ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್
‘ತಾಯಿಯೇ ಮೊದಲ ಶಿಕ್ಷಕಿ; ಮನೆಯೇ ಮೊದಲ ಪಾಠ ಶಾಲೆ‘ ಎನ್ನುವ ಗಾದೆ ಮಾತನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ದಲಿತರಲ್ಲದ ಬಲಿಷ್ಠ ಜಾತಿಗಳ ಅಷ್ಟೇ ಏಕೆ ಹಿಂದುಳಿದ ಹಲವು ಜಾತಿಗಳ ಅನೇಕ ತಾಯಂದಿರು ಸಹ ದಲಿತರ ಮಕ್ಕಳು ಇರುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವಾಗ ‘ಅವನ/ಅವಳ (ದಲಿತ ಮಕ್ಕಳ) ಜೊತೆ ಸೇರಬೇಡ; ಅವನು/ ಅವಳು ಕೊಟ್ಟದ್ದನ್ನು ತಿನ್ನಬೇಡ; ಇನ್ನೂ ಮಡಿವಂತಿಕೆಯವರಾಗಿದ್ದರೆ ಅವನನ್ನು/ಅವಳನ್ನು ಮುಟ್ಟಿಸಿಕೊಳ್ಳಬೇಡ, ಜೊತೆ ಸೇರಬೇಡ. ಅವನ/ಅವಳ ಜೊತೆ ಆಟ ಆಡಬೇಡ’ ಎಂದು ‘ಬುದ್ಧಿವಾದ’ ಹೇಳಿ ಕಳುಹಿಸುವ ಕಟು ವಾಸ್ತವ ಸ್ಥಿತಿ ನಮ್ಮ ಹಳ್ಳಿಗಳು ಮತ್ತು ಪಟ್ಟಣ ಪ್ರದೇಶಗಳಲ್ಲಿ ಚಾಲ್ತಿಯಲ್ಲಿದೆ.
ಇದಿಷ್ಟೇ ಅಲ್ಲದೆ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಮಹಿಳೆ ದಲಿತ ವರ್ಗದವಳಾಗಿದ್ದರೆ ಶಾಲೆಯಲ್ಲಿ ಊಟ ಮಾಡಬೇಡ ಎಂದು ಮತ್ತೆ ಇಡೀ ಊರಿನ ಜನರೇ ತಮ್ಮ ಮಕ್ಕಳನ್ನು ಶಾಲೆಯಲ್ಲಿ ಊಟ ಮಾಡದಂತೆ ಮತ್ತು ಅಡುಗೆ ಮಾಡುವ ಆ ದಲಿತ ವರ್ಗದ ಮಹಿಳೆಯನ್ನೇ ವರ್ಗ ಮಾಡಿಸುವ ಸುದ್ದಿಯನ್ನು ಆಗಾಗ್ಗೆ ಕೇಳುತ್ತಿರುತ್ತೇವೆ.
ಮತ್ತೆ ಶಾಲೆಗಳ ಶಿಕ್ಷಕರು ದಲಿತ ವರ್ಗದ ಮಕ್ಕಳಿಗೆ ಇನ್ನೂ ಹತ್ತಾರು ಶಿಕ್ಷೆ ನೀಡುತ್ತಾರೆ. ಶಾಲೆಗಳ ಕಸಗೂಡಿಸುವುದು, ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ಶೌಚಾಲಯಗಳ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸುವ ಘಟನೆಗಳು ಪದೇ ಪದೇ ವರದಿ ಆಗುತ್ತಿರುತ್ತವೆ.
ಮೂರು ನಾಲ್ಕು ದಶಕಗಳ ಹಿಂದೆ ಹಳ್ಳಿಗಳಲ್ಲಿ ದಲಿತ ವರ್ಗದ ಮಹಿಳೆಯರೇ ತಮ್ಮ ಮಕ್ಕಳನ್ನು ಹೊಡೆದು, ‘ನಿಮ್ಮಪ್ಪನ ತರ ಆಗಬೇಡ ನಾಲ್ಕು ಅಕ್ಷರ ಕಲ್ತು ಉದ್ಧಾರ ಆಗು’ ಎಂದು ಶಾಲೆಗೆ ಎಳೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದರು. ಹಲವು ಕಡೆ ಶಾಲೆಗಳ ಶಿಕ್ಷಕರೇ ಮನೆ ಮನೆಗೆ ಬಂದು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಮಕ್ಕಳೇ ಶಾಲೆಗಳಿಗೆ ಸ್ವಯಂ ಆಸಕ್ತಿಯಿಂದ ಹೋಗುವಷ್ಟು ಬದಲಾವಣೆ ಆಗಿದೆ.
ಇಷ್ಟಾದರೂ ಪ್ರಾಥಮಿಕ ಹಂತದಲ್ಲಿಯೇ ಅರ್ಧಕ್ಕೆ ಶಾಲೆಗಳನ್ನು ಬಿಡುವ ದಲಿತ ವರ್ಗದ ಮಕ್ಕಳು ಶೇಕಡಾವಾರು ೬೦ರಷ್ಟಿರುವುದಾಗಿ ಹೇಳಲಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಶಾಲೆಗಳನ್ನು ಅರ್ಧಕ್ಕೆ ಬಿಡುವ ಮಕ್ಕಳ ಸಂಖ್ಯೆ ಸರಾಸರಿ ಶೇ.೩೭ ಇದ್ದರೆ ದಲಿತ ವರ್ಗದ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇರುವುದಾಗಿ ಹಲವು ಸಮೀಕ್ಷೆಗಳು ಹೇಳುತ್ತಿವೆ. ಶಾಲೆಗಳನ್ನು ಅರ್ಧಕ್ಕೆ ಬಿಡುವವರಲ್ಲಿ ಶೇ.೬೮.೨ ಪರಿಶಿಷ್ಟ ಪಂಗಡದ ಮಕ್ಕಳಾದರೆ, ಶೇ.೬೪.೬ ಪರಿಶಿಷ್ಟ ಜಾತಿಯ ಮಕ್ಕಳು. ಸೆಕೆಂಡರಿ ಶಾಲಾ ಮಟ್ಟದಲ್ಲಿ ಅರ್ಧಕ್ಕೆ ಶಾಲೆಗಳನ್ನು ಬಿಡುವವರಲ್ಲಿ ಶೇ. ೮೮.೧೭ ಪರಿಶಿಷ್ಟ ಪಂಗಡದವರಾದರೆ, ಶೇ.೮೩.೬ ಪರಿಶಿಷ್ಟ ಜಾತಿಯ ಮಕ್ಕಳು ಎಂದು ಹಲವು ಸಮೀಕ್ಷೆಗಳ ವರದಿ ತಿಳಿಸುತ್ತವೆ.
ದಲಿತ ವರ್ಗದ ಮಕ್ಕಳು ಹಲವು ವರ್ಷಗಳಿಂದ ಇಂತಹ ಅವಮಾನಗಳನ್ನು ಅನುಭವಿಸುತ್ತಲೇ ಬರುತ್ತಿದ್ದಾರೆ. ಹಸಿವು, ಅಸ್ಪೃಶ್ಯತೆಯ ಸಂಕಟದ ಜೊತೆಗೆ ಶಾಲೆಗಳಲ್ಲಾಗುವ ಅವಮಾನಗಳನ್ನು ಅನುಭವಿಸಿ, ಜಾತಿ ಹೆಸರಿಡಿದು ಬೈಯುವ ಸಹಪಾಠಿಗಳು ಮತ್ತು ಶಾಲೆಗಳ ಸಿಬ್ಬಂದಿಯಿಂದಾಗುವ ನೋವುಗಳನ್ನು ನುಂಗಿ ಕಾಲೇಜು ಶಿಕ್ಷಣದ ನಂತರ ಸರ್ಕಾರಿ ಉದ್ಯೋಗಗಳನ್ನು ಪಡೆದು ನೆಲೆಗೊಳ್ಳುತ್ತಿದ್ದಾರೆಂದರೆ ಅದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಶಿಕ್ಷಣದ ಹಕ್ಕು ಮತ್ತು ಮೀಸಲಾತಿಯ ಸೌಲಭ್ಯದಿಂದ. ಶಿಕ್ಷಣ ಎಂಬ ಅಸ್ತ್ರದಿಂದ ದಲಿತರ ವಿಮೋಚನೆಯ ಕನಸು ಡಾ.ಅಂಬೇಡ್ಕರ್ ಅವರದಾಗಿತ್ತು. ಅವರ ಆ ಆಶಯ ಸ್ವಲ್ಪಮಟ್ಟಿಗಾದರೂ ನೆರವೇರಿರುವ ಸತ್ಯವನ್ನು ಮರೆಮಾಚಲಾಗದು.
ಇಂತಹ ಅವಮಾನದ ಎಲ್ಲ ಹಂತಗಳನ್ನೂ ದಾಟಿ ಬಂದ ಹಲವು ಪ್ರತಿಭಾವಂತ ದಲಿತ ವಿದ್ಯಾರ್ಥಿಗಳು ಐಐಟಿ, ಐಐಎಂ, ಏಮ್ಸ್ ಮುಂತಾದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಪ್ರತಿಭೆ’ಯ ಆಧಾರದ ಮೇಲೆಯೇ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದರೂ ಪ್ರತಿ ವರ್ಷವೂ ಅರ್ಧಕ್ಕೆ ಕಾಲೇಜುಗಳನ್ನು ಬಿಡುವ ಮತ್ತು ಆತ್ಮಹತ್ಯೆಗೆ ಶರಣಾಗುತ್ತಿರುವ ಅಮಾನವೀಯ ದಾರುಣ ಪರಿಸ್ಥಿತಿ ಇಂದು ಈ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಅಸ್ಪ ಶ್ಯತೆ ಆಚರಣೆಗೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು.
ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವಾಲಯದ ಮಾಹಿತಿಯಂತೆಯೇ ೨೦೧೭ರಿಂದ ೨೦೧೯ರ ಅವಧಿಯಲ್ಲಿ ದೇಶದ ಎಲ್ಲ ಐಐಟಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ೨೪೬೧ ವಿದ್ಯಾರ್ಥಿಗಳ ಪೈಕಿ ೧,೧೭೧ ವಿದ್ಯಾರ್ಥಿಗಳು ಆ ಶಿಕ್ಷಣ ಸಂಸ್ಥೆಗಳನ್ನು ಅರ್ಧಕ್ಕೇ ತೊರೆದಿದ್ದಾರೆ. ಅಂದರೆ ಶೇ.೪೭.೫ರಷ್ಟು ವಿದ್ಯಾರ್ಥಿಗಳು ಜಾತಿ ತಾರತಮ್ಯದ ಕಾರಣಕ್ಕೆ ತಮ್ಮ ಉನ್ನತ ಶಿಕ್ಷಣದ ಕನಸಿನಿಂದ ದೂರವಾಗಿದ್ದಾರೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ತಾರತಮ್ಯದಿಂದ ಬೇಸತ್ತು ೨೦೧೬ರ ಜನವರಿ ೧೭ರಂದು ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿನ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡ. ನನ್ನ ಹುಟ್ಟೇ ನನಗೆ ಶಾಪವಾಗಿ ನಿತ್ಯವೂ ಅನುಭವಿಸುತ್ತಿರುವ ಅವಮಾನದಿಂದ ಜೀವನದಲ್ಲಿ ಜುಗುಪ್ಸೆಗೊಂಡು ಸಾವಿಗೆ ಶರಣಾಗುತ್ತಿದ್ದೇನೆ ಎಂದು ರೋಹಿತ್ ತನ್ನ ಆತ್ಮಹತ್ಯೆಯ ಕಾರಣವನ್ನು ಬರೆದಿಟ್ಟು ಹೋಗಿದ್ದ. ಇದೇ ವಿಶ್ವವಿದ್ಯಾನಿಲಯದಲ್ಲಿ ೨೦೦೮ರಲ್ಲಿ ಸೆಂಥಿಲ್ ಕುಮಾರ್, ೨೦೧೩ರಲ್ಲಿ ಮದರಿ ವೆಂಕಟೇಶ್, ಐಐಟಿ ಮುಂಬೈಯಲ್ಲಿ ೨೦೦೭ರಲ್ಲಿ ಎಂ.ಶ್ರೀಕಾಂತ್ ಮತ್ತು ಬೆಂಗಳೂರಿನ ಐಐಎಸ್‌ಸಿಯಲ್ಲಿ ಅಜಯ್ ಎಸ್.ಚಂದ್ರ ಆತ್ಮಹತ್ಯೆಗೆ ಬಲಿಯಾದವರು. ಹಾಗೆಯೇ ೨೦೧೦ರಲ್ಲಿ ಕಾನ್ಪುರ ಐಐಟಿಯಲ್ಲಿ ಮಾಧುರಿ ಸಾಲೆ, ನವದೆಹಲಿಯ ಏಮ್ಸ್‌ನಲ್ಲಿ ೨೦೧೦ರಲ್ಲಿ ಬಾಲಮುಕುಂದ ಭಾರ್ತಿ ಜಾತಿ ಕಿರುಕುಳದಿಂದ ನೊಂದು ಆತ್ಮಹತ್ಯೆಗೆ ಶರಣಾದ ದುರದೃಷ್ಟಕರ ವಿದ್ಯಾರ್ಥಿಗಳು.
ಮುಂಬೈನ ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾ ಬಿವೈಎಲ್ ನಾಯರ್ ಚಾರಿಟಬಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ೨೧ ವರ್ಷದ ಪಾಯಲ್ ತಡ್ವಿ ಅಲ್ಲಿನ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಯ ಕಿರುಕುಳ ಮತ್ತು ಜಾತಿ ತಾರತಮ್ಯಕ್ಕೆ ನೊಂದು ೨೦೧೯ರ ಮೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆ.
ಒಂದು ಮಾಹಿತಿಯ ಪ್ರಕಾರ ೨೦೧೪ರಿಂದ ೨೦೨೧ರ ಅವಧಿಯಲ್ಲಿ ಐಐಟಿ, ಐಐಎಂ ಸೇರಿದಂತೆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಕಿರುಕುಳದಿಂದ ೧೨೨ ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ೬೮ ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ.
ಬಲಿಷ್ಠ ಜಾತಿಗಳ ವಿದ್ಯಾರ್ಥಿಗಳಲ್ಲದೆ ಪ್ರಾಧ್ಯಾಪಕರು, ಸಂಶೋಧನಾ ಮಾರ್ಗದರ್ಶಿಗಳು ಮತ್ತು ಕಾಲೇಜು ಸಿಬ್ಬಂದಿಗಳು ದಲಿತ ವಿದ್ಯಾರ್ಥಿಗಳನ್ನು ಅವರ ಹೆಸರುಗಳು ಹಾಗೂ ಅವರ ಆರ್ಥಿಕ ಪರಿಸ್ಥಿತಿಯ ಹೀಯಾಳಿಸುವುದು, ಅವಮಾನಿಸುವುದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರವಾಗಿ ನಡೆದು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರೊ.ಎಸ್.ಕೆ.ತೋರಟ್ (೨೦೦೭) ಮತ್ತು ಮುಂಗೇಕರ್ ಸಮಿತಿ (೨೦೧೨) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯ ಕುರಿತು ವರದಿ ನೀಡಿದ್ದರೂ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ಯಾವುದೇ ಕ್ರಮಕೈಗೊಳ್ಳದ ಕಾರಣ ದಲಿತ ವಿದ್ಯಾರ್ಥಿಗಳನ್ನು ಅವಮಾನಿಸುವುದು ಮತ್ತು ಕಿರುಕುಳ ನೀಡುವುದು ಮುಂದುವರಿದೇ ಇದೆ.
ಜಾತಿ ತಾರತಮ್ಯಕ್ಕೆ ಹತ್ತಾರು ಕಾರಣಗಳಿದ್ದರೂ ದಲಿತ ವಿದ್ಯಾರ್ಥಿಗಳನ್ನು ಗೌರವದಿಂದ, ಅವರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವ ಮತ್ತು ಅವರನ್ನು ಉತ್ತೇಜಿಸುವ ಶಿಕ್ಷಕರು ಹಾಗೂ ಸಿಬ್ಬಂದಿಯ ಕೊರತೆ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿದೆ. ಹೀಗಾಗಿ ಈ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ವಾತಾವರಣ ದಲಿತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿಲ್ಲ ಎಂದು ಪ್ರೊ. ತೋರಟ್ ಸಮಿತಿ ಅಭಿಪ್ರಾಯಪಟ್ಟಿದೆ.
೨೦೧೯ರಲ್ಲಿ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ನೀಡಿರುವ ಮಾಹಿತಿಯಂತೆ ದೇಶದ ಒಟ್ಟು ೨೩ ಐಐಟಿಗಳಲ್ಲಿ ೬೦೪೩ ಬೋಧನಾ ಸಿಬ್ಬಂದಿ ಇದ್ದು ಇದರಲ್ಲಿ ಕೇವಲ ೧೪೯ ಮಂದಿ ಪರಿಶಿಷ್ಟ ಜಾತಿ ಮತ್ತು ೨೧ ಮಂದಿ ಪರಿಶಿಷ್ಟ ಪಂಗಡದ ಶೈಕ್ಷಣಿಕ ಸಿಬ್ಬಂದಿ ಮಾತ್ರ ಇದ್ದಾರೆ. ಅಂದರೆ ಒಟ್ಟಾರೆ ಸಿಬ್ಬಂದಿಯಲ್ಲಿ ಶೇ.೩ರಷ್ಟು ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಿಬ್ಬಂದಿ ಇದ್ದಾರೆ. ಹದಿನೈದು ಐಐಟಿಗಳಲ್ಲಿ ಪರಿಶಿಷ್ಟ ಪಂಗಡ ಶೈಕ್ಷಣಿಕ ಸಿಬ್ಬಂದಿಯೇ ಇಲ್ಲ. ಅದೇ ರೀತಿ ಹದಿಮೂರು ಐಐಎಂ ಸಂಸ್ಥೆಗಳಲ್ಲಿ ೬೪೨ ಮಂದಿ ಬೋಧಕ ಸಿಬ್ಬಂದಿ ಇದ್ದು ಪರಿಶಿಷ್ಟ ಜಾತಿಯ ಕೇವಲ ನಾಲ್ಕು ಮಂದಿ ಮತ್ತು ಒಬ್ಬರು ಮಾತ್ರ ಪರಿಶಿಷ್ಟ ಪಂಗಡದವರಿದ್ದಾರೆ. ವಾಸ್ತವ ಪರಿಸ್ಥಿತಿ ಹೀಗಿರುವಾಗ ದಲಿತ ವಿದ್ಯಾರ್ಥಿಗಳಿಗೆ ನೈತಿಕ ಸ್ಥೆ ರ್ಯ ತುಂಬುವವರಾರು ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.
ಜಾತಿ ತಾರತಮ್ಯದಿಂದ ನನ್ನ ಮಗ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡ ಎಂದು ವೇಮುಲಾ ತಾಯಿ ಮತ್ತು ಪಾಯಲ್ ತಡ್ವಿ ಅವರ ತಾಯಂದಿರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಇಂತಹ ಅಮಾನುಷ ಅನ್ಯಾಯವನ್ನು ತಡೆಯಲು ನ್ಯಾಯಾಲಯ ಮಧ್ಯೆ ಪ್ರವೇಶಿಸಬೇಕೆಂದು ಹಾಕಿರುವ ಅರ್ಜಿ ವಿಚಾರಣೆ ಈಗ ಸ್ವಲ್ಪಮಟ್ಟಿಗೆ ವೇಗ ಪಡೆದುಕೊಂಡಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಆಡಳಿತದ ಮೇಲೆ ನಿಯಂತ್ರಣ ಹೊಂದಿರುವ ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗಕ್ಕೆ ನ್ಯಾಯಾಲಯ ನೀಡಿದ್ದ ನೋಟೀಸಿನ ಹಿನ್ನೆಲೆಯಲ್ಲಿ ಯುಜಿಸಿ ಈಗ ಹೊಸ ಕಾಯ್ದೆ ಮತ್ತು ನಿಯಮಗಳ ಕರಡನ್ನು ತಯಾರಿಸಿ ಕಳೆದ ಗುರುವಾರವಷ್ಟೇ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಕರಡು ಪ್ರತಿಯನ್ನು ಸಾರ್ವಜನಿಕ ಅವಗಾಹನೆಗೆ ತಂದು ಉತ್ತಮ ಸಲಹೆಗಳನ್ನು ಸ್ವೀಕರಿಸಿ ತಿದ್ದುಪಡಿಗಳನ್ನು ಮಾಡುವುದಾಗಿ ನ್ಯಾಯಾಲಯದ ಮುಂದೆ ಭರವಸೆ ನೀಡಿದೆ.
ಯುಜಿಸಿಯು ತನ್ನ ನೂತನ ಕರಡು ನೀತಿಯಲ್ಲಿ ಸಮಾನ ಸಮಿತಿಯನ್ನು ರಚಿಸುವ ಶಿಫಾರಸು ಮಾಡಿದೆ. ಈ ಸಮಿತಿಗೆ ಆ ಉನ್ನತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಅಧ್ಯಕ್ಷರಾಗಿರಬೇಕು. ಜೊತೆಗೆ ನಾಲ್ವರು ಪ್ರಾಧ್ಯಾಪಕರು, ಇಬ್ಬರು ನಾಗರಿಕ ಸಮಿತಿ ಸದಸ್ಯರು, ಇಬ್ಬರು ವಿವಿಧ ಕ್ಷೇತ್ರಗಳ ಪ್ರತಿಭಾವಂತ ವಿದ್ಯಾರ್ಥಿಗಳು, ಒಬ್ಬರು ಪರಿಶಿಷ್ಟ ಜಾತಿ ಮತ್ತೊಬ್ಬರು ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಹಾಗೂ ಒಬ್ಬ ಮಹಿಳೆಯನ್ನು ಒಳಗೊಂಡಿರುತ್ತದೆ. ಈ ಸಮಿತಿಯು ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತು ತರಗತಿಗಳಲ್ಲಿ ನಡೆಯಬಹುದಾದ ಜಾತಿ ತಾರತಮ್ಯ ಮತ್ತು ನೊಂದ ವಿದ್ಯಾರ್ಥಿಗಳಿಂದ ಬರುವ ದೂರುಗಳನ್ನು ಪರಿಶೀಲಿಸಿ ಕಾನೂನು ಪ್ರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಯುಜಿಸಿ ತನ್ನ ಅರ್ಜಿಯಲ್ಲಿ ತಿಳಿಸಿದೆ.
ಯುಜಿಸಿ ವ್ಯಾಪ್ತಿಗೆ ಬರುವ ಖಾಸಗಿ ವಿವಿಗಳು ಕೂಡ ಈ ಷರತ್ತು ಮತ್ತು ಕಾನೂನು ವ್ಯಾಪ್ತಿಗೆ ಬರಲಿವೆ. ಹೀಗೆ ಹಲವು ಸಲಹೆಗಳನ್ನು ಜಾರಿಗೆ ತರುವ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ಹೋಗಲಾಡಿಸುವುದಾಗಿ ಯುಜಿಸಿ ಉನ್ನತ ನ್ಯಾಯಾಲಯಕ್ಕೆ ಭರವಸೆ ನೀಡಿದೆ. ಈ ಎಲ್ಲ ಕ್ರಮಗಳನ್ನೂ ಕೈಗೊಳ್ಳಲು ನ್ಯಾಯಾಲಯವು ಯುಜಿಸಿಗೆ ಆರು ತಿಂಗಳ ಕಾಲಾವಕಾಶ ನೀಡಿದೆ.
ಬೆಂಗಳೂರು: ರಾಜ್ಯ ಸರ್ಕಾರವು 2000 ಗೃಹಲಕ್ಷ್ಮೀ ಹಣ ಪಡೆಯುತ್ತಿರುವ ಫಲಾನುಭವಿಗಳಿಗಾಗಿ ಗೃಹಲಕ್ಷ್ಮೀ ಸಹಕಾರ ಸಂಘಗಳನ್ನು ಅಸ್ತಿತ್ವಕ್ಕೆ ತರಲು ಮುಂದಾಗಿದೆ. ಈ…
ಮಹಾದೇಶ್ ಎಂ ಗೌಡ ಹನೂರು: ಲೊಕ್ಕನಹಳ್ಳಿ ಗ್ರಾಮದ ತಮಿಳ್ ಸೆಲ್ವ ಎಂಬುವವರ ಜಮೀನಿನಲ್ಲಿ ಬೆಳೆದಿರುವ ಬಾಳೆ, ಬೆಳ್ಳುಳ್ಳಿ, ಕೃಷಿ ಪರಿಕರಗಳನ್ನು…
ಬೆಂಗಳೂರು: ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ರಾಜಶೇಖರ್ ಸಾವಿಗೆ ಕಾರಣವಾದ ಬಳ್ಳಾರಿ ಹಿಂಸಾಚಾರಕ್ಕೆ ರಾಜಕೀಯ ಅಸೂಯೆ ಕಾರಣ ಎಂದು ಕಾಂಗ್ರೆಸ್‍ನ ಸತ್ಯಶೋಧನಾ…
ರಾಮನಗರ: ನಾಡಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಡುಹಂದಿ ಬೇಟೆಗಾಗಿ ನಾಡಬಾಂಬ್ ಇಟ್ಟಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.…
ಬೆಂಗಳೂರು: ರಾಜ್ಯಪಾಲರು ದ್ವೇಷಭಾಷಣ ಬಿಲ್ ಸ್ವೀಕಾರವೂ ಮಾಡಿಲ್ಲ. ತಿರಸ್ಕಾರವೂ ಮಾಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು…
ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಪ್ರಕರಣದ ತನಿಖೆ ಕೊನೆಯ ಹಂತಕ್ಕೆ ಬಂದು…