ತಾಯಿಯ ಚಿಕಿತ್ಸೆಗೆ ಹಣವಿಲ್ಲದೆ ಆದ ಅವಮಾನವೇ ವೈದ್ಯರಾಗಲು ಪ್ರೇರಣೆ
ದೆಹಲಿಯ ಹೆಸರಾಂತ ಆಸ್ಪತ್ರೆಯೊಂದರಲ್ಲಿ ‘ನಾನ್ ಇನ್ವೇಸಿವ್ ಕಾರ್ಡಿಯಕ್ ಪ್ರೊಸೀಜರ್’ ತಜ್ಞರಾದ ಡಾ.ಎಸ್.ಎಂ.ರೆಹಮಾನ್ ಒಂದು ದಿನ ಒಬ್ಬ ರೋಗಿಯನ್ನು ಪರೀಕ್ಷಿಸುತ್ತಿದ್ದರು. ಅವರ ರಕ್ತದೊತ್ತಡ ೨೦/೧೫೦ ಇದ್ದಿತ್ತು. ಅವರೊಂದಿಗೆ ಮಾತನಾಡುತ್ತಿದ್ದಾಗ ಬಡವನಾಗಿದ್ದ ಅವರು ದೂರದ ಹಳ್ಳಿಯೊಂದರಿಂದ ಚಿಕಿತ್ಸೆಗಾಗಿ ದೆಹಲಿಗೆ ಬಂದಿರುವುದು ಅವರಿಗೆ ತಿಳಿಯಿತು. ಯಾವ ಹಳ್ಳಿ ಎಂದು ವಿಚಾರಿಸಿದಾಗ ಆತ ‘ಖಾಗರಿಯಾ’ ಎಂದು ಉತ್ತರಿಸಿದರು.
ಖಾಗರಿಯಾ ಎಂಬ ಹೆಸರು ಕೇಳುತ್ತಿದ್ದಂತೆಯೇ ಡಾ. ರೆಹಮಾನ್‌ಗೆ ಆಶ್ಚರ್ಯವಾಗುವುದರ ಜೊತೆಗೆ ಅವರ ಮನಸ್ಸಿನಲ್ಲಿ ಏನೇನೋ ಆಲೋಚನೆಗಳು ಹಾದು ಹೋದವು. ಏಕೆಂದರೆ, ಖಾಗರಿಯಾ ಡಾ. ರೆಹಮಾನ್ ಹುಟ್ಟಿದ ಊರು! ಅದು ದೆಹಲಿಯಿಂದ ೧,೨೦೦ ಕಿ.ಮೀ. ದೂರದಲ್ಲಿರುವ ಬಿಹಾರ ರಾಜ್ಯದ ಒಂದು ಜಿಲ್ಲೆ. ಅಂದರೆ, ಆ ಬಡ ರೋಗಿಯು ತನ್ನ ಚಿಕಿತ್ಸೆಗಾಗಿ ಅಷ್ಟು ದೂರದಿಂದ ದೆಹಲಿಗೆ ಬಂದಿದ್ದರು! ಆ ವಿಚಾರವು ಡಾ.ರೆಹಮಾನ್‌ಗೆ ದೆಹಲಿಯಂತಹ ಭಾರತದ ನಗರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೌಲಭ್ಯಗಳು ಲಭ್ಯವಿದ್ದರೂ ತಾನು ಹುಟ್ಟಿದ ಖಾಗರಿಯಾಗಳಂತಹ ಭಾರತದ ಹಳ್ಳಿಗಳು ಇನ್ನೂ ಮೂಲಭೂತ ವೈದ್ಯಕೀಯ ಸೌಲಭ್ಯಗಳಿಂದ ವಂಚಿತವಾಗಿವೆ ಎಂಬ ವಾಸ್ತವವನ್ನು ಮನದಟ್ಟು ಮಾಡುವುದರ ಜೊತೆಗೆ ಅವರ ಬಾಲ್ಯದ ದಿನಗಳನ್ನು ನೆನಪಿಸಿತು.
ಬಿಹಾರದ ಖಾಗರಿಯಾ ಜಿಲ್ಲೆಯ ಚಿಕ್ಕ ಹಳ್ಳಿಯೊಂದರಲ್ಲಿ ಜನಿಸಿದ ಡಾ.ಎಸ್.ಎಂ.ಝಿವುರ್ ರೆಹಮಾನ್‌ರದ್ದು ಒಂದು ಬಡ ಕುಟುಂಬ. ಅವರ ಕುಟುಂಬಕ್ಕಿದ್ದ ಆಸ್ತಿ ಎಂದರೆ ಐದು ಎಕರೆ ಬರಡು ಹೊಲ, ಮೂರು ಎಮ್ಮೆಗಳು ಮತ್ತು ಒಂದು ಚಿಕ್ಕ ಹಿಟ್ಟಿನ ಗಿರಣಿ. ರೆಹಮಾನ್‌ರ ತಂದೆಯಾಗಲಿ, ತಾಯಿಯಾಗಲಿ ತಮ್ಮ ಮಗನನ್ನು ಹೊಲ ಉಳಲಾಗಲಿ, ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡಲಾಗಲಿ ಒತ್ತಾಯಿಸಲಿಲ್ಲ. ಬದಲಿಗೆ, ಅವರು ತಮ್ಮ ಬಡತನದ ನಡುವೆಯೂ ಮಗನ ಶಿಕ್ಷಣಕ್ಕಾಗಿ ತಮ್ಮೆಲ್ಲ ಶಕ್ತಿಯನ್ನು ವ್ಯಯಿಸುತ್ತಿದ್ದರು. ರೆಹಮಾನ್ ಕೂಡ ಅವರ ಭರವಸೆ, ವಿಶ್ವಾಸಕ್ಕೆ ತುಸುವೂ ಧಕ್ಕೆಯಾಗದಂತೆ ನೋಡಿಕೊಂಡು, ಚೆನ್ನಾಗಿ ಕಲಿಯುತ್ತಿದ್ದರು.
ರೆಹಮಾನ್ ಆರು ವರ್ಷದ ಬಾಲಕನಾಗಿದ್ದಾಗ ಬದುಕಿನ ಒಂದು ಬಹುದೊಡ್ಡ ಪಾಠವನ್ನು ಕಲಿತರು. ಒಂದು ದಿನ ಅವರ ತಾಯಿ ಕಾಯಿಲೆ ಬಿದ್ದಾಗ ಅವರು ರೆಹಮಾನ್ ಮತ್ತು ಅವರ ತಮ್ಮನನ್ನು ಕರೆದುಕೊಂಡು ಒಂದು ಆಸ್ಪತ್ರೆಗೆ ಹೋಗಿದ್ದರು. ಆಗ ಅವರ ಬಳಿ ಚಿಕಿತ್ಸೆಗೆ ಬೇಕಾದಷ್ಟು ಹಣವಿಲ್ಲದ ಕಾರಣ ಆಸ್ಪತ್ರೆಯ ಕಾಂಪೌಂಡರ್ ಅವರ ತಾಯಿಯನ್ನು ಅವಮಾನಗೊಳಿಸಿದನು.
ಬಾಲಕ ರೆಹಮಾನ್‌ಗೆ ಪರಿಸ್ಥಿತಿಯು ಸಂಪೂರ್ಣವಾಗಿ ಅರ್ಥವಾಗದಿದ್ದರೂ ತಾಯಿಗಾದ ಅವಮಾನ ಮಾತ್ರ ಚೆನ್ನಾಗಿ ಅರ್ಥವಾಗಿತ್ತು. ತಮ್ಮ ಕುಟುಂಬದ ಬಡತನದಿಂದಾಗಿ ಅನುಭವಿಸಬೇಕಾಗಿ ಬಂದುದನ್ನು ನೋಡಿ ಅವರು ಒಂದು ದಿನ ತಾನೂ ಒಬ್ಬ ಡಾಕ್ಟರಾಗಿ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸುತ್ತೇನೆ ಎಂದು ಮಾತ್ರವಲ್ಲ, ತನ್ನಿಂದ ಆದಷ್ಟು ಮಟ್ಟಿಗೆ ಬಡತನದ ಕಾರಣಕ್ಕೆ ಬಡಕುಟುಂಬಗಳು ಇಂತಹ ಅವಮಾನಗಳಿಗೆ ಒಳಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಮನಸ್ಸಿನಲ್ಲೇ ಪ್ರತಿಜ್ಞೆ ಮಾಡಿದರು.
ರೆಹಮಾನ್‌ರ ಜೀವಶಾಸ್ತ್ರ ಶಿಕ್ಷಕರು ತರಗತಿಯಲ್ಲಿ ಒಂದು ಪ್ರಶ್ನೆಯನ್ನು ಕೇಳಿದಾಗ ರೆಹಮಾನ್ ಅದಕ್ಕೆ ತಕ್ಷಣವೇ ಉತ್ತರಿಸಿದರು. ಆಗ ಖುಷಿಗೊಂಡ ಆ ಶಿಕ್ಷಕರು ‘ಮುಂದೆ ನೀನೊಬ್ಬ ಡಾಕ್ಟರಾಗುವೆ’ ಎಂದು ಹರಸಿದ್ದೂ ರೆಹಮಾನ್ಗೆ ತನ್ನ ಗುರಿ ಸಾಧನೆಗೆ ಸ್ಛೂರ್ತಿಯಾಯಿತು. ಅದರ ಜೊತೆಗೆ ಅವರ ಸಹಪಾಠಿ ಮಕ್ಕಳು ಅವರನ್ನು ‘ಡಾಕ್ಟರ್ ಸಾಹೇಬ್’ ಅಂತ ಕರೆಯಲು ಶುರು ಮಾಡಿದ್ದೂ ರೆಹಮಾನ್‌ರ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿತು.
ದೆಹಲಿಯ ಒಂದು ಚಾರಿಟಬಲ್ ಟ್ರಸ್ಟ್‌ನ ವಿದ್ಯಾರ್ಥಿವೇತನದ ಸಹಾಯದಿಂದ ಪಟ್ನಾ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದು, ವೈದ್ಯರಾದರು. ಮುಂದೆ, ಅಪೊಲೋ ಆಸ್ಪತ್ರೆಯಲ್ಲಿ ‘ನಾನ್ ಇನ್ವೇಸಿವ್ ಕಾರ್ಡಿಯಕ್ ಪ್ರೊಸಿಜರ್’ನಲ್ಲಿ ತಜ್ಞ ವೈದ್ಯರಾಗಿ ರೂಪುಗೊಂಡು, ದೆಹಲಿಯ ಹೆಸರಾಂತ ಆಸ್ಪತ್ರೆಯೊಂದರಲ್ಲಿ ಉದ್ಯೋಗ ಪಡೆದರು.
ಆ ಬಡರೋಗಿಯು ಹೇಳಿದ ವಾಸ್ತವಿಕ ಸಂಗತಿ ಡಾ.ರೆಹಮಾನ್‌ರನ್ನು ಆಲೋಚನೆಗೀಡು ಮಾಡಿತು. ನಗರಗಳಲ್ಲಿ ವೈದ್ಯಕೀಯ ಸೇವೆ ಎಂಬುದು ಒಂದು ಬಹು ದೊಡ್ಡ ಉದ್ಯಮವಾಗಿ ಬೆಳೆದಿದೆ. ಆದರೆ, ಹಳ್ಳಿಗಳಲ್ಲಿ ಮೂಲಭೂತ ವೈದ್ಯಕೀಯ ಸೇವೆಗಳೂ ಇಲ್ಲದೆ ಜನ ಜೀವನ್ಮರಣದ ಪ್ರಶ್ನೆ ಎದುರಿಸುತ್ತಿದ್ದಾರೆ. ಆ ಆಲೋಚನೆ ರೆಹಮಾನ್‌ರನ್ನು ಅವರ ಹುಟ್ಟೂರಿನತ್ತ ಸೆಳೆಯಲು ಕಾರಣವಾಯಿತು.
ಆ ಹೊತ್ತಲ್ಲಿ ಕೈತುಂಬಾ ಸಂಬಳ ಪಡೆಯುತ್ತಿದ್ದ ಡಾ.ರೆಹಮಾನ್‌ರ ಮುಂದೆ ಕೀರ್ತಿ, ಹಣ ಗಳಿಸಿ ವೈಭವಯುತ ಬದುಕು ನಡೆಸಲು ಬೇಕಾದುದೆಲ್ಲವೂ ಕಾಲ ಬುಡದಲ್ಲಿತ್ತು. ಅವರು ಅದೆಲ್ಲವನ್ನು ತ್ಯಜಿಸಿ ತಮ್ಮ ಹುಟ್ಟೂರು ಖಾಗರಿಯಾಕ್ಕೆ ಮರಳಿದರು. ೨೦೧೦ರಲ್ಲಿ ಅಲ್ಲಿ ‘ನ್ಯಾಷನಲ್ ಮೆಡಿಕೇರ್ ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್’ ಎಂಬ ೫೦ ಹಾಸಿಗೆಗಳನ್ನು ಹೊಂದಿದ ಒಂದು ಆಸ್ಪತ್ರೆಯನ್ನು ತೆರೆದರು.
‘ನ್ಯಾಷನಲ್ ಮೆಡಿಕೇರ್ ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್’ ಬೆಳಿಗ್ಗೆ ೧೧ರಿಂದ ರಾತ್ರಿ ೧೧ರ ವರೆಗೆ ಸ್ಥಳಿಯ ಜನರಿಗೆ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆಗಳನ್ನು ನೀಡುತ್ತದೆ. ಅಷ್ಟೂ ಸಮಯ ಡಾ.ರೆಹಮಾನ್ ಸ್ವತಃ ಆಸ್ಪತ್ರೆಯಲ್ಲಿದ್ದು ರೋಗಿಗಳ ಆರೈಕೆ ಮಾಡುತ್ತಾರೆ. ಕೆಲವೊಮ್ಮೆ ಮಧ್ಯ ರಾತ್ರಿಯ ತನಕವೂ ರೋಗಿಗಳ ಆರೈಕೆ ಮಾಡಿ ಮನೆಗೆ ಬರುವುದೂ ಇದೆ. ಕಳೆದ ಹದಿನೈದು ವರ್ಷಗಳಿಂದ ಇದೇ ಅವರ ಜೀವನಕ್ರಮವಾಗಿದೆ. ಅವರಿಂದ ಉಪಕೃತರಾದ ರೋಗಿಗಳಿಗೆ ಲೆಕ್ಕವಿಲ್ಲ.
ಉದಾಹರಣೆಗೆ, ೨೦೨೨ರ ಕೋವಿಡ್ ಸಮಯದಲ್ಲಿ ಹಂಝಾ ಖಲೀದ್ ಎಂಬವರು ಪಾರ್ಶ್ವವಾಯು ತಗಲಿದ ತಮ್ಮ ತಂದೆಯನ್ನು ಬೆಗುಸರೈಯ ಒಂದು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಒಂದು ವಾರದಲ್ಲಿ ಆಸ್ಪತ್ರೆ ಬಿಲ್ಲು ಒಂದು ಲಕ್ಷ ರೂಪಾಯಿ ಆದಾಗ ಹಂಝಾ ಖಲೀದ್ ಗಲಿಬಿಲಿಗೊಂಡರು. ಆಗ ಅವರು ಡಾ.ರೆಹಮಾನ್‌ರನ್ನು ಸಂಪರ್ಕಿಸಿದಾಗ ಅವರು ರೋಗಿಯನ್ನು ತಮ್ಮ ‘ನ್ಯಾಷನಲ್ ಮೆಡಿಕೇರ್ ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್’ಗೆ ದಾಖಲಿಸಿಕೊಂಡು, ಅತ್ಯಂತ ಕಡಿಮೆ ಖರ್ಚಿನಲ್ಲಿ ಉಪಚರಿಸಿದರು. ಇಂತಹ ಉದಾಹರಣೆಗಳು ನೂರಾರು.
ನ್ಯಾಷನಲ್ ಮೆಡಿಕೇರ್ ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್’ ಪ್ರತಿದಿನ ಕನಿಷ್ಠ ೭೦ ರೋಗಿಗಳನ್ನು ಉಪಚರಿಸುತ್ತದೆ. ಪ್ರತಿ ರೋಗಿಗೆ ಕೇವಲ ೫೦ ರೂ. ಕನ್ಸಲ್ಟಿಂಗ್ ಫೀಸ್ ವಿಧಿಸುತ್ತದೆ. ಅದನ್ನೂ ತೆರಲು ಆರ್ಥಿಕ ಅನುಕೂಲತೆಯಿಲ್ಲದ ರೋಗಿಗಳೂ ಅಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ದೆಹಲಿ ಆಸ್ಪತ್ರೆಯ ದೊಡ್ಡ ಸಂಬಳದ ಉದ್ಯೋಗ ಬಿಟ್ಟು ಬಿಹಾರದ ಈ ಕುಗ್ರಾಮದಲ್ಲಿ ಆಸ್ಪತ್ರೆ ತೆರೆದ ಬಗ್ಗೆ ತಮಗೆ ಪಶ್ಚಾತ್ತಾಪವೇನೂ ಇಲ್ಲವೇ? ಎಂದು ಕೇಳಿದರೆ ಡಾ.ರೆಹಮಾನ್ ಅದಕ್ಕೆ ಸ್ಪಷ್ಟವಾಗಿ ಉತ್ತರಿಸುತ್ತಾರೆ-‘ನನ್ನದು ಬಹಳ ಸರಳವಾದ ಬದುಕು.
ಯಾವುದೇ ಭೌತಿಕ ಅಗತ್ಯಗಳ ಮೋಹ ನನಗಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ, ಇಲ್ಲಿನ ಸಮುದಾಯದೊಂದಿಗೆ ನನಗೊಂದು ಆತ್ಮೀಯವಾದ ಸಂಬಂಧ ಬೆಳೆದಿದೆ. ನನ್ನ ರೋಗಿಗಳು ‘ತೆಕುವಾ (ಚಾತ್ ಪೂಜೆ ಸಮಯದಲ್ಲಿ ಮಾಡುವ ಒಂದು ಸಿಹಿ ಖಾದ್ಯ)’, ಮಕರ ಸಂಕ್ರಾಂತಿಯಂದು ಮೊಸರು, ತುಪ್ಪ ತಂದು ಕೊಡುತ್ತಾರೆ. ಇನ್ನು ಕೆಲವರು ತಾವು ಬೆಳೆದ ಗೆಣಸು, ತರಕಾರಿಗಳನ್ನು ತಂದು ಕೊಡುತ್ತಾರೆ. ಈ ಜನರ ಇಂತಹ ಮುಗ್ಧ ಪ್ರೀತಿಯ ಎದುರು ಬೇರಾವುದೇ ಭೌತಿಕ ಸವಲತ್ತುಗಳು ಕೊಡುವ ಖುಷಿ ಯಾವ ಲೆಕ್ಕದ್ದು?’
” ನ್ಯಾಷನಲ್ ಮೆಡಿಕೇರ್ ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್ ಪ್ರತಿದಿನ ಕನಿಷ್ಠ ೭೦ ರೋಗಿಗಳನ್ನು ಉಪಚರಿಸುತ್ತದೆ. ಪ್ರತಿ ರೋಗಿಗೂ ಕೇವಲ ೫೦ ರೂ. ಕನ್ಸಲ್ಟಿಂಗ್ ಫೀಸ್ ವಿಧಿಸುತ್ತದೆ. ಅದನ್ನೂ ತೆರಲು ಆರ್ಥಿಕ ಅನುಕೂಲತೆಯಿಲ್ಲದ ರೋಗಿಗಳೂ ಅಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.”
-ಪಂಜು ಗಂಗೊಳ್ಳಿ
ಪ್ರತಿದಿನ ಬೆಳಗಿನ ಜಾವ ದಿನ ದಿನಪತ್ರಿಕೆಗಳನ್ನು ಬಹುತೇಕ ಮಕ್ಕಳೇ ವಿತರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ವಿಪರೀತ ಚಳಿ ಇರುವುದರಿಂದ ಆರೋಗ್ಯದ ಮೇಲೆ…
ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಮಧ್ಯವರ್ತಿಗಳು ಹಾಗೂ ಚಾಲನಾ ತರಬೇತಿ ಶಾಲೆಗಳವರಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ…
ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ರಾಜ್ಯದ ಎಲ್ಲಾ ನಗರ ಪಾಲಿಕೆಗಳು, ಪುರಸಭೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ…
ಕಳೆದ ವಾರ ಕೊಚ್ಚಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಕಲೆ ಮತ್ತು ಸಾಹಿತ್ಯ ಉತ್ಸವದಲ್ಲಿ ಸಿನಿಮಾ ಕುರಿತಂತೆ ಪ್ರಮುಖರು ಆಡಿರುವ…
ಲಕ್ಷ್ಮಿಕಾಂತ್ ಕೊಮಾರಪ್ಪ ಬ್ರಿಟಿಷರ ಕಾಲದ ಕಬ್ಬಿಣದ ಸೇತುವೆ ತೆರವು; ನೂತನ ಸೇತುವೆ ನಿರ್ಮಾಣ ಕಾರ್ಯ ಶುರು ಸೋಮವಾರಪೇಟೆ: ಮಡಿಕೇರಿ- ಹಾಸನ…
ಕಾಲುವೆಗೆ ಸೇರುತ್ತಿದೆ ಕಲ್ಯಾಣ ಮಂಟಪಗಳ ತ್ಯಾಜ್ಯ ರಾಸಾಯನಿಕ ನೀರಿನಿಂದ ಬೆಳೆ ಹಾಳು, ಜಾನುವಾರು ಸಾವು ಈಗಲಾದರೂ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟವರು…