ಮತ್ತೆ ಮುಖ್ಯಮಂತ್ರಿಯ ಕನಸಿನಲ್ಲಿರುವ ಸಿದ್ಧರಾಮಯ್ಯ ಓಟಕ್ಕೆ ಬ್ರೇಕ್ ಹಾಕುವುದು ಬಿಜೆಪಿ ನಾಯಕರ ಲೆಕ್ಕಾಚಾರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೆಮ್ಮದಿಯಾಗುವಂತಹ ಬೆಳವಣಿಗೆಗಳು ನಡೆಯುತ್ತಿವೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಗಾಗಿ ದಿಲ್ಲಿಯ ತನಕ ಬರಬೇಡಿ ಅಂತ ಬಿಜೆಪಿ ವರಿಷ್ಟರಾದ ಅಮಿತ್ ಶಾ ಅವರು ಹೇಳಿರುವುದು ಇಂತಹ ಬೆಳವಣಿಗೆಳಲ್ಲೊಂದು. ಹಾಗೆ ನೋಡಿದರೆ ವರಿಷ್ಟರ ಈ ಮಾತುಗಳು ಬೊಮ್ಮಾಯಿ ಅವರಿಗೆ ಹರ್ಷ ತಂದಿದ್ದರೆ ಅದರಲ್ಲಿ ಅಸಹಜವಾದ್ದೇನೂ ಇಲ್ಲ.ಯಾಕೆಂದರೆ ಸಚಿವ ಪದವಿ ಆಕಾಂಕ್ಷಿಗಳ ಒತ್ತಡವನ್ನು ತಾಳಲಾರದೆ ಬೊಮ್ಮಾಯಿ ಅವರು ಇತ್ತೀಚೆಗೆ ಪದೇ ಪದೇ ದೆಹಲಿಗೆ ಹೋಗುತ್ತಿದ್ದರು.
ಹೀಗೆ ದೆಹಲಿಗೆ ಹೋಗಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರನ್ನೋ, ಅಮಿತ್ ಶಾ, ರಾಜ್ ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಬರುತ್ತಿದ್ದರಲ್ಲ? ಆಗ ಕನಿಷ್ಟ ಪಕ್ಷ ಸಂಪುಟ ವಿಸ್ತರಣೆಗೆ ವರಿಷ್ಟರ ಅನುಮತಿ ಇನ್ನೂ ಸಿಕ್ಕಿಲ್ಲ ಎಂಬ ಮಾತು ತೇಲಿ ಬರುತ್ತಿತ್ತು.
ಅರ್ಥಾತ್, ಈ ಬಾರಿಯ ಅವರ ದೆಹಲಿ ಭೇಟಿ ಯಶಸ್ವಿಯಾಗಿಲ್ಲ ಎಂದರೂ, ಮುಂದಿನ ದಿನಗಳಲ್ಲಿ ಅವರ ದೆಹಲಿ ಭೇಟಿ ಯಶಸ್ವಿಯಾಗುತ್ತದೆ, ತಮಗೆ ಮಂತ್ರಿ ಪದವಿಯ ಲಕ್ಕು ಕುದುರುತ್ತದೆ ಎಂದು ಹಲವರು ಭಾವಿಸುತ್ತಿದ್ದರು.
ಆದರೆ ಇನ್ನು ಮುಂದೆ ಸಚಿವ ಸಂಪುಟ ಪುರ್ನ ರಚನೆಗೋ, ವಿಸ್ತರಣೆಗೋ ದೆಹಲಿಯ ತನಕ ಬರಬೇಡಿ ಎಂದು ಅಮಿತ್ ಶಾ ಅವರು ಬೊಮ್ಮಾಯಿ ಅವರಿಗೆ ಹೇಳಿರುವುದರಿಂದ ಮಂತ್ರಿ ಪದವಿ ಆಕಾಂಕ್ಷಿಗಳಿಗೆ ಗುಡ್ಡ ಕಳಚಿ ನೆತ್ತಿಯ ಮೇಲೆ ಬಿದ್ದಂತಾಗಿರುವುದು ನಿಜ.
ಹೀಗೆ ತಮ್ಮ ನಿರೀಕ್ಷೆ ಹುಸಿಯಾಗಿರುವುದರಿಂದ ಈ ಮಂತ್ರಿ ಪದವಿ ಆಕಾಂಕ್ಷಿಗಳು ಇನ್ನು ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಾಡುವುದು ಕಷ್ಟ.
ಅದೇ ರೀತಿ ವರಿಷ್ಟರ ಸೂಚನೆಯಿಂದ ಆಗಿರುವ ಒಂದು ಬೆಳವಣಿಗೆ ಎಂದರೆ, ಬಸವರಾಜ ಬೊಮ್ಮಾಯಿ ಅವರ ನಾಯಕತ್ವ ಅಬಾಧಿತ ಎಂಬ ಸಂದೇಶ ರವಾನೆಯಾಗಿರುವುದು. ವಸ್ತುಸ್ಥಿತಿ ಎಂದರೆ ಸಂಪುಟ ಪುನರ್ ರಚನೆಯಾಗುವುದು ಬಸವರಾಜ ಬೊಮ್ಮಾಯಿ ಅವರಿಗೂ ಬೇಕಿರಲಿಲ್ಲ. ಒಂದು ಸಲ ಪುನರ್ ರಚನೆಗೆ ಕೈ ಹಾಕಿದರೆ ಒಂದಿಷ್ಟು ಮಂದಿಯನ್ನು ಮಂತ್ರಿ ಮಂಡಲದಿಂದ ಕೈ ಬಿಡಬೇಕಾಗುತ್ತದೆ. ಒಂದಷ್ಟು ಮಂದಿ ಹೊಸಬರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂಬುದು ಅವರ ಯೋಚನೆ. ಅಂದರೆ? ಮಂತ್ರಿ ಮಂಡಲದಿಂದ ಯಾರನ್ನೇ ಕೈ ಬಿಟ್ಟರೂ ಅವರು ಭಿನ್ನಮತದ ಕಹಳೆ ಊದುತ್ತಾರೆ. ಅದೇ ರೀತಿ ಯಾರನ್ನೇ ಹೊಸತಾಗಿ ಸಂಪುಟಕ್ಕೆ ತೆಗೆದುಕೊಂಡರೂ ಮಂತ್ರಿಗಳಾಗುವ ಅವಕಾಶ ಸಿಗದೇ ಇರುವವರು ಅಪಸ್ವರ ತೆಗೆದೇ ತೆಗೆಯುತ್ತಾರೆ.
ಹೀಗಾಗಿ ಸಂಪುಟ ಪುನರ್ ರಚನೆಯ ಬದಲು ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡುವುದಕ್ಕೆ ಸೀಮಿತರಾದರೆ ಸಾಕು ಎಂಬುದು ಬಸವರಾಜ ಬೊಮ್ಮಾಯಿ ಅವರ ಇರಾದೆಯಾಗಿತ್ತು. ಆದರೆ ವರಿಷ್ಟರು ಬಂಪರ್ ಎನ್ನುವಂತೆ: ಸಂಪುಟ ಪುನರ್ ರಚನೆ ಇಲ್ಲವೇ ವಿಸ್ತರಣೆಗೆ ಸಂಬಂಧಿಸಿದಂತೆ ಚರ್ಚಿಸಲು ದೆಹಲಿಯ ತನಕ ಬರಬೇಡಿ ಎಂದಿರುವುದು ಬೊಮ್ಮಾಯಿ ಅವರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ.
ಹೀಗಾಗಿ ಇನ್ನು ಮುಂದೆ ಅವರು ನಿರುಮ್ಮಳವಾಗಿ ತಮ್ಮ ಕೆಲಸ ತಾವು ಮಾಡಿಕೊಳ್ಳಬಹುದು. ಮತ್ತು ರಾಜ್ಯದ ಅಭಿವೃದ್ದಿಗೆ ಮತ್ತು ಸರ್ಕಾರದ ಯಶಸ್ಸಿಗೆ ಸಂಬಂಧಿಸಿದಂತೆ ತಮ್ಮ ಯೋಜಿತ ಗುರಿಯ ದಾರಿಯಲ್ಲಿ ನಡೆಯಬಹುದು.
ಅಂದ ಹಾಗೆ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಬಹುತೇಕ ಸರಿಯಾದ ಹಳಿಗೆ ತಂದಿದ್ದಾರೆ. ಯಡಿಯೂರಪ್ಪ ಅವರ ಕಾಲದಲ್ಲಿ ಹದಗೆಟ್ಟಿದ್ದ ಆರ್ಥಿಕ ಪರಿಸ್ಥಿತಿ ಈಗ ಕ್ರಮೇಣ ಸುಧಾರಿಸುತ್ತಿದೆ. ಇದಕ್ಕೆ ಆರ್ಥಿಕತೆಯ ವಿಷಯದಲ್ಲಿ ಬೊಮ್ಮಾಯಿ ಅವರಿಗಿರುವ ಜ್ಞಾನವೇ ಕಾರಣ. ಆ ದೃಷ್ಟಿಯಿಂದ ಬಸವರಾಜ ಬೊಮ್ಮಾಯಿ ಅಧಿಕಾರಕ್ಕೆ ಬಂದ ಹತ್ತು ತಿಂಗಳ ನಂತರ ಸರ್ಕಾರದ ಬೊಕ್ಕಸ ಮಾತ್ರವಲ್ಲ, ಅವರು ಕೂಡಾ ಸೇಫ್ ಜೋನಿಗೆ ತಲುಪಿದ್ದಾರೆ.
ಗೌಡರ ಬೆಂಬಲ ದ್ರೌಪದಿಗೆ
ಇನ್ನು ಈ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಟ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬಿಜೆಪಿ ವತಿಯಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದ್ರೌಪದಿ ಮುರ್ಮು ಅವರಿಗೆ ತಮ್ಮ ಪಕ್ಷದ ಬೆಂಬಲ ಅಂತ ಹೇಳಿದ್ದಾರಂತೆ. ದೇವೇಗೌಡರು ಹೀಗೆ ದ್ರೌಪದಿ ಮುರ್ಮು ಅವರ ಪರವಾಗಿರಲು ಹಲವು ಕಾರಣಗಳಿವೆ. ಈ ಪೈಕಿ ಪ್ರಧಾನಿ ಮೋದಿ ಅವರ ವಿರೋಧ ಕಟ್ಟಿಕೊಳ್ಳಲು ಅವರಿಗೆ ಇಷ್ಟವಿಲ್ಲ ಎಂಬುದು ಒಂದು ಕಾರಣವಾದರೆ, ಆದಿವಾಸಿ ಮಹಿಳೆಗೆ ಬೆಂಬಲ ನೀಡಿದರೆ ದೇಶಕ್ಕೆ ಒಳ್ಳೆಯ ಸಂದೇಶ ರವಾನಿಸಿದಂತಾಗುತ್ತದೆ ಎಂಬುದು ಮುಖ್ಯವಾದವು. ಇದನ್ನು ಹೊರತುಪಡಿಸಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲು ಅವರಿಗೆ ವೈಯಕ್ತಿಕವಾದ ಕಾರಣಗಳೂ ಇವೆ.
ಈ ಪೈಕಿ ಮುಖ್ಯವಾದುದು ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಬಗೆಗಿನ ಸಿಟ್ಟು.
ಒಂದು ಕಾಲದ ಐಎಎಸ್ ಅಧಿಕಾರಿ ಯಶವಂತ ಸಿನ್ಹಾ ಅವರು ಒಂದು ಬಾರಿ ಸಂಸತ್ತಿನಲ್ಲಿ ದೇವೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರಂತೆ. ಅದೇ ರೀತಿ ೨೦೦೮ ರಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಕೂಟ ಸರ್ಕಾರವನ್ನು ಉಳಿಸುವ ಬದಲು ಉರುಳಿಸಲು ತಂತ್ರ ಹೆಣೆದವರಂತೆ.
೨೦೦೬ ರಿಂದ ೨೦೦೮ ರವರೆಗೆ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ನಡೆಯಿತಾದರೂ ೨೦೦೮ ರಲ್ಲಿ ಆ ಸರ್ಕಾರ ಉರುಳಲು ಯಶವಂತ ಸಿನ್ಹಾ ಕಾರಣರು ಎಂಬುದು ದೇವೇಗೌಡರ ಸಿಟ್ಟು.
ಅಂದ ಹಾಗೆ ಅವತ್ತು ಸರ್ಕಾರ ಉರುಳಲು ದೇವೇಗೌಡರೇ ಕಾರಣ ಎಂಬ ಹಣೆಪಟ್ಟಿ ಇದೆಯಾದರೂ,ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರಿಗೆ ಅಧಿಕಾರ ವಹಿಸಿಕೊಡಲು ಮುಂದಾದಾಗ ಅದಕ್ಕೆ ಅಡ್ಡ ನಿಂತು ಕಲ್ಲು ಬೀಸಿದವರು ಯಶವಂತ ಸಿನ್ಹಾ ಎಂಬುದು ಗೌಡರ ಸಿಟ್ಟು.
ಯಡಿಯೂರಪ್ಪ ಅವರ ನೇತೃತ್ವದಲ್ಲಿ ಜೆಡಿಎಸ್- ಬಿಜೆಪಿ ಸರ್ಕಾರ ಮುಂದುವರಿಯಲು ಏನೇನು ಮಾಡಬೇಕು? ಅಂತ ತಾವು ಸೂಚಿಸಿದರೆ, ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಲು ದೇವೇಗೌಡರು ಹೊರಟಿದ್ದಾರೆ. ಹೀಗಾಗಿ ಈ ಮೈತ್ರಿಕೂಟ ಸರ್ಕಾರ ಇರುವ ಬದಲು ಹೋಗುವುದೇ ಲೇಸು ಎಂದು ಯಶವಂತ ಸಿನ್ಹಾ ಪಟ್ಟು ಹಿಡಿದರು. ಕುಮಾರಸ್ವಾಮಿ ಅವರ ಹಣೆಯ ಮೇಲೆ ವಚನದ್ರೋಹಿ ಎಂಬ ಆರೋಪ ಹೊರಿಸಿ ವಿಧಾನಸಭೆ ಚುನಾವಣೆಗೆ ಹೋದರೆ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯುತ್ತೇವೆ ಎಂಬ ಲೆಕ್ಕಾಚಾರದಿಂದ ಯಶವಂತ ಸಿನ್ಹಾ ಹಾಗೆ ಮಾಡಿದರು. ಆದರೆ ಅದಕ್ಕಾಗಿ ಮೈತ್ರಿಕೂಟ ಸರ್ಕಾರವನ್ನು ಬಲಿ ಪಡೆದರು ಎಂಬ ಸಿಟ್ಟು ದೇವೇಗೌಡರಲ್ಲಿ ಉಳಿದುಕೊಂಡೇ ಇದೆ.
ಹೀಗಾಗಿ ರಾಷ್ಟ್ರಪತಿ ಹುದ್ದೆಗೆ ನಡೆಯಲಿರುವ ಚುನಾವಣೆಯಲ್ಲಿ ಯಶವಂತ ಸಿನ್ಹಾ ಗೆಲ್ಲುವ ಬದಲು ದ್ರೌಪದಿ ಮುರ್ಮು ಅವರೇ ಗೆಲ್ಲಲಿ ಎಂದು ದೇವೇಗೌಡರು ಬಯಸಿದ್ದಾರೆ.
ಸಿದ್ಧುಗೆ ಗುದ್ದು ?
ಹೀಗೆ ಬಸವರಾಜ ಬೊಮ್ಮಾಯಿ, ದೇವೇಗೌಡರು ಒಂದೊಂದು ತರದ ಯೋಚನೆಯಲ್ಲಿದ್ದರೆ, ರಾಜ್ಯ ಕಾಂಗ್ರೆಸ್ ನ ಹಲ ನಾಯಕರಿಗೆ ಐಟಿ, ಇಡಿ, ಸಿಬಿಐ ಕಾಟ ಶುರುವಾಗುವ ಹೆದರಿಕೆ ಶುರುವಾಗಿದೆಯಂತೆ. ಉನ್ನತ ಮೂಲಗಳ ಪ್ರಕಾರ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರನ್ನು ಕಟ್ಟಿ ಹಾಕುವುದು ದಿಲ್ಲಿಯ ಬಿಜೆಪಿ ವರಿಷ್ಟರ ಲೆಕ್ಕಾಚಾರ ಎಂಬ ವರ್ತಮಾನ ರಾಜ್ಯ ಕಾಂಗ್ರೆಸ್ ಪಕ್ಷವನ್ನು ತಲುಪಿದೆ. ಅಂದ ಹಾಗೆ ಯಾರೇನೇ ಹೇಳಿದರೂ ಸಿದ್ಧರಾಮಯ್ಯ ಅವರೇ ರಾಜ್ಯ ಕಾಂಗ್ರೆಸ್‌ನ ನಂಬರ್ ಒನ್ ನಾಯಕ. ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಅವರಂತೆ ಪ್ರಧಾನಿ ನರೇಂದ್ರಮೋದಿ ಅವರನ್ನು ಕಟುವಾಗಿ ಟೀಕಿಸಿದ ನಾಯಕರು ಅಪರೂಪ.
ಇಂತಹ ಸಿದ್ಧರಾಮಯ್ಯ ಅವರಿಗೆ ನಾಯಕತ್ವದ ವಿಷಯದಲ್ಲಿ ಸ್ವಪಕ್ಷದ ಡಿಕೆಶಿ ಕಟ್ಟಾ ಎದುರಾಳಿಯಾಗಿದ್ದರಾದರೂ ಇತ್ತೀಚಿನ ದಿನಗಳಲ್ಲಿ ಡಿಕೆಶಿ ಖದರು ಕಡಿಮೆಯಾಗಿದೆ. ಏಕಕಾಲಕ್ಕೆ ತಮ್ಮ ಆರ್ಥಿಕ ವಹಿವಾಟು ಮತ್ತು ರಾಜಕೀಯದ ಹಳಿಗಳ ಮೇಲೆ ಸಂಚರಿಸುವುದು ಅವರಿಗೆ ಕಷ್ಟವಾಗಿದೆಯಂತೆ.
ಇತ್ತೀಚೆಗೆ ಜಾರಿ ನಿರ್ದೇಶನಾಲಯ ಜುಲೈ ಒಂದರಂದು ತನ್ನೆದುರು ಹಾಜರಾಗುವಂತೆ ಸೂಚನೆ ನೀಡಿದ ನಂತರ ಡಿಕೆಶಿ ಮ್ಲಾನವದನರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಸಿದ್ಧರಾಮಯ್ಯ ಅವರ ಹೋರಾಟದ ಛಾತಿಯ ಮುಂದೆ ಮಂಕಾಗಿರುವಂತೆ ಕಾಣುವುದೂ ನಿಜ.
ಅದೇನೇ ಇರಲಿ, ಹೀಗೆ ರಾಜ್ಯ ಕಾಂಗ್ರೆಸ್ ನಲ್ಲಿ ನಂಬರ್ ಒನ್ ನಾಯಕರಾಗಿರುವ, ಭವಿಷ್ಯದ ಮುಖ್ಯಮಂತ್ರಿ ಹುದ್ದೆಯ ಕನಸಿನಲ್ಲಿರುವ ಸಿದ್ಧರಾಮಯ್ಯ ಅವರ ಓಟಕ್ಕೆ ಬ್ರೇಕ್ ಹಾಕುವುದು ರಾಜ್ಯ ಮತ್ತು ರಾಷ್ಟ್ರ ಬಿಜೆಪಿ ನಾಯಕರ ಲೆಕ್ಕಾಚಾರ.
ಇದೇ ಕಾರಣಕ್ಕಾಗಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದ ವ್ಯವಹಾರಗಳ ಪೈಕಿ ಯಾವುದರಲ್ಲಿ ಹಗರಣಗಳ ವಾಸನೆ ಇದೆಯೋ?ಆ ಸಂಬಂಧದ ದಾಖಲೆಗಳನ್ನು ಸಂಗ್ರಹಿಸಿ ಕೇಂದ್ರಕ್ಕೆ ರವಾನಿಸಲು ಬೊಮ್ಮಾಯಿ ಸಂಪುಟದ ಪ್ರಮುಖ ಸಚಿವರೊಬ್ಬರು ಹಗಲಿರುವ ಕೆಲಸ ಮಾಡುತ್ತಿದ್ದಾರಂತೆ.
ಈ ಕೆಲಸ ಒಂದು ಹಂತಕ್ಕೆ ಬಂದಿರುವುದರಿಂದ ಮುಂದಿನ ಕೆಲ ದಿನಗಳಲ್ಲಿ ಸಿದ್ಧರಾಮಯ್ಯ ಮತ್ತು ಅವರ ಕಾಂಗ್ರೆಸ್ ಪಕ್ಷದ ಹಲ ನಾಯಕರ ಮೇಲೆ ದಾಳಿಗಳ ಪರಂಪರೆ ಶುರುವಾಗಬಹುದು ಎಂಬುದು ಸದ್ಯಕ್ಕೆ ಕೇಳಿ ಬರುತ್ತಿರುವ ಮಾತು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…