ಅಂಕಣಗಳು

ಯುದ್ಧದಲ್ಲಿ ಉಕ್ರೇನ್‌ಗೆ ಸೋಲು?

ಡಿ.ವಿ.ರಾಜಶೇಖರ

ಇಸ್ರೇಲ್ ಮತ್ತು ಗಾಜಾ ಪ್ಯಾಲೆಸ್ತೀನ್ ಪ್ರದೇಶದ ಹಮಾಸ್ ಉಗ್ರವಾದಿಗಳ ನಡುವೆ ಯುದ್ಧ ಸಿಡಿದ ಮೇಲೆ ಉಕ್ರೇನ್ -ರಷ್ಯಾ ಯುದ್ಧ ಜನರ ಮನಸ್ಸಿನಿಂದ ಮರತೇ ಹೋಗಿದೆ. ಉಕ್ರೇನ್-ರಷ್ಯಾ ನಡುವಣ ಯುದ್ಧ ಆರಂಭವಾಗಿ ಹತ್ತಿರ ಹತ್ತಿರ ಎರಡು ವರ್ಷಗಳಾಗಿವೆ. ಉಕ್ರೇನ್ ಬೆಂಬಲಿಸುತ್ತಿದ್ದ ಅಮೆರಿಕ ಮತ್ತು ಯೂರೋಪ್‌ನ ಬಲಿಷ್ಠ ದೇಶಗಳ ನಾಯಕರು ಯುದ್ಧ ಸಿಡಿದ ಆರಂಭದಲ್ಲಿ ತೋರಿಸಿದಂಥ ಆಸಕ್ತಿಯನ್ನು ಈಗ ತೋರಿಸುತ್ತಿಲ್ಲ.

ಉಕ್ರೇನ್‌ಗೆ ಮಿಲಿಟರಿ ನೆರವು ನೀಡುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸರ್ಕಾರದ ಪ್ರಯತ್ನಕ್ಕೆ ರಿಪಬ್ಲಿಕನ್ ಪಕ್ಷದ ಸದಸ್ಯರು ತಡೆಯೊಡ್ಡಿದ್ದಾರೆ. ಬ್ರೆಡನ್ ಸರ್ಕಾರ ಉಕ್ರೇನ್‌, ಇಸ್ರೇಲ್‌ಗೆ ಮಿಲಿಟರಿ ನೆರವು ಮತ್ತು ಅಕ್ರಮ ವಲಸೆ ತಡೆಯಲು ಭದ್ರತಾ ಕ್ರಮ ಹೆಚ್ಚಿಸುವ ಉದ್ದೇಶದ 106 ಬಿಲಿಯನ್ ಡಾಲರ್ ಯೋಜನಾ ಸಲಹೆಯನ್ನು ಕಾಂಗ್ರೆಸ್ ಮುಂದೆ ಮಂಡಿಸಿತ್ತು. ಅದಕ್ಕೆ ಕಾಂಗ್ರೆಸ್ ಒಪ್ಪಿಗೆ ನೀಡಿಲ್ಲ. ಕಾಂಗ್ರೆಸ್‌ನಲ್ಲಿ ರಿಪಬ್ಲಿಕನ್‌ ಪಕ್ಷಕ್ಕೆ ಬಹುಮತ ಇರುವುದರಿಂದ ಸರ್ಕಾರದ ಸಲಹೆ ತಿರಸ್ಕೃತಗೊಂಡಿದೆ. ಇಸ್ರೇಲ್‌ಗೆ ಎಲ್ಲ ರೀತಿಯ ಮಿಲಿಟರಿ ನೆರವು ಸಿಗಬೇಕೆಂಬುದು ರಿಪಬ್ಲಿಕನ್ ಸದಸ್ಯರ ನಿಲುವು. ಆದರೆ ಅದರ ಜೊತೆ ಉಕ್ರೇನ್ ಸೇರಿಸುವುದಕ್ಕೆ ರಿಪಬ್ಲಿಕನ್ ಪಕ್ಷದ ಸದಸ್ಯರ ಸಹಮತ ಇಲ್ಲ. ಹೀಗಾಗಿ ಇಡೀ ಸಲಹೆ ಈಗ ಮುಂದಿನ ವರ್ಷಕ್ಕೆ ಮುಂದಕ್ಕೆ ಹೋಗಿದೆ. ಉಕ್ರೇನ್‌ಗೆ 61 ಬಿಲಿಯನ್ ಡಾಲರ್ ಮೊತ್ತದ ಯುದ್ಧಾಸ್ತ್ರ ಕೊಡುವ ಉದ್ದೇಶಸರ್ಕಾರದ್ದಾಗಿತ್ತು. ಬಜೆಟ್ಟಿನ ಹೊರಗೆ ಮಿಲಿಟರಿ ನೆರವು ನೀಡಲು ಬೈಡನ್ ಸರ್ಕಾರಕ್ಕೆ ಅವಕಾಶವಿದೆ. ಆದರೆ ಅಂಥ ನಿರ್ಧಾರ ಇನ್ನೂ ಆಗಿಲ್ಲ. ಇದೇ ರೀತಿ ಯೂರೋಪ್ ಒಕ್ಕೂಟದಲ್ಲಿಯೂ ಉಕ್ರೇನ್‌ಗೆ ಮಿಲಿಟರಿ ನೆರವು ನೀಡುವ 50 ಬಿಲಿಯನ್ ಡಾಲರ್ ಸಲಹೆಗೆ ಹಂಗೇರಿ ಕಲ್ಲುಹಾಕಿದೆ. ಉಕ್ರೇನ್ ಬೆಂಬಲಿಸಿದ್ದರಿಂದ ಯುರೋಪ್‌ಗೆ ಪ್ರಯೋಜನವೇನೂ ಆಗಿಲ್ಲ ಎಂದು ವಾದ ಮಾಡಿ ಆ ಸಂಬಂಧವಾದ ನಿರ್ಣಯದ ವಿರುದ್ಧ ಮತ ನೀಡಿದೆ.

ಈ ಬೆಳವಣಿಗೆಯಿಂದ ಉಕ್ರೇನ್ ಅಧ್ಯಕ್ಷ ವಾಡಿಮಿರ್ ಝಲ ಕಂಗಾಲಾ ಗಿದ್ದಾರೆ. ಒಂದು ಸುತ್ತು ಅಮೆರಿಕ ಮತ್ತು ಯೂರೋಪ್‌ಗೆ ಭೇಟಿ ನೀಡಿ ತುರ್ತು ಮಿಲಿಟರಿ ನೆರವು ಎಷ್ಟು ಅಗತ್ಯವಿದೆ ಎನ್ನುವುದನ್ನು ಮನವರಿಕೆ ಮಾಡಿ ಕೊಡಲು ಯತ್ನಿಸಿದ್ದಾರೆ. ಆದರೆ ಮಿಲಿಟರಿ ನೆರವು ಸದ್ಯಕ್ಕೆ ಸಿಗುವ ಸಾಧ್ಯತೆ ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಉಕ್ರೇನ್‌ಗೆ ರಷ್ಯಾ ವಿರುದ್ಧದ ಯುದ್ಧದಲ್ಲಿ ಹಿನ್ನಡೆಯಾಗಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಹಿಂದೆ ಕೊಟ್ಟಿರುವ ಭರವಸೆಯಂತೆ ಅಮೆರಿಕ ಮಿಲಿಟರಿ ನೆರವು ನೀಡದಿದ್ದರೆ ಅದೊಂದು ದೊಡ್ಡ ದ್ರೋಹವಾಗುತ್ತದೆ. ಅಮೆರಿಕ ಮಿಲಿಟರಿ ನೆರವು ನೀಡಿಯೇ ತೀರುತ್ತದೆ ಎನ್ನುವುದು ತಮ್ಮ ವಿಶ್ವಾಸ ಎಂದು ಉಕ್ರೇನ್ ಅಧ್ಯಕ್ಷ ಝಲಕ್ಷ್ಮಿಹೇಳಿದ್ದಾರೆ. ಅದೇ ರೀತಿ ಯೂರೋಪ್ ಒಕ್ಕೂಟದ ಬಗ್ಗೆಯೂ ಅವರಿಗೆ ವಿಶ್ವಾಸವಿದೆ. ಆದರೆ ಪರಿಸ್ಥಿತಿ ಭಿನ್ನವಾಗಿರುವಂತಿದೆ. ಸದ್ಯಕ್ಕೆ ಉಕ್ರೇನ್‌ಗೆ ಮಿಲಿಟರಿ ನೆರವು ಸಿಗುವ ಸಾಧ್ಯತೆ ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಶ್ನಿಸಿದಾಗ ಮಿಲಿಟರಿ ಶಸ್ತ್ರಾಸ್ತ್ರ ಇಲ್ಲದಿದ್ದ ಸಂದರ್ಭ ಬಂದರೂ ಉಕ್ರೇನ್ ಸೋಲುವುದಿಲ್ಲ. ಉಕ್ರೇನ್ ಜನರಲ್ಲಿ ಇನ್ನೂ ಶಕ್ತಿ ಇದೆ. ಗೆರಿಲ್ಲಾ ಯುದ್ಧ ಆರಂಭಿಸಿ ರಷ್ಯಾದ ಅತಿಕ್ರಮಣದ ವಿರುದ್ಧ ಹೋರಾಡಲಿದ್ದಾರೆ ಎಂಬ ಉತ್ತರ ಅವರಿಂದ ಬಂದಿದೆ. ರಷ್ಯಾ ಜೊತೆಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಗಳ ಬಗ್ಗೆ ಪ್ರಶ್ನಿಸಿದಾಗ *ಉಕ್ರೇನ್‌ನ ಅತಿಕ್ರಮಿಸಿಕೊಂಡಿರುವ ಎಲ್ಲ ಪ್ರದೇಶಗಳಿಂದ ರಷ್ಯಾ ಸೇನೆ ತೆರವು ಮಾಡಿದರೆ ಮಾತ್ರ ಶಾಂತಿ ಮಾತುಕತೆ’ ಎಂಬ ಕಟುವಾದ ನಿಲುವನ್ನು ಜಲನ ಪ್ರಕಟಿಸಿದ್ದಾರೆ.

ಯುದ್ಧ ಮುಂದುವರಿಸುವ ಸ್ಥಿತಿಯಲ್ಲಿ ಉಕ್ರೇನ್ ಇಲ್ಲ ಎನ್ನುವುದನ್ನು ಅರಿತೇ ರಷ್ಯಾ ಅಧ್ಯಕ್ಷ ವಾಡಿಮಿರ್ ಪುಟಿನ್ ಸಂಧಾನದ ಮಾತನ್ನು ಆಡುತ್ತಿದ್ದಾರೆ. ‘ಒಪ್ಪಂದಕ್ಕೆ ಸಿದ್ಧ, ಯುದ್ಧ ಮುಂದುವರಿಸುವ ಆಸಕ್ತಿ ಇಲ್ಲ. ಆದರೆ ಈಗ ಅತಿಕ್ರಮಿಸಿಕೊಂಡಿರುವ ಪ್ರದೇಶ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ’ ಎಂದು ಪುಟಿನ್ ಹೇಳಿದ್ದಾರೆ. ವಿಚಿತ್ರ ಎಂದರೆ ಈ ಯುದ್ಧ ಕೊನೆಗಾಣಿಸುವ ಬಗ್ಗೆ ಯಾವುದೇ ದೇಶ ಆಸಕ್ತಿ ತೋರಿಸುತ್ತಿಲ್ಲದೆ ಇರುವುದು. ಈ ಮಧ್ಯೆ ಸೇನೆಗೆ
ಹೊಸದಾಗಿ ಯುವಕರನ್ನು ಸೇರಿಸಿಕೊಳ್ಳುವ ದಿಕ್ಕಿನಲ್ಲಿ ಎರಡೂ ದೇಶಗಳು ಪ್ರಯತ್ನ ಆರಂಭಿಸಿವೆ. ರಷ್ಯಾ ಸುಮಾರು ಆರು ಲಕ್ಷ, ಉಕ್ರೇನ್ ಸುಮಾರು ಐದು ಲಕ್ಷ ಯುವಕರನ್ನು ಸೇನೆಗೆ ಸೇರಿಸಿಕೊಳ್ಳಲು ಪ್ರಯತ್ನ ಆರಂಭಿಸಿವೆ. ಈ ಬೆಳವಣಿಗೆಗಳನ್ನು ನೋಡಿದರೆ ಯುದ್ಧ ಮುಂದುವರಿಯಬಹುದು ಎನ್ನಿಸದಿರದು. ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧವನ್ನು ಫೆ.22ರಂದು ಆರಂಭಿಸಿದಂದಿನಿಂದ ಇದುವರೆವಿಗೆ ರಷ್ಯಾದ ಮೂರೂವರೆ ಲಕ್ಷ ಯೋಧರು, ಉಕ್ರೇನ್ ಕಡೆ ಎರಡೂವರೆ ಲಕ್ಷ ಯೋಧರು ಸತ್ತಿದ್ದಾರೆ ಎಂದು ಗೊತ್ತಾಗಿದೆ. ಇದಲ್ಲದೆ ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ಸಾಮಾನ್ಯ ನಾಗರಿಕರು ಸತ್ತಿದ್ದಾರೆ. ಸುಮಾರು ಅರುವತ್ತು ಲಕ್ಷ ಉಕ್ರೇನ್ ಜನರು ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ.

ಈ ಯುದ್ಧದಲ್ಲಿ ರಷ್ಯಾ ಗೆದ್ದರೆ ಅದನ್ನು ಅಲ್ಲಿಂದ ಮುಂದೆ ಹಿಡಿಯುವವರು ಯಾರೂ ಇರುವುದಿಲ್ಲ. ಮಾಲ್ಗೊವಾ ಮತ್ತು ಜಾರ್ಜಿಯಾ ಮೇಲೂ ಅತಿಕ್ರಮಣ ಆಗುತ್ತದೆ. ಅಷ್ಟೇ ಏಕೆ ಇಡೀ ಉಕ್ರೇನ್ ದೇಶವನ್ನು ರಷ್ಯಾ ಅತಿಕ್ರಮಿಸಿಕೊಳ್ಳಬಹುದು. ಇದರಿಂದ ವಿಶ್ವದ ಮೇಲೆ ಆಗಬಹುದಾದ ಕೆಟ್ಟ ಪರಿಣಾಮಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಪ್ರಜಾತಂತ್ರ ಅಪಾಯಕ್ಕೆ ಈಡಾಗುತ್ತದೆ ಎನ್ನುವುದು ಪ್ರಜಾತಂತ್ರವಾದಿಗಳ ವಾದ. ಅಂದರೆ ಯುದ್ಧ ಮುಂದುವರಿಸಬೇಕು ಎಂದಾಯಿತು. ಸಮಸ್ಯೆ ಇರುವುದು ಇಲ್ಲಿಯೇ ಯುದ್ಧ ಮುಂದುವರಿಸುವುದು ಅಂದರೆ ಅಪಾರ ಪ್ರಮಾಣದಲ್ಲಿ ಹಣದ ವೆಚ್ಚ. ಯುದ್ಧದಿಂದ ಹೆಚ್ಚಿನ ಲಾಭ ಆಗುವುದು ಮಿಲಿಟರಿ ಯುದ್ಧಾಸ್ತ್ರ ತಯಾರಿಕಾ ಕಂಪೆನಿಗಳಿಗೆ ವೆಚ್ಚ ಅಂದರೆ ಅದು ಮಿಲಿಟರಿ ಸಲಕರಣೆಗಳಿಗಿರಬಹುದು ಅಥವಾ ಜನರಿಗೆ ಕೊಡಬಹುದಾದ ಆಹಾರ, ವಸತಿ, ಮತ್ತಿತರೆ ವಸ್ತುಗಳಿಗೆ ಇರಬಹುದು. ವಾಸ್ತವವಾಗಿ ಉದಾರವಾಗಿ ಮಿಲಿಟರಿಗೆ ವೆಚ್ಚ ಮಾಡುವ ಸ್ಥಿತಿಯಲ್ಲಿ ಅಮೆರಿಕವೂ ಇಲ್ಲ, ಯೂರೋಪ್ ಕೂಡ ಇಲ್ಲ. ಹಾಗೆ ನೋಡಿದರೆ ಈ ಯುದ್ಧದಿಂದಾಗಿ ಇಡೀ ಯೂರೋಪ್ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ರಷ್ಯಾ ತೈಲ ಪೂರೈಕೆ ನಿಲ್ಲಿಸಿದ್ದರಿಂದ ಜರ್ಮನಿಯಂಥ ದೇಶವೇ ಪರದಾಡಿತು. ಹೇಗೋ ಪರ್ಯಾಯ ದಾರಿ ಹುಡುಕಿಕೊಂಡ ಯೂರೋಪ್‌ನ ಪರಿಸ್ಥಿತಿ ಈಗ ಸುಧಾರಿಸಿದೆ. ಹಾಗೆಂದು ಉಕ್ರೇನ್‌ಗೆ ಭಾರಿ ಪ್ರಮಾಣದಲ್ಲಿ ಮಿಲಿಟರಿ ನೆರವು ನೀಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿಯೇ ಉಕ್ರೇನ್‌ಗೆ ನೆರವು ನೀಡಲು ವಿರೋಧ ಕಂಡುಬಂದಿದೆ. ಉಕ್ರೇನ್ ಯುದ್ಧ ಯಾವಾಗ ನಿಲ್ಲುತ್ತದೋ ಎಂದು ಯೂರೋಪ್ ಕಾಯುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಯುದ್ಧ ಮುಂದುವರಿಸುವ ದಿಕ್ಕಿನಲ್ಲಿ ಉಕ್ರೇನ್ ಹೊರಟಿರುವುದು ಯಾರಿಗೂ ಸಮಾಧಾನ ತಂದಿಲ್ಲ. ರಾಜಿ ಅಥವಾ ಶಾಂತಿ ಪ್ರಯತ್ನಗಳು ನಡೆಯದೇ ಇರುವುದು ಒಂದು ಸಮಸ್ಯೆಯಾಗಿದೆ.

ಉಕ್ರೇನ್ ಭಾಗವಾಗಿದ್ದ ದ್ವೀಪಕಲ್ಪ ಕೈಮಿಯಾವನ್ನು 2014ರಲ್ಲಿ ರಷ್ಯಾ ವಶಪಡಿಸಿಕೊಂಡ ನಂತರ ಯುದ್ಧ ಸಿಡಿದಿದೆ. ಆ ನಂತರ ತನ್ನ ಜನರೇ ಹೆಚ್ಚು ಇದ್ದಾರೆ ಎಂದು ಹೇಳುತ್ತ ಡೋನ್‌ಕ್, ಬೆರ್ಸನ್, ಲುಹನಾಸ್ಕ ಜಪೋರಿಜಿಯಾ ಪ್ರದೇಶಗಳನ್ನು ರಷ್ಯಾ ಸೇನೆ ಅತಿಕ್ರಮಿಸಿಕೊಂಡಿದೆ. ಉಕ್ರೇನ್ ಸೇನೆ ಪ್ರತಿರೋಧದಿಂದಾಗಿ ಖೆರ್ಸನ್ ಮತ್ತು ಲುಹನಸ್ಟ್‌ನ ಕೆಲವು ಹಳ್ಳಿಗಳು ಉಕ್ರೇನ್ ವಶದಲ್ಲಿವೆ. ಆದರೆ ಅದೇನೂ ಶಾಶ್ವತ ಅಲ್ಲ. ಯುದ್ಧಾಸ್ತ್ರಗಳ ಅಭಾವ ದಿಂದಾಗಿ ಆ ಪ್ರದೇಶಗಳನ್ನೂ ಕ್ರಮೇಣ ಉಕ್ರೇನ್ ಕಳೆದುಕೊಳ್ಳಬಹುದು.

ಯುದ್ಧದ ಮೊದಮೊದಲು ರಷ್ಯಾ ಏಕಾಂಗಿ ಅನ್ನಿಸುತ್ತಿತ್ತು. ಆದರೆ ಕ್ರಮೇಣ ಅಮೆರಿಕ ವಿರೋಧಿ ದೇಶಗಳು ಒಂದೊಂದಾಗಿ ರಷ್ಯಾದ ನೆರವಿಗೆ ಬಂದಿವೆ ಎಂದು ಹೇಳಲಾಗಿದೆ. ರಷ್ಯಾದ ಬೆಂಬಲಕ್ಕೆ ಚೀನಾದಂಥ ಪ್ರಬಲ ದೇಶ ನಿಂತುಕೊಂಡಿತು. ವಿಶ್ವ ಬಾಂಧವ್ಯದಿಂದ ದೂರವಿದ್ದ ಉತ್ತರ ಕೊರಿಯಾ ರಹಸ್ಯವಾಗಿ ಮಿಲಿಟರಿ ಶಸ್ತ್ರಾಸ್ತ್ರ ಪೂರೈಸಿತು. ಅದೇ ರೀತಿ ಇರಾನ್ ಕೂಡ ರಷ್ಯಾ ಜೊತೆ ಮಿಲಿಟರಿ ಸಂಬಂಧ ಪಡೆದಿದೆ ಎನ್ನಲಾಗಿದೆ. ಉಕ್ರೇನ್ ಅತಿಕ್ರಮಣದ ಮೊದಲಲ್ಲೇ ಅಮೆರಿಕ ತೀವ್ರ ರೀತಿಯ ಆರ್ಥಿಕ ನಿರ್ಬಂಧಗಳನ್ನು ಹೇರಿತು. ನಂತರ ಯೂರೋಪ್ ಒಕ್ಕೂಟ ಕೂಡ ನಿರ್ಬಂಧಗಳನ್ನು ಹೇರಿತು. ಈ ನಿರ್ಬಂಧಗಳಿಂದ ಮೊದಮೊದಲು ರಷ್ಯಾದ ಬಲ ಕುಂದಿತಾದರೂ ಕ್ರಮೇಣ ಪರಿಣಾಮಗಳು ತೀವ್ರತೆ ಕಳೆದುಕೊಂಡವು. ರಷ್ಯಾದ ಅಭಿವೃದ್ಧಿ ದರ ಹಿಂದಿನ ಸ್ಥಿತಿಗೆ ಬಂದಿದ್ದು ಆತಂಕದ ದಿನ ದೂರವಾಗಿವೆ ಎಂದು ಪುಟನ್ ಇದೀಗ ಪ್ರಕಟಿಸಿದ್ದಾರೆ. ಜನಾಭಿಪ್ರಾಯವೂ ಅವರ ಪರವಾಗಿದ್ದು ಮತ್ತೊಮ್ಮೆ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ಮುಂದೇನು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಬಲಿಷ್ಠ ದೇಶಗಳು ಹೇಗೆ ಸಣ್ಣ ದೇಶಗಳನ್ನು ಬಲಿಪಡೆಯುತ್ತವೆ ಎನ್ನುವುದಕ್ಕೆ ಉಕ್ರೇನ್ ಮತ್ತು ಗಾಜಾ ಯುದ್ಧ ದೊಡ್ಡ ಉದಾಹರಣೆ. ಯುದ್ಧಾಸ್ತ್ರಗಳ ಪ್ರಾಬಲ್ಯವೇ ದೇಶಗಳ ಭವಿಷ್ಯವನ್ನು ನಿರ್ಧರಿಸುವಂತಾದರೆ ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ.

andolanait

Recent Posts

ಕಳಪೆ ಪ್ರಗತಿ ಸಾಧಿಸಿದ 5 ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ ಸಿಇಒ ನಂದಿನಿ

ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…

7 hours ago

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…

7 hours ago

ಡೆವಿಲ್‌ ಅಬ್ಬರ | ಮೊದಲ ದಿನದ ಗಳಿಗೆ ಎಷ್ಟು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…

7 hours ago

ಮಳವಳ್ಳಿ | ವಿದ್ಯುತ್‌ ಸ್ಪರ್ಶ ; ಕಾರ್ಮಿಕ ಸಾವು

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…

7 hours ago

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

8 hours ago

ಇಂಡಿಗೋ ಬಿಕ್ಕಟ್ಟು | ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳ ಅಮಾನತ್ತು

ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…

8 hours ago