ಅಂಕಣಗಳು

ಬ್ಯಾಂಕ್ ಠೇವಣಿ ವಿಮೆ ಮಿತಿ ಹೆಚ್ಚಳದ ಚಿಂತನೆ

ಪ್ರೊ.ಆರ್.ಎಂ.ಚಿಂತಾಮಣಿ

ಮುಂಬೈಯ ನ್ಯೂ ಇಂಡಿಯಾ ಸಹಕಾರಿ ಬ್ಯಾಂಕ್ ಮುಳುಗಿತು ಎಂಬ ವರದಿ ಮಾಧ್ಯಮಗಳಲ್ಲಿಹರಿದಾಡಿದ ನಂತರ ಆಸಕ್ತ ವಲಯಗಳಲ್ಲಿ ಠೇವಣಿ ವಿಮಾ ಮಿತಿ ಹೆಚ್ಚಿಸಬೇಕಾಗುವುದೆಂಬ ಚರ್ಚೆ ಆರಂಭವಾಗಿದೆ. ಉನ್ನತ ಅಧಿಕಾರ ಸ್ಥಾನಗಳಲ್ಲಿರುವ ಇಬ್ಬರು ಸಕಾರಾತ್ಮಕ ಅಭಿಪ್ರಾಯ ಪ್ರಕಟಿಸಿದ ನಂತರ  ಈಗಿರುವ  ಠೇವಣಿಗಳ ವಿಮಾ ರಕ್ಷಣೆಯ ಮಿತಿ ೫ ಲಕ್ಷ ರೂ.ಗಳಿಂದ  ೧೫ ಲಕ್ಷ ರೂ.ಗಳಿಗೆ ಹೆಚ್ಚಿಸಬೇಕೆಂಬ ಬೇಡಿಕೆಗೆ ಬಲ ಬಂದಂತಾಗಿದೆ.

ಕೇಂದ್ರ  ಸರ್ಕಾರದ ಹಣಕಾಸು ಸೇವೆಗಳ  ಇಲಾಖೆಯ ಕಾರ್ಯದರ್ಶಿ ಎಂ.ನಾಗರಾಜುರವರು ‘ಠೇವಣಿ ವಿಮಾಮಿತಿಯನ್ನು ಹೆಚ್ಚಿಸಲೇಬೇಕಾಗಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಗಳು ಹೇಳುತ್ತವೆ. ಇದಕ್ಕೆ ಪೂರಕ ಎಂಬಂತೆ ರಿಸರ್ವ್  ಬ್ಯಾಂಕಿನ ಡೆಪುಟಿ ಗವರ್ನರ್ ಎಂ.ರಾಜೇಶ್ವರ ರಾವ್‌ರವರು ಕಳೆದ ವರ್ಷ ಆಗಸ್ಟ್ ೧೯ರಂದೇ ಈ ಬಗ್ಗೆ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಿದ್ದಾರೆ.   ಬೆಳೆಯುತ್ತಿರುವ ಬ್ಯಾಂಕ್ ಠೇವಣಿಗಳು, ತೀವ್ರಗೊಳ್ಳುತ್ತಿರುವ ಆರ್ಥಿಕ ಬೆಳವಣಿಗೆಯ ಗತಿ, ಹಣದುಬ್ಬರ (ಬೆಲೆ ಏರಿಕೆ) ಮತ್ತು  ಕುಟುಂಬಗಳ  ಹೆಚ್ಚುತ್ತಿರುವ ಆದಾಯಗಳು ಮುಂತಾದ ಕಾರಣಗಳಿಂದಾಗಿ ಠೇವಣಿ      ವಿಮಾ  ಮಿತಿಯನ್ನು ಮೇಲಿಂದ  ಮೇಲೆ  ಹೆಚ್ಚಿಸುವ  ಅವಶ್ಯಕತೆ  ಇದೆ  ಎಂದು  ಅವರು  ಆಗಲೇ  ಹೇಳಿದ್ದರು.

ಭಾರತದಲ್ಲಿ ಠೇವಣಿಗಳ ಮಿಮೆ : ಸ್ವಾತಂತ್ರ್ಯ ಪೂರ್ವದಲ್ಲಿ ಎರಡನೇ ವಿಶ್ವ ಮಹಾಯುದ್ಧದ ಸಮಯದಲ್ಲಿ ಮತ್ತು ನಂತರ ನಮ್ಮ ದೇಶದಲ್ಲಿ ಹಲವು ವಾಣಿಜ್ಯ ಬ್ಯಾಂಕುಗಳು ದಿವಾಳಿಯಾಗಿ ಠೇವಣಿದಾರರು ದೊಡ್ಡ ಮೊತ್ತಗಳನ್ನು ಕಳೆದುಕೊಂಡದ್ದು ಈಗ ಇತಿಹಾಸ. ಸ್ವಾತಂತ್ರ್ಯಾನಂತರ ೧೯೪೭ರಲ್ಲಿಯೇ ಬ್ಯಾಂಕಿಂಗ್ ಕಂಪೆನಿಯ ರೆಗ್ಯುಲೇಶನ್ ಕಾಯ್ದೆಯನ್ನು ಜಾರಿಗೆ ತಂದು ಬ್ಯಾಂಕ್ ಆಡಳಿತವನ್ನು ಬಿಗಿಗೊಳಿಸಲಾಯಿತು ಮತ್ತು ರಿಸರ್ವ್ ಬ್ಯಾಂಕಿಗೆ ಹೆಚ್ಚಿನ ಅಧಿಕಾರ ಕೊಡಲಾಯಿತು. ಆದರೂ ಆಗೊಮ್ಮೆ, ಈಗೊಮ್ಮೆ ಅಲ್ಲೊಂದು ಇಲ್ಲೊಂದು ವಾಣಿಜ್ಯ ಬ್ಯಾಂಕು ಅಶಕ್ತವಾಗುತ್ತಿತ್ತು.  ರಿಸರ್ವ್ ಬ್ಯಾಂಕು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸರಿಪಡಿಸುತ್ತಿತ್ತು. ೧೯೬೦ರಲ್ಲಿ ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ ಮಾಡಿ ಇಂಥ ಬ್ಯಾಂಕುಗಳನ್ನು ಸಶಕ್ತ ಬ್ಯಾಂಕುಗಳಲ್ಲಿ ಅವುಗಳ ಅನುಮತಿ ಪಡೆದು ವಿಲೀನಗೊಳಿಸುವ ಅಧಿಕಾರವನ್ನು ರಿಸರ್ವ್ ಬ್ಯಾಂಕಿಗೆ ಕೊಡಲಾಯಿತು.  ಇತ್ತೀಚಿನ  ಗ್ಲೋಬಲ್ ಟ್ರಸ್ಟ್ ಬ್ಯಾಂಕಿನ ವಿಲೀನದವರೆಗೆ ಹಲವು  ಪ್ರಕರಣಗಳಲ್ಲಿ  ಠೇವಣಿದಾರರನ್ನು  ರಕ್ಷಿಸಲಾಗಿದೆ.

ಠೇವಣಿ ವಿಮೆ ಪರಿಕಲ್ಪನೆ ಆಗಲೇ ಬಂದಿತ್ತು. ರಿಸರ್ವ್ ಬ್ಯಾಂಕು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತಿತ್ತು. ೧೯೬೨ರಲ್ಲಿ ಡಿಪಾಜಿಟ್ ಇನ್ಶೂರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ ಆಫ್ ಇಂಡಿಯಾ ರಿಸರ್ವ್ ಬ್ಯಾಂಕಿನ ಅಂಗ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂತು. ಇದರ ವ್ಯಾಪ್ತಿಯಲ್ಲಿ ಎಲ್ಲ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳ ಎಲ್ಲ ಠೇವಣಿಗಳೂ ಬರುತ್ತವೆ. ಠೇವಣಿದಾರರು ಒಂದು ಮಟ್ಟದವರೆಗೆ ಸುರಕ್ಷಿತ. ಬ್ಯಾಂಕುಗಳಿಗೆ ಏನೇ ಆದರೂ ಈ ಕಾರ್ಪೊರೇಶನ್ (ಡಿಐಸಿಜಿಸಿಐ) ಠೇವಣಿದಾರರಿಗೆ ಅಂಗೀಕೃತ ಮೊತ್ತವನ್ನು ಕೊಡುತ್ತದೆ.

ವಿಮಾ ಸಿದ್ಧಾಂತದಂತೆ ಡಿಐಸಿಜಿಸಿಐ ರಕ್ಷಕ (Insurer), ಠೇವಣಿದಾರ ಫಲಾನುಭವಿ (ರಕ್ಷಣೆ ಪಡೆಯುವವ Insured) ಮತ್ತು ಬ್ಯಾಂಕರ ಠೇವಣಿಗಳನ್ನು ತನ್ನವೆಂಬಂತೆ ಬಳಸುವುದರಿಂದ ವಿಮಾ ರಕ್ಷಣೆಯ ವೆಚ್ಚ (ಪ್ರೀಮಿಯಂ)ಕೊಡಬೇಕಾದ ಜವಾಬ್ದಾರ ((Insurable Interest).  ಆರಂಭದಲ್ಲಿ ಬ್ಯಾಂಕು ಎಲ್ಲ ಅರ್ಹ ಠೇವಣಿ ಖಾತೆಗಳ ಮೊತ್ತದ ಮೇಲೆ ಪ್ರತಿ ೧೦೦ ರೂ.ಗಳ ಮೊತ್ತಕ್ಕೆ ಪ್ರತಿವರ್ಷ ಐದು ಪೈಸೆಗಳಂತೆ ಪ್ರೀಮಿಯಂ ಕಾರ್ಪೊರೇಶನ್ನಿಗೆ ಕಟ್ಟಬೇಕಾಗಿತ್ತು. ಪ್ರತಿಯೊಬ್ಬ ಠೇವಣಿದಾರನಿಗೂ ಅವನ ಎಲ್ಲ ಠೇವಣಿ ಖಾತೆಗಳೂ ಸೇರಿ ೧,೫೦೦ ರೂ.ಗಳನ್ನು ಬ್ಯಾಂಕು ಮುಳುಗಿದರೆ ಕೊಡುವ ಭರವಸೆ ಇತ್ತು. ಮುಂದೆ ಕಾಲ ಕಾಲಕ್ಕೆ ಹೆಚ್ಚಳಗಳಾಗಿವೆ. ಈಗ ಪ್ರತಿ ೧೦೦ ರೂ. ಅರ್ಹ ಠೇವಣಿಗಳಿಗೆ ವರ್ಷಕ್ಕೆ ೧೨ ಪೈಸೆ ಪ್ರೀಮಿಯಂ ದರ ಇದೆ.  ರಕ್ಷಣಾ ಮೊತ್ತದ ಹೆಚ್ಚಳ ವಿವರಗಳು ಇಲ್ಲಿಯ ಸಂಖ್ಯಾಪಟ್ಟಿಯಲ್ಲಿವೆ.

ವಿಮಾ ರಕ್ಷಣೆಯ ಅಂದಿನ ಮೊತ್ತಕ್ಕೂ ಇಂದಿನ ಮೊತ್ತಕ್ಕೂ ದೊಡ್ಡ ಅಂತರವಿದೆ. ಅಷ್ಟೇ ಅಲ್ಲ, ಹೆಚ್ಚಿಸುವ ಅವಶ್ಯಕತೆ ಇದೆ. ಬೆಳವಣಿಗೆಯನ್ನು ಗಮನಿಸಬೇಕು. ಒಂದು ವಿಷಯವನ್ನು ಇಲ್ಲಿ ಹೇಳಲೇಬೇಕು. ೧೯೬೯ರ ಜುಲೈ ೧೯ರಂದು ೧೪ ದೊಡ್ಡ ಅಂದರೆ ೫೦ ಕೋಟಿ ರೂ.ಗಳು ಮತ್ತು ಅದಕ್ಕಿಂತ ಹೆಚ್ಚು ಠೇವಣಿಗಳನ್ನು ಹೊಂದಿದ್ದ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಲಾಯಿತು.  ಇಂದು ಒಂದು ಸಣ್ಣ ಸಹಕಾರಿ ಸಂಘದಲ್ಲಿ ೫೦ ಕೋಟಿ ರೂ.ಗಳಿಂದ ಹೆಚ್ಚು ಠೇವಣಿಗಳಿರುತ್ತವೆ. ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರದ ಪರಿಣಾಮಗಳನ್ನು ಪರಿಗಣಿಸಬೇಕಾಗುತ್ತದೆ.

ಈಗ  ಮಿತಿಯನ್ನು  ಹೆಚ್ಚಿಸಿದರೆ ಸತತ ಮೂರು ಬಾರಿ ಸಹಕಾರಿ ಬ್ಯಾಂಕೊಂದು ಮುಳುಗುವ ಸ್ಥಿತಿಗೆ ಬಂದಾಗ ಹೆಚ್ಚಿಸದಂತಾಗುತ್ತದೆ.  ೧೯೯೨ರಲ್ಲಿ  ಷೇರು ಪೇಟೆಯಲ್ಲಿಯ ಹರ್ಷದ್ ಮೆಹತಾ  ಹಗರಣಗಳ  ನಂತರ ಬ್ಯಾಂಕ್ ಆಫ್ ಕರಾಡ್ ದಿವಾಳಿ ಹಂತಕ್ಕೆ ಬಂದಾಗ ಅದನ್ನು ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸಲಾಯಿತು ಮತ್ತು ಮರುವರ್ಷ (೧೯೯೩ರಲ್ಲಿ) ಮಿಮಾ ಮಿತಿಯನ್ನು ರೂ.೧,೦೦,೦೦೦ ರೂ.ಗಳಿಗೆ ಏರಿಸಲಾಯಿತು. ಅದೇ ರೀತಿ ೨೦೧೯ರಲ್ಲಿ ಸಹಕಾರಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಆಂಡ್ ಪಂಜಾಬ್ ದೊಡ್ಡ ಕಷ್ಟಕ್ಕೆ ಸಲುಕಿಕೊಂಡು ಠೇವಣಿದಾರರ ಮತ್ತು ನೌಕರರು ಬೀದಿಗೆ ಬೀಳುವ ಸ್ಥಿತಿ ತಲುಪಿತ್ತು. ಅದನ್ನು ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕಿನಲ್ಲಿ ವಿಲೀನಗೊಳಿಸಲಾಯಿತು. ೨೦೨೦ರಲ್ಲಿ ವಿಮಾ ರಕ್ಷಣಾ ಮಿತಿಯನ್ನು ೫,೦೦,೦೦೦ ರೂ.ಗಳಿಗೆ ಏರಿಸಲಾಯಿತು. ಇದೂ ಕಡಿಮೆ ಎನ್ನುವ ವಾದ ಬಲವಾಗಿದೆ.

ಸುಧಾರಣೆಯ ಹಾದಿಯಲ್ಲಿ : ನಷ್ಟಭಯ (Risk)ವನ್ನಾಧರಿಸಿ ಸಹಕಾರಿ ಬ್ಯಾಂಕುಗಳೂ ಸೇರಿದಂತೆ ಎಲ್ಲ ಬ್ಯಾಂಕುಗಳನ್ನು ರೇಟಿಂಗ್ ಮಾನದಂಡಗಳಂತೆ ಶ್ರೇಣೀಕರಣ ಮಾಡಬೇಕೆಂದೂ ಅದರ ಆಧಾರದಲ್ಲಿ ಪ್ರೀಮಿಯಂ ಹೆಚ್ಚು ಕಡಿಮೆ ಮಾಡಬೇಕೆಂದೂ ಕೆಲವು ತಜ್ಞರ ಅಭಿಪ್ರಾಯವಾಗಿದೆ. ಆದರೆ ಇನ್ನೊಂದು ವಾದದಂತೆ ಕಡಿಮೆ ಗ್ರೇಡ್ ಹೊಂದಿದ ಬ್ಯಾಂಕುಗಳಿಂದ ಹೆಚ್ಚಿನ ಗ್ರೇಡನ್ನು ಹೊಂದಿದ ಬ್ಯಾಂಕುಗಳಿಗೆ ಹರಿದು ಹೋಗುವ ಭಯವಿದೆ. ಇದು ಬ್ಯಾಂಕುಗಳಲ್ಲಿಯೇ ತಾರತಮ್ಯ ಮಾಡಿದಂತಾಗುತ್ತದೆ. ಬ್ಯಾಂಕು ಆಡಳಿತವನ್ನೇ ಸುಧಾರಿಸಿ ಹೆಚ್ಚು ಪಾರದರ್ಶಕಗೊಳಿಸಬೇಕು ಎನ್ನುವವರೂ ಇದ್ದಾರೆ.  ರಿಸರ್ವ್ ಬ್ಯಾಂಕ್ ನಿಯಂತ್ರಣ ಮತ್ತು ಆಡಿಟ್ ವ್ಯವಸ್ಥೆ ಇನ್ನಷ್ಟು ಬಿಗಿಯಾಗಬೇಕು ಎನ್ನುವವರೂ ಇದ್ದಾರೆ.

ಈಗ ಬ್ಯಾಂಕೇತರ ಹಣಕಾಸು ಕಂಪೆನಿಗಳು ಸ್ವೀಕರಿಸುವ ಠೇವಣಿಗಳು ಠೇವಣಿ ವಿಮಾ ವ್ಯಾಪ್ತಿಗೆ ಬರುವುದಿಲ್ಲ. ಇವುಗಳನ್ನೂ ವಿಮಾ ರಕ್ಷಣೆಯ ವ್ಯಾಪ್ತಿಗೆ ಒಳಪಡಿಸಬೇಕೆಂದು ವಿವಿಧ ತಜ್ಞರಿಂದ ಬೇಡಿಕೆ ಇದೆ. ಅದಕ್ಕೆ ಹಲವು ಆಡಳಿತಾತ್ಮಕ ತೊಡಕುಗಳಿವೆ. ಅದಕ್ಕಾಗಿ ತಜ್ಞರ ಸಮಿತಿಗಳನ್ನು ನೇಮಿಸಿ ವರದಿ ಪಡೆಯಬೇಕು.

ಆಂದೋಲನ ಡೆಸ್ಕ್

Recent Posts

ಬಹುಮಹಡಿ ಕಟ್ಟಡ, ಮನೆ ನಿರ್ಮಾಣಕ್ಕೆ ಕಡಿವಾಣ ಹಾಕಿ : ಚಾಮುಂಡಿಬೆಟ್ಟ ಸಂರಕ್ಷಣೆಗಾಗಿ ನಾಗರಿಕರ ಆಗ್ರಹ

ಮೈಸೂರು : ಚಾಮುಂಡಿ ಬೆಟ್ಟ ಉಳಿಸಿ ಎಂಬ ಆಶಯದಲ್ಲಿ ಹಲವು ಸಂಘಟನೆಗಳು ಹಾಗೂ ನಾಗರಿಕರು ಸೇರಿ ‘ಚಾಮುಂಡಿಬೆಟ್ಟ ಸಂರಕ್ಷಣೆಗಾಗಿ ನಡಿಗೆ’…

28 mins ago

ಬೆಂಗಳೂರು ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂ ಹೂಡಿಕೆ : ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ಬೆಂಗಳೂರು ನಗರದ ಜನಸಂಖ್ಯೆ ಮುಂದಿನ 20 ರಿಂದ 25 ವರ್ಷಗಳಲ್ಲಿನ ದ್ವಿಗುಣಗೊಳ್ಳಲಿದ್ದು, ನಗರದ ಮೂಲ ಸೌಕರ್ಯ ಕೊರತೆ…

50 mins ago

ಮೈಸೂರು | ರೈಲಿಗೆ ತಲೆಕೊಟ್ಟು ನಿವೃತ್ತ ಎಎಸ್‌ಐ ಸಾವು

ಮೈಸೂರು : ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕುಕ್ಕರಹಳ್ಳಿ ರೈಲ್ವೆ ಗೇಟ್‌ ಬಳಿ ನಡೆದಿದೆ.ಜ…

1 hour ago

ರಂಜಿತಾ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ : ಕಾಡಿನಲ್ಲಿ ಆರೋಪಿ ಶವ ಪತ್ತೆ!

ಶಿರಸಿ : ಇಲ್ಲಿನ ಯಲ್ಲಾಪುರದಲ್ಲಿ ನಡೆದ ವಿವಾಹಿತೆ ರಂಜಿತಾ ಹತ್ಯೆ ಕೇಸ್‌ಗೆ ಬಿಗ್‌ ಟ್ವೀಸ್ಟ್‌ ಸಿಕ್ಕಿದ್ದು, ಹತ್ಯೆ ಆರೋಪಿ ರಫೀಕ್‌…

1 hour ago

ಸಮುದಾಯದ ಸಂಘಟನೆ ಅಗತ್ಯ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಹಿಂದುಳಿದವರು ಸಂಘಟಿಸಿದರೆ ಜಾತೀಯತೆಯಾಗುವುದಿಲ್ಲ. ಉಪಜಾತಿಗಳಲ್ಲಿ ವಿಭಜಿಸದೇ ಒಂದೇ ಶಕ್ತಿಯಾಗಿ ಸಂಘಟಿತರಾಗಿ ಎಂದು ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ…

2 hours ago

ನಾರಾ ಭರತ್‌ ರೆಡ್ಡಿಯನ್ನು ದ್ವೇಷಭಾಷಣ ಕಾಯ್ದೆಯಡಿ ಬಂಧಿಸಿ: ಶೋಭಾ ಕರಂದ್ಲಾಜೆ ಆಗ್ರಹ

ಬೆಂಗಳೂರು: ಬಳ್ಳಾರಿ ಗಲಭೆಗೆ ಕಾರಣಕರ್ತರಾದ ಶಾಸಕ ನಾರಾ ಭರತ್‍ರೆಡ್ಡಿಯನ್ನು ದ್ವೇಷಭಾಷಣ ಕಾಯ್ದೆಯಡಿ ಬಂಧಿಸಿ ಸರ್ಕಾರ ಜೈಲಿಗೆ ಏಕೆ ಹಾಕಿಲ್ಲ ಎಂದು…

4 hours ago