ಆಂಗ್ಲರಿಗೆ ವ್ಯಾಪಾರಕ್ಕಾಗಿ ಒಳಗೆ ಬಿಟ್ಟುಕೊಳ್ಳಲು ಭಾರತದ ದೊರೆಗಳು ಒಂದೊಮ್ಮೆ ನಿರಾಕರಿಸಿದ್ದರೆ ಏನಾಗಿರುತ್ತಿತ್ತು? ವಾಸ್ಕೊಡಗಾಮನು ಲಿಸ್ಬೆನ್ ಬಂದರಿನಿಂದ ಸಾಂಬಾರ ಪದಾರ್ಥಗಳ ತಲಾಶಿನಲ್ಲಿ ನೌಕಾಯಾನ ಆರಂಭಿಸಿದಿದ್ದರೆ ಆಫ್ರಿಕಾ ಏಶ್ಯಾಗಳ ಚಹರೆ ಈಗಿರುವಂತೆ ಇರುತ್ತಿತ್ತೇ? ಮಕ್ಕಳು ಸಾಕೆಂದು ಗರ್ಭಪಾತ ಮಾಡಿಸಿಕೊಳ್ಳಲು ಹೋದ ಮಹಿಳೆ, ಆದಿನ ವೈದ್ಯರು ಸಿಗದ ಕಾರಣ ಮರಳಿ ಬಂದಿದ್ದರಲ್ಲೇ, ಗಿರೀಶ ಕಾರ್ನಾಡರು ಲೋಕಕ್ಕೆ ದೊರೆತಿದ್ದು. ಇಂತಹುದೇ ಆಕಸ್ಮಿಕ ತಿರುವುಗಳು ಹುಲುಮಾನವರ ಬದುಕಿನಲ್ಲಿ ನಡೆಯುತ್ತವೆ. ಅಪ್ಪ ಹಳ್ಳಿಯನ್ನು ಬಿಟ್ಟ ಮತ್ತು ನಮ್ಮನ್ನು ಕನ್ನಡ ಸಾಲೆಗೆ ಸೇರಿಸಿದ ನಿರ್ಧಾರ ನನ್ನ ಬಾಳಪಥವನ್ನೇ ಬದಲಿಸಿತೆನ್ನಬಹುದು.
ಹಳ್ಳಿಯಲ್ಲಿ ಅಪ್ಪನ ಕಮ್ಮಾರಿಕೆ ಅಷ್ಟೊಂದು ಬರಕತ್ತಾಗಲಿಲ್ಲ. ಹೀಗಾಗಿ ನಮ್ಮ ಕುಟುಂಬ ಮೂರು ಮೈಲಿ ದೂರದ ಪಟ್ಟಣ ತರೀಕೆರೆಗೆ ವಲಸೆ ಬಂದಿತು. ಹತ್ತು ಹಳ್ಳಿಗಳಿಂದ ಬರುವ ಹಾದಿಗಳೆಲ್ಲ ಪಟ್ಟಣವನ್ನು ಪ್ರವೇಶಿಸುವ ಹೊರವಲಯದಲ್ಲಿ ಕುಲುಮೆಮನೆ ಸ್ಥಾಪನೆಯಾಯಿತು. ಅಲ್ಲೇ ಹತ್ತಿರವಿದ್ದ ಗಾಳಿಹಳ್ಳಿಯ ಸರ್ಕಾರಿ ಪ್ರಾಥಮಿಕ ಪಾಠಶಾಲೆಗೆ ನನ್ನನ್ನೂ ಅಣ್ಣನನ್ನೂ ಅಪ್ಪ ಸೇರಿಸಿದನು. ಅಮ್ಮ ಹೇಳುತ್ತಿದ್ದ ಪ್ರಕಾರ, ಮುಂಜಾನೆ ೯ ಗಂಟೆಯ ನಂತರ ನನ್ನ ಸಿಂಗಾರ ಆರಂಭವಾಗುತ್ತಿತ್ತು. ಅಮ್ಮನೊ ಅಕ್ಕನೊ, ನನ್ನ ಮೈತೊಳೆದು, ಬಟ್ಟೆಯುಡಿಸಿ, ನನ್ನ ತಲೆಬಾಚಿ ಕುಪ್ಪಿ ಕೂರಿಸಿ, ಪಾಂಡ್ಸ್ ಪೌಡರು ಮೆತ್ತಿ, ಕೆನ್ನೆಗೆ ಕಪ್ಪುಚುಕ್ಕೆ ಇಡುತ್ತಿದ್ದರಂತೆ. ಎಲ್ಲ ಪ್ರಸಾದನ ಮುಗಿದು ಸ್ಲೇಟು-ಪುಸ್ತಕದ ಬ್ಯಾಗನ್ನು ಹೆಗಲಿಗೆ ಸಿಕ್ಕಿಸಿ ಸವಾರಿ ಇನ್ನೇನು ಶಾಲೆಗೆ ಹೊರಡಬೇಕು, ಅದೇ ಹೊತ್ತಿಗೆ ನನಗೆ ಎರಡಕ್ಕೆ ಬರುತ್ತಿತ್ತಂತೆ. ಬೇಲಿಸಾಲಿಗೆ ಹೋಗಿ ಗಿಡಗಳ ಮರೆಯಲ್ಲಿ ಬಹಳ ಹೊತ್ತು ಕುಳಿತುಕೊಳ್ಳುತ್ತಿದ್ದೆನಂತೆ-ಶಾಲೆ ತಪ್ಪಿಸಲು. ಅಮ್ಮ ಬೇಲಿಯ ಗಿಡದ ಒಂದು ಕೊಲ್ಲೆಯನ್ನು ಕಿತ್ತುಕೊಂಡು ಕುಂಡೆಗೆರಡು ಬಾರಿಸಿ ಶಾಲೆಗೆ ಬಿಟ್ಟುಬರುತ್ತಿದ್ದಳಂತೆ. ಈ ಅಪ್ರಿಯ ನೆನಪನ್ನು ನಾನು ದೊಡ್ಡವನಾಗಿ ಶಿಕ್ಷಣದಲ್ಲಿ ಶ್ರೇಯಸ್ಸನ್ನು ಪಡೆದ ಮೇಲೂ ಸಂದರ್ಭಾನುಸಾರ ಉಲ್ಲೇಖಿಸಿ ಮನೆಯವರೆಲ್ಲ ನಗುತ್ತಿದ್ದರು.
ಅಮ್ಮ ಹೇಳುತ್ತಿದ್ದ ನನ್ನ ಬಾಲಲೀಲೆಯ ಕತೆಗಳು ನಿಜವಿದಿರಬಹುದು ಎಂದು ತಿಳಿದಿದ್ದು ಶಿವಮೊಗೆಯಲ್ಲಿ; ಸರ್ಕಾರಿ ಪ್ರಾಥಮಿಕ ಶಾಲೆಯ ಮುಂದೆ ಹಿಡಿದ ಬಾಡಿಗೆ ಮನೆಯ ದೆಸೆಯಿಂದ. ಅಲ್ಲಿ ಮಾತಾಪಿತರು ತಮ್ಮ ಮುದ್ದುಗೂಸುಗಳನ್ನು ಸ್ಕೂಲೆಂಬ ಸೆರೆಮನೆಗೆ ದಬ್ಬಲು ಮಾಡುತ್ತಿದ್ದ ನಾನಾ ಬಗೆಯ ಸಾಮ ಭೇದ ದಂಡನೆಗಳಿಗೆ ನಾನು ಸಾಕ್ಷಿಯಾದೆ. ಕೆಲವು ಮಕ್ಕಳು ಕಾನ್ಸಂಟ್ರೇಶನ್ ಕ್ಯಾಂಪಿನೊಳಗೆ ಹೋಗಲು ನಿರಾಕರಿಸುವ ಬಂಧಿತರಂತೆ ರೋದಿಸುತ್ತಿದ್ದವು. ಆಗ ಪೋಷಕರು ನಾನು ಕಷ್ಟಪಟ್ಟು ಸಾಕಿದ್ದ ಬೀದಿಮರಗಳಿಂದ ಭರ್ರನೆ ಕೊಂಬೆಯನ್ನು ಮುರಿದು, ಅದನ್ನು ಚಾಟಿಯನ್ನಾಗಿ ಪರಿವರ್ತಿಸಿ, ಕಂದಮ್ಮಗಳ ಬೆನ್ನಹರೆಯನ್ನು ಬಾರಿಸುತ್ತಿದ್ದರು. ಇವರು ಕೊಲ್ಲ್ಲೆಗಳನ್ನು ಕಿತ್ತುಕಿತ್ತು ಮರಗಳು ಬಹುಕಾಲ ಊರ್ಜಿತವಾಗಲಿಲ್ಲ. ಬಡಿತ ಅಳು ಕಂಬನಿ ಸಿಂಬಳ ರೋದನಗಳ ಅಪೂರ್ವ ಸಂಗಮವದು. ಮಗು ಶಾಲೆಗೆ ಹೋಗುವುದನ್ನು ‘ಕ್ರೀಪಿಂಗ್ ಲೈಕ್ ಎ ಸ್ನೈಲ್’ ಎಂದು ಶೇಕ್‌ಸ್ಪಿಯರ್ ಮಹಾಶಯನು ಬಣ್ಣಿಸಿರುವುದು ಸುಳ್ಳಲ್ಲ. ಮನೆಯೊಳಗಿದ್ದ ಅನಿರ್ಬಂಧಿತ ಸ್ವಾತಂತ್ರ್ಯ ಮತ್ತು ಬೀದಿಯಲ್ಲಿ ಹಡೆತಿರುಗುವ ಸುಖ ಕಳೆದುಕೊಂಡು ಶಾಲೆಯೆಂಬ ಶೂಲಕ್ಕೆ ಏರುವಾಗ ಸಂಕಟ ಉಕ್ಕುವುದು ಸಹಜವೇ. ಇದಕ್ಕೆ ಪ್ರೀತಿಯಿಂದ ಶಾಲೆಯಲ್ಲಿ ಕಲಿಸುವ ಬದಲು ಬೆತ್ತಧಾರಿಗಳಾದ ಶಿಕ್ಷಕರು ದಯಪಾಲಿಸುತ್ತಿದ್ದ ಬಿಸಿಬಿಸಿ ಕಜ್ಜಾಯಗಳು ಇನ್ನೊಂದು ಕಾರಣ. ಆದರೆ ಕೃಷ್ಣಪ್ಪ ಎಂಬ ನಮ್ಮ ಗಾಳಿಹಳ್ಳಿ ಶಾಲೆಯ ಮೇಷ್ಟರು ಕಪ್ಪಗೆ ದಪ್ಪಗಿದ್ದು ನಗುಮುಖವುಳ್ಳವರಾಗಿದ್ದು ನಮಗೆ ಹೊಡೆದ ನೆನಪೇ ಇಲ್ಲ. ನಾವು ಕೈಕಟ್ಟಿಕೊಂಡು ‘ಎರಡೊಂದಲಿ ಎರಡೊ ಎರಡೆರಡು ನಾಕೊ’ ಮಗ್ಗಿಯನ್ನು ರಾಷ್ಟ್ರಗೀತೆಯಂತೆ ಕೋರಸ್ಸಿನಲ್ಲಿ ಹೇಳುವಾಗ, ಆಡುಕುರಿ ಕಾಯಲು ಬಂದ ಹುಡುಗರು ಕಿಟಕಿಯಲ್ಲಿ ಇಣುಕಿ ನಿಲ್ಲುತ್ತಿದ್ದರು. ಕೃಷ್ಣಪ್ಪನವರು ಅವರನ್ನು ಓಡಿಸುತ್ತಿರಲಿಲ್ಲ. ಒಳಕರೆದು ಕೂರಿಸುತ್ತಿದ್ದರು. ಶಾಲೆಯಲ್ಲಿ ತಯಾರಾಗುತ್ತಿದ್ದ ಉಪ್ಪಿಟ್ಟನ್ನು ಅವರಿಗೂ ಕೊಡುತ್ತಿದ್ದರು. ನಾವು ಶಾಲೆ ಬಿಟ್ಟೊಡನೆ ಮನೆ ಸಿಗುವ ತನಕ ಹೋಹೋ ಎಂದು ಕಿರುಚಿಕೊಳ್ಳುತ್ತ ಬಿಡುಗಡೆಯಾದ ಬಂದಿಗಳಂತೆ ಓಡಿ ಬರುತ್ತಿದ್ದೆವು. ಮನೆಯಲ್ಲಿ ಶಾಲೆಯಲ್ಲಿ ಕಡಿದುಕಟ್ಟೆ ಹಾಕಿ ಬಂದ ನಮಗೆ ಉಪ್ಪಿಟ್ಟೊ ಮಂಡಕ್ಕಿ ಉಸುಲಿಯೊ ಕಾದಿರುತ್ತಿತ್ತು. ಅದನ್ನು ತಿಂದು ಬೀದಿಗೆ ಬಿದ್ದರೆ ಮತ್ತೆ ರಾತ್ರಿಯೂಟಕ್ಕೇ ಮನೆ ವಾಪಸಾಗುತ್ತಿದ್ದುದು.
ವಿಶೇಷವೆಂದರೆ, ಪ್ರಾಥಮಿಕ ಶಿಕ್ಷಣ ಮುಗಿಸಲು ನಾನು ಮೂರು ಶಾಲೆಗಳಿಗೆ ಮಣ್ಣು ಹೊರಬೇಕಾಯಿತು. ತಂದೆತಾಯಿಗಳ ಅಕ್ಕರೆಯಲ್ಲಿದ್ದರೆ ಮಕ್ಕಳು ದಡ್ಡರಾಗುತ್ತಾರೆಂದು ಯಾರು ದುರ್ಬೋಧೆ ಮಾಡಿದರೊ, ಅಪ್ಪ ನನ್ನನ್ನು ಎರಡನೇ ಇಯತ್ತೆಗೆ ಕಡೂರು ತಾಲೂಕಿನ ಬಾಸೂರಿನ ಶಾಲೆಗೆ ಹಾಕಿದನು. ಅಲ್ಲಿದ್ದ ಕಾವಲಿನಲ್ಲಿ ಅಮೃತಮಹಲ್ ದನಗಳನ್ನು ಸಾಕುವ ಪಶುವೈದ್ಯ ಇಲಾಖೆಯ ಫಾರಂನಲ್ಲಿ ಅಪ್ಪನ ಸುದೂರದ ತಂಗಿಯ ಮನೆಯಿತ್ತು. ದನಗಳ ಫಾರಂನಲ್ಲಿದ್ದ ಕ್ವಾಟ್ರಸುಗಳಿಂದ ನಾವು, ಎರಡು ಕಿಮೀ ದೂರದ ಪ್ರಾಥಮಿಕ ಶಾಲೆಗೆ, ಕಡಲೆ ಜೋಳ ಬೆಳೆದ ಎರೆಹೊಲಗಳಲ್ಲಿ ಹಾಯುತ್ತ, ದೊಡ್ಡದೊಂದು ಹಳ್ಳ ದಾಟಿ, ಕರಿಜಾಲಿಯ ಮುಳ್ಳನ್ನು ಮೆಟ್ಟದಂತೆ ಹುಶಾರಾಗಿ, ಒಂದು ಚಿಕ್ಕಮಟ್ಟಿಯನ್ನು ಬಳಸಿಕೊಂಡು ಹೋಗುತ್ತಿದ್ದೆವು. ಹಾದಿಯಲ್ಲಿ ಪೊದೆಯಲ್ಲಿ ಅಡಗಿದ್ದ ಮೊಲಗಳು ಛಕ್ಕನೆ ಹೊರಬಂದು ಕಿವಿ ನಿಮಿರಿಸಿಕೊಂಡು ನೆಗೆದು ಹೋಗುತ್ತಿದ್ದವು. ಕಂಕನರಿಗಳು ಅಡ್ಡವಾಗುತ್ತಿದ್ದವು. ಮಳೆಗಾಲ್ಲಿ ಕಾಲಿಗೆ ಅರ್ಧಡಿ ದಪ್ಪನೆಯ ಎರೆಮಣ್ಣಿನ ಪಾದರಕ್ಷೆಗಳು ಅಂಟಿಕೊಳ್ಳುತ್ತಿದ್ದವು. ಶಾಲೆಯಲ್ಲಿ ಮಧ್ಯಾಹ್ನಕ್ಕೆ ಅಮೆರಿಕದಿಂದ ಬರುತ್ತಿದ್ದ ಮೆಕ್ಕೆಜೋಳದ ಹಿಟ್ಟಿನಿಂದ ಮಾಡಲಾಗುತ್ತಿದ್ದ ಉಪ್ಪಿಟ್ಟನ್ನು ಕೊಡುತ್ತಿದ್ದರು. ನಮಗೆ ಶಾಲೆಯಲ್ಲಿ ಹೆಚ್ಚು ಇಷ್ಟವಾದುದು, ಅಂಗಳವನ್ನು ಅಗೆದು ಪಾತಿಕಟ್ಟಿ ನೀರುಹಾಯಿಸಿ ಮೂಲಂಗಿ ಬೆಳೆಯುವುದು. ಅದನ್ನು ಹೊತ್ತು ಊರಲ್ಲಿ ಮಾರುವುದು.
ಪ್ರಿಯಪುತ್ರನನ್ನು ಬಿಟ್ಟಿರಲಾರೆ ಎಂಬ ಅಮ್ಮನ ಹಟದಿಂದ, ನನಗೆ ಬಾಸೂರಿನಿಂದ ಹುಟ್ಟಿದೂರು ಸಮತಳದ ಪ್ರಾಥಮಿಕ ಶಾಲೆಗೆ ವರ್ಗಾವಣೆ ಆಯಿತು. ಲಿಂಗಾಯತ ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ನಾನೊಬ್ಬನೇ ಸಾಬರ ಹುಡುಗ. ನಮಗೆ ಅತ್ತಿಮೊಗ್ಗೆಯಿಂದ ಮಲ್ಲಪ್ಪ ಮೇಷ್ಟ್ರು ಬರುತ್ತಿದ್ದರು. ಕೋಲುಮುಖ. ಕೆಂಪಗೆ ತೆಳ್ಳಗೆ ಉದ್ದಕೆ ಇದ್ದರು. ಬೆಳ್ಳನೆಯ ಗರಿಗರಿ ಪಂಚೆ-ಅಂಗಿ. ಹೊಳೆವ ನಗುಮೊಗ. ಅವರು ಗೇಟಿನಲ್ಲಿ ಬಸ್ಸಿಳಿದು, ಹೊಲಗಳ ನಡುವೆ ಬೈತಲೆಯಂತೆ ಹಾದಿದ್ದ ಕಾಲುದಾರಿಯ ಮೂಲಕ ನಡೆದು ಬರುತ್ತಿದ್ದರು. ದಾರಿ ನಮ್ಮ ಹೊಲ. ನಾನು ಹೊಲದಲ್ಲಿ ಅಮ್ಮನ ಜತೆ ಮೆಣಸಿನಹಣ್ಣು ತೊಟಗುಣಿಕಾಯಿ ಟೊಮೊಟೊ ಬದನೆ ಹರಿಯುತ್ತ ಇದ್ದರೆ, ‘ಏನಮ್ಮ, ಮಗುವನ್ನು ಹೊಲಗೆಲಸಕ್ಕೆ ಹಾಕ್ಕೊಂಡಿದೀರಿ. ಸ್ಕೂಲಿಗೆ ಕಳಿಸಿ’ ಎನ್ನುವರು. ಅದಕ್ಕೆ ಅಮ್ಮ ‘ಇವತ್ತು ಮೆಣಸಿನಹಣ್ಣು ಬಿಡಿಸದಿತ್ತು ಸಾ. ಕರಕಂಬಂದೀನಿ. ನಾಳೆ ತಪ್ಪಸಲ್ಲ’ ಎನ್ನುತ್ತಿದ್ದಳು. ಮೇಷ್ಟರ ಬ್ಯಾಗಿಗೆ ಹಲಸಂದೆ ಶೇಂಗಾ ಹೀರೆಕಾಯಿ ಮುಳಗಾಯಿ ಮೆಣಿಸಿನಕಾಯಿ ತುಂಬಿ ಕೊಡುತ್ತ ನಮ್ಮ ಹುಡುಗನಿಗೆ ಚೆನ್ನಾಗಿ ನೋಡಿಕೊಳ್ರಿ’ ಎನ್ನುವಳು.
ನಾಲ್ಕೂ ತರಗತಿಗಳು ಒಂದೇ ಖೋಲಿಯಲ್ಲಿ ನಡೆಯುತ್ತಿದ್ದರಿಂದ, ಪ್ರತಿ ತರಗತಿಯ ವಿದ್ಯಾರ್ಥಿ ಎಲ್ಲರ ಪಾಠಗಳನ್ನೂ ಕೇಳಬೇಕಾಗುತ್ತಿತ್ತು.
ಇನ್‌ಸ್ಪೆಕ್ಟರ್ ಬಂದಾಗ ಹುಡುಗರ ಪರವಾಗಿ ನನ್ನನ್ನೂ, ಹುಡುಗಿಯರ ಪರವಾಗಿ ಚಂದ್ರಮ್ಮನನ್ನೂ ನಿಲ್ಲಿಸಿ ಮೇಷ್ಟ್ರು ಪಾಠ ಓದಿಸುತ್ತಿದ್ದರು. ನಾವು ಮೊದಲೇ ಗಟ್ಟಿಮಾಡಿದ್ದ ಪಾಠವನ್ನು ಬುಕ್ಕನ್ನು ನೆಪಮಾತ್ರಕ್ಕೆ ಮುಂದೆ ಹಿಡಿದು, ಬಡಬಡ ಓದುತ್ತಿದ್ದೆವು. ನಾವೆಲ್ಲ ನಾಲ್ಕನೆಯ ತರಗತಿಯ ಪರೀಕ್ಷೆಯನ್ನೂ ಸ್ಲೇಟಿನಲ್ಲೇ ಬರೆದು ಪಾಸಾದೆವು. ಪೇಪರ್ ಪೆನ್ನು ಕಂಡಿದ್ದು ತರೀಕೆರೆಯ ಮಿಡ್ಲ್‌ಸ್ಕೂಲಿಗೆ ಬಂದಾಗ. ಅಪ್ಪನ ಕೈಗೆ ಟಿಸಿ ಕೊಡುತ್ತ, ಮಲ್ಲಪ್ಪ ಮೇಷ್ಟರು ನನ್ನ ತಲೆಯ ಮೇಲೆ ಕೈಯಿಟ್ಟು ದೊಡ್ಡ ಶಾಲೆಗೆ ಹೋಗ್ತಿದೀಯಾ, ಚೆನ್ನಾಗಿ ಓದಬೇಕು. ಅಲ್ಲಿ ಕಾಲು ತೂಗಾಡಿಸಬಾರದು’ (ಬೆಂಚಿನಮೇಲೆ ಕೂತಾಗ ಕಾಲುಗಳನ್ನು ಗಾಳಿಯಲ್ಲಿ ತೂಗಾಡಿಸುವ ದುರಭ್ಯಾಸ ನನಗಿತ್ತು) ಎಂದರು. ಮಲ್ಲಪ್ಪ ಮೇಷ್ಟರು ಶಾಲೆಯನ್ನು ಸೆರೆಮನೆ ಮಾಡಿದವರಲ್ಲ. ತಾಯಪ್ರೀತಿಯಿಂದ ಆತ್ಮವಿಶ್ವಾಸ ತುಂಬಿದವರು. ಅವರ ವಾತ್ಸಲ್ಯ ತುಂಬಿದ ಹೊಳಪುಳ್ಳ ಕೋಲುಮುಖದ ಬಿಂಬ ಮನಸ್ಸಿನ ಪರದೆಯ ಮೇಲೆ ಅಚ್ಚೊತ್ತಿದೆ. ಒಮ್ಮೆ ಅತ್ತಿಮೊಗ್ಗೆಗೆ ಹೋಗಬೇಕು. ಬದುಕಿದ್ದಾರೊ ಇಲ್ಲವೊ? ಕೊನೆಯ ಪಕ್ಷ ಅವರ ಪಟವನ್ನಾದರೂ ನೋಡಬೇಕು ಅನಿಸುತ್ತಿದೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…