ಸಂಪಾದಕೀಯ

ಬಾನು ಮುಷ್ತಾಕ್ ದಸರಾ ಉದ್ಘಾಟಿಸಲು ವಿರೋಧವೇಕೆ?

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ದಸರಾ ಉದ್ಘಾಟನೆಗಾಗಿ ರಾಜ್ಯ ಸರ್ಕಾರ ಬುಕರ್ ಪ್ರಶಸ್ತಿ ಪುರಸ್ಕೃತರಾದ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ರಾಜ್ಯಾದ್ಯಂತ ವಿವಾದ ಕಿಚ್ಚೆಬ್ಬಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಭಾಷೆ, ನಾಡಿನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಏರಿಸಿರುವ ಬಾನು ಅವರ ಸಾಹಿತ್ಯಕ ಶ್ರೇಷ್ಠತೆಗಿಂತ, ಅವರ ಧರ್ಮದ ಬಗ್ಗೆ ಕೆಲಜನರಿಗೆ ಇರುವ ಪೂರ್ವ ಗ್ರಹವೇ ಮುಖ್ಯವಾಗಿ ಶಬ್ದ ಮಾಡುತ್ತಿದೆ.

೨೦೧೭ರಲ್ಲಿ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮ್ಮದ್ ಅವರು ದಸರಾ ಮಹೋತ್ಸವವನ್ನು ಇದೇ ಚಾಮುಂಡಿ ಬೆಟ್ಟದಲ್ಲಿ ಉದ್ಘಾಟಿಸಿದ್ದಾರೆ. ಆಗ ಒಂದೇ ಒಂದು ಭಿನ್ನಧ್ವನಿಯೂ ಕೇಳಿಬರಲಿಲ್ಲ. ಬಾನು ಅವರನ್ನು ಉದ್ಘಾಟನೆಗೆ ಆಹ್ವಾನಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ಅಪಸ್ವರಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡು ತ್ತಿವೆ. ಬಾನು ಅವರು ಹೋರಾಟಗಾರರು, ಮಹಿಳೆಯರ ಶೋಷಣೆ ವಿರುದ್ಧ ಧ್ವನಿ ಎತ್ತಿದವರು. ಅಲ್ಪಸಂಖ್ಯಾತ ಕುಟುಂಬ ದಲ್ಲಿ ಜನಿಸಿ ಒಬ್ಬ ಬರಹಗಾರ್ತಿಯಾಗಿ ರೂಪುಗೊಳ್ಳಲು ಅವರು ಅನುಭವಿಸಿದ ಸಂಕಟಗಳು, ಎದುರಿಸಿದ ಧಾರ್ಮಿಕ ವೈರುಧ್ಯಗಳೇ ಬಹುಶಃ ಈಗ ಅವರು ಎದುರಿಸುತ್ತಿರುವ ವಿರೋಧಗಳಿಗೆ ತಕ್ಕ ಉತ್ತರ ನೀಡುವಂತಹ ಮನೋಸ್ಥೆರ್ಯವನ್ನು ಒದಗಿಸಿವೆ ಎಂದರೆ ಉತ್ಪ್ರೇಕ್ಷೆಯಲ್ಲ. ‘ಚಾಮುಂಡೇಶ್ವರಿಯೇ ನನ್ನನ್ನು ಕರೆಸಿ ಕೊಳ್ಳುತ್ತಿದ್ದಾಳೆ’ ಎಂದಿರುವ ಬಾನು ಅವರ ಹೇಳಿಕೆಯು, ಆಕೆಗೆ ಎಲ್ಲ ಧರ್ಮಗಳ ಬಗ್ಗೆ ಗೌರವ ಇದೆ ಎಂಬುದನ್ನು ಸಾರಿ ಹೇಳುತ್ತದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ಬಾನು ಅವರಿಗೆ ದಸರಾ ಉದ್ಘಾಟನೆ ವಿಚಾರದಲ್ಲಿ ಸ್ವಧರ್ಮ ಹಾಗೂ ಅನ್ಯಧರ್ಮ ಎಲ್ಲಿಯೂ ಬೆಂಬಲ ಸಿಗುತ್ತಿಲ್ಲ. ಕಳೆದ ವರ್ಷ ಅಂದರೆ ೨೦೨೪ರಲ್ಲಿ ಅಲ್ಪಸಂಖ್ಯಾತ ಧರ್ಮದ ಡಾ.ಹಂ.ಪ.ನಾಗರಾಜಯ್ಯ ಅವರು ದಸರಾ ಉದ್ಘಾಟಿಸಿದ್ದಾರೆ. ಆಗ ಕೂಡ ಯಾರೂ ವಿರೋಧಿಸಲಿಲ್ಲ. ನಾಡಹಬ್ಬ ಅಥವಾ ಸಾಂಸ್ಕೃತಿಕ ಉತ್ಸವದಲ್ಲಿ ಧರ್ಮಕ್ಕಿಂತ ಪರಸ್ಪರ ಮಾನವ ಪ್ರೀತಿ, ಸಹಕಾರಗಳಿಗೇ ಆದ್ಯತೆ. ಜಂಬೂ ಸವಾರಿಯ ದಿನ ದಸರಾ ಗಜಪಡೆಯೊಂದಿಗೆ ಸಾಗುವ ಜಾನಪದ ಕಲಾತಂಡಗಳಲ್ಲಿ ಇರುವ ಹಾಗೂ ಸ್ತಬ್ಧಚಿತ್ರಗಳನ್ನು ರೂಪಿಸುವ ಕಲಾವಿದರನ್ನು ಜಾತಿ, ಧರ್ಮದ ಮಾನದಂಡಗಳಲ್ಲಿ ತೂಗುವುದು ಎಷ್ಟು ಸರಿ? ಇಂತಹ ವಿರೋಧಗಳಿಂದ ಸಾಮಾನ್ಯ ಜನರು ದಸರಾ ಹಬ್ಬದಿಂದ ದೂರ ಉಳಿಯುವ ಸಾಧ್ಯತೆಗಳು ಇವೆ.

ದಸರಾ ಆಚರಣೆಯನ್ನು ನಿಜವಾದ ಸಂಭ್ರಮ, ಸಂತೋಷಗಳನ್ನು ಕಾಣುವವರೇ ಈ ಸಾಮಾನ್ಯಜನರು. ಯಾವುದೇ ಧರ್ಮ ಅಥವಾ ಯಾವುದನ್ನು ನಾವು ಧರ್ಮ ಎಂದು ಪರಿಭಾವಿಸುತ್ತೇವೆಯೋ ಅದು ನಿಜವಾಗಿ, ದೇಶದಲ್ಲಿ ‘ಸರ್ವ ಜನಾಂಗದ ಶಾಂತಿ ತೋಟ’ದ ನಿರ್ಮಾಣವನ್ನು ಬಯಸುತ್ತದೆ. ಹಾಗಿಲ್ಲದಿದ್ದರೆ ಅದನ್ನು ಧರ್ಮ ಎನ್ನುವುದು ಹೇಗೆ? ಈಗಿನ ಮಾತಿರಲಿ. ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯು ಎಲ್ಲ ವರ್ಗಗಳ ಜನರ ಅಭಿವೃದ್ಧಿಯನ್ನೇ ಕೇಂದ್ರವಾಗಿಟ್ಟುಕೊಂಡಿತ್ತು. ಜಾತಿ, ಧರ್ಮಗಳ ಹಂಗಿಲ್ಲದೆ ಆಡಳಿತ ನಡೆಸಿದ್ದು ನಾಲ್ವಡಿ ಅವರ ಹೆಗ್ಗಳಿಕೆ. ಆದರೆ, ಅವರಿಗೂ ಪೂರ್ವಗ್ರಹ ಮನಸ್ಸುಗಳ ವಿರೋಧ ಸಾಕಷ್ಟು ಪ್ರಬಲವಾಗಿಯೇ ಇತ್ತು ಎಂಬುದಾಗಿ ಇತಿಹಾಸ ಹೇಳುತ್ತದೆ. ಬಾನು ಮಷ್ತಾಕ್ ಅವರು ದಸರಾ ಉದ್ಘಾಟಿಸಬಾರದು ಎನ್ನುವವರಿಗೆ ನಾಲ್ವಡಿ ಅವರು ಜಂಬೂ ಸವಾರಿಯಲ್ಲಿ ಮೆರೆದ ಸೌಹಾರ್ದತೆಯ ಸಂದೇಶವನ್ನು ನೆನಪು ಮಾಡಬೇಕಾಗಿದೆ.

೧೯೨೭ರಲ್ಲಿ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ನಾಲ್ವಡಿ ಅವರು ಸಂಸ್ಥಾನದ ದಿವಾನರಾಗಿದ್ದ ಸರ್ ಮಿರ್ಜಾ ಮುಹಮ್ಮದ್ ಇಸ್ಮಾಯಿಲ್ ಅವರನ್ನು ಅಂಬಾರಿಯೊಳಗೆ ಕೂರಿಸಿ ತಮ್ಮ ಜೊತೆಯಲ್ಲೇ ಮೆರವಣಿಗೆಯಲ್ಲಿ ಕರೆದೊಯ್ದರು ಎಂಬ ದಾಖಲೆ ಇದೆ. ಆಗಲೂ ಕೆಲವರು ಮೆರವಣಿಗೆ ಹೊರಟಿದ್ದವರತ್ತಲೇ ಪಾದರಕ್ಷೆಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರಂತೆ. ಆದರೆ, ಈ ಪ್ರಜಾತಂತ್ರ ವ್ಯವಸ್ಥೆಯಲ್ಲಿ, ವಿಜ್ಞಾನ, ತಂತ್ರಜ್ಞಾನ ಅಚ್ಚರಿ ಎಂಬಂತೆ ಬೆಳೆದಿದೆ. ಮನುಷ್ಯ ಚಂದ್ರಲೋಕದಲ್ಲಿ ಮನೆ ಕಟ್ಟುವ ಚಿಂತೆಯಲ್ಲಿದ್ದಾನೆ. ಈಗಲೂ ಧಾರ್ಮಿಕತೆಯ ಮುಸುಕಿ ನೊಳಗೆ ಮಾನವತೆಯ ಬೆಳಕನ್ನು ಮುಚ್ಚಿಡುವ ವ್ಯರ್ಥ ಪ್ರಯತ್ನ ನಡೆಯುತ್ತಿರುವುದು ಸಾಂವಿಧಾನಿಕವಾಗಿ ಒಪ್ಪುವುವಂತಹದ್ದಲ್ಲ.

ಬಾನು ಮುಷ್ತಾಕ್ ಈ ಮಣ್ಣಿನ, ಭಾಷೆಯ ಲೇಖಕರು. ಅವರು ದಸರಾ ಉದ್ಘಾಟಿಸುವುದು ಸರಿಯಲ್ಲ ಎನ್ನುವುದಕ್ಕೆ ಆಧಾರವೇ ಇಲ್ಲ. ಈ ಬಗ್ಗೆ ಮಾನವೀಯ ನೆಲೆಯಲ್ಲಿ ಚಿಂತನೆ ಮಾಡುವುದು ಎಲ್ಲರ ಕರ್ತವ್ಯ.

” ನಾಡಹಬ್ಬ ಅಥವಾ ಸಾಂಸ್ಕೃತಿಕ ಉತ್ಸವದಲ್ಲಿ ಧರ್ಮಕ್ಕಿಂತ ಪರಸ್ಪರ ಮಾನವ ಪ್ರೀತಿ, ಸಹಕಾರಗಳಿಗೇ ಆದ್ಯತೆ. ಜಂಬೂ ಸವಾರಿಯ ದಿನ ದಸರಾ ಗಜ ಪಡೆಯೊಂದಿಗೆ ಸಾಗುವ ಜಾನಪದ ಕಲಾತಂಡಗಳಲ್ಲಿ ಇರುವ ಹಾಗೂ ಸ್ತಬ್ಧಚಿತ್ರಗಳನ್ನು ರೂಪಿಸುವ ಕಲಾವಿದರನ್ನು ಜಾತಿ, ಧರ್ಮದ ಮಾನದಂಡಗಳಲ್ಲಿ ತೂಗುವುದು ಎಷ್ಟು ಸರಿ? ಇಂತಹ ವಿರೋಧಗಳಿಂದ ಸಾಮಾನ್ಯ ಜನರು ದಸರಾ ಹಬ್ಬದಿಂದ ದೂರ ಉಳಿಯುವ ಸಾಧ್ಯತೆಗಳೂ ಇವೆ”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಪ್ರಧಾನ್‌ ರಾಜೀನಾಮೆ : ವಾಂಗ್ಚುಕ್‌ ಫಸ್ಟ್‌ ರಿಯಾಕ್ಷನ್‌

ನವದೆಹಲಿ : ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಕುರಿತು ಹೋರಾಟಗಾರ ಸೋನಮ್‌ ವಾಂಗ್ಚುಕ್‌ ಮೊದಲ ಪ್ರತಿಕ್ರಿಯೆ…

2 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 25 ಶನಿವಾರ  

11 hours ago

ನೋಟ-ಪ್ರತಿನೋಟ | ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಸರಿಯೇ? ತಪ್ಪೇ?

ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಪ್ರಥಮವಾಗಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಂಬಳಕ್ಕಾಗಿ ಮೈಸೂರಿನಲ್ಲಿ ಸ್ಥಳ ನಿಗದಿಪಡಿಸಿದ್ದು, ಸಿದ್ಧತೆ…

11 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಗೆ ಅಜ್ಜಿ ಒಡವೆ ನೀಡಿದ ಪ್ರಸಂಗ…

ನನ್ನ ಅಜ್ಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಗಾಂಧಿ ಹಕ್ಕಿಯ ಹಾಗೆ ಇದ್ದರು ಮತ್ತು ನಿರುಪದ್ರವಿ ಎಂದು. ಗಾಂಽಯ ಕಾಲದಲ್ಲಿ…

11 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ಉಡುಪು ಯಾಕೆ ಬದಲಾಯಿತು?

  ಡಾ.ಪ್ರಮೀಳಾದೇವಿ ಬಿ.ಕೆ. ಮಹಾತ್ಮಗಾಂಧಿ ಇಂಗ್ಲೆಂಡಿನಲ್ಲಿದ್ದಾಗಲೂ, ಅಲ್ಲಿಂದ ಹಿಂತಿರುಗಿದಾಗ, ಮತ್ತು ಆರಂಭದ ದಿನಗಳಲ್ಲಿ ಅವರು ಎಲ್ಲಾ ವಿದ್ಯಾವಂತರಂತೆ ಬೆಲೆಬಾಳುವ ಸೂಟುಬೂಟು…

11 hours ago

ಗಾಂಧಿ ಅಭಿಯಾನ ಅರಿವಿನ ಯಾನ ; ಸಜ್ಜನನಾದ ಆಂಗ್ಲನಾಗುವ ಪ್ರಯತ್ನ

ಶಾಕಾಹಾರದಲ್ಲಿ ದಿನದಿನಕ್ಕೂ ನನ್ನ ನಂಬಿಕೆ ಹೆಚ್ಚುತ್ತಲೇ ಹೋಯಿತು. ಸಾಲ್ಟ್‌ರ ಗ್ರಂಥದ ವ್ಯಾಸಂಗದಿಂದ, ಆಹಾರದ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಭ್ಯಾಸ ಮಾಡಲು…

11 hours ago