karnataka flag
ಪ್ರೊ.ಬಿ.ಜಯಪ್ರಕಾಶ್‌ಗೌಡ
ಡಾ.ರಾಮೇಗೌಡ, ದಿ.ಸಿಂಗಾರಿಗೌಡ ಹೆಸರಲ್ಲಿ ಗೌರವ
ವಿಮರ್ಶಕ, ಜಾನಪದ ತಜ್ಞ ಡಾ.ರಾಮೇಗೌಡ ಮತ್ತು ಸರಳ ಸಜ್ಜನ ರಾಜಕಾರಣಿ ದಿ. ಸಿಂಗಾರಿಗೌಡ ಅವರ ಹೆಸರಿನಲ್ಲಿ ಮಂಡ್ಯ ಕರ್ನಾಟಕ ಸಂಘದ ವತಿಯಿಂದ ಪ್ರತಿವರ್ಷ ಕೊಡಮಾಡುವ ‘ಡಾ.ರಾಗೌ ಸಾಹಿತ್ಯ ಪ್ರಶಸ್ತಿ’ ಹಾಗೂ ‘ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ.
ಡಾ.ರಾಗೌ ಅಲಿಯಾಸ್ ರಾಮೇಗೌಡ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರೆ, ದಿ. ಸಿಂಗಾರಿಗೌಡ ಅವರು ಪುಸ್ತಕ ಓದಿನಲ್ಲಿ ಅಪಾರ ಆಸಕ್ತಿ ಹೊಂದಿದ್ದವರು. ರಾಜಕಾರಣಿಯಾದರೂ ಸಾಹಿತಿಗಳು ಹಾಗೂ ಸಾಹಿತ್ಯ ಕ್ಷೇತ್ರವನ್ನು ಗೌರವಿಸಿದವರು. ಹಾಗಾಗಿ ಸಂಘದ ವತಿಯಿಂದ ಹಲವು ವರ್ಷಗಳಿಂದ ಈ ಇಬ್ಬರ ಹೆಸರಿನಲ್ಲಿ ಪ್ರಶಸ್ತಿಯನ್ನು ಕೊಡಲಾಗುತ್ತಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ರಾಗೌ: ೮೪ನೇ ವಸಂತಕ್ಕೆ ಪಾದಾರ್ಪಣೆ ಮಾಡಿರುವ ಡಾ.ರಾಮೇಗೌಡ ಅವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಈರೇಗೌಡನದೊಡ್ಡಿಯ ರೈತಾಪಿ ಕುಟುಂಬದಲ್ಲಿ. ಕನ್ನಡ ಎಂ.ಎ. ಮತ್ತು ಪಿಎಚ್.ಡಿ. ಪದವಿಯನ್ನು ಪಡೆದಿರುವ ಅವರು ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ೩೭ ವರ್ಷಗಳ ಸುದೀರ್ಘ ಅವಧಿಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಸಾಹಿತ್ಯ ವಲಯದಲ್ಲಿ ‘ರಾಗೌ’ ಎಂದೇ ಖ್ಯಾತರಾಗಿದ್ದಾರೆ.
ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ರಾಮೇಗೌಡರಿಗೆ ಒಂದು ವಿಶಿಷ್ಟ ಸ್ಥಾನವಿದೆ. ಮೂಲತಃ ಕವಿಯಾಗಿ, ವಿಮರ್ಶಕರಾಗಿ, ನಾಟಕಕಾರರಾಗಿ, ಜಾನಪದ ತಜ್ಞರಾಗಿ ಅನೇಕ ಕೃತಿಗಳನ್ನು ಹೊರತಂದಿರುವ ರಾಮೇಗೌಡ ಪ್ರಾಚೀನ ಹಾಗೂ ಆಧುನಿಕ ಕಾವ್ಯಗಳ ಸಮರ್ಥ ವಿಮರ್ಶಕರಾಗಿ ಹೆಸರು ಮಾಡಿದ್ದಾರೆ.
ಗ್ರಂಥ ಸಂಪಾದನೆ ರಾಗೌ ಅವರ ಮತ್ತೊಂದು ಆಸಕ್ತಿಯ ಕ್ಷೇತ್ರ. ಜಾನಪದ ಹಾಗೂ ನಿಘಂಟುತಜ್ಞರಾಗಿಯೂ ರೂಪುಗೊಂಡಿರುವ ರಾಗೌ ‘ಜನಪದ ಮಹಾಭಾರತಕ್ಕೆ’ ಬರೆದ ಮುನ್ನುಡಿ. ‘ನಮ್ಮ ಗಾದೆಗಳು’ ಸಂಗ್ರಹಕ್ಕೆ ಬರೆದ ಪ್ರಸ್ತಾವನೆ ಆಚಾರ್ಯ ಲೇಖನಗಳಾಗಿ ಕಂಗೊಳಿಸಿವೆ. ಹೀಗೆ ೮೦ಕ್ಕೂ ಮಿಕ್ಕಿ ಮೌಲಿಕ ಕೃತಿಗಳನ್ನು ರಚಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಸಾಹಿತ್ಯವನ್ನು ಬೋಧಿಸಿರುವ, ಹತ್ತಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ರಾಗೌ ಅವರ ಹೆಸರನ್ನು ಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ದತ್ತಿನಿಧಿಯ ಅಡಿಯಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿ ಪ್ರತಿವರ್ಷ ಸಾಹಿತಿಯೊಬ್ಬರಿಗೆ ೨೦,೦೦೦ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡುತ್ತಾ ಬಂದಿದೆ. ಪ್ರಸಕ್ತ ಸಾಲಿನಲ್ಲಿ ಈ ಪ್ರಶಸ್ತಿಗೆ ಕವಿ ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಭಾಜನರಾಗಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ, ಸಜ್ಜನ ರಾಜಕಾರಣಿ ಸಿಂಗಾರಿಗೌಡ:
ಬದುಕಿದ್ದರೆ ೧೧೦ನೇ ವರ್ಷಕ್ಕೆ ಕಾಲಿಡುತ್ತಿದ್ದ ಕೆ.ಸಿಂಗಾರಿಗೌಡರು ನಾಗಮಂಗಲ ತಾಲ್ಲೂಕಿನ ಕರಡಹಳ್ಳಿ ಗ್ರಾಮದ ರೈತಾಪಿ ಕುಟುಂಬದಲ್ಲಿ ಜನಿಸಿದವರು. ತಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಮೈಸೂರು, ಮಂಡ್ಯ ಜಿಲ್ಲಾ ಬೋರ್ಡ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಇಂತಹ ಸ್ವಾತಂತ್ರ್ಯ ಹೋರಾಟದ ಮನೆಯಲ್ಲಿ ಹುಟ್ಟಿದ ಕೆ.ಸಿಂಗಾರಿಗೌಡರು ಬಿ.ಎ., ಎಲ್.ಎಲ್.ಬಿ. ಪದವೀಧರರು. ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಸಿಂಗಾರಿಗೌಡ ಅವರು ೧೯೪೭ರ ನಂತರ ರಚಿತಗೊಂಡ ಸಂವಿಧಾನ ರಚನಾ ಸಭೆಗೆ ಮಂಡ್ಯ ಜಿಲ್ಲೆಯಿಂದ ಆರಿಸಿ ಬಂದು ರಾಜಕೀಯ ಪ್ರವೇಶ ಪಡೆಯುತ್ತಾರೆ.
ಸ್ವಾತಂತ್ರ್ಯಾನಂತರದಲ್ಲಿ ವಕೀಲಿ ವೃತ್ತಿಯನ್ನು ತೊರೆದು ಮಂಡ್ಯ ಜಿಲ್ಲೆಯಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿ ನಾಗಮಂಗಲದಿಂದ ಎರಡು ಬಾರಿ ವಿಧಾನಸಭೆಗೆ ಆರಿಸಿ ಬಂದು ಶಾಸಕರಾದವರು. ಕರ್ನಾಟಕದಲ್ಲಿ ಜಿಲ್ಲಾ ಪರಿಷತ್ತು ರಚನೆಗೊಂಡಾಗ ಮಂಡ್ಯ ಜಿಲ್ಲೆಯ ಪ್ರಥಮ ಅಧ್ಯಕ್ಷರಾಗಿ ಜನಮನವನ್ನು ಗೆದ್ದವರು. ಸ್ವಾತಂತ್ರ್ಯಾನಂತರದ ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿಯಾಗಿದ್ದ ದಿ. ಕೆ.ವಿ.ಶಂಕರಗೌಡ, ಎಸ್.ಎಂ.ಲಿಂಗಪ್ಪ, ಟಿ.ಎನ್. ಮಾದಪ್ಪಗೌಡ, ಬಿ.ವೈ.ನೀಲೇಗೌಡ, ಹೆಚ್.ಕೆ.ವೀರಣ್ಣಗೌಡ ಮುಂತಾದವರ ಜೊತೆಯಾಗಿ ನಿಂತು ಮಂಡ್ಯ ಜಿಲ್ಲೆಯನ್ನು ರಚನಾತ್ಮಕವಾಗಿ ಕಟ್ಟುವಲ್ಲಿ ನೆರವಾದವರು. ಸರಳ ಜೀವನವನ್ನು ಕೊನೆಯವರೆಗೂ ಅಪ್ಪಿಕೊಂಡ ಗೌಡರು ಮಿತಭಾಷಿ ಹಾಗೂ ಮೃದುಭಾಷಿಯಾಗಿದ್ದ ಅವರು ಎಲ್ಲಾ ಜನನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದವರು.
ಪುಸ್ತಕದ ಓದಿನಲ್ಲಿ ಅಪಾರವಾಗಿ ಆಸಕ್ತಿಯನ್ನಿರಿಸಿಕೊಂಡಿದ್ದ ಗೌಡರು ಕೊನೆಯವರೆಗೂ ಪುಸ್ತಕವನ್ನು ಬಹುವಾಗಿಪ್ರೀತಿಸಿ ಎಲ್ಲಾ ಪ್ರಕಾರದ ಪುಸ್ತಕಗಳನ್ನು ಗ್ರಂಥಾಲಯದಿಂದ ಪಡೆದು, ಸ್ನೇಹಿತರಿಂದ ತರಿಸಿಕೊಂಡು ಓದುತ್ತಿದ್ದರು. ತರಿಸಿಕೊಂಡ ಪುಸ್ತಕಗಳನ್ನು ಅಷ್ಟೇ ಶ್ರದ್ಧೆಯಿಂದ ಹಿಂತಿರುಗಿಸುತ್ತಿದ್ದ ಅವರ ಬದ್ಧತೆ ಯಾರಾದರೂ ಮೆಚ್ಚುವಂತಹದ್ದು.
ಸಾಂಸ್ಕೃತಿಕವಾಗಿಯೂ ಚಟುವಟಿಕೆಯಿಂದಿದ್ದ ಸಿಂಗಾರಿಗೌಡರು ೮೦ರ ಹೊಸ್ತಿಲಿನಲ್ಲಿರುವ ಮಂಡ್ಯದ ಕರ್ನಾಟಕ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿಯೂ ಮುನ್ನಡೆಸಿದ್ದರು. ಇಂತಹವರ ಹೆಸರನ್ನು ಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಂಘದಲ್ಲಿ ‘ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ’ಯನ್ನು ಸ್ಥಾಪಿಸಿ ಪ್ರತಿ ವರ್ಷ ಓರ್ವ ಲೇಖಕನ ಕೃತಿಯನ್ನು ಪ್ರಾತಿನಿಽಕವಾಗಿ ಗುರುತಿಸಿ ೨೦,೦೦೦ ರೂ. ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸುತ್ತಾ ಬರಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಈ ಪ್ರಶಸ್ತಿಗೆ ಕುವೆಂಪು ವಿ.ವಿ.ಯ ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ಹಾ.ಮ.ನಾಗಾರ್ಜುನ ಆಯ್ಕೆಯಾಗಿದ್ದಾರೆ.
‘ಡಾ.ರಾಗೌ ಸಾಹಿತ್ಯ ಪ್ರಶಸ್ತಿ’ ಪುರಸ್ಕೃತ ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ:
ಬದುಕನ್ನರಸಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವಲಾಪುರ ಗ್ರಾಮದಿಂದ ಬೆಂಗಳೂರಿಗೆ ಹೋಗಿ ನೆಲೆನಿಂತವರು. ತಂದೆ – ಡಿ.ಎಸ್.ಬಸೆಟ್ಟಪ್ಪ ಹಾಗೂ ತಾಯಿ ಆರ್.ಮಂಗಳಗೌರಮ್ಮ. ಹಳ್ಳಿ ನಾಟಕಗಳಿಂದ ಪ್ರಭಾವಿತರಾದವರು. ಎಂ.ಎ., ಎಂ.ಫಿಲ್, ಎಂ.ಪಿ.ಎ. ಪದವೀಧರರಾದ ಮಹಾಮನೆ ನಾಗಮಂಗಲದ ಹವ್ಯಾಸಿ ತಂಡವಾದ ‘ಉದಯ ಭಾನು’ ಕಲಾ ಸಂಘದ ಮೂಲಕ ರಂಗಭೂಮಿ ಪ್ರವೇಶ ಮಾಡಿದರು. ‘ಕೋತಿಕಥೆ’, ‘ಜನಮರುಳೊ’, ‘ಟೊಳ್ಳುಗಟ್ಟಿ’ ಮೊದಲಾದ ೩೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡ ಮಹಾಮನೆ, ಬೆಂಗಳೂರಿನ ಹವ್ಯಾಸಿ ರಂಗಭೂಮಿಯ ಭಾಗವೇ ಆಗಿ ೪೦ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕೇವಲ ರಂಗನಟ, ನಿರ್ದೇಶಕರಾಗದೆ, ಕಾವ್ಯ ಕೃಷಿಯಲ್ಲೂ ತೊಡಗಿಸಿಕೊಂಡು ಅನೇಕ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಬೆಂಗಳೂರಿನಲ್ಲಿ ತಮ್ಮದೇ ಆದ ಶಿವಗಂಗ ರಂಗಮಂದಿರವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿದ್ದಾರೆ, ಮೂಡಲಪಾಯದಂತಹ ಪ್ರಾಚೀನ ರಂಗಪ್ರಕಾರದ ಬಗ್ಗೆ ಕೆಲಸ ಮಾಡುತ್ತಾ ಸಾಗಿದ್ದಾರೆ.
‘ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ’ ಪುರಸ್ಕೃತ ಹಾ.ಮ.ನಾಗಾರ್ಜುನ:
ಚಿಕ್ಕಮಗಳೂರು ಜಿಲ್ಲೆಯ ಹಾದೀಕೆರೆ ಗ್ರಾಮದ ಮರುಳುಸಿದ್ದಯ್ಯ, ದಾಕ್ಷಾಯಣಮ್ಮ ದಂಪತಿಯ ಪುತ್ರರಾಗಿ ಜನಿಸಿದ ಹಾ.ಮ.ನಾಗಾರ್ಜುನ ರದ್ದು ಕೃಷಿಕ ಕುಟುಂಬ. ಅವರು ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಜನಪದಕ್ಕೆ ಸಂಬಂಧಿಸಿದ ವಿಶಿಷ್ಟ ಲೇಖನ ಗುಚ್ಚಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರು ‘ಜನಪ್ರಿಯ ಸಾಹಿತ್ಯ ನಡೆದು ಬಂದ ಹೆಜ್ಜೆಗುರುತು’, ‘ಮಂಥನ’, ‘ಸುಗಂಧ ಪುಷ್ಪ’, ‘ಸಿದ್ಧಾಂತ ಶಿಖಾಮಣಿ – ತಾತ್ವಿಕ ನಿಲುವುಗಳು’ ಮೊದಲಾದ ಕೃತಿಗಳನ್ನು ಹೊರತಂದಿದ್ದಾರೆ. ಇವರ ‘ಬದುಕಿನ ನೊಗಲೆಣೆ ಕರ್ನಾಟಕ ಕೃಷಿ ಸಂಸ್ಕೃತಿ’ ಎಂಬ ಕೃತಿಯನ್ನು ಪ್ರಾತಿನಿಧಿಕವಾಗಿರಿಸಿ ಅವರ ಸಮಗ್ರ ಸಾಹಿತ್ಯ ಕೃಷಿಗೆ ಪ್ರಶಸ್ತಿ ಘೋಷಿಸಲಾಗಿದೆ.
ನಾಳೆ ಪ್ರಶಸ್ತಿ ಪ್ರದಾನ:
ಮಂಡ್ಯದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಏ.೨೫ರಂದು ಬೆಳಿಗ್ಗೆ ೧೧ಕ್ಕೆ ‘ಡಾ.ರಾಗೌ ಸಾಹಿತ್ಯ ಪ್ರಶಸ್ತಿ’ಯನ್ನು ಕವಿ, ರಂಗಕರ್ಮಿ ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರಿಗೂ, ‘ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ’ಯನ್ನು ಕುವೆಂಪು ವಿ.ವಿ.ಯ ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ಹಾ.ಮ.ನಾಗಾರ್ಜುನ ಅವರಿಗೆ ಪ್ರದಾನ ಮಾಡಲಾಗುವುದು. ಸಾಹಿತಿ ಹಾಗೂ ವಿಶ್ರಾಂತ ಕುಲಪತಿ ಡಾ.ಪದ್ಮಾ ಶೇಖರ್ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ವಿಜಯಲಕ್ಷಿ ರಘುನಂದನ್ ಅವರ ಅಧ್ಯಕ್ಷತೆಯಲ್ಲಿ ಮಂಡ್ಯದ ಪಿಇಎಸ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಎಂ.ಎಸ್.ಅನಿತಾ ಅವರು ಪ್ರಶಸ್ತಿ ಪುರಸ್ಕೃತರ ಬಗ್ಗೆ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ವಾಷಿಂಗ್ಟನ್: ಅಮೇರಿಕಾ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ಇರಾನ್‌ನ ಸರ್ವೋಚ್ಛ ನಾಯಕ ಮೊಜ್ತಾಬಾ ಖಮೇನಿ ಅವರ ಮುಖ ವಿರೂಪಗೊಂಡಿದ್ದು, ಪ್ಲಾಸ್ಟಿಕ್ ಸರ್ಜರಿ…
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆ ನಡೆದ 152 ಸ್ಥಾನಗಳಲ್ಲಿ 110ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು…
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಚುನಾವಣೆ ಮುಗಿದಿದೆ. ಚುನಾವಣೆ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು…
ಶ್ರೀರಂಗಪಟ್ಟಣ: ಇಲ್ಲಿನ ಐತಿಹಾಸಿಕ ಶ್ರೀರಂಗನಾಥಸ್ವಾಮಿ ರಂಗಮುಡಿ ಉತ್ಸವ ಗುರುವಾರ(23-04-2026) ರಾತ್ರಿ ಸಂಭ್ರಮದಿಂದ ನೆರವೇರಿತು. ಮೇಷ ಮಾಸ, ಶುಕ್ಲಪಕ್ಷ, ಸಪ್ತಮಿ ದಿನದಂದು…
ಎಚ್.ಡಿ.ಕೋಟೆ: ತಾಲ್ಲೂಕಿನ ಹಂಪಾಪುರ ಗ್ರಾಮದ ಸಮೀಪ ಇಂದು ಬೆಳಿಗ್ಗೆ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ರೈತ ಸಿದ್ದೇಗೌಡ ಎಂಬುವವರಿಗೆ ಗಂಭೀರ…
ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಏಪ್ರಿಲ್ ತಿಂಗಳಿನ 22 ದಿನದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 3.25…