ಅಂಕಣಗಳು

75 ರ ಪ್ರಾಯದಲ್ಲಿ ಜೆಸಿಬಿ ಚಲಾಯಿಸುವ ಮಣಿ ಅಮ್ಮ!

ಭಾರದ ವಾಹನಗಳ ಚಾಲನೆ ಕಲಿಯಲು ಪತಿಯೇ ಪ್ರೇರಣೆ 

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಕಾರು, ಜೀಪು, ಬಸ್, ರೈಲು ಮೊದಲಾದ ವಾಹನಗಳನ್ನು ಚಲಾಯಿಸುವುದು ಬಹಳ ಸಾಮಾನ್ಯವಾಗಿದೆ. ಹಾಗೆಯೇ, ಟ್ರಕ್ ಮೊದಲಾದ ಭಾರದ ವಾಹನಗಳನ್ನು ಚಲಾಯಿಸುವ ಮಹಿಳೆಯರನ್ನೂ ಅಪರೂಪಕ್ಕೆ ಕಾಣಬಹುದು. ಆದರೆ, ಕ್ರೇನ್, ಜೆಸಿಬಿ, ಅರ್ತ್ ಮೂವರ್, ಡಂಪರ್ ಮೊದಲಾದ ಅತೀ ಭಾರದ ಹಾಗೂ ಅತ್ಯಂತ ಕ್ಲಿಷ್ಟಕರ ಚಾಲನೆಯ ವಾಹನಗಳನ್ನು ಚಲಾಯಿಸುವ ಮಹಿಳೆಯರು ಕಾಣಬರುವುದು ಬಹುಶಃ ಅಪರೂಪದಲ್ಲಿ ಅಪರೂಪ. ಆದರೆ, ಕೇರಳಕ್ಕೆ ಬಂದರೆ ಅಲ್ಲೊಬ್ಬರು ಮಹಿಳೆ ಮಾತ್ರವಲ್ಲ, ೭೫ ವರ್ಷ ಪ್ರಾಯದ ಅಜ್ಜಿಯೊಬ್ಬರು ಇಂತಹ ಅತೀ ಭಾರದ ವಾಹನಗಳನ್ನು ಲೀಲಾಜಾಲವಾಗಿ ಚಲಾಯಿಸುವುದನ್ನು ಕಾಣಬಹುದು! ಬಹುಶಃ ಇಡೀ ದೇಶದಲ್ಲಿ ಜೆಸಿಬಿ, ಕ್ರೇನ್, ಫೋರ್ಕ್ಲಿ ಫ್ಟ್, ಟ್ರಿಪ್ಪರ್ ಮೊದಲಾದ ಅತೀ ಭಾರದ ವಾಹನಗಳನ್ನು ಚಲಾಯಿಸಲು ಹನ್ನೊಂದು ಲೈಸನ್ಸ್‌ಗಳನ್ನು ಹೊಂದಿರುವ ಮಹಿಳಾ ಚಾಲಕಿ ಇವರೊಬ್ಬರೇ. ಈ ವಾಹನಗಳಲ್ಲದೆ, ಅಪಾಯಕಾರಿ ವಸ್ತುಗಳನ್ನು ತುಂಬಿರುವ ವಾಹನಗಳನ್ನು ಚಲಾಯಿಸುವ ಪ್ರಮಾಣ ಪತ್ರವನ್ನೂ ಇವರು ಪಡೆದಿದ್ದಾರೆ.

ಇವರ ಹೆಸರು ರಾಧಾಮಣಿ ಅಮ್ಮ. ಪರಿಚಯದವರು ಇವರನ್ನು ಪ್ರೀತಿಯಂದ ಮಣಿ ಅಮ್ಮ ಎಂದು ಕರೆಯುತ್ತಾರೆ. ಇಷ್ಟೆಲ್ಲ ವಾಹನಗಳನ್ನು ಚಲಾಯಿಸುವ ಮಣಿ ಅಮ್ಮ ತನ್ನ ಬಾಲ್ಯದಲ್ಲಿ ವಾಹನಗಳನ್ನೇ ಕಂಡವರಲ್ಲ ಅನ್ನುವುದು ಕುತೂಹಲದ ಸಂಗತಿ. ಮಣಿ ಅಮ್ಮ ಹುಟ್ಟಿದುದು ಚೇರ್ತಾಲಾ ಎಂಬ ಒಂದು ಸಣ್ಣ ಹಳ್ಳಿಯಲ್ಲಿ. ಅವರ ತಂದೆ ತೆಂಗಿನ ಕಾಯಿ ಮತ್ತು ತೆಂಗಿನ ನಾರಿನ ಸಣ್ಣದೊಂದು ಉದ್ಯಮ ನಡೆಸುತ್ತಿದ್ದರು. ರಾಧಾಮಣಿ ಅಮ್ಮನಬಾಲ್ಯದ ದಿನಗಳು ಹೇಗಿದ್ದವೆಂದರೆ, ಆಗ ಅವರ ಹಳ್ಳಿಗೆ ಒಂದೇ ಒಂದು ಬಸ್ಸು ಕೂಡಾ ಬರುತ್ತಿರಲಿಲ್ಲ. ಅವರ ಹಳ್ಳಿಯಲ್ಲಿ ಯಾರೊಬ್ಬರ ಬಳಿಯೂ ಯಾವ ವಾಹನವೂ ಇರಲಿಲ್ಲ. ಅಂದರೆ, ರಾಧಾಮಣಿ ಅಮ್ಮ ಯಾವುದೇ ವಾಹನವನ್ನು ಕಾಣದೆ ತನ್ನ ಬಾಲ್ಯವನ್ನು ಕಳೆದವರು ಅನ್ನಬಹುದು. ಅಂತಹ ಮಣಿ ಅಮ್ಮ ಇಂದು ಹನ್ನೊಂದು ಬಗೆಯ ಭಾರದ ವಾಹನಗಳನ್ನು ಚಲಾಯಿಸುವ ಡ್ರೈವಿಂಗ್ ಲೈಸನ್ಸುಗಳನ್ನು ಹೊಂದಿದ ಅಪರೂಪದ ಸಾಹಸಿ ವಾಹನ ಚಾಲಕಿಯಾಗಿ ಬದಲಾದುದು ಸೋಜಿಗದ ಸಂಗತಿ.

ಇದನ್ನು ಓದಿ: ಮೂಲಸೌಕರ್ಯ ವಂಚಿತ ಸೆಣಬಿನಕುಪ್ಪೆ ಗ್ರಾಮ

ಮಣಿ ಅಮ್ಮ ಹತ್ತನೇ ತರಗತಿ ಮುಗಿಸುತ್ತಿದ್ದಂತೆ ೧೯೬೭ರಲ್ಲಿ ೧೭ನೇ ವಯಸ್ಸಿನ ಪ್ರಾಯದಲ್ಲಿ ಹೆತ್ತವರು ಅವರ ಮದುವೆ ಮಾಡಿಸಿದರು. ಮದುವೆಯಾದ ನಂತರ ಅವರ ಹತ್ತನೇ ತರಗತಿಯ ಫಲಿತಾಂಶ ಬಂದಿತು. ಮದುವೆಯಾಗಿಅವರು ಗಂಡನ ಮನೆಯಿದ್ದ ಕೊಚ್ಚಿಗೆ ಬಂದರು. ಅವರು ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಕಾರಣ ಕೊಚ್ಚಿಯಂತಹ ಪೇಟೆ ಪ್ರದೇಶದಲ್ಲಿ ಕಾಣುತ್ತಿದ್ದ ಎಲ್ಲವೂ ಅವರಿಗೆ ಕುತೂಹಲ ಹುಟ್ಟಿಸುತ್ತಿದ್ದವು. ಅವರ ಗಂಡ ಟಿ.ವಿ.ಲಲನ್ ಹಳೆಯ ವಾಹನಗಳನ್ನು ಖರೀದಿಸಿ, ಅವುಗಳನ್ನು ದುರಸ್ತಿ ಮಾಡಿ, ಮಾರುವ ವರ್ಕ್ಸ್ ಶಾಪ್ ನಡೆಸುತ್ತಿದ್ದರು. ಬಹುಶಃ ಅದು ಮಣಿ ಅಮ್ಮನಲ್ಲಿ ವಾಹನಗಳ ಬಗ್ಗೆ ಕುತೂಹಲ ಬೆಳೆಯಲು ಕಾರಣವಾಗಿದ್ದಿರಬಹುದು.

ಟಿ.ವಿ.ಲಲನ್ ಒಂದು ಕೋಳಿ ಫಾರಂನ್ನೂ ನಡೆಸುತ್ತಿದ್ದರು. ಮಣಿ ಅಮ್ಮ ನಿಧಾನಕ್ಕೆ ತನ್ನ ಗಂಡನ ಎಲ್ಲ ವ್ಯವಹಾರಗಳಲ್ಲಿಯೂ ಆಸಕ್ತಿ ಬೆಳೆಸಿಕೊಂಡು ಅವುಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳತೊಡಗಿದರು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಗಂಡನ ವರ್ಕ್ಸ್ ಶಾಪಲ್ಲಿ ಇರಲು ಹೆಚ್ಚು ಇಷ್ಟ ಪಡುತ್ತಿದ್ದರು. ವರ್ಕ್ಸ್ ಶಾಪಿನ ಕೆಲಸಗಾರರ ಜೊತೆ ಮಾತಾಡುತ್ತ ಅವರು ಮಾಡುತ್ತಿದ್ದ ವಾಹನ ರಿಪೇರಿ ಕೆಲಸವನ್ನು ಆಸಕ್ತಿಯಿಂದ ನೋಡುತ್ತ, ಅವರಿಗೆ ಸಣ್ಣಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುವುದರಲ್ಲಿ ಹೆಚ್ಚು ಖುಷಿಪಡುತ್ತಿದ್ದರು. ಹಾಗೆ ನೋಡುತ್ತ ವಾಹನಗಳ ಯಂತ್ರಗಳೊಳಗೆ ನಿಜಕ್ಕೂ ಏನು ನಡೆಯುತ್ತದೆ ಎಂಬುದನ್ನೂ ಅರಿತುಕೊಂಡರು.

ಕೋಳಿ ಫಾರಂನಲ್ಲಿ ಕೋಳಿಗಳನ್ನು ನೋಡಿಕೊಳ್ಳುವುದು ಹಾಗೂ ವರ್ಕ್ಸ್‌ಶಾಪಲ್ಲಿ ವಾಹನಗಳನ್ನು ನೋಡಿಕೊಳ್ಳುವುದು ಎರಡೂ ಅವರಿಗೆ ಆಸಕ್ತಿಯ ವಿಷಯವಾಯಿತು. ಆಗ ಒಂದು ದಿನ ಅವರ ಬದುಕಿನ ದಾರಿಯನ್ನೇ ಬದಲಾಯಿಸುವ ಒಂದು ತಿರುವು ಕಾಣಿಸಿಕೊಂಡಿತು. ಟಿ.ವಿ.ಲಲನ್ ಹಲವು ಉದ್ಯಮಗಳನ್ನು ಶುರು ಮಾಡಿದರೂ ಯಾವುದೂ ಅವರು ನಿರೀಕ್ಷಿಸಿದ ಯಶಸ್ಸು ತರುತ್ತಿರಲಿಲ್ಲ. ಹಾಗಾಗಿ ಅವರು ಒಂದು ಉದ್ಯಮ ನಡೆಯುವುದಿಲ್ಲ ಅಂತ ಗೊತ್ತಾಗುತ್ತಲೇ ಬೇರೊಂದು ಉದ್ಯಮ ಶುರು ಮಾಡುತ್ತಿದ್ದರು. ಅದೇ ರೀತಿ ೧೯೮೧ರಲ್ಲಿ ಅವರು ಭಾರದ ವಾಹನಗಳನ್ನು ಚಲಾಯಿಸಲು ಕಲಿಸುವ ಒಂದು ಡ್ರೆ ವಿಂಗ್ ಸ್ಕೂಲ್ ತೆರೆಯುವ ಸಲುವಾಗಿ ತಮ್ಮ ಮನೆಯ ಕೆಲವು ಸದಸ್ಯರ ಹೆಸರುಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಹೆಸರುಗಳಲ್ಲಿ ರಾಧಾಮಣಿ ಅಮ್ಮನ ಹೆಸರೂ ಒಂದಾಗಿತ್ತು. ಸರ್ಕಾರ ಅವರ ಬೇರೆಲ್ಲ ಅರ್ಜಿಗಳನ್ನು ನಿರ್ಲಕ್ಷಿಸಿ ಒಂದು ಹೆಸರಿಗೆ ಮಾತ್ರ ಅನುಮತಿ ನೀಡಿತು.

ಅದು ರಾಧಾಮಣಿ ಅಮ್ಮನ ಹೆಸರಲ್ಲಿ ಸಲ್ಲಿಸಿದ್ದ ಅರ್ಜಿಯಾಗಿತ್ತು! ಹೀಗೆ ವಾಹನ ಚಾಲನೆ ಬಾರದ ರಾಧಾಮಣಿ ಅಮ್ಮನ ಮಾಲೀಕತ್ವದಲ್ಲಿ ಕೇರಳದ ಪ್ರಪ್ರಥಮ ಭಾರೀ ವಾಹನ ಚಾಲನೆ ಕಲಿಸುವ ಡ್ರೈವಿಂಗ್ ಸ್ಕೂಲ್ ಪ್ರಾರಂಭಗೊಂಡು ರಾಧಾಮಣಿ ಅಮ್ಮ ವಾಹನ ಕಲಿಯುವುದು ಅನಿವಾರ್ಯ ಪರಿಸ್ಥಿತಿ ಎದುರಾಯಿತು!

ಟಿ.ವಿ.ಲಲನ್ ಬಳಿ ಒಂದು ಅಂಬಾಸಿಡರ್ ಕಾರಿತ್ತು. ಅದನ್ನೇ ಅವರು ಟ್ಯಾಕ್ಸಿಯಾಗಿ ಬಳಸುತ್ತಿದ್ದರು. ಆ ಅಂಬಾಸಿಡರ್ ಕಾರಿನಲ್ಲಿ ರಾಧಾಮಣಿ ಅಮ್ಮ ವಾಹನ ಚಾಲನೆ ಕಲಿಯಲು ಶುರು ಮಾಡಿದರು. ಆ ಕಾಲದಲ್ಲಿ ಈಗಿನಂತಲ್ಲದೆಕಾರುಗಳನ್ನು ಹೊಂದಿದ್ದ ಮನೆಗಳು ತೀರಾ ಅಪರೂಪವಾಗಿದ್ದವು. ಅದರಲ್ಲೂ ಮಹಿಳೆಯರು ಕಾರು ಚಲಾಯಿಸುವುದು ನೋಡುವುದು ಬಿಡಿ, ಕೇಳುವುದೂ ಸಾಧ್ಯವಿರಲಿಲ್ಲ. ಅಂತಹ ವಾತಾವರಣದಲ್ಲಿ ರಾಧಾಮಣಿ ಅಮ್ಮ ಅಂಬಾಸಿಡರ್ ಕಾರು ಚಲಾಯಿಸುವುದನ್ನು ನೋಡಲು ಜನ ರಸ್ತೆ ಇಕ್ಕೆಲಗಳಲ್ಲಿ ನಿಂತಿರುತ್ತಿದ್ದರು. ಅವರ ಪತಿ ಟಿ.ವಿ.ಲಲನ್ ಅವರ ಡ್ರೆ ವಿಂಗ್ ಗುರು. ಜನರು ಆ ಅಪರೂಪದ ದೃಶ್ಯ ನೋಡಿ ಮನರಂಜನೆ ಪಡೆಯುತ್ತಿದ್ದರೆ, ಅತ್ತ ಕಾರೊಳಗೆ ಸ್ಟೇರಿಂಗ್ ಹಿಡಿದು ಕುಳಿತ ರಾಧಾಮಣಿ ಅಮ್ಮನಿಗೆ ನಡುಕ!

ಇದನ್ನು ಓದಿ:  ಗಾಳೀಪುರ ಬೀಡಿ ಕಾಲೋನಿಗೆ ಇನ್ನು ಮುಂದೆ ಶುದ್ಧ ಗಾಳಿ!

ಪತಿ ಟಿ.ವಿ.ಲಲನ್‌ರ ಧೈರ್ಯ ಮತ್ತು ಉತ್ತೇಜನದ ಮಾತುಗಳಿಂದ ರಾಧಾಮಣಿ ಅಮ್ಮ ನಿಧಾನಕ್ಕೆ ತಮ್ಮ ಹೆದರಿಕೆಯನ್ನು ಹಿಂದಿಕ್ಕಿ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು, ಚಾಲನೆಯನ್ನು ಕಲಿಯುವಲ್ಲಿ ಯಶಸ್ವಿಯಾದರು. ನಂತರದವರ್ಷಗಳಲ್ಲಿ ರಾಧಾಮಣಿ ಅಮ್ಮ ಎಂತಹ ನುರಿತ ಮತ್ತು ಧೈರ್ಯಶಾಲಿ ಚಾಲಕರಾದರೆಂದರೆ, ೧೯೮೮ರಲ್ಲಿ ಭಾರದ ವಾಹನಗಳನ್ನು ನಡೆಸುವುದನ್ನು ಕಲಿತು, ಕೊಚ್ಚಿಯಿಂದ ಚೇರ್ತಾಲಕ್ಕೆ ಒಂದು ಅಶೋಕ್ ಲೇಲ್ಯಾಂಡ್ ಬಸ್ಸನ್ನು ಚಲಾಯಿಸಿದರು. ಟಿ.ವಿ.ಲಲನ್ ಮುಂದೆ ಡ್ರೆ ವಿಂಗ್ ಸ್ಕೂಲಲ್ಲಿ ಬೇರೆ ಬೇರೆ ರೀತಿಯ ವಾಹನಗಳನ್ನು ಚಲಾಯಿಸುವುದನ್ನು ಕಲಿಸಲು ಪ್ರಾರಂಭಿಸಿದಂತೆ ರಾಧಾಮಣಿ ಅಮ್ಮ ಅವೆಲ್ಲ ವಾಹನಗಳನ್ನೂ ಚಲಾಯಿಸಲು ಕಲಿತುಕೊಂಡರು. ಅವರ ಡ್ರೆ ವಿಂಗ್ ಸ್ಕೂಲಿನ ಹೆಸರೇ ‘ಎ ಟು ಝಡ್ ಡ್ರೆ ವಿಂಗ್ ಇನ್ಸ್ಟಿಟ್ಯೂಟ್’. ಹೀಗೆ, ರಾಧಾಮಣಿ ಅಮ್ಮ ೨೦೧೪ರ ಹೊತ್ತಿಗೆ ಬಸ್ಸು, ಟ್ರಕ್, ಜೆಸಿಬಿ, ಫೋರ್ಕ್ ಲಿಫ್ಟ್, ಕ್ರೇನ್, ಎಕ್ಸ್‌ಕೆವೆಟರ್, ಟ್ರೆ ಲರ್ ಹಾಗೂ ಟ್ರಾಕ್ಟರ್ ಮೊದಲಾಗಿ ಹನ್ನೊಂದು ರೀತಿಯ ಭಾರದ ವಾಹನಗಳನ್ನು ಚಲಾಯಿಸುವ ಲೈಸೆನ್ಸ್ ಪಡೆದರು. ಅವರ ಈ ಡ್ರೆ ವಿಂಗ್ ಸಾಹಸ ೨೦೨೨ರಲ್ಲಿ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ದಾಖಲಾಯಿತು. ‘ಯೆಲ್ಲೊ ಡಾಟ್’ ಕೊಡುವ ‘ಇನ್ಸ್ಪಿರೇಶನಲ್ ಪರ್ಸನಾಲಿಟಿ ಆಫ್ ದಿ ಇಯರ್’ ಪ್ರಶಸ್ತಿಯನ್ನೂ ಪಡೆದರು.

ಅಂದು ರಾಧಾಮಣಿ ಅಮ್ಮ ಅಂಬಾಸಿಡರ್ ಕಾರು ಚಲಾಯಿಸುವುದನ್ನು ಕಂಡು ಮನರಂಜನೆ ಪಡೆಯುತ್ತಿದ್ದ ಕೇರಳಿಗರು ಇಂದು ಪುರುಷರೂ ಹೆದರುವ ಜೆಸಿಬಿ, ಕ್ರೇನ್, ಎಕ್ಸ್‌ಕೇವಟರ್ ಮೊದಲಾದ ಅತೀ ಭಾರದ ವಾಹನಗಳನ್ನು ಲೀಲಾಜಾಲವಾಗಿ ಚಲಾಯಿಸುವ ೭೫ರ ಈ ಹಿರಿಯಜ್ಜಿಯನ್ನು ಗೌರವ ಹಾಗೂ ಹೆಮ್ಮೆಯಿಂದ ಕಾಣುತ್ತಾರೆ. ಅವರನ್ನು ಕಂಡು ಸ್ಛೂತಿಗೊಂಡ ಆನೇಕ ಮಹಿಳೆಯರು ಭಾರದ ವಾಹನ ಚಾಲನೆ ಕಲಿಯಲು ಅವರ ಡ್ರೆ ವಿಂಗ್ ಸ್ಕೂಲ್ ಸೇರಿದ್ದಾರೆ. ‘ನೀವು ಮನಸ್ಸು ಮಾಡಿದರೆ ಈ ಜಗತ್ತಿನಲ್ಲಿ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ’ ಎನ್ನುವ ಮಣಿ ಅಮ್ಮನನ್ನು ಕಂಡು ಯಾರು ತಾನೇ ಸ್ಛೂರ್ತಿಗೊಳ್ಳದಿರುವರು!

” ಅಂದು ರಾಧಾಮಣಿ ಅಮ್ಮ ಅಂಬಾಸಿಡರ್ ಕಾರು ಚಲಾಯಿಸುವುದನ್ನು ಕಂಡು ಮನರಂಜನೆ ಪಡೆಯುತ್ತಿದ್ದ ಕೇರಳಿಗರು ಇಂದು ಪುರುಷರೂ ಹೆದರುವ ಜೆಸಿಬಿ, ಕ್ರೇನ್, ಎಕ್ಸ್‌ಕೇವಟರ್ ಮೊದಲಾದ ಅತೀ ಭಾರದ ವಾಹನಗಳನ್ನು ಲೀಲಾಜಾಲವಾಗಿ ಚಲಾಯಿಸುವ ೭೫ರ ಈ ಹಿರಿಯಜ್ಜಿಯನ್ನು ಗೌರವ ಹಾಗೂ ಹೆಮ್ಮೆಯಿಂದ ಕಾಣುತ್ತಾರೆ.”

ಪಂಜು ಗಂಗೊಳ್ಳಿ 

ಆಂದೋಲನ ಡೆಸ್ಕ್

Recent Posts

ಭಣಗುಡುತ್ತಿದ್ದ ರಾಮನಗುಡ್ಡ ಕೆರೆಗೆ ಜೀವಕಳೆ: 30 ವರ್ಷಗಳ ಬಳಿಕ ರೈತರ ಮೊಗದಲ್ಲಿ ಹರ್ಷ

ಮಹಾದೇಶ್‌ ಎಂ ಗೌಡ ಹನೂರು: ಮಳೆಯನ್ನೇ ಆಶ್ರಯಿಸಿ ಬೆಳೆಯಬೇಕಿದ್ದ ಸ್ಥಿತಿ, ಕುಸಿಯುತ್ತಿರುವ ಅಂತರ್ಜಲದಿಂದ ಪಡಿಪಟಾಲು ಪಡುತ್ತಿದ್ದ ರೈತರ ಕಷ್ಟ ಕೊನೆಗೂ…

12 mins ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಎವ್ಗನ್ ಬಾವ್ಚಾರ್ ಎಂಬ ಕಣ್ಣಿಲ್ಲದ ಫೋಟೋಗ್ರಾಫರ್!

ಪಂಜು ಗಂಗೊಳ್ಳಿ  ನೂರಾರು ಜನ ವಿಶೇಷಚೇತನರಿಗೆ ಫೋಟೋಗ್ರಫಿ ತರಬೇತಿ ಎವ್ಗನ್ ಬಾವ್ಚಾರ್ ೧೯೪೬ರಲ್ಲಿ ಸ್ಲೊವೇನಿಯಾ (ಆಗ ಯುಗೊಸ್ಲೇವಿಯಾ)ದಲ್ಲಿ ಹುಟ್ಟಿದರು. ಏಳು…

3 hours ago

ಓದುಗರ ಪತ್ರ: ಕಳ್ಳಸಾಗಣೆ ಕಪಿಮುಷ್ಟಿಯಲ್ಲಿ ದೇಶದ ಆರ್ಥಿಕತೆ

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಅಕ್ರಮ ಸಿಗರೇಟ್ ಮಾರುಕಟ್ಟೆಯು ವಾರ್ಷಿಕವಾಗಿ ಸುಮಾರು ರೂ.೧೫,೦೦೦ ಕೋಟಿಗೂ ಅಧಿಕ ನಷ್ಟವನ್ನು ಸರ್ಕಾರಕ್ಕೆ ಉಂಟುಮಾಡುತ್ತಿದೆ.…

4 hours ago

ಓದುಗರ ಪತ್ರ: ದ್ವಿಚಕ್ರವಾಹನಗಳಿಗೆ ದರ್ಪಣ(ಕನ್ನಡಿ) ಕಡ್ಡಾಯವಾಗಲಿ

ದ್ವಿಚಕ್ರ ವಾಹನಗಳಿಗೆ ಸಂಚಾರ ನಿಯಮದಂತೆ ಎರಡೂ ಕಡೆ ದರ್ಪಣವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಯಾರು ಈ ನಿಯಮವನ್ನು ಉಲ್ಲಂಘಿಸುತ್ತಾರೋ ಅವರಿಗೆ ಸಂಚಾರ…

4 hours ago

ಓದುಗರ ಪತ್ರ: ವಾಹನ ನಿಲುಗಡೆ ನಿಷೇಧಿಸಿ

ಮೈಸೂರಿನ ಕುವೆಂಪುನಗರದ ನೃಪತುಂಗ ರಸ್ತೆಯ ಶಾಂತಿ ಸಾಗರ್ ಕಾಂಪ್ಲೆಕ್ಸ್ ನ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಮದ್ದೂರು ವಡೆ ಸೆಂಟರ್ ಮತ್ತು…

4 hours ago

ರಸ್ತೆಗಳು ಅಧ್ವಾನ; ಸವಾರರು ಹೈರಾಣ!

ಪ್ರಶಾಂತ್ ಎಸ್. ಮೈಸೂರು: ನಗರ ಹೊರವಲಯದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ರಸ್ತೆಗಳ ದುಸ್ಥಿತಿಯಿಂದಾಗಿ ವಾಹನಗಳ ಸವಾರರು ಜೀವವನ್ನು…

4 hours ago