ಬೌದ್ಧಿಕ ದಾರಿದ್ರ್ಯಕ್ಕೆ ಶೈಕ್ಷಣಿಕ ಮುನ್ನುಡಿ

ಶಾಲಾ ಪಠ್ಯಗಳ ಮೂಲಕವೇ ಒಂದು ಪೀಳಿಗೆಯನ್ನು ಪ್ರಾಚೀನತೆಗೆ ತಳ್ಳುತ್ತಿದ್ದೇವೆಯೇ ?

ಭಾಗ-1

–ನಾ ದಿವಾಕರ

ಭಾರತ ಹಲವು ಶತಮಾನಗಳ ಅಸಮಾನತೆ, ತಾರತಮ್ಯ, ದೌರ್ಜನ್ಯ ಮತ್ತು ಕಿರುಕುಳಗಳ ಚರಿತ್ರೆಯನ್ನು ಹಾದು ಒಂದು ಸೌಹಾರ್ದಯುತ ಸಮಾಜವನ್ನು ನಿರ್ಮಿಸಿಕೊಂಡಿದೆ. ಇಡೀ ಜನಸಮುದಾಯಗಳು ಸ್ಥಳೀಯರ, ಪರಕೀಯರ ದಾಳಿಗಳನ್ನು ಎದುರಿಸುತ್ತಲೇ ಈ ಸಾಮಾಜಿಕ ಅನ್ಯಾಯಗಳ ವಿರುದ್ಧ ಸೆಣಸಾಡುತ್ತಾ ತಮ್ಮ ಬದುಕು ರೂಪಿಸಿಕೊಂಡಿವೆ. ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಭಾರತದ ಭೂಪಟದಲ್ಲಿ ಭೌತಿಕವಾಗಿ ಕಾಣಬಹುದಾದ ಭಿನ್ನತೆ ಮತ್ತು ವೈವಿಧ್ಯತೆಗಳನ್ನೇ ಬೌದ್ಧಿಕ ನೆಲೆಯಲ್ಲೂ ಕಾಣಬಹುದಾಗಿದೆ. ಇಂದಿಗೂ ಈ ಭಿನ್ನತೆಗಳ ನಡುವೆಯೇ ಬದುಕುತ್ತಿದ್ದರೂ ಭಾರತೀಯ ಸಮಾಜ ತನ್ನ ವೈವಿಧ್ಯತೆಗಳನ್ನು ಕಾಪಾಡಿಕೊಂಡೇ ಸಮನ್ವಯತೆಯನ್ನು ಸಾಧಿಸಲು ಯತ್ನಿಸುತ್ತಿದೆ. ಸನಾತನ ಧರ್ಮದಿಂದ ಆಧುನಿಕ ತಂತ್ರಜ್ಞಾನಾಧಾರಿತ ಸಮಾಜದವರೆಗಿನ ಈ ಸುದೀರ್ಘ ಪಯಣದಲ್ಲಿ ಜಾತಿ, ಮತ, ಧರ್ಮ, ಪಂಥ ಮತ್ತು ಸಾಮುದಾಯಿಕ ಅಸ್ಮಿತೆಗಳು ನಿರ್ಮಿಸುತ್ತಿರುವ ಗೋಡೆಗಳ ನಡುವೆಯೇ ಭಾರತೀಯ ಸಮಾಜ ಒಂದು ಸಮನ್ವಯದ ಹಾದಿಯನ್ನು ಕಂಡುಕೊಂಡಿದೆ.

ಈ ಚರಿತ್ರೆಯ ಹಾದಿಯನ್ನು ಮತ್ತು ಹಾದಿಯಲ್ಲಿ ಎದುರಾದ ತೊಡಕುಗಳನ್ನು ಈ ದೇಶದ ಶೋಷಿತ, ಅವಕಾಶವಂಚಿತ ಸಮುದಾಯಗಳು ಹೇಗೆ ಕ್ರಮಿಸಿದವು, ಮೇಲ್ಜಾತಿಯ, ಮೇಲ್ವರ್ಗದ, ಶ್ರೀಮಂತಿಕೆಯ ಮತ್ತು ರಾಜಪ್ರಭುತ್ವದ ದಬ್ಬಾಳಿಕೆಗಳನ್ನು ಹೇಗೆ ಎದುರಿಸಿದವು ಮತ್ತು ತಮ್ಮ ಸಾಮಾಜಿಕ ಅಸ್ತಿತ್ವ-ಅಸ್ಮಿತೆಯನ್ನು ರಕ್ಷಿಸಿಕೊಳ್ಳಲು ಯಾವ ಮಾರ್ಗಗಳನ್ನು ಕಂಡುಕೊಂಡವು ಎಂದು ಅರ್ಥಮಾಡಿಕೊಳ್ಳುವ ಮೂಲಕವೇ ಭವಿಷ್ಯದ ಸುಂದರ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ. ಈ ಕಟ್ಟುವ ಪ್ರಕ್ರಿಯೆಗೆ ಮಾನವ ಸಂಬಂಧಗಳನ್ನು ಅಸ್ಮಿತೆಗಳ ಚೌಕಟ್ಟಿನಿಂದ ಹೊರತಂದು, ಮನುಜ ಸಂವೇದನೆಯ ಮೂಲಕ ನವ ಪೀಳಿಗೆಗೆ ಪರಿಚಯಿಸುವ ನೈತಿಕ ಜವಾಬ್ದಾರಿ ವರ್ತಮಾನದ ಸಮಾಜದ ಮೇಲಿರುತ್ತದೆ. ಇಂದಿಗೂ ಜೀವಂತವಾಗಿರುವ ಸಾಂಸ್ಕೃತಿಕ ಒಳಬಿರುಕುಗಳನ್ನು ಸರಿಪಡಿಸುವ ಜವಾಬ್ದಾರಿ ಆಧುನಿಕ ಭಾರತದ ಮೇಲಿರುವುದನ್ನು ಮರೆಯುವಂತಿಲ್ಲ. ಬಹುಶಃ ಭಾರತದ ಪ್ರಸ್ತುತ ಸನ್ನಿವೇಶದಲ್ಲಿ ನಾವು ಈ ಜವಾಬ್ದಾರಿಯನ್ನು ಮರೆತಿದ್ದೇವೆ ಎನಿಸುತ್ತಿದೆ. ಕರ್ನಾಟಕದಲ್ಲಿ ಉದ್ಭವಿಸಿರುವ ಪಠ್ಯಕ್ರಮ ಪರಿಷ್ಕರಣೆ ಇದನ್ನೇ ಸೂಚಿಸುವಂತಿದೆ.

ಇತಿಹಾಸದ ಪ್ರಮಾದಗಳನ್ನು ಸರಿಪಡಿಸುವ ಉನ್ಮಾದದಲ್ಲಿ ವರ್ತಮಾನದ ಸಾಮಾಜಿಕ-ಸಾಂಸ್ಕೃತಿಕ ವಾತಾವರಣವನ್ನು ಕಲುಷಿತಗೊಳಿಸುವ ಒಂದು ವಿಕೃತ ಚಿಂತನೆ ಬಹುಪಾಲು ಸಾರ್ವತ್ರಿಕವಾಗುತ್ತಿದೆ. ಇಂದಿನ ಭಾರತೀಯ ಸಮಾಜದಲ್ಲಿ ಭೂಗತವಾಗಿರುವ ಜಾತೀಯತೆ, ಅಸ್ಪೃಶ್ಯತೆ, ಮತಾಂಧತೆ ಮತ್ತು ಅಸಹಿಷ್ಣುತೆಗಳ ಉತ್ಖನನ ಮಾಡುವ ಮೂಲಕ, ನಮ್ಮೊಳಗಿನ ವಿಷಬೇರುಗಳನ್ನು ಕಿತ್ತೊಗೆಯಬೇಕಾದ ಸಂದರ್ಭದಲ್ಲಿ ನಾವು ಇತಿಹಾಸದ ಅವಶೇಷಗಳಲ್ಲಿನ ದೋಷಗಳನ್ನು ಹೆಕ್ಕಿ ತೆಗೆದು, ಶತಮಾನಗಳ ಹಿಂದಿನ ದುಷ್ಕೃತ್ಯಗಳಿಗೆ ಇಂದಿನ ಸಮಾಜವನ್ನು ಗುರಿ ಮಾಡುತ್ತಿದ್ದೇವೆ. ಶಿಕ್ಷಣ, ವಿದ್ಯಾರ್ಹತೆ ಮತ್ತು ಜ್ಞಾನಸಂಪಾದನೆಯ ಮಾರ್ಗಗಳು ಮಾನವ ಸಮಾಜವನ್ನು ಬೌದ್ಧಿಕವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎನ್ನುವ ನಂಬಿಕೆಯನ್ನೇ ಹುಸಿಯಾಗಿಸುವಂತೆ ನಮ್ಮ ಸುತ್ತಲಿನ ಬೆಳವಣಿಗೆಗಳು ಕಂಡುಬರುತ್ತಿವೆ. ದುರಂತ ಎಂದರೆ ಈ ಬೌದ್ಧಿಕ ವಿಕೃತಿಗಳು ನಮಗೆ ಕಾಣಿಸಿಕೊಳ್ಳುತ್ತಿರುವುದು ಶಾಲಾ ಶಿಕ್ಷಣದ ಅಂಗಳದಲ್ಲಿ. ಕೂಗುಮಾರಿ ವಿದ್ಯುನ್ಮಾನ ಮಾಧ್ಯಮಗಳು ಈ ಸಾಂಸ್ಕೃತಿಕ ವಿಕೃತಿಗೆ ಮತ್ತಷ್ಟು ಮೆರುಗು ನೀಡಲು ತಮ್ಮ ಮಾರುಕಟ್ಟೆ ತಂತ್ರಗಳನ್ನು ಅವ್ಯಾಹತವಾಗಿ ಬಳಸುತ್ತಿವೆ.

ಶಾಲಾ ಶಿಕ್ಷಣ ಎಂದರೆ ವಿಕಸಿಸುತ್ತಿರುವ ಎಳೆಯ ಮಕ್ಕಳನ್ನು ಯಾವುದೋ ಒಂದು ಉದ್ಯೋಗಕ್ಕಾಗಿ ಅಥವಾ ಜೀವನೋಪಾಯದ ಮಾರ್ಗ ಶೋಧಕ್ಕಾಗಿ ತಯಾರು ಮಾಡುವ ಒಂದು ಕಾರ್ಯಾಗಾರ ಎಂದು ಭಾವಿಸಲಾಗಿರುವ ಈ ಹೊತ್ತಿನಲ್ಲಿ, ಶೈಕ್ಷಣಿಕ ವಲಯವನ್ನು ಬೌದ್ಧಿಕ ಸರಕುಗಳನ್ನು ಉತ್ಪಾದಿಸುವ ಕಾರ್ಖಾನೆ ಎಂದೇ ಭಾವಿಸಲಾಗುತ್ತಿದೆ. ಹಾಗಾಗಿ ಅಕ್ಷರ ಕಲಿಕೆಗಾಗಿ ಬರುವ ಮಕ್ಕಳ ಮಿದುಳಿನಲ್ಲಿ ನಮಗೆ ಬೇಕಾದ ಬೌದ್ಧಿಕ ಸರಕುಗಳನ್ನು ತುರುಕಲು ಪ್ರಯತ್ನಿಸಲಾಗುತ್ತಿದೆ. ಬಾಹ್ಯ ಸಮಾಜದಲ್ಲಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಪ್ರಾಬಲ್ಯ ಸಾಧಿಸಲು ಹೆಣಗಾಡುವ ಶಕ್ತಿಗಳಿಗೆ ಭವಿಷ್ಯದ ಪೀಳಿಗೆ ಎಂದರೆ ತಮ್ಮ ಸುರಕ್ಷಿತ ಹಿತವಲಯವನ್ನು ಕಾಪಾಡಲು ನೆರವಾಗುವ ಒಂದು ಕಾಲಾಳುಪಡೆ ಎಂದೇ ಭಾಸವಾದಂತಿದೆ. ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಾ, ಬಾಹ್ಯ ಸಮಾಜದ ಗೊಡವೆ ಇಲ್ಲದೆ, ತಾವು ಮುನ್ನಡೆಯುವ ಹಾದಿಯನ್ನು ರೂಪಿಸಿಕೊಳ್ಳಲು ಅಕ್ಷರ ಕಲಿಕೆ ಮತ್ತು ವಿದ್ಯಾರ್ಜನೆಯನ್ನು ಬಯಸುವ ಎಳೆಯ ಮಕ್ಕಳಿಗೆ, ಈ ಹಾದಿಯಲ್ಲಿ ಬಾಹ್ಯ ಸಮಾಜವೇ ನಿರ್ಮಿಸುತ್ತಿರುವ ಎಲ್ಲ ರೀತಿಯ ಸಾಂಸ್ಕೃತಿಕ ವಿಕೃತಿಗಳನ್ನೂ ಪರಿಚಯಿಸುವ ದಿಕ್ಕಿನಲ್ಲಿ ನಾವು ಸಾಗುತ್ತಿದ್ದೇವೆ.

ನಮಗೆ ಇದರ ಅರಿವಾಗುತ್ತಿದೆಯೇ ? ಅಧಿಕಾರ ಕೇಂದ್ರಗಳಲ್ಲಿರುವವರಿಗೆ, ಆಡಳಿತ ನೀತಿಗಳನ್ನು ರೂಪಿಸುವವರಿಗೆ, ಭಾರತದ ಸಂವಿಧಾನ ಒದಗಿಸಿರುವ ಸುಂದರ ಜಗತ್ತಿನ ಫಲಾನುಭವಿಗಳಾಗಿ ಹಿತವಲಯದಲ್ಲಿರುವ ಬೌದ್ಧಿಕ ಪ್ರವರ್ತಕರಿಗೆ ತಾವು ಬದುಕಿ ಸಾಗಿರುವ ಮತ್ತು ವರ್ತಮಾನದಲ್ಲಿ ಬದುಕುತ್ತಿರುವ ಹಾಗೂ ಮುಂದಿನ ಪೀಳಿಗೆಗೆ ತಾವು ಸೃಷ್ಟಿಸಲಿರುವ ಸಮಾಜ ಹೇಗಿರಬೇಕು ಎಂಬ ಪರಿವೆ, ಪರಿಜ್ಞಾನ ಇಲ್ಲದೆ ಹೋದರೆ ಏನಾಗುತ್ತದೆ ? ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿ ಆಡಳಿತ ನೀತಿಗಳನ್ನು ರೂಪಿಸಬೇಕಾದ ಶಾಸನ ಸಭೆಯ ಚುನಾಯಿತ ಪ್ರತಿನಿಧಿಗಳು ಸಂವಿಧಾನ ನಿಷ್ಠೆಗಿಂತಲೂ ವ್ಯಕ್ತಿ/ಪಕ್ಷ ನಿಷ್ಠೆಗೇ ಹೆಚ್ಚು ಪ್ರಾಮುಖ್ಯತೆ ನೀಡಿದರೆ ಏನಾಗುತ್ತದೆ ?. ಶಿಕ್ಷಣ ಇಲಾಖೆಯನ್ನು ನಿರ್ವಹಿಸುವ ಸಚಿವರಿಗೆ ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದ ನಡುವೆ ಇರುವ ಅಂತರ, ವ್ಯತ್ಯಾಸ ಮತ್ತು ಅದರೊಳಗಿನ ಸೂಕ್ಷ್ಮಗಳ ಪರಿವೆ ಇಲ್ಲದಿದ್ದರೆ ಏನಾಗುತ್ತದೆ ? ಈ ಪ್ರಶ್ನೆಗಳಿಗೆ ಕರ್ನಾಟಕದ ಶಾಲಾ ಪಠ್ಯ ಪರಿಷ್ಕರಣೆಯ ಚಕ್ರತೀರ್ಥದಲ್ಲಿ ಮಿಂದೆದ್ದರೆ ಸ್ಪಷ್ಟ ಉತ್ತರ ಹೊಳೆಯಬಹುದು.

ಭವಿಷ್ಯದ ಪ್ರಜೆಗಳೆಂದೇ ಪರಿಭಾವಿಸಲಾಗುವ ಎಳೆಯ ಮಕ್ಕಳಿಗೆ ನಾವು ಮಾಡುವ ಬೋಧನೆಗಳು ಆ ಮಕ್ಕಳ ಬದುಕನ್ನಷ್ಟೇ ರೂಪಿಸುವುದಿಲ್ಲ, ಹಲವು ಪೀಳಿಗೆಗಳ ಸಮಾಜವನ್ನು ರೂಪಿಸುವ ಅಡಿಗಲ್ಲುಗಳಾಗುತ್ತವೆ. ಭಾರತೀಯ ಸಮಾಜ ನಡೆದುಬಂದ ಹಾದಿ, ನಡೆಯುತ್ತಿರುವ ಮಾರ್ಗ ಮತ್ತು ಮುಂದೆ ಕ್ರಮಿಸಲಿರುವ ಹೆದ್ದಾರಿ ಈ ಮೂರೂ ಮಾರ್ಗಗಳ ಇಬ್ಬದಿಯಲ್ಲಿರಬಹುದಾದ ಚಾರಿತ್ರಿಕ ಸತ್ಯಗಳು, ಮೌಲ್ಯಗಳು ಮತ್ತು ಸಾಮಾಜಿಕ ವಿದ್ಯಮಾನಗಳ ಪರಿಚಯದ ಮೂಲಕವೇ ನಾವು ಭವಿಷ್ಯದ ಪೀಳಿಗೆಯನ್ನು ರೂಪಿಸಲು ಸಾಧ್ಯ. ಹಾಗಾಗಿಯೇ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಕ್ರಮಗಳನ್ನು ರೂಪಿಸಲು ರಾಷ್ಟ್ರಮಟ್ಟದಲ್ಲೇ ಉನ್ನತ ಮಟ್ಟದ ಶಿಕ್ಷಣ ತಜ್ಞರನ್ನೊಳಗೊಂಡ ಸಮಿತಿಗಳನ್ನು ರಚಿಸಲಾಗಿದೆ. ಎನ್ಸಿಇಆರ್ಟಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸೈದ್ಧಾಂತಿಕವಾಗಿ ಭಿನ್ನ ಮಾರ್ಗ ಅನುಸರಿಸಿದರೂ, ಈ ಸಂಸ್ಥೆಯನ್ನು ಪ್ರತಿನಿಧಿಸುವ ಬೌದ್ಧಿಕ ವಲಯದ ಪ್ರತಿನಿಧಿಗಳಿಗೆ ವಿಶಾಲ ದೃಷ್ಟಿಕೋನ ಮತ್ತು ಚಾರಿತ್ರಿಕ ಅರಿವು ಇರುವುದನ್ನು ಇಂದಿಗೂ ಗಮನಿಸಬಹುದು. ಆಡಳಿತಾರೂಢ ಪಕ್ಷಗಳ ಹಸ್ತಕ್ಷೇಪವಿಲ್ಲದ ಸ್ವಾಯತ್ತ ಸಂಸ್ಥೆಯಾಗಿರಬೇಕಾದ ಇಂತಹ ಸಂಸ್ಥೆಗಳನ್ನೂ ಸಹ ರಾಜಕೀಯ ಪ್ರಭಾವಕ್ಕೊಳಪಡಿಸಿ ಕಲುಷಿತಗೊಳಿಸಿರುವುದು ಭಾರತದ ದುರಂತ.

ಶಾಲಾ ಶಿಕ್ಷಣದ ಹಂತದಲ್ಲಿ ಮಕ್ಕಳಿಗೆ ಏನು ಬೋಧಿಸಬೇಕು ? ಬದುಕಿನ ಮೌಲ್ಯಗಳನ್ನೋ ಯಾವುದೋ ಒಂದು ನಿರ್ದಿಷ್ಟ ಸೈದ್ಧಾಂತಿಕ ಮೌಲ್ಯಗಳನ್ನೋ ? ಈ ಪ್ರಶ್ನೆಗೆ ಪ್ರಜ್ಞಾವಂತ ಸಮಾಜ ಉತ್ತರ ಕಂಡುಕೊಳ್ಳಬೇಕಿದೆ. ವಿಕಸನದ ಹಂತದಲ್ಲಿರುವ ಮಕ್ಕಳಿಗೆ ಪ್ರಪ್ರಥಮವಾಗಿ ನಮ್ಮ ದೇಶದ ಸಂವಿಧಾನ ಪ್ರತಿಪಾದಿಸುವಂತಹ ಉನ್ನತ ಧ್ಯೇಯಾದರ್ಶಗಳನ್ನು, ಮೌಲ್ಯಗಳನ್ನು ಮತ್ತು ಸಾಮಾಜಿಕ ಚಿಂತನೆಗಳನ್ನು ಪರಿಚಯಿಸುವುದು ನಮ್ಮ ಆದ್ಯತೆಯಾಗಬೇಕು. ಏಕೆಂದರೆ ತಮ್ಮ ಪ್ರಾಥಮಿಕ ವ್ಯಾಸಂಗ ಮುಗಿಸಿ, ಪ್ರೌಢಾವಸ್ಥೆಗೆ ತಲುಪಿ, ಬಾಹ್ಯ ಸಮಾಜದೊಡನೆ ಬೆಸೆದುಕೊಳ್ಳುವ ಮಕ್ಕಳಿಗೆ, ತಮ್ಮ ಸಾರ್ವಜನಿಕ ಬದುಕಿನ ಸೋಪಾನವೇ ಈ ದೇಶದ ಸಂವಿಧಾನ ಎಂಬ ಅರಿವು ಮೂಡಿರಬೇಕು. (ಮುಂದವರೆಯಲಿದೆ..)

andolana

Recent Posts

ನಕ್ಸಲರು ಮುಖ್ಯವಾಹಿನಿಗೆ ಬರಬೇಕು: ಸಿಎಂ ಸಿದ್ದರಾಮಯ್ಯ

ಮಂಗಳೂರು: ನಕ್ಸಲರು ಮುಖ್ಯವಾಹಿನಿಗೆ ಬರಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಮಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ…

14 mins ago

ಬೆಳಗಾವಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್ ವಿಸ್ತರಿಸುವಂತೆ ಪ್ರಧಾನಿ ಮೋದಿಗೆ ಜಗದೀಶ್‌ ಶೆಟ್ಟರ್‌ ಮನವಿ

ನವದೆಹಲಿ: ಸಂಸದ ಜಗದೀಶ್‌ ಶೆಟ್ಟರ್‌ ಅವರಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬೆಂಗಳೂರು-ಧಾರವಾಡದ ನಡುವೆ ಸಂಚರಿಸುತ್ತಿರುವ ವಂದೇ…

37 mins ago

ಕಾಂಗ್ರೆಸ್‌ ನಾಯಕರು ಕುರ್ಚಿ ಭದ್ರತೆಗಾಗಿ ಆಟ ಆಡ್ತಿದ್ದಾರೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬಾಗಲಕೋಟೆ: ರಾಜ್ಯ ಕಾಂಗ್ರೆಸ್‌ ನಾಯಕರು ಜನರ ಸಮಸ್ಯೆಗೆ ಸ್ಪಂದಿಸುವ ಬದಲು ತಮ್ಮ ತಮ್ಮ ಕುರ್ಚಿ ಭದ್ರತೆಗೆ ಆಟ ಆಡುತ್ತಿದ್ದಾರೆ ಎಂದು…

51 mins ago

ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ: ರಾಜ್ಯದಲ್ಲಿ ವರ್ಷದ ಮೊದಲ ಮಳೆಯಾಗುವ ಸಾಧ್ಯತೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಪರಿಚಲನೆ ಏರ್ಪಟ್ಟಿದ್ದು, ಕರ್ನಾಟಕದಲ್ಲಿ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ…

1 hour ago

ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ: ವಿಪಕ್ಷ ನಾಯಕ ಆರ್.ಅಶೋಕ್‌ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಸಚಿವರ ಡಿನ್ನರ್‌ ಮೀಟಿಂಗ್‌ ಭಾರೀ ಚರ್ಚೆಯಾಗುತ್ತಿದ್ದು, ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್‌ ಲೇವಡಿ ಮಾಡಿದ್ದಾರೆ. ಈ…

2 hours ago

ರಾಜ್ಯ ಸರ್ಕಾರ ಅನ್ನದಾತರನ್ನು ಸಂಕಷ್ಟಕ್ಕೆ ದೂಡಿದೆ: ಆರ್.ಅಶೋಕ್‌ ಆಕ್ರೋಶ

ಬೆಂಗಳೂರು: ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ನೆರವಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿರುವ ಪ್ರತಿಪಕ್ಷ ನಾಯಕ…

2 hours ago