ್ತು ಎಸ್‌ಸಿಒ ಪರಸ್ಪರ ಸಹಕಾರ ಸಾಧಿಸಿದರೆ ಜಗತ್ತಿನಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯವೇ ಆರಂಭವಾಗಬಹುದು. ಡಾಲರ್‌ಗೆ ಪರ್ಯಾಯ ಸೃಷ್ಟಿಸಲು ‘ಬ್ರಿಕ್ಸ್‘ ದೇಶಗಳು ಪ್ರಯತ್ನಿಸುತ್ತಿವೆ ಎಂದು ಟ್ರಂಪ್ ಆರೋಪಿಸಿ ಆ ದೇಶಗಳ ಆಮದಿನ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದರು. ಈಗ ಎಸ್‌ಸಿಒ ದೇಶಗಳ ವಿರುದ್ಧವೂ ಟ್ರಂಪ್ ಕಿಡಿಕಾರುತ್ತಿದ್ದಾರೆ. ಬಡ ಹಾಗೂ ಅಭಿವೃದ್ಧಿಶೀಲ ದೇಶಗಳ ಸಮಸ್ಯೆಗಳ ಇತ್ಯರ್ಥಕ್ಕಾಗಿ ಮತ್ತು ಅಭಿವೃದ್ಧಿಗೆನೆರವಾಗಲು ‘ ಗ್ಲೋಬಲ್ ಸೌತ್‘ ಸಂಘಟನೆಯ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿ ಕಾಣುತ್ತಿದೆ. ಬ್ರಿಕ್ಸ್ ಮತ್ತು ಎಸ್‌ಸಿಒ ಆ ದಿಸೆಯಲ್ಲಿ ಯಶಸ್ವಿಯಾಗುವುದೋ ಇಲ್ಲವೋ ಕಾದು ನೋಡಬೇಕು. ಭಾರತದ ಮೇಲೆ ಹೆಚ್ಚುವರಿ ಸುಂಕ ವಿಽಸಿದ್ದಕ್ಕೆ ಅಮೆರಿಕದಲ್ಲಿಯೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಯೂರೋಪ್ ಒಕ್ಕೂಟದ ದೇಶಗಳೂ ಸೇರಿದಂತೆ ವಿಶ್ವದ ಬಹುಪಾಲು ದೇಶಗಳು ಟ್ರಂಪ್‌ಗೆ ಶರಣಾಗಿರುವಾಗ ಭಾರತ ಸುಂಕದ ವಿರುದ್ದ ಸಿಡಿದೆದ್ದು ಪರ್ಯಾಯಮಾರ್ಗ ತುಳಿದಿರುವುದನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಶ್ಲಾಸಿದ್ದಾರೆ. ಹಲವು ದೇಶಗಳ ನಾಯಕರೂ ಕ್ರಮೇಣ ಟ್ರಂಪ್ ವಿರುದ್ಧ ಕಿಡಿಕಾರುತ್ತಿದ್ದಾರೆ.
ಬದಲಾಗುತ್ತಿರುವ ವಾತಾವರಣದಲ್ಲಿ ಟ್ರಂಪ್ ತಮ್ಮ ನಿರ್ಧಾರವನ್ನು ಬದಲಿಸುವರೇ ಅಥವಾ ಯುಕ್ರೇನ್ ಯುದ್ಧ ನಿಲ್ಲುವವರೆಗೆ ಕಾಯುವುದು ಅನಿವಾರ್ಯವೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಈ ಮಧ್ಯೆ ಟ್ರಂಪ್ ವಿಧಿಸಿರುವ ಸುಂಕ ಕಾನೂನು ಬಾಹಿರ ಎಂದು ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟಿನ ಅಪೀಲು ಪೀಠ ತೀರ್ಪು ನೀಡಿದೆ. ಪೂರ್ಣಕೋರ್ಟಿಗೆ ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿದೆ. ಅಲ್ಲಿಯವರೆಗೆ ಹೊಸ ಸುಂಕಗಳು ಮುಂದುವರಿಯಲಿವೆ. ತುರ್ತುಪರಿಸ್ಥಿಯ ಸಂದರ್ಭದಲ್ಲಿ ಅಮೆರಿಕ ಸಂವಿಧಾನ ಅಧ್ಯಕ್ಷರಿಗೆ ಕೆಲವು ವಿಶೇಷ ಅಧಿಕಾರಗಳನ್ನು ನೀಡಿದೆ. ಆ ಅಧಿಕಾರ ಬಳಸಿ ಟ್ರಂಪ್ ಸುಂಕ ವಿಧಿಸಿರುವುದು ಅಕ್ರಮ. ಸುಂಕ ವಿಧಿಸುವ ಅಧಿಕಾರ ಕಾಂಗ್ರೆಸ್‌ಗೆ ಮಾತ್ರ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿರು ವುದು ಈಗ ಟ್ರಂಪ್ ಅವರನ್ನು ಇಕ್ಕಟ್ಟಿಗೆ ಒಳಗುಮಾಡಿದೆ. ಸುಂಕದ ಭವಿಷ್ಯ ಈಗ ಸುಪ್ರೀಂ ಕೋರ್ಟಿನ ಪೂರ್ಣಪೀಠದ ತೀರ್ಪನ್ನು ಅವಲಂಬಿಸಿದೆ.
” ಪಾಶ್ಚಿಮಾತ್ಯ ದೇಶಗಳ ನಾಯಕತ್ವದ ಏಕಪಕ್ಷೀಯ ಮತ್ತು ದಬ್ಬಾಳಿಕೆ ನೀತಿಗಳಿಗೆ ಬದಲಾಗಿ ಅಭಿವೃದ್ಧಿ, ಭದ್ರತೆ ಮತ್ತು ಆರ್ಟಿಫಿಷಿಯಲ್ ಇಂಟಲಿಜನ್ಸ್‌ನಂಥ ಸಮಕಾಲೀನ ಸಮಸ್ಯೆಗಳಿಗೆ ಪರಸ್ಪರ ಸಹಕಾರದ ಮೂಲಕ ಪರಿಹಾರ ಕಂಡುಕೊಳ್ಳುವ ನೀತಿಯನ್ನು ಎಸ್‌ಸಿಒ ಅನುಸರಿಸುತ್ತದೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಘೋಷಿಸಿದ್ದಾರೆ. ಇಂಥ ಉದಾರವಾದಿ ನೀತಿಗಳುಳ್ಳ ಜಂಟಿ ಹೇಳಿಕೆಯನ್ನೂ ಎಸ್‌ಸಿಒ ಶೃಂಗ ಸಭೆ ಅಂಗೀಕರಿಸಿದೆ. ಚೀನಾ, ರಷ್ಯಾ ಮತ್ತು ಭಾರತ ಈ ಸಂಘಟನೆಯ ಭಾಗವಾಗಿರುವುದರಿಂದ ಬಡ ಹಾಗೂ ಅಭಿವೃದ್ಧಿಶೀಲ ದೇಶಗಳು ಆಕರ್ಷಣೆಗೊಂಡಿವೆ. ಹತ್ತು ಸದಸ್ಯರಿದ್ದ ಎಸ್‌ಸಿಒ ಈಗ ೨೦ ದೇಶಗಳನ್ನು ಒಳಗೊಂಡಿದೆ. ಬಡ ಹಾಗೂ ಅಭಿವೃದ್ಧಿಶೀಲ ದೇಶಗಳ ಮತ್ತೊಂದು ವೇದಿಕೆ ‘ಬ್ರಿಕ್ಸ್‘ ಮತ್ತು ಎಸ್‌ಸಿಒ ಪರಸ್ಪರ ಸಹಕಾರ ಸಾಧಿಸಿದರೆ ಜಗತ್ತಿನಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯವೇ ಆರಂಭವಾಗಬಹುದು.”
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೋರ್ಲತ್ತು ಬಳಿ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 10ಕ್ಕೂ…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೋರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಸಜೀವ…
ಜಾತಿ ವ್ಯವಸ್ಥೆಯು ಅಸಮಾನತೆಯನ್ನು ಸೃಷ್ಟಿ ಮಾಡಿದೆ. ಈ ಜಾತಿ ವ್ಯವಸ್ಥೆ ಈಗಲೂ ಜೀವಂತ ವಾಗಿದೆ ಎನ್ನುವುದಕ್ಕೆ ಬೇರೆ ಜಾತಿಯ ಹುಡುಗನನ್ನು…
೬೦ರ ದಶಕದ ಸಿನಿಮಾರಂಗ ಯಾವ ಗಲಾಟೆ ಇಲ್ಲದೆ ಸಾಗಿತ್ತು. ರಾಜಕುಮಾರ್ ಅವರ ಸಮಕಾಲಿನ ನಟರಾದ ಕಲ್ಯಾಣ್ ಕುಮಾರ್, ಶ್ರೀನಾಥ್, ನರಸಿಂಹರಾಜು,…
ನಾಡದೇವತೆಯಾದ ಶ್ರೀ ಚಾಮುಂಡೇಶ್ವರಿ ನೆಲೆಸಿರುವ ಬೆಟ್ಟವನ್ನು ಯಥಾಸ್ಥಿತಿಯಲ್ಲಿ ಇರುವಂತೆ ಉಳಿಸಿಕೊಳ್ಳುವುದು ಮೈಸೂರಿಗರ ಆದ್ಯ ಕರ್ತವ್ಯವಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ…
ಚಿತ್ರದುರ್ಗದ ಪೇಟೆ ಬೀದಿಯ ಉಡುಗೊರೆ (ಗಿಫ್ಟ್) ಮಾರಾಟ ಮಳಿಗೆ ಮಕ್ಕಳು ಮತ್ತು ಪೋಷಕರಿಂದ ತುಂಬಿ ಹೋಗಿತ್ತು. ಅಲ್ಲಿದ್ದ ಹುಡುಗರನ್ನು ಏಕೆ…