ಅಂಕಣಗಳು

ಸಂಕ್ರಾಂತಿಯ ಮುಸ್ಸಂಜೆಯಲಿ ರಂಗಗೀತೆಗಳ ಸುಸ್ವರ

ನಾ.ದಿವಾಕರ

ಮನುಜ ಸಂಬಂಧಗಳಲ್ಲಿ ಸ್ವಾಭಾವಿಕವಾಗಿ ಇರಬಹುದಾದ ಅಥವಾ ವಿಶಾಲ ಸಮಾಜದ ಸಾಂಸ್ಕೃತಿಕ ವಾತಾವರಣದಲ್ಲಿ ಸೃಷ್ಟಿಯಾಗಿರಬಹುದಾದ ಭಿನ್ನ ಭೇದಗಳನ್ನು ಮರೆತು ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಪಂಪ ವಾಕ್ಯವನ್ನು ಸುಸ್ಪಷ್ಟವಾಗಿ ಬಿತ್ತರಿಸುವ ಒಂದು ಕಲಾ ಮಾಧ್ಯಮ ರಂಗಭೂಮಿ. ಸಮಕಾಲೀನ ಸನ್ನಿವೇಶದಲ್ಲಿ ನಿಂತು ನೋಡಿದಾಗ, ದೇವನೂರರ ‘ಸಂಬಂಜ ಅನ್ನೋದು ದೊಡ್ಡು ಕಣಾ’ ಎಂಬ ಸಂವೇದನಾಶೀಲ ಪದಗಳು ಮತ್ತೆ ಮತ್ತೆ ನಮಗೆ ಪಂಪನನ್ನು ನೆನಪಿಸುತ್ತಲೇ ಇರುತ್ತವೆ. ಕುವೆಂಪು ಅವರ ‘ನಿರಂಕುಶಮತಿಗಳಾಗಿ ಎಂಬ ವೈಚಾರಿಕ ಪ್ರಜ್ಞೆಂ ಹುದಾದ ವಿವೇಕವನ್ನು ಪುನರುದ್ದೀಪನಗೊಳಿಸಲು ನೆರವಾಗುತ್ತಿರುತ್ತದೆ. ನವ ಉದಾರವಾದದ ಬಂಡವಾಳ-ಮಾರುಕಟ್ಟೆ ಸಂಸ್ಕೃತಿ ಹಾಗೂ ಕೋಮುವಾದ-ಮತಾಂಧತೆ ಪೋಷಿಸುವ ಪ್ರಾಚೀನ ಸಾಂಸ್ಕೃತಿಕ ದಾಳಿಗಳ ಪರಿಣಾಮ ಇಂದು ‘ಸಂಬಂಜ ಅನ್ನೋದು ಸಿಕ್ಖು ಕಣಾ’ (ದೇವನೂರರ ಕ್ಷಮೆ ಕೋರಿ) ಎಂಬ ಆತಂಕದ ಮಾತುಗಳು ನಮ್ಮ ನಡುವೆ ಧ್ವನಿಸಲಾರಂಭಿಸಿದೆ. ಮನುಷ್ಯ ಮನುಷ್ಯನ ನಡುವೆ ಎತ್ತರಿಸಲಾಗುತ್ತಿರುವ ಜಾತಿ-ಧರ್ಮಗಳ ಗೋಡೆಗಳು ಸಮಾಜದೊಳಗಿನ ಸಂವೇದನೆಯ ಸೇತುವೆಗಳನ್ನೂ ಹಂತಹಂತವಾಗಿ ದುರ್ಬಲಗೊಳಿಸುತ್ತಿವೆ.

ಆದರೂ ಯಾವುದೋ ಒಂದು ಮೂಲೆಯಲ್ಲಿ ನಮಗೆ ಮನುಜ ಸಂವೇದನೆಯ ಕ್ಷೀಣ ಧ್ವನಿ ಕೇಳಿಬರುತ್ತಲೇ ಇರುತ್ತದೆ. ಅದನ್ನು ಗುರುತಿಸಿ ಹೊರಹೆಕ್ಕುವ ಹಾಗೂ ಸಾರ್ವಜನಿಕ ಸಂಕಥನದ ಮೂಲ ಸ್ಥಾಯಿಯಾಗಿ ಹರಿಯಬಿಡುವ ಜವಾಬ್ದಾರಿ ನಾಗರಿಕತೆಯ ಮೇಲಿದೆ.

ರಂಗಭೂಮಿ, ಸಾಹಿತ್ಯ, ಚಿತ್ರಕಲೆ, ದೃಶ್ಯಕಲೆ ಮತ್ತು ಸಂಗೀತದ ವಿವಿಧ ಪ್ರಕಾರಗಳು ಈ ನೊಗ ಹೊರಬೇಕಾಗುತ್ತದೆ. ಆಧುನಿಕೋತ್ತರ ಯುಗದಲ್ಲಿ ಅಕ್ಷರ ಜಗತ್ತು ತನ್ನ ಈ ಜವಾಬ್ದಾರಿಗೆ ಒಂದು ಸ್ತರದಲ್ಲಿ ವಿಮುಖವಾಗುತ್ತಿರುವುದು ವಾಸ್ತವ. ಆದಾಗ್ಯೂ ಸಾಮಾಜಿಕ ಪ್ರಕ್ಷುಬ್ಧತೆಯ ನಡುವೆ ಕಟ್ಟಕಡೆಯ ವ್ಯಕ್ತಿಯೊಡನೆ ಸಂವೇದನಾಶೀಲ ಸಂಬಂಧಗಳನ್ನು ಕಟ್ಟಿಕೊಡುವ ಒಂದು ಸೇತುವೆಯಾಗಿ ಈ ಅಭಿವ್ಯಕ್ತಿ ಮಾಧ್ಯಮಗಳು ಜೀವಂತಿಕೆಯಿಂದಿವೆ.

ಆಳ್ವಿಕೆಯ ಅಧಿಕಾರಲೋಲುಪತೆಗೆ ಬಲಿಯಾಗಿ, ತನ್ನ ಸ್ವಂತಿಕೆ, ಸ್ವಾಯತ್ತತೆ ಹಾಗೂ ಬೌದ್ಧಿಕ ಸ್ವಾತಂತ್ರ್ಯವನ್ನು ಸ್ವಪ್ರೇರಣೆಯಿಂದ ಕಳಚಿಕೊಳ್ಳುವ ಅವಕಾಶವಾದಿ-ಸಮಯಸಾಧಕ ಬೌದ್ಧಿಕ ಪ್ರವೃತ್ತಿಯ ನಡುವೆಯೇ ತಳ ಸಮಾಜದ ಸೂಕ್ಷ್ಮತೆಗಳೊಡನೆ ಗುರುತಿಸಿಕೊಂಡು ವಿಶಾಲ ಜಗತ್ತನ್ನು ಧಿಕ್ಕರಿಸುವ ಒಂದು ಪ್ರವೃತ್ತಿಯೂ ಸಾಹಿತ್ಯಕವಾಗಿ ನಮ್ಮ ನಡುವೆ ಉಸಿರಾಡುತ್ತಿರುವುದು ಸಮಾಧಾನಕರ ಅಂಶ. ಇಂತಹ ಸಂದಿಗ್ಧತೆಯ ನಡುವೆ ರಂಗಭೂಮಿ ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ರಂಗಭೂಮಿ ತನ್ನೊಳಗಿನ ಜಾತ್ಯತೀತತೆಯ ಸೂಕ್ಷ್ಮಗಳನ್ನು, ಮನುಜ ಸಂಬಂಧಗಳ ಸಂವೇದನೆಯನ್ನು, ಸಮಾಜಮುಖಿ ಅಂತರ್ಭಾವವನ್ನು, ರಂಗ ಪ್ರಯೋಗಗಳ ಮೂಲಕ ಹೊರಗೆಡಹುತ್ತಲೇ ಬಂದಿದೆ. ಸಾಹಿತ್ಯಕ-ಸಾಂಸ್ಕೃತಿಕ ವಲಯದಲ್ಲಿ ನಡೆಯುತ್ತಿರುವ ಪಲ್ಲಟಗಳ ನಡುವೆಯೇರಂಗಭೂಮಿತನ್ನ ಸ್ವಾಯತ್ತ-ಸ್ವತಂತ್ರ ಅಭಿವ್ಯಕ್ತಿಯ ಮೂಲ ಸ್ಥಾಯಿಯನ್ನು ಕಾಪಾಡಿಕೊಂಡು ಬಂದಿದೆ. ಕೆಲವು ಅಪವಾದಗಳ ಹೊರತಾಗಿಯೂ ಇದು ವಾಸ್ತವ. ಇದಕ್ಕೆ ಕಾರಣ ರಂಗಭೂಮಿಯನ್ನೇ ತಮ್ಮ ಬದುಕಿನ ಹಾದಿಯಾಗಿ ಗುರುತಿಸಿಕೊಂಡಿರುವ ಅಸಂಖ್ಯಾತ ರಂಗಕರ್ಮಿಗಳು.

ರಂಗಪ್ರಯೋಗದ ವೈಶಿಷ್ಟ್ಯಗಳು : ದೃಶ್ಯಕಲೆ, ಸಂಗೀತ, ಸಾಹಿತ್ಯ, ನೃತ್ಯ ಮತ್ತು ಭಾವಾಭಿನಯಗಳ ಹೂರಣವಾಗಿ ರಂಗವೇದಿಕೆಯ ಮೇಲೆ ಮೂಡುವ ರಂಗಪ್ರಯೋಗಗಳು ಸಮಾಜದೊಳಗಿನ ಮನುಜ ಸೂಕ್ಷ್ಮ ಸಂಗತಿಗಳನ್ನು ಪ್ರೇಕ್ಷಕರ ಮುಂದಿಡುವಷ್ಟೇ ಪರಿಣಾಮಕಾರಿಯಾಗಿ, ಅಲ್ಲಿ ಗುರುತಿಸ ಬಹುದಾದ ಮನುಜ ವಿರೋಧಿ ಅವಲಕ್ಷಣಗಳನ್ನೂ ಪ್ರಸ್ತುತಪಡಿಸುತ್ತಾ, ಮುಖಾಮುಖಿಯಾಗಿಸುತ್ತಾ ಹೋಗುತ್ತವೆ. ಈ ಸಮ್ಮಿಶ್ರಣದ ನಡುವೆಯೇ ರೂಪುಗೊಳ್ಳುವ ಕಲಾವಿದರು ರಂಗಪ್ರಯೋಗಗಳ ಮೂಲಕವೇ ಕಲಾವೈವಿಧ್ಯತೆಯನ್ನು ಬೆಳೆಸಿಕೊಂಡಿರುತ್ತಾರೆ. ಅಭಿನಯದೊಂದಿಗೇ ರಂಗ ಸಂಗೀತ, ರಂಗವಿನ್ಯಾಸ, ರಂಗಸಜ್ಜಿಕೆ, ಬೆಳಕಿನ ವಿನ್ಯಾಸ, ಪ್ರಸಾಧನ, ನಿರ್ದೇಶನ, ಸಂಭಾಷಣೆ, ನೇಪಥ್ಯದ ಕ್ರಿಯಾಶೀಲ ಚಟುವಟಿಕೆಗಳೊಂದಿಗೆ ರಂಗಭೂಮಿಯ ಕಲಾವಿದರು ತಮ್ಮ ಕಲಾಭಿವ್ಯಕ್ತಿಗೆ ಸದಾ ಸಿದ್ಧವಾಗಿರುತ್ತಾರೆ. ಈ ಕಲಾವೈವಿಧ್ಯತೆ ಮತ್ತು ನೈಪುಣ್ಯತೆಯೇ ರಂಗಭೂಮಿಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಾ ಜನರ ನಡುವೆ ನೆಲೆಸಲು ನೆರವಾಗುತ್ತದೆ.

ಮನುಜ ಸಂಬಂಧಗಳನ್ನು ಹರಿತಗೊಳಿಸುವ ಕ್ರಿಯಾಶೀಲ ಅಭಿವ್ಯಕ್ತಿಯಲ್ಲಿ ತೊಡಗುವ ರಂಗಕರ್ಮಿಗಳು ರಂಗ ಸಂಗೀತದ ಮೂಲಕವೂ ಜನಮಾನಸದ ನಡುವೆ ಜಾತ್ಯತೀತ ಸಂವೇದನಾಶೀಲ ಮೌಲ್ಯಗಳನ್ನು ಬಿತ್ತುತ್ತಲೇ ಇರುತ್ತಾರೆ. ರಂಗಗೀತೆ ಅಥವಾ ರಂಗ ಸಂಗೀತವನ್ನು ಒಂದೇ ವೇದಿಕೆಯಲ್ಲಿ ಕೇಳುವ ಅವಕಾಶ ದೊರೆಯುವುದು ವಿರಳ. ಅಂತಹ ಒಂದು ಸದವಕಾಶವನ್ನು ಒದಗಿಸಿದ್ದು ಮೈಸೂರಿನ ರಂಗಾಯಣ ಕಲಾವಿದರು, 2024ರ ಸಂಕ್ರಾಂತಿಯ ಒಂದು ಮುಸ್ಸಂಜೆಯಲ್ಲಿ.

ರಂಗಾಯಣದ ಕಲಾವಿದರು ರಂಗಸಂಗೀತದ ಮೂಲಕ ತಮ್ಮೊಳಗಿನ ಗಾಯನ ಕಲೆಯನ್ನು ಪಸರಿಸುತ್ತಾ ಜನವರಿ 14ರ ಸಂಜೆ ರಂಗಾಯಣದ ಆವರಣದಲ್ಲಿರುವ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಒಂದು ಅಮೂರ್ತ ಭಾವದ ನಾದದಲೆಯನ್ನೇ ಸೃಷ್ಟಿಸಿದ್ದು ಕರ್ಣಾನಂದವನ್ನುಂಟುಮಾಡಿತ್ತು. ಚಿತ್ರಗೀತೆಗಳು ನೀಡುವ ಮನರಂಜನೆ, ಶಾಸ್ತ್ರೀಯ ಸಂಗೀತ ನೀಡುವ ಭಕ್ತಿಭಾವದಸಿಂಚನ ಇವೆರಡಕ್ಕಿಂತಲೂ ಭಿನ್ನವಾಗಿರಂಗಸಂಗೀತ ಶೋತೃಗಳಲ್ಲಿ ಭಾವಸ್ಪರ್ಶದ ಒಂದು ಆಸ್ವಾದನೆಯನ್ನು ಸುರಿಸುತ್ತದೆ. ರಂಗ ಗೀತೆಗಳಲ್ಲಿರುವ ಸಾಹಿತ್ಯ ಹೆಚ್ಚು ಹೃದಯಸ್ಪರ್ಶಿಯಾಗುವುದಕ್ಕೆ ಕಾರಣ ಅವುಗಳಲ್ಲಡಗಿರುವ ಮನುಜ ಸೂಕ್ಷ್ಮತೆ-ಸಂವೇದನೆಯ ಭಾವಾಭಿವ್ಯಕ್ತಿ. ವಿಭಿನ್ನ ವಾದ್ಯ ಸಂಯೋಜನೆ ಮತ್ತು ವಿಶಿಷ್ಟ ಧ್ವನಿ ಸಂಯೋಜನೆಯ ಮೂಲಕ ಹರಿಯುವ ನಾದದಲೆಗಳು ಸಮೂಹ ಗಾಯನವಾಗಿ ಹೊರಹೊಮ್ಮುವಾಗ ಮುಸ್ಸಂಜೆಯ ಹಕ್ಕಿಗಳೂ ಬಹುಶಃ ಮೌನ ಶೋತೃಗಳಾಗಿಬಿಡುತ್ತವೆ.

ಎಳ್ಳು ಬೆಲ್ಲದ ಒಂದು ರಸಸಂಜೆ : ಇಂತಹ ಒಂದು ರಸಾನುಭವಕ್ಕೆ ಕಾರಣಕರ್ತರಾಗಿದ್ದು ರಂಗಾಯಣದ ಹಿರಿ-ಕಿರಿಯ ಕಲಾವಿದರು. ಜನವರಿ 14, ರಂಗಾಯಣದ ಸಂಸ್ಥಾಪನಾ ದಿನಾಚರಣೆಯ ಒಂದು ಸಂದರ್ಭ. ಸಾಮಾನ್ಯವಾಗಿ ವಾರ್ಷಿಕ ‘ಬಹುರೂಪಿ’ ರಂಗೋತ್ಸವಕ್ಕೆ ನಾಂದಿ ಹಾಡಬೇಕಿದ್ದ ದಿನ ಇದು. ಆಡಳಿತ ವ್ಯವಸ್ಥೆಯ ಅಸೂಕ್ಷ್ಮತೆಗಳಿಂದ ಇದು ಸಾಧ್ಯವಾಗದೆ ಹೋದರೂ, ಆ ನಿರ್ವಾತವನ್ನು ಅಷ್ಟೇ ಕಲಾತ್ಮಕತೆಯೊಂದಿಗೆ ತುಂಬಿದ ಶ್ರೇಯ ಈ ರಂಗಸಂಗೀತ ಸಂಜೆಯನ್ನು ಸಾಕ್ಷಾತ್ಕರಿಸಿದ ರಂಗಾಯಣದ ಕಲಾವಿದರಿಗೆ ಸಲ್ಲಬೇಕು. 50 ರಸನಿಮಿಷಗಳಲ್ಲಿ ಒಂಬತ್ತು ರಂಗಗೀತೆಗಳನ್ನು ಪ್ರಸ್ತುತಪಡಿಸಿದ ತಂಡದಲ್ಲಿ ಹಿರಿಯ ಕಲಾವಿದರಾದ ಪ್ರಶಾಂತ ಹಿರೇಮಠ, ಕೆ.ಆರ್.ನಂದಿನಿ, ವಿನಾಯಕ ಭಟ್, ಗೀತಾ ಮೊಂಟಡ, ನೂರ್ ಅಹಮದ್, ಬಿ.ಎನ್.ಶಶಿಕಲಾ, ಸಂತೋಷ್ ಕೂಸನೂರ್, ಪ್ರಮೀಳಾ ಬೇಂದ್ರೆ ತಮ್ಮ ಗಾನ ಸುಧೆಯನ್ನು ಹರಿಸಿದ್ದರು. ಈ ವಾಹಿನಿಗೆ ವಾದ್ಯಧ್ವನಿ ಕೂಡಿಸಿದವರು ಹಿರಿಯ ರಂಗಕರ್ಮಿ ಮೈಮ್ ರಮೇಶ್, ಸುಬ್ರಮಣ್ಯ ಮತ್ತು ಧನಂಜಯ್.

ರಂಗಾಯಣ ಹುಟ್ಟಿದ ದಿನದಂದು 14 ಜನವರಿ 1989, ಕವಿ ಯೋಗಾನರಸಿಂಹ ಅವರು ರಚಿಸಿದ್ದ ‘ಸಂಕ್ರಾಂತಿ ತಾರಲಿ ರಂಗ ಕ್ರಾಂತಿ’ ಗೀತೆಯೊಂದಿಗೆ ಆರಂಭವಾದ ಸುಶ್ವರನಾದದ ಅಲೆಗಳು ಅಲ್ಲಿ ನೆರೆದಿದ್ದವರನ್ನು ಒಂದು ಗಂಟೆಯ ಕಾಲ ಹಿಡಿದಿಟ್ಟಿತ್ತು. ನಡುನಡುವೆ ಹಂಚಲಾದ ಎಳ್ಳು ಬೆಲ್ಲದೊಂದಿಗೆ ಪ್ರೇಕ್ಷಕರಿಗೆ ಅದೇ ದಿನದಂದು ರಂಗಭೀಷ್ಮಬಿ.ವಿ.ಕಾರಂತರಿಂದ ರಾಗ ಸಂಯೋಜಿಸಲ್ಪಟ್ಟ ‘ಸೋಲಿಸಬೇಡಾ ಗೆಲಿಸಯ್ಯಾ’ ಜನಪದ ಗೀತೆ ಹಲವಾರು ಅಡೆತಡೆಗಳನ್ನು ದಾಟುತ್ತಲೇ ಸಾಗುತ್ತಿರುವ ರಂಗಾಯಣ ಮತ್ತು ರಂಗಭೂಮಿಯ ದೀರ್ಘ ಪಯಣವನ್ನು ನೆನಪಿಸುವಂತಿತ್ತು. ರಾಷ್ಟ್ರಕವಿ ಕುವೆಂಪು ವಿರಚಿತ ಬೊಮ್ಮನಹಳ್ಳಿ ಕಿಂದರಜೋಗಿ ನಾಟಕದಲ್ಲಿ ಅಳವಡಿಸಲಾಗಿರುವ ‘ದೊಡ್ಡವರೆಲ್ಲರ ಹೃದಯದಿ ಬಂದಾನೋ ಬಂದಾನೋ ಕಿಂದರಜೋಗಿ’ ಬಿ.ವಿ.ಕಾರಂತರ ಹಾಡು ರಂಗಾಯಣದ ಕಲಾವಿದರಿಂದ ಗಾನಸುಧೆಯಾಗಿ ಹರಿದಾಗ ಪ್ರೇಕ್ಷಕರೂ ಸ್ಪಂದಿಸುವಂತಾಗಿದ್ದು ಈ ಹಾಡುಗಳ ಸಾರ್ವಕಾಲಿಕತೆಗೆ ಸಾಕ್ಷಿಯಾಗಿತ್ತು.

ರಂಗಭೂಮಿ ಕೇವಲ ಜಾತಿ-ಮತಗಳ ಬೇಲಿಗಳನ್ನು ಮಾತ್ರ ದಾಟುವುದಿಲ್ಲ. ದೇಶ-ಭಾಷೆಯ ಗಡಿಗಳನ್ನೂ ದಾಟಿ ತನ್ನ ಸಂವೇದನಾಶೀಲತೆಯನ್ನು ಹಂಚಿಕೊಳ್ಳುತ್ತದೆ. ಇದರ ಒಂದು ನಿದರ್ಶನವಾಗಿ ಯೂರಿಪಿಡಿಸ್ ವಿರಚಿತ ‘ಹಿಪೋಲಿಟಸ್’ ಎಂಬ ಗ್ರೀಕ್ ನಾಟಕದಲ್ಲಿ ಅಳವಡಿಸಲಾದ ‘ಏರೋಸ್ ಒಕ್ಕಾಟೊಮಾಟುನ್’ (ಸಂಗೀತ ಸಂಯೋಜನೆ: ಫಿಲಿಪ್ ಕೊವಾಂಟಿಸ್) ಎಂಬ ಗೀತೆಯನ್ನು ಪ್ರಸ್ತುತಪಡಿಸಿದ ರಂಗಾಯಣ ಕಲಾವಿದರು ಸಾಂಸ್ಕೃತಿಕ ಅಭಿವ್ಯಕ್ತಿಯ ಸಾರ್ವತ್ರಿಕತೆಗೆ ಸಾಕ್ಷಿಯಾದರು. ಬಿ.ವಿ.ಕಾರಂತರ ಅಗ್ನಿವರ್ಣ ನಾಟಕದ ಹೆಚ್.ಎಸ್.ವೆಂಕಟೇಶಮೂರ್ತಿ ವಿರಚಿತ ‘ಚಿನ್ನ ಕನಸೇ ಉಳಕೋ ಕಡೀವರೆಗೂ’, ವೈ.ಎಂ.ಪುಟ್ಟಣ್ಣಯ್ಯನವರ ಸದಾರಮೆ ನಾಟಕದ ಬೆಳ್ಳಾಳೆ ನರಸಿಂಹ ಶಾಸ್ತ್ರಿ ವಿರಚಿತ ‘ದೇವಿ ಭುವನ ಮನಮೋಹಿನಿ’, ಕಾರಂತರು ರಂಗರೂಪಕ್ಕೆ ಅಳವಡಿಸಿದ್ದ ದೇವನೂರರ ಕುಸುಮಬಾಲೆಯಲ್ಲಿ ಅಳವಡಿಸಲಾಗಿದ್ದ ಅಲ್ಲಮನ ‘ಎತ್ತಣ ಮಾಮರ ಎತ್ತಣ ಕೋಗಿಲೆ’, ಅದೇ ನಾಟಕದ ಆಗ ಕುಸುಮಾಳ ಕಣ್ಣಳ ಜಲವು ನಿಂತೀತಲ್ಲಾ’ ಗೀತೆಗಳು ‘ಸಂಬಂಜ ಅನ್ನೋದು ದೊಡ್ಡು ಕಣಾ’ ಎಂಬ ಕಾವ್ಯಾತ್ಮಕ ನುಡಿಗಳಿಗೆ ಸಮಕಾಲೀನ ಸ್ಪರ್ಶ ನೀಡಿದಂತಿತ್ತು. ಚಂದ್ರಶೇಖರ ಕಂಬಾರರ ‘ಕಾಡಿಗೆ ಕೈಕಾಲು ಮೂಡಿ’ ಗೀತೆಯೊಂದಿಗೆ ರಂಗ ಸಂಜೆ ಪರಿಸಮಾಪ್ತಿಯಾಗಿತ್ತು.

andolanait

Recent Posts

ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್‌ ಟ್ರೋಫಿಗೆ ಚಾಲನೆ

ಮಡಿಕೇರಿ: ಪಾಂಡಂಡ ಕುಟ್ಟಪ್ಪ ಅವರ ಕನಸಿನ ಕೂಸಾದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ…

2 hours ago

ಹಲವು ಹೊಸ ದಾಖಲೆಗಳಿಗೆ ಷರಾ ಬರೆದ 2025

ಗಿರೀಶ್‌ ಹುಣಸೂರು  ೨೦೨೫ನೇ ಸಾಲಿನಲ್ಲಿ ದೇಶ, ರಾಜ್ಯದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಭಾರತ ಮೂಲದ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ೧೮…

2 hours ago

ಸಫಾರಿ ನಿರ್ಬಂಧ: ಮೈಸೂರಿನತ್ತ ಪ್ರವಾಸಿಗರ ದಂಡು

ಕೆ.ಬಿ.ರಮೇಶನಾಯಕ ಮೈಸೂರು: ಮಾನವ-ವನ್ಯಜೀವಿಗಳ ಸಂಘರ್ಷವನ್ನು ತಡೆಯಲು ಬಂಡೀಪುರ, ನಾಗರ ಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಸಫಾರಿಗೆ ನಿರ್ಬಂಧ ವಿಧಿಸಿರುವುದರ ನಡುವೆಯೂ ಕ್ರಿಸ್ಮಸ್,…

2 hours ago

ಸಿಲಿಂಡರ್ ಸ್ಪೋಟ ಪ್ರಕರಣ : ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…

10 hours ago

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

14 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

14 hours ago