ಅಂಕಣಗಳು

ಜನಸಂಖ್ಯೆ ಹೆಚ್ಚಳ ಶಾಪವೋ ವರವೋ?

ದೆಹಲಿ ಕಣ್ಣೋಟ 

ಶಿವಾಜಿ ಗಣೇಶನ್‌ 

ಜನಸಂಖ್ಯೆ ಹೆಚ್ಚಳ ಶಾಪವೋ ಅಥವಾ ವರವೋ ಎನ್ನುವ ಪ್ರಶ್ನೆ ಈಗ ದಕ್ಷಿಣ ರಾಜ್ಯಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ೨೦೧೧ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆ ೧೨೧ ಕೋಟಿ ಇತ್ತು. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಿದ್ದ ಜನಗಣತಿಯು ೨೦೨೧ರಲ್ಲಿ ನಡೆಯಲಿಲ್ಲ. ಕೋವಿಡ್ ಸಾಂಕ್ರಾಮಿಕ ರೋಗ ೨೦೧೯ರಿಂದ ೨೦೨೧ರವರೆಗೆ ಕಾಡಿದ್ದರಿಂದ ಜನಗಣತಿ ನಡೆದಿಲ್ಲ. ವಿಶ್ವಸಂಸ್ಥೆಯ ವರದಿಯ ಪ್ರಕಾರ ಭಾರತದ ಜನಸಂಖ್ಯೆ ಈಗ ೧೪೬ ಕೋಟಿಗೆ ಮುಟ್ಟಿದೆ. ಇದುವರೆಗೂ ವಿಶ್ವದಲ್ಲಿ ಜನಸಂಖ್ಯೆಯ ಹೆಚ್ಚಳದಲ್ಲಿ ಮೊದಲ ರಾಷ್ಟ್ರವಾಗಿದ್ದ ಚೀನಾದ ಜನಸಂಖ್ಯೆ ಈಗ ೧೪೨ ಕೋಟಿಗೆ ನಿಂತಿದೆ.

ಅಚ್ಚರಿ ಎಂದರೆ ಈ ವರದಿಯ ಪ್ರಕಾರ ಮಕ್ಕಳನ್ನು ಹೆರುವ ಮಹಿಳೆಯರ ಫಲವಂತಿಕೆಯ ಪ್ರಮಾಣ ಶೇ.೨.೧ರಿಂದ ೧.೯ಕ್ಕೆ ಇಳಿದಿರುವುದು. ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ಒಬ್ಬ ಮಹಿಳೆಯು ಸರಾಸರಿ ಆರು ಮಕ್ಕಳನ್ನು ಹೆತ್ತರೆ ಈಗ ಆ ಸಂಖ್ಯೆ ಸರಾಸರಿ ೨ಕ್ಕೆ ಸಾಕು ಎನ್ನುವ ಮಟ್ಟಕ್ಕೆ ಸೀಮಿತಗೊಂಡಿದೆ. ಮಹಿಳೆಯರಲ್ಲಿ ಶಿಕ್ಷಣದ ಪ್ರಮಾಣ ಹೆಚ್ಚುತ್ತಿರುವುದರಿಂದ ಮತ್ತು ಕುಟುಂಬ ನಿರ್ವಹಣೆಯ ಖರ್ಚು ಹೆಚ್ಚಳವಾಗುತ್ತಿರುವುದರಿಂದ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಒಂದು ಕುಟುಂಬದಲ್ಲಿ ಎರಡು ಅಥವಾ ಒಂದು ಮಗು ಸಾಕು ಅನಿಸುವ ನಿರ್ಧಾರ ಹೆಚ್ಚಾಗಿದೆ. ನಮ್ಮ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯು ಈ ಜನಸಂಖ್ಯೆ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರ ವಹಿಸಿರುವುದಾಗಿ ಹೇಳಲಾಗುತ್ತಿದೆ.

ನಗರಗಳಲ್ಲಿನ ಒತ್ತಡದ ಜೀವನಶೈಲಿ, ಹದಗೆಡುತ್ತಿರುವ ಪರಿಸರ, ವಿವಾಹದ ವಯಸ್ಸಿನ ಅಂತರದಿಂದಾಗಿ ಮಕ್ಕಳನ್ನು ಪಡೆಯುವ ಫಲವಂತಿಕೆ ಅಥವಾ ಸಂತಾನ ಶಕ್ತಿ ಹೆಣ್ಣು ಮತ್ತು ಗಂಡಿನಲ್ಲಿ ಕಡಿಮೆ ಆಗುತ್ತಿದೆ. ಜೊತೆಗೆ ಕೆಲವು ಯುವ ದಂಪತಿ ಒಂದು ಮಗು ಪಡೆದರೆ ಹೆಚ್ಚು. ಮತ್ತೆ ಕೆಲವರು ಮಕ್ಕಳೇ ಬೇಡ ಹಾಗೆಯೇ ಮದುವೆಯೂ ಬೇಡ ಎಂದು ತೀರ್ಮಾನಿಸಿರುವುದು ಜನಸಂಖ್ಯೆಯ ಏರಿಕೆಗೆ ಸ್ವಲ್ಪ ಕಡಿವಾಣ ಹಾಕಿದಂತಾಗಿದೆ.

ವಸ್ತುಸ್ಥಿತಿ ಹೀಗಿರುವಾಗ ದೇಶದ ಜನಸಂಖ್ಯೆ ಹೇಗೆ ಹೆಚ್ಚಾಗುತ್ತಿದೆ ಎನ್ನುವ ಪ್ರಶ್ನೆಯು ಸಹಜವಾಗಿ ನಮ್ಮ ಮುಂದೆ ಧುತ್ತನೆ ಎದುರಾಗುತ್ತದೆ. ಭಾರತೀಯರ ಜೀವಿತಾವಧಿಯು ೨೦೧೦ ಮತ್ತು ೨೦೧೪ರ ಹೊತ್ತಿಗೆ ಸರಾಸರಿ ೬೭ವರ್ಷ ೧೧ ತಿಂಗಳು ಎಂದು ಅಂದಾಜು ಮಾಡಲಾಗಿತ್ತು. ಆದರೆ ಅಚ್ಚರಿಯ ಸಂಗತಿ ಎಂದರೆ ಪುರುಷರ ಜೀವಿತಾವಽಯು ೬೬ ಮತ್ತು ಮಹಿಳೆಯರ ಜೀವಿತಾವಧಿಯು ೬೯ಕ್ಕೆ ಹೆಚ್ಚಿದೆ.

ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿನ ಆರೋಗ್ಯ ಸೌಲಭ್ಯ ಈಗಷ್ಟೇ ಸುಧಾರಿಸುತ್ತಿದ್ದರೂ, ಎಲ್ಲ ಬಗೆಯ ರೋಗ ರುಜಿನಗಳನ್ನು ನಿಯಂತ್ರಿಸುವ ದಿಕ್ಕಿನಲ್ಲಿ ಹೆಚ್ಚಿರುವ ಚಿಕಿತ್ಸಾ ಸೌಲಭ್ಯ, ಜನರಲ್ಲಿ ಉಂಟಾಗಿರುವ ಆರೋಗ್ಯದ ಅರಿವಿನಿಂದಾಗಿ ಜೀವಿತಾವಧಿಯು ಏರಿಕೆಯಾಗಲು ಕಾರಣ ಎನ್ನಲಾಗಿದೆ.

ಈ ಮಧ್ಯೆ ವಿಶ್ವಸಂಸ್ಥೆಯು ಈಗ ಹೊರಡಿಸಿರುವ ಜನಸಂಖ್ಯೆ ಪ್ರಮಾಣದ ಪಟ್ಟಿಯ ಪ್ರಕಾರ ಭಾರತೀಯರ ಜೀವಿತಾವಧಿಯ ಪ್ರಮಾಣವು ಪುರುಷ ರದ್ದು ೭೧ ಮತ್ತು ಮಹಿಳೆಯರ ಜೀವಿತಾವಧಿಯು ೭೪ಕ್ಕೆ ಮುಟ್ಟಲಿದೆ. ಹೆಚ್ಚುತ್ತಿರುವ ಆರೋಗ್ಯ ಸೌಲಭ್ಯ ಮತ್ತು ಆರೋಗ್ಯದ ಬಗೆಗಿನ ಕಾಳಜಿಯಿಂದ ದುಡಿಯುವ ಶಕ್ತಿಯು ಈಗ ಸರಾಸರಿ ೬೫ ವರ್ಷದವರೆಗೆ ಮುಟ್ಟಿರುವುದಾಗಿ ವಿಶ್ವಸಂಸ್ಥೆಯ ವರದಿ ಹೇಳಿದೆ.

ಕೇಂದ್ರ ಸರ್ಕಾರವು ರಾಜ್ಯಗಳ ತೆರಿಗೆ ಪಾಲಿನ ಹಂಚಿಕೆಗೆ ಅನುಸರಿಸಿ ಕೊಂಡು ಬರುತ್ತಿರುವ ನೀತಿಯಲ್ಲಿಯೂ ಜನಸಂಖ್ಯೆಯ ಹೆಚ್ಚಳದ ಪಾತ್ರ ಮುಖ್ಯವಾಗಿದೆ. ಈಗಿನ ಕೇಂದ್ರದ ನೀತಿಯಂತೆ ಹೆಚ್ಚು ಬಡತನ, ಹೆಚ್ಚಿನ ಜನಸಂಖ್ಯೆ ಮತ್ತು ಹೆಚ್ಚು ಭೂ ಪ್ರದೇಶ ಹೊಂದಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ಮತ್ತು ವಿಶೇಷ ಪ್ಯಾಕೇಜ್ ನೀಡುತ್ತಿರುವುದರಿಂದ ಉತ್ತರದ ರಾಜ್ಯಗಳು ಈ ನೀತಿಯ ಹೆಚ್ಚಿನ ಲಾಭ ಪಡೆಯುತ್ತಿರುವುದು ಜನಸಂಖ್ಯೆಯ ಹೆಚ್ಚಳದ ಬಗೆಗೆ ಮರುಚಿಂತನೆ ಮಾಡುವಂತಾಗಿದೆ. ಹಾಗೆಯೇ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಮತ್ತು ಹೆಚ್ಚಿನ ತೆರಿಗೆ (ಜಿಎಸ್‌ಟಿ) ನೀಡುತ್ತಾ ಕಡಿಮೆ ಪಾಲನ್ನು ಪಡೆಯುತ್ತಾ ಅನುದಾನ ಪಡೆಯಲಾಗದ ದಕ್ಷಿಣ ರಾಜ್ಯಗಳು ವಂಚನೆಗೆ ಒಳಗಾಗುತ್ತಿರುವುದರಿಂದ ಜನಸಂಖ್ಯೆಯನ್ನು ನಿಯಂತ್ರಿಸಬೇಕೆ ಅಥವಾ ಅದರ ಪ್ರಮಾಣವನ್ನು ಹೆಚ್ಚಿಸಲು ಪ್ರೋತ್ಸಾಹಿಸಬೇಕೆ ಎನ್ನುವ ಗೊಂದಲದಲ್ಲಿ ಬಿದ್ದಿವೆ.

ಹೀಗಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಈಗ ಹೆಚ್ಚು ಮಕ್ಕಳನ್ನು ಪಡೆಯುವಂತೆ ತಮ್ಮ ರಾಜ್ಯದಲ್ಲಿ ಯುವ ದಂಪತಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ನಾವು ಒಂದು ಕಾಲಕ್ಕೆ ಹೆಚ್ಚು ಜನ ಸಂಖ್ಯೆ ಹೊಂದಿದ್ದಸರೆ ಕಷ್ಟಗಳು ಎದುರಾಗುತ್ತವೆ ಎಂದು ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾದೆವು. ಆದರೆ ಹೆಚ್ಚಿನ ಜನಸಂಖ್ಯೆ ಹೊಂದಿರುವ ಉತ್ತರದ ರಾಜ್ಯಗಳು ಕೇಂದ್ರ ಸರ್ಕಾರದ ಈಗಿನ ನೀತಿಯಿಂದಾಗಿ ಹೆಚ್ಚಿನ ಹಣಕಾಸಿನ ಬೆಂಬಲ ಮತ್ತು ಹಿಂದುಳಿದಿರುವಿಕೆಗೆ ವಿಶೇಷ ಅನುದಾನ ಪಡೆಯುತ್ತಿರುವುದರಿಂದ ಹೆಚ್ಚು ಜನಸಂಖ್ಯೆ ಹೊಂದುವುದು ಈಗ ರಾಜ್ಯಗಳಿಗೆ ಅನುಕೂಲವೇ ಆಗಿದೆ ಎಂದು ಕಳೆದ ವಾರ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಜನಸಂಖ್ಯೆ ವಿಷಯದಲ್ಲಿ ಇದೇ  ನಿಲುವು ತಮಿಳುನಾಡಿನದ್ದು ಕೂಡ.

ಈ ಮಧ್ಯೆ ಬೆಂಗಳೂರಿನಂತಹ ಮಹಾನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಅದಕ್ಕೆ ತಕ್ಕಂತೆ ನಾಗರಿಕ ಮೂಲಸೌಕರ್ಯವನ್ನು ಹೆಚ್ಚಿಸುವ ಸಲುವಾಗಿ ೧.೧೫ ಲಕ್ಷ ಕೋಟಿ ರೂ.ಆರ್ಥಿಕ ನೆರವು ನೀಡಬೇಕೆಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಹಣಕಾಸು ಆಯೋಗಕ್ಕೆ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಗೆ ಗೈರುಹಾಜರಾಗಿ ೧೬ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪನಾಗರಿಯಾ ಅವರನ್ನು ಭೇಟಿ ಮಾಡಿದ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನದ ಪರಿಚ್ಛೇದ ೧೮೦ರ ಪ್ರಕಾರ ರಾಜ್ಯಗಳಿಗೆ ತನ್ನ ತೆರಿಗೆ ಪಾಲನ್ನು ಹಂಚಬೇಕೆಂದು ಆಗ್ರಹಪಡಿಸಿರುವುದು ಸರಿಯಷ್ಟೇ. ಮುಂದಿನ ಏಪ್ರಿಲ್ ೧ರಿಂದ ಜಾರಿಗೆ ಬರುವ ಹದಿನಾರನೇ ಹಣಕಾಸು ಆಯೋಗದ ಶಿಫಾರಸ್ಸುಗಳಲ್ಲಿ ಈಗಿನ ತೆರಿಗೆ ಪಾಲನ್ನು ಹಂಚುವ ನೀತಿ ಮತ್ತು ವಿಶೇಷ ಅನುದಾನ ನೀಡುವ ನಿಯಮಾವಳಿಗಳನ್ನು ಹಣಕಾಸು ಆಯೋಗ ಮಾರ್ಪಾಡು ಮಾಡ ಬೇಕೆಂಬುದು ದಕ್ಷಿಣ ರಾಜ್ಯಗಳ ವಾದವಾಗಿದೆ. ಆದರೆ ಉತ್ತರದ ‘ಬಿಮಾರು’ ರಾಜ್ಯಗಳು (ಬಿಹಾರ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರ ಪ್ರದೇಶ) ಜನಸಂಖ್ಯೆ , ಬಡತನ ರೇಖೆ ಮತ್ತು ಭೂ ಪ್ರದೇಶದ ವಿಸ್ತೀರ್ಣದ ಆಧಾರದಮೇಲೆಯೇ ಕೇಂದ್ರವು ವಿಶೇಷ ನೆರವು ನೀಡಿಕೆಯನ್ನು ಮುಂದುವರಿಸಬೇ ಕೆಂದು ನೀತಿ ಆಯೋಗ ಮತ್ತು ಹಣಕಾಸು ಆಯೋಗದ ಮುಂದೆ ತಮ್ಮ ವಾದಗಳನ್ನು ಮಂಡಿಸುತ್ತಿವೆ.

ಈ ವಾದಗಳಿಗೆ ಮಣೆಹಾಕುತ್ತಾ ಬಂದಿರುವ ಕೇಂದ್ರ ಸರ್ಕಾರವು ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯಗಳಿಗೆ ನೀಡುವ ವಿಶೇಷ ಅನುದಾನ ಯೋಜನೆಯಂತೆ ಉತ್ತರ ಪ್ರದೇಶಕ್ಕೆ ಅತಿ ಹೆಚ್ಚಿನ ಹಣಕಾಸು ನೆರವನ್ನು ನೀಡಿದೆ. ಹಾಗೆಯೇ ಬಿಹಾರ ೧೯೯೦ರಿಂದಲೂ ಇಂತಹ ವಿಶೇಷ ಅನುದಾನವನ್ನು ಪಡೆಯುತ್ತಿರುವ ಎರಡನೇ ರಾಜ್ಯವಾಗಿದೆ. ಕೇಂದ್ರದಲ್ಲಿನ ಬಿಜೆಪಿ  ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ತನ್ನ ಬೆಂಬಲ ನೀಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಮತಾ ಪಕ್ಷದ ಊರುಗೋಲು ಮತ್ತು ಬರುವ ನವೆಂಬರ್‌ನಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಈಗ ಬಿಹಾರಕ್ಕೆ ಲಾಟರಿ ಹೊಡೆದಂತಾಗಿದೆ. ಆದರೆ ನೀತಿ ಆಯೋಗ ಮತ್ತು ಹಣಕಾಸು ಆಯೋಗವು ಕೆಲವು ರಾಜ್ಯಗಳು ಜನರಿಗೆ ಉಚಿತ ಕೊಡುಗೆಗಳನ್ನು (ಗ್ಯಾರಂಟಿಯೋಜನೆಗಳು) ನೀಡುತ್ತಾ ಬಂದಿರುವುದು ಆಯಾ ರಾಜ್ಯಗಳ ಹಣಕಾಸುಪರಿಸ್ಥಿತಿ ಹದಗೆಡಲು ಕಾರಣವಾಗಿದೆ ಎನ್ನುವ ಎಚ್ಚರಿಕೆಯನ್ನು ಕೊಡುತ್ತಾ ಬಂದಿವೆ. ಅಗ್ಗದ ಜನಪ್ರಿಯ ಕಾರ್ಯಕ್ರಮಗಳ ಬಗೆಗೆ ಅಸಮಾಧಾನ ಹೊಂದಿರುವ ಕೇಂದ್ರ ಸರ್ಕಾರದ ನಿಲುವಿನ ಹಿನ್ನೆಲೆಯಲ್ಲಿ ಕರ್ನಾಟಕವು ಸೇರಿದಂತೆ ದಕ್ಷಿಣ ರಾಜ್ಯಗಳ ಬೇಡಿಕೆಗಳನ್ನು ಹಣಕಾಸು ಆಯೋಗ ಎಷ್ಟರ ಮಟ್ಟಿಗೆ ಕೇಳಿಸಿಕೊಳ್ಳುತ್ತದೆಯೋ ಗೊತ್ತಿಲ್ಲ.

ಕೇಂದ್ರ ಸರ್ಕಾರವು ತನಗೆ ನೀಡಿರುವ ಅಧ್ಯಯನದ ವಿಷಯದ ಆಧಾರದ ಮೇಲೆ ಹಣಕಾಸು ಆಯೋಗವು ಕೇಂದ್ರ ಮತ್ತು ರಾಜ್ಯಗಳ ನಡುವಣ ತೆರಿಗೆ ಪಾಲಿನ ಹಂಚಿಕೆಯ ಸೂತ್ರ, ರಾಜ್ಯಗಳಿಗೆ ನೀಡುವ ವಿಶೇಷ ಅನುದಾನ, ಪಂಚಾಯತ್ ಮತ್ತು ಪುರಸಭೆ, ನಗರಸಭೆಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು. ಶರವೇಗದಲ್ಲಿ ಬೆಳೆಯುತ್ತಿರುವ ನಗರೀಕರಣದಿಂದ ಉಂಟಾಗುತ್ತಿರುವ ಸಮಸ್ಯೆ ಮತ್ತು ಸವಾಲುಗಳನ್ನು ಹೇಗೆ ಎದುರಿಸಬೇಕು, ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಒದಗಿಸಬೇಕಾಗಿರುವ ಮೂಲಭೂತ ನಾಗರಿಕ ಸೌಲಭ್ಯಗಳನ್ನು ಉತ್ತಮ ಪಡಿಸಲು ಕೈಗೊಳ್ಳಬಹುದಾದ ಕ್ರಮಗಳು ಹಾಗೂ ಸೇವಾ ವಲಯವನ್ನು ಅಭಿವೃದ್ಧಿಪಡಿಸುವುದಕ್ಕೆ ಆದ್ಯತೆ ನೀಡುವತ್ತ ಗಮನ ನೀಡಬೇಕಿದೆ ಎನ್ನುತ್ತಾರೆ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪನಾಗರಿಯಾ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಯೋಜನೆಗಳನ್ನು ನಿರ್ವಹಿಸಲು ಹಣಕಾಸು ನೀತಿ ಏನಿರಬೇಕೆಂದು ಹಣಕಾಸು ಆಯೋಗವು ತನ್ನ ವರದಿ ನೀಡುವ ಮೂಲಕ ಹಲವಾರು ಶಿಫಾರಸು ಮಾಡಬೇಕಿದೆ.೨೦೨೧ರಲ್ಲಿ ನಡೆಯಬೇಕಿದ್ದ ಜನಗಣತಿಯು ೨೦೨೭ಕ್ಕೆ ಪ್ರಾರಂಭವಾಗುವುದರಿಂದ ಹದಿನೈದನೇ ಹಣಕಾಸು ಆಯೋಗದ ವರದಿಗೆ ಆಧಾರವಾಗಿದ್ದ ೨೦೧೧ನೇ ಜನಗಣತಿಯೂ ಹದಿನಾರನೇ ಹಣಕಾಸು ಆಯೋಗದ ಶಿಫಾರಸುಗಳಿಗೂ ಆಧಾರವಾಗಲಿದೆ. ೨೦೧೧ರ ಜನಗಣತಿಯಲ್ಲಿ ಭಾರತದ ಜನಸಂಖೆಯು ೧೨೧ ಕೋಟಿ ಇದ್ದದ್ದು ಈಗ ೧೪೬ ಕೋಟಿಯನ್ನು  ಮೀರಿದಾಗಲೂ ಹಳೆಯ ಜನಸಂಖ್ಯೆಯೇ ಆಧಾರವಾಗುತ್ತಿರುವುದು ವಿಚಿತ್ರ ಸನ್ನಿವೇಶ.

ಈ ಜನಸಂಖ್ಯೆಯ ವ್ಯತ್ಯಾಸದ ಬಗೆಗೆ ಹಣಕಾಸು ಆಯೋಗ ತನ್ನ ನಿಲುವಿನ ಬಗೆಗೆ ಇನ್ನೂ ಏನನ್ನೂ ಹೇಳಿಲ್ಲ. ಕೇಂದ್ರ ಸರ್ಕಾರವೂ ಈ ವಿಷಯದಲ್ಲಿ ಆಯೋಗಕ್ಕೆ ಯಾವುದೇ ಸೂಚನೆಯನ್ನು ನೀಡಿಲ್ಲ. ಮುಂದಿನ ಮಾರ್ಚ್ ೩೧ರ ಒಳಗೆ ವರದಿ ನೀಡುವ ಆಯೋಗವು ಜನಸಂಖ್ಯೆಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬರುವ ಸರಿಸುಮಾರು ೨೫ ಕೋಟಿಯಷ್ಟು ಜನಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣದು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಅಥವಾ ಹಣಕಾಸು ಆಯೋಗದ ನಿಲುವು ವರದಿಯ ಶಿಫಾರಸಿನ ಮೇಲೆ ಅವಲಂಬನೆ ಆಗುವ ಸಾಧ್ಯತೆ ಹೆಚ್ಚಿದೆ

” ವಸ್ತುಸ್ಥಿತಿ ಹೀಗಿರುವಾಗ ದೇಶದ ಜನಸಂಖ್ಯೆ ಹೇಗೆ ಹೆಚ್ಚಾಗುತ್ತಿದೆ ಎನ್ನುವ ಪ್ರಶ್ನೆಯು ಸಹಜವಾಗಿ ನಮ್ಮ ಮುಂದೆ ಧುತ್ತನೆ ಎದುರಾಗುತ್ತದೆ. ಭಾರತೀಯರ ಜೀವಿತಾವಧಿಯು ೨೦೧೦ ಮತ್ತು ೨೦೧೪ರ ಹೊತ್ತಿಗೆ ಸರಾಸರಿ ೬೭ ವರ್ಷ ೧೧ ತಿಂಗಳು ಎಂದು ಅಂದಾಜು ಮಾಡಲಾಗಿತ್ತು. ಆದರೆ ಅಚ್ಚರಿಯ ಸಂಗತಿ ಎಂದರೆ ಪುರುಷರ ಜೀವಿತಾವಽಯು ೬೬ ಮತ್ತು ಮಹಿಳೆಯರ ಜೀವಿತಾವಧಿಯು ೬೯ಕ್ಕೆ ಹೆಚ್ಚಿದೆ.

ಆಂದೋಲನ ಡೆಸ್ಕ್

Recent Posts

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

12 hours ago

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…

12 hours ago

ರೈತ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು: ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ

ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…

12 hours ago

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್‌ಗೆ ಬಿಗ್‌ ಶಾಕ್‌

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್‌ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಈ…

13 hours ago

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ

ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್…

13 hours ago

ಹಾಸನ| ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಬಂಧನ

ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್‌ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…

13 hours ago