ಅಂಕಣಗಳು

ನಲ್ವತ್ತು ಪರ್ಸೆಂಟ್ ಸಾಹಿತ್ಯ, ಅರವತ್ತು ಪರ್ಸೆಂಟ್ ಸಂಭ್ರಮ

ಶೋಭಾ ದಿನೇಶ್

ಟೆನ್ಶನ್ ಆಗೋಗಿತ್ತಪಾ, ಸದ್ಯ ಟ್ರಂಪ್ ಮಧ್ಯ ಪ್ರವೇಶ ಮಾಡಿ ಯುದ್ಧ ನಿಲ್ಲಿಸಿದ್ದಕ್ಕೆ ಸರಿ ಹೋಯ್ತು. ‘ಜೀವದ ಮೇಲೆ ಅಷ್ಟು ಭಯ ನೋಡು ನಿನಗೆ’,

‘ಅಯ್ಯಾ ಹಾಗೇನಿಲ್ಲಾ, ಲಿಟರೇಚರ್ ಫೆಸ್ಟಿವಲ್‌ಗೆ ಅಂತ ಗಂಡಭೇರುಂಡ ಬಾರ್ಡರಿನ ಮೈಸೂರು ಸಿಲ್ಕ್ಸೀರೆ ತಗೊಂಡಿದ್ದೆ. ಎಲ್ಲಿ ಯುದ್ಧ ಶುರುವಾಗಿ ಫೆಸ್ಟಿವಲ್ ನಿಂತೋಗುತ್ತೊ ಅಂತ ಭಯ ಆಗಿತ್ತು’ ಎಂದು ಕಣ್ಣು ಮಿಟುಕಿಸಿದಳು ಅವಳು. ಅದೆಷ್ಟು ಹೆಂಗಳೆಯರ ಶ್ರದ್ಧೆ, ಸಂಭ್ರಮಗಳನ್ನು ಸೆಳೆದಿಟ್ಟುಕೊಂಡ ಮಾಯಾವಿ ಈ ಮೈಸೂರು ಸಾಹಿತ್ಯ ಸಂಭ್ರಮ. ನಮ್ಮ ಹೆಣ್ಣು ಮಕ್ಕಳು ತಮ್ಮೆಲ್ಲ ಭಾರ, ಬಾಧ್ಯತೆ, ಜವಾಬ್ದಾರಿಗಳನ್ನು ಎರಡು ದಿನಗಳ ಮಟ್ಟಿಗೆ ಬದಿಗಿಳಿಸಿ, ಅನಿರ್ವಚನೀಯ ಸಂಭ್ರಮಕ್ಕೆ ಸಾಕ್ಷಿಯಾಗುವುದು ಎಂದರೆ ಹೀಗೆ. ಇದು ಹೆಂಗಳೆಯ ರಿಂದ, ಹೆಂಗಳೆಯರಿಗಾಗಿ, ಹೆಂಗಳೆಯರಿಗೋಸ್ಕರ ಇರುವ ಸಾಹಿತ್ಯ ಸಂಭ್ರಮ. ಅದಕ್ಕಾಗಿಯೇ ಏನೊ, ಕನ್ನಡ ಓದುಗರ ಒಕ್ಕೂಟದ ಸದಸ್ಯರಿಗೆ ಸದಾ ಹದಿನೆಂಟರ ಹರಯ.

ಜುಲೈ ಬಂತೆಂದರೆ ಮೈಸೂರಿಗೆ ಬೇರೆಯದೇ ಬಣ್ಣ. ಸೋನೆ ಮಳೆಯ ಜೊತೆಗೆ ಸಾಹಿತಿಗಳ ನೆರೆ ಒಂದು ತೂಕವಾದರೆ, ಸಂಭ್ರಮದ ಹೊಳೆ ಮತ್ತೊಂದು ತೂಕ. ಈ ಸಾಹಿತ್ಯ ಸಂಭ್ರಮಕ್ಕೆ ಅದೆಷ್ಟು ಮುಖಗಳು, ಅದೆಷ್ಟು ಆಯಾಮಗಳು!

ಸೀರೆ ಸಂಭ್ರಮ: ಈ ಸಂಭ್ರಮ ಜೂನ್ ತಿಂಗಳಿನಿಂದಲೇ ಶುರುವಾಗುತ್ತೆ, ಇಬ್ಬರ ನಡುವಿನ ಚರ್ಚೆಯಿಂದ ಶುರುವಾಗಿ ಗುಂಪು ಚರ್ಚೆಯವರೆಗೆ ಹೋಗಿ ನಿಲ್ಲುತ್ತೆ. ಆದಾಗ್ಯೂ ಜುಲೈ ಬಂದರೂ ಸೀರೆ, ಮ್ಯಾಚಿಂಗ್ ಬ್ಲೌಸ್, ಅದಕ್ಕೊಪ್ಪುವ ಆಭರಣ, ಫೈನಲ್ ಆಗಿರುವುದೇ ಇಲ್ಲ. ಮದುವೆ, ಮುಂಜಿಗೆ ಆರಿಸಿದಂತೆ ಈ ಸಾಹಿತ್ಯ ಸಂಭ್ರಮಕ್ಕೆ ಸೀರೆ ಸೆಲೆಕ್ಟ್ ಮಾಡೋಕೆ ಆಗಲ್ಲ ನೋಡಿ! ಘನತೆ, ಗಾಂಭೀರ್ಯ, ಸೊಬಗು ಈ ಮೂರನ್ನೂ ಕಾಪಿಟ್ಟುಕೊಳ್ಳುವ ಉಡುಪನ್ನು ಉಡುವ – ತೊಡುವ ಗುರುತರ ಜವಾಬ್ದಾರಿ ನಮ್ಮ ಹೆಣ್ಣುಮಕ್ಕಳ ಮೇಲಿರುತ್ತೆ. ಅದೆಷ್ಟು ಡೀಟೈಲಿಂಗ್ ಚರ್ಚೆಗಳು ಆಗಿರುತ್ತೆ ಅಂದರೆ, ಒಗ್ಗರಣೆಗೆ ಇಂತಿಷ್ಟೇ ಸಾಸಿವೆ ಹಾಕಬೇಕು, ಪ್ರತೀ ತುತ್ತಿಗೂ ಇಷ್ಟೇ ಸಿಗಬೇಕು ಎನ್ನುವ ರುಚಿ – ಅಭಿರುಚಿಯಂತೆ ಎರಡನೇ ದಿನ ಉಡುವ ಸೀರೆ ಮೊದಲ ದಿನಕ್ಕಿಂತ ಅದೆಷ್ಟು ಭಿನ್ನವಾಗಿರಬೇಕು, ಅದಕ್ಕಿಷ್ಟು ಕುಸುರಿ ಕೆಲಸ ಆಗಿರಲೇಬೇಕು ಎಂಬ ಸಣ್ಣಪುಟ್ಟ ಹಟ ಈ ಹೆಣ್ಣುಮಕ್ಕಳಿಗಿರುತ್ತೆ. ಸಾಹಿತ್ಯ ಸಂಭ್ರಮಗಳ ಕುರಿತಂತೆ ಆಗುವ ಮೀಟಿಂಗ್‌ಗಳಲ್ಲಿ ಕಾರ್ಯಕ್ರಮಗಳ ರಿಹರ್ಸಲ್ ಜೊತೆಗೆ ಸೀರೆಗಳ ರಿಹರ್ಸಲ್ ಕೂಡ ಆಗಿರುತ್ತೆ. ಚಂದವಾಗಿ ಅಲಂಕರಿಸಿ ಕೊಳ್ಳುವ ಹೆಣ್ಣುಮಕ್ಕಳ ಚೇತೋಹಾರಿ ಗುಣದಿಂದಾಗಿ ಸಾಹಿತ್ಯ ಸಂಭ್ರಮ ಕಳೆಗಟ್ಟುತ್ತಾ ಹೋಗುತ್ತಿದೆ.

ಸಂಭ್ರಮಗಳ ಏಕತಾನತೆಯನ್ನು ಮುರಿಯುವ ಸಂಭ್ರಮ: ಗೌರಿ, ಯುಗಾದಿ, ಸಂಕ್ರಾಂತಿ ಹಬ್ಬಗಳಂತಲ್ಲ ಈ ಸಾಹಿತ್ಯ ಹಬ್ಬ. ಸಾಂಪ್ರದಾಯಿಕ ಹಬ್ಬಗಳು ಸಂಭ್ರಮಗಳನ್ನು ಹೊತ್ತು ತಂದರೂ ವರ್ಷ ವರ್ಷವೂ ಅದೇಊಟ, ಪೂಜೆ, ಏಕತಾನತೆ ಕಾಡುತ್ತದೆ. ಮತ್ತು ಅಲಂಕಾರಕ್ಕೆ ಸಂಪ್ರದಾಯದ ಅನುಮೋದನೆ ಬೇಕಿರುತ್ತೆ ಕೆಲವೊಮ್ಮೆ. ಆದರೆ ಈ ಸಾಹಿತ್ಯ ಹಬ್ಬ ಹಾಗಲ್ಲ, ಸಂಭ್ರಮ ಗಳ ಏಕತಾನತೆಯನ್ನು ಮುರಿಯುವ ಸಂಭ್ರಮ. ವರ್ಷ ವರ್ಷವೂ ಜರುಗಿದರೂ ಭಿನ್ನ ಭಿನ್ನ ಜನರ, ಸಾಹಿತಿ ಗಳಿಂದಾಗಿ ಸಂಭ್ರಮ ಇಲ್ಲಿ ಸದಾ ದುಪ್ಪಟ್ಟು. ಜೊತೆಗೆ ವೈಯಕ್ತಿಕ ಆಯ್ಕೆಯ ಸಂಭ್ರಮ. ಹಬ್ಬ ಹರಿದಿನಗಳು, ಪೂಜೆ, ಪುನಸ್ಕಾರಗಳು ಎಂದಿಗೂ ಹೆಣ್ಣು ಮಕ್ಕಳ ಆಯ್ಕೆಯಾಗಿಲ್ಲದ ಕಾರಣ ಈ ಸಾಹಿತ್ಯ ಸಂಭ್ರಮವನ್ನು ವೈಯಕ್ತಿಕ ಆಯ್ಕೆಯ ಸಂಭ್ರಮ ಎನ್ನಲೂಬಹುದು. ನೀಟಾಗಿ, ಪ್ರಸೆಂಟಬಲ್ ಆಗಿ ಕಾಣುತ್ತಾ, ಗಲ ಗಲ ಮಾತನಾಡುತ್ತಾ, ಓಡಾಡುತ್ತಿರುವ ಹೆಣ್ಣುಮಕ್ಕಳನ್ನು ನೋಡುವಾಗ ಹೆಣ್ತನಕ್ಕೆ ಅದೆಷ್ಟು ಆಯಾಮಗಳು ಅಂತೆನ್ನಿಸುತ್ತದೆ. ಈ ಎರಡು ದಿನಗಳ ಹಬ್ಬ ಒಂದು ರೀತಿ ಸುಗ್ಗಿ ಹಬ್ಬದಂತೆ. ವರ್ಷಪೂರ್ತಿ ಗಂಭೀರ ಓದು, ಚರ್ಚೆಯಲ್ಲಿ ತೊಡಗಿಕೊಂಡ ಹೆಣ್ಣುಮಕ್ಕಳು, ತಾವು ಓದಿದ ಪುಸ್ತಕಗಳ ಲೇಖಕರೊಂದಿಗೆ ಒಡನಾಡುವ ಸುಗ್ಗಿ. ಬೌದ್ಧಿಕ ವಲಯದಲ್ಲಿ ಗುರುತಿಸಿಕೊಳ್ಳುವ ಸಂಭ್ರಮ ‘ಮಾತೆತ್ತಿದರೆ ನಿನಗೇನು ಗೊತ್ತಾಗುತ್ತೆ ಸುಮ್ನಿರು ಅಂತಿದ್ರಲ್ಲ ನಮ್ಮನೆಯವರು ಮೊನ್ನೆ ರಮೇಶ್ ಅರವಿಂದ್ ಜೊತೆ ನನ್ನ ಸೆಲ್ಛಿ ನೋಡಿ ಶಾಕ್ ಕಣೆಮಾ’ ಎಂದು ಕಣ್ಣರಳಿಸಿದಳು ಅವಳು. ನಾನೂ ಮಾಮೂಲಿ ಗೃಹಿಣಿಗಿಂತ ಭಿನ್ನ ಅಂತ ತೋರಿಸಿಕೊಳ್ಳುವ ಸಂಭ್ರಮಕ್ಕೆ ಈ ಸಾಹಿತ್ಯ ಹಬ್ಬ ವೇದಿಕೆ ಕಲ್ಪಿಸಿಕೊಡುತ್ತದೆ. ತನ್ನ ಇಷ್ಟದ ಲೇಖಕರೊಂದಿಗೆ ಸೆಲ್ಛಿಗೆ ಮುಖವೊಡ್ಡುವುದರಿಂದ ಹಿಡಿದು, ವೇದಿಕೆಯೇರಿ ಮಾತನಾಡುವವರೆಗೆ ಅವಳಿಗೆ ಅವಕಾಶ ಸಿಕ್ಕುವುದರಿಂದ, ತನ್ನ ಮಿತಿ, ಸಾಧ್ಯತೆಗಳನ್ನು ಮೀರಿ ತಾನೂ ಈ ಸಾಹಿತ್ಯ ವಲಯದ ಒಂದು ಭಾಗ ಎನ್ನುವುದೇ ಒಂದು ಮಹತ್ತರ ಸಂಭ್ರಮ. ಇರುವ ಭೂಮಿಯಿಂದ ಎರಡು ಅಡಿ ಮೇಲಕ್ಕೇರಿದ ಖುಷಿ, ಲೇಖಕರೊಂದಿಗೆ ಕಾಫಿ ಕುಡಿಯುತ್ತಾ, ಹರಟುತ್ತಾ, ಆಟೋಗ್ರಾಫಿಗೆ ಸಹಿ ಪಡೆಯುವುದು ಅವರಿಗೆ ದಕ್ಕುವ ಗೌರವದ ಮೊದಲ ಇನ್ಸ್ಟಾಲ್‌ಮೆಂಟ್ ಒಂದೆಡೆಯಾದರೆ, ಆದರೆ ಪಡೆದ ಸಹಿಗಳನ್ನು ಯಾರ‍್ಯಾರದು ಎಂದು ಗುರುತಿಸಲಾಗದೇ ಪೇಚಾಡುವ ಸಂಭ್ರಮ ಮತ್ತೊಂದೆಡೆ. ಹತ್ತರೊಳಗೆ ಹನ್ನೊಂದನೆಯವರಾಗುವುದೇನು ಸುಲಭವೇ? ಮೇಲುನೋಟಕ್ಕೆ ಹತ್ತರಲ್ಲಿ ಹನ್ನೊಂದಾಗುವುದು ಅನ್ನಿಸಿದರೂ ಹತ್ತು ಜನ ಪ್ರಬಲರಲ್ಲಿ ಒಬ್ಬರಾಗುವುದು ಅದೆಷ್ಟು ಕಷ್ಟ. ಎಷ್ಟೆಲ್ಲಾ ಜವಾಬ್ದಾರಿ ಹೊರುವ ಕೆಪ್ಯಾಸಿಟಿ ಇರುವ ಆಕೆಗೆ ವೇದಿಕೆ ಮೇಲೆ ಒಂದೆರಡು ಮಾತನಾಡಲು ಆತ್ಮವಿಶ್ವಾಸದ ಕೊರತೆ. ಅದೇನೆ ಆಗಲಿ ಒಂದು ಧೈರ್ಯ ಮಾಡಿಬಿಡುವ ಅನ್ನುವ ಹುರುಪಿಗೆ ಈ ಸಂಭ್ರಮ ದೂಡುತ್ತದೆ. ಕಡೆಗಣಿಸಿದ ಜಾಗಗಳಾದ, ಮನೆ, ಕೇರಿ, ಊರುಗಳಲ್ಲಿ ತನ್ನ ಭೌತಿಕ ವಲಯದ ವಿಸ್ತಾರವನ್ನು ಪ್ರಚುರಪಡಿಸುವ ಸಂಭ್ರಮಕ್ಕೆ ಎಣೆ ಎಲ್ಲಿ! ಸಾಹಿತ್ಯ ಸಂಭ್ರಮದ ಉದ್ದಕ್ಕೂ ನಮ್ಮ ನಮ್ಮ ಕನ್ನಡ ಓದುಗರ ಒಕ್ಕೂಟದ ಸದಸ್ಯರಿಗೆ ಸಣ್ಣಪುಟ್ಟ ಜವಾಬ್ದಾರಿಗಳಿರುತ್ತವೆ. ಹಾಗೇ ವಹಿಸಿದ ಕೆಲಸಗಳನ್ನು ಚಂದ ಕಾಣಿಸುವ ಆಸೆ. ಪ್ರೀತಿ, ಹಟ, ಕಸುಬುದಾರಿಕೆ ಅವರ ಸಂಭ್ರಮಕ್ಕೆ ಮತ್ತಷ್ಟು ಹೊಳಪು ಕೊಡುತ್ತವೆ. ಕುಂದುಕೊರತೆ, ಲೋಪದೋಷಗಳು ಇದ್ದಾಗಿಯೂ ಆ ಎರಡು ದಿನಗಳು ಅದೆಷ್ಟು ಸುಂದರ ಎಂದು ಅನಿಸದೇ ಇರಲಾರದು.

ಬಿಡುಗಡೆಯ ಸಂಭ್ರಮ: ‘ಎರಡು ದಿನ ನಿಮ್ಮ ಅಪ್ಪ ನನ್ನು ನೀವೆ ನೊಡ್ಕೋಬೇಕು ಅಂತ ಹೇಳಿಬಿಟ್ಟಿದ್ದೀನಿ ಕಣ್ರೀ, ತಿಂಡಿ ಅಡುಗೆನೂ ಆಗಲ್ಲ ಅಂದಿದ್ದೀನಿ, ಮೈಂಡ್ ಸೆಟ್ ಮಾಡಿಕೊಂಡಿದ್ದಾರೆ, ನಿಭಾಯಿಸಲಿ ಸುಮ್ನಿರಿ’. ಹಾಸಿಗೆ ಹಿಡಿದ ಮಾವನನ್ನು ನೋಡಿಕೊಳ್ಳುವ ಅವಳಿಗೆ ಎರಡು ದಿನದ ಬಿಡುಗಡೆಯ ಸಂಭ್ರಮ. ಆಕೆಯ ಭಾರವನ್ನು ಅವನು ಹೊತ್ತಿಕೊಂಡಿರುವಾಗ ಹೀಗೆ ನಿರಾಂತಕವಾಗಿ ಪುಸ್ತಕ ಮಳಿಗೆಗಳನ್ನು ಸುತ್ತುತ್ತಾ, ತನಗೆ ಬೇಕಾದ್ದನ್ನು ಕೊಂಡುಕೊಳ್ಳುತ್ತಾ, ನಂಬಿಕಸ್ಥ ಕಿವಿಗ ಳೊಂದಿಗೆ ಸಣ್ಣಪುಟ್ಟ ಗಾಸಿಪ್ ಮಾಡುತ್ತಾ, ವರ್ಷಕ್ಕಾಗು ವಷ್ಟು ಎನರ್ಜಿಯನ್ನು ದಕ್ಕಿಸಿಕೊಳ್ಳುವ ಸಂಭ್ರಮ ಅವಳದು. ಮನೆ, ಮಕ್ಕಳು, ಸಂಸಾರ ಎಂಬೋ ಭಾರ ಅವಳನ್ನು ಜಗ್ಗಿ ಕೂಡಿಸದಂತೆ ಖುಷಿಯೆಡೆಗೆ ದಾಪುಗಾಲಿಡುವಂತೆ ಮಾಡುತ್ತದೆ ಈ ಮೈಸೂರು ಸಾಹಿತ್ಯ ಸಂಭ್ರಮ. ಹೇರಿಕೆಗಳಿಲ್ಲದ ಚೌಕಟ್ಟು, ಮಿತಿಗಳನ್ನು ಮೀರಿ ಸಂಭ್ರಮಿಸುವ ಹಬ್ಬ ಅವಳಿಗೆ. ಈ ಮೈಸೂರು ಸಾಹಿತ್ಯ ಸಂಭ್ರಮ ಎಂದರೆ ನಮ್ಮ ಹೆಣ್ಣು ಮಕ್ಕಳಿಗೆ ಬಿಡುಗಡೆ, ನಿರಾಳ, ಹೊಸ ಹುಟ್ಟು, ಹೊಸ ಸಾಧ್ಯತೆ.

” ಜುಲೈ ಬಂತೆಂದರೆ ಮೈಸೂರಿಗೆ ಬೇರೆಯದೇ ಬಣ್ಣ. ಸೋನೆ ಮಳೆಯ ಜೊತೆಗೆ ಸಾಹಿತಿಗಳ ನೆರೆ ಒಂದು ತೂಕವಾದರೆ, ಸಂಭ್ರಮದ ಹೊಳೆ ಮತ್ತೊಂದು ತೂಕ. ಈ ಸಾಹಿತ್ಯ ಸಂಭ್ರಮಕ್ಕೆ ಅದೆಷ್ಟು ಮುಖಗಳು, ಅದೆಷ್ಟು ಆಯಾಮಗಳು!”

ಆಂದೋಲನ ಡೆಸ್ಕ್

Recent Posts

2025 ಸವಿನೆನಪು: ಸ್ಯಾಂಡಲ್‌ವುಡ್ ಏಳು-ಬೀಳು

‘ಸ್ಯಾಂಡಲ್ ವುಡ್’ ಎಂದೇ ಹೆಸರಾಗಿರುವ ಕನ್ನಡ ಚಿತ್ರರಂಗ ಇಂದು ಭಾರತದ ಒಂದು ಪ್ರಮುಖ ಚಿತ್ರೋದ್ಯಮವಾಗಿ ಬೆಳೆದಿದೆ. ಈ ಮೊದಲು ಪ್ರತಿ…

2 hours ago

ಉದ್ಘಾಟನೆಯಾಗದ ಅಂಬಾರಿ ಖ್ಯಾತಿಯ ಅರ್ಜುನನ ಸ್ಮಾರಕ

ಲಕ್ಷ್ಮಿಕಾಂತ್ ಕೊಮಾರಪ್ಪ ೨೦೨೩ರ ಡಿ.೪ರಂದು ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಅರ್ಜುನ; ೨ ವರ್ಷ ಕಳೆದರೂ ಅರ್ಜುನನ ಸ್ಮಾರಕ, ಪ್ರತಿಮೆಗಿಲ್ಲ…

2 hours ago

ಸಾಂಸ್ಕೃತಿಕ ನಗರಿಯಲ್ಲಿ ಕ್ರಿಸ್‌ಮಸ್ ಸಂಭ್ರಮ

ಮೈಸೂರು: ಸಂಭ್ರಮ, ಸಡಗರ, ವಿಶೇಷ ಪ್ರಾರ್ಥನೆಯೊಂದಿಗೆ ಕ್ರೈಸ್ತ ಧರ್ಮದ ದೈವ ಬಾಲಏಸುವಿನ ಜಯಂತಿಯ ಸ್ಮರಣೆಯು ಅದ್ಧೂರಿಯಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ…

3 hours ago

ರಾಗಿ, ಹುರುಳಿ ಒಕ್ಕಣೆಗೆ ರಸ್ತೆಯೇ ಕಣ!

ಪ್ರಶಾಂತ್ ಎಸ್. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಮಸ್ಯೆ ಕಣ್ಣಿಗೆ ದೂಳು ಬಿದ್ದರೆ ಅನಾಹುತ ಸಾಧ್ಯತೆ ವಾಹನ ಸವಾರರಿಗೆ ಸವಾಲು; ಎಚ್ಚರ…

3 hours ago

ಮೈಸೂರು ಕೇಂದ್ರೀಯ ಸಂಪರ್ಕ ಬ್ಯೂರೋ-CBC ಕಚೇರಿ ಸ್ಥಗಿತ ಬೇಡ : ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಸಚಿವ ಎಚ್‌ಡಿಕೆ

ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…

13 hours ago

ಉನ್ನಾವೋ ಅತ್ಯಾಚಾರ ಪ್ರಕರಣ : ರಾಹುಲ್‌ಗಾಂಧಿ ಭೇಟಿಯಾದ ಸಂತ್ರಸ್ತೆ ಕುಟುಂಬ

ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…

14 hours ago