ಪಂಜು ಗಂಗೊಳ್ಳಿ
ಹತ್ತನೇ ತರಗತಿ ಪರೀಕ್ಷೆಗಳು ಮುಗಿದು ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಮಕ್ಕಳಿಗೆ ಈ ಹತ್ತನೇ ತರಗತಿ ಪರೀಕ್ಷೆಗಳು ಅವರ ಶೈಕ್ಷಣಿಕ ಉನ್ನತಿಯ ಪ್ರಮುಖ ಮೆಟ್ಟಿಲುಗಳಲ್ಲಿ ಒಂದು, ಅಷ್ಟೇ. ಆದರೆ, ಕೆಲವು ಮಕ್ಕಳಿಗೆ ಇದೊಂದು ಅವರ ಇಡೀ ಬದುಕಿನಹಾಗೆಯೇ ಅವರ ಇಡೀ ಕುಟುಂಬದ ಕನಸಿನ ಸಾಕ್ಷಾತ್ಕಾರ. ಪಶ್ಚಿಮ ದೆಹಲಿ ಮತ್ತು ನೈಋತ್ಯ ದೆಹಲಿಯ ಸ್ಲಮ್ಮುಗಳಲ್ಲಿ ‘ಚೇತನಾ’ ಎಂಬ ಸರ್ಕಾರೇತರ ಸಂಸ್ಥೆಯು ಹತ್ತನೇ ತರಗತಿ ಪರೀಕ್ಷೆ ನಡೆದ ಕೆಲ ಸಮಯದ ನಂತರ ನಡೆಸಿದ ಒಂದು ಸಮೀಕ್ಷೆಯಲ್ಲಿ ೪೪೬ ಬೀದಿ ಮಕ್ಕಳು ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಗಳಲ್ಲಿ ಕುಳಿತಿದ್ದ ಅಂಶ ಬೆಳಕಿಗೆ ಬಂದಿದೆ. ಆ ಸಮೀಕ್ಷೆಯಲ್ಲಿ ತಿಳಿದು ಬಂದ ಇನ್ನೊಂದು ಪ್ರಮುಖ ಅಂಶವೆಂದರೆ, ಈ ಮಕ್ಕಳ ಕುಟುಂಬಗಳಲ್ಲಿ ಇವರೇ ಪ್ರಥಮ ಬಾರಿಗೆ ಹತ್ತನೇ ತರಗತಿಯ ತನಕ ಶಾಲೆಗೆ ಹೋದವರು!
ಈ ೪೪೬ ಮಕ್ಕಳಲ್ಲಿ ಕೆಲವರಿಗೆ ಓದಲು ಸ್ವಂತ ಪುಸ್ತಕಗಳಿಲ್ಲದೆ ಬೇರೆ ಮಕ್ಕಳ ಪುಸ್ತಕಗಳನ್ನು ಬೇಡಿ ತಂದು ಅಭ್ಯಾಸ ಮಾಡಿದವರು. ಇನ್ನು ಕೆಲವರು ರಾತ್ರಿ ಹೊತ್ತು ಮನೆಯೊಳಗೆ ದೀಪವಿಲ್ಲದೆ ರಸ್ತೆ ಬದಿಯ ಲೈಟ್ ಕಂಬಗಳ ಬೆಳಕಲ್ಲಿ ಅಭ್ಯಾಸ ಮಾಡಿದವರು. ಸರ್ಕಾರಿ ಸೆಕೆಂಡರಿ ಶಾಲೆಯಲ್ಲಿ ಕಲಿಯುತ್ತಿರುವ ೧೫ವರ್ಷ ಪ್ರಾಯದ ಆಸೀಫ್ ಎಂಬ ಹುಡುಗನ ಜೋಪಡಿ ಇರುವುದು ಕೀರ್ತಿ ನಗರದ ನೆಹರೂ ಕ್ಯಾಂಪ್ ಎಂಬಲ್ಲಿ. ಇವನ ಮನೆಯೆಂದರೆ ಪ್ಲಾಸ್ಟಿಕ್ ಮತ್ತು ತಗಡಿನ ಶೀಟುಗಳಿಂದ ಕಟ್ಟಿದ ಅಂಗೈ ಅಗಲದ ಜಾಗ. ಅದರಲ್ಲಿ ಇವನು, ಇವನ ತಾಯಿ, ಅಜ್ಜಿ ಮತ್ತು ಇಬ್ಬರು ಸೋದರ ಮಾವಂದಿರು ವಾಸವಾಗಿದ್ದಾರೆ. ಇವನಿಗೆ ತನ್ನ ಗುಡಿಸಲೊಳಗೆ ಕುಳಿತು ಅಭ್ಯಾಸ ಮಾಡಲು ಯಾವ ಅನುಕೂಲವೂ ಇಲ್ಲದಿದ್ದುದರಿಂದ ಗುಡಿಸಲಿನ ತಗಡಿನ ಮಾಡಿನ ಮೇಲೆ ಹತ್ತಿ ಕುಳಿತು ಪರೀಕ್ಷೆಗೆ ಓದಿಕೊಳ್ಳುತ್ತಿದ್ದನು.
ಆಸೀಫ್‌ನ ತಾಯಿ ಸಬಿಲಾ ಕೌಟುಂಬಿಕ ದೌರ್ಜನ್ಯ ತಾಳಲಾರದೆ ಗಂಡನ ಮನೆ ಬಿಟ್ಟು ದೆಹಲಿಗೆ ಮಗನನ್ನು ಜೊತೆಯಲ್ಲಿರಿಸಿಕೊಂಡು ಓಡಿ ಬಂದವಳು. ಆದರೆ, ಆಧಾರ್‌ನಂತಹ ಯಾವುದೇ ಸರ್ಕಾರಿ ದಾಖಲೆಗಳಿಲ್ಲದ ಕಾರಣ ಆಸೀಫ್‌ನನ್ನು ಶಾಲೆಗೆ ಸೇರಿಸಲು ಸಾಧ್ಯವಾಗಿರಲಿಲ್ಲ. ಆಗ ಆಸೀಫ್, ‘ಆಯಿತು, ತನ್ನ ಶಾಲಾ ಶಿಕ್ಷಣ ಇಷ್ಟಕ್ಕೇ ಮುಗಿಯಿತು’ ಎಂದು ತೀರ್ಮಾನಿಸಿ, ಒಂದೆಡೆ ಕೆಲಸಕ್ಕೆ ಸೇರಿದನು. ಆ ಸಂದರ್ಭದಲ್ಲಿ ‘ಚೇತನಾ’ ಸಂಸ್ಥೆ ಆಸೀಫ್‌ನ ಬೆಂಬಲಕ್ಕೆ ನಿಂತು, ಸರ್ಕಾರಿ ಶಾಲೆಯಲ್ಲಿ ಅವನಿಗೆ ಪ್ರವೇಶ ದೊರಕಿಸಿಕೊಟ್ಟಿ. ಪುಸ್ತಕ ಖರೀದಿಸಲು ಹಣವಿಲ್ಲದ ಕಾರಣ ಸಬಿಲಾ ಮಗನಿಗೆ ಬೇರೆ ಮಕ್ಕಳ ಹಳೆಯ, ಹರಿದ ಪುಸ್ತಕಗಳನ್ನು ಬೇಡಿ ತಂದು ಕೊಟ್ಟಳು. ಶಾಲಾ ಸಮವಸ್ತ್ರವನ್ನು ಒಂದೇ ಸಲಕ್ಕೆ ಖರೀದಿಸಲು ಸಾಧ್ಯವಾಗದೆ ಒಂದು ಸಾರಿ ಅಂಗಿ, ಇನ್ನೊಂದು ಬಾರಿ ಪ್ಯಾಂಟ್, ನಂತರ ಶೂ, ನಂತರ ಸಾಕ್ಸ್‌ಗಳನ್ನು ಖರೀದಿಸಿ ಕೊಟ್ಟಳು. ಕೊನೇ ಪಕ್ಷ ಹನ್ನೆರಡನೇ ತರಗತಿಯ ತನಕವಾದರೂ ಕಲಿಯುವುದು ಆಸೀಫ್ ನ ಗುರಿಯಾಗಿದೆ. ಅದರ ನಂತರ, ಸಾಧ್ಯವಾದರೆ ಫುಟ್ ಬಾಲ್ ಆಟಗಾರನಾಗುವುದು ಅವನ ಕನಸು.
ಆಸೀಫ್‌ನ ಜೋಪಡಿಯಿಂದ ತುಸು ದೂರದಲ್ಲಿ ವಿಕ್ರಮನ ಜೋಪಡಿಯಿದೆ. ೧೪ ವರ್ಷ ಪ್ರಾಯದ ವಿಕ್ರಮ್ ಮಾನಸಸರೋವರ್ ಗಾರ್ಡನ್ ಪ್ರದೇಶದಲ್ಲಿರುವ ಸರ್ವೋದಯ ವಿದ್ಯಾಲಯದಲ್ಲಿ ಕಲಿಯುತ್ತಿದ್ದಾನೆ. ತನ್ನ ಕುಟುಂಬದಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಕುಳಿತ ಮೊದಲಿಗ. ಅವನೂ ಕೂಡ ಪುಸ್ತಕ ಖರೀದಿಸಲು ಹಣವಿಲ್ಲದೆ ಬೇರೆ ಮಕ್ಕಳ ಪುಸ್ತಕ ತಂದು ಅಭ್ಯಾಸ ಮಾಡಿ ಪರೀಕ್ಷೆ ಬರೆದವನು. ಅವನ ತಂದೆ ಕಾಯಿಲೆ ಬಿದ್ದು ನಿರುದ್ಯೋಗಿಯಾಗಿದ್ದಾನೆ. ಮನೆ ಆಳಾಗಿ ಕೆಲಸ ಮಾಡುವ ತಾಯಿಯ ಪುಡಿ ಸಂಪಾದನೆಯಲ್ಲಿ ಸಂಸಾರದ ಖರ್ಚು ನಡೆಯಬೇಕು. ಹೊಟ್ಟೆ ಹಸಿವನ್ನು ತಣಿಸಲೇ ಅನುಕೂಲತೆಯಿಲ್ಲದಾಗ ಪುಸ್ತಕಗಳನ್ನು ಎಲ್ಲಿಂದ ತರುವುದು? ಹಾಗಿದ್ದರೂ ವಿಕ್ರಮನ ಗುರಿ ಏನು ಗೊತ್ತೇ?-ಚೆನ್ನಾಗಿ ಕಲಿತು ಮುಂದೆ ಟೀಚರ್ ಆಗುವುದು. ಟೀಚರ್ ಆಗಿ ಪುಸ್ತಕಗಳಿಗೂ ಗತಿಯಿಲ್ಲದ ತನ್ನಂತಹ ಬಡ ಮಕ್ಕಳಿಗೆ ನೆರವಾಗುವುದು.
ಚಿಂದಿ ಹೆಕ್ಕುವ ಕೆಲಸ ಮಾಡುವ ತಂದೆ ಹಾಗೂ ಮನೆಯಾಳಾಗಿ ದುಡಿಯುವ ತಾಯಿಯ ಮಗಳಾದ ಸಂಧ್ಯಾಳ ಹತ್ತನೇ ತರಗತಿ ಪರೀಕ್ಷೆ ಮುಗಿದರೂ ಅವಳ ಶಾಲಾ ಸಮವಸ್ತ್ರ ಮಾತ್ರ ಸಂಪೂರ್ಣವಾಗಿಲ್ಲ. ಅದೇ ಕಾರಣಕ್ಕೆ ಅವಳು ತನ್ನ ಶಾಲಾ ಟೀಚರುಗಳಿಂದ ಬೈಸಿಕೊಳ್ಳುತ್ತಿದ್ದಳು. ಪುಸ್ತಕಕ್ಕೂ ದುಡ್ಡಿಲ್ಲದ ಅವಳ ತಂದೆ-ತಾಯಿ ಸಮವಸ್ತ್ರವನ್ನು ಖರೀದಿಸುವ ಮಾತು ದೂರವೇ ಉಳಿಯಿತು. ಅವಳು ಅಭ್ಯಾಸ ಮಾಡಿದ್ದು ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಸಹಾಯದಿಂದ. ಸಾಕೂರ್ ಬಸ್ತಿಯಲ್ಲಿದ್ದ ಅವಳ ಜೋಪಡಿಯ ಒಳಗೆ ಕುಳಿತು ಹೊರಗಿನ ಸದ್ದನ್ನು ನಿರ್ಲಕ್ಷಿಸಿ ಪರೀಕ್ಷೆಗೆ ಅಭ್ಯಾಸ ಮಾಡುವುದೇ ಒಂದು ಮಹಾನ್ ಸಾಧನೆಯಾಗಿತ್ತು. ಅಮರ್ ಪಾರ್ಕಿನ ಬಳಿ ರೈಲ್ವೆ ಹಳಿಯ ಬಳಿ ವಾಸಿಸುವ ೧೫ ವರ್ಷ ಪ್ರಾಯದ ಅಲ್ತಾಫ್ ಬಿಹಾರಿನ ಮದ್ರಾಸದಲ್ಲಿ ಮೂರನೇ ತರಗತಿಯ ತನಕ ಓದಿದ್ದನು. ನಂತರ, ಹೊಟ್ಟೆಪಾಡಿಗಾಗಿ ಅವನ ಕುಟುಂಬ ದೆಹಲಿಗೆ ಬಂದಾಗ ‘ಚೇತನಾ’ದ ಸಹಾಯದಿಂದ ತುಳಸಿ ನಗರದ ಸರ್ಕಾರಿ ಶಾಲೆಯಲ್ಲಿ ನೇರವಾಗಿ ಎಂಟನೇ ತರಗತಿಗೆ ಸೇರಿದ್ದನು. ಈ ಹತ್ತನೇ ತರಗತಿ ಫಲಿತಾಂಶ ಬಂದ ನಂತರ, ಕಲಿಕೆಯನ್ನು ಮುಂದುವರಿಸಿ, ಲೋಕೋ ಪೈಲಟ್ ಆಗುವುದು ಅವನ ಗುರಿ.
೧೫ ವರ್ಷ ಪ್ರಾಯದ ರಝಿಯಾ ತುಳಸಿ ನಗರದ ಸರ್ವೋದಯ ಕನ್ಯಾ ವಿದ್ಯಾಲಯದ ವಿದ್ಯಾರ್ಥಿನಿ. ಅವಳ ಜೋಪಡಿಯಲ್ಲಿ ಬೆಳಕಿಗೆಂದು ಇರುವುದು ಒಂದೇ ಒಂದು ವಿದ್ಯುತ್ ಬಲ್ಬು. ಹಗಲು ಹೊತ್ತಲ್ಲಿ ಅವಳು ಮನೆಯ ಕೆಲಸಗಳನ್ನು ಮಾಡಬೇಕಿದ್ದುದರಿಂದ ರಾತ್ರಿ ಎಲ್ಲರೂ ಮಲಗಿದ ನಂತರ ಪರೀಕ್ಷೆಗೆ ಓದಿಕೊಳ್ಳುತ್ತಿದ್ದಳು. ರಝಿಯಾಗೆ ಕೊನೇ ಪಕ್ಷ ಹನ್ನೆರಡನೇ ತರಗತಿಯ ತನಕವಾದರೂ ಕಲಿಯುತ್ತೇನೆ ಎಂಬ ವಿಶ್ವಾಸವಿದೆ. ಆದರೆ, ಅದಕ್ಕೂ ಮುಂದೆ ತನಗೆ ಕಲಿಯಲು ಸಾಧ್ಯವೇ? ಎಂಬುದು ಅವಳಿಗೆ ತಿಳಿಯದು.
ಈ ಮಕ್ಕಳು ಕೇವಲ ತಮ್ಮ ಹತ್ತನೇ ತರಗತಿ ಫಲಿತಾಂಶವನ್ನು ಎದುರು ನೋಡುತ್ತಿಲ್ಲ. ಬದಲಿಗೆ, ತಮ್ಮ ಕುಟುಂಬಗಳಲ್ಲಿ ಹಿಂದೆಂದೂ ಯಾವ ಸದಸ್ಯರೂ ಕನಸು ಕಾಣಲೂ ಸಾಧ್ಯವಾಗದ ಸಾಧನೆಯ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಆ ಮೂಲಕ ಅವರು ತಮ್ಮ ಕುಟುಂಬಗಳ ಚರಿತ್ರೆಯನ್ನು ಬದಲಾಯಿಸಲು ಹೊರಟಿದ್ದಾರೆ. ಈ ಸಾಹಸದಲ್ಲಿ ಅವರಿಗೆ ನೆರವಾಗುತ್ತಿರುವುದು ೨೦೦೨ರಲ್ಲಿ ಹುಟ್ಟಿಕೊಂಡ ‘ಚೇತನಾ’. ಇದು ಕಳೆದ ಮೂರು ವರ್ಷಗಳ ಅವಽಯಲ್ಲಿ ದೆಹಲಿಯಲ್ಲಿ ೭೪೫ ಬೀದಿ ಮಕ್ಕಳನ್ನು ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.
” ಈ ಮಕ್ಕಳು ಕೇವಲ ತಮ್ಮ ಹತ್ತನೇ ತರಗತಿ ಫಲಿತಾಂಶವನ್ನು ಎದುರು ನೋಡುತ್ತಿಲ್ಲ. ಬದಲಿಗೆ, ತಮ್ಮ ಕುಟುಂಬಗಳಲ್ಲಿ ಹಿಂದೆಂದೂ ಯಾವ ಸದಸ್ಯರೂ ಕನಸು ಕಾಣಲೂ ಸಾಧ್ಯವಾಗದ ಸಾಧನೆಯ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಆ ಮೂಲಕ ಅವರು ತಮ್ಮ ಕುಟುಂಬಗಳ ಚರಿತ್ರೆಯನ್ನು ಬದಲಾಯಿಸಲು ಹೊರಟಿದ್ದಾರೆ. ಈ ಸಾಹಸದಲ್ಲಿ ಅವರಿಗೆ ನೆರವಾಗುತ್ತಿರುವುದು ‘ಚೇತನಾ’.”
ಯಳಂದೂರು: ಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ 4 ತಾಸು ಒದ್ದಾಟ ನಡೆಸಿದ ಘಟನೆ ಯಳಂದೂರು ತಾಲ್ಲೂಕಿನ ಗಂಗವಾಡಿಯಲ್ಲಿ…
ಮೈಸೂರು: ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕಾದಾಟ ತೀವ್ರಗೊಳ್ಳುತ್ತಿದ್ದಂತೆ, ಅಹಿಂದ ಸಮಾವೇಶದ ಹೆಸರಿನಲ್ಲಿ ಭಾರೀ ರಾಜಕೀಯ ಚಟುವಟಿಕೆಗಳಿಗೆ ವೇಗ ಸಿಕ್ಕಿದೆ. ಮುಖ್ಯಮಂತ್ರಿ…
ಮೈಸೂರು: ಚಿರತೆಯೊಂದು ರಾತ್ರೋರಾತ್ರಿ ಬೀದಿ ನಾಯಿಯನ್ನು ಹೊತ್ತೊಯ್ದಿರುವ ಘಟನೆ ಮೈಸೂರಿನ ಹೊರವಲಯದ ಬೆಳಗಾವಿ ಗ್ರಾಮದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯಲ್ಲಿ ಕಾಡು…
ಬೆಂಗಳೂರು,- ನಿರಂತರ ಏರಿಕೆಯಿಂದಾಗಿ ಚಿನ್ನ, ಬೆಳ್ಳಿ ಬೆಲೆಯು ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಇಂದು ಪ್ರತೀ ಗ್ರಾಂ ಚಿನ್ನಕ್ಕೆ (24 ಕ್ಯಾರೆಟ್)…
ಅಮೇರಿಕಾ: ಯುವ ರೋಗಿಯನ್ನು ಹಾಗೂ ಇತರ ಏಳು ಜನರನ್ನು ಸಾಗಿಸುತ್ತಿದ್ದ ಮೆಕ್ಸಿಕ್ನ ನೌಕಾಪಡೆಯ ಸಣ್ಣ ವಿಮಾನವು ಗಾಲ್ವೆಸ್ಟನ್ ಬಳಿ ಪತನಗೊಂಡು…
ಬೆಂಗಳೂರು: 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.…