ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್
ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ತ್ರಿಪುರಾ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಈ ಏಳು ಈಶಾನ್ಯ ರಾಜ್ಯಗಳು ನೈಸರ್ಗಿಕವಾಗಿ ಸಂಪದ್ಭರಿತವಾಗಿದ್ದರೂ, ನೆರೆಹೊರೆಯ ಮೈನ್ಮಾರ್, ನೇಪಾಳ, ಭೂತಾನ್, ಬಾಂಗ್ಲಾ ದೇಶ ಮುಂತಾದ ದೇಶಗಳಿಂದ ವಲಸೆ ಬರುವವರು ಮತ್ತು ನುಸುಳುಕೋರರು ಹಾಗೂ ಬಂಡುಕೋರರಿಂದ ಇಲ್ಲಿ ಶಾಂತಿ ಎಂಬುದು ಮರೀಚಿಕೆಯಾಗಿದೆ. ವರ್ಷವಿಡೀ ಒಂದಲ್ಲಾ ಒಂದು ಕಾರಣಕ್ಕೆ ಹಿಂಸಾಚಾರ, ಭಯೋತ್ಪಾದನೆ ಮತ್ತು ಸ್ಥಳೀಯ ಜನರ ನಡುವೆ ಇರುವ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯದಿಂದ ಈಶಾನ್ಯ ರಾಜ್ಯಗಳು ನಲುಗಿ ಹೋಗುತ್ತಿವೆ. ಈಶಾನ್ಯ ರಾಜ್ಯಗಳು ದೇಶದ ಇತರ ಭಾಗದಂತೆ ಮುಂಚೂಣಿಗೆ ಬರಬೇಕಾದರೆ ಇನ್ನೂ ಹತ್ತಾರು ವರ್ಷಗಳೇ ಬೇಕಾಗಬಹುದು. ಕೇಂದ್ರದಲ್ಲಿ ಯಾವುದೇ ಪಕ್ಷವು ಅಧಿಕಾರಕ್ಕೆ ಬಂದರೂ ಈ ರಾಜ್ಯಗಳ ಅಭಿವೃದ್ಧಿಗಾಗಿ ಪ್ರತಿ ವರ್ಷವೂ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡುತ್ತಾ ಬಂದಿದೆ.
ಇದನ್ನೂ ಓದಿ: ಹುಣಸೂರು ಹೈಟೆಕ್ ಆಸ್ಪತ್ರೆ ಶೀಘ್ರ ಜನಸೇವೆಗೆ : ಶಾಸಕ ಹರೀಶ್‌ಗೌಡ
ಈಶಾನ್ಯ ರಾಜ್ಯ ಮಣಿಪುರದ ಗುಡ್ಡಗಾಡು ಪ್ರದೇಶದಲ್ಲಿರುವ ಕುಕಿ ಬುಡಕಟ್ಟು ಜನಾಂಗ ಮತ್ತು ಕಣಿವೆ ಪ್ರದೇಶಗಳಲ್ಲಿನ ಮೈತೇಯಿ ಜನಾಂಗದ ನಡುವಣ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯ ಮತ್ತು ತಾವೇ ನಿಜವಾದ ಸ್ಥಳೀಯರು ಎನ್ನುವ ಚಾರಿತ್ರಿಕವಾದ ವಿವಾದ ಈ ಎರಡು ಜನಾಂಗಗಳ ನಡುವೆ ಹಲವು ವರ್ಷಗಳಿಂದ ದ್ವೇಷ ಮತ್ತು ಹಿಂಸಾಚಾರವನ್ನು ಹುಟ್ಟು ಹಾಕಿದೆ. ಮೈತೇಯಿ ಜನಾಂಗವು ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. ೨೩ರಷ್ಟಿದ್ದು ನಾಗಾ ಬುಡಕಟ್ಟು ಜನರೊಡನೆ ಸಲೀಸಾಗಿ ಬೆರೆಯುವ ಕುಕಿ ಬುಡಕಟ್ಟು ಜನರು ಹಾಗೂ ಮೈತೇಯಿ ಜನಾಂಗದವರ ನಡುವೆ ಕಳೆದೆರಡು ವರ್ಷಗಳಿಂದ ಭುಗಿಲೆದ್ದ ಹಿಂಸಾಚಾರದಿಂದ ಇಡೀ ಮಣಿಪುರ ವಾಸ್ತವವಾಗಿ ಅಗ್ನಿಕುಂಡವಾಗಿರುವುದು ದುರಂತ.
ದಟ್ಟ ಅರಣ್ಯ, ಸಂಪದ್ಭರಿತ ಖನಿಜ ಸಂಪತ್ತು ಹೇರಳವಾಗಿದ್ದರೂ, ಪುರಾತನ ಕಾಲದಿಂದ ಬಂದ ಸ್ಥಳೀಯ ಜನರ ಆಳ್ವಿಕೆ, ದಬ್ಬಾಳಿಕೆಯಿಂದ ಈ ನೈಸರ್ಗಿಕ ಸಂಪತ್ತನ್ನು ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಇಲ್ಲಿರುವ ನಾಗಾಗಳ ಸಂಖ್ಯೆ ಶೇ.೨೪, ಕುಕಿ-ಚಿನ್ ಶೇ.೧೬ ಮತ್ತು ಮೈತೇಯಿ ಜನಾಂಗಗಳ ಜನಸಂಖ್ಯೆ ಶೇ.೫೩ ಇದ್ದು ಮೂರು ಜನಾಂಗಗಳ ನಡುವೆ ಹೊಂದಾಣಿಕೆ, ಸಾಮಾಜಿಕ ಸಂಬಂಧ, ಸಾಮರಸ್ಯ ಇಲ್ಲವಾಗಿದೆ. ಜತೆಗೆ ಮ್ಯಾನ್‌ಮಾರ್‌ನಿಂದ ನುಸುಳಿ ಬರುವ ವಲಸೆ ಜನರು ಮತ್ತಷ್ಟು ತಲೆನೋವಾಗಿದ್ದಾರೆ.
ಮೈತೇಯಿ ಜನಾಂಗಕ್ಕೂ ಬುಡಕಟ್ಟು ಜನಾಂಗದ ಸ್ಥಾನಮಾನ ನೀಡಬೇಕೆನ್ನುವ ರಾಜ್ಯ ಸರ್ಕಾರದ ಶಿಫಾರಸನ್ನು ಜಾರಿಗೆ ತರಬೇಕೆಂದು ಮಣಿಪುರದ ಹೈಕೋರ್ಟ್ ಏಪ್ರಿಲ್ ೨೩, ೨೦೨೩ರಂದು ನೀಡಿದ ತೀರ್ಪಿನಹಿನ್ನೆಲೆಯಲ್ಲಿ ಭುಗಿಲೆದ್ದ ಹಿಂಸಾಚಾರ ಎರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದೆ. ಮಣಿಪುರದ ಹೈಕೋರ್ಟ್ ತೀರ್ಪನ್ನು ಜಾರಿಗೆ ತರಲು ಅಂದಿನ ಬಿಜೆಪಿ ಸರ್ಕಾರ ಮುಂದಾಗುತ್ತಿದ್ದಂತೆ ಕುಕಿ ಮತ್ತು ನಾಗಾ ಬುಡಕಟ್ಟು ಜನರು ಬೀದಿಗಿಳಿದು ಹಿಂಸಾಕೃತ್ಯ ನಡೆಸಿದ್ದರು. ಪ್ರತಿಯಾಗಿ ಮೈತೇಯಿ ಜನಾಂಗದವರು ಪ್ರಬಲವಾದ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಹದಿಮೂರು ಜಿಲ್ಲೆಗಳಿರುವ ಇಡೀ ಗುಡ್ಡಗಾಡು ರಾಜ್ಯ ಹೊತ್ತಿ ಉರಿಯಿತು. ಜನಾಂಗೀಯ ಗಲಭೆಯಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡರು. ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡು ಬೀದಿಪಾಲಾದರು.
ಹಿಂಸಾಚಾರದಿಂದ ನಿರ್ಗತಿಕರಾದವರಿಗೆ ಹತ್ತಾರು ಕಡೆ ಸರ್ಕಾರ ತಾತ್ಕಾಲಿಕವಾಗಿ ಶಿಬಿರಗಳನ್ನು ನಿರ್ಮಿಸಿತು. ಇಡೀ ರಾಜ್ಯದಲ್ಲಿ ಸುಮಾರು ೬೦ ಸಾವಿರ ಮಂದಿ ನಿರ್ಗತಿಕರಿಗೆ ಉಚಿತ ಊಟ ಮತ್ತು ವಸತಿಗಾಗಿ ಶಿಬಿರಗಳನ್ನು ನಿರ್ಮಿಸಲಾಯಿತು. ಕುಕಿ ಮತ್ತು ಮೈತೇಯಿ ಜನಾಂಗದವರ ನಡುವಿನ ದ್ವೇಷ ಹತ್ತಾರು ಕಡೆಗಳಲ್ಲಿ ಊರಿಗೆ ಊರನ್ನೇ ಸುಟ್ಟು ಹಾಕಿತು. ೨೦೨೪ರ ಮೇ ೪ರಂದು ಮೈತೇಯಿ ಜನಾಂಗದವರು ನಡೆಸಿದ ಹಿಂಸಾಚಾರದಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿತು.
ಇಷ್ಟೆಲ್ಲಾ ಹಿಂಸಾಚಾರಗಳು ಎರಡು ವರ್ಷಗಳಿಂದ ನಿರಂತರವಾಗಿ ನಡೆದರೂ ಪ್ರಧಾನಿ ನರೇಂದ್ರ ಮೋದಿ ಅವರು ಅತ್ತ ಸುಳಿಯಲಿಲ್ಲ. ಹಲವಾರು ದೇಶಗಳಿಗೆ ಹೋಗಿ ಬರುವ ಪ್ರಧಾನಿ ಮೋದಿ ಮಣಿಪುರಕ್ಕೆ ಹೋಗಬೇಕು. ಮಣಿಪುರಕ್ಕೆ ಏಕೆ ಹೋಗುತ್ತಿಲ್ಲ. ಅದೇನೂ ಭಾರತದಲ್ಲಿಲ್ಲವೇಎಂದು ವಿರೋಧ ಪಕ್ಷಗಳು ವಿಶೇಷವಾಗಿ ಕಾಂಗ್ರೆಸ್ ನಾಯಕರು ಕಟುವಾಗಿ ಟೀಕಿಸುತ್ತಾ ಬಂದರು. ಆದರೂ ಈ ಯಾವ ಟೀಕೆಗಳಿಗೂ ಮೋದಿ ಜಗ್ಗಲಿಲ್ಲ. ಮಣಿಪುರದ ಸಮಸ್ಯೆಗೆ ಕಿವುಡಾದರು. ಆದರೆ ಮೇ ೪ರಂದು ನಡೆದ ಕುಕಿ ಮಹಿಳೆಯರಿಬ್ಬರ ನಗ್ನ ಮೆರವಣಿಗೆ ಘಟನೆ ನಂತರ ಮೋದಿ ಮಣಿಪುರದ ಬಗೆಗೆ ಬಾಯಿ ಬಿಟ್ಟರು. ಈ ಬರ್ಬರ ಹಿಂಸಾಕೃತ್ಯವನ್ನು ಖಂಡಿಸಿದರು. ಇಡೀ ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರು ಮಣಿಪುರದಬಿಜೆಪಿ ನೇತೃತ್ವದ ಬಿರೇನ್ ಸಿಂಗ್ ಆಡಳಿತ ಮತ್ತು ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದರು. ಕೊನೆಗೆ ಕೇಂದ್ರ ಸರ್ಕಾರ ಈ ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಿ ಕೈತೊಳೆದುಕೊಂಡಿತು. ಆದರೆ ಹಿಂಸಾಚಾರ ಮಾತ್ರ ಮುಂದುವರಿಯಿತು.
ಈ ಘಟನೆಯ ಹಿನ್ನೆಲೆಯಲ್ಲಿ ಮರುಕಳಿಸಿದ ಹಿಂಸೆಯಲ್ಲಿ ಸುಮಾರು ೫೦ ಮಂದಿ ಒಂದೇ ದಿನದಲ್ಲಿ ಅಂದರೆ ೨೦೨೪ರ ಮೇ ೫ರಂದು ಪ್ರಾಣ ಕಳೆದುಕೊಂಡರು. ಆಗ ಎಚ್ಚೆತ್ತುಕೊಂಡ ಏಳು ಮಂದಿ ಬಿಜೆಪಿ ಶಾಸಕರು ಸೇರಿದಂತೆ ಹತ್ತು ಮಂದಿ ಕುಕಿ ಶಾಸಕರು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆಗೆ ಒತ್ತಾಯಿಸಿದರು. ಕುಕಿ ಜನಾಂಗಗಳಿರುವ ಗುಡ್ಡ ಗಾಡು ಪ್ರದೇಶಕ್ಕೆ ಪ್ರತ್ಯೇಕ ಆಡಳಿತ ಮಂಡಳಿ ಇರುವ ಸ್ವಾಯತ್ತತೆಯನ್ನು ನೀಡಬೇಕೆಂದು ಆಗ್ರಹಿಸಿದರು. ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಕುಕಿ ಶಾಸಕರ ಬೆದರಿಕೆಗೆ ಹೆದರಿದ ಬಿರೇನ್ ಸಿಂಗ್ ಈ ವರ್ಷದ ಫೆಬ್ರವರಿ ೯ರಂದು ರಾಜೀನಾಮೆ ನೀಡಬೇಕಾಯಿತು. ಚುನಾಯಿತ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ಫೆಬ್ರವರಿಯಿಂದ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿತು. ಆರು ತಿಂಗಳ ಅವಧಿ ಮುಗಿಯುವ ಮುನ್ನ ಆಗಸ್ಟ್ ೧೩ರಂದು ಮತ್ತೆ ಆರು ತಿಂಗಳವರೆಗೆ ರಾಷ್ಟ್ರಪತಿ ಆಳ್ವಿಕೆಯನ್ನು ಮುಂದುವರಿಸಲಾಗಿದೆ.
ಮಣಿಪುರ ಹಿಂಸಾಚಾರದಿಂದ ಅನೇಕ ಬಾರಿ ಇಂಟರ್‌ನೆಟ್ ಸೌಲಭ್ಯವನ್ನು ಕಡಿತಗೊಳಿಸಿ ದೇಶದ ಇತರೆ ಭಾಗಗಳ ಜೊತೆ ಸಂಪರ್ಕವಿಲ್ಲದಂತೆ ಸ್ಥಳೀಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮಾಡಿದವು. ಆದರೂ ಹಿಂಸಾಚಾರ ಕೊನೆಗೊಳ್ಳಲಿಲ್ಲ. ಕುಕಿ ಮತ್ತು ಮೈತೇಯಿ ಜನಾಂಗಗಳ ನಡುವಿನ ದ್ವೇಷದ ದಳ್ಳುರಿ ಮುಂದುವರಿದೇ ಇದೆ. ಅಚ್ಚರಿ ಎಂದರೆ ಪ್ರಧಾನಿ ಮೋದಿ ಅವರು ಹತ್ತಾರು ಲೆಕ್ಕಾಚಾರ ಹಾಕಿ ಈ ಶನಿವಾರ ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಸುಮಾರು ೮೧ ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸುತ್ತಿರುವ ಚುರಚಂದ್‌ಪುರದಲ್ಲಿ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಿಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಿಂಸೆಯನ್ನು ತ್ಯಜಿಸಿಶಾಂತಿ ಮಾರ್ಗವನ್ನು ಅನುಸರಿಸಿ. ನಿಮ್ಮೊಡನೆ ನಾನಿದ್ದೇನೆ. ನಿಮಗೆ ಕೇಂದ್ರ ಸರ್ಕಾರದ ಪೂರ್ಣ ಬೆಂಬಲವಿದೆ ಎಂದು ಆಶ್ವಾಸನೆಯನ್ನೇನೋ ಕೊಟ್ಟು ಬಂದಿದ್ದಾರೆ.
ಶಿಕ್ಷಣ, ಆರೋಗ್ಯ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸಂಪರ್ಕ ಮತ್ತು ಗುಡ್ಡಗಾಡು ಪ್ರದೇಶ ಅಭಿವೃದ್ಧಿ ಸೇರಿದಂತೆ ಹಲವಾರು ಯೋಜನೆಗಳ ಜಾರಿಗೆ ಸುಮಾರು ೮,೫೦೦ ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿಶಂಕುಸ್ಥಾಪನೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಸಹಜವಾಗಿ ಮಣಿಪುರದ ಸಂಸ್ಕೃತಿಯನ್ನು ಹಾಡಿ ಹೊಗಳಿದ್ದಾರೆ. ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ ನಂತರ ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಅಂತು ಕೊನೆಗೂ ಮೋದಿ ಅವರು ಹಿಂಸಾಚಾರದಿಂದ ಜರ್ಜರಿತವಾದ ಮಣಿಪುರಕ್ಕೆ ಭೇಟಿ ನೀಡಿದರು. ಆದರೆ ಹತ್ತಾರು ವರ್ಷಗಳಿಂದ ಕಾಡುತ್ತಿರುವ ಕುಕಿ, ನಾಗಾ ಮತ್ತು ಮೈತೇಯಿ ಜನಾಂಗೀಯ ದ್ವೇಷಕ್ಕೆ ಪರಿಹಾರ ಸಿಗುವುದೇ ಎನ್ನುವ ಪ್ರಶ್ನೆ ಉಳಿದಿದೆ.
ಕೇವಲ ೭,೩೦೦ ಕೋಟಿ ರೂ. ಅಂದಾಜು ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕಿ ಬಂದರೆ ಸಾಲದು. ಅಲ್ಲಿನ ಜನರನ್ನು ಕಾಡುತ್ತಿರುವ ಸಮಸ್ಯೆಗಳಾದ ಅರಣ್ಯ ಪ್ರದೇಶ, ಖನಿಜ ಸಂಪತ್ತಿನ ಸಂರಕ್ಷಣೆ, ಗುಡ್ಡಗಾಡು ಕುಕಿ ಜನರ ಸುರಕ್ಷತೆ, ನೆರೆಹೊರೆ ದೇಶಗಳಿಂದ ಅಕ್ರಮವಾಗಿ ನುಸುಳಿ ಬರುವ ಜನರು, ಬಂಡುಕೋರರ ಹಿಂಸಾಕೃತ್ಯಕ್ಕೆ ಕೊನೆ ಹೇಳಬೇಕಿದೆ. ಜನಾಂಗೀಯ ದ್ವೇಷದಿಂದ ಸ್ಥಳೀಯ ಕುಕಿ ಮತ್ತು ಮೈತೇಯಿ ಜನಾಂಗದವರ ಒಡೆದ ಮನಸ್ಸುಗಳನ್ನು ಒಂದು ಮಾಡುವ ಕಾರ್ಯವನ್ನು ಕೇವಲ ಭಾಷಣದಿಂದ ಮಾಡಲು ಸಾಧ್ಯವಿಲ್ಲ. ಪರಸ್ಪರ ನಂಬಿಕೆ ಮತ್ತುವಿಶ್ವಾಸವನ್ನು ಮರುಸ್ಥಾಪಿಸುವ ಕಾರ್ಯ ಕೇಂದ್ರ ಸರ್ಕಾರದಿಂದ ಆಗಬೇಕು. ರಾಷ್ಟ್ರಪತಿ ಆಡಳಿತವಿರುವುದರಿಂದ ಈ ಕಾರ್ಯ ಈಗ ಕೇಂದ್ರ ಸರ್ಕಾರಕ್ಕೆ ಕಷ್ಟವೇನಲ್ಲ. ಆದರೆ ಈ ಕಾರ್ಯ ಸಾಧನೆಗೆ ಗಟ್ಟಿ ಮನಸ್ಸು ಮತ್ತು ಬದ್ಧತೆ ಬೇಕು. ಏಕೆಂದರೆ ಬಹುಸಂಖ್ಯಾತ ಮೈತೇಯಿ ಜನಾಂಗದ ಹಿಂಸೆಯಿಂದ ಕುಕಿ ಜನಾಂಗದವರು ಶೋಷಣೆಗೆ ಒಳಗಾಗಿದ್ದಾರೆ. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೈತೇಯಿ ಜನಾಂಗದವರ ಜೊತೆಗೆ ಸಹಬಾಳ್ವೆ ನಡೆಸುವುದು ನಮಗೆ ಕಷ್ಟ ಎಂಬುದಾಗಿ ಕುಕಿ ಜೋ ಕೌನ್ಸಿಲ್ ಮತ್ತು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯ ಮುಖಂಡರು ತಮ್ಮ ಅಳಲನ್ನು ಹೇಳಿಕೊಳ್ಳುತ್ತಿದ್ದಾರೆ.
ಸಂವಿಧಾನದ ಆರ್ಟಿಕಲ್ ೨೩೯ಎ ಅನ್ವಯ ಕೇಂದ್ರಾಡಳಿತ ಪ್ರದೇಶದಂತೆ ಕುಕಿ ಗುಡ್ಡಗಾಡು ಜನರಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಬೇಕೆನ್ನುವ ಬೇಡಿಕೆ ಕುಕಿ ಬುಡಕಟ್ಟು ಜನರದ್ದಾಗಿದೆ. ಇಂತಹ ಬೇಡಿಕೆ ಯನ್ನು ಕೇಂದ್ರ ಸರ್ಕಾರ ಹೇಗೆ ಕಾರ್ಯರೂಪಕ್ಕೆ ತರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
” ಮಣಿಪುರ ಹಿಂಸಾಚಾರದಿಂದ ಅನೇಕ ಬಾರಿ ಇಂಟರ್‌ನೆಟ್ ಸೌಲಭ್ಯವನ್ನು ಕಡಿತಗೊಳಿಸಿ ದೇಶದ ಇತರೆ ಭಾಗಗಳ ಜೊತೆ ಸಂಪರ್ಕವಿಲ್ಲದಂತೆ ಸ್ಥಳೀಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮಾಡಿದವು. ಆದರೂ ಹಿಂಸಾಚಾರ ಕೊನೆಗೊಳ್ಳಲಿಲ್ಲ. ಕುಕಿ ಮತ್ತು ಮೈತೇಯಿ ಜನಾಂಗಗಳ ನಡುವಿನ ದ್ವೇಷದ ದಳ್ಳುರಿ ಮುಂದುವರಿದೇ ಇದೆ.”
ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…
ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…
ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…
ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…
ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…
ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…