ಅಂಕಣಗಳು

ಸ್ವತಃ ಕಣ್ಣಿಲ್ಲದಿದ್ದರೂ ಸಾವಿರಾರು ಅಂಧರ ಕಣ್ಣಾದ ಮಹಾಂತೇಶ್

೫೫,೦೦೦ಕ್ಕೂ ಹೆಚ್ಚು ದೃಷ್ಟಿ ವಿಶೇಷಚೇತನರ ಬಾಳಿಗೆ ಬೆಳಕಾದ ಸಮರ್ಥನಂ

೧೯೭೦ರ ಸೆಪ್ಟೆಂಬರ್‌ನಲ್ಲಿ ಬೆಳಗಾವಿಯ ಒಂದು ಚಿಕ್ಕ ಹಳ್ಳಿಯಲ್ಲಿ ಮಹಾಂತೇಶ್ ಜಿ. ಕಿವಡದಾಸಣ್ಣವರ್ ಆ ಕುಟುಂಬದ ಮೊದಲ ಮಗುವಾಗಿ ಹುಟ್ಟಿದಾಗ ಇಡೀ ಕುಟುಂಬವೇ ಸಂಭ್ರಮಿಸಿತು. ಬಂಧು ಬಾಂಧವರು, ನೆರೆ ಹೊರೆ ಯವರು, ಸ್ನೇಹಿತರನ್ನು ಆಮಂತ್ರಿಸಿ ಸಿಹಿ ಹಂಚಿ ಸಂತೋಷಪಟ್ಟಿತು. ಆದರೆ ಆ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಮಹಾಂತೇಶ್‌ಗೆ ಆರು ತಿಂಗಳಾದಾಗ ಅವರಿಗೆ ಗಂಭೀರ ಸ್ವರೂಪದ ಟೈಫಾಯಿಡ್ ತಗುಲಿತು. ಸೂಕ್ತ ವೈದ್ಯಕೀಯ ಚಿಕಿತ್ಸೆ ನಡೆದು ಅವರು ಗುಣಮುಖರಾದರು. ಆದರೆ, ಅವರ ಕಣ್ಣುಗಳ ನರಗಳು ಘಾಸಿಗೊಂಡು ಅವರು ಕುರುಡರಾದರು.

ಮಹಾಂತೇಶರ ತಂದೆ-ತಾಯಿ ಶೋಕದಲ್ಲಿ ಮುಳುಗಿದರಾದರೂ ಧೃತಿ ಗೆಡಲಿಲ್ಲ. ಏನಾದರೂ ಸರಿ ತಮ್ಮ ಮಗನ ಬದುಕು ಎಷ್ಟು ಸಾಧ್ಯವೋ ಅಷ್ಟು ಸಾಮಾನ್ಯವಾಗಿರಲು ತಾವೇನು ಮಾಡಬಹುದೋ ಅದನ್ನೆಲ್ಲವನ್ನೂ ಮಾಡಲು ತಯಾರಾದರು. ಆದರೆ, ಅವರಿಗೆ ಮುಂದೇನು ಮಾಡಬೇಕೆಂಬುದರ ಸ್ಪಷ್ಟ ಚಿತ್ರಣವಿರಲಿಲ್ಲ. ಏಕೆಂದರೆ, ಅವರಿದ್ದ ಹಳ್ಳಿ ಅಥವಾ ಅಕ್ಕಪಕ್ಕದ ನಗರ ಪ್ರದೇಶಗಳಲ್ಲಿ ಒಬ್ಬ ಕುರುಡು ಬಾಲಕನಿಗೆ ನೆರವಾಗಬಲ್ಲ ಶಾಲೆಯಾಗಲಿ, ಶಿಕ್ಷಕರಾಗಲಿ ಅಥವಾ ಮಾರ್ಗದರ್ಶಕರಾಗಲಿ ಇರಲಿಲ್ಲ.

ಮಹಾಂತೇಶರ ತಂದೆ-ತಾಯಿ ಹಾಗೂ ಕುಟುಂಬದ ಇತರ ಸದಸ್ಯರು ಮಹಾಂತೇಶರನ್ನು ಎಷ್ಟು ಪ್ರೀತಿಸುತ್ತಿದ್ದರೆಂದರೆ ಅವರು ಮಹಾಂತೇಶರ ಕುರುಡುತನ ಮಹಾಂತೇಶರಿಗೆ ಒಂದು ಮಿತಿಯಾಗದಂತೆ ನೋಡಿಕೊಳ್ಳ ತೊಡಗಿದರು. ಕುಟುಂಬದ ಇತರ ಮಕ್ಕಳು ತಾವು ಆಡುವ ಆಟಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು ಮಹಾಂತೇಶರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುತ್ತಿದ್ದರು. ಮನೆಯಲ್ಲಿ ನಡೆಯುವ ಎಲ್ಲಾ ಮಾತುಕತೆಗಳಲ್ಲಿ ಮಹಾಂತೇಶ್ ಒಳಗೊಳ್ಳುವಂತೆ ಮಾಡುತ್ತಿದ್ದರು. ಅಕ್ಕಪಕ್ಕದ ಯಾವುದೇ ಊರಲ್ಲಿ ಹಬ್ಬ ಜಾತ್ರೆಗಳು ನಡೆಯಲಿ ಅವರು ಮಹಾಂತೇಶರನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಹಾಗೆಂದು ಅವರು ಯಾವತ್ತೂ ಮಹಾಂತೇಶರನ್ನು ಅಗತ್ಯಕ್ಕಿಂತ ಹೆಚ್ಚಾಗಿ ಜೋಪಾನವಾಗಿ ನೋಡದಂತೆ ಎಚ್ಚರ ವಹಿಸುತ್ತಿದ್ದರು.

ಇದನ್ನು ಓದಿ: ಮುಡಾ ಮಾಜಿ ಆಯುಕ್ತ ದಿನೇಶ್ ಇಡಿ ವಶಕ್ಕೆ

ಆದರೆ, ಮನೆಯ ಹೊರಗಿನ ಪ್ರಪಂಚ ಮಹಾಂತೇಶರಿಗೆ ಅತ್ಯಂತ ಕಠಿಣವಾಗಿತ್ತು. ಅವರ ಅಂಧತ್ವದಿಂದಾಗಿ ಯಾವ ಶಾಲೆಯೂ ಅವರನ್ನು ಸೇರಿಸಿಕೊಳ್ಳಲು ಒಪ್ಪಲಿಲ್ಲ. ಯಾವ ಶಿಕ್ಷಕರೂ ಅವರಿಗೆ ಕಲಿಸಲು ಮುಂದಾಗಲಿಲ್ಲ. ಮಹಾಂತೇಶರ ತಂದೆತಾಯಿ ಒಂದು ಶಾಲೆಯ ಮುಖ್ಯೋಪಾಧ್ಯಾಯರ ಬಳಿಗೆ ಹೋಗಿ ತಮ್ಮ ಮಗನನ್ನು ಶಾಲೆಗೆ ಅಧಿಕೃತವಾಗಿ ಸೇರಿಸಿಕೊಳ್ಳದಿದ್ದರೂ ಪರವಾಗಿಲ್ಲ, ಅವನನ್ನು ತರಗತಿಯಲ್ಲಿ ಕೂರಿಸಿಕೊಳ್ಳಲು ಒಪ್ಪುವಂತೆ ಕೇಳಿಕೊಂಡ ಫಲವಾಗಿ ಮಹಾಂತೇಶ ಒಂದು ಶಾಲೆಗೆ ಹೋಗತೊಡಗಿದರು. ಆ ಶಾಲೆಯಲ್ಲಿ ಅವರ ಯಾವ ಅಧಿಕೃತ ದಾಖಲಾತಿಯೂ ಇರಲಿಲ್ಲ. ಪ್ರತಿದಿನ ಶಿಕ್ಷಕರು ಹಾಜರಿ ತೆಗೆದುಕೊಳ್ಳುವಾಗ ಬೇರೆ ಮಕ್ಕಳ ಹೆಸರನ್ನು ಕರೆಯುವಂತೆ ಮಹಾಂತೇಶರ ಹೆಸರನ್ನು ಕರೆಯುತ್ತಿರಲಿಲ್ಲ. ತನ್ನ ಅಕ್ಕಪಕ್ಕದ ಮಕ್ಕಳು ಯಾವ ತರಗತಿಗಳಿಗೆ ಹೋಗುತ್ತಿದ್ದರೋ ಆ ತರಗತಿಗಳಿಗೆ ಮಹಾಂತೇಶ ಹೋಗಿ ಕಟ್ಟಕಡೆಯ ಬೆಂಚಿನಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತಿದ್ದರು.

ಅಂತಹ ನಿರಾಶಾದಾಯಕ ಹಾಗೂ ಪ್ರತ್ಯೇಕತಾ ವಾತಾವರಣದಲ್ಲೂ ಬಾಲಕ ಮಹಾಂತೇಶರ ಕುತೂಹಲದ ಮನೋಭಾವಕ್ಕೇನೂ ಧಕ್ಕೆ ಬರಲಿಲ್ಲ. ಆದರೆ, ಅವರ ಲಕ್ಷ ವನ್ನು ಸೆಳೆದ ವಿಚಾರ ತರಗತಿಗಳ ಪಾಠವಾಗಿರಲಿಲ್ಲ. ಬದಲಿಗೆ, ಕ್ರಿಕೆಟ್ ಕಾಮೆಂಟರಿ! ರೇಡಿಯೋಗಳಲ್ಲಿ ಬರುತ್ತಿದ್ದ ಇಂಗ್ಲಿಷ್ ಕಾಮೆಂಟರಿಗಳು ಮಹಾಂತೇಶರಿಗೆ ಅರ್ಥವಾಗದಿದ್ದರೂ ಅವುಗಳ ದನಿ ಮತ್ತು ಧಾಟಿ ಅವರನ್ನು ತೀವ್ರವಾಗಿ ಸೆಳೆಯಿತು. ಮನೆಗೆ ಬಂದ ನಂತರ ಅವರು ಕ್ರಿಕೆಟ್ ಕಾಮೆಂಟರಿ ಹೇಳುವುದನ್ನು ಅನುಕರಿಸುತ್ತಿದ್ದರು. ಹೀಗೆ ಅನುಕರಿಸುವ ಮೂಲಕವೇ ಅವರಿಗೆ ಇಂಗ್ಲಿಷ್ ಭಾಷೆಯ ಪರಿಚಯವಾಗತೊಡಗಿತು. ಇದೇ ಮುಂದೆ ಅವರ ಭವಿಷ್ಯದ ಅಡಿಗಲ್ಲಾಗುವುದರ ಜೊತೆಗೆ ಅವರಂತಹ ಸಾವಿರಾರು ಅಂಧರ ಬಾಳಿನ ಬೆಳಕಾಯಿತು.

೧೯೮೧ರಲ್ಲಿ ಒಂದು ಅನಿರೀಕ್ಷಿತ ಘಟನೆ ನಡೆಯಿತು. ಮಹಾಂತೇಶ್ ಹೀಗೆ ಒಂದು ತರಗತಿಯ ಹಿಂದಿನ ಬೆಂಚಲ್ಲಿ ಕುಳಿತುಕೊಂಡಿದ್ದರು. ಒಬ್ಬರು ಸ್ಕೂಲ್ ಇನ್ಸ್‌ಪೆಕ್ಟರ್ ಆ ಶಾಲೆಗೆ ಬಂದರು. ಹಿಂದಿನ ಬೆಂಚಲ್ಲಿ ಕುಳಿತು ತನ್ನಷ್ಟಕ್ಕೆ ತಾನು ಒಂದು ಗಣಿತ ಸಮಸ್ಯೆಯನ್ನು ಲೀಲಾಜಾಲವಾಗಿ ಬಿಡಿಸುತ್ತಿದ್ದ ಮಹಾಂತೇಶ ಅವರಿಗೆ ಕಾಣಿಸಿದರು. ಮಹಾಂತೇಶ ಆ ಶಾಲೆಯ ಅಧಿಕೃತ ವಿದ್ಯಾರ್ಥಿಯಲ್ಲ ಎಂಬ ವಿಚಾರ ತಿಳಿದು ಅವರು ಬಹಳ ಆಶ್ಚರ್ಯಪಟ್ಟರು. ಅದೇ ದಿನ ಅವರು ಮಹಾಂತೇಶರ ಮನೆಗೆ ಹೋಗಿ, ಅವರ ಹೆತ್ತವರೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ಅಂಧರಿಗಾಗಿ ನಡೆಸಲ್ಪಡುವ ‘ರಮಣ ಮಹರ್ಷಿ ಅಕಾಡೆಮಿ’ ಶಾಲೆಗೆ ಅವರನ್ನು ಸೇರಿಸಿದರು. ಅದು ಮಹಾಂತೇಶರ ಬದುಕಿನ ಪಥವನ್ನು ಬದಲಾಯಿಸಿತು.

‘ರಮಣ ಮಹರ್ಷಿ ಅಕಾಡೆಮಿ’ ಶಾಲೆಯ ವಾತಾವರಣ ಮಹಾಂತೇಶ ಆವರೆಗೆ ಹೋದ ಶಾಲೆಗಳ ವಾತಾವರಣಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಅಲ್ಲಿ ಅಂಧತ್ವವನ್ನು ಒಂದು ಸಮಸ್ಯೆಯೆಂತೆಯೇ ನೋಡಲಾಗುತ್ತಿರಲಿಲ್ಲ. ಅಲ್ಲಿ ಪುಸ್ತಕಗಳಿಂದ ಹಿಡಿದು ಕ್ರೀಡೆ, ಸಂಗೀತ ಮೊದಲಾದವುಗಳೆಲ್ಲ ಮಹಾಂತೇಶರ ಕೈಗೆಟುಕುವಂತಿದ್ದವು. ಅಂತಹ ವಾತಾವರಣದಲ್ಲಿ ಮಹಾಂತೇಶ್ ತನ್ನನ್ನು ಸಂಪೂರ್ಣವಾಗಿ ಕಲಿಕೆಯಲ್ಲಿ ಮುಳುಗಿಸಿಕೊಂಡರು. ಎಷ್ಟೆಂದರೆ, ಹತ್ತು ವರ್ಷಗಳ ಶಾಲಾ ಶಿಕ್ಷಣವನ್ನು ಕೇವಲ ಆರು ವರ್ಷಗಳಲ್ಲಿ ಮುಗಿಸಿದರು. ಅಲ್ಲಿ ಅವರು ಶಾಲಾ ಶಿಕ್ಷಣವಲ್ಲದೆ ನಾಟಕ, ಸಂಗೀತ, ಕ್ರಿಕೆಟ್ ಮೊದಲಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೯೮೬ ರಲ್ಲಿ ಒಂದು ಶೈಕ್ಷಣಿಕ ವಿನಿಮಯ ಕಾರ್ಯಕ್ರಮದಡಿ ಇಂಗ್ಲೆಂಡಿಗೆ ಹೋಗುವ ಅವಕಾಶವನ್ನೂ ಪಡೆದರು. ಇಂಗ್ಲೆಂಡ್ ಪ್ರವಾಸ ಮಹಾಂತೇಶರಿಗೆ ಬದುಕಿನ ಹೊಸ ಮಜಲನ್ನು ತೋರಿಸಿತು. ಅಲ್ಲಿ ಅವರು ಮೊದಲ ಬಾರಿಗೆ ತಮ್ಮಂತಹ ಅಂಧರು ವಕೀಲರು, ಉಪನ್ಯಾಸಕರು, ಐಟಿ ಉದ್ಯೋಗಿಗಳು ಮೊದಲಾಗಿ ಇತರ ಸಾಮಾನ್ಯರಿಗೆ ಸರಿಸಮಾನರಾಗಿ ಕೆಲಸ ಮಾಡುವುದನ್ನು ಕಂಡರು. ಆ ಅನುಭವ ಅವರಿಗೆ ತಮ್ಮ ಭವಿಷ್ಯವನ್ನು ರೂಪಿಸುವ ಮೆಟ್ಟಿಲಾಯಿತು. ಮಹಾಂತೇಶ್ ಮುಂದೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಸೇರಿದರು. ಅಲ್ಲಿನ ವಾತಾವರಣ ಹೇಗಿತ್ತೆಂದರೆ, ವಿಶೇಷ ಚೇತನ ವ್ಯಕ್ತಿಗಳಿಗೆ ಅನುಕೂಲಕರವಾದ ಯಾವ ವ್ಯವಸ್ಥೆಯೂ ಅಲ್ಲಿ ಇರಲಿಲ್ಲ. ಶಿಕ್ಷಕರಿಗಾಗಲೀ, ಸಿಬ್ಬಂದಿಗಳಿಗಾಗಲೀ ಅಂಗವಿಕಲ ವ್ಯಕ್ತಿಗಳಿಗೆ ಹೇಗೆ ಸಹಕರಿಸಬೇಕು ಎಂಬುದೂ ತಿಳಿದಿರಲಿಲ್ಲ.

ಇದನ್ನು ಓದಿ: ಯುವ ಸಂಭ್ರಮ | ಮಾದಕ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸಿದ ನೃತ್ಯ ರೂಪಕ

ಮಹಾಂತೇಶ ಬಳಸುತ್ತಿದ್ದ ಬ್ರೈಲ್ ಲಿಪಿಯ ಸದ್ದನ್ನು ಅವರ ತರಗತಿಗಳಲ್ಲಿ ಉಳಿದವರು ಕಿರಿಕಿರಿ ಎಂಬಂತೆ ನೋಡುತ್ತಿದ್ದರು. ಎಲ್ಲರೂ ಅವರೊಂದಿಗೆ ಮಾತಾಡಲು ಹಿಂಜರಿಯುತ್ತಿದ್ದರು. ಅಂತಹ ವಾತಾವರಣದಲ್ಲೂಮಹಾಂತೇಶ ಇಂಗ್ಲಿಷಿನಲ್ಲಿ ಎಂಫಿಲ್ ಮಾಡಿದರು. ನಂತರ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷಲ್ಲಿ ಮಾಸ್ಟರ‍್ಸ್ ಮುಗಿಸಿದರು. ಮುಂದೆ, ಅವರಿಗೆ ನಾರ್ತ್ ಕ್ಯಾರೋಲಿನಾದ ವಿಶ್ವವಿದ್ಯಾಲಯದಿಂದ ಉಪನ್ಯಾಸಕ ಹುದ್ದೆಗೆ ಆಮಂತ್ರಣ ಬಂದು, ಅಲ್ಲಿ ಅವರು ಐದು ವರ್ಷಗಳ ಕಾಲ ಕೆಲಸ ಮಾಡಿದರು. ೧೯೯೭ರ ಹೊತ್ತಿಗೆ ಮಹಾಂತೇಶ್ ತಮ್ಮ ಬದುಕಿನ ಗುರಿ ಏನೆಂಬುದನ್ನು ಸ್ಪಷ್ಟವಾಗಿ ಗುರುತಿಸಿಕೊಂಡರು. ಆ ವರ್ಷ ಅವರು, ತಮ್ಮಂತಹ ಲಕ್ಷಾಂತರ ಅಂಗವಿಕಲ ವ್ಯಕ್ತಿಗಳಿಗೆ ಸೂಕ್ತ ಶಿಕ್ಷಣ ಹಾಗೂ ಉದ್ಯೋಗ ನೀಡುವ ಸಲುವಾಗಿ ಕೆಲವು ಸಮಾನ ಮನಸ್ಕರನ್ನು ಸೇರಿಸಿಕೊಂಡು ‘ಸಮರ್ಥನಂ’ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದರು. ಅಂದು ಶುರುವಾದ ಸಮರ್ಥನಂ ಇಂದಿನವರೆಗೆ ಕನಿಷ್ಠವೆಂದರೆ ೫೫,೦೦೦ಕ್ಕೂ ಹೆಚ್ಚು ಅಂಗವಿಕಲರಿಗೆ ಶಿಕ್ಷಣ, ವಸತಿ ಹಾಗೂ ತರಬೇತಿ ನೀಡಿ, ಅವರಲ್ಲಿ ಸುಮಾರು ೩೫,೦೦೦ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಡಿಸಿದೆ. ೯೦೦ ಕಾಲೇಜುಗಳು ಹಾಗೂ ೧೦೦ ವಿಶ್ವವಿದ್ಯಾಲಯಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡು ಅಂಗವಿಕಲ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಲ್ಯಾಪ್‌ಟಾಪ್, ಸ್ಕ್ರೀನ್ ರೀಡರ‍್ಸ್, ಸ್ಮಾರ್ಟ್‌ಫೋನ್ ಮೊದಲಾದವುಗಳನ್ನು ನೀಡಿದೆ. ಅಂಗವಿಕಲರಿಗಾಗಿ ಶಾಲೆ, ಹಾಸ್ಟೆಲ್‌ಗಳನ್ನು ಕಟ್ಟಿಸಿದೆ.

ಮಹಾಂತೇಶ್‌ರ ಬಾಲ್ಯದ ರೇಡಿಯೋ ಕ್ರಿಕೆಟ್ ಕಾಮೆಂಟರಿ ಹುಚ್ಚು ಅವರನ್ನು ಯಾವತ್ತೂ ಬಿಟ್ಟಿರಲಿಲ್ಲ. ೧೯೯೦ರಲ್ಲಿ ಅವರು ಹಲವಾರು ಅಂಧರ ಕ್ರಿಕೆಟ್ ಚಾಂಪಿಯನ್‌ಶಿಪ್‌ಗಳಲ್ಲಿ ಆಡಿ, ೧೯೯೪ರಲ್ಲಿ ತಮ್ಮ ತಂಡದ ನಾಯಕರೂ ಆಗಿದ್ದರು. ೨೦೧೦ರಲ್ಲಿ ದೇಶದಲ್ಲಿ ಅಂಧರ ಕ್ರಿಕೆಟ್ ಆಟವನ್ನು ನೋಡಿಕೊಳ್ಳುತ್ತಿದ್ದ ಕ್ರಿಕೆಟ್ ಬೋರ್ಡ್ ಮುಚ್ಚುವ ಸ್ಥಿತಿ ತಲುಪಿದಾಗ ಮಹಾಂತೇಶ್ ತಮ್ಮೊಬ್ಬ ಸ್ನೇಹಿತರನ್ನು ಜೊತೆಯಲ್ಲಿರಿಸಿಕೊಂಡು ಆ ಬೋರ್ಡನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ಮುಂದೆ, ಭಾರತ ಅಂಧರ ಕ್ರಿಕೆಟ್ ತಂಡ ಮೂರು ಟಿ-ಟ್ವೆಂಟಿ ವಿಶ್ವಕಪ್, ಎರಡು ಏಕದಿನ ವಿಶ್ವಕಪ್ ಮತ್ತು ಏಷಿಯಾ ಕಪ್ ಜಯಿಸಿತು. ಇಂದು ಭಾರತದಲ್ಲಿ ೩೦,೦೦೦ಕ್ಕೂ ಹೆಚ್ಚು ಅಂಧ ಮಹಿಳಾ ಹಾಗೂ ಪುರುಷ ಕ್ರಿಕೆಟಿಗರು ಸಕ್ರಿಯರಾಗಿದ್ದಾರೆ. ಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾಗಿರುವ ಮಹಾಂತೇಶ್‌ರ ಮುಂದಿನ ಗುರಿ ಎಲ್ಲರನ್ನೂ ಒಳಗೊಳ್ಳುವ ಒಂದು ಜಾಗತಿಕ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನಲ್ಲಿ ಎಲ್ಲಾ ರೀತಿಯ ಅಂಗವಿಕಲರಿಗೆ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುವ ಒಂದು ಸ್ಪೋರ್ಟ್ಸ್ ಸಿಟಿಯನ್ನು ಹುಟ್ಟು

” ಇಂಗ್ಲೆಂಡ್ ಪ್ರವಾಸ ಮಹಾಂತೇಶರಿಗೆ ಬದುಕಿನ ಹೊಸ ಮಜಲನ್ನು ತೋರಿಸಿತು. ಅಲ್ಲಿ ಅವರು ಮೊದಲ ಬಾರಿಗೆ ತಮ್ಮಂತಹ ಅಂಧರು ವಕೀಲರು, ಉಪನ್ಯಾಸಕರು, ಐಟಿ ಉದ್ಯೋಗಿಗಳು ಮೊದಲಾಗಿ ಇತರ ಸಾಮಾನ್ಯರಿಗೆ ಸರಿಸಮಾನರಾಗಿ ಕೆಲಸ ಮಾಡುವುದನ್ನು ಕಂಡರು.”

-ಪಂಜು ಗಂಗೊಳ್ಳಿ 

ಆಂದೋಲನ ಡೆಸ್ಕ್

Recent Posts

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

7 mins ago

ಮೈಶುಗರ್‌ ಶಾಲಾ ಶಿಕ್ಷಕರಿಗೆ ನೆರವಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್‌ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…

32 mins ago

ಸಮಾನತೆ ತರಲೆಂದೇ ಗ್ಯಾರಂಟಿ ಯೋಜನೆಗೆ ಕೋಟಿಗಟ್ಟಲೇ ಹಣ ಖರ್ಚಿ ಮಾಡ್ತಿರೋದು: ಸಿಎಂ ಸಿದ್ದರಾಮಯ್ಯ

ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…

58 mins ago

ಟಿಬಿ ಡ್ಯಾಂ ಕ್ರಸ್ಟ್‌ ಗೇಟ್‌ ಅಳವಡಿಕೆಗೆ ಚಾಲನೆ

ಬಳ್ಳಾರಿ: ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜಲಾಶಯದ ಮೇಲ್ಬಾಗದಲ್ಲಿ ಗೇಟ್‌ ಮುಂದೆ…

1 hour ago

ಮೈಸೂರು| ಮದುವೆ ಆಗುವುದಾಗಿ ನಂಬಿಸಿ ವಕೀಲೆಗೆ ಮೋಸ

ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳಾ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಕೀಲ…

2 hours ago

ಪುರಾವೆ ಇಲ್ಲದೇ ಯಾರ ಮೇಲೂ ತನಿಖೆ ಮಾಡಲ್ಲ: ಬಿ.ವೈ.ವಿಜಯೇಂದ್ರ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…

2 hours ago