ಎನ್.ಹರೀಶ್ ಕುಮಾರ್
ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖವಾಗಿ ಮುಂಚೂಣಿಯಲ್ಲಿ ಬರುವ ಹೆಸರೆಂದರೆ ಅದು ವೈದ್ಯ ವೃತ್ತಿ. ಆದರೆ ಒಬ್ಬ ರೋಗಿಯು ಗುಣಮುಖ ನಾಗಬೇಕಾದರೆ ಅದರ ಹಿಂದೆ ಶುಶ್ರೂಷಾ ವೃತ್ತಿಯ ಶ್ರಮವೂ ಕೂಡ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ.
ಏಕೆಂದರೆ ವೈದ್ಯರು ರೋಗವನ್ನು ಪತ್ತೆ ಹಚ್ಚಿ ರೋಗಿಗೆ ಯಾವ ಚಿಕಿತ್ಸೆಯನ್ನು ನೀಡಬೇಕೆಂದು ಸೂಚಿಸಿದಾಗ ಅದನ್ನು ಕಾರ್ಯರೂಪಕ್ಕೆ ತರುವ ಬಹುಮುಖ್ಯ ಜವಾಬ್ದಾರಿ ಶುಶ್ರೂಷಾ ವೃತ್ತಿಯದ್ದಾಗಿರುತ್ತದೆ. ಒಂದು ವೇಳೆ ರೋಗಿಗೆ ಸಮರ್ಪಕವಾದ ರೀತಿಯಲ್ಲಿ ಚಿಕಿತ್ಸೆ ಹಾಗೂ ಶುಶ್ರೂಷಾ ಸೇವೆ ದೊರಕದೆ ಹೋದರೆ ಗುಣಮುಖ ನಾಗಲು ಸಾಧ್ಯವೇ ಇಲ್ಲ.
ಯಾವುದೇ ರೋಗಿಯು ಆಸ್ಪತ್ರೆಗೆ ದಾಖಲಾದಾಗಿ ನಿಂದ ಹಿಡಿದು ಆತ ಗುಣಮುಖನಾಗಿ ಬಿಡುಗಡೆ ಹೊಂದುವ ತನಕ ನಿರಂತರವಾಗಿ ರೋಗಿಯ ನೇರ ಸಂಪರ್ಕದಲ್ಲಿದ್ದು, ಆತನಿಗೆ ವೈದ್ಯರು ಸೂಚಿಸಿರುವ ಚಿಕಿತ್ಸೆಯನ್ನು ನೀಡುವುದರ ಜೊತೆಗೆ ಮಾನಸಿಕ ಸ್ಥೈರ್ಯ ಹಾಗೂ ಆರೋಗ್ಯ ಶಿಕ್ಷಣವನ್ನು ನೀಡಿ ಹಗಲು – ರಾತ್ರಿಯೆನ್ನದೆ, ಹಬ್ಬ ಹರಿದಿನಗಳೆನ್ನದೆ ರೋಗಿಗಳ ಆರೈಕೆಯಲ್ಲಿ ನಿರತವಾಗಿರುವ ಶ್ರೇಷ್ಠ ಕಾಯಕವೇ ಶುಶ್ರೂಷಾ ವೃತ್ತಿ. ಅಂತಹ ಮಹತ್ತರವಾದ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರುಗಳಿಗೆ ಇಂದು ವಿಶೇಷ ದಿನವಾಗಿದೆ.
ಏಕೆಂದರೆ ಶುಶ್ರೂಷಾ ವೃತ್ತಿಯ ಜನನಿ ಎಂದೇ ಪರಿಗಣಿತವಾಗಿರುವ ಮಿಸ್ ಫ್ಲಾರೆನ್ಸ್ ನೈಟಿಂಗೇಲ್gಅವರ ಜನ್ಮ ದಿನದ ಅಂಗವಾಗಿ ಮೇ ೧೨ ರಂದು ಪ್ರತಿ ವರ್ಷ ಅಂತಾರಾಷ್ಟ್ರೀಯ ಶುಶ್ರೂಷಕರ ದಿನವಾಗಿ ಆಚರಿಸಲಾಗುತ್ತಿದೆ. ಮಿಸ್ ಫ್ಲಾರೆನ್ಸ್ ನೈಟಿಂಗೇಲ್ ರವರು ೧೮೨೦ ಮೇ ೧೨ ರಂದು ಇಟಲಿಯಲ್ಲಿ ಜನಿಸಿದರು. ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ ಅವರಲ್ಲಿ, ಚಿಕ್ಕ ವಯಸ್ಸಿನಿಂದಲೇ ಬಡ ಜನರಿಗೆ ಆರೋಗ್ಯ ಸೇವೆಯನ್ನು ಮಾಡಬೇಕೆಂಬ ತುಡಿತ ಇತ್ತು. ಆದರೆ ಆ ಸಮಯದಲ್ಲಿ ನರ್ಸಿಂಗ್ ಕ್ಷೇತ್ರಕ್ಕೆ ಅಷ್ಟೊಂದು ಮಹತ್ವವಾಗಲಿ ಅಥವಾ ವೈಜ್ಞಾನಿಕ ತರಬೇತಿಯಾಗಲಿ ಇರಲಿಲ್ಲ. ಆದರೂ ನೈಟಿಂಗಲ್ ಅವರು ತಮ್ಮ ಹದಿನಾರನೇ ವಯಸ್ಸಿಗೆ ರೋಗಿಗಳ ಆರೈಕೆ ಸೇವೆಯನ್ನು ಪ್ರಾರಂಭಿಸಿದರು. ಅದಕ್ಕಾಗಿ ಮದುವೆಯ ಪ್ರಸ್ತಾಪವನ್ನೇ ತಿರಸ್ಕರಿಸಿದ ಅವರು, ಶುಶ್ರೂಷಾ ಸೇವೆಗೆ ಮುಡುಪಾಗಿಬಿಟ್ಟರು.
ಅಂತಹ ಸಂದರ್ಭದಲ್ಲಿ ಕ್ರಿಮಿಯನ್ ಯುದ್ಧ ಫ್ಲಾರೆನ್ಸ್ ನೈಟಿಂಗೇಲ್ ರವರಿಗೆ ಬಹು ದೊಡ್ಡ ಅವಕಾಶ ಮತ್ತು ಹೆಸರು ತಂದು ಕೊಟ್ಟಿತು. ಕ್ರಿ.ಶ.೧೮೫೩ ರಿಂದ ೧೮೫೬ ರವರೆಗೆ ಬ್ರಿಟನ್ ಮತ್ತು ಫ್ರಾನ್ಸ್ ಜೊತೆಗೂಡಿ ರಷ್ಯಾ ವಿರುದ್ಧ ನಡೆಸಿದ ಕ್ರಿಮಿಯನ್ ಯುದ್ಧದಲ್ಲಿ ಸಾವಿರಾರು ಸೈನಿಕರು ಗಾಯಗೊಂಡು ನರಳಾಡುತ್ತಿರುವ ಭೀಕರ ಪರಿಸ್ಥಿತಿಯಲ್ಲಿ ಅವರ ಆರೋಗ್ಯ ಸೇವೆಗೆ ಫ್ಲಾರೆನ್ಸ್ ನೈಟಿಂಗೇಲ್ ಟೊಂಕ ಕಟ್ಟಿ ನಿಂತರು.
ರಾತ್ರಿ ವೇಳೆಯಲ್ಲಿ ಕಗ್ಗತ್ತಲೆಯಲ್ಲೇ ನೈಟಿಂಗೇಲ್ ರವರು ಕೈಯಲ್ಲಿ ದೀಪವನ್ನು ಹಿಡಿದು ಶುಶ್ರೂಷಾ ಸೇವೆ ಮಾಡಿದರು. ಹಾಗಾಗಿ ಇವರು ಲೇಡಿ ವಿತ್ ಲ್ಯಾಂಪ್ ಅಥವಾ “ದೀಪಧಾರಿಣಿ” ಎಂದು ಪ್ರಸಿದ್ಧರಾಗಿದ್ದಾರೆ. ಅಂದು ಫ್ಲಾರೆನ್ಸ್ ನೈಟಿಂಗೇಲ್ ಕ್ರಿಮಿಯನ್ ಯುದ್ಧದಲ್ಲಿ ಗಾಯಾಳು ಸೈನಿಕರಿಗೆ ಮಾಡಿದ ಆರೈಕೆಯಿಂದಾಗಿ ಶುಶ್ರೂಷಾ ಸೇವೆಗೆ ಹೆಚ್ಚು ಮಹತ್ವ ಬಂದಿತು. ನಂತರದ ದಿನಗಳಲ್ಲಿ ನೈಟಿಂಗೇಲ್‌ರವರು ೧೮೬೦ರಲ್ಲಿ ಮೊಟ್ಟಮೊದಲ ನರ್ಸಿಂಗ್ ಶಾಲೆಯನ್ನು ಲಂಡನ್‌ನಲ್ಲಿ ಆರಂಭಿಸಿದರು. ಇದು ಆಧುನಿಕ ನರ್ಸಿಂಗ್ ಶಿಕ್ಷಣಕ್ಕೆ ಅಡಿಪಾಯವಾಯಿತು.
ನಂತರ ಶಿಸ್ತಿನೊಂದಿಗೆ ವೈಜ್ಞಾನಿಕ ನರ್ಸಿಂಗ್ ತರಬೇತಿ ನೀಡುವುದನ್ನು ಅವರನರ್ಸಿಂಗ್ ಶಾಲೆಯಲ್ಲಿ ಪ್ರಾರಂಭಿಸಲಾಯಿತು. ಸ್ವಚ್ಛತೆ, ರೋಗಿಯ ಆರೈಕೆ ಮತ್ತು ಆಸ್ಪತ್ರೆ ನಿರ್ವಹಣೆಯ ವಿಷಯಗಳ ಬಗ್ಗೆ ಮಹತ್ವ ನೀಡಲಾಯಿತು. ಇದರಿಂದಾಗಿ ನರ್ಸಿಂಗ್ ಗೌರವಯುತ ವೃತ್ತಿಯಾಗಿ ರೂಪುಗೊಳ್ಳುವುದರ ಜೊತೆಗೆ ಜಗತ್ತಿನ ಅನೇಕ ದೇಶಗಳ ನರ್ಸಿಂಗ್ ಶಿಕ್ಷಣಕ್ಕೆ ಇದು ಮಾದರಿಯಾಯಿತು. ಫ್ಲಾರೆನ್ಸ್ ನೈಟಿಂಗೇಲ್ ಅವರು ಸುದೀರ್ಘ ಕಾಲದ ಶುಶ್ರೂಷಾ ಸೇವೆಯ ನಂತರ ೧೩ ಆಗಸ್ಟ್ ೧೯೧೦ರಂದು ೯೦ನೇ ವಯಸ್ಸಿನಲ್ಲಿ ನಿಧನರಾದರು.
ಕಾಲಾನಂತರ ನರ್ಸಿಂಗ್ ಸೇವೆಯ ವ್ಯಾಪ್ತಿ ಸವಿಸ್ತಾರಗೊಳ್ಳುತ್ತಾ ಅದರ ಅಧ್ಯಯನ ಕ್ರಮವು ಕೂಡ ವಿಕಸನಗೊಳ್ಳುತ್ತಾ ಸಾಗಿದೆ. ನರ್ಸಿಂಗ್ ಕ್ಷೇತ್ರವು ಸ್ನಾತಕೋತರ, ಪಿಎಚ್.ಡಿ. ಅಧ್ಯಯನ ಮಾಡುವಷ್ಟರ ಮಟ್ಟಿಗೆ ತನ್ನನ್ನು ತೆರೆದುಕೊಂಡಿದೆ. ಪ್ರತಿ ವರ್ಷವು ಭಾರತದಲ್ಲಿರುವ ನರ್ಸಿಂಗ್ ಶಾಲಾ ಮತ್ತು ಕಾಲೇಜುಗಳಿಂದ ಎರಡರಿಂದ ಮೂರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನರ್ಸಿಂಗ್ ವಿಷಯದಲ್ಲಿ ಡಿಪ್ಲೊಮಾ ಹಾಗೂ ಪದವಿಯನ್ನು ಪೂರೈಸುತ್ತಿದ್ದಾರೆ. ಅವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಸಿಕ್ಕಿದರೂ ಸೂಕ್ತ ಸಂಭಾವನೆ
ದೊರೆಯುತ್ತಿಲ್ಲ. ಹಾಗಾಗಿ ಬಹುಪಾಲು ನರ್ಸಿಂಗ್ ಪದವೀಧರರು ಉದ್ಯೋಗವಕಾಶಕ್ಕಾಗಿ ವಿದೇಶಗಳತ್ತ ಮುಖ ಮಾಡುತ್ತಿದ್ದಾರೆ. ವಿದೇಶಗಳಲ್ಲಿ ನರ್ಸಿಂಗ್ ಕ್ಷೇತ್ರ ಎಷ್ಟರಮಟ್ಟಿಗೆ ಉನ್ನತೀಕರಣಗೊಂಡಿದೆ ಎಂದರೆ ಅಲ್ಲಿನ ಶುಶ್ರೂಷಕರುಗಳು ವೈದ್ಯರಂತೆ ಅರಿವಳಿಕೆ ನೀಡುವುದು, ರೋಗ ಪತ್ತೆ ಹಚ್ಚುವುದು, ಐಸಿಯು ಉಸ್ತುವಾರಿ… ಹೀಗೆ ಅನೇಕ ಆರೋಗ್ಯ ಸೇವೆಯನ್ನು ಸ್ವತಂತ್ರವಾಗಿ ನಿರ್ವಹಿಸುತ್ತಾರೆ.
ಅದೇ ರೀತಿಯಾಗಿ ನಮ್ಮ ದೇಶದಲ್ಲೂ ನರ್ಸಿಂಗ್‌ನಲ್ಲಿ ಉನ್ನತ ವ್ಯಾಸಂಗ ಮಾಡಿರುವವರನ್ನು ಸದ್ಬಳಕೆ ಮಾಡಿಕೊಳ್ಳುವ ಅಗತ್ಯ ಇದೆ. ರೋಗಿಗಳ ಆರೈಕೆ ಎಂದರೆ ಕೇವಲ ಔಷಽ ನೀಡುವುದಲ್ಲ. ಪ್ರೀತಿ, ಸ್ವಚ್ಛತೆ ಮತ್ತು ಮಾನವೀಯತೆ ಕೂಡ ಆಗಬೇಕು. ಬಡಜನರಿಗೆ ಉತ್ತಮ ಆರೋಗ್ಯ ಸಿಗಬೇಕು ಎಂಬ ಫ್ಲಾರೆನ್ಸ್ ನೈಟಿಂಗಲ್ ಅವರ ಕನಸು ನನಸಾಗಲಿ.
(ಲೇಖಕರು, ಶುಶ್ರೂಷಾಧಿಕಾರಿ, ಇಎಸ್‌ಐ ಚಿಕಿತ್ಸಾಲಯ, ನಂಜನಗೂಡು)
” ಇಡೀ ವಿಶ್ವದಲ್ಲೆ ಕೊರೊನಾ ಆವರಿಸಿದಾಗ ಅನೇಕ ಶುಶ್ರೂಷಕರು ತಮ್ಮ ಜೀವವನ್ನೇ ಪಣಕಿಟ್ಟು ರೋಗಿಗಳ ಆರೈಕೆ ಮಾಡಿದ್ದು ಮಾತ್ರ ಫ್ಲಾರೆನ್ಸ್ ನೈಟಿಂಗಲ್‌ರವರು ಕ್ರಿಮಿಯನ್ ಯುದ್ಧದಲ್ಲಿ ಮಾಡಿದ ಸೇವೆಯನ್ನು ನೆನಪಿಸುವಂತಿತ್ತು. ಇಂತಹ ಮಹತ್ತರವಾದ ಸೇವೆ ಸಲ್ಲಿಸುತ್ತಿರುವ ಶುಶ್ರೂಷಾ ವೃತ್ತಿಗೆ ಸಮಾಜವು ಮತ್ತಷ್ಟು ಗೌರವ ನೀಡುವಂತಾಗಲಿ.”
” ಶುಶ್ರೂಷಕರುಗಳೆಂದರೆ ವೈದ್ಯರ ಸಹಾಯಕರಲ್ಲ, ಅವರು ತಮ್ಮದೇ ಆದ ನಿರ್ದಿಷ್ಟ ಕೌಶಲ ಹಾಗೂ ತರಬೇತಿ ಹೊಂದಿರುವ ಆರೋಗ್ಯ ವೃತ್ತಿಪರರು. ರೋಗಿಯ ಆರೈಕೆ, ಚಿಕಿತ್ಸೆ, ಆರೋಗ್ಯ ಶಿಕ್ಷಣ ಮತ್ತು ತುರ್ತು ಸೇವೆಗಳಲ್ಲಿ ಶುಶ್ರೂಷಕರುಗಳ ಪಾತ್ರ ಅತ್ಯಂತ ಮಹತ್ವದ್ದು.”
-ವಿಶ್ವ ಆರೋಗ್ಯ ಸಂಸ್ಥೆ
ಗುವಾಹಟಿ: ಹಿಮಂತ ಬಿಸ್ವಾ ಶರ್ಮಾ ಅವರು ಸತತ ಎರಡನೇ ಬಾರಿಗೆ ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಗುವಾಹಟಿಯ ಖಾನಾಪಾರಾದಲ್ಲಿರುವ ಪಶುವೈದ್ಯಕೀಯ…
ಮೈಸೂರು: SIR ಮೂಲಕ ರಾಜ್ಯದ 86 ಲಕ್ಷ ಮತದಾರರ ಹಕ್ಕಿಗೆ ಕನ್ನ ಹಾಕುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕೆಪಿಸಿಸಿ ವಕ್ತಾರ…
ಚೆನ್ನೈ: ತಮಿಳುನಾಡು ವಿಧಾನಸಭಾ ಸ್ಪೀಕರ್ ಆಗಿ ಶಾಸಕ ಜೆಸಿಡಿ ಪ್ರಭಾಕರ್ ಅವರಿಂದು ಸರ್ವಾನುಮತದಿಂದ ಆಯ್ಕೆಯಾದರು. ಸಿಎಂ ವಿಜಯ್ ಅವರು ಪ್ರಭಾಕರ್…
ಮಂಡ್ಯ: ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದಂತೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 90 ಅಡಿಗೆ ಕುಸಿದಿದೆ. 124.80 ಅಡಿ ಗರಿಷ್ಠ ಮಟ್ಟವನ್ನು…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ನಟ ಸಿ…
ಮಾದರಿಯ ನಡೆ! ಮೊನ್ನೆ ಹುಣಸೂರಿನಲ್ಲಿ ನಡೆದ ದಲಿತರ ದೇವಸ್ಥಾನ ಪ್ರವೇಶ ಸಹಪಂಕ್ತಿ ಭೋಜನ ಮಾದರಿ ನಡೆಯಾಗಿದೆ ನಾಡು-ದೇಶಕೆ! ಪ್ರೇರಣೆಯಾಗಿದೆ ಮೇಲ್ಪಂಕ್ತಿಯಾಗಿದೆ…