ಅಂಕಣಗಳು

ರಾಜ್ಯ ರಾಜಕಾರಣದಲ್ಲಿ ಕಿಚ್ಚು ಹಚ್ಚಿದ ಡಿಕೆಶಿ ನಡೆ

ವರಿಷ್ಠರಿಗೆ ಹೊಸ ಸಂದೇಶ ರವಾನಿಸಿದರೇ ಉಪ ಮುಖ್ಯಮಂತ್ರಿ?

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎರಡು ಸಂದರ್ಭಗಳಲ್ಲಿ ಆಡಿದ ಮಾತುಗಳು ಕರ್ನಾಟಕದ ರಾಜಕಾರಣದಲ್ಲಿ ಕಿಚ್ಚು ಹಚ್ಚಿವೆ. ಈ ಪೈಕಿ ಮೊದಲ ಮಾತನ್ನು ಅವರು ವಿಧಾನಸಭೆಯಲ್ಲಿ ಆಡಿದರೆ, ಎರಡನೇ ಮಾತನ್ನು ವಿಧಾನಸಭೆಯ ಹೊರಗೆ ಆಡಿದರು. ವಿಧಾನ ಸಭೆಯಲ್ಲಿ ಮಾತನಾಡುತ್ತಾ ಅವರು, ‘ನಮಸ್ತೆ ಸದಾ ವತ್ಸಲೆ ಮಾತೃಭೂಮಿ’ ಎಂದು ಸಂಘ ಪರಿವಾರದ ಉಸಿರೇ ಆಗಿರುವ ಗೀತೆಯನ್ನು ಉಚ್ಚರಿಸಿದರೆ, ಮತ್ತೊಂದು ಸಂದರ್ಭದಲ್ಲಿ ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಆಸ್ತಿಯಲ್ಲ ಎಂದರು.

ಇವತ್ತು ದಸರೆಯ ಬಗ್ಗೆ ಅವರಾಡಿದ ಮಾತನ್ನು ಹಲವರು, ಆಕಸ್ಮಿಕವಾಗಿ ಆದ ಪ್ರಮಾದ ಎಂದು ಬಣ್ಣಿಸುತ್ತಾರೆ. ವಾಸ್ತವವಾಗಿ ಅವರು ದಸರೆ ನಾಡಹಬ್ಬ.ಹೀಗಾಗಿ ಎಲ್ಲರೂ ಸೇರಿ ಇದನ್ನು ಆಚರಿಸಬೇಕು ಎಂದು ಹೇಳುವ ಉದ್ದೇಶ ಹೊಂದಿದ್ದರು ಎನ್ನುತ್ತಾರೆ. ಆದರೆ ನಾಡಿನ ಉಪಮುಖ್ಯಮಂತ್ರಿಯಾಗಿರುವ ಒಬ್ಬ ನಾಯಕ, ಅದರಲ್ಲೂ ಭವಿಷ್ಯದ ಮುಖ್ಯಮಂತ್ರಿಯಾಗಲು ಹಾತೊರೆಯುತ್ತಿರುವ ಒಬ್ಬ ನಾಯಕ, ಬಾಯಿ ತಪ್ಪಿಯೂ ಇಂತಹ ಮಾತುಗಳನ್ನು ಆಡಲು ಸಾಧ್ಯವೇ? ಹಾಗೆಂಬ ಪ್ರಶ್ನೆ ಬಂದಾಗ ರಾಜಕೀಯ ವಲಯಗಳು ತಮ್ಮದೇ ಅನುಮಾನ ವ್ಯಕ್ತಪಡಿಸುತ್ತವೆ. ಅವುಗಳ ಪ್ರಕಾರ, ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ನಿಂತು ‘ನಮಸ್ತೆ ಸದಾ ವತ್ಸಲೆ’ ಎಂದು ಹಾಡಿದ್ದು ಮತ್ತು ದಸರೆಯ ಬಗ್ಗೆ ತಮ್ಮದೇ ಶೈಲಿಯಲ್ಲಿ ಹೇಳಿಕೆ ನೀಡಿದ್ದಕ್ಕೆ ನಿರ್ದಿಷ್ಟ ಉದ್ದೇಶವಿದೆ.

ಏಕೆಂದರೆ, ನಮಸ್ತೆ ಸದಾ ವತ್ಸಲೆ ಎಂಬುದು ಸಂಘಪರಿವಾರದ ಶಾಖೆಗಳಲ್ಲಿ ನಿತ್ಯ ಪಠಣವಾಗುವ ಗೀತೆ. ಅರ್ಥಾತ್, ಸಂಘಪರಿವಾರದ ಉಸಿರೇ ಆಗಿರುವ ಗೀತೆಯನ್ನು ವಿಧಾನಸಭೆಯಲ್ಲಿ ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ವರಿಷ್ಠರಿಗೆ ಎರಡು ಬಗೆಯ ಸಂದೇಶಗಳನ್ನು ರವಾನಿಸಿದರು. ಮೊದಲನೆಯದಾಗಿ, ನವೆಂಬರ್ ಹೊತ್ತಿಗೆ ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ತಮ್ಮನ್ನು ಆ ಜಾಗದಲ್ಲಿ ಕೂರಿಸುವ ಕೆಲಸವಾಗದಿದ್ದರೆ, ತಮ್ಮ ದಾರಿ ತಮಗೆ ಎಂದು ಸ್ಪಷ್ಟಪಡಿಸುವುದು.

ಅದೇ ರೀತಿ, ಧರ್ಮಸ್ಥಳದ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಿದೆ. ಹೀಗಾಗಿ ಭವಿಷ್ಯದಲ್ಲಿ ಹಿಂದೂ ಮತಗಳು ಕಾಂಗ್ರೆಸ್ ವಿರುದ್ಧ ಕ್ರೋಢೀಕರಣಗೊಳ್ಳುವ ಅಪಾಯವಿದೆ. ಹೀಗಾಗಿ ಈ ಅಪಾಯವನ್ನು ಕಡಿಮೆ ಮಾಡಲು ತಾವು ಹಿಂದುತ್ವದ ಪ್ರತಿಪಾದಕನಂತೆ ವಿಧಾನಸಭೆಯಲ್ಲಿ ಮಾತನಾಡಬೇಕಾಯಿತು ಎಂಬುದು ಮತ್ತೊಂದು. ಹೀಗೆ ಒಂದೇ ಬೆಳವಣಿಗೆಯ ಮೂಲಕ ಎರಡು ಸಂದೇಶಗಳನ್ನು ರವಾನಿಸಬಲ್ಲ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಸರೆಯ ವಿಷಯದಲ್ಲಿ ಏಕೆ ಎಡವಿದರು? ಅವರ ಹೇಳಿಕೆಯನ್ನು ಒಂದು ಮಟ್ಟದಲ್ಲಿ ಹಿಗ್ಗಿಸುವ ಪ್ರಯತ್ನವಾಗಿರಬಹುದು. ಆ ಮಾತು ಬೇರೆ. ಆದರೆ ಸ್ಥೂಲ ಅರ್ಥದಲ್ಲಿ ಅವರಾಡಿದ ಮಾತು ಸಹಜವಾಗಿಯೇ ಹಿಂದೂ ಧರ್ಮೀಯರನ್ನು ಕೆರಳಿಸುವುದು ಸಹಜ. ಇದು ಗೊತ್ತಿದ್ದ ಮೇಲೂ ಡಿ.ಕೆ.ಶಿವಕುಮಾರ್ ಅವರು ಇಂತಹ ಮಾತುಗಳನ್ನಾಡಿದರು ಎಂದರೆ ಅದಕ್ಕೆ ಇನ್ನೊಂದು ಆಯಾಮವೂ ಇರಬಹುದು. ಅದೆಂದರೆ, ನವೆಂಬರ್ ಅಂತ್ಯದ ವೇಳೆಗೆ ತಾವು ಸಿಎಂ ಆಗುವುದು ಕಷ್ಟ ಅಂತ ಅವರಿಗೆ ದಿನ ಕಳೆದಂತೆ ಹೆಚ್ಚೆಚ್ಚು ಮನವರಿಕೆ ಆಗುತ್ತಿದೆ.

ಹೀಗಾಗಿ ದಸರೆಯ ಕುರಿತು ಮಾತನಾಡಿ ಹಿಂದೂಗಳನ್ನು ಕೆರಳಿಸಿದರೆ ಸಹಜವಾಗಿಯೇ ಭವಿಷ್ಯದಲ್ಲಿ ಕಾಂಗ್ರೆಸ್ ವಿರುದ್ಧ ಹಿಂದೂ ಮತಗಳು ಕ್ರೋಢೀಕರಣಗೊಳ್ಳಬಹುದು. ಹಾಗೇನಾದರೂ ಆದರೆ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರ ಹಿಡಿಯುವುದು ಕಷ್ಟ. ಹಾಗಾಗಲಿ ಎಂದು ಡಿ.ಕೆ.ಶಿವಕುಮಾರ್ ಬಯಸಿದ್ದಾರೆಯೇ? ರಾಜ್ಯ ಕಾಂಗ್ರೆಸ್‌ನ ಆಳಕ್ಕೆ ಹೊಕ್ಕು ನೋಡಿದರೂ, ವ್ಯಕ್ತವಾಗುವ ಪ್ರಮುಖ ಅನುಮಾನಗಳು ಇವು. ಅಂದ ಹಾಗೆ ಇವತ್ತು ಅಧಿಕಾರ ಹಂಚಿಕೆಯ ಮಾತನ್ನು ಜೀವಂತವಾಗಿಡಲು ಶ್ರಮಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಮನವರಿಕೆಯಾಗಿರುವ ಮತ್ತೊಂದು ಸಂಗತಿ ಎಂದರೆ, ತಾವು ನವೆಂಬರ್ ನಂತರ ಬಿಜೆಪಿಗೆ ಹೋದರೂ ತಮ್ಮ ಹಿಂದೆ ಗಣನೀಯ ಪ್ರಮಾಣದ ಶಾಸಕರು ಬರುವುದಿಲ್ಲ ಎಂಬುದು. ಇದಕ್ಕೆ ಕಾರಣವೂ ಇದೆ. ಅದೆಂದರೆ, ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರಿಗೆ ಮುಂದಿನ ಚುನಾವಣೆಯ ಆಶಾಕಿರಣ ಎಂದರೆ ಸಿದ್ದರಾಮಯ್ಯ. ಒಂದು ವೇಳೆ ಅವರೇನಾದರೂ ಮುಂಬರುವ ಚುನಾವಣೆಗೂ ಮುನ್ನ ಅಧಿಕಾರದಿಂದ ಕೆಳಗಿಳಿದರೆ ತಾವು ಚುನಾವಣೆಯನ್ನು ಎದುರಿಸುವುದು ಕಷ್ಟ ಎಂಬುದು ಬಹುತೇಕ ಶಾಸಕರಿಗೆ ಗೊತ್ತಿದೆ.

ಹೀಗಾಗಿ ನಾಳೆ ಸಿಎಂ ಹುದ್ದೆಗಾಗಿ ಡಿ.ಕೆ.ಶಿವಕುಮಾರ್ ಏನೇ ಗದ್ದಲ ಮಾಡಿದರೂ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ಅವರ ಹಿಂದೆ ನಿಲ್ಲುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲ ಶಾಸಕರು ಡಿ.ಕೆ.ಶಿವಕುಮಾರ್ ಅವರ ಜತೆ ನಿಲ್ಲುವುದಾಗಿ ಹೇಳಿದ್ದರಾದರೂ, ಸಿದ್ದರಾಮಯ್ಯ ಅವರನ್ನು ಇಳಿಸಲು ಹೈಕಮಾಂಡ್ ತೀರ್ಮಾನಿಸಿದರೆ ಮಾತ್ರ ಅವರು ಡಿ.ಕೆ. ಶಿವಕುಮಾರ್ ಅವರ ಹಿಂದೆ ಹೋಗುತ್ತಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಇವತ್ತು ಬಲವಂತವಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಸ್ಥಿತಿಯಲ್ಲಿಲ್ಲ. ಹಾಗೇನಾದರೂ ಅದು ಹೇಳಲು ಮುಂದಾದರೆ ದಲಿತ ಸಿಎಂ ಕೂಗು ದಟ್ಟವಾಗುತ್ತದೆ. ಹೀಗಾಗಿ ನಾಳೆ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ನಿಂದ ಹೊರಬೀಳಲು ನಿರ್ಧರಿಸಿದರೆ ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಅವರ ಜತೆ ನಿಲ್ಲಬಹುದು.

ಯಾವಾಗ ಈ ವಿಷಯ ಅರ್ಥವಾಯಿತೋ? ಇದಾದ ನಂತರ ಡಿ.ಕೆ. ಶಿವಕುಮಾರ್ ಅವರ ನಡೆ ವಿಚಿತ್ರವಾಗಿ ಬದಲಾಗಿದೆ. ಮೊದಲನೆಯದಾಗಿ ನಮಸ್ತೆ ಸದಾ ವತ್ಸಲೆ ಎಂದು ಹೇಳುವ ಮೂಲಕ ಬಿಜೆಪಿಗೆ ತಾವು ಹತ್ತಿರ ಎಂಬ ಸಂದೇಶವನ್ನು ಅವರು ರವಾನಿಸಿದರು. ವಾಸ್ತವವಾಗಿ ಡಿ.ಕೆ.ಶಿವಕುಮಾರ್ ಅವರು ನಮಸ್ತೆ ಸದಾ ವತ್ಸಲೆ ಎಂಬ ಗೀತೆಯನ್ನು ಹಾಡಿದ ನಂತರ ಬಿಜೆಪಿಯ ಕೆಲ ನಾಯಕರು ಸಭೆ ನಡೆಸಿ ಡಿಕೆಶಿ ಬಿಜೆಪಿ ಕಡೆ ಬರಬಹುದೇ? ಅವರು ಬಂದರೆ ನಾವು ಏನು ಮಾಡಬೇಕು ಎಂದು ಚಿಂತನೆ ನಡೆಸಿದ್ದಾರೆ.

ಅವರ ಪ್ರಕಾರ, ಇವತ್ತಿನ ದಿನಗಳಲ್ಲಿ ಯಾರು ಯಾರ ಜತೆ ಆತ್ಮೀಯವಾಗಿದ್ದಾರೆ ಎಂದು ಹೇಳುವುದು ಕಷ್ಟ. ಏಕೆಂದರೆ ಡಿಕೆಶಿ ಅವರು ಮನಸ್ಸು ಬಂದಾಗ ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುತ್ತಾರೆ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತಾರೆ. ಹೀಗಾಗಿ ನಾಳೆ ಅವರು ಬಿಜೆಪಿಗೆ ಬರುವುದಿಲ್ಲ ಎಂದು ನಂಬುವುದು ಹೇಗೆ ಎಂಬುದು ಕೆಲ ಬಿಜೆಪಿ ನಾಯಕರ ಯೋಚನೆ. ಇಂತಹ ಯೋಚನೆಯಲ್ಲಿರುವಾಗಲೇ ಅವರ ಚಿಂತೆಯನ್ನು ಹೆಚ್ಚಿಸಿದ ಮತ್ತೊಂದು ಬೆಳವಣಿಗೆ ದಸರೆಯ ಕುರಿತು ಡಿ.ಕೆ.ಶಿವಕುಮಾರ್ ಅವರು ಮಾತನಾಡಿರುವುದು. ಏಕೆಂದರೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯಿಂದ ಇವತ್ತು ಲಾಭವಾಗಿರುವುದು ಬಿಜೆಪಿಗೆ.

ಏಕೆಂದರೆ ಅವರು ಈ ಹೇಳಿಕೆ ನೀಡಿದ ಕೂಡಲೇ ಅದರ ಹಿಂದೆ ಹಿಂದೂ ವಿರೋಧಿ ಮನಃಸ್ಥಿತಿ ಇದೆ ಎಂದು ಬಿಜೆಪಿ ಕೂಗಾಡುತ್ತಿದೆ. ಅದು ರಾಜ್ಯದ ಜನರ ಗಮನ ಸೆಳೆದಿರುವುದು ಕೂಡಾ ನಿಜ. ಹೀಗೆ ಬಿಜೆಪಿಗೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ಡಿಕೆಶಿ ಇಂತಹ ಮಾತುಗಳನ್ನಾಡಿದರು ಎಂಬುದು ಕಾಂಗ್ರೆಸ್‌ನ ಕೆಲ ನಾಯಕರ ಅನುಮಾನ. ಕಾಂಗ್ರೆಸ್ ನಾಯಕರ ಈ ಮಾತುಗಳನ್ನು ಗಮನಿಸಿದರೆ,ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಸಲು ಬಿಜೆಪಿ ವರಿಷ್ಠರು ಉತ್ಸುಕರಾಗಿದ್ದಾರೆ. ಡಿಕೆಶಿ ಅದಕ್ಕೆ ಅನುಕೂಲ ಮಾಡಿಕೊಡಲು ಹೊರಟಿದ್ದಾರೆ ಎಂಬ ಅನಿಸಿಕೆ ದಟ್ಟವಾಗುತ್ತದೆ. ಡಿಸಿಎಂ ಡಿಕೆಶಿ ನಡೆ ವಿಶೇಷ ಅರ್ಥಗಳನ್ನು ಪಡೆಯುತ್ತಿರುವುದು ಈ ಕಾರಣಕ್ಕಾಗಿ.

” ಡಿ.ಕೆ. ಶಿವಕುಮಾರ್ ಅವರು ನಮಸ್ತೆ ಸದಾ ವತ್ಸಲೆ ಎಂಬ ಗೀತೆಯನ್ನು ಹಾಡಿದ ನಂತರ ಬಿಜೆಪಿಯ ಕೆಲ ನಾಯಕರು ಸಭೆ ನಡೆಸಿ ಡಿಕೆಶಿ ಬಿಜೆಪಿ ಕಡೆ ಬರಬಹುದೇ? ಅವರು ಬಂದರೆ ನಾವು ಏನು ಮಾಡಬೇಕು ಎಂದು ಚಿಂತನೆ ನಡೆಸಿದ್ದಾರೆ.”

ಬೆಂಗಳೂರು ಡೈರಿ 
-ಆರ್.ಟಿ.ವಿಠ್ಠಲಮೂರ್ತಿ 

ಆಂದೋಲನ ಡೆಸ್ಕ್

Recent Posts

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ; 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…

16 mins ago

ನಂಜನಗೂಡು | ಶ್ರೀಕಂಠೇಶ್ವರ ದೇವಾಲಯದ ಮುಂದಿನ ಅನಧಿಕೃತ ಅಂಗಡಿ ತೆರವು

ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…

37 mins ago

ಚಿನ್ನ ಕಳ್ಳ ಸಾಗಾಣಿಕೆ ಪತ್ತೆ : 2.89 ಕೋಟಿ ರೂ. ಮೌಲ್ಯದ ಚಿನ್ನ ವಶ

ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…

1 hour ago

ಗಣರಾಜ್ಯೋತ್ಸವ : ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ

ಭುಗಿಲೆದ್ದ ಆಕ್ರೋಶ; ಬಿಜೆಪಿ -ಕಾಂಗ್ರೆಸ್ ಆರೋಪ-ಪ್ರತ್ಯಾರೋಪ ಬೆಂಗಳೂರು : ದೇಶದ 77ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಈ…

2 hours ago

ಮೈಷುಗರ್ ಕಾರ್ಖಾನೆ ಖಾಸಗಿಯವರಿಗೆ ವಹಿಸಲ್ಲ : ಸಿ.ಡಿ.ಗಂಗಾಧರ ಸ್ಪಷ್ಟನೆ

ಮಂಡ್ಯ : ಮೈಷುಗರ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ವಹಿಸುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ…

2 hours ago

ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಸ್ಥಗಿತ : ಕಾರಣ ಬಿಚ್ಚಿಟ್ಟ ಸಂಸದ ಯದುವೀರ್‌

ಮೈಸೂರು : ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಸ್ಥಗಿತವಾಗಿದೆ, ಯೋಜನೆಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ಹಸ್ತಾಂತರ ಮಾಡಿಲ್ಲ. ಈ ಬಗ್ಗೆ…

2 hours ago