ಹೆಣ್ಣು ಯುದ್ಧಕ್ಕೆ ಹೋಗಾಬೇಕಾಗಿಯೇ ಇಲ್ಲ, ಸೆರೆಮನೆ ವಾಸವನ್ನು ಅನುಭವಿಸಬೇಕಾಗಿಯೇ ಇಲ್ಲ. ದಿನನಿತ್ಯದ ಬದುಕಲ್ಲಿ ಇರುವ ಹಿಂಸೆಯೇ ಸಾಕು.
ಡಾ. ಸುಕನ್ಯಾ ಕನಾರಳ್ಳಿ
ನನ್ನ ವಿದ್ಯಾರ್ಥಿನಿಯೊಬ್ಬಳು ಒಮ್ಮೆ ‘ನಮ್ಮಮ್ಮ ಕೆಲಸ ಮಾಡಲ್ಲ, ಮನೆಲಿದಾರೆ,’ ಎಂದು ಹಾಯಾಗಿ ಹೇಳಿದಾಗ, ‘ಮನೆಯಲ್ಲಿ ಸುಮ್ಮನೆ ಕೂತಿರುತ್ತಾರಾ? ’ ಎಂದು ಕೇಳಬೇಕಾಯಿತು. ಹೆಣ್ಣಿನ ಕೆಲಸವನ್ನು ಕೌಟುಂಬಿಕ ಪ್ರೀತಿಯ ಹೆಸರಿನಲ್ಲಿ ವೇತನಕ್ಕೆ ಅನರ್ಹಗೊಳಿಸಿರುವುದು ಒಂದು ಸಾಮಾಜಿಕ ಹುನ್ನಾರ. ಅದರಿಂದ ಲಾಭ ಯಾರಿಗೆ? ಸರಕಾರಗಳಿಗೆ ಮತ್ತು ಕಾರ್ಪೊರೇಟುಗಳಿಗೆ ಎನ್ನುತ್ತಾರೆ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್. ಮನೆಕೆಲಸ, ಲಾಲನೆ ಪಾಲನೆ, ಅಡುಗೆ ಇತ್ಯಾದಿಗಳಿಗೆ ವೇತನವಿದ್ದಿದ್ದರೆ ಗಂಡಸಿನ ಸಂಬಳವನ್ನು ಹೆಚ್ಚಿನ ಸ್ತರದಲ್ಲಿ ನಿಗದಿಗೊಳಿಸಬೇಕಲ್ಲ?
ಹೆಂಗಸರಿಗೆ ವ್ಯವಸ್ಥಿತವಾಗಿ ಯಾವ ಸವಲತ್ತನ್ನು ಕೊಟ್ಟರೂ ಲೇವಡಿ ಮಾಡುವುದು, ಹೊಟ್ಟೆ ಉರಿದುಕೊಳ್ಳುವುದು ಪಿತೃ ಶಾಹಿಯ ಶತಮಾನಗಳಷ್ಟು ಒಂದು ಹಳಸಲು ಪ್ರವೃತ್ತಿ. ಅದು ಉಚಿತ ಬಸ್ ಪ್ರಯಾಣವೋ, ಅಕ್ಕಿ ಭಾಗ್ಯವೋ, ತಾಳಿ ಭಾಗ್ಯವೋ ಅಥವಾ ಇನ್ನೊಂದೋ ಮತ್ತೊಂದೋ ಇರಬಹುದು.
ಮೊನ್ನೆ ಒಬ್ಬ ಹೀಗೆಯೇ ಹೆಂಗಸರಿಗೆ ಉಚಿತ ಪ್ರಯಾಣದ ಬಗ್ಗೆ ಹೊಟ್ಟೆ ಉರಿದುಕೊಳ್ಳುತ್ತಿದ್ದಾಗ, ‘ಯೋ, ನಿನಗೆ ದುಡ್ಡು ಉಳಿಯಿತಲ್ಲಯ್ಯಾ? ’ ಎಂದು ದಬಾಯಿಸಿದೆ. ‘ಅದೇನೋ ಸರಿ ಕಣ್ರೀ, ಆದ್ರೆ ತಿರುಗಕ್ಕೆ ಹೊಂಟುಬಿಟ್ಟಳಲ್ಲ ಸುಬ್ಬಿ! ’ ಎಂದು ವಿಷ ಕಕ್ಕಿದ. ಆಗಾಗ ಮಗಳ ಮನೆಗೂ, ಅಮ್ಮನ ಮನೆಗೂ ಹೋಗುತ್ತಾಳಂತೆ. ಹೆಂಗಸರ ನಡುವೆ ಅರ್ಥಪೂರ್ಣ ಬಾಂಧವ್ಯ ಏರ್ಪಡದಂತೆ ಕೌಟುಂಬಿಕ ವ್ಯವಸ್ಥೆ ನೋಡಿಕೊಳ್ಳುತ್ತದೆ. ಹೆಣ್ಣು ಮದುವೆಯಾದ ಮೇಲೆ ಯಾಕೆ ಅಷ್ಟೊಂದು ತನ್ನ ಸ್ನೇಹಿತೆಯರನ್ನು ಹಚ್ಚಿಕೊಳ್ಳ ಬೇಕು ಎಂದು ಅತ್ತೆಯೊಬ್ಬಳು ಪ್ರಲಾಪಿಸುತ್ತಿದ್ದಾಗ ‘ನಿಮ್ಮ ಮಗ ತನ್ನ ಸ್ನೇಹಿತರನ್ನು ಬಿಟ್ಟಿದ್ದಾನ? ’ ಎಂದು ಕೇಳಿದೆ. ಸುಮ್ಮನೆ ದುರುಗುಟ್ಟಿ ನೋಡಿದಳಾ ತಾಯಿ!
ಭಾರತದಲ್ಲಿ ಈ ನಡುವೆ ಸ್ತ್ರೀವಾದ ಎಂಬ ತತ್ವವೇ ಮಹಾ ಸಂಕಷ್ಟಕ್ಕೆ ಸಿಲುಕಿದೆ. ಈಗ್ಗೆ ಸುಮಾರು ಎರಡೂವರೆ ತಿಂಗಳ ಹಿಂದೆ ಟೆಕ್ ಉದ್ಯೋಗಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ. ವಿಚ್ಛೇದನದ ಪ್ರಕ್ರಿಯೆ ಯಲ್ಲಿ ತನ್ನ ಹೆಂಡತಿ ಮತ್ತವಳ ಮನೆಯವರು ಅನ್ಯಾಯ ಅಂತನ್ನಿಸುವಷ್ಟು ಪಾಲನ್ನು ಬೇಡಿ ತಾನು ಮಾನಸಿಕ ಹಿಂಸೆಗೆ ಒಳಗಾಗಿದ್ದರಿಂದ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದೇನೆ ಎಂಬ ದೀರ್ಘವಾದ ಒಕ್ಕಣೆಯನ್ನು ಬರೆದಿದ್ದ. ೨೦೨೨ರಲ್ಲಿ ಆತನ ಹೆಂಡತಿ ವರದಕ್ಷಿಣೆ ಕಿರುಕುಳ ಮತ್ತು ದೈಹಿಕ ದೌರ್ಜನ್ಯಗಳನ್ನು ಆತನ ಮೇಲೆ ಆರೋಪಿಸಿದ್ದಳಂತೆ.
ಸೋಶಿಯಲ್ ಮೀಡಿಯಾದಲ್ಲಿ ಗಂಡಸರ ಆಕ್ರೋಶ ಭುಗಿಲೆದ್ದಿತ್ತು. ನೋಡಿ, ಕೌಟುಂಬಿಕ ದೌರ್ಜನ್ಯದಡಿ ಇರುವ ಕಾಯಿದೆಗಳನ್ನು ಹೆಂಗಸರು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ಹಾಹಾಕಾರ ವೆದ್ದಿತ್ತು. ವರದಕ್ಷಿಣೆಯನ್ನು ದುಪ್ಪಟ್ಟು ತೆಗೆದುಕೊಳ್ಳಬೇಕು, ಅವಳ ಹಣಕಾಸನ್ನು ಅವನೇ ನಿಯಂತ್ರಿಸಬೇಕು. ತನ್ನ ಮನೆಯವರನ್ನು ಭೇಟಿ ಮಾಡಲು ಮಾತ್ರ ಅವಳನ್ನು ಹೊರಗೆ ಹೋಗಲು ಬಿಡಬೇಕು; ಅಗತ್ಯವಿದ್ದರೆ ಹೊಡೆದು ಬಡಿದು ಸಹ ಮಾಡಬಹುದು, ಏನೀಗ? ಎಂಬೆಲ್ಲಾ ಸಲಹೆಗಳಿಂದ ಸಾಮಾಜಿಕ ಜಾಲತಾಣಗಳು ಬೊಬ್ಬಿರಿದವು. ಆತ್ಮಹತ್ಯೆ ಮಾಡಿಕೊಂಡವನ ದೀರ್ಘ ಒಕ್ಕಣೆಯಲ್ಲಿ ಏನೆಲ್ಲಾ ಇತ್ತು! ‘ಹೆಂಡತಿ ಎಂದರೆ ಒಬ್ಬ ದುಬಾರಿ ಸತಿ-ಸೂಳೆ ಅಷ್ಟೇ; ಗರ್ಭಪಾತವನ್ನು ನಿಷೇಧಿಸಬೇಕು; ಮಹಿಳಾ ಕಮಾಂಡಿಂಗ್ ಆಫೀಸರುಗಳು ಆ ಹುದ್ದೆಗೆ ನಾಲಾಯಕ್ಕು; ವೈವಾಹಿಕ ಅತ್ಯಾಚಾರಕ್ಕೆ ಕಾನೂನಿನ ಹಂಗೇಕೆ?; ಇಷ್ಟಕ್ಕೂ ಅದು ಕಾನೂನಿನ ವ್ಯಾಪ್ತಿಯಡಿ ಬರಬಾರದು; ಇದೆಲ್ಲಾ ಮದುವೆಯಾಗದ ಮತ್ತು ಹೆರದ ಲಾಯರಿನಿಯರ ಕಿತಾಪತಿ; ಗಂಡಂದಿರು ತಮ್ಮ ಹೆಂಡತಿಯರನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು; ತನ್ನ ಪೌರುಷವನ್ನು ತೋರಿಸಿಕೊಳ್ಳಲು ಆತನಿಗೆ ಎಲ್ಲ ಹಕ್ಕಿರಬೇಕು? ಒಂದೇ ಎರಡೇ! ಆತನ ಮೂಲ ವಾದ ಎಂದರೆ ಪುರುಷ ಜನಾಂಗವೇ ಅಪಾಯದಲ್ಲಿದೆಯಂತೆ. ಹೆಂಗಸರು ಮಾಡುತ್ತಿರುವುದು ಜನಾಂಗೀಯ ಹತ್ಯೆಯಂತೆ.
ಇದಿಷ್ಟೇ ಯಾಕೆ? ಸೆಪ್ಟೆಂಬರ್ ೧೧, ೨೦೨೪ ರ ಸುಪ್ರೀಂ ಕೋರ್ಟು ವರದಿ ಮಾಡಿದಂತೆ ಕೌಟುಂಬಿಕ ದೌರ್ಜನ್ಯವನ್ನು ತಡೆಯಲು ಹೊರಬಂದ ಸೆಕ್ಷನ್ ೪೯೮ ಎ ಕಾನೂನು ದೇಶದಲ್ಲಿ ಅತಿ ಹೆಚ್ಚು ದುರ್ಬಳಕೆಗೆ ತುತ್ತಾದ ಕಾನೂನಂತೆ! ಬೀಸು ಹೇಳಿಕೆಗಳು, ಅತಿಯಾದ ಭಾವುಕ ಒಕ್ಕಣೆಗಳು, ವಿಚಾರ ವಿವೇಚನೆಯೇ ಇಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಬಡಬಡಿಸಲ್ಪಟ್ಟ ಆಕ್ರೋಶದ ಹೇಳಿಕೆಗಳು ಇತ್ಯಾದಿಗಳನ್ನು ಒತ್ತಟ್ಟಿ ಗಿಟ್ಟು ತಳಮಟ್ಟದ ಸಂಶೋಧನೆಯಿಂದ ಹೊಮ್ಮಿದ ಸತ್ಯಗಳತ್ತ ಒಮ್ಮೆ ಕಣ್ಣು ಹಾಯಿಸುವುದು ಒಳ್ಳೆಯದು.
ಶಾಲೂ ನಿಗಮ್ ಒಬ್ಬ ಸುಪ್ರಸಿದ್ಧ ಅಡ್ವೊಕೇಟ್, ಸಂಶೋಧಕಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಆಕೆಯ `Domesti Violene Law in india : Myth and Misogyny’ ಕೃತಿ ಈ ಎಲ್ಲ ಆರೋಪಗಳಿಗೆ ತಕ್ಕ ಉತ್ತರ ನೀಡುತ್ತದೆ.
೨೦೦೫-೬ ರ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ (NFHS-3) ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಹೆಂಗಸರ ಒಟ್ಟು ಸಂಖ್ಯೆಯಲ್ಲಿ ಕೇವಲ ಶೇಕಡಾ ಎರಡರಷ್ಟು ಹೆಂಗಸರು ಮಾತ್ರ ಕಾನೂನಿನ ನೆರವನ್ನು ಕೇಳುತ್ತಾರೆ. ಅದೂ ಕಟ್ಟ ಕಡೆಯದಾಗಿ ಮಾತ್ರ. ಅಂದರೆ ಕಾನೂನಿನ ಅತಿಯಾದ ಬಳಕೆ (ದುರ್-ಬಳಕೆ) ಸತ್ಯವಲ್ಲ. ಅತಿ ಕಮ್ಮಿ ಬಳಕೆಯೇ ವಾಸ್ತವ ಸತ್ಯ. ಅತಿವೇಗದಿಂದ ಆದ ಅಪಘಾತಗಳು, ಕಳ್ಳತನ, ದರೋಡೆ, ದೊಂಬಿ, ಗಲಭೆಗಳ ಅಡಿಯಲ್ಲಿ ಬಂಧನಕ್ಕೆ ಒಳಗಾದವರ (ಗಂಡಸರ) ಸಂಖ್ಯೆಗೂ ಕೌಟುಂಬಿಕ ದೌರ್ಜನ್ಯದಡಿ ಕಾನೂನನ್ನು ಎದುರಿಸಬೇಕಾದ ಗಂಡಸರ ಸಂಖ್ಯೆಗೂ ತಾಳೆಯೇ ಇಲ್ಲ. ಜೊತೆಗೆ, ವರ್ಷಾನುಗಟ್ಟಲೆ ತೆಪ್ಪಗೆ ಹಿಂಸೆಯನ್ನು ಅನುಭವಿಸಿ ಬೇರೆ ದಾರಿ ಕಾಣದೆ ನ್ಯಾಯವನ್ನು ಕೇಳಿ ಪೊಲೀಸು ಠಾಣೆ ಮೆಟ್ಟಿಲು ಹತ್ತುವ ಈ ಶೇಕಡಾ ಎರಡು ಹೆಂಗಸರು ಮಾಡುವ ಆರೋಪಗಳು ಸುಳ್ಳು ಎಂಬ ಬೊಬ್ಬೆಯಲ್ಲಿ ಸತ್ಯವಿಲ್ಲ. ಜೊತೆಗೆ ನ್ಯಾಯ ವ್ಯವಸ್ಥೆ ತಕ್ಷಣವೇ ನ್ಯಾಯವನ್ನು ದಯಪಾಲಿಸುತ್ತ ದೆಯೇ? ಮತ್ತೆ ವರ್ಷಾನುಗಟ್ಟಲೇ ಹಿಂಸೆ, ಅದರ ರೂಪ ಬೇರೆ ಅಷ್ಟೆ. ಮೊನ್ನೆ ತಾನೇ ಫ್ಯಾಮಿಲಿ ಲಾ ಬಗ್ಗೆ ನಡೆದ ಉಪನ್ಯಾಸವನ್ನು ಕೇಳಿಸಿಕೊಂಡೆ. ಮೂವರೂ ಬೇರೆ ಬೇರೆ ಮಹಾ ನಗರಗಳ ಫ್ಯಾಮಿಲಿ ಕೋರ್ಟುಗಳಲ್ಲಿ ವೃತ್ತಿ ನಿರತರು. ಕ್ರಿಮಿನಲ್ ಕೋರ್ಟುಗಳಲ್ಲಿ ಇರುವ ಪೊಲೀಸರ ಸಂಖ್ಯೆಗಿಂತ ಫ್ಯಾಮಿಲಿ ಕೋರ್ಟುಗಳಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ಇರುತ್ತಾರಂತೆ. ಕಕ್ಷಿದಾರ ಮಹಿಳೆಯರು ತಮ್ಮ ಮೇಲೆ ನಡೆಯಬಹುದಾದ ಎಲ್ಲ ಹಿಂಸೆಗಳನ್ನೂ ನಿರೀಕ್ಷಿಸಿಯೇ ಜೀವವನ್ನು ಕೈಲಿ ಹಿಡಿದುಕೊಂಡು ಬರುತ್ತಾರೆ. ಸಾಕ್ಷಾತ್ ಕೋರ್ಟಿನಲ್ಲೇ ಎಲ್ಲ ಹಿಂಸೆಗೆ ಸಿದ್ಧವಿರುವ ಗಂಡಸರು ಮನೆಯಲ್ಲಿ ಹೇಗಿರಬಹುದು ಎನ್ನುವುದನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು.
ಜೊತೆಗೆ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ ಭಾರತದಲ್ಲಿ ಪ್ರತಿ ಆರು ನಿಮಿಷಗಳಿಗೊಂದು ಅತ್ಯಾಚಾರ ನಡೆಯುತ್ತದೆ. ಅಂದರೆ ದಿನಕ್ಕೆ ಸುಮಾರು ನೂರು. ಆದರೂ ಶೇಕಡಾ ೭೧ ವರದಿಯಾಗುವುದಿಲ್ಲ. ಹಿಂಸೆ, ದಬ್ಬಾಳಿಕೆಯಂತಹ ಕೌಟುಂಬಿಕ ಮತ್ತು ಸಾಮಾಜಿಕ ಕಾರಣಗಳಿಗೆ ಎಷ್ಟೋ ಹೆಂಗಸರು ಹಲ್ಲು ಕಚ್ಚಿ ಸಹಿಸಿಕೊಂಡು ಸುಮ್ಮನಾಗುತ್ತಾರೆ. ಆತ್ಮಹತ್ಯೆ ಮಾಡಿಕೊಂಡವ ತನ್ನ ಮಗನಿಗೆ ಬರೆದ ಒಕ್ಕಣೆಯಲ್ಲಿ ಪ್ರತಿಯೊಬ್ಬ ಗಂಡಸಲ್ಲೂ ಇರುವ ‘ಶುದ್ಧ’ ಹಿಂಸೆಯ ಬಗ್ಗೆ ಉಪದೇಶಿಸುತ್ತಾನೆ. ವಿಚ್ಛೇದನದ ವಿಷಯ ಕೋರ್ಟಿನಲ್ಲಿ ಇರುವಾಗ ಹೆಂಗಸಿಗೆ ಬದುಕುಳಿಯಲು ಮಾತ್ರ ಜೀವನಾಂಶ ಕೊಡಬೇಕು ತಾನೇ ಎಂಬ ವಿತಂಡ ವಾದವನ್ನು ಹೂಡುತ್ತಾನೆ. ಇಲ್ಲಿ ಸಹಜ ನ್ಯಾಯವನ್ನು ಬೇಡುವಂತೆ ಕಾಣುವ ಗಂಡಸರಿಗೆ ತಮ್ಮ ಹೆಂಡತಿಯ ಹತ್ತು ಹಲವಾರು ರೀತಿಯ ಕೌಟುಂಬಿಕ ಶ್ರಮಕ್ಕೆ ವೇತನವೇ ಇಲ್ಲ ಎಂಬ ಸತ್ಯ ಕಾಣಿಸುವುದೇ ಇಲ್ಲ. ಇಷ್ಟಕ್ಕೂ ಗಂಡ-ಹೆಂಡಿರ ನಡುವೆ ಆಸ್ತಿ ಸಮಪಾಲು ಭಾಗವಾಗಬೇಕು ಎಂಬ ಕಾನೂನೇ ಈ ದೇಶದಲ್ಲಿ ಇಲ್ಲ. ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕು ಎನ್ನುವುದು ನಮ್ಮ ದೇಶದಲ್ಲಿ ಕೇವಲ ಪುರಾಣ. ಮೊನ್ನೆಯ ಉಪನ್ಯಾಸದಲ್ಲಿ ಇನ್ನೊಂದು ಅಂಶ ಮನಸ್ಸನ್ನು ತಾಕಿತ್ತು: ಇವತ್ತಿಗೂ ಸುಮಾರು ಶೇಕಡಾ ತೊಂಬತ್ತು ಮಂದಿ ವಿವಾಹಿತ ಮಹಿಳೆಯರಿಗೆ ತಮ್ಮ ಗಂಡನ ಆದಾಯ ಎಷ್ಟು ಅಂತಲೇ ಗೊತ್ತಿಲ್ಲ!
`Out of Afric’ ಎಂಬ ಸುಪ್ರಸಿದ್ಧ ಕಾದಂಬರಿ ಆಧಾರಿತ ಚಿತ್ರದಲ್ಲಿ ನಾಯಕಿ ಒಂದು ಕಡೆ ಹೇಳುತ್ತಾಳೆ: ‘ಹೆಣ್ಣು ಯುದ್ಧಕ್ಕೆ ಹೋಗಬೇಕಾಗಿಯೇ ಇಲ್ಲ, ಸೆರೆಮನೆ ವಾಸವನ್ನು ಅನುಭವಿಸಬೇಕಾಗಿಯೇ ಇಲ್ಲ. ದಿನನಿತ್ಯದ ಬದುಕಲ್ಲಿ ಇರುವ ಹಿಂಸೆಯೇ ಸಾಕು.’ ಆದರೂ ಹೆಂಗಸು ಬೊಬ್ಬೆ ಹೊಡೆಯುವುದಿಲ್ಲ. ಹೇಗೋ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿದರೆ ಸಾಕು ಎಂದು ಉಸಿರೆಳೆಯುತ್ತಿರುತ್ತಾಳೆ. ಆತ್ಮಹತ್ಯೆ ಮಾಡಿ ಕೊಂಡವ ಸಂತ್ರಸ್ತನೇ. ಅದರಲ್ಲಿ ಸಂಶಯವಿಲ್ಲ. ಆದರೆ ಅಂತಹ ಒಂದು ದುರದೃಷ್ಟದ ಪ್ರಕರಣ ಕುಟುಂಬ ಎಂಬ ಸಂಸ್ಥೆಯ ಬಗ್ಗೆ ಕಾನೂನು ಎಂಬ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಬೇಕು. ರೊಮಾನ್ಸ್ ಬಗ್ಗೆ ರಮ್ಯವಾದ ಕನಸುಗಳನ್ನು ಹೊಮ್ಮಿಸುವ ನಮ್ಮ ಜನಪ್ರಿಯ ಸಂಸ್ಕತಿ ಮದುವೆಗೆ ತಂದು ನಿಲ್ಲಿಸಿ ‘ಶುಭಂ’ ಇಂದು ಘೋಷಿಸಿ ದರೆ ಸಾಕೇ? ಸರಳವಾಗೇ ಮದುವೆ ಮಾಡಿಕೊಂಡರೂ ನಂತರದ ಬದುಕು ಸರಳವಲ್ಲ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲೋಕ್ ಫೌಂಡೇಶನ್ ನಡೆಸಿದ ಸಮೀಕ್ಷಣೆಯ ಪ್ರಕಾರ ಭಾರತದಲ್ಲಿ ಇವತ್ತಿಗೂ ಶೇಕಡಾ ೯೩ ಮದುವೆಗಳನ್ನು ಹಿರಿಯರೇ ನಿಶ್ಚಯಿಸುತ್ತಾರೆ. ಈ ಟೆಕ್ ಉದ್ಯೋಗಿ ಸಂತ್ರಸ್ತನ ವಿಷಯದಲ್ಲೇ ನೋಡಿ, ಇಬ್ಬರೂ ಪರಸ್ಪರ ಹೆಚ್ಚಿಗೆ ಮಾತಾಡಿರಲೇ ಇಲ್ಲ. ಹನಿಮೂನಿಗೆ ಹೋದಾಗ ಹುಡುಗಿ ಮದುವೆಗೆ ತನ್ನ ಒಪ್ಪಿಗೆ ಇರಲಿಲ್ಲ ಎನ್ನುವುದನ್ನು ಬಹಿರಂಗ ಮಾಡಿದಳು. ಹುಡುಗನಿಗೆ ಆಘಾತವಾಗಿರಬೇಕು. ಮತ್ಯಾಕೆ ಹೇಳಲಿಲ್ಲ? ಹೂಂ ಉಹೂಂನಲ್ಲಿ ಸಂಭಾಷಣೆಯನ್ನು ಮುಗಿಸಿದೆಯಲ್ಲ ಎಂದು ಕೇಳಿದನಂತೆ. ಮನೆಯವರ ಒತ್ತಡ ಹಾಗಿತ್ತು. ಜೊತೆಗೆ ತಾನು ಮದುವೆಯಾಗುವವಳು ಮಿತಭಾಷಿ ಎಂದು ಅವನೂ ಹಿಗ್ಗಿದ್ದು ಸುಳ್ಳೇ?
ಹೆಣ್ಣು ವಿದ್ಯಾವಂತಳಾದರೆ ಸಾಕು ಎನ್ನುವುದೂ ಸಮಸ್ಯೆಗೆ ಪರಿಹಾರವಲ್ಲ. ಅಭಯಾ ನಿರ್ಭಯಾರು ಮೆಡಿಕಲ್ ಕ್ಷೇತ್ರದಲ್ಲಿ ಇದ್ದವರು ತಾನೇ? ಅವರ ಮೇಲೇಕೆ ಅಂತಹ ಘೋರ ಅತ್ಯಾಚಾರಗಳು ನಡೆದವು? ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಭೂಪ ಕಾಮೆಂಟ್ ಹಾಕಿದ್ದ: ‘ಅದೇನು ಮಹಾ ಚೆನ್ನಾಗಿದಾಳೆ ಅಂತ? ನಾನಾಗಿದ್ದರೆ ರೇಪ್ ಮಾಡುತ್ತಿರಲಿಲ್ಲ, ಬಿಡಿ! ’ ನನಗೆ ಹೊಟ್ಟೆ ತೊಳಸಿತ್ತು. ವಿಕೃತಿಯ ರೂಪಗಳು ಹಲವಾರು!
skanarallygmail.com
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…