ಕರ್ನಾಟಕ ಸರಕಾರ ಅನುಷ್ಠಾನ ಮಾಡಲು
ಹೊರಟಿರುವ ಕೆಪಿಎಸ್ … (Karnataka public school))ಯೋಜನೆಯು ರಾಜ್ಯದ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯ ಗುಣಾತ್ಮಕ ಸುಧಾರಣೆಯ ಉದ್ದೇಶವನ್ನು ಹೊಂದಿದೆ ಎನ್ನುವ ನಿರೀಕ್ಷೆ ಇದೆ. ಖಾಸಗಿ ಶಿಕ್ಷಣ ವ್ಯಾಪಾರಿಗಳ ದಬ್ಬಾಳಿಕೆಯಿಂದ ಸೊರಗುತ್ತಿರುವ ಸರಕಾರಿ ಶಾಲೆಗಳಿಗೆ ಈ ಯೋಜನೆ ಶಕ್ತಿಯನ್ನು ತುಂಬಲಿದೆ. ಸಿದ್ದರಾಮಯ್ಯ ನೇತೃತ್ವದ ಮೊದಲ ಅವಧಿಯ ಸರಕಾರದಲ್ಲಿ ೨೦೧೮ರಲ್ಲಿ ಚಾಲನೆ ನೀಡಲಾದ ಕೆಪಿಎಸ್ ಪರಿಕಲ್ಪನೆಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಬೆಂಬಲ ನೀಡಿರಲಿಲ್ಲ. ಹೀಗಾಗಿ ಯೋಜನೆ ವಿಸ್ತಾರಗೊಂಡಿರಲಿಲ್ಲ. ಬೊಮ್ಮಾಯಿ ಸರಕಾರ ಮಾಡೆಲ್ಸ್ಕೂಲ್ ಹೆಸರಿನ ಇನ್ನೊಂದು ಯೋಜನೆಯನ್ನು ಆರಂಭಿಸುವ ಪ್ರಯತ್ನ ಮಾಡಿತ್ತಾದರೂ ಆ ಯೋಜನೆಗೆ ಇಲಾಖೆಯ ಕಡತದಿಂದ ಮೋಕ್ಷ ಸಿಗಲೇ ಇಲ್ಲ.
ಈ ಬೆಳವಣಿಗೆಗಳ ನಡುವೆಯೂ ರಾಜ್ಯದಲ್ಲಿ ೨೦೧೮ರಿಂದ ಆರಂಭಗೊಂಡಿದ್ದ ೩೦೮ ಕೆಪಿಎಸ್ ಶಾಲೆಗಳ ಪ್ರಗತಿಯು ಅತ್ಯಂತ ಪ್ರೋತ್ಸಾಹದಾಯಕವಾಗಿದೆ. ಈ ಶಾಲೆಗಳಲ್ಲಿ ೨.೮ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಹತ್ತನೇ ತರಗತಿಯ ಫಲಿತಾಂಶ ಸುಮಾರು ಶೇ.೮೦ರಷ್ಟು ದಾಖಲಾಗಿದ್ದು, ಇದು ಉತ್ತಮ ಸಾಧನೆಯಾಗಿದೆ.
ಯೋಜನೆ ವಿಸ್ತರಿಸುವ ನಿರ್ಧಾರ: ಪ್ರಸ್ತುತ ಎರಡನೇ ಬಾರಿಗೆ ಅಧಿಕಾರಕ್ಕೇರಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ೨೦೨೫-೨೦೨೬ನೇ ಸಾಲಿನ ಆಯವ್ಯಯ ಮಂಡನೆಯ ಸಂದರ್ಭದಲ್ಲಿ ಕೆಪಿಎಸ್ ಯೋಜನೆಯನ್ನು ವ್ಯಾಪಕವಾಗಿ ವಿಸ್ತರಿಸಿ ಅನುಷ್ಠಾನ ಗೊಳಿಸುವ ಘೋಷಣೆ ಮಾಡಿತ್ತು. ಈ ಯೋಜನೆಗಾಗಿ ಏಶಿಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ನಿಂದ ಸಾಲ ಪಡೆಯುವ ನಿರ್ಧಾರ ಮಾಡಲಾಗಿತ್ತು. ಬಜೆಟ್ ಮಂಡನೆಯಾದ ೬ ತಿಂಗಳ ನಂತರ ಇದೀಗ ಸರಕಾರದ ನಿರ್ಧಾರ ಅನುಷ್ಠಾನಗೊಳ್ಳುವ ಭರವಸೆ ಕಂಡುಬಂದಿದೆ. ಈ ಕುರಿತು ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ೧೫.೧೦.೨೦೨೫ರಂದು ವಿವರವಾದ ಆದೇಶವನ್ನು ಹೊರಡಿಸಿದೆ.(ಆದೇಶ ಸಂಖ್ಯೆ: ಇಪಿ ೬೪ ಎಂಪಿಇ ೨೦೨೪. ಬೆಂಗಳೂರು, ದಿನಾಂಕ:೧೫.೧೯.೨೦೨೫)
ಇದನ್ನು ಓದಿ: ಉದ್ಯೋಗ ಇಲ್ಲದೇ ಪರಿತಪಿಸುತ್ತಿರುವ ಪೌರ ಕಾರ್ಮಿಕರು
ಈ ಆದೇಶದ ಪ್ರಕಾರ ೨೦೨೬-೨೬ ಮತ್ತು ೨೦೨೬-೨೭ನೇ ಸಾಲಿನಲ್ಲಿ ಮ್ಯಾಗ್ನೆಟ್ ಶಾಲೆಗಳೆಂದು ಗುರುತಿಸಲಾಗಿರುವ ರಾಜ್ಯದ ೫೦೦ ಸರಕಾರಿ ಶಾಲೆಗಳು ಮತ್ತು ಕಲ್ಯಾಣ ಕರ್ನಾಟಕ ಭಾಗದ ೭ ಜಿಲ್ಲೆಗಳ ೨೦೦ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲು ಸರಕಾರ ಅನುಮೋದನೆ ನೀಡಿದೆ.
ಸೂಕ್ತ ಮೇಲ್ವಿಚಾರಣೆ: ರಾಜ್ಯ ಸರಕಾರ ತುಂಬಾ ಮಹತ್ವ ಕೊಟ್ಟಿರುವ ಈ ಯೋಜನೆ ಪರಿಣಾಮ ಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಯೋಜನೆಯ ಸುಸ್ಥಿರತೆಯನ್ನು ಕಾಪಾಡುವುದು ಕೂಡ ಅಷ್ಟೇ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಎರಡು ಸಮಿತಿಗಳನ್ನು ರಚಿಸಲು ಅಗತ್ಯ ಕ್ರಮ ಕೈಗೊಳ್ಳಲು ಸರಕಾರ ಸೂಚಿಸಿದೆ.
ಸರಕಾರದ ಮಾರ್ಗಸೂಚಿಯ ಪ್ರಕಾರ ಪ್ರತಿಯೊಂದು ಕೆಪಿಎಸ್ ಶಾಲೆಗೆ ಒಂದು ಆಡಳಿತ ಮಂಡಳಿ ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ರಚಿಸಬೇಕಿದೆ. ಆಡಳಿತ ಮಂಡಳಿಗೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಅಧ್ಯಕ್ಷರಾಗಿರುತ್ತಾರೆ. ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಎಸ್‌ಡಿಎಂಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ. ಕೆಪಿಎಸ್ ಶಾಲೆಯ ಶಿಕ್ಷಕರಿಗೆ ೧೦ ವರ್ಷಗಳ ಸ್ಥಿರ ಸೇವಾ ಅವಧಿಯನ್ನು ಖಾತರಿಪಡಿಸಲು ಕಾಯಿದೆಗೆ ತಿದ್ದುಪಡಿ ತರಲು ಪ್ರಸ್ತಾವನೆ ಸಲ್ಲಿಸಲು ಮತ್ತು ಶಿಕ್ಷಕರಿಗೆ ಅಗತ್ಯವಾದ ವಿಶೇಷ ಕೌಶಲ ತರಬೇತಿಗಳನ್ನು ನೀಡಲು ಸರಕಾರ ಅನುಮತಿ ನೀಡಿದೆ. ಕಲಿಕಾ ಗುಣಮಟ್ಟ ಮತ್ತು ಸುಸ್ಥಿರತೆಯ ದೃಷ್ಟಿಯಿಂದ ಇದು ಒಳ್ಳೆಯ ತೀರ್ಮಾನವಾಗಿದೆ. ಕೆಪಿಎಸ್ ಯೋಜನೆ ಮುಂದಿನ ದಿನಗಳಲ್ಲಿ ರಾಜ್ಯದ ಶೈಕ್ಷಣಿಕ ಕ್ರಾಂತಿಗೆ ಕಾರಣವಾಗಲಿ. ಶಿಕ್ಷಣ ವ್ಯಾಪಾರದ ಅಂಗಡಿಗಳು ಮುಚ್ಚಿಹೋಗಲಿ.
ಈಗ ಕೆಪಿಎಸ್ ಶಾಲೆಗಳಾಗಿ ಉನ್ನತೀಕರಣಗೊಳ್ಳುತ್ತಿರುವ ರಾಜ್ಯದ ೭೦೦ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳು ಎಂದು ಹೇಳಲಾಗುತ್ತಿದೆ. ಈ ಶಾಲೆಗಳ ಅಸುಪಾಸಿನಲ್ಲಿ ೧-೫ ಕಿ.ಮೀ. ವ್ಯಾಪ್ತಿಯಲ್ಲಿರುವ ೫೦ಕ್ಕೂ ಕಡಿಮೆ ವಿದ್ಯಾರ್ಥಿ ದಾಖಲಾತಿ ಹೊಂದಿರುವ ಶಾಲೆಗಳನ್ನು ಕೆಪಿಎಸ್ ಶಾಲೆಯೊಂದಿಗೆ ವಿಲೀನಗೊಳಿ ಸುವ ಯೋಚನೆಯನ್ನು ಸರಕಾರ ಮಾಡಿದೆ. ಇಲಾಖೆಯ ಅಂಕಿ ಅಂಶಗಳ ಪ್ರಕಾರ ೨೫,೬೮೩ ಶಾಲೆಗಳು ೫೦ ಮತ್ತು ಅದಕ್ಕಿಂತ ಕಡಿಮೆ ವಿದ್ಯಾರ್ಥಿ ಗಳನ್ನು ಹೊಂದಿವೆ. ಅವೆಲ್ಲವೂ ಹಂತಹಂತವಾಗಿ ಮುಚ್ಚಲ್ಪಡುತ್ತವೆ! ಹೀಗೆ ಮುಚ್ಚಲ್ಪಡುವ ಈ ಶಾಲೆಗಳು ಹೊಂದಿರುವ ಸಾವಿರಾರು ಕೋಟಿ ರೂ. ಮೌಲ್ಯದ ಜಮೀನು, ಕಟ್ಟಡಗಳು ಮತ್ತು ಇತರೆ ಭೌತಿಕ ಸೌಲಭ್ಯಗಳನ್ನು ರಕ್ಷಿಸಲು, ಸದ್ಬಳಕೆ ಮಾಡಲು ಸರ್ಕಾರ ಯೋಜನೆ ರೂಪಿಸಿದೆಯೇ?
ಕೆಪಿಎಸ್ ಪರಿಕಲ್ಪನೆ: ಕರ್ನಾಟಕದಲ್ಲಿ ಪ್ರಸ್ತುತ ೧೯,೬೦೩ ಪ್ರಾಥಮಿಕ, ೨೧,೬೭೬ ಹಿರಿಯ ಪ್ರಾಥಮಿಕ, ೪,೮೯೫ ಪ್ರೌಢಶಾಲೆಗಳು ಮತ್ತು ೧,೩೧೯ ಪಿಯು ಕಾಲೇಜುಗಳು ಇವೆ. ಈ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರತಿ ವರ್ಷ ಕುಸಿಯುತ್ತಲೇ ಇದೆ. ೨೦೧೫-೧೬ರಲ್ಲಿ ಇದ್ದ ೪೭.೧ ಲಕ್ಷ ವಿದ್ಯಾರ್ಥಿಗಳ ದಾಖಲಾತಿಯು ೨೦೨೫-೨೬ರಲ್ಲಿ ೩೮.೨ ಲಕ್ಷಕ್ಕೆ ಕುಸಿದಿದೆ.
ಇದನ್ನು ಓದಿ: ಕರ್ನಾಟಕ ಬಜೆಟ್| ರಾಜ್ಯದಲ್ಲಿ ಹೊಸ 500 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ: ಸಿಎಂ ಸಿದ್ದರಾಮಯ್ಯ
ಇದೇ ಅವಧಿಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ೩೬.೩ ಲಕ್ಷಗಳಿಂದ ೪೭ ಲಕ್ಷಗಳಿಗೆ ಏರಿಕೆಯಾಗಿದೆ. ಇದಕ್ಕೆ ಪೂರಕವಾಗಿ ೨೦೨೫-೨೬ನೇ ಸಾಲಿನಲ್ಲಿ ೫೦ ಮತ್ತು ಅದಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳು ಇರುವ ಸರ್ಕಾರಿ ಶಾಲೆಗಳ ಸಂಖ್ಯೆ ೨೫,೬೮೩ಕ್ಕೆ ಏರಿಕೆ ಆಗಿರುವುದು ಆತಂಕದ ವಿಚಾರವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಈಗಾಗಲೇ ಆರಂಭಿಸಲಾಗಿರುವ ಕೆಪಿಎಸ್ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಗಣನೀಯವಾಗಿ ಚೇತರಿಸಿಕೊಂಡಿದೆ.
ಜೊತೆಗೆ ಕಲಿಕೆಯ ಗುಣಮಟ್ಟ ಕೂಡ ಹೆಚ್ಚಿರುವುದು ೧೦ನೇ ತರಗತಿಯ ಫಲಿತಾಂಶದಿಂದ ಸಾಬೀತಾಗಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರಕಾರಿ ಶಾಲೆ ಗಳಲ್ಲಿ ಉನ್ನತ ಗುಣಮಟ್ಟದ, ಭವಿಷ್ಯ ಕೇಂದ್ರಿತ ಶಿಕ್ಷಣ ವನ್ನು ನೀಡಲು ಸಾಧ್ಯವಾಗುವಂತೆ ಸಂಯುಕ್ತ ಶಾಲಾ ಶಿಕ್ಷಣದ ಮಾದರಿಯನ್ನು ಕಾರ್ಯಗತಗೊಳಿಸಲು ಸರ್ಕಾರ ನಿರ್ಧರಿಸಿದೆ.
* ಪ್ರಸ್ತಾಪಿತ ಯೋಜನೆಯಲ್ಲಿ ೨೦೨೫-೨೬ ಮತ್ತು ೨೦೨೬-೨೭ನೇ ಸಾಲಿನಲ್ಲಿ ಒಟ್ಟು ೭೦೦ ಸರಕಾರಿ ಶಾಲೆಗಳನ್ನು ಮಾದರಿ ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲಾಗುತ್ತದೆ
* ಈ ಕೆಪಿಎಸ್ ಶಾಲೆಗಳಲ್ಲಿ ಎಲ್‌ಕೆಜಿ ಯಿಂದ ಮೊದಲ್ಗೊಂಡು ಪಿಯುಸಿ ವರೆಗಿನ ಶಿಕ್ಷಣವನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ
* ಈ ಶಾಲೆಗಳಲ್ಲಿ ಕನಿಷ್ಠ ೧,೨೦೦ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಲು ಅಗತ್ಯ ಇರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ೨ ರಿಂದ ೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ
* ಎಲ್‌ಕೆಜಿಯಿಂದಲೇ ದ್ವಿಭಾಷಾ ಮಾಧ್ಯಮಗಳಲ್ಲಿ ತರಗತಿಗಳ ಸೌಲಭ್ಯ ಇರುತ್ತದೆ
* ಭವಿಷ್ಯದ ವೃತ್ತಿಪರ ತರಬೇತಿಗಳನ್ನು ೬ನೇ ತರಗತಿಯಿಂದಲೇ ಆರಂಭಿಸಲಾಗುತ್ತದೆ
* ಪ್ರೌಢಶಾಲೆಯ ವಿದ್ಯಾರ್ಥಿಗಳ ಕಲಿಕೆಯ ಸುಧಾರಣೆಯ ಜೊತೆಗೆ ೧೦ನೇ ತರಗತಿ ಮತ್ತು ೧೨ ನೇ ತರಗತಿಯ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ
* STEAM ಶಿಕ್ಷಣ, ವೃತ್ತಿಪರ ತರಬೇತಿ, ಡಿಜಿಟಲ್ ಸಂಪನ್ಮೂಲಗಳ ಸಂಯೋಜನೆ, ಸಂವಹನ ಮತ್ತು ಜೀವನ ಕೌಶಲಗಳ ಅಭಿವೃದ್ಧಿ ವಿಷಯಗಳು ಪಠ್ಯಕ್ರಮದ ಭಾಗವಾಗಲಿವೆ
–ವಿಲ್ಪ್ರೆ ಡ್ ಡಿಸೋಜ
ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ…
ಹೊಸದಿಲ್ಲಿ : ಹಿರಿಯ ನಟ ಧರ್ಮೇಂದ್ರ, ದಂತಕಥೆ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ, ಬಂಗಾಳಿ…
ಹೊಸದಿಲ್ಲಿ : ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, ‘ಆಂತರಿಕ ವ್ಯವಸ್ಥೆ’ಯಿಂದಲೇ ಇದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್…
ಬೆಂಗಳೂರು : ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಸ್ವೀಕರಿಸಲೇಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ…
ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…
ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…