ಪ್ರಧಾನಿ ಭೇಟಿಯ ಪ್ರತಿಫಲ ದಕ್ಕಲು ‘ಪ್ರಚಾರ’ ರಾಜಕಾರಣವಲ್ಲ, ‘ಅಭಿವೃದ್ಧಿ’ ರಾಜಕಾರಣ ಬೇಕು!

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ ೨೧ರಂದು ಮೈಸೂರಿನ ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಯೋಗ ಪ್ರದರ್ಶನ ನೀಡಲಿದ್ದಾರೆ. ಇವರ ಜತೆ ಸುಮಾರು ೧೫ ಸಾವಿರಕ್ಕೂ ಹೆಚ್ಚು ಮಂದಿ ಹಾಗೂ ಮುಖ್ಯಮಂತ್ರಿ, ರಾಜ್ಯಪಾಲರು, ಜಿಲ್ಲಾ ಉಸ್ತುವಾರಿ ಸಚಿವರು ಕೂಡಾ ಭಾಗಿಯಾಗಲಿದ್ದಾರೆ. ಸುಮಾರು ಒಂದು ಗಂಟೆ ಕಾಲ ಯೋಗ ಪ್ರದರ್ಶನ ಸೇರಿದಂತೆ ಸುಮಾರು ೩ ಗಂಟೆಗಳ ಕಾಲ ಮೈಸೂರು ಅರಮನೆ ಆವರಣ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

ಈ ಕಾರ್ಯಕ್ರಮಕ್ಕಾಗಿ ಮೈಸೂರು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸಮರೋಪಾದಿಯಲ್ಲಿ ಅಹರ್ನಿಶಿ ಕಾಮಗಾರಿ’ಗಳನ್ನು ಮಾಡತೊಡಗಿವೆ. ಸುಕ್ಕುಗಟ್ಟಿದ ಕೆನ್ನೆಯಂತೆ ಇದ್ದ ಹೆದ್ದಾರಿಗಳಿಗೆ ಮೇಕಪ್ ಮಾಡಿ, ಸಿನಿಮಾ ನಾಯಕಿಯ ನುಣುಪಾದ ಕೆನ್ನೆಯಂತೆ ಮಾಡಲಾಗುತ್ತಿದೆ. ಇದಕ್ಕಾಗಿ ಸುಮಾರು ೧೫ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ ಅವರೇ ಖುದ್ದಾಗಿ ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಬಂದಿಳಿಯುವ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮೈಸೂರಿನ ರೇಸ್‌ಕೋರ್ಸ್ ಬಳಿ ಇರುವ ಖಾಸಗಿ ಹೋಟೆಲ್ ತನಕ ಕಳೆದ ಎರಡು ವಾರಗಳಿಂದ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿದೆ.

ಮೈಸೂರು-ನಂಜನಗೂಡು ಚತುಷ್ಪಥ ರಸ್ತೆಯ ವಿಭಜಕದಲ್ಲಿ ಸಸಿಗಳೊಪಾದಿಯಲ್ಲಿ ಬೆಳೆದುಕೊಂಡಿದ್ದ ಗಿಡಗಳನ್ನು ಕತ್ತರಿಸಲಾಗಿದೆ. ಹುಲ್ಲು-ಮುಳ್ಳು ಪೊದೆಗಳನ್ನು ಕಿತ್ತುಹಾಕಿ ಸ್ವಚ್ಛಗೊಳಿಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಬೇಲಿಯಂತೆ ಬೆಳೆದು ನಿಂತಿದ್ದ ಪೊದೆಗಳನ್ನೂ ಕೂಡಾ ಸ್ವಚ್ಛಗೊಳಿಸಲಾಗಿದೆ. ಮಧುವನದಿಂದ ಜೆಎಸ್‌ಎಸ್ ಕಾಲೇಜಿನವರೆಗೂ ದೊಡ್ಡ ಮೋರಿಯನ್ನು ಕ್ಲೀನ್ ಮಾಡಿ, ಒಂದು ಬದಿಯಲ್ಲಿ ಬೆಳೆದುಕೊಂಡಿದ್ದ ಗಿಡ-ಗಂಟಿಗಳನ್ನು ತೆರವುಗೊಳಿಸಲಾಗಿದೆ. ಗಣಪತಿ ಸಚ್ಚಿದಾನಂದ ಆಶ್ರಮದಿಂದ ಮೊದಲ್ಗೊಂಡು ಬಂಡೀಪಾಳ್ಯದ ತನಕ ರಸ್ತೆ ಬದಿಯಲ್ಲಿ ಹೊಸದಾಗಿ ಬೀದಿ ದೀಪಗಳನ್ನು ಅಳವಡಿಸಲು ಕಂಬಗಳನ್ನು ನೆಡುವ ಕಾರ್ಯವೂ ಭರದಿಂದ ಸಾಗಿದೆ. ಅರಮನೆಯ ಸುತ್ತಲಿನ ರಸ್ತೆ, ಪಾದಾಚಾರಿ ಮಾರ್ಗವೂ ದುರಸ್ತಿಯಾಗುತ್ತಿದೆ.
ಪ್ರಧಾನಿಯವರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಭೇಟಿ ನೀಡುವ ಕಾರ್ಯಕ್ರಮವಿರುವುದರಿಂದ ಬೋಗಾದಿ ರಸ್ತೆಯ ಹುಬ್ಬು-ತಗ್ಗುಗಳನ್ನು ಒಂದು ಸಮ ಮಾಡಲಾಗಿದೆ. ಇದನ್ನು ನೋಡಿದರೇ ಮೈಸೂರು ದಸರಾ ಮೂರು ತಿಂಗಳ ಮೊದಲೇ ಬಂದಿಬಿಟ್ಟಿತೇನೋ ಎನ್ನುವಷ್ಟರ ಮಟ್ಟಿಗೆ ಸಾಂಸ್ಕೃತಿಕ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಳುತ್ತಿದೆ.

ಯೋಗ ಪ್ರದರ್ಶನವಲ್ಲದೇ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಭೆಯನ್ನು ಏರ್ಪಡಿಸಲಾಗಿದೆ. ಇಲ್ಲಿ ಮೋದಿಯವರು ಕೇಂದ್ರ ಸರ್ಕಾರದ ಪುರಷ್ಕೃತ ಯೋಜನೆಗಳ ಫಲಾನುಭವಿಗಳ ಜತೆ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ೩೦ರಿಂದ ೪೦ ಸಾವಿರ ಜನರನ್ನು ಸೇರಿಸುವ ಆಲೋಚನೆಯೂ ಬಿಜೆಪಿ ಪಕ್ಷಕ್ಕೆ ಇದೆ. ಇದೊಂದು ತರಹ ಮುಂದೆ ಬರುವ ಚುನಾವಣೆಗೆಗಳಿಗೆ ಶಕ್ತಿ ಪ್ರದರ್ಶನ ವೇದಿಕೆಯಾಗಬಹುದು. ಈ ಎಲ್ಲದರ ನಡುವೆ ಆರಮನೆಯಲ್ಲಿ ಮೋದಿಯವರೊಂದಿಗೆ ಯೋಗವನ್ನು ಪ್ರದರ್ಶನ ಮಾಡುವ ಮಂದಿಯ ಪ್ರವೇಶದ ವಿಚಾರದಲ್ಲಿ ಬಿಜೆಪಿ ಪಕ್ಷದ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್.ಎ.ರಾಮದಾಸ್ ಅವರ ನಡುವೇ ತಿಕ್ಕಾಟವು ಸಾರ್ವಜನಿಕರ ಎದುರೇ ‘ಪ್ರದರ್ಶನ’ಗೊಂಡಿದೆ. ಇದು ಯೋಗ ಕಾರ್ಯಕ್ರಮದ ‘ಫಲ’ವನ್ನು ಗರಿಷ್ಠ ಮಟ್ಟದಲ್ಲಿ ತಮ್ಮ ಪಾಲಿಗೆ ದಕ್ಕಿಸಿಕೊಳ್ಳಬೇಕು ಎನ್ನುವ ಉಮೇದು ಎನ್ನುವ ಮಾತುಗಳು ಜನರಿಂದ ಕೇಳಿಬರುತ್ತಿವೆ. ಅಲ್ಲದೇ ಮೋದಿಯವರ ಜತೆ ಯೋಗ ಪ್ರದರ್ಶನ ಮಾಡುವವರ ಸಂಖ್ಯೆಯನ್ನು ನಿರ್ಧಾರ ಮಾಡುವುದು ಪ್ರಧಾನಿಯವರ ವಿಶೇಷ ಭದ್ರತಾ ಪಡೆಯು ಸುರಕ್ಷತಾ ದೃಷಿಯಿಂದ ಭದ್ರತಾ ಪಡೆಯು ಎಷ್ಟು ಸಂಖ್ಯೆ ಎಂದು ಸೂಚನೆ ಕೊಡುತ್ತದೋ ಅಷ್ಟೇ ಅಂತಿಮವಾಗುತ್ತದೆ. ಆದರೆ ಅದಕ್ಕೂ ಮೊದಲು ಜನಪ್ರತಿನಿಧಿಗಳಿಬ್ಬರೂ ಎಂಟು ಸಾವಿರ- ಹದಿಮೂರು ಸಾವಿರ ಎಂದು ಹೇಳುತ್ತಿರುವುದು ಒಂದು ರೀತಿಯ ಪ್ರಹಸನದಂತೆ ಕಾಣುತ್ತಿದೆ.

ಬಿಜೆಪಿಯ ಶಾಸಕರು ಹಾಗೂ ಮೈಸೂರು-ಕೊಡಗು ಸಂಸದರ ನಡುವೆ ಇಂತಹ ಕ್ರೆಡಿಟ್ ರ್ವಾ ಇದೇ ಮೊದಲಲ್ಲ. ಹಿಂದೆ ಹಲವಾರು ವಿಚಾರಗಳಿಗೆ ‘ನಾವೇ- ನಾವೇ’ ಎನ್ನುತ್ತಾ ಮಾಧ್ಯಮಗಳ ಮೈಕಿನ ಮುಂದೆ ಮಾತನಾಡಿದ್ದು ಆಗಿದೆ. ಈಗ ಇದು ಪ್ರಧಾನಿಯವ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲೂ ಮುಂದುವರಿದಿದೆ ಎಂದು ಹತ್ತಿರದಿಂದ ಕಂಡವರ ವಿಶ್ಲೇಷಣೆಯಾಗಿದೆ. ಮೋದಿಯವರ ಗಮನ ಸೆಳೆಯುವುದಕ್ಕಾಗಿಯೇ ಶಾಸಕ ರಾಮದಾಸ್ ಅವರು ಶುಕ್ರವಾರದಿಂದ ಎರಡು ದಿನಗಳ ಕಾಲ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಅರ್ಜಿ ಸಲ್ಲಿಕೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಚಾಲನೆ ನೀಡುವ ಸಮಾರಂಭಗಳನ್ನು ಹಮ್ಮಿಕೊಂಡಿದ್ದಾರೆ. ಅತ್ತ ಪ್ರತಾಪ್ ಸಿಂಹ ಕೂಡ ಮೈಸೂರಿನಲ್ಲಿ ಎಲ್ಲಾ ರಸ್ತೆಗಳಲ್ಲೂ ಓಡಾಡಿ ಕ್ರೆಡಿಟ್ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಮೈಸೂರು ಪ್ರಾಂತ್ಯದ ಸಮಸ್ಯೆಗಳು, ಆಗಬೇಕಾಗಿರುವ ಅಭಿವೃದ್ಧಿ ಯೋಜನೆಗಳ ಪಟ್ಟಿ ಸಿದ್ದ ಮಾಡಿ ಆಗಮಿಸುವ ಪ್ರಧಾನಿಗಳ ಮುಂದಿಟ್ಟು ಸ್ಥಳದಲ್ಲೇ ′ತಾತ್ವಿಕ ಒಪ್ಪಿಗೆ′ ಪಡೆಯುವ ′ಜಾಣತ′ವನ್ನು ಉಭಯ ನಾಯಕರು ಪ್ರದರ್ಶಿಸುತ್ತಿಲ್ಲದಿರುವುದು ಮೇಲ್ನೋಟಕ್ಕೆ ಅವರ ನಡವಳಿಕೆಯಿಂದಲೇ ಕಾಣಿಸುತ್ತಿದೆ. ಗೌರವಾನ್ವಿತ ಸಂಸದರು ಮತ್ತು ಶಾಸಕರು ′ಅಭಿವೃದ್ಧಿ ರಾಜಕಾರಣ′ ಮಾಡಿ ಪ್ರಚಾರ ಪಡೆಯುವ ಬದಲು ‘ಪ್ರಚಾರ ರಾಜಕಾರಣ’ ಮಾಡಲು ಹೋಗಿ ಅಭಿವೃದ್ಧಿಗೆ ಎರವಾಗಿಬಿಡಬಹುದೆಂಬ ಆತಂಕ ಜನರಲ್ಲಿದೆ. ಇಂತಹ ಅನಪೇಕ್ಷಿತ ನಡವಳಿಕೆಗಳನ್ನು ಉಭಯ ನಾಯಕರು ತಿದ್ದಿಕೊಳ್ಳಲು ಇನ್ನೂ ಕಾಲಮಿಂಚಿಲ್ಲ!

andolana

Recent Posts

ಓದುಗರ ಪತ್ರ | ರಾಜ್ಯ ವಿಧಾನ ಮಂಡಲ ಅಧಿವೇಶನ ಸದ್ಬಳಕೆಗೆ ದಾರಿ ಯಾವುದಯ್ಯ!?

ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ.…

21 hours ago

ಓದುಗರ ಪತ್ರ | ಹಿಂದಿ ಶಿಕ್ಷಕರ ನೇಮಕಾತಿ ಏಕಿಲ್ಲ?

15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಹಿಂದಿ ಶಿಕ್ಷಕರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಇದು ಸಂವಿಧಾನ ಬಾಹಿರ ನಡೆ. ಇದು ಹಿಂದಿ…

21 hours ago

ಓದುಗರ ಪತ್ರ | ಕನ್ನಡ ಚಿತ್ರ; ಟಿಕೆಟ್‌ಗಳಲ್ಲಿ ಆಂಗ್ಲ ಹೆಸರು !

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡದ ಚಲನಚಿತ್ರಗಳು ಪ್ರದರ್ಶಿತವಾಗುತ್ತವೆ. ಗ್ರಾಹಕರಿಗೆ ನೀಡುವ ಟಿಕೆಟಿನಲ್ಲಿ ಸಿನಿಮಾದ ಹೆಸರೂ ಅಚ್ಚಾಗಿರುತ್ತದೆ.ಆದರೆ... ಕನ್ನಡ ಚಿತ್ರಕ್ಕೆ ಖರೀದಿಸುವ ಟಿಕೆಟ್‌ನಲ್ಲಿ ಚಿತ್ರದ…

21 hours ago

ಓದುಗರ ಪತ್ರ | ಮತದಾರರ ಕರಡು ಪಟ್ಟಿಯ ತಪ್ಪುಗಳನ್ನು ಸರಿಪಡಿಸಿ

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್-೨೬) ಕಾರ್ಯ ಮುಗಿದು ಇದೀಗ ಕರಡು ಪಟ್ಟಿ ಬಿಡುಗಡೆಯಾಗಿದೆ. ಎಸ್‌ಐಆರ್ ಬಗ್ಗೆ ಹಲವಾರು ಅನುಮಾನ…

21 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಕಳಚಿದ ಚಲನಚಿತ್ರ ಪತ್ರಿಕೋದ್ಯಮದ ಹಿರಿಯ ಕೊಂಡಿ ಶ್ರೀಕೃಪಾ

ಕನ್ನಡ ಚಿತ್ರವೊಂದು ದೇಶ-ವಿದೇಶಗಳಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಸಂದರ್ಭ. ಕನ್ನಡ ಚಿತ್ರರಂಗದ ಕಡೆ ಭಾರತದ ಉಳಿದ ಚಿತ್ರೋದ್ಯಮಗಳು ತಿರುಗಿ ನೋಡುವ ಬೆಳವಣಿಗೆ.…

21 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 28  ಶುಕ್ರವಾರ

22 hours ago